ಸೃಜನಶೀಲತೆ
"ಹಲೋ.. ಮೇಡಂ...ಎಕೆವಿಇಟಿ ಶಾಲೆಯಿಂದ ಮಾತನಾಡ್ತಾ ಇದ್ದೇನೆ.ನಿಮ್ಮ ಮಗ ಪ್ರಣೀತ್ ನ ಕ್ಲಾಸ್ ಟೀಚರ್.ಸಂಜೆ ಮೂರೂವರೆಯ ಹೊತ್ತಿಗೆ ನೀವು ಶಾಲೆಗೆ ಬಂದು ನನ್ನನ್ನು ಸಂಪರ್ಕಿಸಬೇಕು..ಮರೆಯದಿರಿ..ಅಗತ್ಯ ವಿಷಯ ಮಾತನಾಡುವುದಿದೆ..."
ಎಂದು ಹೇಳಿ ರಮಾಳ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲದೆ ಶಿಕ್ಷಕಿ ಫೋನಿಟ್ಟರು.ರಮಾಳ ಮನಸ್ಸು ಅಲ್ಲೋಲಕಲ್ಲೋಲವಾಯಿತು.ಪ್ರಣೀತ್ ಏನಾದರೂ ಪುಂಡಾಟಿಕೆ ಮಾಡಿರಬಹುದಾ..ಯಾರ ಜೊತೆಯಾದದೂ ಜಗಳಕ್ಕೆ ನಿಂತಿರಬಹುದಾ..ಇಲ್ಲ ನನ್ನ ಮಗ ಅಂತಹವನಲ್ಲ..ಇಲ್ಲ ಯಾರದಾದರೂ ಪೆನ್ನು ಪೆನ್ಸಿಲ್ ಮುಂತಾದ ವಸ್ತುವನ್ನು ಎಗರಿಸಿರಬಹುದಾ..ಇಲ್ಲ ನನ್ನ ಮಗನಿಗೆ ಕೇಳಿದ್ದನ್ನೆಲ್ಲ ಕೊಡಿಸುತ್ತಾರೆ ಅಪ್ಪ..ಕೇಳುವ ಮೊದಲೇ ಕೊಡಿಸುತ್ತಾರೆ ಎಂದರೂ ತಪ್ಪಿಲ್ಲ.. ಹೋಂವರ್ಕ್ ಮಾಡದೆ ಹೋಗುತ್ತಾನೆಯೇ..ಸಾಧ್ಯವೇ ಇಲ್ಲ.. ಎಲ್ಲವನ್ನೂ ನಾನೇ ಪರಿಶೀಲಿಸುತ್ತೇನೆ.ಮುಂದೆ ನಿಂತು ಹೋಂವರ್ಕ್ ,ಪ್ರಾಜೆಕ್ಟ್ ಮಾಡುವುದು ನಾನೇ ಎಂದರೂ ತಪ್ಪಿಲ್ಲ..ಹಾಗಾದರೆ ಯಾಕೆ ಬರಹೇಳಿರಬಹುದು.. ಎಂಬುದು ಅವಳ ತರ್ಕಕ್ಕೆ ನಿಲುಕದ ವಿಷಯವಾಗಿತ್ತು.
ರಮಾ ಮನೆಕೆಲಸ ಆಗಬೇಕಲ್ಲ ಎಂದು ಒತ್ತಾಯಪೂರ್ವಕವಾಗಿ ಮಾಡಿ ಮುಗಿಸಿದಂತಿತ್ತು.ದಿನವೂ ಮಧ್ಯಾಹ್ನ ಅರ್ಧ ಗಂಟೆ ಬಚ್ಚಲು ಮನೆಯಲ್ಲಿ ಬಿಸಿ ಬಿಸಿ ನೀರಿನಲ್ಲಿ ಮಿಂದು ಬಂದು, ತನ್ನ ನೆಚ್ಚಿನ ಅಡುಗೆ ಕಾರ್ಯಕ್ರಮ ವೀಕ್ಷಿಸಲೆಂದು ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವುದನ್ನು ಎರಡೇ ನಿಮಿಷದಲ್ಲಿ ಮುಗಿಸುತ್ತಿದ್ದವಳು ಇಂದು ಅರ್ಧ ಗಂಟೆ ಸ್ತೋತ್ರ ಪಠಣ ಮಾಡಿದಳು.ಮಗನ ಬಗ್ಗೆ ಏನು ಮಾತು ಕೇಳಬೇಕಾಗುವುದೋ ಎಂಬ ಯೋಚನೆಯಲ್ಲಿದ್ದ ಆಕೆಗೆ ಸ್ವಲ್ಪ ಸಮಾಧಾನ ಆದಂತಿತ್ತು.ಅಡುಗೆ ಬೆಳಿಗ್ಗೆ ಮಾಡಿಟ್ಟಿದ್ದರೂ ಅದನ್ನು ಬಿಸಿಮಾಡಿಕೊಂಡು ಉಣ್ಣುವ ಆಸಕ್ತಿ ಇಲ್ಲದೇ ಹಾಗೇ ಉಂಡು ಚೂರು ಮಲಗುವ ಪ್ರಯತ್ನ ಮಾಡಿದರೂ ಕಣ್ಣಿಗೆ ನಿದ್ರೆ ಸುಳಿಯಲೇ ಇಲ್ಲ.ಸಮ್ಮನೆ ಕಾಲಹರಣ ಮಾಡುವುದರ ಬದಲು ಹೊರಡೋಣ ಎಂದು ಹೊರಟು ಬಸ್ ಏರಿದಳು.
ಶಾಲೆ ಬಿಡುವ ಅರ್ಧ ಗಂಟೆ ಮೊದಲೇ ತಲುಪಿದವಳಿಗೆ ಮಾತಿಗೆ ಮಕ್ಕಳ ಅಮ್ಮಂದಿರು ಸಿಕ್ಕರು.ಹರಟೆ ಸಾಗಿತ್ತು.ನನ್ನ ಮಗಳು ಹಾಗೆ,ನನ್ನ ಮಗ ಹೀಗೆ ಎಂದು ಅವರವರ ಮಕ್ಕಳ ವಿಷಯ ಹಂಚಿಕೊಳ್ಳುತ್ತಿದ್ದಾಗ ರಮಾ ಎಲ್ಲರ ಮಾತಿಗೆ ಕಿವಿಯಾದಳು.ನನ್ನ ಮಗನೂ ಹೀಗೇ ಇರುತ್ತಿದ್ದರೆ ...ಎಂಬ ಆಲೋಚನೆ ಸುಳಿಯದೇ ಇರಲಿಲ್ಲ.
ಮಕ್ಕಳೆಲ್ಲ ಶಾಲೆಯಿಂದ ಹೊರಬಂದಾಗ ಆಯಾ ಬಂದು "ಶಿಕ್ಷಕರನ್ನು ಸಂಪರ್ಕಿಸಲು ಬಂದವರು ಈಗ ಬನ್ನಿ" ಎಂದಾಗ ರಮಾ ಸೇರಿದಂತೆ ಹಲವರು ಶಾಲೆಯೊಳಗೆ ಪ್ರವೇಶಿಸಿದರು.ನಾನೊಬ್ಬಳೇ ಅಲ್ಲ ನನ್ನಂತೆ ತಳಮಳವನ್ನು ಹೊತ್ತ ಹಲವು ಪೋಷಕರು ಜೊತೆಯಲ್ಲಿ ಇದ್ದಾರೆ ಎಂಬುದು ಸ್ವಲ್ಪ ಸಮಾಧಾನ ತಂದಿತು.
ಎರಡನೇ ಫ್ಲೋರ್ ,ಕ್ಲಾಸ್ ರೂಂ UKG 'A' ಖಾತರಿಪಡಿಸಿಕೊಡಳು.. ಶಿಕ್ಷಕಿ ಒಬ್ಬ ಪೋಷಕರ ಜೊತೆ ಸಂಭಾಷಣೆ ನಡೆಸುತ್ತಿದ್ದರು.ಮಗ ಪ್ರಣೀತ್ ಮೂರನೇ ಬೆಂಚಿನ ಒಂದು ಬದಿಯಲ್ಲಿ ಕುಳಿತು ಎತ್ತಲೋ ನೋಡುತ್ತಿದ್ದ.ನನಗಿರುವ ಆತಂಕದ ಕಾಲಂಶವೂ ಅವನ ಮುಖದಲ್ಲಿ ಕಾಣಿಸುತ್ತಿಲ್ಲ ಎಂಬುದು ಅವಳ ಅರಿವಿಗೆ ಬಂದಿತು."ಎಕ್ಸ್ಕ್ಯೂಸ್ ಮಿ .".ಎಂಬ ರಮಾಳ ದನಿಗೆ ಎಚ್ಚೆತ್ತ ಶಿಕ್ಷಕಿ.. "ಯೆಸ್..ಕಮಿನ್"..ಎಂದರು.
"ನಿಮ್ಮನ್ನು ಕರೆಸಿ ಹೇಳಬೇಕೆಂದು ಬಹಳ ದಿನದಿಂದ ಯೋಚಿಸುತ್ತಿದ್ದೆ..ಇವತ್ತು ಇನ್ನು ಸಾಧ್ಯವಿಲ್ಲ ಎಂದಾದಾಗ ಕರೆಸಿದೆ.."
"ಏನು ಮಾಡಿದ ಮೇಡಂ.. ಏನಾದ್ರೂ ಗಲಾಟೆ.."
"ಇಲ್ಲಪ್ಪಾ.. ಗಲಾಟೆ ಮಾಡಲ್ಲ ಅವನು.. ಸಿಕ್ಕಾಪಟ್ಟೆ ಅತ್ತಿಂದಿತ್ತ ಓಡಾಡೋದು..ಒಂದರೆಗಳಿಗೆ ನಿಂತಲ್ಲಿ ನಿಲ್ಲಲ್ಲ..ಕೂತಲ್ಲಿ ಕೂರಲ್ಲ..."
"ಮತ್ತೇನು ಸಮಸ್ಯೆ ಮೇಡಂ..?"
"ನೋಡಿ.. ಇವತ್ತು ನಾನವನ ಬ್ಯಾಗ್ ಚೆಕ್ ಮಾಡಿದೆ.. ನಾಲ್ಕು ಫೆವಿಕಾಲ್ ಗಂ ಬಾಟಲ್ ಸಿಕ್ಕಿದೆ.ನೋಡಿ ..ಇವೇ ನಾಲ್ಕು" ಎನ್ನುತ್ತಾ ಕಪಾಟಿನಿಂದ ತೆಗೆದು ತೋರಿಸಿದರು.
"ಮುಗಿದಿದೆ ..ದೊಡ್ಡದೇ ತನ್ನಿ ಎಂದಿದ್ದ.. ನಿನ್ನ ಅಪ್ಪನಲ್ಲಿ.."
"ಮಕ್ಕಳು ಹೇಳ್ತಾರೆ ಅಂತ ಕೊಡಿಸುವಾಗ ಆಲೋಚನೆ ಮಾಡಬೇಡವಾ ಮೇಡಂ.. ಇಷ್ಟು ದೊಡ್ಡ ಗಂ ಬಾಟಲ್,ಅದೂ ನಾಲ್ಕು.. ಈ ಪುಟ್ಟ ಮಕ್ಕಳಿಗೆ ಅಗತ್ಯವೇ.. ನೀವು ದಿನಾ ಬ್ಯಾಗ್ ಚೆಕ್ ಮಾಡಬೇಕು.ಇವತ್ತು ಗೆಳೆಯನ ಜೊತೆ ನಿನಗಿಂತ ದೊಡ್ಡ ಗಂ ಬಾಟಲ್ ನನ್ನಲ್ಲಿದೆ ಎಂದು ತೋರಿಸುತ್ತಿದ್ದ.ನಾಳೆ ಅವನು ಅದಕ್ಕಿಂತ ದೊಡ್ಡದನ್ನು ಮನೆಯವರಲ್ಲಿ ಹಠ ಹಿಡಿದು ತರಿಸಿಕೊಳ್ಳುತ್ತಾನೆ..ಹಾಗೇನೇ ಮೂರು ಕಂಪಾಸ್ ಬಾಕ್ಸ್ ಸಿಕ್ಕಿದೆ ನೋಡಿ.."
"ಹೌದಾ ಪ್ರಣೀತ್.."ಎಂದಳು ರಮಾ..
"ಅಮ್ಮ ಅದೂ.."
ನಾಲ್ಕನ್ನು ತೆರೆದಿಟ್ಟರು ಶಿಕ್ಷಕಿ.ಒಂದರಲ್ಲಿತುಂಬಾ ಬಣ್ಣಬಣ್ಣದ ಕಡ್ಡಿಗಳು,ಇನ್ನೊಂದರಲ್ಲಿ ಪೆನ್ಸಿಲ್ ಸ್ಕೇಲ್ ಇರೇಸರ್ ಕೆಲವು ತರದ್ದು,ಮತ್ತೊಂದರಲ್ಲಿ ತುಂಬಿ ತುಳುಕುತ್ತಿರುವ ಕ್ರೇಯಾನ್ಸ್ ,ನಾಲ್ಕನೇಯದರಲ್ಲಿ ಪುಟ್ಟ ಡಸ್ಟರ್, ಪೆನ್ಸಿಲ್ ಮೊನೆ ಚೂಪುಮಾಡಿದ ಕಸ ..ಹೀಗೆ ಇನ್ನೇನೋ ತುಂಬಿದ್ದವು.
"ನಮ್ಮ ಶಾಲೆಯ ಶಿಸ್ತಿನ ನಿಯಮದ ಪ್ರಕಾರ ಇಷ್ಟೊಂದು ಕಂಪಾಸ್ ಬಾಕ್ಸ್,ಗಂ ಬಾಟಲ್ ತಂದು ಇತರ ಮಕ್ಕಳೆದುರು ಪ್ರದರ್ಶಿಸುವಂತಿಲ್ಲ .. ನಾಳೆಯಿಂದ ದಿನವೂ ಪರಿಶೀಲಿಸಿ ಕಳುಹಿಸುವ ಜವಾಬ್ದಾರಿ ನಿಮ್ಮದು.ಹಾಗೇ ಇನ್ನೊಂದು ವಿಷಯ.."
"..ಹೇಳಿ ಮೇಡಂ.."
"ನಿಮ್ಮ ಮಗ ಬೇಕೆಂದೇ ನೋಟ್ಸ್ ಪೇಪರ್ ಕಿತ್ತು ಅದಕ್ಕೆ ಫೆವಿಕಾಲ್ ಗಂ ಸವರಿ ವಾಸನೆ ಮೂಸುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಇದು ಒಂದು ತರಹದ ಎಡಿಕ್ಷನ್.. ಆದಷ್ಟು ಫೆವಿಕಾಲ್ ಗಂ ನಿಂದ ಮಗುವನ್ನು ದೂರವಿಡಿ. ಈ ಪುಟ್ಟ ಮಕ್ಕಳಿಗೆ ಸಾಮಾನ್ಯ ಗಂ ಸಾಕಾಗುತ್ತದೆ ."
"ಸರಿ ಮೇಡಂ..ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು.."
"ಇನ್ನು ಒಂದು ವಿಷಯ ..ಅಕ್ಷರ ಸ್ವಲ್ಪವೂ ಅಚ್ಚುಕಟ್ಟಾಗಿ ಬರೆಯುತ್ತಿಲ್ಲ.. ಮನೆಯಲ್ಲಿ ಕಾಪಿ ಬರೆಸಿ...T-ಫಾರ್ ಟಾಯ್, J-ಫಾರ್ ಜೋಕರ್ ಎಂಬುದರ ಬದಲು T-ಫಾರ್ ಟಾಮ್ J-ಫಾರ್ ಜೆರ್ರಿ B- ಫಾರ್ ಭೀಮ್ ಅನ್ನುತ್ತಾನೆ.ಸ್ವಲ್ಪ ಕಾರ್ಟೂನ್ ನೋಡುವ ಅಭ್ಯಾಸವನ್ನು ಕಡಿಮೆ ಮಾಡಿಸಿ.ಲಂಚ್ ಬಾಕ್ಸ್ ಗೆ ನೀವು ಕೊಟ್ಟದ್ದನ್ನು ಒಂದು ದಿನವೂ ಪೂರ್ತಿ ಉಂಡಿಲ್ಲ.. ಲಂಚ್ ಅವರ್ ಮುಗಿದು ಬೆಲ್ ಆದರೂ ಅವನ ಊಟ ಮುಗಿಯುವುದಿಲ್ಲ..ಮನೆಯಲ್ಲಿ ಅವನೇ ಊಟ ಮಾಡುವ ಅಭ್ಯಾಸ ಬೆಳೆಸಿ."
"ಆಗಲಿ ಮೇಡಂ.. ಇಂದಿನಿಂದಲೇ ಅವನಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತೇನೆ..." ಎಂದು ಹೇಳಿ ಪ್ರಣೀತ್'ನನ್ನು ಕರೆದುಕೊಂಡು ಮನೆಗೆ ಹೊರಟಳು.ದಾರಿಯುದ್ದಕ್ಕೂ ಪ್ರಣೀತ್ ಗೆ ಅಮ್ಮನ ಬೈಗುಳ ,ಎಚ್ಚರಿಕೆ ಸಾಗುತ್ತಿತ್ತು.ಒಬ್ಬನೇ ಮಗನೆಂದು ತಾನು ಮಮಕಾರ ತೋರುತ್ತಿದ್ದರೂ ಅಷ್ಟೇ ಅವನನ್ನು ತಿದ್ದುತ್ತಲೂ ಇದ್ದೆ.ಆದರೂ ಹೀಗೇಕಾದ..? ಎಂಬುದೇ ಅವಳಿಗೆ ಚಿಂತೆಯಾಗಿತ್ತು.
ರಾತ್ರಿ ಮನೆಗೆ ಪರಮೇಶ್ವರ್ ಬಂದಾಗ ಮಡದಿಯ ಮುಖ ಬಾಡಿಕೊಂಡದ್ದುದನ್ನು ಗಮನಿಸಿದ.ಮಗ ಅಮ್ಮನ ಬಳಿ ಏನೋ ಪಿಸಿಪಿಸಿ ಹೇಳುತ್ತಿದ್ದುದನ್ನೂ ಕೇಳಿಸಿಕೊಂಡ."ಅಮ್ಮ .. ಅಪ್ಪನಲ್ಲಿ ಹೇಳ್ಬೇಡ ಪ್ಲೀಸ್ ..ನಾಳೆಯಿಂದ ಗುಡ್ ಬಾಯ್ ಆಗುತ್ತೇನೆ.."ಎಂಬುದು ಎಲ್ಲ ಮಕ್ಕಳ ಬೇಡಿಕೆಯಂತೆ ಪ್ರಣೀತ್'ನ ಕೋರಿಕೆಯೂ ಆಗಿತ್ತು.
ಪ್ರಣೀತ್ ಮಲಗಿ ನಿದ್ರಿಸಿದ್ದನ್ನು ಖಾತರಿಪಡಿಸಿಕೊಂಡ ರಮಾ ಗಂಡನ ಬಳಿ ವಿಷಯ ಪ್ರಸ್ತಾಪಿಸಿದಳು."ಮಗನ ವರ್ತನೆಯಿಂದ ಬಹಳವೇ ಸಂಕಟವಾಗುತ್ತಿದೆ.."
"ಅಲ್ವೇ ರಮಾ.. ಅದರಲ್ಲಿ ಸಂಕಟಪಡುವಂತಹದ್ದೇನಿದೆ.. ಎಲ್ಲರಿಗಿಂತ ಚೆನ್ನಾಗಿರುವ ದೊಡ್ಡದಾಗಿರುವ ಗಂ ಬಾಟಲ್ ತನ್ನಲ್ಲಿರಬೇಕೆಂದು,ಬಣ್ಣಬಣ್ಣದ ಕಂಪಾಸ್ ಬಾಕ್ಸ್ ಬೇಕೆಂದು ಎಲ್ಲರ ಆಸೆಯೂ ಆಗಿರುತ್ತದೆ.ಚಿಕ್ಕವನಿಗಿದ್ದಾಗ ನಾನೂ ಹೀಗೆಲ್ಲ ಆಸೆಪಟ್ಟಿದ್ದೆ. ಅವನಾಸೆಗೆ ಹಿಂದು ಮುಂದು ನೋಡದೆ ನಾನು ಪ್ರೋತ್ಸಾಹಿಸಿದ ಕಾರಣ ಸಿಕ್ಕಿಬಿದ್ದ.. ಇನ್ನು ಜಾಗ್ರತೆಯಿಂದ ವರ್ತಿಸಿದರಾಯಿತು."
"ಅಲ್ಲ ರೀ ..ಹೇಳಿಕೊಟ್ಟದ್ದನ್ನಾದ್ರೂ ಸರಿ ಹೇಳಬಾರದಾ ಇವನಿಗೆ...ನನಗಂತೂ ಶಿಕ್ಷಕಿಯ ಮಾತಿನಿಂದ.." ಮಡದಿಯ ಮಾತನ್ನು ಅರ್ಧದಲ್ಲೇ ತುಂಡರಿಸಿದ ಪರಮೇಶ್ವರ್
"ರಮಾ..ಗಿಣಿ ಬಾಯಿಪಾಠ ಒಪ್ಪಿಸಿದಂತೆ ಎ ಫಾರ್ ಆಪಲ್ ,ಬಿ ಫಾರ್ ಬನಾನಾ, ಸಿ ಫಾರ್ ಕ್ಯಾಟ್ ಅಂದರೆ ಏನೂ ವಿಶೇಷ ಇಲ್ಲ ಕಣೇ.. ಅದಕ್ಕಿಂತ ವಿಭಿನ್ನವಾಗಿ ತಾನೇ ಯೋಚಿಸಿ ಟಿ ಫಾರ್ ಟಾಮ್ ಅಂದಾಗ ನೀನು ಖುಷಿ ಪಡಬೇಕು ..ಅದು ಮಕ್ಕಳಲ್ಲಿರುವ ಸೃಜನಶೀಲತೆ...ತಾನು ದಿನನಿತ್ಯ ಕಾಣುವ ಕೇಳುವ ಹೆಸರುಗಳಲ್ಲೇ ಇಂಗ್ಲಿಷ್ ಅಕ್ಷರಗಳನ್ನು ಹುಡುಕುವುದು ಜಾಣತನವೇ ಹೊರತು ದಡ್ಡತನವಲ್ಲ... ಎನ್ನುತ್ತಾ ಮಡದಿಯ ಹೆಗಲ ಮೇಲೆ ಕೈಯಿಟ್ಟು ತೋಳಲ್ಲಿ ಬಳಸಿದ."ನನ್ನ ಹೀಗೇ ಯೋಚಿಸುವ ಗುಣದಿಂದಾಗಿಯೇ ಇಂದು ಸಂಶೋಧನೆಗಳನ್ನು ಕೈಗೊಳ್ಳಲು ಸಾಧ್ಯವಾದುದು.ಒಳ್ಳೆಯ ಉದ್ಯೋಗದಲ್ಲಿ ಇದ್ದುದರಿಂದಲೇ ಈ ಅರಗಿಣಿಯನ್ನು ನನ್ನ ಮಾವ ನನಗೆ ಕನ್ಯಾದಾನ ಮಾಡಿರುವುದು" ಎನ್ನುತ್ತಾ ಹಣೆಗೆ ಮುತ್ತಿಟ್ಟಾಗ ಅವನ ಬೆಚ್ಚನೆಯ ಸ್ಪರ್ಶದಲ್ಲಿ ಅವಳ ದುಗುಡ ಮಂಜಿನಂತೆ ಕರಗಿತು.ಮನವು ಗೆಲುವಾಯಿತು.
✍️... ಅನಿತಾ ಜಿ.ಕೆ.ಭಟ್.
18-08-2020.
ಚಿತ್ರ ಕೃಪೆ :ಅಂತರ್ಜಾಲ.
ಸೌಹಾರ್ದ ಬಳಗ-ಕಥೆ ಕಥೆ ತೋರಣ -ದತ್ತಸಾಲು-ಅವನ ಬೆಚ್ಚನೆಯ ಸ್ಪರ್ಶದಲ್ಲಿ ಅವಳ ದುಗುಡ ಮಂಜಿನಂತೆ ಕರಗಿ ನೀರಾಯಿತು-ಮೆಚ್ಚುಗೆ ಪಡೆದ ಕಥೆ..
ಒಳ್ಳೆ ಕಥೆ
ReplyDeleteಧನ್ಯವಾದಗಳು 💐🙏
Delete