ಬದಲಾದ ಮನಸು
ಮಗ... "ಈಗೀಗ ಸೊಂಟನೋವು,ಮೈ ಕೈ ನೋವು ಬಹಳ ಕಣೋ... ಕುಂತ್ರೆ ಏಳೋದು ಕಷ್ಟ... ನಿಂತ್ರೆ ಮಂಡಿಯೆಲ್ಲ ನೋವು..ಮಲಗಿದ್ರಂತೂ ಎಲ್ಲ ಸಂಕಟ ಒಟ್ಟಿಗೇ ಬರುತ್ತಪ್ಪಾ...ಮನೆ ಕೆಲ್ಸ ಮಾಡೋದೇ ಕಷ್ಟ ಆಗುತ್ತೆ ಕಣೋ..ಈ ಕಸ ಗುಡ್ಸೋದು ಪಾತ್ರೆ ತೊಳ್ಯೋದು ಯಾರ್ಗೂ ಬೇಡ ಕಣೋ...ಅಬ್ಬಬ್ಬಾ..ಮೊದ್ಲೆಲ್ಲಾ ಬೆಳಗಿನಿಂದ ರಾತ್ರಿಯವರೆಗೆ ದುಡೀತಿದ್ದೆ..ಈಗ
ನಂಗೂ ವಯಸ್ಸಾಯ್ತು ಕಣೋ...ಯಾರಾದ್ರೂ ಕೆಲ್ಸದ ಹೆಂಗ್ಸನ್ನು ಮಾಡು ಮಗಾ..."
ಎಲ್ಲವನ್ನೂ ಕೇಳಿಸಿಕೊಂಡ ಶಿವು ಮಾತ್ರ ಒಂದು ಮಾತೂ ಆಡದೆ ಮುಖ ತಿರುಗಿಸಿ,ತನ್ನ ಮಗನನ್ನು ಕರೆದುಕೊಂಡು ಬೈಕ್ ನಲ್ಲಿ ಕೂರಿಸಿ ವೇಗವಾಗಿ ಬೈಕ್ ಓಡಿಸಿದ.ತಲೆಯಲ್ಲಿ ಯೋಚನೆಗಳು ಅದಕ್ಕಿಂತಲೂ ವೇಗವಾಗಿ ಸಾಗುತ್ತಿದ್ದವು.ಈ ಅಮ್ಮನಿಗೇನು ಗೊತ್ತು ನನ್ನ ಕಷ್ಟ.ಮನೆಕೆಲಸದ ಹೆಂಗಸರು ಸುಮ್ಮನೆ ಬರುತ್ತಾರೆಯೇ..? ಅವರಿಗೆ ದಿನಕ್ಕೆ ಒಂದು ಗಂಟೆ ಕೆಲಸ ಮಾಡಿದರೂ ತಿಂಗಳಿಗೆ ಮೂರು ಸಾವಿರ ರೂಪಾಯಿ ಕೊಡಲೇಬೇಕು.ಸ್ವಲ್ಪ ಹೆಚ್ಚು ಕೆಲಸವಿದ್ದರೆ ಪ್ರತ್ಯೇಕ ವಸೂಲಿ ಮಾಡುತ್ತಾರೆ.ನಾನೇನು ದುಡ್ಡಿನ ಮರ ನೆಟ್ಟಿದ್ದೀನಾ..ಇಂತಹದ್ದಕ್ಕೆಲ್ಲಾ ಖರ್ಚು ಮಾಡೋದಕ್ಕೆ.ಮನೇಲಿ ಇರೋದು ನಾಲ್ಕು ಜನ.ನಾವು ಮೂವರೂ ಹೊರಗೆ ಹೋಗ್ತೀವಿ.ಸಂಜೆ, ರಾತ್ರಿ ಆಗುತ್ತೆ ವಾಪಾಸಾಗುವಾಗ.ನಮ್ಮಿಂದ ಮನೆಯ ನೆಲ ಹೆಚ್ಚೇನೂ ಕೆಸರಾಗಲ್ಲ.ಶೂಸಾಕ್ಸ್ ಹಾಕ್ಕೊಂಡೇ ಮನೆಯಿಂದ ಹೊರಗೆ ಹೋಗೋದು.ಕಾಲಿಗೆಲ್ಲಿ ಕೆಸರಾಗುತ್ತೆ.ಇನ್ನು ಕಸವಂತೂ ಅಲ್ಲಲ್ಲಿ ಬೀಳಲು ಸಾಧ್ಯವೇ ಇಲ್ಲ.ಮಗ ಬೆಳಗ್ಗೆದ್ದು ತಿಂಡಿ, ಸ್ನಾನ ಮುಗಿಸಿಕೊಂಡು ಶಾಲೆಗೆ ಹೊರಡೋದು.ಸಂಜೆ ಬಂದು ತಿಂಡಿ ತಿಂದು ಟ್ಯೂಷನ್ ಕ್ಲಾಸ್ ಗೆ ಹೋಗ್ತಾನೆ.ರಾತ್ರಿ ಚೂರೇ ಚೂರು ಕಾರ್ಟೂನ್ ನೋಡ್ತಾನೆ ಅಷ್ಟೇ.. ನಾನು ಚಿಕ್ಕವನಾಗಿದ್ದಾಗ ಮಾಡುತ್ತಿದ್ದಂತೆ ಕಸದ ರಾಶಿ ಇವನು ಮಾಡಲ್ಲ..ಅವನಮ್ಮನೂ ಅದಕ್ಕೆಲ್ಲ ಬಿಡಲ್ಲ.ಪಾತ್ರೆ ಸ್ವಲ್ಪ ಇರತ್ತೆ.ಮಡದಿಯೂ ಸೇರ್ತಾಳೆ ತೊಳ್ಯೋದಕ್ಕೆ..ಮತ್ತೇನು ಕಷ್ಟ ಕಸ ಗುಡ್ಸೋದು,ಪಾತ್ರೆ ತೊಳ್ಯೋದು,ನೆಲ ಒರ್ಸೋದು..?
ಇಬ್ಬರು ದುಡಿದರೂ ತಿಂಗಳ ಕೊನೆಯಲ್ಲಿ ಬರಿದಾಗುತ್ತಿದೆ ಜೇಬು..ಮನೆ ಲೋನ್,ಮಗನ ಶಾಲೆಯ ಫೀಸು,ಅಪ್ಪ ಮಾಡಿದ ಸಾಲ,ತಂಗಿಯರ ಮದುವೆಯ ಸಂದರ್ಭದಲ್ಲಿ ವರದಕ್ಷಿಣೆಗೆಂದು ಗೆಳೆಯರ ಬಳಿ ಕೈಚಾಚಿದ್ದ ದುಡ್ಡು...ಇದನ್ನೆಲ್ಲ ತೀರಿಸಬೇಡವೇ..?ಇನ್ನೆಲ್ಲಿಂದ ಕೆಲಸದವಳಿಗೆ ಸಂಬಳ ಕೊಡಲಿ..ನಾನೇನೂ ದೊಡ್ಡ ಅಧಿಕಾರಿಯಲ್ಲ.ಅಷ್ಟು ಓದಿಸಲೂ ಅಪ್ಪನಿಗೆ ಸಾಧ್ಯವಾಗಿರಲಿಲ್ಲ.ಸಂಬಳದ ಜೊತೆ ಗಿಂಬಳವಂತೂ ಪಡೆಯುವವನಲ್ಲ.ನನ್ನ ಪರಿಸ್ಥಿತಿಯನ್ನು ಸ್ವಲ್ಪವಾದರೂ ಅರ್ಥಮಾಡಿಕೊಳ್ಳಬೇಡವೇ...
ಯೋಚಿಸುತ್ತಿದ್ದಂತೆಯೇ ಮಗನ ಶಾಲೆಯ ಸಮೀಪದ ಸಿಗ್ನಲ್ ಬಂತು.ವಾಹನಗಳು ಸರತಿಯ ಸಾಲಿನಲ್ಲಿದ್ದವು.ತಾನೂ ಕಾಯಬೇಕಾದಾಗ ಕಣ್ಣು ಪಕ್ಕಕ್ಕೆ ಹೊರಳಿಸಿದ.ವಯಸ್ಸಾದ ಹೆಂಗಸೊಬ್ಬಳು ರಸ್ತೆ ದಾಟಲು ಸಾಧ್ಯವಾಗದೇ ವಾಹನ ದಟ್ಟಣೆಯಲ್ಲಿ ಸಿಲುಕಿದ್ದಳು.ಅದನ್ನು ಕಂಡ ಒಬ್ಬ ಶಾಲಾ ಬಾಲಕ ತನ್ನ ಮಣಭಾರದ ಪುಸ್ತಕದ ಹೊರೆ, ಬುತ್ತಿ ಚೀಲದ ಜೊತೆ ಅಜ್ಜಿಯ ಚೀಲವನ್ನೂ ಹಿಡಿದುಕೊಂಡ.ಅಜ್ಜಿಯ ಕೈ ಹಿಡಿದು ಮೆಲ್ಲನೆ ರಸ್ತೆ ದಾಟಿಸಿದ.ಅಜ್ಜಿಯ ಮೊಗದಲ್ಲಿ ಮಂದಹಾಸ ಅರಳಿತು.ಬಾಲಕನ ತಲೆ ನೇವರಿಸಿ ಟಾ ಟಾ ಹೇಳಿದರು ಅಜ್ಜಿ.ಇದನ್ನು ಗಮನಿಸಿದ ಶಿವುನ ಕಣ್ಣುಗಳು ಮಂಜಾದುವು.ಬಾಲಕನ ನಡತೆ ಅವನ ತಪ್ಪನ್ನು ಎತ್ತಿ ತೋರಿಸಿತು.ಮನಸ್ಸನ್ನು ಬದಲಾಯಿಸಿತು.ಮಗನನ್ನು ಶಾಲೆಗೆ ಬಿಟ್ಟು ತಾನು ಕಛೇರಿಗೆ ಹೋಗದೆ ಸೀದಾ ಬೈಕನ್ನು ಮನೆಯ ಕಡೆಗೆ ತಿರುಗಿಸಿದ.
ಬೈಕಿನ ಶಬ್ದ ಕೇಳಿ ಹೊರಬಂದ ತಾಯಿಗೆ ನಮಿಸಿ ಕ್ಷಮೆ ಕೇಳಿದ.. "ಇನ್ನು ಮುಂದೆ ಮನೆಕೆಲಸಕ್ಕೆ ನಾನೇ ನಿನಗೆ ಸಹಾಯ ಮಾಡುತ್ತೇನೆ.. ನೀನೆಷ್ಟು ಗೋಗರೆದರೂ ಕಿವಿಗೇ ಹಾಕಿಕೊಳ್ಳದ ನನ್ನ ಕ್ಷಮಿಸಿಬಿಡಮ್ಮ .". ಎಂದು ಹೇಳುತ್ತಿದ್ದಂತೆಯೇ ಅಮ್ಮ ಮಗನನ್ನು ತಬ್ಬಿ ಬೆನ್ನು ನೇವರಿಸಿದಳು."ಕ್ಷಮಿಸುವಂತಹ ತಪ್ಪು ನೀನೇನೂ ಮಾಡಿಲ್ಲ ಮಗ..ಕೆಲಸದವಳನ್ನು ನೇಮಿಸುವುದು ಕಷ್ಟವಾಗುತ್ತದೆ ಅಂತ ನನಗೂ ಗೊತ್ತು..ಆದರೂ ಶರೀರ ಸಹಕರಿಸದಿದ್ದಾಗ ಹೇಳಿ ಹೋಗುತ್ತದೆ.ಬಾಯಿಯನ್ನು ತಡೆಯೋಕಾಗಲ್ಲ ..ಮಗ"
"ಇನ್ನು ಮುಂದೆ ಹಾಗಾಗಲ್ಲ.ನಾನೂ ನಿನಗೆ ಮನೆಗೆಲಸದಲ್ಲಿ ಸಹಾಯ ಮಾಡುವೆ.."
ಎಂದಾಗ ತಾಯಿಯ ಕಣ್ಣಿಂದ ಹನಿಗಳು ಪಟಪಟನೆ ಉದುರಿದವು.
ಉದ್ಯೋಗದಲ್ಲಿರುವ ದಂಪತಿಗಳಿಗೆ ಮನೆ ನಿರ್ವಹಣೆಯ ಸೂತ್ರಗಳು:-
1.ಪ್ರತಿಯೊಂದು ಕೆಲಸಕ್ಕೂ ಸಮಯವನ್ನು ನಿಗದಿ ಮಾಡಿಕೊಳ್ಳಿ. ಪ್ರತಿದಿನವೂ ಅದೇ ಸಮಯಕ್ಕೆ ಕೆಲಸವನ್ನು ಮುಗಿಸುತ್ತಿದ್ದರೆ ನಂತರ ವೇಗವಾಗಿ ಪೂರ್ಣಗೊಳಿಸಲು ಅಭ್ಯಾಸವಾಗುತ್ತದೆ.
2.ಕುಟುಂಬದ ಹಿರಿಯ ಸದಸ್ಯರಿಂದ ಯಾವುದೇ ಕೆಲಸದಲ್ಲಿ ತಪ್ಪಾದಾಗ ,ಮಾತುಗಳು ಒರಟು ಅನ್ನಿಸಿದಾಗ ಓವರ್ ರಿಯಾಕ್ಷನ್ ಬೇಡ. ಸಹಜವಾಗಿ ಸ್ವೀಕರಿಸಿ.
3.ಹಿರಿಯರನ್ನು ಇತರರಿಗೆ ಹೋಲಿಸದಿರಿ. ಪ್ರತಿಯೊಬ್ಬರಿಗೂ ಅವರದೇ ಆದ ಇತಿಮಿತಿಗಳು ,ಸ್ವಭಾವಗಳು ಇರುತ್ತವೆ.ಇದರಿಂದ ಮನನೊಂದು ಅವರ ಉತ್ಸಾಹವು ಕುಗ್ಗಬಹುದು.
4.ನಮ್ಮ ಮಕ್ಕಳು ನಮ್ಮನ್ನು ಹೇಗೆ ಗೌರವಿಸಬೇಕು ಅದೇ ರೀತಿ ನಾವು ನಮ್ಮ ತಂದೆ ತಾಯಿ ಜೊತೆ ವರ್ತಿಸಬೇಕು. ಮಕ್ಕಳು ಅನುಸರಿಸುವುದು ನಮ್ಮನ್ನು ನೋಡಿಯೇ ಹೊರತು ನಮ್ಮ ಉಪದೇಶವನ್ನು ಕೇಳಿ ಅಲ್ಲ.
5.ಹಿರಿಯರಿಗೆ ಗೌರವ ಕೊಡಿ. ತಮ್ಮ ಜೀವನಪೂರ್ತಿ ಅವರು ಮಕ್ಕಳ ಸುಖಕ್ಕಾಗಿ ವ್ಯಯಿಸಿದ್ದಾರೆ ಎಂಬುದು ನೆನಪಿನಲ್ಲಿರಲಿ.
6.ಒಳ್ಳೆಯ ಗುಣ ,ಅತ್ಯುತ್ತಮವಾಗಿ ಮೂಡಿ ಬಂದ ಕೆಲಸಗಳಿಗೆ ಪ್ರೋತ್ಸಾಹವಿರಲಿ. ಆಗಾಗ ಅವರ ಸಾಮರ್ಥ್ಯ, ಯುಕ್ತಿಯನ್ನು ಹೊಗಳಿ. ಪ್ರೀತಿಯ ನುಡಿಗಳು,ಹೊಗಳಿಕೆಯ ಮಾತುಗಳು ಅವರಿಗೆ ಶಕ್ತಿಯ ಟಾನಿಕ್.
7.ಎಳೆಯ ಮಕ್ಕಳಿಗೆ ಸಣ್ಣಪುಟ್ಟ ಕೆಲಸಗಳಲ್ಲಿ ಕೈಜೋಡಿಸುವ ಅದನ್ನು ಕಲಿಸಿ. ಆಗ ಮನೆಯಲ್ಲಿರುವ ಹಿರಿಯರಿಗೂ ಅನುಕೂಲ. ಊಟವಾದ ನಂತರ ಬಟ್ಟಲು ತೆಗೆಯುವುದು, ತೊಳೆಯುವುದು,ತನ್ನ ಬಟ್ಟೆಗಳು ಒಣಗಿದಾಗ ಮಡಚುವುದು.. ಇದನ್ನೆಲ್ಲ ಮಾಡಿದರೆ ಮನೆ ನಿರ್ವಹಣೆ ಹಿರಿಯರಿಗೆ ಭಾರವೆನಿಸದು.
8.ಓದಿದ ಪೇಪರನ್ನು ಎಲ್ಲೆಲ್ಲೋ ಎಸೆಯದೆ ಅಚ್ಚುಕಟ್ಟಾಗಿ ಟೀಪಾಯ್ ಮೇಲೆ ಇಟ್ಟು ಹಳೆಯ ಪೇಪರ್'ಗಳನ್ನು ಪ್ರತ್ಯೇಕವಾಗಿ ಇಡಿ. ಮಕ್ಕಳ ಆಟಿಕೆಗಳನ್ನೆಲ್ಲ ಪ್ರತ್ಯೇಕವಾದ ಬಾಕ್ಸಿನಲ್ಲಿ ಹಾಕಿಡಲು ಕಲಿಸಿ.ಕಸವನ್ನು ಕಂಡಾಗ ಕಸದಬುಟ್ಟಿಗೆ ಹಾಕಿ.ಇದರಿಂದ ಮನೆಯೂ ಅಚ್ಚುಕಟ್ಟಾಗಿರುತ್ತದೆ,ಗುಡಿಸಲು ಸುಲಭ.
9.ನಿಮ್ಮಿಂದ, ನಿಮ್ಮ ನುಡಿಗಳಿಂದ ಏನಾದರೂ ತಪ್ಪಾದರೆ ಮುಲಾಜಿಲ್ಲದೆ ಕ್ಷಮೆ ಕೇಳಿ. ಕ್ಷಮೆ ಕೇಳುವುದು ದೊಡ್ಡ ಗುಣ.ಸಣ್ಣ ವಿಷಯವನ್ನೇ ದೊಡ್ಡದು ಮಾಡಿ ರಾದ್ಧಾಂತ ಎಬ್ಬಿಸುವುದು ಉತ್ತಮವಲ್ಲ.
10.ಉದ್ಯೋಗದಲ್ಲಿರುವ ದಂಪತಿಯ ಮಕ್ಕಳ ಜವಾಬ್ದಾರಿ ,ಮನೆಯ ನಿರ್ವಹಣೆ ಎಲ್ಲವೂ ಹಿರಿಯರ ಕರ್ತವ್ಯವಲ್ಲ. ಆದರೂ ಅವರು ಕೈಜೋಡಿಸುವುದು ತಮ್ಮ ಮಕ್ಕಳ ಶ್ರೇಯೋಭಿವೃದ್ಧಿಗಾಗಿ,ಅನುಕೂಲಕ್ಕಾಗಿ ಎಂಬುದು ಮನಸ್ಸಿನಲ್ಲಿರಲಿ.
11.ವಯಸ್ಸಾದಂತೆ ಶಾರೀರಿಕ ದೌರ್ಬಲ್ಯದೊಂದಿಗೆ ಮಾನಸಿಕ ದೌರ್ಬಲ್ಯವೂ ಕಾಡುತ್ತದೆ. ಎಷ್ಟೋ ಮಾತುಗಳು ಅವರ ಹಿಡಿತದಲ್ಲಿರುವುದಿಲ್ಲ. ಆಡಿದ ಮೇಲೆ ಅವರೇ ಕೊರಗುತ್ತಾರೆ.ಆದ್ದರಿಂದ ಎಲ್ಲವನ್ನು ಗಂಭೀರವಾಗಿ ಪರಿಗಣಿಸದೆ,ಎದುರಾಡದೆ ಸುಮ್ಮನೆ ಬಿಟ್ಟುಬಿಡಿ. ಕುಟುಂಬದ ದೃಷ್ಟಿಯಿಂದಲೂ ಕ್ಷೇಮ,ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಹಿತಕರ.
12.ಹಿರಿಯರಿಗೂ ಒಂದೇ ತೆರನಾದ ಬದುಕು ಬೇಸರವಾಗುತ್ತದೆ .ಆಗಾಗ ಏನಾದರೂ ಅವರಿಗೆ ಇಷ್ಟವಾಗುವ ,ಬಹಳ ಸಮಯದಿಂದ ಬಯಸುತ್ತಿದ್ದ ಸರ್ಪ್ರೈಜ್ ಗಿಫ್ಟ್ ಕೊಡಿ.ಗಿಫ್ಟ್ ಸಣ್ಣದೇ ಇರಲಿ ಅಥವಾ ದೊಡ್ಡದೇ ಆಗಿರಲಿ ಅದರಿಂದ ಅವರಿಗಾಗುವ ಖುಷಿ ಮಾತ್ರ ಅವರ್ಣನೀಯ.
13.ಉದ್ಯೋಗದ ಮಿತ್ರರು ಮನೆಗೆ ಆಗಮಿಸಿದಾಗ ಅವರ ಮುಂದೆ ಹಿರಿಯರ ಬಗ್ಗೆ ಗೌರವಯುತವಾಗಿ, ಅಭಿಮಾನಪೂರ್ವಕವಾಗಿ ಕೆಲವು ಮಾತುಗಳನ್ನು ಆಡಿ. ಇದು ಹಿರಿಯರ ಉತ್ಸಾಹವನ್ನು ನೂರ್ಮಡಿಗೊಳಿಸುತ್ತದೆ.
14.ಹಿರಿಯರಿಗೆ ಶನಿವಾರ-ಭಾನುವಾರ ರಿಲ್ಯಾಕ್ಸ್ ಆಗಲು ಅವಕಾಶ ನೀಡಿ. ತಮ್ಮ ಪ್ರೀತಿಪಾತ್ರರೊಂದಿಗೆ ಫೋನ್'ನಲ್ಲಿ ಸಂಭಾಷಣೆ ಮಾಡಲು ಅವರ ಇಷ್ಟದ ಹವ್ಯಾಸಕ್ಕಾಗಿ ಸಮಯ ಕೊಡಿ. ಕೆಲಸಗಳಲ್ಲಿ ಕುಟುಂಬದ ಸದಸ್ಯರೆಲ್ಲರೂ ಕೈಜೋಡಿಸಿ.
15.ಆಗಾಗ ಹಿರಿಯರನ್ನು ಕೂಡ ಪ್ರವಾಸಕ್ಕೆ ,ಸಮಾರಂಭಗಳಿಗೆ ಕರೆದೊಯ್ಯಿರಿ ಅಥವಾ ಆಪ್ತಬಂಧುಗಳೊಡನೆ ತೆರಳಲು ಅವಕಾಶ ಕಲ್ಪಿಸಿ .ಹತ್ತಾರು ಜನರೊಂದಿಗೆ ಬೆರೆತಾಗ,ಹೊಸ ತಾಣಗಳನ್ನು ಸಂದರ್ಶಿಸಿದಾಗ ಅವರ ಮನಸ್ಸು ಉಲ್ಲಾಸಗೊಳ್ಳುತ್ತದೆ.
16.ಅವರ ಪ್ರತಿಯೊಂದು ಖರ್ಚುವೆಚ್ಚಗಳಿಗೂ ನಿಮ್ಮ ಮುಂದೆ ಕೈಯೊಡ್ಡುವಂತೆ ಮಾಡದಿರಿ. ತಿಂಗಳಿಗೆ ಒಂದು ನಿರ್ದಿಷ್ಟ ಮೊತ್ತವನ್ನು ಅವರ ಕೈಗಿಡಿ. ಆಗ ಅವರಿಗೂ ಉಲ್ಲಾಸ ಮೂಡುತ್ತದೆ.
ಉದ್ಯೋಗದಲ್ಲಿರುವ ದಂಪತಿಗೆ ಮನೆ ನಿರ್ವಹಣೆ ಮಾಡಲು ಹಿರಿಯರ ಸಹಕಾರ ಅತ್ಯಗತ್ಯ. ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾದದ್ದು ಕೂಡ ಕಿರಿಯರ ಕರ್ತವ್ಯ.ಕುಟುಂಬದ ಹಿರಿ-ಕಿರಿಯ ಸದಸ್ಯರೆಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಅರ್ಥಮಾಡಿಕೊಂಡು ನಡೆದರೆ ಆ ಕುಟುಂಬವು ಯಶಸ್ವಿಯಾಗುವುದರಲ್ಲಿ ಸಂಶಯವೇ ಇಲ್ಲ.
✍️... ಅನಿತಾ ಜಿ.ಕೆ.ಭಟ್.
20-09-2020.ಚಿತ್ರ:ಹವಿಸವಿಕೃಪೆ.
ಹವಿಸವಿ ವಾರದ ಚಿತ್ರಕಥಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ.
Momspresso Kannada, Pratilipi Kannada ದಲ್ಲಿ ಕಥೆ &ಲೇಖನ ಪ್ರಕಟವಾಗಿದೆ.
ಪ್ರಿಯ ಓದುಗರೇ.. ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ Home,> ಸಂಕೇತಗಳನ್ನು ಬಳಸಿಕೊಳ್ಳಬಹುದು.ಸುಮಾರು 250ಕ್ಕೂ ಮಿಕ್ಕಿ ಬರಹಗಳು ಲಭ್ಯ.
View web version ಗೆ ಹೋಗಿ.ಅಲ್ಲಿ ಫಾಲೋ/follow ಮಾಡಲು ಆಪ್ಷನ್ ಇದೆ.ನನ್ನನ್ನು ಫಾಲೋ ಮಾಡಬಹುದು.
👌👌👌👌
ReplyDeleteಥ್ಯಾಂಕ್ಯೂ 💐🙏
Deleteಥ್ಯಾಂಕ್ಯೂ 💐🙏
Delete