💃 ನಾನೊಬ್ಬಳು ದ್ವಾದಶೀ 💃
ಸುತ್ತಲೂ ಚೆಲ್ಲಿದೆ ಇರುಳ ಹಾಸು
ಕಂಗಳಲಿ ತುಂಬಿದೆ ಬಣ್ಣದ ಕನಸು
ಬಡವಿ ನಾ ಬರಿ ಹನ್ನೆರಡರ ವಯಸು
ಮರೆಯಲಿ ನಿಂತು ಕೊರಗಿದೆ ಮನಸು||
ಖುಷಿಯ ಅಲೆಯಲಿ ತೇಲುತಿದ್ದೆ
ಕಾಲ ಗೆಜ್ಜೆಯ ಕುಣಿಸಿ ಆಡುತಿದ್ದೆ
ಮನೆ ಮನದ ಒಳಹೊರಗೆ
ಉಕ್ಕಿದೆ ಸಂತಸದ ಹೊನಲೆನಗೆ||
ಧರೆಗಿಂದು ಬಂದಿಹನು ವಸಂತ ಋತು
ನನ್ನೊಳಗೆ ಅದೇ...ಹೆಣ್ತನದ ಋತು
ಸುತ್ತೆಲ್ಲರ ದೃಷ್ಟಿಯಲಿ ನಾ ಪ್ರೌಢಹೆಣ್ಣು
ಸಹಿಸಲಾರೆನು ನಾ ಕಾಮದ ಓರೆಗಣ್ಣು||
ಗೆಳೆಯರ ಜೊತೆಯಾಟಕೆ ಬಿತ್ತು ಬೇಲಿ
ಇಣುಕುವೆನು ಹೀಗೆ ಮರದ ಸಂದಿಯಲಿ
ಕೋಗಿಲೆಯ ಇಂಪಾದ ಗಾನ; ನನಗೇಕೆ ಈ ಬಂಧನ
ಷರತ್ತುಗಳ ವಿಧಿಸಿರುವುದೇಕೆ ಈ ಜೀವನ||
ಕೈಬಳೆ ತೊಟ್ಟು ಮಲ್ಲೆಮಾಲೆ ಮುಡಿದು
ಕನ್ನಡಿಯ ಮುಂದೆ ನಿಲುವ ವಯಸಿದು
ಪ್ರಜ್ಞಾವಂತ ಮನುಜರೇ...
ಮೌಢ್ಯತೆಯ ಗೋಡೆಗಳ ಕೆಡವ ಬನ್ನಿ
ಕತ್ತಲೆಯಲಿ ಕರಗಿರುವ ದ್ವಾದಶಿಯ
ಮೊಗದಿ ನಗುವ ತನ್ನಿ||
ಇಂತಿ,
ನಿಮ್ಮ ಪ್ರೀತಿಯ,
ದ್ವಾದಶಿ...
🙏🙏
✍️...ಅನಿತಾ ಜಿ.ಕೆ.ಭಟ್.
22-09-2020.

ಚಂದದ ಕವನ..
ReplyDeleteಥ್ಯಾಂಕ್ಯೂ 💐🙏
Deleteಸುಂದರವಾದ ಕವನ ಹರೆಯದ ತಳಮಳ ಸರಮಾಲೆ 👌✍
ReplyDeleteಥ್ಯಾಂಕ್ಯೂ 💐🙏
Delete