Saturday, 5 September 2020

ಬಾಳ ದಾರಿಗೆ ಬೆಳಕಾದ ಗುರುಗಳು

 


ಬಾಳ ದಾರಿಗೆ ಬೆಳಕಾದ ಗುರುಗಳು

        ಹುಟ್ಟಿದ ಮಗುವೊಂದು ತನ್ನ ಅಳುವಿನಿಂದ ಭೂಮಿಯಲ್ಲಿ ತನ್ನ ಇರುವಿಕೆಯನ್ನು ಪ್ರಕಟಪಡಿಸುತ್ತದೆ .ಆ ಮಗುವಿಗೆ ಆಹಾರ ವಿಹಾರ ಸಂಸ್ಕಾರಗಳನ್ನು ಕಲಿಸುವವಳು ತಾಯಿ.ಮಗು ತಾನು ಮೊದಲು ಅನುಕರಿಸುವುದು ಮಾತೆಯನ್ನು.ಬೆಳೆಯುತ್ತ ಹೋದಂತೆ ತನ್ನ ತಂದೆ ತಾಯಿ ಕುಟುಂಬದಿಂದ ಪರಿಸರದಿಂದ ನಡೆನುಡಿಗಳನ್ನ ಅನುಕರಿಸುತ್ತಾ ಹೋಗುತ್ತದೆ.ಆದ್ದರಿಂದಲೇ ಪ್ರತೀ ವ್ಯಕ್ತಿಗೂ ಮೊದಲ ಗುರು ತಾಯಿಯೇ.

      "ಮನೆಯೆ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು"ಎಂಬ ಉಕ್ತಿಯಂತೆ ಮೊದಲ ಗುರು, ಶಿಕ್ಷಕಿ,ಅರಿವಿನ ದೀವಿಗೆಯಾಗುವವಳು ತಾಯಿ.ತೊದಲು ಮಾತನ್ನು ತಿದ್ದಿ ಸ್ಪಷ್ಟವಾಗಿ ಮಾತನಾಡಲು, ಧೈರ್ಯದಿಂದ ಬದುಕನೆದುರಿಸಲು ತಂದೆತಾಯಿ ಕಲಿಸುವ ಬಾಲ್ಯದ ದಿನಗಳೇ ಜೀವನಕ್ಕೆ ಭದ್ರಬುನಾದಿ.

     ಶಿಕ್ಷಣ ಪಡೆಯಲು ಶಾಲೆಯ ಮೆಟ್ಟಿಲೇರಿದಾಗ ಗುರುಗಳ ಮುಖದರ್ಶನವಾಗುತ್ತದೆ. ಓದಿಬರೆಯಲು ಕಲಿಸಿ ಬಾಳುಬೆಳಗುವಂತೆ ಮಾಡುವವರು ಶಿಕ್ಷಕರು.ಪುಟ್ಟ ಚಿಣ್ಣರಿಗೆ ಅಕ್ಷರಾಭ್ಯಾಸ ಮಾಡಿಸಿ ತಾವು ಕೂಡ ವಿದ್ಯಾರ್ಥಿಗಳಾಗಿ ದಿನೇದಿನೇ ಮಕ್ಕಳಿಂದಲೂ ಕಲಿಯುತ್ತಾ ಹೋಗುತ್ತಾರೆ.ಮಕ್ಕಳ ತುಂಟಾಟಗಳಿಗೆ ಕಡಿವಾಣ ಹಾಕಿ ಓದಿನಲ್ಲಿ ಏಕಾಗ್ರತೆ ಮೂಡಿಸುವ ನಿಟ್ಟಿನಲ್ಲಿ ಕೆಲವೊಮ್ಮೆ ಶಿಸ್ತಿನ ಶಿಕ್ಷಕರು.. ಜೋರಿನ ಶಿಕ್ಷಕರು ಎನಿಸಿಕೊಳ್ಳುತ್ತಾರೆ.. ಆದರೆ ಅದರ ಹಿಂದಿನ ಉದ್ದೇಶ ಒಳ್ಳೆಯದೇ ಆಗಿರುತ್ತದೆ.

      ಎಷ್ಟೋ ಶಿಕ್ಷಕರು ವಿದ್ಯಾರ್ಥಿಗಳ ಬಡತನ,ಆಹಾರದ ಕೊರತೆ,ಬಟ್ಟೆ, ಪುಸ್ತಕಗಳ ಅಭಾವವನ್ನು ಮನಗಂಡು ತಾವೇ ಕೈಯಾರೆ ಭರಿಸಿ ವಿದ್ಯಾರ್ಜನೆಗೆ ಅನುಕೂಲ ಕಲ್ಪಿಸಿಕೊಡುತ್ತಾರೆ.ಮಕ್ಕಳ ಅನಾರೋಗ್ಯ ಸಂದರ್ಭದಲ್ಲಿ ತಾವೇ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಉಪಚರಿಸಲೂಬಹುದು. ಇದಕ್ಕೆ ಪ್ರತಿಯಾಗಿ ಏನು ಕೊಟ್ಟರೂ ಕಡಿಮೆಯೇ.ಅದಕ್ಕೇ ಹೇಳುವುದು ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ ಎಂದು.

      ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಸಂಬಂಧ ಗಟ್ಟಿಯಾಗುವುದು , ಆಳವಾಗಿ ಬೇರೂರುವುದು ವಿದ್ಯಾರ್ಥಿಗಳ ಕಲಿಕಾ ಆಸಕ್ತಿ,ಸೃಜನಶೀಲತೆಯ ಮೇಲಿದೆ.ಗುರುಗಳುತನ್ನ ಶಿಷ್ಯರು ತನಗಿಂತ ಹೆಚ್ಚಿನ ಸಾಧನೆ ಮಾಡಬೇಕೆಂದು ಬಯಸಿ ಹುರಿದುಂಬಿಸುತ್ತಾರೆ .. ತಾವು ಅದೇ ಸ್ಥಾನದಲ್ಲಿ ನಿಂತು ತೃಪ್ತಿ ಪಟ್ಟುಕೊಳ್ಳುತ್ತಾರೆ.ಸೌಲಭ್ಯಗಳ ಕೊರತೆ,ತನ್ನ ವೈಯಕ್ತಿಕ ಸಮಸ್ಯೆ,ವೇತನದ ಪೂರೈಕೆಯಲ್ಲಿ ವ್ಯತ್ಯಯ ಏನೇ ಇರಲಿ ಶಿಕ್ಷಕರು ಮಾತ್ರ ಅದಾವುದನ್ನೂ ತೋರಗೊಡದೆ ಬೋಧನೆಯಲ್ಲೇ ಆತ್ಮತೃಪ್ತಿ ಕಂಡುಕೊಳ್ಳುತ್ತಾರೆ.

     ಇಂತಹ ಆದರ್ಶ ಶಿಕ್ಷಕರ ವಿದ್ಯಾರ್ಥಿಗಳಾದ ನಾವೆಲ್ಲ ಧನ್ಯರು.ಶಿಕ್ಷಕರ ದಿನಾಚರಣೆಯ ದಿನ ಮಾತ್ರ ಗುರುಗಳನ್ನು ಅಭಿನಂದಿಸುವುದು ಎಂದಾಗಬಾರದು..ವಿದ್ಯೆ ಕಲಿಸಿದ ಗುರುಗಳು ಸದಾ ಸ್ಮರಣೀಯರು.

      ನಾನು ಕಲಿತ ಸರಕಾರಿ ಪ್ರಾಥಮಿಕ ಶಾಲೆ ಒಂದು ದಕ್ಷಿಣ ಕನ್ನಡದ ಕುಗ್ರಾಮದಲ್ಲಿದೆ.ನಿತ್ಯವೂ ಎರಡು ಮೂರು ಕಿಲೋಮೀಟರ್ ದೂರದಿಂದ ನಡೆದುಕೊಂಡು ಬರುತ್ತಿದ್ದ ನಾರಾಯಣ ಶೆಟ್ಟಿ ಅನ್ನುವ ಗುರುಗಳಿದ್ದರು.ಒಂದುದಿನವೂ ಸಮಯ ಮೀರಿ ಬಂದವರಲ್ಲ.ದೂರದ ಗುಡ್ಡದಲ್ಲಿ ಅವರು ನಡೆದು ಬರುತ್ತಿದ್ದಾಗ ಅವರ ಬಿಳಿ ಅಂಗಿ ,ಬಿಳಿ ಪಂಚೆಯನ್ನು ಶಾಲೆಯಿಂದಲೇ ವೀಕ್ಷಿಸಿ ಮಕ್ಕಳ ಗುಂಪು ಚುಪ್.! ಎಂದು ಕುಳಿತುಕೊಳ್ಳುತ್ತಿತ್ತು.. ಖಡಕ್ ವ್ಯಕ್ತಿತ್ವ ವಿದ್ಯಾರ್ಥಿಗಳ ಪಾಲಿಗೆ.ಆದರೆ ಬಹಳ ಒಳ್ಳೆಯ ಮನಸ್ಸಿನವರು.

      ಯಾವುದೇ ವಿಷಯವನ್ನು ಮಕ್ಕಳಿಗೆ ಎಷ್ಟು ಸಲ ಬೇಕಾದರೂ ಬೋಧಿಸಲು ಹಿಂದೆಮುಂದೆ ನೋಡರು.ಮಕ್ಕಳಿಗೆ ತಿಳಿದ ಮೇಲೆಯೇ ಮುಂದಿನ ಪಾಠ.ನಿತ್ಯದ ಮನೆಕೆಲಸ ಮಾಡದಿದ್ದವರಿಗೆ ಏಟು ನಿಶ್ಚಿತ.ಅವರಿಂದಾಗಿ ಹಲವು ತುಂಟ ಮಕ್ಕಳೂ ಓದಿ ಸರಿದಾರಿಗೆ ಬಂದಿರುವರು.ಶಾಲೆಬಿಟ್ಟ ಮಕ್ಕಳನ್ನು ಕೂಡ ಹೆತ್ತವರ ಮನವೊಲಿಸಿ ಮತ್ತೆ ಶಾಲೆಗೆ ಬರುವಂತೆ ಮಾಡಿ ಕಲಿಯಲು ಒತ್ತಾಯಿಸುವವರು.ಹಾಗೆ ಅವರಿಂದ ಮರುಸೇರ್ಪಡೆಗೊಂಡವರಲ್ಲಿ ಇಂದು ಕೆಲವರು ಬ್ಯಾಂಕ್, ಶಾಲೆ, ಸರ್ಕಾರಿ ಕಛೇರಿಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ.

     ಒಂದರಿಂದ ಏಳನೇ ತರಗತಿಯವರೆಗಿನ ಶಾಲೆಯಲ್ಲಿ ಕೆಲವು ಸಮಯ ಒಬ್ಬರು ಅಥವಾ ಇಬ್ಬರು ಅಧ್ಯಾಪಕರು ಮಾತ್ರ ಇದ್ದ ಸಂದರ್ಭವೂ ಇತ್ತಂತೆ..ಆಗಲೂ ಕೂಡ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಬೋಧಿಸುತ್ತಾ ಹಲವಾರು ವರ್ಷಗಳ ಕಾಲ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆಯುತ್ತಿತ್ತು ಎಂದು ಗುರುಗಳು ಸದಾ ಸ್ಮರಿಸುತ್ತಿದ್ದರು ..  ಅದೆಲ್ಲ ಸಾಧ್ಯವಾಗಿದ್ದು ಅವರ ಶಿಸ್ತು  ,ಸಂಯಮ,ಬೋಧನಾ ಶೈಲಿಯಿಂದ..ಮುಂದೆ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಿಂತು ಹೋಯಿತು.ಪುಣಚಾ ಗ್ರಾಮದ ದಂಬೆ ಎಂಬಲ್ಲಿರುವ ಸರಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಿದ ನಾರಾಯಣ ಶೆಟ್ಟಿ ಗುರುಗಳು ನನ್ನ ಮೆಚ್ಚಿನ ಗುರುಗಳು.ಅವರು ಪಾಠ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು.ಜೀವನದಲ್ಲಿ ಅನುಕರಣೀಯವಾದ ಆದರ್ಶ ನಡೆ ನುಡಿ ಅವರದು.ಅವರ ಅನುಭವದ ಹಿತನುಡಿಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿವೆ.

       ಈಗ ಆ ಶಿಕ್ಷಕರು ಸೇವೆಯಿಂದ ನಿವೃತ್ತರಾಗಿದ್ದಾರೆ.ಶಾಲೆಯೂ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ,ಉತ್ತೇಜನ ನೀಡುತ್ತಿದ್ದ  ,ಸತತ ನೂರಕ್ಕೆ ನೂರು ಫಲಿತಾಂಶ ಗಳಿಸುತ್ತಿದ್ದ ಹಳ್ಳಿಯ ಹೆಮ್ಮೆಯ ಶಾಲೆ ಎಂಬ ಹೆಸರು ಈಗ ಇತಿಹಾಸ.

        ಮಣ್ಣಿನ ಮುದ್ದೆಯೊಂದನ್ನು ಸುಂದರ ಮೂರ್ತಿಯನ್ನಾಗಿಸುವ ಕಲಾವಿದನಂತೆ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವವರು.ಭವ್ಯ ಭಾರತದ ನಿರ್ಮಾಣದಲ್ಲಿ ಅವರ ಕೊಡುಗೆ ಅನನ್ಯವಾದುದು.ಮಕ್ಕಳನ್ನು ಸಚ್ಚಿಂತನೆಯ ಹಾದಿಯಲ್ಲಿ ನಡೆಸಿ ಅವರಲ್ಲಿ ದೇಶಾಭಿಮಾನ ಮೂಡಿಸುವ ನವಭಾರತದ ನಿರ್ಮಾತೃಗಳು.'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ'ಎಂಬ ದಾಸರಪದದಂತೆ ಗುರುವು ತೋರಿದ ಸನ್ಮಾರ್ಗದಲ್ಲಿ ನಡೆದು ಧನ್ಯರಾಗೋಣ .ಗುರುವೃಂದವನ್ನು ಗೌರವಿಸೋಣ..

ಹಬ್ಬಿದ ಗಾಢಾಂಧಕಾರವ ಸರಿಸಿ
ಜ್ಞಾನದ ಬೆಳಕ ಕಿಂಡಿಯ ತೆರಿಸಿ
ಗುರಿಯ ಕಡೆಗೊಯ್ಯುವ
ಗುರುತರ ಕಾರ್ಯಮಾಡುವ
ಜನನಿ,ಗುರುಮಹಿಮರಿಗೆ
ಬರಹದ ಗೌರವಾರ್ಪಣೆ..

ಧನ್ಯವಾದಗಳು 🙏

✍️.. ಅನಿತಾ ಜಿ.ಕೆ.ಭಟ್.
05-09-2020.

2 comments: