Monday, 14 September 2020

ಕಮಲದ ಕೆರೆ...#ಕವನ


 ಕಮಲದ ಕೆರೆ

ನಮ್ಮೂರ ಕೆರೆಯಲ್ಲಿ|ಮುಂಜಾನೆ ಹೊತ್ತಿನಲಿ||

ಹೂವರಳಿಸಿ ನಕ್ಕೋಳು|
ನೀನು ತಾನೇ||ಕಮಲಾ...!!ನೀನೇ ತಾನೇ ||1||

ತಿಳಿನೀರ ಪ್ರಶಾಂತ ಪರಿಸರ
ಹಸಿರೆಲೆಗಳು ನಯನಮನೋಹರ ||
ಮಾಡಬೇಕಿಲ್ಲೆನಗೆ ವಾಯುವಿಹಾರ
ಕೈಬೀಸಿ ಕರೆಯುತಿದೆ ಪದ್ಮಸಂಸಾರ||2||

ಗುಲಾಬಿ ಬಣ್ಣದ ಸರೋಜ ಹೂವೇ
ದುಂಬಿಯ ಬಳಗವ ನೀ ಕರೆವೆ||
ಪಾಚಿಯ ಪದರವ ಸೃಷ್ಟಿಸುವೆ
ಆಮ್ಲಜನಕ ಪ್ರಮಾಣ ಹೆಚ್ಚಿಸುವೆ
ಕಂಡ ಬಂಡೆಯು ಮೂಕವಿಸ್ಮಿತವೇ !! ||3||

ಕನ್ನಡಿ ಏತಕೆ ಪಂಕಜ ನಿನಗೆ??
ಜಲವೇ ದರ್ಪಣ ಹಿಡಿದಿದೆ ನಿನಗೆ||
ತಾವರೆ ಅಂದಕೆ ಮನಸೋತು
ನೇಸರತೇಜವು ಸ್ಪರ್ಶಿಸಿತು
ಜಲವದು ಚಿತ್ರವ ಚಿತ್ರಿಸಿತು||4||

ಕೆಸರಲಿ ಅರಳುವ ಹೂವೇ..
ದೇವಗೆ ನೀ ಬಲುಪ್ರಿಯವೇ||
ಕಮಲದೆಲೆಯೇ..ನೀರನಂಟಿಸಿಕೊಳದೇ
ಹನಿನೀರ ಮುತ್ತಾಗಿಸಿ ನಗುವೇ..
ಬೇಕೆನಗೀಗ ನಿನ್ನಂಥ ಬಾಳುವೆ ||5||

     

 ✍️ಅನಿತಾ ಜಿ.ಕೆ.ಭಟ್.

14-09-2020.

No comments:

Post a Comment