Wednesday, 16 September 2020

ಪೊರಕೆ ಸೇವೆ..#ಹಾಸ್ಯಕಥೆ

 


ಪೊರಕೆ ಸೇವೆ


"ಹಲೋ..ಶಂಕ್ರಣ್ಣಾ...ಹೇಗಿದ್ದೆ?ನಮ್ಮ 'ಸ್ನೇಹಿತರ ಬಳಗ'ದ ಈ ತಿಂಗಳ ಸಾಮಾಜಿಕ ಕಾರ್ಯ ನಡೀಬೇಕಲ್ಲ.... ನಾವು ಇಲ್ಲೇ ಹತ್ರ ಇರುವ ಶಂಕರ ಮಠದ ಆವರಣದಲ್ಲಿ ಸ್ವಚ್ಛತೆ ಮಾಡುವುದೆಂದು ಕಳೆದ ತಿಂಗಳೇ ನಿರ್ಧರಿಸಿದ್ದು ನೆನಪಿದೆ ತಾನೇ?"ಎಂದ ಗೆಣಪ್ಪಣ್ಣ.

"ಓಹೋ..ಹೌದಲ್ದ  ...ಈಗ ನೆಂಪಾತು ನೋಡು..ಮರ್ತೇ ಬಿಟ್ಟಿದ್ದೆ.ಸರಿ..ಯಾವಾಗಾವ್ತು..?ಎಂದ ಶಂಕ್ರಣ್ಣ.

"ನೋಡು... ಶಂಕ್ರಣ್ಣ.. ನಾಡಿದ್ದು ಭಾನುವಾರ ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ..ಆ ಹೊತ್ತಿಗೆ ಸರಿಯಾಗಿ ಸದಸ್ಯರೆಲ್ಲರೂ ಸೇರಬೇಕು.ಹಿಡಿ,ಕಸ ಸಂಗ್ರಹ ಚೀಲ, ಟೊಪ್ಪಿ, ಗ್ಲೌಸ್, ನೀರು ಏನೇನು ಬೇಕೋ ಎಲ್ಲಾ ಅವರವರೇ ತರುವುದು."ಎಂದು ಸವಿವರ ನೀಡಿದ ಗೆಣಪ್ಪಣ್ಣ.

"ಹ್ಞೂಂ.. ಸರಿ."ಎಂದು ಫೋನಿಟ್ಟ ಶಂಕ್ರಣ್ಣ.

ಒಪ್ಪಿದ್ದೆಲ್ಲ ನಿಜ.. ಆದರೆ ತಲೆಯಲ್ಲಿ ಹುಳ ಕೊರೆಯಲು ಈಗ ಶುರುವಾಯಿತು.ಕಳೆದ ತಿಂಗಳ ಸಾಮಾಜಿಕ ಕಾರ್ಯ ರಕ್ತದಾನ ಶಿಬಿರ ಕ್ಕೆ ಹೋಗಿ ರಕ್ತದಾನ ಮಾಡಿದ್ದಕ್ಕೆ ಹೆಂಡತಿ ಮಾಡಿದ ಕಂಠದಾನ ಇನ್ನೂ ಮರೆತಿಲ್ಲ.ಈಗಿನ್ನು ಊರು ಗುಡಿಸೋ ಕಾರ್ಯ ಬೇರೆ ಕೇಡು... ಎಂದು ಶಂಕ್ರಣ್ಣ ಗೊಣಗಿಕೊಂಡ.

ಉಪಾಯವಾಗಿ ಆ ದಿನಕ್ಕೆ ಮುನ್ನಾ ದಿನ ವೇ ಹೆಂಡ್ತೀನ ತವರಿಗೆ ಕಳಿಸೋ ಚಿಂತನೆ ಮಾಡಿದ .ಅದು ಹೇಗೋ ಫಲಪ್ರದವಾಯಿತು.ತಾನು ಗೆದ್ದೆ ಎಂದು ಬೀಗಿದ.

ಮರುದಿನ ಬೆಳಗ್ಗೆ 9 ಗಂಟೆಗೆ 'ಸ್ನೇಹಿತರ ಬಳಗ'ದ ಎಲ್ಲರೂ ತಲೆಗೆ ಬಿಳಿ ಟೊಪ್ಪಿ, ಕೈಗೆ ಗ್ಲೌಸ್, ಪೊರಕೆ,ಕಸ ಸಂಗ್ರಹಿಸುವ ಚೀಲದೊಂದಿಗೆ ಸಿದ್ಧವಾದರು ಫೊಟೋಗೆ...ಅಲ್ಲಲ್ಲ.... ಸ್ವಚ್ಛತಾ ಕಾರ್ಯಕ್ರಮ ದ ಉದ್ಘಾಟನೆಗೆ.

ಉದ್ದುದ್ದ ಭಾಷಣ ಬಿಗಿದು ಉದ್ಘಾಟನೆ ನೆರವೇರಿಸಿದರು.ಫೊಟೋ ತೆಗೆದು ವಾಟ್ಸಪ್, ಫೇಸ್ಬುಕ್ ಗಳಿಗೆ ಹಾಕಿಯಾಯಿತು.ಮೆಲ್ಲಮೆಲ್ಲಗೆ ಸ್ವಚ್ಛತೆ ಆರಂಭಿಸಿದರು.

ಹತ್ತು ಗಂಟೆಯಾದರೂ ಶಂಕ್ರಣ್ಣನ ಪತ್ತೆಯಿಲ್ಲ."ಶಂಕ್ರಣ್ಣ ಬತ್ತೆ ಹೇಳಿದ್ದ.. ಕಾಣ್ತಾ ಇಲ್ಲೆ" ಹೇಳಿ ಎಲ್ಲರೂ ಅಂದುಕೊಂಡರು.

ಅಷ್ಟರಲ್ಲಿ ಪೆಚ್ಚು ಮೋರೆ ಹಾಕಿಕೊಂಡು ಬಂದ ಶಂಕರಣ್ಣನನ್ನು ಎಲ್ಲರೂ ಉಪಾಧ್ಯಕ್ಷರೇ ತಡವಾಗಿ ಬಂದರೆ ಹೇಗೆ..? ಎಂದು ತರಾಟೆಗೆ ತೆಗೆದುಕೊಂಡರು."ಹಿಡಿ (ಪೊರಕೆ)ಒಂದೂ ಕಾಣಿಸಿದ್ದಿಲ್ಲೆಪ್ಪಾ ...ಹುಡುಕಿ ತಡವಾಗಿ ಹೋಯಿತು"ಎಂದ..

ಮುಂದುವರಿಸುತ್ತಾ "ಹೆಂಡ್ತಿ ಕೈಯಿಂದ ಮಂಗಳಾರತಿ ಮಾಡಿಸಿಕೊಳ್ಳುವುದು ತಪ್ಪಿಸಲು ತವರಿಗೆ ಕಳಿಸಿದೆ.ಬೆಳಗ್ಗೆ ಬೇಗೆದ್ದು ತಿಂಡಿ ಮಾಡಿ ಸಾಂಗವಾಗಿ ಹೊರಟುನಿಂತು ಹಿಡಿಸೂಡಿ (ಪೊರಕೆ) ಹುಡುಕಿದೆ.ಅದೆಲ್ಲಿ ಬಚ್ಚಿಟ್ಟಿದ್ದಳೋ ಅರ್ಧಗಂಟೆ ತಡಕಾಡಿದರೂ ಸಿಗಲೇಯಿಲ್ಲ.ಕೊನೆಗೆ ಹೆಂಡ್ತಿಗೆ ಫೋನ್ ಮಾಡಿದೆ.... ಇದುವರೆಗೆ ನಾನು ತವರಿಗೆ ಹೋದಾಗ ಪೊರಕೆ  ಹಿಡಿದು ಗುಡಿಸದ ನೀವು ಇಂದೇಕೆ ಹುಡುಕುತ್ತಿರುವುದು ? ಊರು ಗುಡಿಸುವ ಉಸಾಬರಿಗೆ ಏನಾದರೂ ಹೊರಟಿದ್ದೀರೋ ಹೇಗೆ?..ಎಂದು ನನ್ನಾಕೆ ಕೇಳಬೇಕೇ..

ಉತ್ತರ ಕೊಡಲೇಬೇಕಾದ ಸಂಕಟ ಎದುರಾಯಿತು.ಅಂತೂ ಗುಟ್ಟಾಗಿಟ್ಟದ್ದು ರಟ್ಟಾಗಿಹೋಯ್ತು.ಪೊರಕೆಸೇವೆ ,ಮಂಗಳಾರತಿ ಎರಡೂ ಫೋನಲ್ಲೇ ಮಾಡಿ ಪೊರಕೆ ಅಡಗಿಸಿಡುವ ಜಾಗ ಹೇಳಿಬಿಟ್ಳು.ಕಾರ್ಯ ಕೆಟ್ಟೋಯ್ತು ಎಂದು ಸಪ್ಪೆಮೋರೆ ಮಾಡ್ಕೊಂಡು ಪೊರಕೆ ಹಿಡ್ಕೊಂಡು ಬಂದ್ಬಿಟ್ಟೆ.."..

ಉರಿಬಿಸಿಲಲ್ಲೂ ಗೊಳ್ಳೆಂದು ಎಲ್ಲರೂ ನಕ್ಕುಬಿಟ್ಟರು.

✍️... ಅನಿತಾ ಜಿ.ಕೆ.ಭಟ್.
16-09-2020.


ಚಿತ್ರ :ಹವಿಸವಿ ಕೃಪೆ

No comments:

Post a Comment