Friday, 25 September 2020

ಗಂಧರ್ವಗಾನ ಪಂಚಭೂತಗಳಲ್ಲಿ ಲೀನ-ನನ್ನ ಅಚ್ಚುಮೆಚ್ಚಿನ ಗಾಯಕರಿಗೆ ನುಡಿನಮನ

 


ಗಂಧರ್ವಗಾನ ಪಂಚಭೂತಗಳಲ್ಲಿ ಲೀನ

     ಸಂಗೀತ ಕ್ಷೇತ್ರದ ಮೇರು ಗಾಯಕರಾದ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಅವರೇ ಸಾಟಿ. ಅತ್ಯಂತ ಪ್ರತಿಭಾವಂತ, ಸದಾ ಹೊಸತನ್ನು ಕಲಿಯಲು ತುಡಿಯುತ್ತಿದ್ದ, ನಿಗರ್ವಿ ವ್ಯಕ್ತಿ ಬಾಲಸುಬ್ರಹ್ಮಣ್ಯಂ ಅವರು.ಹಾಡಿನ ಸಂದರ್ಭಕ್ಕೆ ತಕ್ಕಂತೆ ದನಿ ನೀಡುವ ಇವರ ಚತುರತೆಗೆ ಸಂಗೀತ ಪ್ರೇಕ್ಷಕರು ಫಿದಾ ಆಗಿದ್ದರು.ಸಂಗೀತ ಕ್ಷೇತ್ರದಲ್ಲಿ ಮೈಲುಗಲ್ಲನ್ನು ಸೃಷ್ಟಿಸಿದ್ದರೂ ಕೂಡ ನಾನು ಸಂಗೀತ ಕಲಿತೇ ಇಲ್ಲ,ನನಗೆ ಶಾಸ್ತ್ರೀಯ ಸಂಗೀತ ಜ್ಞಾನ ಇಲ್ಲ ಎನ್ನುವ ಮುಗ್ಧತೆ ಅವರದು. ಎಳವೆಯಲ್ಲಿಯೇ ಎಸ್ಪಿಬಿ ಅವರ ಹಾಡುಗಳನ್ನು ಕೇಳುತ್ತಿದ್ದ ನಮಗಂತೂ ಅವರ ಅಗಲುವಿಕೆಯಿಂದ ಶೂನ್ಯಭಾವ ಆವರಿಸಿದೆ.

       ಅವರು ಈಟಿವಿಯಲ್ಲಿ ನಡೆಸಿಕೊಡುತ್ತಿದ್ದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದ ಮೂಲಕ ಕನ್ನಡಿಗರೆಲ್ಲರಿಗೆ ಅತ್ಯಂತ ಆಪ್ತ ಕುಟುಂಬ ಸದಸ್ಯರಾಗಿಬಿಟ್ಟಿದ್ದರು.ಯಾವಾಗ ಭಾನುವಾರ ಬರುತ್ತೋ,ರಾತ್ರಿ ತುಂಬಿ ಹಾಡುವೆನು ಕಾರ್ಯಕ್ರಮ ಶುರುವಾಗುತ್ತೋ ಅಂತ ಚಾತಕಪಕ್ಷಿಯಂತೆ ಕಾಯುವ ಸರದಿ ನಮ್ಮದಾಗಿತ್ತು. ಕನ್ನಡದ ಅಪರೂಪದ ವಚನಗಳನ್ನು,ಜನಪದ ಸೊಗಡಿನ ಹಾಡಿನ ಸಾಲುಗಳನ್ನು ಹಾಡಿ ಆರಂಭಿಸುತ್ತಿದ್ದ ಕಾರ್ಯಕ್ರಮದಲ್ಲಿ ;ಎಲೆಮರೆಯ ಕಾಯಿಯಂತಿದ್ದ ಅನೇಕ ಕನ್ನಡಿಗರನ್ನು ನಾಡಿಗೆ ಪರಿಚಯಿಸಿದ್ದರು. ಅವರ ಅನುಭವದ ಬಗ್ಗೆ ಅದೆಷ್ಟು ತನ್ಮಯತೆಯಿಂದ ವಿಚಾರಿಸಿಕೊಳ್ಳುತ್ತಿದ್ದರು....!! ಪ್ರತಿಯೊಬ್ಬ ಅಭ್ಯರ್ಥಿಗೂ ಕೂಡ ಅವರು ನೀಡುತ್ತಿದ್ದ ಪ್ರೋತ್ಸಾಹ, ಸಲಹೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಕಾರ್ಯಕ್ರಮ ಕೊನೆಗೊಳಿಸುವ ಮುನ್ನ ಸಮಾಜಕ್ಕೆ ಹಿತನುಡಿ ಎಂದು ಕೆಲವು ಸಾಲುಗಳನ್ನು ಆಡುತ್ತಿದ್ದುದು ಕಾರ್ಯಕ್ರಮಕ್ಕೊಂದು ಮೆರುಗನ್ನು ಕೊಟ್ಟಿತ್ತು.ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರಿಗೂ ಆಪ್ತವಾಗಿತ್ತು.

    'ವೀಕೆಂಡ್ ವಿದ್ ರಮೇಶ್' ಕಾರ್ಯಕ್ರಮದಲ್ಲಿ ಎಸ್ಪಿಬಿ ಅತಿಥಿಯಾಗಿ ಭಾಗವಹಿಸುತ್ತಾರೆ ಅಂದಾಗ ಕನ್ನಡನಾಡು ಇಡೀ ತುದಿಗಾಲಲ್ಲಿ ನಿಂತು. ಅವರ ಜೀವನ,ಕುಟುಂಬ,ಸಾಧನೆಯ ಬಗ್ಗೆ ಎಲ್ಲರಲ್ಲೂ ಕುತೂಹಲ ಇತ್ತು. ತಮ್ಮ ಜೀವನದ ಘಟನೆಗಳನ್ನು ಅವರು ಹೇಳುತ್ತಾ ಹೋಗುತ್ತಿದ್ದಂತೆ ಇವರು ನಮ್ಮ ಕುಟುಂಬದ ಆಪ್ತರಲ್ಲೊಬ್ಬರು ಎಂಬ ಭಾವನೆ ಮೂಡಿತ್ತು.. ಮೂಲತಃ ತೆಲುಗು ಭಾಷಿಕರಾದರೂ ಕನ್ನಡದ ಮೇಲೆ ಅದೆಷ್ಟು ಪ್ರೀತಿ,ಅಭಿಮಾನ!!. ಕನ್ನಡಿಗರೆಂದರೆ ನನಗೆ ಅತ್ಯಂತ ಆಪ್ತ ಎಂದು ಅದೇ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

     ಅವರು ಹಾಡಿರುವ ಭಕ್ತಿಗೀತೆಗಳು ಕೇಳುತ್ತಲೇ ನಮ್ಮ ದಿನವು ಆರಂಭವಾಗುತ್ತಿತ್ತು. ಚಿತ್ರಗೀತೆಗಳು ಕಲಾರಸಿಕರನ್ನು ತನ್ನತ್ತ ಸೆಳೆಯುತ್ತಾ ಅದ್ಭುತ ಯಶಸ್ಸನ್ನು ಗಳಿಸುತ್ತಿದ್ದವು. ಆಂಧ್ರದ ಚಿತ್ತೂರಿನ ಸಮೀಪದ ಗ್ರಾಮವೊಂದರಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದವರು ಶ್ರೀಪತಿ ಪಂಡಿತಾರಾಧ್ಯುಲು ಬಾಲಸುಬ್ರಹ್ಮಣ್ಯಂ. ಅಪ್ಪ ಹರಿಕಥಾ ವಿದ್ವಾಂಸರು. ಬಾಲ್ಯದಲ್ಲಿ ತಂದೆಯ ಜೊತೆ ಸೇರಿಕೊಂಡು ಹಾರ್ಮೋನಿಯಂ ಮತ್ತು ಕೊಳಲನ್ನು ಕಲಿತುಕೊಂಡಿದ್ದರು. ಇಂಜಿನಿಯರಿಂಗ್ ಪದವಿ ಓದಿದ್ದರೂ ಅಂತಿಮ ಪರೀಕ್ಷೆಯ ಬರೆಯಲಾಗಲಿಲ್ಲ ಎಂದು 'ವೀಕೆಂಡ್ ವಿದ್ ರಮೇಶ್' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದ ನೆನಪು. ಇವರ ಧ್ವನಿಯನ್ನು ಗುರುತಿಸಿದ ಜಾನಕಮ್ಮ ಇವರನ್ನು ಹಾಡುವಂತೆ ಪ್ರೋತ್ಸಾಹಿಸಿದ್ದರು. ಹಾಗೆಯೇ ಸ್ಪರ್ಧೆಯೊಂದರಲ್ಲಿ ಹಾಡಿದ 'ರಾಗಂ ಅನುರಾಗಂ' ಗೀತೆ ಅವರ ಬದುಕಿನಲ್ಲಿ ಮಹತ್ವದ ತಿರುವು ದೊರಕಿಸಿಕೊಟ್ಟಿತು. ಎಸ್ಪಿಬಿ ಅವರಿಗೆ ಮಹಮ್ಮದ್ ರಫಿ ಅವರ ಹಾಡುಗಳೆಂದರೆ ಬಲು ಪ್ರಿಯವಂತೆ. ಸದಾ ಹಾಡುವುದರಲ್ಲಿ ತಲ್ಲೀನರಾಗಿರುತ್ತಿದ್ದರು . ಎಸ್ಪಿಬಿ ಅವರಿಗೆ ಕುಟುಂಬದವರ ಜೊತೆ ಹೆಚ್ಚು ಬೆರೆಯಲು ಆಗಲಿಲ್ಲವಂತೆ. "ಮಕ್ಕಳ ಆಟ ಪಾಠವನ್ನು ನೋಡುತ್ತಾ ಅವರ ಬೆಳವಣಿಗೆಯನ್ನು ಸಂಭ್ರಮಿಸಲು ನನಗೆ ಸಾಧ್ಯವೇ ಆಗಲಿಲ್ಲ. ನನ್ನ ಮಕ್ಕಳು ಯಾವ ತರಗತಿಯಲ್ಲಿ ಓದುತ್ತಿದ್ದಾರೆ ಎಂದು ಕೂಡ ನನಗೆ ಗೊತ್ತಿರಲಿಲ್ಲ. ಅಪರೂಪಕ್ಕೊಮ್ಮೆ ನೀನು ಯಾವ ತರಗತಿ..? ಓದು ಹೇಗೆ ನಡೆಯುತ್ತಿದೆ ..?ಎಂದು ಅವರಲ್ಲೇ ಕೇಳುತ್ತಿದ್ದೆ. ಇದೆಲ್ಲವನ್ನೂ ನನ್ನ ಶ್ರೀಮತಿಯವರ ನಿಭಾಯಿಸುತ್ತಿದ್ದರು.."ಎಂದು ಅವರ ಮನದಾಳದ ನುಡಿಯನ್ನು ವೀಕೆಂಡ್ ವಿದ್ ರಮೇಶ್ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಜಾನಕಮ್ಮನ ಜೊತೆ ಅವರ ಹಾಡಿರುವ ಹಾಡುಗಳು ,ಚಿತ್ರಾ ಅವರ  ಜೊತೆ ಹಾಡಿರುವ ಹಾಡುಗಳು ಜನರನ್ನು ಮೋಡಿ ಮಾಡಿದ್ದವು.

     'ಕಾಣದಂತೆ ಆಕ್ರಮಿಸಿದ  ವೈರಿ ಕೊರೋನಾ' ಎಂದು ಜಯಂತ ಕಾಯ್ಕಿಣಿಯವರ ಜಾಗೃತಿ ಗೀತೆಯನ್ನು ಹಾಡಿ ಕೊನೆಗೆ ಕೊರೋನಾದಿಂದಲೇ ಪಂಚಭೂತಗಳಲ್ಲಿ ಲೀನವಾಗಿರುವುದು ಖೇದಕರ.ಅವರ ದೇಹ ಅಳಿದರೂ ಮಾಧುರ್ಯ ತುಂಬಿದ ಗಾಯನದ ಮೂಲಕ ಅವರು ಅಮರರಾಗಿದ್ದಾರೆ.ಇನ್ನೊಮ್ಮೆ ಹುಟ್ಟಿ ಬನ್ನಿ ಎಸ್ಪಬಿ ..ಮತ್ತೊಮ್ಮೆ ಹಾಡಿ ಎದೆತುಂಬಿ..ಬೀಳ್ಕೊಡುತಿಹೆವು ಕಂಬನಿತುಂಬಿ..🙏🙏

✍️... ಅನಿತಾ ಜಿ.ಕೆ.ಭಟ್.
26-09-2020.

2 comments: