Sunday, 20 September 2020

ಸರೋಜಮ್ಮನ ತಾಕತ್ತು..#ಪುಟ್ಟಕಥೆ

 


ಸರೋಜಮ್ಮನ ತಾಕತ್ತು

    ಸರೋಜಮ್ಮ ಸೀರೆ ನೆರಿಗೆ ಮೇಲೆತ್ತಿಕೊಂಡು ಗಡಿಬಿಡಿಯಲ್ಲಿ ಅತ್ತಿಂದಿತ್ತ ಓಡಾಡುತ್ತ ಎಲ್ಲ ಕೆಲಸಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು."ಏ..ನೀಲಮ್ಮ ಅಂಗಳಕ್ಕೆ ಸೆಗಣಿ ಸಾರಿಸಬೇಕು...ಕೊಟ್ಟಿಗೆಯಿಂದ ಸೆಗಣಿ ಹೆಕ್ಕಿ ತಾ..ಚಂದ್ರು...ಮಾರ್ಗದ ಹೊಂಡಗುಂಡಿಯೆಲ್ಲ ಮಣ್ಣು ಹಾಕಿ ಮುಚ್ಚಿ ಸುತ್ತ ಮುತ್ತ ಬೆಳೆದಿರುವ ಸಸ್ಯಗಳ ಸವರಿ ವಾಹನ ನಿಲುಗಡೆ ವ್ಯವಸ್ಥೆ ಮಾಡು"ಹೀಗೆ ಎಲ್ಲ ಕೆಲಸದಾಳುಗಳಿಗೂ ಕೆಲಸ ಹೇಳುತ್ತಿದ್ದರು ಅರುವತ್ತರ ಹರೆಯದ ಸರೋಜಮ್ಮ.ತನ್ನ ಕೊನೆಯ ಮಗ ಗಿರೀಶನ ಮದುವೆಯ ಆರತಕ್ಷತೆ ಕಾರ್ಯಕ್ರಮ ಮನೆಯಲ್ಲಿ ಪಡೆಯುವುದರಿಂದ ಸಿದ್ಧತೆಯಲ್ಲಿ ತೊಡಗಿದ್ದರು.

ಅಷ್ಟರಲ್ಲಿ ಮನೆಯ ಫೋನ್ ರಿಂಗುಣಿಸಿತು.ಫೋನ್ ಎತ್ತಿದ ಸರೋಜಮ್ಮ"ಹಲೋ..."ಅಂದರು.
ಅತ್ತ ಕಡೆಯಿಂದ"ರೋಜತ್ತೆ... ನಾನು..ಶಾರಿ ಮಾತಾಡ್ತಾ ಇರೋದು... ಹೇಗೆ ಮದುವೆ ತಯಾರಿ ಭರದಿಂದ ಸಾಗ್ತಾ ಇದ್ದೋ ಹೇಗೆ..?"

"ಏನೇ...ಶಾರಿ.. ಅಪರೂಪಕ್ಕೆ ಫೋನ್ ಮಾಡಿದೆ... ಆಮಂತ್ರಣ ಪತ್ರಿಕೆ ತಲುಪಿದೆ ತಾನೇ..?ಲಗ್ನಕ್ಕೆ ಎಲ್ಲರನ್ನೂ ಕರ್ಕೊಂಡು ಬರ್ಬೇಕು..ನಿನ್ನ ಗಂಡನನ್ನೂ ಎರಡು ದಿನ ರಜೆ ಹಾಕ್ಸಿ ಕರ್ಕೊಂಬಾ ...ಎಲ್ಲ್ರೂ ಕ್ಷೇಮ ತಾನೇ..."

"ರೋಜತ್ತೆ..ನಾವೆಲ್ರೂ ಆರಾಮಾಗಿದೀವಿ.ಅಂದಹಾಗೆ ನನ್ನ ಮಗಳು ಅಳಿಯ ಫಾರಿನ್ ನಿಂದ ಬೆಂಗಳೂರಿಗೆ ಬಂದಿದಾರೆ.ಊರಲ್ಲಿರೋ ತಾಯಿ ಮನೆಗೆ ಅವರನ್ನು ಕರ್ಕೊಂಡು ಬಂದಿದೀನಿ.ಅವ್ರಿಗೆ ಗಿರೀಶನ ಲಗ್ನಕ್ಕಂತೂ ಬರೋಕಾಗಲ್ಲ.ಈ ದಿನ ಮಧ್ಯಾಹ್ನ ಕ್ಕೆ ನಿಮ್ಮನೆಗೆ ಬಂದು ನಿಮ್ಮನ್ನು ಮಾತಾಡಿಸಿಕೊಂಡು ಹೋಗೋಣಾಂತ ಇದೀವಿ..."

"ಸಂತೋಷ...ಶಾರೀ... ಹಾಗೇ ಆಗ್ಲಿ.. ಬೇಗನೆ ಬನ್ನಿ"ಎಂದರು ಸರೋಜಮ್ಮ.ಶಾರೀ ಹೊಸದಾಗಿ ಮದುವೆಯಾದ ಮಗಳು ಅಳಿಯನ ಜೊತೆ ಬಂದಾಗ ಸಿಹಿ ಅಡುಗೆ ಮಾಡಬೇಕಲ್ವೇ... ಏನು ಮಾಡುವುದು? .. ಎಂದು ಯೋಚಿಸಿದ ಸರೋಜಮ್ಮನಿಗೆ ಹೊಳೆದದ್ದು.. ಮೊನ್ನೆ ತಾನೇ ತಂದಿಟ್ಟ ಹೆಸರುಬೇಳೆ...ಪಾಯಸ ಮಾಡಲು ಹಸಿ ತೆಂಗಿನಕಾಯಿಯ ಹಾಲು ಆದರೆ ರುಚಿ. ಆದರೆ ಈ ಸೆಖೆಗೆ ತೆಂಗಿನಕಾಯಿ ಒಣಗಿಯೇ ಹೋಗಿದೆ.ಚೆನ್ನಾಗಿ ಹಾಲು ಬರದು.ಏನು ಮಾಡುವುದು??.. ಎಂದು ಯೋಚಿಸಿದವರಿಗೆ ಪಕ್ಕದಲ್ಲಿರುವ ಗಿರೀಶನನ್ನು ಕಂಡಿತು.

"ಗಿರೀಶ ಒಮ್ಮೆ ತೋಟಕ್ಕೆ ಹೋಗಿ ಅಲ್ಲಿ ಕೆಲಸ ಮಾಡುತ್ತಿರುವ ಲಿಂಗಪ್ಪನಲ್ಲಿ ಎರಡು ಹಸಿ ತೆಂಗಿನಕಾಯಿ ಕೀಳಲು ಹೇಳಿ ತೆಕ್ಕೊಂಡು ಬರ್ತೀಯಾ.."ಎಂದು ಕೇಳಿದರು...

"ಏನಮ್ಮ ನೀನು ಹೇಳೋದು...ನಾನೀಗಷ್ಟೇ ಪೇಟೆಗೆ ಹೋಗಿ ಬಂದೆ... ಈಗ ಇನ್ನೊಂದಿಷ್ಟು ಕೆಲಸವಿದೆ.ನಂಗೆ **ಗಡ್ಡ ಕೆರ್ಕೊಂಬಲೂ ಟೈಮಿಲ್ಲೆ**...ಇನ್ನು ತೋಟಕ್ಕೋಗಿ ತೆಂಗಿನಕಾಯಿ ತರೋದಕ್ಕೆ ಹೇಳ್ತೀಯಾ..", ಎಂದು ಉಡಾಫೆಯ ಉತ್ತರ ನೀಡಿದ..

"ಅಲ್ಲ ಮದುವೆ ನಿಗದಿಯಾದಂದಿನಿಂದ ನೋಡ್ತಾ ಇದ್ದೀನಿ... ಕೈಲಿ ಮೊಬೈಲ್ ಹಿಡ್ಕೊಂಡು ಸವರ್ತೀಯಲ್ಲ...ಅದಕ್ಕೆಲ್ಲ ಸಮಯವಿದೆ.. ಮನೆಕೆಲಸ ಹೇಳಿದರೆ ಹೀಗೆ...ಅಲ್ವೇನೋ...ಏನಿದೆ ಆ ಮೊಬೈಲಲ್ಲಿ... ನಾನೂ ಒಂಚೂರು ನೋಡ್ತೀನಿ "ಅಂತ ಬಗ್ಗಿದರು....

ತಾನು ಮದುವೆಯಾಗುವ ಹುಡುಗಿ ಜೊತೆ ಚಾಟ್ ಮಾಡುವುದು ಅಮ್ಮನಿಗೆ ಗೊತ್ತಾದರೆ ಮುಜುಗರ ಆಗುತ್ತೆ ಅಂತ ಮೊಬೈಲ್ ಜೇಬಲ್ಲಿ ತೂರಿಸಿ...ಸರ್ರನೆ ತೋಟದತ್ತ ಹೆಜ್ಜೆ ಹಾಕಿದ ಗಿರೀಶ.

✍️... ಅನಿತಾ ಜಿ.ಕೆ.ಭಟ್.
20-09-2020.ಚಿತ್ರ :ಹವಿಸವಿ ಕೃಪೆ.


2 comments: