Saturday, 12 September 2020

ಎರಡನೇ ಬಾರಿ ಅಮ್ಮನಾದಾಗ/second pregnancy

 



ಎರಡನೇ ಬಾರಿ ಅಮ್ಮನಾದಾಗ.

      ಅದೊಂದು ದಿನ ಬೆಳಗ್ಗೆ ಎದ್ದೇಳುತ್ತಿದ್ದಂತೆಯೇ ಅವಳಿಗೆ ದೇಹದಲ್ಲೆಲ್ಲ ಏನೋ ಬದಲಾವಣೆ ಆದ ಅರಿವು. ಏನೋ ಉದರದಲ್ಲಿ ಭಾರವಾದಂತೆ ಆಗುತ್ತಿದೆಯಲ್ಲ, ದಪ್ಪವಾದಂತೆ ಅನುಭವವಾಗುತ್ತಿದೆ ಎಂದು ಯೋಚಿಸುತ್ತಿದ್ದಾಗ ಕ್ಯಾಲೆಂಡರ್ ನೋಡಿದ ಅವಳಿಗೆ ಹೊಳೆದದ್ದು ಈ ತಿಂಗಳು ಮುಟ್ಟಾಗಲಿಲ್ಲ ಒಂದು ವಾರ ಮುಂದೆ ಹೋಯಿತು ಎಂಬ ವಿಚಾರ. ತಕ್ಷಣ ಮೆಲ್ಲನೆ ತನ್ನ ಕೈಗಳಿಂದ ಮೆದುವಾಗಿ ಉದರವನ್ನು ಸವರುತ್ತಾಳೆ. ಅವಳ ಮನಸ್ಸಿಗೆ ಎಲ್ಲವೂ ತನ್ನಿಂತಾನೇ ವಿಷದವಾಗುತ್ತಿದೆ. ಮೊದಲ ಸಲದಂತೆ ಆಕೆಗೆ ಟೆಸ್ಟಿಂಗ್ ಕಿಟ್'ಗಳ ಅನಿವಾರ್ಯತೆ ಇಲ್ಲ.ಅವಳ ಮನಸ್ಸೇ ಈಗ ಸಣ್ಣದೊಂದು ಪರೀಕ್ಷಾ ಚಟುವಟಿಕೆಯನ್ನು ನಡೆಸುತ್ತಿದೆ.

        ಹೌದು. ಆಕೆ ಈಗ ಅನುಭವಸ್ಥೆ. ಎಲ್ಲವನ್ನು ಇನ್ನೊಬ್ಬರಲ್ಲಿ ಕೇಳಿ ತಿಳಿಯಬೇಕಾಗಿಲ್ಲ. ತಾಯ್ತನದ ಪ್ರತಿಯೊಂದು ಕ್ಷಣವನ್ನು ಮೊದಲ ಬಾರಿ ಅನುಭವಿಸಿದ್ದ ಆಕೆಗೆ ಈಗ ಒಂದು ಕಡೆ ಖುಷಿ ಇನ್ನೊಂದು ಕಡೆ  ತಲ್ಲಣ. ಮೊದಲ ಬಾರಿಯಂತೆ ಈಗಲೂ ಸವಾಲುಗಳನ್ನು ಎದುರಿಸಬೇಕು ..ಅಬ್ಬಾ..!! ಎಂದು ಯೋಚಿಸುತ್ತಾ ಒಮ್ಮೆ ಸುಸ್ತಾಗುತ್ತಾಳೆ.ಮತ್ತೆ ಮರುಕ್ಷಣ ತಾನು ತನ್ನ ಒಡಹುಟ್ಟಿದವರೊಂದಿಗೆ ಆಡಿ ನಲಿದ ಮಧುರವಾದ ಕ್ಷಣಗಳನ್ನು ಮೆಲುಕು ಹಾಕಿ ,ತನ್ನ ಮೊದಲ ಮಗುವಿಗೂ ಇಂತಹ ಸುಂದರ ಬಾಂಧವ್ಯವನ್ನು ಪರಿಚಯಿಸುವ ಜವಾಬ್ದಾರಿಯನ್ನು ಹೊರುತ್ತಾಳೆ.

       ಅವಳಿಗೀಗ ತನ್ನ ಆರೋಗ್ಯ ನೋಡಿಕೊಳ್ಳುವುದರ ಜೊತೆಗೆ ಮೊದಲ ಮಗುವಿನ ಆರೈಕೆಯೂ ಒಂದು ದೊಡ್ಡ ಸವಾಲು.ಆಹಾರ-ವಿಹಾರದಲ್ಲಿ ಮೊದಲಿನಷ್ಟು ಪೌಷ್ಟಿಕಾಂಶಗಳನ್ನು ತೆಗೆದುಕೊಳ್ಳಲು ಸಮಯವಿಲ್ಲ,ವ್ಯವಧಾನವೂ ಇಲ್ಲ.ದಣಿದಾಗ ವಿಶ್ರಾಂತಿ ಪಡೆಯಲು ಮೊದಲ ಮಗು ಬಿಡುತ್ತಿಲ್ಲ.ಹೀಗಿರುವ ತುಂಟ ,ಹಠಮಾರಿ ಮಗು ಇನ್ನೊಂದು ಮಗುವಿಗೆ ಹೇಗೆ ಹೊಂದಿಕೊಂಡೀತು ಎಂದು ಒಂದು ಸಣ್ಣ ಆತಂಕ ಅವಳ ಮನದಲ್ಲಿ. ಮೊದಲ ಬಾರಿಯಂತೆ ವಿಪರೀತ ವಾಕರಿಕೆ, ಆಹಾರ ರುಚಿಸದಿರುವುದು ಈ ಬಾರಿ ಅವಳು ಎದುರಿಸಲಿಲ್ಲ. ಮಗುವಿನ ಚಲನವಲನ ಬಹುಬೇಗನೆ ಅವಳಿಗೂ ಅರಿವಿಗೆ ಬರುತ್ತಿತ್ತು.ಅವಳ ಶರೀರ ಒಂದು ಮಗುವನ್ನು ಹೊತ್ತು ಹೆತ್ತಿರುವುದರಿಂದ ಎರಡನೇ ಬಾರಿ ಬಹಳ ಬೇಗ ತಾಯ್ತನಕ್ಕೆ ಒಗ್ಗಿಕೊಂಡಿತ್ತು. ದಿನೇದಿನೇ ಮುಂದೆ ಬರುತ್ತಿದ್ದ ಅಮ್ಮನ ಉದರವನ್ನು ಕಂಡ ತುಂಟನಿಗೆ ಏನೋ ಕುತೂಹಲ. ಅಮ್ಮನ ಉದರದಲ್ಲಿ ಏನಿದೆ..?? ಎಂಬ ಪ್ರಶ್ನೆ ಆಗಾಗ.ತುಂಟನನ್ನು ಇನ್ನೊಂದು ಪುಟಾಣಿ ಪಾಪುವನ್ನು ಎದುರುಗೊಳ್ಳಲು ಸಿದ್ಧಗೊಳಿಸುವ ಸಲುವಾಗಿ ಅಮ್ಮ ಸಣ್ಣದೊಂದು ಕಥೆಯನ್ನು  ಹೆಣೆದು ಎರಡನೇ ಮಗುವಿನ ಆಗಮನದ ಮುನ್ಸೂಚನೆಯನ್ನು ನೀಡುತ್ತಾಳೆ.ಏನು ಅರಿಯದ ಮಗು ಮುಗ್ಧವಾಗಿ ತನ್ನದೇ ಆದ ಕಲ್ಪನೆಯಲ್ಲಿ ವಿಹರಿಸುತ್ತಾ.. ತನಗೆ ಆಟಕ್ಕೆ ಇನ್ನೊಂದು ಜೊತೆ ಬರುತ್ತಿದೆ ಎಂಬ ಭಾವನೆಯನ್ನು ಭದ್ರಪಡಿಸುತ್ತಿದೆ.

     ಸದಾ ತುಂಟಾಟ ಹಠಮಾರಿತನ ತೋರುತ್ತಿರುವ ಮೊದಲ ಮಗು.. ತನ್ನ ಯಾವುದೇ ವಸ್ತುಗಳನ್ನು ,ಆಟಿಕೆಗಳನ್ನು ಯಾರ ಜೊತೆಯೂ ಹಂಚಿಕೊಳ್ಳಲು ಬಯಸದ ಮಗು.. ಮುಂದೆ ಇನ್ನೊಂದು ಮಗು ಬಂದಾಗ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ..?? ಸದಾ ಜಗಳಾಡಿದರೆ..? ಇಬ್ಬರ ಕಿತ್ತಾಟ ಬಿಡಿಸುವುದೇ  ನನಗೆ ದೊಡ್ಡ ಕೆಲಸವಾಗಿಬಿಟ್ಟರೆ..? ಎಂಬ ಆತಂಕ ತಾಯಿಯ ಮನದಲ್ಲಿ.ಅದರ ಜೊತೆಗೆ ಮೊದಲ ಮಗು ಗಂಡಾದಾಗ ಇನ್ನೊಂದು ಮಗುವನ್ನು ಹೊರುವುದು ಬೇಕಿತ್ತೇ? ಇಂದಿನ ಕಾಲಮಾನದಲ್ಲಿ ಖರ್ಚು ವೆಚ್ಚಗಳು ಕೂಡ ಅಧಿಕ.. ಎಂಬ ಹಗುರ ನುಡಿಗಳು ಅವಳನ್ನು ಇನ್ನಷ್ಟು ಹೈರಾಣಾಗಿಸುತ್ತವೆ. ಏನೇ ಇರಲಿ ಪ್ರಕೃತಿ ನನಗೆ ಕೊಟ್ಟಂತಹ ವರವನ್ನು ಸರಿಯಾಗಿ ನಿಭಾಯಿಸುತ್ತೇನೆ ಎಂಬುದು ಅವಳ ಮನದ ಗಟ್ಟಿತನ.

       ಆಗಾಗ ತಾಯಿಯ ಉದರವನ್ನು ಮುಟ್ಟುತ್ತಿರುವ ಮಗು ಇನ್ನು ಎಷ್ಟು ಸಮಯದಲ್ಲಿ ಇದುಹೊರೆಗೆ ಬರುತ್ತೆ..? ನನ್ನ ಜೊತೆ ಆಟವಾಡುತ್ತಾ..? ನನ್ನ ಜೊತೆ ಉಣ್ಣುತ್ತಾ..? ನನ್ನ ಜೊತೆ ಕಾರು ಬಿಡುತ್ತಾ..? ಇಬ್ಬರೂ ಜೊತೆಯಾಗಿ ಸೈಕಲ್ ಆಡುತ್ತೇವೆ .. ಶಾಲೆಗೆ ಹೋಗುವಾಗ ನಾನೇ ಕರೆದೊಯ್ಯುವುದು.. ಎಂಬೆಲ್ಲಾ ನುಡಿಗಳನ್ನು ಆಡುತ್ತಿದ್ದಂತೆ ಅವಳಿಗೆ ಮನಸ್ಸು ಹಗುರವಾಗುತ್ತದೆ.ಮೊದಲೆಲ್ಲಾ ತಾಯಿಯೇ ಬೇಕು ಎನ್ನುತ್ತಿದ್ದ ಮಗು ಅಮ್ಮನ ಮುಖದ ನೋವನ್ನು ಗಮನಿಸಿ ನನಗೆ ಅಪ್ಪನೂ ಆಗಬಹುದು ಎಂಬ ಹೊಂದಾಣಿಕೆಯನ್ನು ತಾನೆ ಮಾಡಿಕೊಳ್ಳುತ್ತದೆ.

    ಒಂದು ದಿನವೂ ಅಮ್ಮನನ್ನು ಬಿಟ್ಟು ಮಲಗದ ಮಗು ತಾಯಿ ಹೆರಿಗೆ ನೋವಿನಲ್ಲಿ ಆಸ್ಪತ್ರೆ ಸೇರಿದರೆ ಅಪ್ಪನ ಜೊತೆಗೆ ಮಲಗಿ,ಅಪ್ಪನೊಡನೇ ಆಹಾರ ಸೇವಿಸಿ,ಪ್ರತಿಯೊಂದಕ್ಕೂ ಅಪ್ಪನನ್ನೇ ನೆಚ್ಚಿಕೊಳ್ಳುತ್ತದೆ.ಅಮ್ಮನ ಮಡಿಲಲ್ಲಿ ಪುಟಾಣಿ ಮಗು ಮಲಗಿದೆ ಎಂದು ತಿಳಿದಾಗ ತಾನು ಮಗುವನ್ನು ನೋಡಲು ತುದಿಗಾಲಲ್ಲಿ ನಿಂತಿರುತ್ತದೆ. ಏನೇನೋ ಕಲ್ಪನೆಯಲ್ಲಿದ್ದ ಮೊದಲ ಮಗುವಿಗೆ.. ಬಿಳಿ ಬಟ್ಟೆಯಲ್ಲಿ ಸುತ್ತಿ ಕೊಟ್ಟ ಆ ಪುಟಾಣಿ ಮಗುವನ್ನು ನೋಡಿ ಅದರ ಪುಟ್ಟ ಪುಟ್ಟ ಕಣ್ಣುಗಳು, ಕೆಂಪನೆಯ ಪುಟ್ಟ ಕೈಗಳು, ಕೆಲವೇ ಇಂಚುಗಳಷ್ಟಿದ್ದ ಪಾದವನ್ನು ಗಮನಿಸಿ ..ವಾವ್ ..!! ಕ್ಯೂಟ್..!! 😘😘ಎಂದೆಲ್ಲಾ ತನ್ನದೇ ಭಾಷೆಯಲ್ಲಿ ವರ್ಣಿಸುತ್ತದೆ. ಇದನ್ನು ಕಂಡ ಅಮ್ಮ ಎರಡನೇ ತಾಯ್ತನದಿಂದ ಬಸವಳಿದಿದ್ದರೂ ಕೊಂಚ ಸಮಾಧಾನಪಡುತ್ತಾಳೆ.

      ದಿನಗಳೆದಂತೆ ಪುಟಾಣಿ ಮಗುವಿನ ಆರೈಕೆಯಲ್ಲಿ ತಾಯಿ ನಿರತರಾಗಿದ್ದಾಗ ಮೊದಲ ಮಗು ತನ್ನದೇ ಆದ ರೀತಿಯಲ್ಲಿ ಜೊತೆಯಾಗುತ್ತದೆ. ಅಳುತ್ತಿದ್ದರೆ ಆಟಿಕೆಗಳಲ್ಲಿ ಶಬ್ದ ಮಾಡುತ್ತಾ.. ಅದು ಅಳು ಮರೆತು ನಕ್ಕಾಗ ತಾನೇ ಸಂಭ್ರಮಿಸುತ್ತದೆ.. ನಿದ್ದೆ ತೂಗುತ್ತದೆ ಎಂದು ಅಮ್ಮನ ಮಾತು ಕೇಳಿದರೆ ಸಾಕು ಅಮ್ಮ ಹಾಡುತ್ತಿದ್ದ ಲಾಲಿ ಹಾಡುಗಳನ್ನು ತನ್ನದೇ ಆದ ಭಾಷೆಯಲ್ಲಿ ಹಾಡಿ ಮಲಗಿಸುವ ಪರಿಗೆ ಅಮ್ಮನ ಕಣ್ಣು ತೇವವಾಗುತ್ತದೆ.

     ತನಗಿಷ್ಟವಾದದ್ದನ್ನು ತಿಂಡಿಯನ್ನು ಯಾರಿಗೂ ಕೊಡದ ಆತ ಈಗ ಪುಟಾಣಿಗೆ ಆದರೆ ಕೊಡುತ್ತೇನೆ ಎಂದು ಹಂಚಿಕೊಳ್ಳಲು ಆರಂಭಿಸಿದ್ದಾನೆ. ಅಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ ಪುಟಾಣಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತಾನೇ ಹೊರುತ್ತದೆ. ತಾನು ಸೈಕಲ್ನಲ್ಲಿ ಅತ್ತಿಂದಿತ್ತ ಸಾಗುತ್ತಾ ಕೇಕೆ ಹಾಕುವುದು,ಆಟಿಕೆಗಳಲ್ಲಿ ಮಗುವಿಗೆ ಜೊತೆಯಾಗುವುದು,ತಾನು ಕಲಿತ ಹಾಡುಗಳನ್ನು ಹಾಡುವುದು.. ಇತ್ಯಾದಿಗಳಿಂದ ಪುಟಾಣಿ ಮಗುವನ್ನು ಆಡಿಸುತ್ತಾನೆ.ಅಮ್ಮ ಮಗುವಿಗೆ ಉಣಿಸಲು ಹರಸಾಹಸ ಪಡುತ್ತಿದ್ದರೆ ದೊಡ್ಡದಾಗಿ ಬಾಯಿ ತೆರೆದು ನೋಡು ಇಷ್ಟು ದೊಡ್ಡದಿರಬೇಕು ಎನ್ನುತ್ತಾ ಎರಡನೇ ಮಗುವನ್ನು ಉಣ್ಣಲು ಪ್ರೋತ್ಸಾಹಿಸುತ್ತಾನೆ..

     ಶಾಲೆಗೆ ಹೋಗುತ್ತಿರುವ ಮೊದಲ ಮಗುವಿಗೆ ತನ್ನ ಗೆಳೆಯ ಗೆಳತಿಯರಿಗೆ ಪುಟಾಣಿ ಪೋರನನ್ನು ಪರಿಚಯಿಸಬೇಕೆಂಬ ಹಂಬಲ. ಶಾಲೆಯಲ್ಲಿ ಮೀಟಿಂಗ್ ಇದ್ದರೆ ಅಮ್ಮನಿಗೆ ಮೊದಲೇ ಹೇಳಿ ಆಗುತ್ತದೆ "ಮಗುವನ್ನು ಬಿಟ್ಟು ಬರಬೇಡಿ.ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಬನ್ನಿ.. ನಾನು ನನ್ನ ಸಹಪಾಠಿಗಳಿಗೆಲ್ಲ ಹೇಳಿದ್ದೇನೆ..ನನಗೊಬ್ಬ ತುಂಟ ತಮ್ಮನಿದ್ದಾನೆ ಎಂದು"ಎನ್ನುತ್ತಾ ಹೇಳಿದಾಗ ಅಮ್ಮನೂ ತಲೆದೂಗುತ್ತಾಳೆ..ಶಾಲೆಗೆ ಕರೆದೊಯ್ದಾಗ ಎಲ್ಲ ಸಹಪಾಠಿಗಳು ತಮ್ಮನೊಂದಿಗೆ ಆಡುತ್ತಿದ್ದರೆ ,ಆಹಾ..!! ಆಗ ನೋಡಬೇಕು.. ಅಣ್ಣನಾದವನ ಗತ್ತು-ಗೈರತ್ತು ಹೆಮ್ಮೆ..!!!!!! ಆಗ ಈ ತಾಯಿಯ ಮನಸ್ಸು ಸಾರ್ಥಕ ಭಾವದಿಂದ ನಲಿದಾಡುತ್ತದೆ. ತನ್ನ ಮೊದಲ ಮಗುವಿಗೂ ಸಹೋದರ ಬಾಂಧವ್ಯವನ್ನು ಕಟ್ಟಿ ಕೊಟ್ಟಂತಹ ಅಭಿಮಾನ ಅವಳ ಮೊಗದಲ್ಲಿ ನಲಿದಾಡುತ್ತದೆ.

      ಎರಡನೇ ಮಗುವಿಗೆ ಯಾವಾಗ ಶಾಲೆ ಆರಂಭವಾಗುವುದು..? ನಾನೇ ಕೈಯಲ್ಲಿ ಕೈ ಹಿಡಿದು ಕರೆದುಕೊಂಡು ಹೋಗಬೇಕು ಎಂಬ ಆಸೆ ಮೊದಲ ಮಗುವಿನದು. ಅಂತೆ ಆ ದಿನಕ್ಕಾಗಿ ಕಾತರದಿಂದ ಕಾಯ್ದು ಮನೆಯಲ್ಲಿ ಅದೆಷ್ಟು ಬಾರಿ ಅಣಕು ಅಭ್ಯಾಸ ನಡೆಸಿರುತ್ತದೆಯೇನೋ..ತನ್ನ ಹಳೆಯ ಶಾಲೆಯ ಚೀಲವನ್ನು ತಮ್ಮನಿಗೆ ಕೊಟ್ಟು , ತಾನು ತನ್ನ ಬ್ಯಾಗ್ ಹಾಕಿಕೊಂಡು ತಮ್ಮನ ಕೈಹಿಡಿದು ಮನೆಯಿಂದ ಹೊರಟು ಅಂಗಳದ ಸುತ್ತ ಸುತ್ತಿ ಬರುವಾಗ ಅದೇನು ಆನಂದ ಅಣ್ಣನ ಮುಖದಲ್ಲಿ..!!.ಶಾಲೆಗೆ ಹೊರಡುವ ದಿನ ತನ್ನ ಕೈಯಲ್ಲಿ ತಮ್ಮನ ಬೆರಳುಗಳನ್ನು ಹಿಡಿದು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಮಕ್ಕಳಿಬ್ಬರು ನಡೆಯುತ್ತಿದ್ದರೆ ಅಮ್ಮನ ಮನಸ್ಸು ತುಂಬಿ ಬರುತ್ತದೆ..ಯಾವಾಗಲೂ ಸಮಯವೇ ಸಾಕಾಗುತ್ತಿಲ್ಲ ಎಂದು ಪರಿತಪಿಸುತ್ತಿದ್ದ ಅಮ್ಮನ ಮನಸ್ಸು ಭಣಗುಟ್ಟುತ್ತಿದೆ, ಮನೆಯು ಖಾಲಿಯಾದಂತೆ ಅನಿಸುತ್ತಿದೆ.ಯಾವಾಗ  ಮಕ್ಕಳು ಮನೆಗೆ ವಾಪಸಾಗುತ್ತಾರೆ ಎಂದು ಬಿಸಿ ಬಿಸಿ ತಿಂಡಿ ಮಾಡಿಟ್ಟು ಕಾಯುತ್ತಿರುತ್ತಾಳೆ ಅಮ್ಮ..


✍️..ಅನಿತಾ ಜಿ.ಕೆ.ಭಟ್.

11-09-2020.

ಮಾಮ್ಸ್ಪ್ರೆಸೊ ಕನ್ನಡ-ದಿನಕ್ಕೊಂದು ಬ್ಲಾಗ್_ಎರಡನೇ ಬಾರಿ ಅಮ್ಮನಾದಾಗ ಮೊದಲ ಮಗುವಿನ ಬಗ್ಗೆ ಇದ್ದ ಆತಂಕ ಮತ್ತು ಅದನ್ನು ನಿವಾರಿಸಿದ ಬಗೆ-ಆಯ್ಕೆಯಾದ ಬರಹ.

ಮಾಮ್ಸ್ಪ್ರೆಸೊ ಕನ್ನಡದಲ್ಲಿ ಪ್ರಕಟಿತ.

ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ Home ,>  ಸಂಕೇತಗಳನ್ನು ಬಳಸಿಕೊಳ್ಳಬಹುದು.

No comments:

Post a Comment