#ವರವಾದ ಮಳೆ
"ಅಮ್ಮ ಏನಾದರೊಂದು ಉಪಾಯ ಮಾಡಿ ಈ ಮದುವೆಯನ್ನು ತಪ್ಪಿಸು" ಎಂದು ಅನುರಾಧಾ ಬೆಳಗ್ಗಿನಿಂದಲೂ ಗೋಳಾಡುತ್ತಿದ್ದಳು. ಸೀತಮ್ಮನವರಿಗೆ ಅವಳ ದೈನ್ಯತೆಯನ್ನು ಕಂಡು ಕರುಳು ಹಿಂಡುತ್ತಿತ್ತು. ತಾವಾದರೂ ಏನು ಮಾಡಲು ಸಾಧ್ಯ? ಎಂದು ಯೋಚಿಸಿದವರಿಗೆ ತಲೆಯೆಲ್ಲ ಸಿಡಿಯುವುದು ಬಿಟ್ಟರೆ ಮತ್ತೇನೂ ಉಪಾಯ ಮೂಡಲಿಲ್ಲ. ನನಗೆ ಅಧಿಕಾರ ಇರುವುದು ಇಷ್ಟೇ ಅಲ್ಲವೇ? ಗಂಡನ ಆಸೆ-ಆಕಾಂಕ್ಷೆಗಳನ್ನು ಪೂರೈಸುವುದು, ಬಯಸಿದ ಸುಖವನ್ನು ಮೊಗೆದು ಮೊಗೆದು ಉಣಬಡಿಸುವುದು, ನವಮಾಸ ಹೊರುವುದು, ಸಾಕಿ ಬೆಳೆಸುವುದು.. ಮತ್ತೆ ಯಾವುದಕ್ಕೂ ನನ್ನನ್ನು ಕೇಳುವುದೂ ಇಲ್ಲ, ನಾನು ಹೇಳುವ ಪ್ರಶ್ನೆಯೂ ಇಲ್ಲ. ನಾನಾಗಿ ಹೇಳಿದರೆ ಕೇಳಿಸಿಕೊಳ್ಳುವ ತಾಳ್ಮೆಯೂ ಇಲ್ಲ, ಕೆಲವೊಮ್ಮೆ ಸಿಡುಕಿನ ಆರ್ಭಟವೇ ಮತ್ತೆ ನಾನು ಕೇಳಬೇಕಾಗುವುದು. ಎನ್ನುತ್ತಾ ಕೈಚೆಲ್ಲಿ ಕುಳಿತಿದ್ದರು ಸೀತಮ್ಮ. "ಎಳೆಯ ಕೂಸಿನ ನೋವನ್ನು ನೀನೇ ಕಡಿಮೆ ಮಾಡು ತಾಯೇ" ಎಂದು ಜಗನ್ಮಾತೆಗೆ ಕೈಮುಗಿದು ಸೆರಗೊಡ್ಡಿ ಬೇಡಿದರು.
"ಮಧ್ಯಾಹ್ನದ ಊಟಕ್ಕೆ ಅಂದಾಜು ಹತ್ತು ಜನರು ಇರಬಹುದು" ಎಂದು ಹೇಳಿ ತೋಟದತ್ತ ಕೆಲಸದಾಳುಗಳೊಂದಿಗೆ ತೆರಳಿದ್ದರು ಉಮಾಪತಿರಾಯರು. ಒಲ್ಲದ ಮನಸ್ಸಿನಿಂದಲೇ ಅಡುಗೆ ಮಾಡಿದರು ಸೀತಮ್ಮ. ಅಡುಗೆ ಎಂದರೆ ಬರಿ ಒಂದು ಬಗೆಯಲ್ಲ. ಉಮಾಪತಿ ರಾಯರಿಗೆ ಕನಿಷ್ಠ ಮೂರು ಬಗೆಯಾದರೂ ಇರಲೇಬೇಕು. ಹೃದಯ ಹಿಂಡುವ ಯಾತನೆಯಲ್ಲೂ ಸಾಂಬಾರು, ಸಾರು, ಸೆಂಡಿಗೆ, ಪಲ್ಯ, ತಂಬುಳಿ ಇಷ್ಟನ್ನು ತಯಾರಿಸಿದರು. ಊಟದ ಸಮಯಕ್ಕೆ ಉಮಾಪತಿ ರಾಯರ ಇಬ್ಬರು ತಮ್ಮಂದಿರು, ಅವರ ಪತ್ನಿಯರು, ಒಬ್ಬರು ಅಕ್ಕ, ಒಬ್ಬರು ತಂಗಿ ಅವರ ಗಂಡಂದಿರೊಂದಿಗೆ ಬಂದಿದ್ದರು. ಇವರೊಂದಿಗೆ ಉಮಾಪತಿ ರಾಯರು ನಗುನಗುತ್ತಾ ಮಾತನಾಡಿ ವರನ ವಿಚಾರವನ್ನು ಹೇಳುತ್ತಿರುವಾಗ ಒಳಗಿನಿಂದ ಕೇಳಿಸಿಕೊಳ್ಳುತ್ತಾ ತಮ್ಮ ಸೆರಗಿನ ತುದಿಯಲ್ಲಿ ಕಣ್ಣಂಚನ್ನು ಒರೆಸಿಕೊಳ್ಳುತ್ತಿದ್ದರು ಸೀತಮ್ಮ. ಉಮಾಪತಿ ರಾಯರಿಗೆ ಅದು ಪ್ರತಿಷ್ಠೆ. ಸೀತಮ್ಮನವರಿಗೆ ಅದು ಕರುಳಬಳ್ಳಿಯ ಆಸೆಯನ್ನು ಪೂರೈಸಲಾಗದ ಸಂಕಟ. ತನ್ನ ಸಂಕಟವನ್ನು ಅತ್ತಿಗೆಯಂದಿರಾದರೂ ಅರ್ಥಮಾಡಿಕೊಂಡಾರೇನೋ ಎಂದು ಸೀತಮ್ಮನವರು ಆಶಿಸಿದ್ದು ಸುಳ್ಳಾಗಿತ್ತು. ಉಮಾಪತಿ ರಾಯರ ದೊಡ್ಡ ಅಕ್ಕನಂತೂ "ಇದು ಸರಿಯಾದ ಸಮಯ. ನಮ್ಮ ಕಾಲಕ್ಕೆ ಹದಿನಾಲ್ಕು ವರ್ಷಕ್ಕೆ ವಿವಾಹ ಮಾಡಿದರು ನಮ್ಮ ತಂದೆಯವರು. ಈಗ ಅನುರಾಧಳಿಗೆ ಹದಿನಾರನೇ ವಯಸ್ಸು. ಈ ವಯಸ್ಸಿನಲ್ಲಿ ಮದುವೆ ಮಾಡುವುದು ಈಗಿನ ಕಾಲಕ್ಕೆ ಸೂಕ್ತ. ಕಾಲೇಜು ಓದು ಎಂದೆಲ್ಲ ಹೇಳುತ್ತಾ ಯಾರ್ಯಾರೊಂದಿಗೋ ಓಡಿದರೆ ನಮ್ಮ ಮಾನ ಮರ್ಯಾದೆಯೇ ಹರಾಜು ಆಗುವುದು. ಅಷ್ಟಾಗಿಯೂ ಓದಿ ಕಲಿತು ಮಾಡುವುದೇನಿದೆ...? ಎಷ್ಟು ಓದಿದರೂ ಅಡುಗೆಮಾಡುವುದು, ಕಸ ಮುಸುರೆ ತಿಕ್ಕುವುದು ತಪ್ಪದು ಹೆಣ್ಣಿಗೆ.." ಎಂದು ಇಡೀ ಮನೆಗೆ ಕೇಳುವಂತೆ ಹೇಳುತ್ತಿದ್ದಾಗ ಅನುರಾಧಾಳಿಗಿಂತ ಹೆಚ್ಚು ಸೀತಮ್ಮನವರು ದುಃಖಿಸಿದರು. ತನ್ನ ಅಗಲವಾದ ಶರೀರವನ್ನು ಹಿಡಿಯಷ್ಟಕ್ಕೆ ಕುಗ್ಗಿಸಿಕೊಂಡು ಅವರು ಅಳುತ್ತಿದ್ದರೆ ಅವರ ಮಕ್ಕಳೆಲ್ಲರೂ ಏನೂ ತೋಚದೆ ಪಿಳಿಪಿಳಿ ನೋಡುತ್ತಿದ್ದರು. ಒಬ್ಬ ಹೆಣ್ಣಾಗಿ ಇನ್ನೊಬ್ಬ ಹೆಣ್ಣಿನ ನೋವು ತಿಳಿಯುವುದಿಲ್ಲವೇ ಎಂಬ ಒಂದು ವಾಕ್ಯ ಬಿಟ್ಟು ಮತ್ತೇನನ್ನೂ ಅವರು ಉಸುರಲಿಲ್ಲ.
ಎರಡನೇ ಅತ್ತಿಗೆ "ನಮ್ಮ ಮನೆ ಹತ್ತಿರ ಒಬ್ಬಳು ಓಡಿ ಹೋಗಿದ್ದಾಳೆ... ಮತ್ತೊಬ್ಬಳು ಕಲಿಯುತ್ತೇನೆ ಎಂದು ಫಾರಿನ್ ಗೆ ತೆರಳಿದವಳು ವಿವಾಹದ ವಯಸ್ಸು ಮೀರಿದರೂ ಇನ್ನೂ ವಿವಾಹವಾಗಿಲ್ಲ.." ಎನ್ನುತ್ತಾ ನಕಾರಾತ್ಮಕ ಸುದ್ದಿಗಳನ್ನೇ ಉಮಾಪತಿ ರಾಯರ ಕಿವಿಗೆ ತುಂಬಿಸುತ್ತಿದ್ದರು. ಇದನ್ನೆಲ್ಲ ಕೇಳಿ ಸೀತಮ್ಮ ಹಾಗೆಯೇ ಕುಸಿದು ಕುಳಿತರು.
******
ಉಮಾಪತಿ ರಾಯರು ಮತ್ತು ಸೀತಮ್ಮನವರದು ಅರ್ಕುಳದ ಒಂದು ಸಾಂಪ್ರದಾಯಿಕ ಮನೆತನ. ಹಿಂದಿನಿಂದಲೂ ಸಂಪ್ರದಾಯಗಳಿಗೆ ಒತ್ತು ನೀಡುತ್ತಾ ಬಂದ ಮನೆತನ ಕಾಲಕ್ಕೆ ತಕ್ಕಂತೆ ಸ್ವಲ್ಪವೇ ಸ್ವಲ್ಪ ಬದಲಾವಣೆಗೆ ಒಡ್ಡಿಕೊಂಡಿತ್ತು. ಅದೇನೆಂದರೆ ಹಳೆಯ ರೇಡಿಯೋ ಇದ್ದ ಜಾಗದಲ್ಲಿ ಹೊಸ ದೂರದರ್ಶನವೊಂದು ಬಂದು ಕುಳಿತಿತ್ತು. ಹಳೆಯ ಎತ್ತಿನ ಬಂಡಿ ಇದ್ದ ಜಾಗಕ್ಕೆ ಹೊಸದೊಂದು ಜೀಪು ಬಂದು ಸೇರಿತ್ತು. ಹಿಂದಿನ ಕಾಲದ ಏತಗಳು ಪಳೆಯುಳಿಕೆಯಾಗಿ ಹೊಸ ಪಂಪ್ ಸೆಟ್ಟುಗಳು ಬಂದಿದ್ದವು. ಗದ್ದೆಗಳಲ್ಲಿ ಕಬ್ಬುಗಳನ್ನು ಬೆಳೆದು ಗಾಣದಲ್ಲಿ ಹಾಲು ತೆಗೆದು ಬೆಲ್ಲ ತಯಾರಿಸುತ್ತಿದ್ದ ಪರಿಪಾಠ ಹೋಗಿ ಈಗ ಉಳ್ಳಾಲ ಬೆಲ್ಲವನ್ನು ತರಿಸುವ ಅಭ್ಯಾಸ ರೂಢಿಸಿಕೊಂಡಿದ್ದರು. ನಿಧಾನವಾಗಿ ಒಂದೊಂದೇ ಪದ್ಧತಿಗಳಲ್ಲಿ ಬದಲಾವಣೆಗಳು ಬರುತ್ತಿದ್ದವು. ಈಗಿನ ಕಾಲಕ್ಕೆ ತಕ್ಕಂತೆ ಸಂಪೂರ್ಣವಾಗಿ ಬದಲಾಗುವ ಮಾತೇ ಇರಲಿಲ್ಲ.
ಹಿರಿಯೂರಿನ ಸೀತಮ್ಮ ತಮ್ಮ ಹದಿಮೂರನೇ ವಯಸ್ಸಿನಲ್ಲಿ ದೊಡ್ಡವಳಾದಾಗ ಅವರ ಮನೆಯಲ್ಲಿ ಕನ್ಯೆಗೆ ಆರತಿ ಬೆಳಗುವ ಸಮಾರಂಭ ಏರ್ಪಡಿಸಿದ್ದರು. ಇದರ ಸುದ್ದಿ ತಿಳಿದ ಉಮಾಪತಿ ರಾಯರ ತಂದೆಯೇ ತಮ್ಮ ಮಗನ ಸಲುವಾಗಿ ವಿವಾಹ ಪ್ರಸ್ತಾಪವನ್ನಿಟ್ಟರು. ಉಮಾಪತಿ ರಾಯರಿಗೆ ಮೂವತ್ತು ವರ್ಷ ವಯಸ್ಸು. ಆಗಿನ ಕಾಲಕ್ಕೆ ಗಟ್ಟಿ ಕುಳವಾಗಿದ್ದ ಅರ್ಕುಳ ಮನೆತನಕ್ಕೆ ಹಿಂದೆ ಮುಂದೆ ನೋಡದೆ ಸೀತಮ್ಮನವರನ್ನು ಮದುವೆ ಮಾಡಿಕೊಡಲಾಗಿತ್ತು. ದೊಡ್ಡ ಮನೆತನ, ಮನೆತುಂಬ ಜನ, ಹಿರಿಯ ಸೊಸೆ ಸೀತಮ್ಮ. ಉಮಾಪತಿ ರಾಯರ ಅಕ್ಕ ತಂಗಿಯರೆಲ್ಲ ಹದಿಮೂರು ಹದಿನಾಲ್ಕನೇ ವಯಸ್ಸಿಗೆ ಮದುವೆಯಾಗಿ ಪತಿಯ ಮನೆಗೆ ತೆರಳಿದ್ದರು. ಉಮಾಪತಿ ರಾಯರು ಹಾಗೂ ಅವರ ಅಜ್ಜ, ಅಜ್ಜಿ, ತಂದೆ, ತಾಯಿ, ತಮ್ಮಂದಿರು, ಅವರ ಕುಟುಂಬ ಒಟ್ಟಿಗೆ ಬಾಳುತ್ತಿದ್ದರು.
ಮೇಲ್ನೋಟಕ್ಕೆ ಇವರದು ಅನ್ಯೋನ್ಯ ದಾಂಪತ್ಯವಾಗಿದ್ದರೂ ಪರಸ್ಪರ ಅನುರಾಗ, ಅರ್ಥಮಾಡಿಕೊಂಡದ್ದು ಕಡಿಮೆಯೇ. ಉಮಾಪತಿ ರಾಯರ ಸಿಟ್ಟಿಗೆ ಭಯ ಬೀಳುತಿದ್ದರು ಸೀತಮ್ಮ. ವಯಸ್ಸಿನಲ್ಲಿಯೂ ಸಾಕಷ್ಟು ಹಿರಿಯರಾಗಿದ್ದ ಕಾರಣ ಪರಸ್ಪರ ಆಲೋಚನೆಗಳು ಒಂದಕ್ಕೊಂದು ಹೊಂದಿಕೊಳ್ಳುತ್ತಿರಲಿಲ್ಲ. ಸೀತಮ್ಮನವರ ಎಳೆಯ ವಯಸ್ಸಿನ ಆಸೆ ಬೇಡಿಕೆಗಳು ಉಮಾಪತಿರಾಯರಿಗೆ ಅರ್ಥವಾಗುತ್ತಿರಲಿಲ್ಲ.
ಮದುವೆಯಾದ ಮರು ವರ್ಷಕ್ಕೇ ಹುಟ್ಟಿದ ಮಗ ಧನಂಜಯ. ಮತ್ತೆರಡು ವರ್ಷದಲ್ಲಿ ಹುಟ್ಟಿದವಳು ಅನುರಾಧ. ಮತ್ತೆ ಎರಡು ಮೂರು ವರ್ಷದಲ್ಲಿ ಒಂದು ಗಂಡು ಎರಡು ಹೆಣ್ಣು ಮಕ್ಕಳು ಜನಿಸಿದರು. ಆಗಾಗ ಗರ್ಭಪಾತವಾಗಿದ್ದೂ ಇದೆ.
ಸೀತಮ್ಮನವರಿಗೆ ಎಲ್ಲವೂ ಇದ್ದರೂ ಏನೋ ಕಳೆದುಕೊಂಡಂತಹ ಭಾವ ಸದಾ ಕಾಡುತ್ತಿತ್ತು.
ಅನುರಾಧಾ ಹತ್ತನೇ ತರಗತಿ ಮುಗಿಸಿ ಮನೆಯ ಸಮೀಪದಲ್ಲಿದ್ದ ಕಾಲೇಜಿಗೆ ತೆರಳುತ್ತಿದ್ದಳು. ಆಕೆ ಕಲಿಯುವುದರಲ್ಲಿ ಮುಂದೆ. ಚಿತ್ರಕಲೆ, ಸಂಗೀತ, ನೃತ್ಯ, ರಂಗೋಲಿ ಬಿಡಿಸುವುದು.. ಇತ್ಯಾದಿಗಳಲ್ಲಿ ಅವಳದು ಎತ್ತಿದ ಕೈ. ಪ್ರತಿ ವರ್ಷ ಶಾಲೆಯ ವಾರ್ಷಿಕೋತ್ಸವದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದಳು. ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿ. ಮುಂದೆ ನೀನು ಏನಾಗಬೇಕು ಎಂದು ಕೇಳಿದರೆ ಆಕೆ "ನಾನು ಸಂಗೀತದಲ್ಲಿ ಏನಾದರೂ ಸಾಧನೆ ಮಾಡಬೇಕು, ವಿಜ್ಞಾನ ಶಿಕ್ಷಕಿಯಾಗಿ ಬೇಕು.." ಎಂದು ಹೇಳುತ್ತಿದ್ದಳು. ಆದರೆ ಆಕೆಯ ಸಂಗೀತ ಸಾಧನೆಗೆ ಎಳ್ಳಷ್ಟೂ ಪ್ರೋತ್ಸಾಹ ಮನೆಯಲ್ಲಿರಲಿಲ್ಲ. ಉಮಾಪತಿ ರಾಯರಿಗೆ ಹೆಣ್ಣುಮಕ್ಕಳು ಎಲ್ಲರೆದುರು ಹಾಡುತ್ತಾ ಕುಳಿತರೆ ಆಗದು. ಕೆಂಡದಂತಹ ಸಿಟ್ಟು. ಒಮ್ಮೆಯಂತೂ ಅನುರಾಧಾ ಸ್ಪರ್ಧೆಗೆಂದು ಹಾಡೊಂದನ್ನು ಅಭ್ಯಾಸ ಮಾಡುತ್ತಿದ್ದಾಗ ನಾಗರ ಬೆತ್ತ ಹಿಡಿದು ಬಂದಿದ್ದರು. ಅದೇ ಕೊನೆ. ಮತ್ತೆ ಅವಳೆಂದೂ ಮನೆಯಲ್ಲಿ ಅಭ್ಯಾಸವೇ ಮಾಡುತ್ತಿರಲಿಲ್ಲ. ಅವಳ ಹಾಡಿನ ಅಭ್ಯಾಸ ಏನಿದ್ದರೂ ಶಾಲೆಯಲ್ಲಿ ಮಾತ್ರ.
ಫೆಬ್ರವರಿ ತಿಂಗಳ ಮೊದಲನೆಯ ವಾರ. ಉಮಾಪತಿ ರಾಯರು ಸೀತಮ್ಮನವರನ್ನು ಕರೆದು "ಇವತ್ತು ನಮ್ಮ ಮನೆಗೆ ಶಾಸ್ತ್ರಿಗಳು ಬರುವವರಿದ್ದಾರೆ. ವಿಶೇಷ ಅಡುಗೆ ಮಾಡು" ಎಂದಿದ್ದರು. ಶಾಸ್ತ್ರಿಗಳು ಬರುವ ವಿಚಾರ ಏನಿದೆ? ಎಂದು ಯೋಚಿಸುತ್ತಿದ್ದಾಗ ಸೀತಮ್ಮನವರಿಗೆ ಏನೂ ಹೊಳೆದಿರಲಿಲ್ಲ. ಉಮಾಪತಿ ರಾಯರು ತಾವೇ ಜೀಪು ಕೊಂಡೊಯ್ದು ಶಾಸ್ತ್ರಿಗಳನ್ನು ಮನೆಗೆ ಕರೆತಂದಿದ್ದರು. ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತು. ಅವರಿಗೆ ಕೈ ಕಾಲು ಮುಖ ತೊಳೆಯಲು ನೀರು ಕೊಟ್ಟು, ಕುಡಿಯಲು ನೀರು ಕೊಟ್ಟರು, ಬಾಯಾರಿಕೆಗೆಂದು ಚಹಾ ಮಾಡಲು ಒಳಗೆ ತೆರಳಿದಾಗ "ನನಗೆ ಬರಿ ಮಜ್ಜಿಗೆ ನೀರು ಸಾಕು ಸೀತಮ್ಮ" ಎಂದಿದ್ದರು.. ಮಜ್ಜಿಗೆ ನೀರು ಕೊಟ್ಟು ಇನ್ನೇನು ಅಡುಗೆಗಳಿಗೆ ಒಗ್ಗರಣೆ ಹಾಕಬೇಕೆಂದು ಒಳಹೋದರು ಸೀತಮ್ಮ.
ಸೀತಮ್ಮ ಒಗ್ಗರಣೆ ಹಾಕುತ್ತಿದ್ದಾರೆ. ಉಮಾಪತಿ ರಾಯರು ಅನುರಾಧಾಳ ಜಾತಕವನ್ನು ಶಾಸ್ತ್ರಿಗಳ ಮುಂದಿಟ್ಟಿದ್ದಾರೆ. ಶಾಸ್ತ್ರಿಗಳು ಜಾತಕ ನೋಡುತ್ತಾ "ಈಗ ಈ ಕನ್ಯೆಗೆ ಹದಿನಾರನೇ ವಯಸ್ಸು ನಡೆಯುತ್ತಿದೆ. ಇದು ಇವಳಿಗೆ ವಿವಾಹಯೋಗ್ಯ ಕಾಲ. ಈ ತಿಂಗಳಿನ ಕೊನೆಯವರೆಗೆ ಈಕೆಗೆ ಕಂಕಣ ಬಲವಿದೆ. ಈಗ ವಿವಾಹವಾಗಬೇಕು. ಇಲ್ಲವೆಂದಾದರೆ ಮತ್ತೆ ಆಕೆಗೆ ಕಂಕಣ ಬಲವಿರುವುದು ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ. ಆಗಲೂ ಹಲವು ಗ್ರಹ ದೋಷಗಳಿವೆ. ವಿವಾಹಕ್ಕೆ ಸಂಕಷ್ಟ ಎದುರಾಗಬಹುದು. ಅಥವಾ ಯಾರದಾದರೂ ಜೊತೆ ಪ್ರೇಮ ವಿವಾಹವಾಗುವ ಆಲೋಚನೆಯನ್ನು ಮಾಡಬಹುದು."
ಇದನ್ನು ಕೇಳಿದ ಉಮಾಪತಿ ರಾಯರು "ಈಗಲೇ ವಿವಾಹ ಮಾಡೋಣ" ಎಂದು ಸನ್ನದ್ಧರಾದರು.. ಇದನ್ನು ಕೇಳಿಸಿಕೊಂಡ ಸೀತಮ್ಮನವರ ತಲೆ ಒಗ್ಗರಣೆಯ ಸಾಸಿವೆಯಂತೆಯೇ ಚಟಪಟ ಸಿಡಿಯಲಾರಂಭಿಸಿತು, ರೋಷವು ಕುದಿಯಲು ಆರಂಭವಾಯಿತು. ಎಷ್ಟೊಂದು ಕನಸು ಕಂಡಿದ್ದು ಪಾಪ ಆ ಕೂಸು.. ಇವಕ್ಕೆಲ್ಲ ಎಂತಾದರೂ ಬುದ್ಧಿ ಇದೆಯಾ.. ಅಲ್ಲ ಹೆಣ್ಣು ಮಗು ಅಂದ್ರೆ ಏನು ಗ್ರಹಿಸಿದ್ದು ಇವರೆಲ್ಲ.. ಬರಿಯ ಸೇವೆಗಷ್ಟೇ ಸೀಮಿತವಾ.. ಆಕೆಗೂ ಒಂದು ಮನಸ್ಸಿದೆ ಅನ್ನೋದು ಮರೆತೇ ಹೋಗಿದೆಯಾ.. ಸಿಟ್ಟು ನೆತ್ತಿಗೇರಿತು. ಆದರೆ ಯಾರೊಂದಿಗೂ ತೋರಿಸುವ ಹಾಗಿರಲಿಲ್ಲ.
ಉಮಾಪತಿರಾಯರು ಅಲ್ಲಿಂದಲೇ ಕೂಗಿದರು "ಏ..ಸೀತಾ.. ಊಟಕ್ಕೆ ಇಡು.."
ಸೀತಮ್ಮ ಒಗ್ಗರಣೆ ಸಟ್ಟುಗವನ್ನು ಕುಕ್ಕುತ್ತಾ 'ಊಟ ವಂತೆ ಊಟ..! ಕೆಲವು ದಿನ ಕಳೆದು ಮದುವೆಯಂತೆ.. ಏನು ಮದುವೆ ಎಂದರೆ ಆಟವಾ.. ಹೆಣ್ಣಿನ ಬಾಳೆಂದರೆ ಇವರಿಗೆ ಎಷ್ಟು ಅಲ್ಪ..' ಎಂದುಕೊಳ್ಳುತ್ತಿರುವಾಗಲೇ ಉಮಾಪತಿ ರಾಯರು ಶಾಸ್ತ್ರಿಗಳನ್ನು ಊಟದ ಪಡಸಾಲೆಗೆ ಕರೆದುಕೊಂಡು ಬಂದರು. ಮನೆಯ ಹಿಂದಿನ ನಳ್ಳಿಯಲ್ಲಿ ಕೈ ತೊಳೆದು ಬಂದು ಊಟಕ್ಕೆ ಕುಳಿತರು. ಸೀತಮ್ಮ ಎಲ್ಲ ಬಗೆಯನ್ನು ಅಚ್ಚುಕಟ್ಟಾಗಿ ಬಡಿಸಿದರು. ಅವರ ಮುಖದಲ್ಲಿ ನಗುವಿರಲಿ.. ಬಾಯಿಮಾತಿನ ಉಪಚಾರವೂ ಇರಲಿಲ್ಲ.. ಒಡಲಬೇಗೆ ಅವರನ್ನು ಸುಡುತ್ತಿತ್ತು..
ಊಟ ಮಾಡಿ ಕವಳ ಬಾಯಿಗೆ ಹಾಕಿಕೊಂಡು ಊರ ಹರಟೆ ಕೊಚ್ಚಿದರು ಇಬ್ಬರೂ. ಅರ್ಧಗಂಟೆಯ ಸಣ್ಣದೊಂದು ನಿದ್ದೆ ತೆಗೆದರು. ಎದ್ದು ಬಂದ ಶಾಸ್ತ್ರಿಗಳು ತಟ್ಟನೆ ಏನೋ ನೆನಪಾದಂತೆ... "ನನಗೆ ಇತ್ತೀಚೆಗೆ ಯಾರೋ ಒಬ್ಬರು ಒಬ್ಬ ಹುಡುಗನ ಜಾತಕ ಕೊಟ್ಟು ಹೋಗಿದ್ದರು. ಹೇಗೂ ನಿಮ್ಮ ಮಗಳಿಗೆ ಒಂದು ತಿಂಗಳೊಳಗೆ ವಿವಾಹವೂ ಆಗಬೇಕಲ್ಲ. ಜಾತಕ ಸರಿಹೊಂದುವುದೋ ಎಂದು ನೋಡಬಹುದು.." ಎಂದು ಹೇಳಿದಾಗ ಉಮಾಪತಿ ರಾಯರು ಆ ಬಗ್ಗೆ ವಿಚಾರಿಸಿಕೊಂಡರು.. ವಿಷಯ ಎಲ್ಲವನ್ನೂ ತಿಳಿದುಕೊಂಡಾಗ "ಸರಿ ಹಾಗಾದರೆ.. ಇಬ್ಬರ ಜಾತಕ ಎಷ್ಟರಮಟ್ಟಿಗೆ ಹೊಂದಾಣಿಕೆಯಾಗುತ್ತದೆ ನೋಡೋಣ" ಎಂದೇ ಬಿಟ್ಟರು.
ಶಾಸ್ತ್ರಿಗಳು ತಮ್ಮ ದೊಡ್ಡದಾದ ಬಟ್ಟೆಯ ಚೀಲದಲ್ಲಿ ಆ ಹುಡುಗನ ಜಾತಕವನ್ನು ಅರಸಿದರು. ಆ ಜಾತಕವನ್ನು ತೆಗೆದು ಇಬ್ಬರ ಜಾತಕವನ್ನು ಹೋಲಿಕೆ ನೋಡುತ್ತಿದ್ದರು. ಜಾತಕದೊಂದಿಗೆ ಒಂದು ಫೋಟೋ ಕೂಡ ಇತ್ತು. ಅದನ್ನು ಎತ್ತಿ ಪಕ್ಕದಲ್ಲಿ ಇರಿಸಿದ್ದರು. ಚಹಾ ಕೊಡಲು ಬಂದ ಸೀತಮ್ಮನವರಿಗೆ ಅದು ಕಾಣಿಸಿತ್ತು. ನೋಡಲು ಮೂವತ್ತು ವರ್ಷ ಮೀರಿದವರ ತರಹ ಇದ್ದಾನೆ. ನೆತ್ತಿಯ ಮೇಲೆ ಕೂದಲುಗಳು ಉದುರಿ ಹೋಗುತ್ತಿವೆ.. ನೋಡುವುದಕ್ಕೂ ಅಷ್ಟೇನೂ ಯೋಗ್ಯನಲ್ಲ.. ಅಂತಹವನಿಗೆ ನಮ್ಮ ಚೆಲುವೆ, ಚುರುಕುಮತಿ ಅನುರಾಧಾಳನ್ನು ಈಗಲೇ ಕೊಟ್ಟು ಬಿಡಬೇಕೇ.. ಮದುವೆ ಮಾಡಿ ಮುಗಿಸಬೇಕು ಎಂಬ ಆತುರವಾದರೂ ಯಾಕೋ.." ಎಂದುಕೊಳ್ಳುತ್ತಲೇ ಚಹಾವನ್ನು ಅಲ್ಲಿಟ್ಟು ತೆರಳಿದರು.
"ಜಾತಕ ಬಹಳ ಚೆನ್ನಾಗಿ ಕೂಡಿಬರುತ್ತಿದೆ. ಇನ್ನೆರಡು ದಿನಗಳಲ್ಲಿ ವರನ ಕಡೆಯವರನ್ನು ವಧುಪರೀಕ್ಷೆಗೆಂದು ಕರೆದುಕೊಂಡು ಬರುತ್ತೇನೆ" ಎಂದು ಹೇಳಿದ ಶಾಸ್ತ್ರಿಗಳು ಹೊರಟು ನಿಂತಿದ್ದರು. ಅಂದಿನಿಂದ ಸೀತಮ್ಮನವರ ವೇದನೆ ಹೇಳತೀರದು. ಮಾತಿಲ್ಲದೆ ಮೂಕರಾಗಿದ್ದರು. ಎಲ್ಲವನ್ನೂ ನೋಡುತ್ತಿದ್ದರೂ ನಿರ್ಭಾವುಕ ವ್ಯಕ್ತಿಯಂತೆ ಉಮಾಪತಿರಾಯರು ತನ್ನ ಹಠವೇ ನಡೆಯಬೇಕು ಎಂಬಂತೆ ವರ್ತಿಸುತ್ತಿದ್ದರು. ವಿಷಯ ತಿಳಿದ ಅನುರಾಧಳ ಮನದ ನೋವನ್ನು ಬಣ್ಣಿಸಲು ಸಾಧ್ಯವಿಲ್ಲ. ಒಮ್ಮೆ "ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಹೊರಟಿದ್ದಳು. ಸೀತಮ್ಮ "ಏನಾದರಾಗಲಿ ಮಗಳೇ.. ಆತ್ಮಹತ್ಯೆ ಒಂದು ಮಾಡಿಕೊಳ್ಳಬೇಡ.. ನೋಡೋಣ ಏನಾದರೂ ಅನುಕೂಲ ಆಗಬಹುದು. ಇಲ್ಲದಿದ್ದರೆ ಬಂದ ಜೀವನವನ್ನೇ ಎದುರಿಸಿ ಧೈರ್ಯದಿಂದ ಬದುಕು.. ಈಗ ನಾನು ಬದುಕುತ್ತಿಲ್ಲವೇ.." ಎಂದು ಸಮಾಧಾನಿಸಿದರು. ಓರಗೆಯ ಗೆಳತಿಯರನ್ನೆಲ್ಲಾ ನೋಡಿ, ಅವರ ಮನೆಯಲ್ಲಿ ದೊರೆಯುವ ಸ್ವಾತಂತ್ರ್ಯವನ್ನು ಕಂಡು ''ನಾನು ಕಡುಬಡವರ ಮನೆಯಲ್ಲಿ ಜನಿಸಿದರೂ ತೊಂದರೆ ಇರುತ್ತಿರಲಿಲ್ಲ.. ಇಂತಹ ಹಠಮಾರಿ ಸಾಂಪ್ರದಾಯಿಕ ಮನೆತನದಲ್ಲಿ ಹುಟ್ಟುವುದರಿಂದ.. ಇಲ್ಲಿ ನನ್ನ ಕನಸುಗಳಿಗೆಲ್ಲ ಕೊಳ್ಳಿ ಇಡುತ್ತಿದ್ದಾರೆ..'' ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.. ಬೆಳ್ಳಗಿನ ಹುಡುಗಿಯ ಮುಖವಿಡೀ ಅತ್ತು ಅತ್ತು.. ಕೆಂಪಾಗಿತ್ತು ಕಣ್ಣುಗಳಿಂದ ನೀರೇ ಬತ್ತಿಹೋಗಿತ್ತು..
*****
"ಸಂಜೆ ನಾಲ್ಕು ಗಂಟೆಗೆ ಅವರೆಲ್ಲಾ ಬರುತ್ತಿದ್ದಾರೆ. ಅನುರಾಧ ಸೀರೆ ಉಟ್ಟು ತಯಾರಾಗಲಿ.. ಅವರಿಗೆ ಉಪ್ಪಿಟ್ಟು ಅವಲಕ್ಕಿ ಕ್ಷೀರ ಕಾಫಿ ಚಹಾ ಎಲ್ಲ ತಯಾರು ಮಾಡಿಡು..'' ಎಂದು ಹೇಳಿ ಹೊರ ಹೋಗಿದ್ದರು ಉಮಾಪತಿ ರಾಯರು. ತನ್ನದೇ ಹಳೆಯ ಸೀರೆಯನ್ನು ತೆಗೆದು ಮಗಳಿಗೆ ಉಡಿಸಲು ಹೊರಟ ಸೀತಮ್ಮನವರ ಕೈ ನಡುಗುತ್ತಿತ್ತು. ಹದಿನೆಂಟುವರ್ಷ ಆಗಬೇಕು ಮದುವೆಗೆ ಎಂದು ಕಾನೂನು ಇದೆ. ಆದರೆ ಇಂತಹ ಹಠಮಾರಿಗಳು ಕಾನೂನಿಗೂ ತಲೆಬಾಗುವುದಿಲ್ಲವಲ್ಲ.. ಎಂದು ಕೊರಗುತ್ತಿದ್ದರು. ಮನಸ್ಸಿಲ್ಲದೇ ಸೀರೆಯುಟ್ಟ ಅನುರಾಧಾ ಬಾಡಿದ ಮೊಗ್ಗಿನಂತೆ ಕಾಣುತ್ತಿದ್ದಳು. ಅವಳಲ್ಲಿ ಎಂದಿನಂತೆ ಲವಲವಿಕೆ ಇರಲಿಲ್ಲ.
ನಾಲ್ಕು ಗಂಟೆಯಾಗುತ್ತಿದ್ದಂತೆ ಉಮಾಪತಿ ರಾಯರು ಪಂಚೆಯನ್ನು ಆಗಾಗ ಎತ್ತಿಕಟ್ಟುತ್ತಾ ಒಳಗಿನ ಪಡಸಾಲೆಗೊಮ್ಮೆ ಹೊರಗಿನ ಹಜಾರಕ್ಕೆ ಒಮ್ಮೆ ಅತ್ತಿಂದ ಇತ್ತ ಸಾಗುತ್ತಿದ್ದರು. ಬಾನಂಚಿನಲ್ಲಿ ಒಮ್ಮೆಲೆ ಕಾರ್ಮೋಡ ಆವರಿಸಿತು. ತಂಗಾಳಿ ಬೀಸಲಾರಂಭಿಸಿತು. "ಎಲ್ಲೋ ಮಳೆ ಬಂದಿರಬೇಕು" ಎಂದು ನೆರೆದಿದ್ದವರೆಲ್ಲ ಕುಳಿತು ಮಾತನಾಡಿಕೊಂಡರು. ಗುಡುಗು ಮಿಂಚಿನ ಅರ್ಭಟವೂ ಕೇಳಿಬಂತು. ಕೆಲವೇ ಕ್ಷಣದಲ್ಲಿ ಧೋ.. ಎಂದು ಮಳೆ ಸುರಿಯಲು ಆರಂಬಿಸಿತು.. "ಈ ಹೊತ್ತಿನಲ್ಲಿ ಮಳೆ ಬರಬೇಕಾ?.. ವರನ ಕಡೆಯವರಿಗೆ ಬರಲು ರಗಳೆ" ಎಂದು ಚಿಂತಿಸುತ್ತಿದ್ದರು ಉಮಾಪತಿ ರಾಯರು.. ಸಂಜೆ ಐದೂವರೆಯವರೆಗೂ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ವರನ ಕಡೆಯವರ ಪತ್ತೆಯೇ ಇರಲಿಲ್ಲ. ಬಂದವರೆಲ್ಲಾ "ಇವರನ್ನು ಇವತ್ತು ಕಾಣುವುದಿಲ್ಲ" ಎಂದು ಹೊರಡಲಾರಂಭಿಸಿದವು.
ಉಮಾಪತಿರಾಯರಿಗೆ ಯಾಕೆ ಬರಲಿಲ್ಲ ಎಂಬ ಯೋಚನೆ ಕಾಡಿತು.. ರಾತ್ರಿಯಾದರೂ ವರನ ಕಡೆಯವರು ಮಾತ್ರ ಆಗಮಿಸಲಿಲ್ಲ. ಒಂದು ವಾರದ ಬಳಿಕ ಶಾಸ್ತ್ರಿಗಳ ಕಡೆಯಿಂದ ಪತ್ರವೊಂದು ಬಂದಿತ್ತು.. ಒಕ್ಕಣೆ ಹೀಗಿತ್ತು..
ಉಮಾಪತಿ ರಾಯರಿಗೆ ಶಾಸ್ತ್ರಿಗಳ ಕಡೆಯಿಂದ ನಮಸ್ಕಾರಗಳು.. ನಾವೆಲ್ಲರೂ ಕ್ಷೇಮ. ನೀವೂ ಕ್ಷೇಮವೆಂದು ಭಾವಿಸುತ್ತೇನೆ. ಮೊನ್ನೆ ತಮ್ಮ ಮಗಳ ವಧುಪರೀಕ್ಷೆಗೆಂದು ವರನ ಕಡೆಯವರನ್ನು ಕರೆದುಕೊಂಡು ಬರುವುದಾಗಿ ತಿಳಿಸಿದ್ದೆ. ಆದರೆ ಆ ದಿನ ವರನ ಕಡೆಯವರು ಹೊರಡುವ ಸಮಯದಲ್ಲಿ ವಿಪರೀತ ಗುಡುಗು-ಮಿಂಚಿನ ಮಳೆಯಾಗಿದ್ದರಿಂದ... ಅವರ ಮನೆಯ ಸಮೀಪದ ನದಿಯ ಸೇತುವೆಯು ಒಂದೆರಡು ಗಂಟೆಯಲ್ಲೇ ನೀರಿನಲ್ಲಿ ಮುಳುಗುವ ಸಾಧ್ಯತೆಯಿದ್ದಿದ್ದು, ಅವರು ಬಂದರೆ ವಾಪಸ್ ಮನೆ ಸೇರುವುದು ಅಸಾಧ್ಯವಾಗಿತ್ತು. ಆದ್ದರಿಂದ ಆ ದಿನ ಬರಲಾಗಲಿಲ್ಲ. ಬೇರೆ ದಿನ ಬನ್ನಿ ಎಂದು ಕೋರಿಕೊಂಡೆ. ಆದರೆ ಮೊದಲ ಬಾರಿಯೇ ವಿಘ್ನ ಎದುರಾದ್ದರಿಂದ ಅವರು ಈ ಸಂಬಂಧವನ್ನು ನಿರಾಕರಿಸಿದರು. ಆದ್ದರಿಂದ ತಮ್ಮ ಮಗಳಿಗೆ ಬೇರೆಯವರನ್ನು ಹುಡುಕಬಹುದು ಎಂದು ಈ ಮೂಲಕ ತಿಳಿಸುತ್ತಿದ್ದೇನೆ..
ಇಂತಿ
ಶಾಸ್ತ್ರಿಗಳು..
ಪತ್ರವನ್ನು ಓದುತ್ತಿದ್ದಂತೆಯೇ ಉಮಾಪತಿ ರಾಯರು ಕೋಪಗೊಂಡು ಪತ್ರವನ್ನು ಎರಡು ಚೂರಾಗಿ ಮಾಡಿದರು. ಆಗಿನಿಂದ ಪತಿರಾಯರು ಓದುತ್ತಿದ್ದುದನ್ನು ಕೇಳಿಸಿಕೊಂಡ ಸೀತಮ್ಮನವರು ಹರ್ಷದಿಂದ ಕುಣಿದಾಡಿದರು. "ತಾಯೇ ಜಗನ್ಮಾತೆಯೇ ಇದೆಲ್ಲ ನಿನ್ನ ಮಾಯೆ" ಎಂದು ತಲೆಬಾಗಿದರು..
" ಈ ಫೆಬ್ರವರಿ ತಿಂಗಳ ಕೊನೆಯವರೆಗೆ ಮಾತ್ರ ಆಕೆಗೆ ಕಂಕಣಬಲ ಇರುವುದು ಅಂದರೆ ಇನ್ನು ಮೂರು ವಾರಗಳು ಮಾತ್ರ.. ಈ ಮೂರು ವಾರದಲ್ಲಿ ವಧು ಪರೀಕ್ಷೆ, ನಿಶ್ಚಿತಾರ್ಥ, ಮದುವೆ.. ಅಬ್ಬಬ್ಬಾ ಇದು ಸಾಧ್ಯವೇ ಇಲ್ಲ.. ಏನಿದ್ದರೂ ಮುಂದಿನ ಬಾರಿಗೆ ಕಂಕಣಬಲ ಬಂದಾಗ ವಿಚಾರ ಮಾಡಬೇಕಷ್ಟೇ.." ಎನ್ನುತ್ತಾ ಬಾಯಿಗೆ ಕವಳ ಜಡಿದು ತೋಟದತ್ತ ಸಾಗಿದರು ಉಮಾಪತಿ ರಾಯರು..
ಸೀತಮ್ಮನವರು ಕಾಲೇಜಿಗೆ ಹೋದ ಮಗಳು ಬರುವಾಗ ಅವಳಿಗೊಂದು ಸಿಹಿ ಮಾಡಿರಬೇಕೆಂದು ಅಡುಗೆ ಮನೆಯತ್ತ ತೆರಳಿದರು.. ಸಿಹಿ ತಿನಿಸಿನೊಂದಿಗೆ ಸಿಹಿಸುದ್ದಿ ಹೇಳಲು ಕಾಯುತ್ತಿದ್ದರು.
*****
ಅನುರಾಧಾ ನಗರದ ಶಾಲೆಯೊಂದರಲ್ಲಿ ಶಿಕ್ಷಕಿಯಾದಳು. ಪುಟಾಣಿ ಮಕ್ಕಳಿಗೆ ಪಾಠ ಮಾಡುತ್ತಾ, ಹಾಡು ಹೇಳಿಕೊಡುತ್ತಾ, ನೃತ್ಯ ಕಲಿಸುತ್ತಿದ್ದಳು. ಶಿಕ್ಷಕ ಸೇವೆಯಲ್ಲೇ ತನ್ನನ್ನು ತೊಡಗಿಸಿಕೊಳ್ಳುವ ಆಲೋಚನೆ ಮಾಡಿದಳು. ಮಹಿಳಾ ಉದ್ಯೋಗಿಗಳ ವಸತಿಗೃಹದಲ್ಲಿ ವಾಸಮಾಡುತ್ತಿದ್ದ ಅನುರಾಧಾ ಇದರ ಜೊತೆಗೆ ತನ್ನದೇ ಸಂಪಾದನೆಯಿಂದ ಸಂಗೀತಾಭ್ಯಾಸವನ್ನು ಆರಂಭಿಸಿದಳು. ಅಲ್ಲಿ ಆಕೆಗೆ ಯಾವುದೇ ಅಡೆತಡೆ ಇರಲಿಲ್ಲ. ಅವಳದೇ ಕ್ಷೇತ್ರದಲ್ಲಿದ್ದ ಅಧ್ಯಾಪಕರೊಬ್ಬರು ಅವಳ ಚುರುಕುತನವನ್ನು ಮೆಚ್ಚಿಕೊಂಡಿದ್ದು, ಅವರ ಪೋಷಕರು ಉಮಾಪತಿ ರಾಯರ ಮುಂದೆ ಸಂಬಂಧ ಬೆಳೆಸುವ ಮಾತುಗಳನ್ನಾಡಿದ್ದರು. ಶಾಸ್ತ್ರಿಗಳು ಅಂದಂತೆ ಪ್ರೇಮ ವಿವಾಹವೆಂದರೆ ಕದ್ದು ಮುಚ್ಚಿ ಪ್ರೀತಿಸಿ ಓಡಿ ಹೋಗುವುದೇ ಆಗಬೇಕಾಗಿಲ್ಲ.. ಬದಲಾಗಿ ವರನೇ ವಧುವನ್ನು ಮೆಚ್ಚಿ ಕೈಹಿಡಿಯಲು ಮುಂದೆ ಬರುವುದು ಕೂಡ ಆಗಬಹುದು ಎಂಬುದಕ್ಕೆ ಅನುರಾಧಾಳ ಜೀವನವೇ ಉದಾಹರಣೆಯಾಗಿ ನಿಂತಿದೆ.. ಅನುರಾಧಾ, ಸೀತಮ್ಮ, ಮನೆಮಕ್ಕಳೆಲ್ಲರೂ ತುಂಬಾ ಸಂತೋಷದಿಂದ ವಿವಾಹದ ಸಿದ್ಧತೆಯಲ್ಲಿ ತೊಡಗಿದರು. ಅನುರಾಧಾ ನಗುನಗುತ್ತಾ ಪತಿಗೃಹ ಪ್ರವೇಶ ಮಾಡಿದಳು.
✍️... ಅನಿತಾ ಜಿ.ಕೆ.ಭಟ್.
25-02-2022.
#ದೈನಿಕ ವಿಷಯಾಧಾರಿತ ಕಥೆ- ಪ್ರತಿಲಿಪಿ ಕನ್ನಡ
#ಅಕಾಲಿಕ ಮಳೆ