Tuesday, 8 September 2020

ನನಗೆ ನನ್ನಮ್ಮನೇ ಮಾದರಿ

 


ನನಗೆ ನನ್ನಮ್ಮನೇ ಮಾದರಿ

"ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು...
ಓಹೋ...ಓಹೋ...."

ಕಂದ ಖುಷಿ ಖುಷಿಯಾಗಿ ತಾಯಿಗೆ ಹಾಡುವ ಗೀತೆ ..ಕೇಳಿದ ಪ್ರತಿಯೊಬ್ಬರಿಗೂ ಮಾತೆಯ ಮಡಿಲ ವಾತ್ಸಲ್ಯವನ್ನು ನೆನಪಿಸುವ ಗೀತೆ.ಅಮ್ಮ ಅಂದರೆ ಅದಮ್ಯ ಚೇತನ,ಸಂತಸ,ಮಮತೆ, ವಾತ್ಸಲ್ಯ,ಕಾಳಜಿಯಿಂದ ನೋಡಿಕೊಳ್ಳುವ ಜೀವ,ತಾನು ನೊಂದರೂ ತೋರಗೊಡದೆ ಮಕ್ಕಳಿಗೆ ಪ್ರೀತಿಯ ತುತ್ತನೀವ ಜೀವ..
ಆದಿಗುರು ಶಂಕರಾಚಾರ್ಯರು ತಮ್ಮ ಸ್ತೋತ್ರದಲ್ಲಿ "ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ"ಎಂದು ಹೇಳಿದ್ದಾರೆ..ಕೆಟ್ಟ ಮಕ್ಕಳಾದರೂ ಇರಬಹುದು ಕೆಟ್ಟ ತಾಯಿ ಇರಲಾರಳು.ಹೌದು ..ತಾಯಿಯೆಂಬ ದೈವ ಕನಸು ಮನಸಿನಲ್ಲೂ ಮಕ್ಕಳ ಕ್ಷೇಮ,ಏಳಿಗೆಯನ್ನೇ ಬಯಸುವುದು..ಜಗತ್ತಿನಲ್ಲಿ ಯಾರೇ ಪ್ರೀತಿಸದಿದ್ದರೂ ತಾಯಿ ಪ್ರೀತಿ ಮಾತ್ರ ಅಜರಾಮರ...

    ಅಮ್ಮಾ.....ಅನ್ನುವ ಉಚ್ಛಾರಣೆಯೇ ಎಷ್ಟು ವಿಚಿತ್ರ ಅಲ್ವಾ... ಹೆಚ್ಚಿನೆಲ್ಲಾ ಪದಗಳು ಗಂಟಲಿನಿಂದ ಆರಂಭವಾದರೆ ಅಮ್ಮಾ...ಎಂಬುದು ನಾಭಿಯಿಂದಲೇ ಹೊರಡುವ ಸ್ವರ... ಹೌದು ಏಕೆಂದರೆ ನಾಭಿಯಲ್ಲೇ ಕಂದನಿಗೆ ತುತ್ತುಕೊಟ್ಟವಳು ಆಕೆ.ಆಕೆಯನ್ನು ಕರೆದರೆ ಆ ನಾಭಿಯೇ ಸ್ವರೋತ್ಪತ್ತಿ ಮಾಡುತ್ತದೆ..
"ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು" ಎಂಬ ಸಾಲುಗಳಂತೆ ಪ್ರತಿಯೊಬ್ಬರೂ ಜೀವನದ ಮೊದಲ ಪಾಠಗಳನ್ನು ಅಭ್ಯಾಸಗಳನ್ನು ಕಲಿತುಕೊಳ್ಳುವುದು ತಾಯಿಯಿಂದಲೇ.. ತಾಯಿಯ ಶಿಸ್ತು,ಬದ್ಧತೆ,ಸೌಜನ್ಯ,ಸಂಸ್ಕಾರಗಳು ಮಕ್ಕಳಲ್ಲಿ ಎದ್ದುಕಾಣುತ್ತವೆ..

        ನನ್ನ ತಾಯಿಯ ಸಹನೆ, ಧೈರ್ಯ, ಪ್ರೀತಿ, ನೋವನ್ನೂ ಲೆಕ್ಕಿಸದೆ ತನ್ನ ಕರ್ತವ್ಯವನ್ನು ಪಾಲಿಸುವ ಗುಣ,ಮಿಕ್ಕಿದ್ದೆಲ್ಲವೂ ಆ ದೇವನ ಲೀಲೆ  ಆಟ ಎಂಬ ಗುಣಗಳು ಇಂದಿಗೂ ನಾನು ಇಷ್ಟಪಡುವ ಆದರ್ಶವಾಗಿ ಸ್ವೀಕರಿಸುವ ಗುಣಗಳು..ಅವು ರಕ್ತಗತವಾಗಿಯೇ ನನ್ನಲ್ಲೂ ಬಂದಿದೆಯೆಂದರೂ ಅಚ್ಚರಿಯಲ್ಲ.. ಕ್ರೋಧ ಎನ್ನುವ ಪದವೇ ಅವರ ನಿಘಂಟಿನಲ್ಲಿ ಇಲ್ಲವೇನೋ ಎಂಬಂತೆ ಸೌಮ್ಯ ಸ್ವಭಾವದ ತಾಯಿ..ಅದುವೇ ಸಂತಸದ ಬಾಳುವೆಗೆ ಬುನಾದಿಯಾಗಿದೆ.. ಇಂದು ನನ್ನಲ್ಲೂ ಅದೇ ಕಾಣಿಸುತ್ತಿದೆ..ಏಕೆಂದರೆ ಅದು ಅವರು ಹಾಕಿಕೊಟ್ಟ ಸಂಸ್ಕಾರದ ಅಡಿಗಲ್ಲು..

        ನಮ್ಮ   ತಾಯಿ ಅತಿಥಿಗಳನ್ನು ಸತ್ಕರಿಸುವ ಗೌರವಿಸುವ ಗುಣವನ್ನು ಎಲ್ಲರೂ ಕೊಂಡಾಡುತ್ತಾರೆ..ಅವರ ಪ್ರೀತಿ ವಾತ್ಸಲ್ಯವನ್ನು ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ.ನನ್ನಲ್ಲೂ ಅದೇ ಪಡಿಯಚ್ಚಿನಂತೆ ಬಂದಿದೆ.. ನಾನು ಮದುವೆಯಾಗಿ ಬಂದ ಮನೆಗೆ ಹತ್ತಿರದ ನೆಂಟರು ಕೂಡ ಬರುವುದು ಅಪರೂಪವಾಗಿತ್ತು.. ಆದರೆ ಈಗ ನಾನು ಕಾಲಿಟ್ಟಮೇಲೆ ಬಂಧುಬಳಗ ಮತ್ತೆ ಒಟ್ಟುಸೇರುತ್ತಿದ್ದಾರೆ.. ಪ್ರೀತಿ ವಿಶ್ವಾಸದಿಂದ ಆದರಿಸುತ್ತೇವೆ.ಇದನ್ನು ನನ್ನತ್ತೆಯ ಬಾಯಿಯಿಂದಲೇ  ನಾನು ಕೇಳಿದಾಗ ನನಗಾದ ಖುಷಿ ಅಷ್ಟಿಷ್ಟಲ್ಲ.. ಅದೆಲ್ಲವೂ ನನ್ನ ಮಾತೆಯಿಂದ ಬಳುವಳಿಯಾಗಿ ಬಂದ ಸಂಸ್ಕಾರಗಳು..

       ದುಡ್ಡು ಕೂಡಿಸಿಟ್ಟದ್ದು ಖರ್ಚು ಮಾಡಿ ಮುಗಿಯಬಹುದು.ಅಥವಾ ಕಳ್ಳಕಾಕರ ಭಯವಿರಬಹುದು.ಆದರೆ ತಾಯಿ ಕಲಿಸಿದ ಉತ್ತಮ ಗುಣಗಳು , ಸದ್ವಿಚಾರ,ಸತ್ಸಂಸ್ಕಾರಗಳು ಬಳಸಿದಷ್ಟು ಬೆಳೆಯುತ್ತವೆ. ನಮ್ಮ ಮುಂದಿನ ಪೀಳಿಗೆಗೆ ಆದರ್ಶವಾಗುತ್ತದೆ ಮತ್ತು ಬಂಧುಬಾಂಧವರ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸಲು ಸಹಕಾರಿಯಾಗುತ್ತದೆ..
ಯಾರೇ ಆಗಲಿ ಅವರ ದುಃಖವನ್ನು ತೋಡಿಕೊಂಡರೂ ಅವರಿಗೊಂದು ಸಾಂತ್ವನ ಹೇಳಲು ಅಮ್ಮ ಮರೆಯುತ್ತಿರಲಿಲ್ಲ.ಯಾರೆಷ್ಟೇ ನೋಯಿಸಿದರೂ ,ಆಳವಾಗಿ ಮನಸ್ಸಿಗೆ ಗಾಯವಾದರೂ ಅದಕ್ಕೆ ಕಾರಣರಾದವರನ್ನು ಕ್ಷಮಿಸಿ ಅದನ್ನು ಮರೆತು ಬಿಡುವುದು ಇನ್ನೊಂದು ಉತ್ತಮ ಗುಣ. ಈ ಗುಣದಿಂದಲೇ... ಹಿಂದೆ ಎಷ್ಟು ಕಷ್ಟಪಟ್ಟರೂ ಇಂದು ಮಕ್ಕಳೆಲ್ಲರೂ ಚಂದದ ಬದುಕನ್ನು ಕಟ್ಟಿಕೊಂಡಾಗ ತಾನೂ ತುಂಬುಸಂತಸವನ್ನು ಅನುಭವಿಸುತ್ತಾರೆ.. ಗಂಡಹೆಂಡತಿ ಮಕ್ಕಳು ಎಂಬ ಪುಟ್ಟ ಸಂಸಾರವಿದ್ದರೂ ವೈಮನಸ್ಸು ತಾಂಡವವಾಡುವ ಪ್ರತಿಯೊಂದು ಕುಟುಂಬವೂ ನೋಡಿ ಅನುಸರಿಸಬೇಕಾದ ಗುಣವಿದು..

       ಇಂದೂ ಕೂಡ ಮಕ್ಕಳಿಗೆ ಕಷ್ಟವಿದೆ ಎಂದು ಅರಿತರೆ ಸಾಕು ಉಪಕಾರಕ್ಕಾಗಿ ಓಡಿಬರುವ ಸಹೃದಯಿ.ಸೊಸೆಯನ್ನೂ ಮಗಳಂತೆ ಕಂಡು ಅತ್ತೆಸೊಸೆಯೆಂದರೆ ಅಮ್ಮಮಗಳಂತೆ ಎಂದು ಪರಸ್ಪರ ಅರ್ಥಮಾಡಿಕೊಂಡು ಬದುಕುತ್ತಿರುವ ಸ್ಫೂರ್ತಿಯ ಚಿಲುಮೆ..ಮನೆಯು ಚೆನ್ನಾಗಿ ಮುನ್ನಡೆಯಬೇಕಾದರೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಸಾಲದು.. ಪ್ರೀತಿಸುವ ಹೃದಯವೂ , ತಪ್ಪನ್ನು ಎತ್ತಿತೋರಿಸಿ ತಿದ್ದಿತೀಡುವ ಮಾತೃವಾತ್ಸಲ್ಯವೂ,ಎಂತಹ ಕಷ್ಟದಲ್ಲೂ ಎದೆಗುಂದದೆ ಮುನ್ನಡೆವ ಸಮರ್ಥ ಗೃಹಿಣಿಯೂ, ಸದಾ ನಗುನಗುತ್ತಾ ಮನೆಯನ್ನು ಬೆಳಗುವಂತಹ ಸುಮಂಗಲಿಯೂ ಸದ್ಗೃಹಿಣಿಯೂ ಇರಬೇಕು..ಅಂತಹ ಎಲ್ಲ ಸದ್ಗುಣಗಳ ಖನಿ ನಮ್ಮಮ್ಮ ಸರಸ್ವತಿ...ಅಂತಹ ಅಮ್ಮನ ಮಡಿಲಲ್ಲಿ ಜನುಮ ಪಡೆದ ನಾವು ಭಾಗ್ಯವಂತರು..
ವಿಶ್ವ ತಾಯಂದಿರ ದಿನದಂದು ನಾನು ನನ್ನಮ್ಮನಿಗೋಸ್ಕರ ಬರೆದ ಕವನ ಹೀಗಿದೆ ನೋಡಿ...
# ಅಮ್ಮನೆಂದರೆ ದೇವರು

ಅಮ್ಮನೆಂದರೆ ಅಕ್ಕರೆ ನೆನಪುಗಳೇ ಸಕ್ಕರೆ
ನೋವ ನುಂಗಿ  ಅಮ್ಮ ನಗುತಿರೆ
ಅರಿಯದ ಕಂದ ಬೊಚ್ಚುಬಾಯ್ದೆರೆ
ಹಿಗ್ಗಿನಲಿ ತೋರುವಳು ನಗೆಮೋರೆ...||

ನಡೆವ ದಾರಿಯ ಕಲ್ಲುಮುಳ್ಳ ಸರಿಸಿ
ತಪ್ಪಿದ ದಾರಿಗೆ ಗುರಿ ತೋರಿಸಿ
ತಿದ್ದಿ ತೀಡುವ ತಾಯೆನ್ನ ಮೊದಲ ಗುರು
ಮಾತಾಡಿಲ್ಲ ಎಂದೂ ಅವಳಿಗೆದುರು...||

ತೊದಲು ನುಡಿಗಳಿಗೆ ರೂಪ ನೀಡಿ
ಅಡೆತಡೆಗಳಿಗೆ ಸೆಡ್ಡು ಹೊಡೆದು
ಸಾಕಿಸಲಹಿರುವ ಪ್ರೇಮಮಯಿ
ಕೋಪಹಠಗಳ ಸಹಿಸಿದ ತಾಯಿ...||

ನನ್ನ ತುಂಟಾಟಗಳಿಗೆ ಲೆಕ್ಕವಿಟ್ಟಿಲ್ಲ
ಅದನೆಲ್ಲ ಮಾಡಿಹಳು ಸಾಧನೆಯ ಮೆಟ್ಟಿಲು
ಕಷ್ಟದಲಿ ಮೊದಲು ನೆನಪಾಗುವ ದೇವತೆ
ಇಷ್ಟದಲಿ ಸಂಸ್ಕಾರ ಕಲಿಸಿಹಳು ಮಾತೆ...||

ಚಿಂತೆನೋವುಗಳ ಒಳಗೆಳೆದು ನುಂಗಿ
ಹೊರಗೆ ತೊಟ್ಟಿಹಳು ಸಂತಸದ ಅಂಗಿ
ವಿಜಯವನೆ ಬಯಸುವಳು ನನ್ನ ಗಂಗಿ
ಅಪಜಯದಿ ಧೈರ್ಯ ತುಂಬುವ ಭಂಗಿ...||

ವೃದ್ಧಾಪ್ಯದಲಿ ಮಾತೆಯ ಸೇವೆಯಲ್ಲಿ
ತೊಡಗಿರುವ ಮಕ್ಕಳೇ ಧನ್ಯರಿಲ್ಲಿ
ನೆರಳಾಗಿ ನಡೆವಳು ಕುಡಿಗಳ ಆಸರೆಯಲ್ಲಿ
ಬಾಳ ಸಿಹಿಕಹಿಯಲಿ ಸವಿಯುಂಡು,
ಬೆಂದು ಬಳಲಿ...||

ಮಾತೆಯ ಮರೆತು ಬಿಡದಿರಿ ಯೌವ್ವನದ ಹುರುಪಿನಲ್ಲಿ...
ಮತ್ತೆ ಬಳಲುವಿರಿ ಹೆತ್ತೊಡಲ ಬೇಗೆಯ ಶಾಪದಲ್ಲಿ...ತಾಯಂದಿರ ಗೌರವಿಸೋಣ
ತಾಯಂದಿರಿಗೆ ಸವಿಯನುಣಿಸೋಣ||

ಇದು ಅನುದಿನದ ಅಭಿಯಾನ
ಆರೈಕೆ ಕಾಳಜಿಯಿರಲಿ ದಿನದಿನ...

✍️... ಅನಿತಾ ಜಿ.ಕೆ.ಭಟ್.

      ಇದನ್ನು ಓದಿದ ನನ್ನಮ್ಮ ಬಹಳ ಹೆಮ್ಮೆಪಟ್ಟಕೊಂಡರು.ಮಕ್ಕಳಾದ ನಾವು ನಮ್ಮ ಬರಹಗಳಿಂದ,ನಡೆನುಡಿಗಳಿಂದ ಹೆತ್ತಬ್ಬೆಯ ವದನದಲ್ಲೊಂದು ಸಂತೃಪ್ತ ಮಂದಹಾಸವನ್ನು ಮೂಡಿಸಲು ಸಾಧ್ಯವಾದರೆ ಅದಕ್ಕಿಂತ ಸಂತಸ ಬೇರೆಯಿಲ್ಲ..ಬಾಳಹಾದಿಯಲ್ಲಿ ನಡೆದು ದಣಿದ ಹಿರಿಜೀವಕ್ಕೆ ಅಮ್ಮಾ ಹೇಗಿದ್ದೀಯಾ...ಕೆಲ್ಸ ನಾನ್ಮಾಡ್ತೀನಿ..ನೀನು ಸ್ವಲ್ಪ ವಿಶ್ರಾಂತಿ ಪಡೆದುಕೋ...ಆರೋಗ್ಯ ಕೈಕೊಟ್ಟಾಗ ಔಷಧಿ ಕೊಟ್ಟು ಆರೈಕೆ ಮಾಡಿದರೆ ಹಣೆಯಲ್ಲಿ ಬೆವರು ಮೂಡಿಸುತ್ತಿರುವ ಮಾತೆಯ ಜೀವವೂ ಧನ್ಯತೆಯನ್ನು ಅನುಭವಿಸುತ್ತದೆ.ಹೆತ್ತಮಡಿಲಿಗೆ ಹಿರಿಯ ಜೀವಕೆ ವೃದ್ಧಾಪ್ಯದಲಿ ನಾವೇ ತಾಯಾಗಿ ಮಡಿಲಿನಲ್ಲಿ ಬೆಚ್ಚನೆಯ ಆಶ್ರಯ ನೀಡಬೇಕು..ಅದುವೇ ನಮ್ಮ ಭಾರತದ ಸಂಸ್ಕೃತಿ..

✍️... ಅನಿತಾ ಜಿ.ಕೆ.ಭಟ್.
08-09-2020.


1 comment: