Thursday, 17 September 2020

ಬೆಳಗು ನೀ ಹೊಳೆವ ಮೊಗದವಳೇ..#ಕವನ

 


ಬೆಳಗು ನೀ ಹೊಳೆವ ಮೊಗದವಳೇ

ತೆಗೆಯಣ್ಣ ತೆಗೆಯಣ್ಣ ನನದೊಂದು ಚಿತ್ರ
ನಸುನಗುತ ಕೂತಿರುವೆ ಬೆರಳಿಟ್ಟು ಹಲ್ಲ ಹತ್ರ...||

ನಾನೆಂದೂ ಕ್ಯಾಮೆರಾವ ಕಂಡಿಲ್ಲವಣ್ಣ
ನೀಕೊಡುವ ಪೆಪ್ಪರಮೆಂಟಿಗೆ ಕಾದಿಹೆನಣ್ಣ...||

ಅಂಗಿ ಕೊಳಕಿದ್ದರೆ ನನಗಿಲ್ಲ ಚಿಂತೆ
ಪಟವ ಅಂಗಡಿಯಲ್ಲಿ ತೊಳೆದೇ ಕೊಡುವರಂತೆ...||

ಸೆಂಟ್, ಪೌಡರು ನಾ ಹಾಕಿಲ್ಲವಣ್ಣ
ಪರಿಮಳವೋ ವಾಸನೆಯೋ ಪಟಕಿಲ್ಲವಲ್ಲಣ್ಣ...||

ಹುಬ್ಬುಗಳ ಮೇಲಮ್ಮ ಕಾಡಿಗೆಯ ತೀಡಿಲ್ಲ
ಪುಟ್ಟ ಕಂಗಳಿಗೆ ಸುಂದರವೆ ಜಗವೆಲ್ಲ...||

ಜಗಲಿಯಲಿ ಕಾವಿ ಮಾಸಿಹೋಗಿಹುದು
ಅಣ್ಣಾ..ನಿನಕಂಡು ನನ್ನಾಸೆ ಚಿಗುರುತಿಹುದು...||

ತಂಗೆಮ್ಮ ತಂಗೆಮ್ಮ ನಿನ್ನ ಮುಗ್ಧತೆಗೆ
ಮಾರುಹೋಗಿಹೆನು ಚೈತನ್ಯ ಚಿಲುಮೆಗೆ...||

ಚಂದಿರನು ಕೂಡ ಸೆರಗ ಸರಿಸಿ
ತಂದಿಹನು ತಂಪು ಬೇಗೆ ಹರಿಸಿ...||

ಅಂತರಂಗವು ಶುದ್ಧ ಸ್ಫಟಿಕದಂತೆ
ಮುಖದ ಮೇಲೆ ಪ್ರತಿಬಿಂಬವಂತೆ...||

ಮುಂಗಾರು ಬಂದು ಕೊಳೆಯೆಲ್ಲ ತೊಳೆದು
ಕಳೆಯಾಗಿ  ಬೆಳಗು ನೀ ಹೊಳೆವ  ಮೊಗದವಳೇ...||

✍️... ಅನಿತಾ ಜಿ.ಕೆ.ಭಟ್.
18-09-2020.

ಚಿತ್ರ: ಹವಿಸವಿ ಕೃಪೆ

ಹವಿಸವಿ ಭಾವ ಚಿತ್ರಗೀತೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಕವನ.


2 comments: