ರಾಧಾ ತನ್ನ ಮಗಳಿಗೆ ಎರಡು ಜಡೆ ಹೆಣೆದು ತುದಿಗೆ ರಿಬ್ಬನ್ ಹಾಕಿ ಮೇಲೆ ಕಟ್ಟಿದಳು.ಅಂದದ ಮಲ್ಲಿಗೆ ದಂಡೆಯನ್ನು ಮುಡಿಸಿದಳು.ಅವಳ ಅಂದಕೆ ಮನಸೋತು ತನ್ನದೇ ದೃಷ್ಟಿ ತಾಗೀತೋ ಎಂದು ತನ್ನೆರಡು ಕೈಗಳಿಂದ ಮಗಳ ತಲೆನೇವರಿಸಿ ನೆಟಿಗೆ ತೆಗೆದಳು.ಬುತ್ತಿಚೀಲ ,ಪಾಠಿ ಚೀಲ ಎರಡನ್ನೂ ತಂದು ಮನೆಯ ಹೊರಗಿನ ಜಗಲಿಯಲ್ಲಿರಿಸಿದಳು.
ಮಗಳು ಯಶಾ ಅಪ್ಪನು ಬರುವುದನ್ನೇ ಕಾಯುತ್ತಿದ್ದಳು.ಆಗಲೇ ಶಾಲೆಗೆ ತಡವಾಗಿತ್ತು.
"ಅಪ್ಪಾ... ನೀವು ಹೀಗೆ ದಿನವೂ ನಿಧಾನವಾಗಿ ಹೊರಡುತ್ತಿದ್ದರೆ ನಾನಿನ್ನು ಶಾಲಾವಾಹನದಲ್ಲೇ ಹೋಗುತ್ತೇನೆ..." ಮಗಳ ದನಿಯಲ್ಲಿನ ಜವಾಬ್ದಾರಿ,ಸ್ಪಷ್ಟತೆಯನ್ನು ಗಮನಿಸಿದರು ಜಯಂತ ರಾಯರು ...
"ಇಲ್ಲ..ಮಗಳೇ..ನಾಳೆಯಿಂದ ಹೀಗಾಗಲ್ಲ... ಬೆಳಗ್ಗೆ ಬೇಗ ಹೊರಡುತ್ತೇನೆ... ಸರೀನಾ ಪುಟ್ಟಿ....ನೋಡೇ ರಾಧಾ..ಮಗಳೂ ನಿನ್ಹಂಗೇ...ಈಗಲೇ ನನ್ನನ್ನು ಗದರಿಸುತ್ತಾಳೆ...."
"ಹೌದು.. ನಾನು ನಿಮ್ಮನ್ನು ಗದರಿಸೋದಾ...
ಮದುವೆಗೆಲ್ಲ ಹೊರಡೋದಿದ್ರೆ ಇನ್ನೂ ಮೇಕಪ್ ಮುಗಿದಿಲ್ವಾ...ಅಂತ ನೀವೇ ನನ್ನ ತಲೆತಿನ್ನೋದು ತಾನೇ...."
"ಆಯ್ತು.. ಮಹಾತಾಯಿ.. ಇನ್ನು ಯಾರನ್ನು ಲೇಟಾದ್ರೆ ಗದರಲ್ಲ...ನಾನೇ ಬೇಗ ಸಿದ್ಧನಾಗಿ ಎಲ್ಲರನ್ನೂ ಹೊರಡಿಸ್ತೀನಿ..ಸರೀನಾ.."ಎನ್ನುತ್ತಾ ಮೆಲ್ಲಗೆ ಹೆಂಡ್ತಿಯ ಸೊಂಟವ ಬಳಸಿ ಸಿಹಿ ನೋಟ ಬೀರಿ... ಹೊರಟು ನಿಂತ.
ಅಪ್ಪ ಮಗಳು ಇಬ್ಬರೂ ಜೊತೆಯಾಗಿ ಹೊರಟರು.. ರಾಧಾ ಇಬ್ಬರನ್ನೂ ಕಳುಹಿಸಿ ಕೊಟ್ಟು ಸೋಫಾದ ಮೇಲೊಮ್ಮೆ ಕುಳಿತು ದಣಿವಾರಿಸಿಕೊಂಡಳು.ನಂತರ ನಿತ್ಯದ ಸ್ವಚ್ಛತೆಯ ಕೆಲಸಗಳು ಆಕೆಗೆ ಇದ್ದದ್ದೇ...
ಎಷ್ಟು ಬೇಗ ಮಕ್ಕಳು ಬೆಳೆದು ಬಿಡುತ್ತಾರೆ.ಮೊನ್ನೆಮೊನ್ನೆ ಮಗ ಮನೆಯಲ್ಲಾಡಿದ ನೆನಪು.ಪಟ್ಟ ತಂಗಿಯ ಎತ್ತಲು ಹರಸಾಹಸ ಪಡುತ್ತಿದ್ದ .. ಆಕೆ ಅತ್ತರೆ ತಾನೇ ಸಮಾಧಾನಮಾಡಿ ನಕ್ಕು ನಗಿಸುತ್ತಿದ್ದ .ಈಗ ದೂರದೂರಿಗೆ ಇಂಜಿನಿಯರಿಂಗ್ ಓದಲು ತೆರಳಿದ್ದಾನೆ..ಮಗಳೂ ವಯಸ್ಸಿಗಿಂತ ಹೆಚ್ಚೇ ಪ್ರಬುದ್ಧಳಾಗುತ್ತಿದ್ದಾಳೆ.
ಮಗಳನ್ನು ಶಾಲೆಗೆ ಬಿಟ್ಟು ಜಯಂತ್ ರಾಯರು ಆಫಿಸಿಗೆ ತೆರಳಿದರು.ಮಾಡಬೇಕಾದ ಕೆಲಸಗಳತ್ತ ಗಮನಹರಿಸಿದರು.ಮಕ್ಕಳ ಭವಿಷ್ಯಕ್ಕೆಂದು ಕಟ್ಟುತ್ತಿದ್ದ ಇನ್ಶೂರೆನ್ಸ್ ಪಾಲಿಸಿಯ ಹಣ ಕಟ್ಟುವುದಿತ್ತು.. ಲೆಕ್ಕಾಚಾರ ಹಾಕಿಕೊಂಡರು.ಈಗ ಕಟ್ಟಿದ ದುಡ್ಡು ಮಗಳ ವ್ಯಾಸಂಗಕ್ಕೆ ಎಷ್ಟು ದೊರಕಬಹುದು...ಮದುವೆ ವಯಸ್ಸಿಗೆ ಬಂದಾಗ ಮೆಚ್ಯೂರ್ ಆಗಬಹುದೇ..ಎಷ್ಟು ದೊರಕಬಹುದು...ಮಗನ ವಿದ್ಯಾಭ್ಯಾಸಕ್ಕೆ ಈಗ ಒಂದು ಪಾಲಿಸಿ ಮೆಚ್ಯೂರ್ ಆಗಿ ಬಹಳ ಉಪಕಾರವಾಯಿತು. ಇನ್ನೊಂದು ಅವನಿಗೆ ಇಪ್ಪತ್ತೆಂಟು ವರ್ಷವಾದಾಗ ಮೆಚ್ಯೂರ್ ಆಗುತ್ತೆ... ಮದುವೆ ಖರ್ಚಿಗೆ ಸ್ವಲ್ಪ ಅನುಕೂಲ ಆದೀತು...ಎಂದೆಲ್ಲ ಲೆಕ್ಕಾಚಾರ ಹಾಕಿ ಪಾಲಿಸಿಗೆ ಹಣಕಟ್ಟಿ ಬಂದು ಮತ್ತೆ ಕೆಲಸದಲ್ಲಿ ತಲ್ಲೀನರಾದರು.
ಸಂಜೆ ಮಗಳನ್ನು ಮನೆಗೆ ಕರೆದೊಯ್ಯುವ ಹೊತ್ತಾದಾಗ ಹೊರಟು ನಿಂತರು.ದಿನವೂ ಸಂಜೆ ಮಗಳನ್ನು ಮನೆಗೆ ಬಿಟ್ಟು ಪುನಃ ಆಫೀಸಿಗೆ ಬಂದು ಎಂಟು ಗಂಟೆವರೆಗೂ ದುಡಿಯುತ್ತಿದ್ದರು ಜಯಂತರಾಯರು.
ಮಗಳಿಗಿಂತ ಮೊದಲೇ ಶಾಲಾವಠಾರ ತಲುಪಿ ಜಯಂತರಾಯರು ತಡ ಆಗಿ ಮಗಳಿಂದ ಬೈಸಿಕೊಳ್ಳೋದು ತಪ್ಪಿತು.ಯಾವತ್ತಿನಿಂದ ನಿಧಾನವಾಗಿ ಸೋತ ಮುಖದಿಂದ ಬಂದ ಮಗಳನ್ನು ಕಂಡು ಅಚ್ಚರಿಗೊಂಡರು.
"ಏನಾಯ್ತು ಮಗಳೇ.."
"ಏನಿಲ್ಲಪ್ಪ... ಮನೆಗೆ ಹೋಗೋಣ"
ಮಗಳ ವರ್ತನೆಯಲ್ಲಿನ ಬದಲಾವಣೆಗೆ ಕಾರಣ ತಿಳಿಯುವ ಕುತೂಹಲ.ತಂದೆಯ ಪ್ರಶ್ನೆಗಳಿಗೆಲ್ಲ ಸರಿಯಾಗಿ ಉತ್ತರಿಸದೆ ಔದಾಸೀನ್ಯ ತೋರುತ್ತಿರುವ ಯಶಾ.
ಮನೆಗೆ ತೆರಳಿದಾಗ ರಾಧಾ ಬಿಸಿ ಬಿಸಿ ಕಾಫಿ, ಗೋಳಿಬಜೆ ಮಾಡಿ ಇಟ್ಟಿದ್ದರು..ಗೋಳಿಬಜೆ ಚಪ್ಪರಿಸಿ ಕಾಫಿಹೀರಿದ ಜಯಂತರಾಯರಿಗೆ ಮಗಳ ದುಗುಡ ಮರೆತೇ ಹೋಯಿತು.
"ರಾಧಾ ಬಾಯ್.. "ಎಂದು ಹೇಳಿ ಆಫೀಸಿಗೆ ಹೊರಟರು..
ಪತಿಯನ್ನು ಕಳುಹಿಸಿಕೊಟ್ಟು ಒಳಗೆ ಬಂದ ರಾಧಾ ಮಗಳನ್ನು ಕಾಣದೇ
"ಯಶಾ ..."ಎಂದು ಕರೆದರು..ಕರೆಂಟೂ ಹೋಗಿತ್ತು...
ಅವಳ ಸುದ್ದಿಯೇ ಇಲ್ಲ..
"ಎಲ್ಲಿದ್ದೀಯಮ್ಮಾ... " ಎಂದು ಪುನಃ ಕೂಗಿದರು.
ಮಗಳು ತನ್ನ ಕೋಣೆಯ ಮೂಲೆಯಲ್ಲಿ ಕುಳಿತಿರುವುದನ್ನು ಅರಿತರು.
"ಏನಾಯ್ತು ಯಶಾ ಬಾರಮ್ಮ ಇತ್ತ.."
"........."ಮಾತಿಲ್ಲ.
ರಾಧಾ ತಾನೇ ಮಗಳ ಬಳಿ ತೆರಳಿ ಮಗಳನ್ನು ಹೊರಗೆ ಕರೆತಂದರು.
"ಯಾರಾದರೂ ಏನಾದರೂ ಅಂದರಾ.."
"ಊಹೂಂ..."
"ಟೀಚರ್ ಹೇಳಿದ ಹೋಂವರ್ಕ್ ಮಾಡೋಕೆ ಮರೆತಿದ್ದೀಯ..."
"ಊಹೂಂ..."
"ತಲೆನೋವು ಏನಾದರೂ ಬಂತಾ..."
"ಊಹೂಂ..."
"ಹೊಟ್ಟೆ ನೋವೂ ಆಗ್ತಾ ಇದೆಯಾ..."
"ಹೂಂ.."
ಅಮ್ಮನ ಮಾತನ್ನು ಕೇಳಿದ ಯಶಾ ಬಿಕ್ಕಳಿಸಲು ಆರಂಭಿಸಿದಳು.
"ಸ್ವಲ್ಪ ನೀರು ಕುಡಿ.. ಆಮೇಲೆ ಆಯುರ್ವೇದ ಅರಿಷ್ಠ ಕೊಡುವೆ ಸರಿಹೋದೀತು.ಜಂಕ್ಫುಡ್ ತಿನ್ಬೇಡ ಅಂದ್ರೆ ಕೇಳಲ್ಲ.ಮಧ್ಯಾಹ್ನ ಗೆಳತಿಯರ ಜೊತೆ ಸೇರಿ ಏನಾದ್ರೂ ಹಾಳು ಮೂಳು ತಿಂಡಿ ತಿಂದಿರಬೇಕು.."
"ಅಮ್ಮಾ... ಅದು..."
"ಅದೇನು..."
"ಅಲ್ಲ..."ಬಿಕ್ಕಿ ಅಳುತ್ತಿದ್ದಾಳೆ
"ಏನಮ್ಮಾ..ನನ್ಹತ್ರ ಹೇಳದೆ ಅತ್ತುಕೊಂಡು ಕೂತರೆ ಪರಿಹಾರ ಸಿಗುತ್ತಾ.."
"ಅಮ್ಮಾ...ಅದೂ ..ಬ್ಲಡ್ ಬರ್ತಾ ಇದೆಯಮ್ಮಾ..."
"ಓಹೋ..ಅದಾ.. ವಿಷಯ.. ಅದ್ಕೇ ಹೆದರೋದು ಬೇಡ..."
"ಅಲ್ಲಮ್ಮಾ.. ನಾನೇನು ಮಾಡಲಿ..ಶಾಲೆಗೆ ಹೇಗೆ ಹೋಗಲಿ...ಬಟ್ಟೆ ಗಲೀಜಾಗುತ್ತಲ್ಲ.."
"ಎಲ್ಲ ನಾನು ಹೇಳಿಕೊಡ್ತೀನಿ ಬಾ.."
"ಅಮ್ಮಾ.. ಈ ರೀತಿ ಆಗಿ ನಾನು..."
"ಏನಿಲ್ಲ ಮಗಳೇ.. ನೀನು ಆರೋಗ್ಯವಾಗಿ ಇದೀಯಾ ಅಂತ ಅರ್ಥ...ನೀನೀಗ ಮೊದಲು ಫ್ರೆಶ್ ಆಗಿ ಬಾ..."
ಮಗಳಿಗೆ ಸ್ವಚ್ಛತೆಯ ಪಾಠ ಹೇಳಿದರು ಅಮ್ಮ..
"ಮುಟ್ಟು ಹೆಣ್ಣಿನ ಸಹಜ ಕ್ರಿಯೆ.ಅದಕ್ಕೆ ಭಯಪಡುವುದು ಬೇಡ.ಪ್ರತೀ ಮಾಸವೂ ದೇಹದಲ್ಲಿನ ಮಲಿನ ರಕ್ತ ಹೊರಹೋಗುವ ಪ್ರಕ್ರಿಯೆ."
"ರಕ್ತ ಹೋಗಿ ನನ್ನ ದೇಹದಲ್ಲಿರೋದು ಕಡಿಮೆಯಾಗಿಬಿಟ್ರೆ ...ನನಗೇನಾದ್ರೂ ಆದ್ರೆ.."
"ಏನೂ ಆಗೋಲ್ಲ ಮಗಳೇ...ಆಗ ಶುಚಿತ್ವ ಕಾಪಾಡಿಕೊಳ್ಳುವುದು ಅಗತ್ಯ."
ಮಗಳಿಗೆ ಶುಚಿತ್ವದ ಮಹತ್ವವನ್ನು ಹೇಳಿದ ರಾಧಾ ಸ್ಯಾನಿಟರಿ ಪ್ಯಾಡ್ ಧರಿಸುವ ವಿಧಾನವನ್ನು ತಿಳಿಸಿಕೊಡುತ್ತಾಳೆ.ಕೈಯಲ್ಲೊಂದು ಹೊಸ ಕ್ಯಾಲೆಂಡರ್ ಕೊಟ್ಟು ಪ್ರತೀ ತಿಂಗಳು ಮುಟ್ಟಾದ ದಿನವನ್ನು ತಪ್ಪದೇ ನಮೂದಿಸಲು ತಿಳಿಸುತ್ತಾಳೆ.
ಅಮ್ಮನ ಆತ್ಮೀಯ ಸಲಹೆಯಿಂದ ಯಶಾ ನಿರಾಳವಾಗಿ ಅಮ್ಮ ಮಾಡಿಕೊಟ್ಟ ತಿಂಡಿ ತಿಂದು ಹೋಂವರ್ಕ್ ಮಾಡಲು ತೊಡಗುತ್ತಾಳೆ.
ಮಗಳಿಗೆ ಅಗತ್ಯವಾದ ಪೌಷ್ಟಿಕಾಂಶಯುಕ್ತ ಆಹಾರವನ್ನು ತಾಯಿ ಸಿದ್ಧಪಡಿಸುವತ್ತ ಗಮನ ಹರಿಸುತ್ತಾಳೆ.ಮರುದಿನ ಮಗಳನ್ನು ಶಾಲೆಗೆ ಕಳುಹಿಸುವ ಮೊದಲು ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡುತ್ತಾಳೆ.ಮಗಳು ಯಾವುದೇ ಅಸಹ್ಯ, ಅಂಜಿಕೆಯಿಲ್ಲದೆ ಶಾಲೆಗೆ ತೆರಳುತ್ತಾಳೆ.
ರಾಧಾ ನಂತರ ತನ್ನ ಗೆಳತಿ ಶೋಭಾಗೆ ಕರೆಮಾಡಿದಳು.ಕೆಲವು ದಿನಗಳ ಹಿಂದೆ ಶೋಭಾ ತನ್ನ ಮಗಳ ಬಗ್ಗೆ ಹೇಳಿಕೊಂಡಿದ್ದಳು.ಆದ್ದರಿಂದ ಸಮಾನ ವಯಸ್ಸಿನ ಹೆಣ್ಣು ಮಕ್ಕಳ ತಾಯಿ ಆಗಿರೋದರಿಂದ ಒಮ್ಮೆ ಅವಳಲ್ಲಿ ವಿಷಯ ಚರ್ಚಿಸೋಣ ಎಂದು ಅನಿಸಿತು.
"ಹಲೋ.. ಶೋಭಾ.. ನಾನು ಕಣೆ.. ರಾಧಾ.."
"ಓಹೋ...ಏನೇ ಇದ್ದಕ್ಕಿದ್ದ ಹಾಗೆ ಬೆಳಗ್ಗೇನೇ ನನ್ನ ನೆನಪು... ಆರಾಮಾಗಿ ಇದೀಯಾ ತಾನೇ..."
"ಚೆನ್ನಾಗಿದೀನಿ ಗೆಳತಿ..ನನ್ನ ಮಗಳ ವಿಷಯ ನಿನ್ನ ಹತ್ತಿರ ಮಾತಾಡೋಣ ಅಂತ"
"ಹೇಳು..."
"ನಿನ್ನೆ ನನ್ನ ಮಗಳು....ಮುಟ್ಟಾದಳು...ಮೊದಲ ಬಾರಿಗೆ ಆತಂಕ ಸಹಜ.. ಧೈರ್ಯ ಹೇಳಿ ಕೆಲವು ಮುಖ್ಯ ಅಂಶಗಳನ್ನು ಹೇಳಿಕೊಟ್ಟೆ...ನಮ್ಮ ಕಾಲದಂತಲ್ಲ ನೋಡು ಈಗ..."
"ಕಾಲ ಯಾವುದಾದರೂ ಹೆಣ್ಣು ಹೆಣ್ಣೇ..ನಮ್ಮ ಬಾಲ್ಯದ ಕಾಲದಲ್ಲಿ ಬಟ್ಟೆಗಳನ್ನು ಬಳಸಿ ಸ್ರಾವವನ್ನು ಹೊರಚೆಲ್ಲದಂತೆ ತಡೆಯುತ್ತಿದ್ದೆವು..ನಂತರ ಸ್ಯಾನಿಟರಿ ಪ್ಯಾಡ್ ಬಳಕೆ ಆರಂಭವಾಯಿತು.."
"ಹೌದಲ್ವೇ... ನಮ್ಮಷ್ಟು ಈಗಿನ ಮಕ್ಕಳು ಕಷ್ಟಪಡಬೇಕಾಗಿಲ್ಲ."
"ಸ್ಯಾನಿಟರಿ ಪ್ಯಾಡ್ ಮತ್ತು ಟ್ಯಾಂಪೂನ್ ಬಳಸುವುದರಿಂದ ಉಂಟಾಗುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಮಣ್ಣಿನಲ್ಲಿ ಸೇರಬೇಕಾದರೆ ಇಪ್ಪತ್ತೈದು ವರುಷಗಳೇ ಬೇಕಂತೆ..ಈಗ ಅದರ ಬದಲಿಗೆ ಹೊಸ ಸಾಧನವೊಂದನ್ನು ಅನ್ವೇಷಣೆ ಮಾಡಿದ್ದಾರೆ ರಾಧಾ.."
"ಹೌದಾ..ಅದ್ಯಾವುದಮ್ಮಾ....ನಾನಿನ್ನೂ ತಿಳಿದುಕೊಂಡಿಲ್ಲ.."
"ಅದನ್ನು ಮುಟ್ಟಿನ ಬಟ್ಟಲು ಅಥವಾ ಮೆನ್ಸ್ಟ್ರುವಲ್ ಕಪ್ ಎಂದು ಹೇಳುತ್ತಾರೆ..."
"ಹಾಗಂದರೆ ಏನೇ..."
"ವೈದ್ಯಕೀಯ ದರ್ಜೆಯ ಉತ್ತಮ ಗುಣಮಟ್ಟದ ಸಿಲಿಕೋನ್ ಎಂಬ ರಾಸಾಯನಿಕ ಸಂಯುಕ್ತ ಪದಾರ್ಥದಿಂದ ಇದನ್ನು ತಯಾರಿಸುತ್ತಾರೆ.ಗಂಟೆಯಾಕಾರದ ಕಪ್ ಇದಾಗಿದೆ...."
"ಹೇಗೆ ಬಳಸುವುದು ಕಣೇ..."
"ಇದು ಸುಲಭವಾಗಿ ಬಾಗುತ್ತೆ ರಾಧಾ... ಇದನ್ನು ಇಂಗ್ಲಿಷ್ ನ C ಆಕಾರದಲ್ಲಿ ಮಡಚಿ ಯೋನಿಯೊಳಗೆ ತೂರಿಸಬೇಕು.ನಂತರ ನಮ್ಮ ಬೆರಳುಗಳ ಸಹಾಯದಿಂದ ಒಳಗೆ ಸೇರಿಸಿದಾಗ ಅಲ್ಲಿ ಗಾಳಿಯಿಲ್ಲದ ಸ್ಥಿತಿ..ನಿರ್ವಾತ ಸ್ಥಿತಿ ಏರ್ಪಡುತ್ತದೆ.ಇದರಿಂದ ಕಪ್ ಯೋನಿಯ ಗೋಡೆಯ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ."
"ಬಿಗಿಯಾಗಿ ನಿಲ್ಲುತ್ತಾ..ಜಾರೋದಿಲ್ವಾ.."
"ಮೊದಲ ಬಾರಿಗೆ ಧರಿಸುವಾಗ ಎಚ್ಚರದಿಂದಿರಬೇಕು.. ಅದರೊಳಗೆ ಸ್ರಾವವು ಶೇಖರಗೊಳ್ಳುತ್ತದೆ.ಸಮಾನ್ಯವಾಗಿ ಎಂಟರಿಂದ ಹನ್ನೆರಡು ಗಂಟೆಯ ನಂತರ ತೆಗೆದು ಚೆಲ್ಲಿ ಸ್ವಚ್ಛಗೊಳಿಸಬೇಕು..ಅತಿಯಾದ ಸ್ರಾವವಿದ್ದರೆ ನಾಲ್ಕರಿಂದ ಎಂಟು ಗಂಟೆಗಳ ಅಂತರದಲ್ಲಿ ಸ್ವಚ್ಛಗೊಳಿಸಬೇಕು..."
"ಈ ಸಾಧನವನ್ನು ಅಳವಡಿಸುವಾಗ ನೋವಾಗುತ್ತಾ ಶೋಭಾ"
"ಇಲ್ಲ ಕಣೇ.. ಆದರೆ ಹಾಕುವಾಗ ತೆಗೆಯುವಾಗ ಮನಸ್ಸು ಶಾಂತವಾಗಿರಬೇಕು.ಮನಸ್ಸು ಪ್ರಶಾಂತತೆಯಿಂದ ಇದ್ದಾಗ ಮಾಂಸಖಂಡಗಳೂ ಸಡಿಲವಾಗಿದ್ದು ಯಾವುದೇ ನೋವನ್ನುಂಟುಮಾಡುವುದಿಲ್ಲ..."
"ಇದರಿಂದೇನಾದರೂ ಸೋಂಕು ತಗಲುವ ಸಾಧ್ಯತೆ ಇದೆಯೇ.."
"ಇಲ್ಲ..ಇದರಿಂದ ಯಾವುದೇ ಸೋಂಕು ತಗಲುವ ಭಯವಿಲ್ಲ.ಹಾಕಿಕೊಂಡು ಯಾವುದೇ ಅಡೆತಡೆಯಿಲ್ಲದೆ ಕೆಲಸಕಾರ್ಯಗಳಲ್ಲಿ ತೊಡಗಬಹುದು.ಸ್ಯಾನಿಟರಿ ಪ್ಯಾಡ್ ಅಥವಾ ಬಟ್ಟೆಯಂತೆ ಇದು ಅಹಿತದ ಅನುಭವವನ್ನು ಉಂಟುಮಾಡುವುದಿಲ್ಲ.."
"ಹೌದೇ...ಹೆಣ್ಣುಮಕ್ಕಳ ಪಾಲಿಗೆ ವರದಾನ ಅಂತ ಹೇಳಬಹುದು.. ಅಲ್ವಾ.."
"ಹೂಂ.. ರಾಧಾ.. ಒಂದು ಮುಟ್ಟಿನ ಬಟ್ಟಲು ಸುಮಾರು ಆರೇಳು ವರ್ಷಗಳವರೆಗೆ ಬರಬಹುದು.. ಬೆಲೆ ಸುಮಾರು ₹300 ರಿಂದ ₹400 ಇರಬಹುದು.. ಸ್ಯಾನಿಟರಿ ಪ್ಯಾಡ್ ಗೆ ಹೋಲಿಸಿದರೆ ತುಂಬಾ ಅಗ್ಗವಾಗಿದೆ ನೋಡು..."
"ಹೌದು.. ಶೋಭಾ.. ಆದರೆ ಇದು ಎಲ್ಲಿ ಸಿಗಬಹುದು ಹೇಳು"
"ಇದು ನಿನ್ನ ಕೈಯಳತೆಯಲ್ಲೇ ಸಿಗುತ್ತೆ ಕಣೇ.."
"ಹೌದಾ..ಎಂತ ಹೇಳ್ತಿ..."
"ರಾಧಾ..ನಿನ್ನ ಕೈಲಿರೋ ಫೋನಿಂದ ಆನ್ಲೈನ್ ಶಾಪಿಂಗ್ ಮಾಡು... ಅಮೆಜಾನ್ ನಲ್ಲಿ ಆರ್ಡರ್ ಮಾಡಮ್ಮ..ನಾಳೆನೇ ನಿನ್ನ ಮನೆಬಾಗಿಲಿಗೆ ತಂದು ಕೊಡುತ್ತಾರೆ..."
"ಹೌದಾ ಶೋಭಾ.. ಇನ್ನು ತಡಮಾಡುವುದಿಲ್ಲ...ಈಗಲೇ ಬುಕ್ ಮಾಡುತ್ತೇನೆ.. ನನಗೊಂದು ನನ್ನ ಮಗಳಿಗೊಂದು ... ಬಾಯ್..."
ಆನ್ಲೈನ್ ಮಾರುಕಟ್ಟೆಯ ಮೂಲಕ ಮುಟ್ಟಿನ ಕಪ್ ಆರ್ಡರ್ ಮಾಡಿ... ಡೆಬಿಟ್ ಕಾರ್ಡ್ ಮೂಲಕ ಹಣಪಾವತಿ ಮಾಡಿದಳು.. ರಾಧಾ...ಮೊಬೈಲ್ ನಲ್ಲಿ ಗೂಗಲ್ ನಲ್ಲಿ ಅದರ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿದುಕೊಂಡಳು....ಮಗಳ ಮುಟ್ಟಿನ ಸಮಯದಲ್ಲಿ ತಾಯಿ ಆಕೆಗೆ ಯಾವ ರೀತಿ ಮಾನಸಿಕ ಬೆಂಬಲ ನೀಡಬೇಕು ಎಂಬುದನ್ನೆಲ್ಲ ಗೂಗಲ್ ನಿಂದ ತಿಳಿದುಕೊಂಡಳು.ಮಗಳ ಜೊತೆಗೆ ಹಂಚಿಕೊಂಡಳು..
ಗೂಗಲ್ ಬಾಬಾಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲ್ದಪ್ಪಾ...ಎಂದುಕೊಂಡಳು.
ಮರುದಿನ ಮಧ್ಯಾಹ್ನದ ಒಳಗೆ ಮುಟ್ಟಿನ ಕಪ್ ನ್ನು ಹಿಡಿದು ಮನೆಬಾಗಿಲಲ್ಲಿ ನಿಂತಿದ್ದ ಡೆಲಿವರಿ ಬಾಯ್.. ಪಡೆದುಕೊಂಡರು ರಾಧಾ..ಕುತೂಹಲದಿಂದ ಪೊಟ್ಟಣವನ್ನು ತೆರೆದರು ರಾಧಾ...ಹೆಣ್ಮಕ್ಕಳ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಡೆದ ವಿಜ್ಞಾನದ ಆವಿಷ್ಕಾರಗಳು ಮೆಚ್ಚುಗೆಯಾದವು ರಾಧಾಳಿಗೆ.ತಮ್ಮ ಕಾಲದ ಕಷ್ಟದ ದಿನಗಳನ್ನು ಸ್ಮರಿಸಿಕೊಂಡಳು..
ಯಶಾ ತನ್ನ ದೇಹದ ಬದಲಾವಣೆಗಳನ್ನು ಸಹಜವಾಗಿ ಸ್ವೀಕರಿಸಿದಳು.ಅಮ್ಮನ ಕಾಳಜಿಯ ನುಡಿಗಳು ಅವಳಲ್ಲಿ ಉತ್ಸಾಹ ಮೂಡಿಸಿದವು.
ಆಧುನಿಕ ಸವಲತ್ತುಗಳು ಅವಳ ಮುಟ್ಟಿನ ಸಮಯವನ್ನು ತಾಪತ್ರಯಗಳಿಲ್ಲದೆ ಕಳೆಯಲು ಸಹಕರಿಸಿದವು.
ಯಶಾ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಳು.ಹೆಸರಿಗೆ ತಕ್ಕಂತೆ ಯಶವನ್ನೇ ಬಾಳಿನುದ್ದಕ್ಕೂ ಕಂಡವಳು.ಆಗಲೇ ತಂದೆಯಲ್ಲಿ "ಅಪ್ಪಾ.. ನನಗೊಂದು ಮೊಬೈಲ್ ಕೊಡಿಸಿ" ಎಂದು ದುಂಬಾಲು ಬಿದ್ದಿದ್ದಳು.
"ಈಗಲೇ ಏಕೆ.." ಎಂದು ಅಪ್ಪನ ವಾದ.ತಂಗಿಯ ಆಸೆ ಅಣ್ಣ ಮಹೇಶನಿಗೆ ತಿಳಿಯಿತು.ಈ ಸಲ ಬೇಸಿಗೆ ರಜೆಯಲ್ಲಿ ಊರಿಗೆ ಬರುವಾಗ ತಂಗಿಗೊಂದು ಸ್ಮಾರ್ಟ್ ಫೋನ್ ತಂದೇಬಿಟ್ಟ..ತನ್ನಣ್ಣ ತಂದುಕೊಟ್ಟ ಮೊಬೈಲ್ ನಲ್ಲಿ ಮುಳುಗಿದಳು ಯಶಾ..
ತನಗೆ ಬೇಕಾದ ಆಪ್ ಗಳನ್ನೆಲ್ಲ ಡೌನ್ಲೋಡ್ ಮಾಡಿಕೊಂಡಳು.ಫ್ರೆಂಡ್ಸ್ ಜೊತೆ ಚಾಟಿಂಗ್ ಎಲ್ಲ ಖುಷಿಯಿಂದ ನಡೆಸುತ್ತಿದ್ದಳು.ಒಂದು ದಿನ ಅಪರಿಚಿತ ವ್ಯಕ್ತಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ.. ಆಕೆ ಸ್ವೀಕರಿಸಲಿಲ್ಲ.ನಂತರ ಮೆಸೇಂಜರ್ ನಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ.ಯಶಾ ನಿರ್ಲಕ್ಷ್ಯ ಮಾಡಿದಳು.ಮನೆಯವರಿಗೆ ಏನೂ ಹೇಳಿಕೊಳ್ಳಲಿಲ್ಲ.ಆಕೆಗೆ ನಿತ್ಯವೂ ಅವನಿಂದ ಆತಂಕ ತಪ್ಪಿದ್ದಲ್ಲ.
ಎರಡು ವರ್ಷಗಳ ಅವಧಿ ಹೇಗೋ ಕಳೆಯಿತು.ಯಶಾಳ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಕಡಿಮೆಯಾಯಿತು.ಒಂದು ದಿನ ಇದ್ದಕ್ಕಿದ್ದಂತೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ.ಆಕೆಯ ಮುಟ್ಟಿನ ವಿವರಗಳನ್ನು ಹೇಳುತ್ತಿದ್ದ..ಹೊಟ್ಟೆನೋವಿನ ವಿಷಯ ಪ್ರಸ್ತಾಪಿಸಿ ಸಲಹೆ ಕೊಡುತ್ತಿದ್ದ."ಸ್ರಾವ ಜಾಸ್ತಿ ಇದೆಯಾ ಮುದ್ದು ಬಂಗಾರಿ.".ಅನ್ನುತ್ತಿದ್ದ.. ಇವನಿಗೆ ನನ್ನ ಸಂಗತಿ ಹೇಗೆ ತಿಳಿಯುವುದು ಎಂದೇ ಆಕೆಗೆ ಸೋಜಿಗದ ಸಂಗತಿಯಾಯಿತು...ತನ್ನ ಖಾಸಗಿ ವಿಷಯವನ್ನು ಗೆಳತಿಯರು ಬಹಿರಂಗ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಮೂಡಿತು.
ಒಂದು ದಿನ ಧೈರ್ಯ ಮಾಡಿ ತನ್ನ ಗೆಳತಿಯರಲ್ಲಿ ವಿಷಯ ತಿಳಿಸಿದಳು.
"ಯಾರಾದರೂ ನನ್ನ ಗೌಪ್ಯ ಮಾಹಿತಿ ಕೇಳಿದರೆ ಹೇಳಬೇಡಿ ಪ್ಲೀಸ್ "...ಎಂದೂ ಗೋಗರೆದಳು.ಆಗ ಗೆಳತಿ ಮೇಘಾ..
"ನಾವು ಯಾರೂ .. ಯಾರ ಬಳಿಯೂ ನಿನ್ನ ಮಾಹಿತಿ ನೀಡಿಲ್ಲ,ನೀಡುತ್ತಿಲ್ಲ.. ಆದರೂ ಆತನಿಗೆ ತಿಳಿಯುವುದು ಎಂದಾದರೆ ನೀನೊಮ್ಮೆ ಮನೆಯವರಿಗೆ ಇದನ್ನು ತಿಳಿಸುವುದು ಒಳಿತು.."ಎಂದು ಸಲಹೆ ನೀಡಿದಳು.
ಗೆಳತಿಯ ಸಲಹೆಯಂತೆ ತನ್ನ ತಾಯಿಯಲ್ಲಿ ತಿಳಿಸಿದಳು.ರಾಧಾ ತನ್ನ ಗಂಡನಲ್ಲಿ ವಿಷಯವನ್ನು ಚರ್ಚಿಸಿದಳು.ಎರಡು ದಿನ ರಾಧಾ ತನ್ನ ಬಳಿಯೇ ಇಟ್ಟುಕೊಂಡಳು ಫೋನನ್ನು..ಆಕೆಯ ಬಳಿಯೂ ಆಕೆಯ ಡೇಟಿಂಗ್ ಬಗ್ಗೆ ಮಾಹಿತಿ ನೀಡಿ.. ನನಗೆ ನಿನ್ನ ಬಗ್ಗೆ ತಿಳಿದಿದೆ ಎಂಬುದಾಗಿ ಹೇಳಲಾರಂಭಿಸಿದ.ಜಯಂತ ರಾಯರು ಇನ್ನು ಈ ಫೋನ್ ನನ್ನ ಬಳಿ ಇರಲಿ ಎಂದು ಹೇಳಿ ಇಟ್ಟುಕೊಂಡರು..ಆ ವ್ಯಕ್ತಿ ನಾಪತ್ತೆ..ಕಾಟಕೊಡುವುದು ನಿಲ್ಲಿಸಿದ..
ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗ ಪಡೆದ ಕೆಲವು ತಿಂಗಳ ಬಳಿಕ ಅಣ್ಣ ಮಹೇಶ ಊರಿಗೆ ಬಂದಿದ್ದ..ಅಣ್ಣನ ಬಳಿ ಏನೋ ಚರ್ಚಿಸಲು ಆಕೆ ಅಪ್ಪನಲ್ಲಿ ಕೇಳಿ ಫೋನ್ ತೆಗೆದುಕೊಂಡಳು.. ಸ್ವಲ್ಪವೇ ಹೊತ್ತಾಗಿದ್ದು.. ಆಗಲೇ ಆ ಅಪರಿಚಿತ ವ್ಯಕ್ತಿ ಮತ್ತೆ "ನಿನಗಿಂದು ತುಸು ಹೊಟ್ಟೆನೋವಿದೆಯಾ ... ನಾನು ಮನೆಮದ್ದು ಹೇಳಲೇ ಬಂಗಾರಿ..."ಅಂದ..
ಇದನ್ನು ಕಂಡ ಮಹೇಶನಿಗೆ ಸಿಟ್ಟು ಬಂತು.ತಕ್ಷಣ... ಹೀಗೆ ಸಮ್ಮನಿದ್ದರೆ ಆಗದು ಎಂದು ಸೈಬರ್ ಪೋಲೀಸರಿಗೆ ದೂರುಕೊಡುವ ಸಿದ್ಧತೆಗೆ ತೊಡಗಿದ.ಜೊತೆಗೆ ತನ್ನ ಇಂಜಿನಿಯರ್ ಮಿತ್ರ ಗಿರಿಯಲ್ಲೂ ಹಂಚಿಕೊಂಡ.
ಮಿತ್ರ ಗಿರಿ "ಕೆಲವು ಹೊಸದಾಗಿ ಆವಿಷ್ಕಾರಗೊಂಡ ಆಪ್ ಗಳಿವೆ...ಎಂ.ಐ.ಎ.ಲೇಡಿ ಮತ್ತು ಕಾಮ ಎಂಬಿತ್ಯಾದಿ ಆಪ್ ಗಳು ಮಹಿಳೆಯರ,ಬಾಲಕಿಯರ ಅತಿಸೂಕ್ಷ್ಮ ಮಾಹಿತಿಯನ್ನು ಟ್ರ್ಯಾಕ್ ಮಾಡುತ್ತವೆ.ಹೆಣ್ಣುಮಕ್ಕಳ ದೇಹದ ತೂಕ,ಆಕಾರ,ಮುಟ್ಟಿನ ದಿನಾಂಕ,ಸ್ರಾವ, ಲೈಂಗಿಕ ಸಂಪರ್ಕ, ಗರ್ಭನಿರೋಧಕ ಬಳಕೆ ,ಬಳಸಿದ ಗರ್ಭನಿರೋಧಕ ಯಾವುದು, ಹೇಗೆ,ಯಾವ ಸಮಯ ಎಂಬ ಮಾಹಿತಿಯನ್ನು ಫೇಸ್ಬುಕ್ ಗೆ ತಲಪಿಸುತ್ತದೆ."ಎಂದು ಹೇಳಿದನು.
"ಇಂತಹ ಯಾವುದೇ ಆಪ್ ಡೌನ್ಲೋಡ್ ಮಾಡಿಕೊಳ್ಳಲಿಲ್ಲ"ಎಂದ ಮಹೇಶ..
"ಅದನ್ನು ಡೌನ್ಲೋಡ್ ಮಾಡಬೇಕಾಗಿಲ್ಲ..ಮಹೇಶ..ಕುತೂಹಲಕ್ಕೆಂದು ಒಮ್ಮೆ ಇಂತಹದ್ದರೊಳಗೆ ಇಣುಕಿದರೆ ಸಾಕು.. ಅದು ನಿಮ್ಮ ಗೌಪ್ಯ ಮಾಹಿತಿಯನ್ನು ಸಂಗ್ರಹಸಿಕೊಳ್ಳುತ್ತದೆ ..ಸದಾ ಕಾಲ ನಿಮ್ಮ ಮೇಲೆ ನಿಗಾ ಇಟ್ಟಿರುತ್ತದೆ... ಅದರಿಂದಲೇ ಗಂಡುಮಕ್ಕಳ ಕೈಲಿ ಆ ಸ್ಮಾರ್ಟ್ ಫೋನ್ ಇದ್ದಾಗ ಅಂತಹ ಯಾವ ಮೆಸೇಜ್ ಬರುವುದಿಲ್ಲ..."
"ಹೌದಾ..ಗಿರಿ.. ಹಾಗಿದ್ದರೆ ನಾವಿನ್ನು ಏನು ಮಾಡಬಹುದು"
"ಸೈಬರ್ ಪೋಲೀಸರಿಗೆ ದೂರು ಕೊಡುವುದು ಒಳಿತು.."
ಗೆಳೆಯನ ಮಾತನ್ನು ಕೇಳಿದ ಮಹೇಶ ದೂರು ನೀಡಿದನು.. ಪೋಲೀಸರು ಮಹಿಳೆಯರ ಟ್ರ್ಯಾಕಿಂಗ್ ಆಪ್ ನ ಕಿರುಕುಳ ಇದು ಎಂದು ತನಿಖೆನಡೆಸಿ ತಿಳಿಸಿದರು.
ಇಂತಹ ಆಪ್ ಗಳು ಇತ್ತೀಚೆಗೆ ಭಾರತದಲ್ಲಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿವೆ.ಇಲ್ಲಿನ ಮುಗ್ಧ ಹೆಣ್ಣುಮಕ್ಕಳ ಖಾಸಗಿ ವಿಷಯವನ್ನು ಬಹಿರಂಗ ಪಡಿಸಿ ಕೋಟಿಕೋಟಿ ದುಡ್ಡು ಜೇಬಿಗಿಳಿಸುತ್ತಿದ್ದಾರೆ.ಎಲ್ಲಾ ಹೆಣ್ಣುಮಕ್ಕಳೂ ಇಂತಹ ಆಪ್ ಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು...ಎಂಬ ಸ್ಫೋಟಕ ವಿಷಯವನ್ನು ಪೋಲೀಸರು ಬಹಿರಂಗ ಪಡಿಸಿದರು..
ಪ್ರಕರಣವನ್ನು ಭೇದಿಸಿದ ಸೈಬರ್ ಪೋಲೀಸರು
ಭಾರತದಲ್ಲಿ ಇದರ ಮೂಲಬೇರನ್ನು ಹುಡುಕಲು ಸಾಧ್ಯವಾಗದಿದ್ದರೂ...ದೆಹಲಿಯ ಸಾಮಾನ್ಯ ಓಣಿಯೊಂದರ ಹರಕಲು ಗುಡಿಸಲಿನಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದ ..ಮೆಸೇಂಜರಿನಲ್ಲಿ ಬಂದು ಉಪಟಳ ಕೊಡುತ್ತಿದ್ದ ವ್ಯಕ್ತಿಗೆ ಬಲೆಬೀಸುವಲ್ಲಿ ಯಶಸ್ವಿಯಾದರು...
ಯಶಾ ಹಾಗೂ ರಾಧಾಳ ಮುಖದಲ್ಲಿ ಗೆಲುವಿನ ನಗೆ ಹೊರಹೊಮ್ಮಿತು. .ಅವರೀಗ ಇತರ ಹೆಣ್ಣುಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದಾರೆ..ಪೋಲೀಸರಿಂದ "ಹೆಣ್ಣು ಮಕ್ಕಳೇ ಹುಷಾರು.."ಎಂಬ ಕಾರ್ಯಕ್ರಮವನ್ನು ವಿವಿಧೆಡೆ ಆಯೋಜಿಸಿದಾಗ ರಾಧಾಳನ್ನು ಆಹ್ವಾನಿಸುತ್ತಿದ್ದಾರೆ . ರಾಧಾ ತನ್ನ ಮಗಳು ಅನುಭವಿಸಿದ ಕಿರುಕುಳ,ತನಗಾದ ಮಾನಸಿಕ ಹಿಂಸೆಯನ್ನು ಸಾರ್ವಜನಿಕರಿಗೆ ತಿಳಿಸಿ.. ಇಂತಹ ಮೋಸದ ಬಲೆಯೊಳಗೆ ಹೆಣ್ಣುಮಕ್ಕಳು ಸಿಲುಕದಂತೆ ಸಾರ್ವಜನಿಕ ಜಾಗೃತಿಯಲ್ಲಿ ತೊಡಗಿದ್ದಾರೆ.
🙏
✍️... ಅನಿತಾ ಜಿ.ಕೆ.ಭಟ್.
27-09-2019.
ಸಲ್ಲಿಕೆ :- ಪ್ರತಿಲಿಪಿ ಕನ್ನಡದ ಸೆಪ್ಟೆಂಬರ್
2019 ರ ವೈಜ್ಞಾನಿಕ ಕಥಾ ಸ್ಪರ್ಧೆಗೆ ಸಲ್ಲಿಸಿರುವ ಕಥೆ.
💐💐💐💐
ವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ"ಓದುಗರು ಮೆಚ್ಚಿದ ಕೃತಿ"ಗಳಲ್ಲಿ ಸ್ಥಾನ ಪಡೆದ ಕಥೆ.
💐💐