Wednesday, 9 September 2020

ಮುದ್ದು ಮಗಳ ಸೀರೆ ಚಾಲೆಂಜ್

 




ನಾನು ನನ್ನ ಆದ್ಯಾಳಿಗೆ ಊಟ ಮಾಡಿಸಲು ಕಷ್ಟಪಡುತ್ತಿದ್ದೆ.ಒಂದು ತುತ್ತು ಉಂಡ ಆದ್ಯಾ ಡೈನಿಂಗ್ ಟೇಬಲ್ ಅಡಿಯಲ್ಲಿ ಕುಳಿತು ನನ್ನನ್ನು ಆಟವಾಡಿಸುತ್ತಿದ್ದಳು.
"ನಾನು ಸಿಗಲಾರೆ ..."ಎಂಬ ತೊದಲು ಮಾತು ಬೇರೆ.. ಹೀಗಾದರೆ ಪೌಷ್ಟಿಕಾಂಶಗಳು ಮಗುವಿಗೆ ಸಿಗುವುದು ಹೇಗಪ್ಪಾ ಎಂಬ ಚಿಂತೆ ನನಗೆ.. ಆಗಲೇ ಕಿಲಕಿಲ ನಗುತ್ತಾ ಬಳಿ ಬಂದಳು ನನ್ನ ಬಂಗಾರಿ.. "ಅಮ್ಮಾ..ಹಾಂ..ಖಾಲಿ.." ಎನ್ನುತ್ತಾ ತನ್ನ ಬಾಯೊಡೆದು ತೋರಿಸಿದಳು... "ಹ್ಞಾಂ..ಹಾಗೇ..ಜಾಣೆ ನನ್ನಕಂದ.." ಎನ್ನುತ್ತಾ ಇನ್ನೊಂದು ತುತ್ತನ್ನು ಬಾಯೊಳಗಿಟ್ಟೆ.. "ಆಹಾ... ಎಷ್ಟು ರುಚಿ.. "ಎಂದು ಬಾಯಿಚಪ್ಪರಿಸುವ ನನ್ನ ಮಾಮೂಲಿ ಅಭ್ಯಾಸವನ್ನು ಮಾಡಿದೆ.. ನಾನು ಹೀಗೆ ಮಾಡಿಯೇ ನನ್ನ ಆದ್ಯಾಳ ಹೊಟ್ಟೆ ತುಂಬಿಸುವುದು...

ಆಟದೊಂದಿಗೆ ಮಗಳ ಊಟ ಸಾಗುವಾಗ ಅರ್ಧ ಗಂಟೆ ಹೇಗೆ ಕಳೆದುಹೋಗುತ್ತದೆಂದೇ ತಿಳಿಯುತ್ತಿರಲಿಲ್ಲ.ಹೊಟ್ಟೆತುಂಬಿ ಡರ್ರ್...ಅಂತ ಮಗಳು ತೇಗಿದರೆ ಅಮ್ಮನಿಗೆ ಹೊಟ್ಟೆತುಂಬಿದಷ್ಟೇ ಸಂತೃಪ್ತಿ.

ಕಾಲಿಂಗ್ ಬೆಲ್ ಆಯಿತು.. ಓಹ್.. ಮಗಳಿಗೆ ಉಣಿಸುತ್ತಾ ಯಾವುದೋ ಲೋಕದಲ್ಲಿ ಕಳೆದುಹೋದವಳಿಗೆ ಮುರಳಿ ಬಂದದ್ದೇ ಗೊತ್ತಾಗಲಿಲ್ಲ.. ಬೇಗನೆ ಹೋಗಿ ಬಾಗಿಲು ತೆರೆದೆ.. ಆಯಾಸಗೊಂಡು ಬಂದಿದ್ದರು ಮುರಳಿ...ಕುಡಿಯಲು ನೀರು ಒಂದು ಲೋಟ, ನನ್ನ ಪ್ರೀತಿಯ ಕುಡಿ ನೋಟ ,ಮಗಳ ತೊದಲು ನುಡಿ ತುಂಟಾಟ ಇಷ್ಟು ದೊರೆತಾಗ ಮುರಳಿಯ ಅರ್ಧ ಬಳಲುವಿಕೆ ಕಡಿಮೆಯಾದಂತೆ..

"ಅಪ್ಪಾ..."ರಾಗ ಎಳೆದಳು ಆದ್ಯಾ..
"ಏನಮ್ಮಾ... "ಎಂದು ಮುದ್ದಿನಿಂದ ಎತ್ತಿಕೊಂಡರು..
"ಅಪ್ಪಾ..ನಂಗೂ ಸಾರಿ ಬೇಕು.. "ಎಂದಳು ತೊದಲುತ್ತಾ ತನ್ನ ಅಂಗಿಯನ್ನೆಳೆದು.
"ನಿಂಗೂ ಸಾರಿ ಬೇಕಾ..ಹ್ಹ ಹ್ಹ ಹ್ಹಾ.. ಅದು ಅಮ್ಮಂಗೆ... ನೀನಿನ್ನೂ ಪುಟಾಣಿ ಪಾಪು.."
"ಊಹೂಂ..ನಂಗೂ ಬೇಕು.."

ಮುರಳಿ ನನ್ನತ್ತ ತಿರುಗಿ "ಏನಂತೆ ಮಗಳಿಗೆ...?"
"ಇವತ್ತು ಸೀರೆ ಚಾಲೆಂಜ್ ಇತ್ತು ರೀ..ನನ್ನ್ ಗೆಳತಿ ಪ್ರಿಯಾ ನಂಗೆ ಸಾರೀ ಚಾಲೆಂಜ್ ಮಾಡಿದ್ಳು..."
"ಹಾಗೆ ಸಂಗತಿ.. ಅದನ್ನು ನೋಡಿ ಆದ್ಯಾ...ತಾನೂ..."
"ನಾನೇನು ಅವಳಿಗೆ ಹೇಳಿಲ್ಲ ನೋಡಿ...ನನ್ನ ಹಳೇ ಆಲ್ಬಂ ನಲ್ಲಿದ್ದ ಧೂಳನ್ನೊಮ್ಮೆ ಒರೆಸಿ ಅದರಲ್ಲಿದ್ದ ಪಟವನ್ನು ಹಾಕಿದ್ದೆ.."
"ಮತ್ತೆ ಅವಳಿಗೆ ಹೇಗೆ ಗೊತ್ತಾಯ್ತೇ...ವಿನಿತಾ.."

"ಇವಳಿಗೆ ಊಟ ಮಾಡಿಸ್ತಾ ಇದ್ನಾ..ಅರ್ಧ ಗಂಟೆ ಆಗುತ್ತೆ.. ಇಡೀ ಮನೆ ಓಡೋದು, ಟೇಬಲ್ ಕೆಳಗೆ ತೂರೋದು ಇರುತ್ತಲ್ಲ..ಆಗ ನನ್ನ ಟೈಂ ಪಾಸ್ ಗೆ ಸ್ವಲ್ಪವೇ ಸ್ವಲ್ಪ ಮೊಬೈಲ್ ಮುಟ್ಟಿದ್ದೆ..ಊಟ ಬೇಡ ಅಂತಾ ಹಠ ಹಿಡಿದು ಟೇಬಲ್ ಅಡಿಯಲ್ಲಿ ಅವಿತು ಕುಳಿತಿದ್ದ ಆದ್ಯಾ ಕೂಡಲೇ ಬಂದ್ಬಿಟ್ಳು...ಅವಳ ಬಾಯೊಳಗೊಂದು ತುತ್ತು...ಅಮ್ಮ ಗೆಳತಿಯರಿಗೆ ಲೈಕ್ ಒತ್ತು.."

"ಓಹೋ.. ಹೀಗೆ ಅಮ್ಮನ ಮೊಬೈಲ್ ಚಟ...ಮಗಳಿಗೀಗ ಸೀರೆ ಬೇಕೆಂಬ ಹಠ.."
"ಹೂಂ..ಎಲ್ಲರ ಪಟ ನೋಡಿ ನಂಗೂ ಬೇಕು ಎಂದು ಆಗಲೇ ಕೇಳಲು ಆರಂಭಿಸಿದ್ದಳು.."
"ಮಗಳಿಗೆ ಊಟಮಾಡಿಸುವಾಗ, ನಿದ್ರೆ ಬಂದಾಗ ಮೊಬೈಲ್ ನೋಡ್ಬೇಡ ಅಂತಾ ಎಷ್ಟು ಹೇಳಿದ್ರು ಅರ್ಥ ಆಗಲ್ಲ ನನ್ನ ವಿನಿತಾಗೆ..."

"ಅಪ್ಪಾ..ನಂಗೂ ಸೀರೆ ಪಟ ಬೇಕು...ನಾನೂ ಸೀರೆ ಚಾಲೆಂಜ್ ಮಾಡ್ತೀನಿ.."
ಗೂಗಲ್ ನಿಂದ ಯಾರದೋ ಪಟ ಹುಡುಕಿ "ಇದು ನೀನೇ..ನನ್ನ ಆದ್ಯಾ..."ಎಂದ ಮುರಳಿ..
"ಊಹೂಂ.. ಇದು ಆದ್ಯಾ ಅಲ್ಲ... ವಿದ್ಯಾಕ್ಕ.."ಅನ್ನಬೇಕೇ...

ಮುರಳಿ ಮಗಳನ್ನು ಸಮಾಧಾನಪಡಿಸಿ ಸ್ನಾನ ಮಾಡಿ ಬಂದರು.. ಊಟಕ್ಕೆ ಕುಳಿತ ಅಪ್ಪನಲ್ಲಿ ಪುನಃ ಅದೇ ರಾಗ..ಆದ್ಯಾಳದ್ದು..
"ನನ್ನ ಬಂಗಾರೀ..ಈಗ ಕತ್ತಲಾಯಿತು ನೋಡು.. ನಾಳೆ ತೆಗೆದುಕೊಂಡು ಬರೋಣ"ಎಂದು ಹೇಳಿ ವಿಷಯಾಂತರ ಮಾಡಿದರು.

ಆದ್ಯಾ ಅಪ್ಪನ ಜೊತೆ ಸೀರೆ ಸೀರೆ ಎಂದು ಬಾಯಲ್ಲಿ ತಾನೇ ಸೀರೆಯ ಜೋಗುಳ ಹಾಡುತ್ತಾ ನಿದ್ರೆಗೆ ಜಾರಿದಳು.ಬೆಳಗ್ಗೆ ಮಗಳು ಏಳುವ ಮುನ್ನವೇ ಆಫೀಸಿಗೆ ಹೊರಟರು ಮುರಳಿ.

ಬಳಿಕ ಎದ್ದ ಆದ್ಯಾ.."ಅಪ್ಪ ಎಲ್ಲಿ.. ಸೀರೆ ಬೇಕು.. ಸೀರೆ ಪಟ ಹಾಕ್ಬೇಕು" ಎಂದು ಹೇಳಿ ಹಠವೇ ಹಠ.ಕೊನೆಗೆ ಮುರಳಿಗೆ ಫೋನ್ ಮಾಡಿ ತಿಳಿಸಿದೆ..
"ನೀವಿಬ್ರೂ ಹೋಗಿ ಶಾಪಿಂಗ್ ಮಾಡಿ ಬನ್ನಿ.."ಎಂದರು..

ನಾನು ಆದ್ಯಾ ಹುಟ್ಟಿದ ಮೇಲೆ ಒಬ್ಬಳೇ ಹೊರಗೆ ಹೋದದ್ದಿಲ್ಲ.ಏನಿದ್ದರೂ ಮುರಳಿಯ ಜೊತೆಗೆ ಸುತ್ತಾಟ.ನಾನು ಬೇಕು ಅಂದ್ರೆ ಸಾಕು ಮುರಳಿ ದುಡ್ಡೆಣಿಸಿ ಕೊಟ್ಟು ಬಿಡ್ತಿದ್ದ... ಈಗಲೇ ಆ ಕಷ್ಟ ಗೊತ್ತಾಗಿದ್ದು.ಅಂತೂ ಮಗಳ ಜೊತೆಗೆ ಬಟ್ಟೆಮಳಿಗೆಗೆ ತೆರಳಿ ರೆಡಿಮೇಡ್ ಸೀರೆ ಕುಪ್ಪಸ ಕೊಂಡದ್ದಾಯ್ತು...ಮುರಳೀನ ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಾ...ಆ ಕಲರಾ..ಈ ಡಿಸೈನ್ ಒಪ್ಪುತ್ತಾ..ಎಂದೆಲ್ಲ ನಾ ಕೇಳ್ತಾ ಇದ್ದದ್ದು ಮುರಳಿಯನ್ನೇ..ಹಿ ಈಸ್ ಮೈ ಬೆಸ್ಟ್ ಫ್ರೆಂಡ್..

ಮನೆಗೆ ಬಂದು ಆದ್ಯಾ ಮೊದಲು ಮಾಡಿದ್ದೇನು ಗೊತ್ತಾ..ತಾನು ಹಾಕ್ಕೊಂಡಿದ್ದ ಡ್ರೆಸ್ ತೆಗೆಯಲು ಪ್ರಯತ್ನಿಸಿ... ಓಹ್... ಸಕ್ಸೆಸ್..ನಂತರ ತಂದ ಬಟ್ಟೆಯನ್ನು ಹಾಕಿಕೊಳ್ಳಲು ನೋಡಿದ್ದೇ.. ಅಬ್ಬಾ..ನನ್ನ ಮೂರುವರ್ಷದ ಮಗಳು ಯಾವ ಟೀನೇಜ್ ಗರ್ಲ್ ಗೂ ಕಮ್ಮಿಯಿಲ್ರೀ ಅಲಂಕಾರ ಮಾಡೋದ್ರಲ್ಲಿ..ಅಂತ ಅನ್ಸಿತ್ತು ನಂಗೆ..

ಹಾಂ...ಸಾರಿ ಉಟ್ಟು ಪಟ ತೆಗೆದಾಯ್ತು... ಎಷ್ಟು ಮುದ್ದು ಮುದ್ದಾಗಿ ಕಾಣಿಸ್ತಾಯಿದಾಳೆ ನನ್ನ ಸಕ್ಕರೆ ಗೊಂಬೆ...ನನ್ನ ದೃಷ್ಟಿ ತಾಗದಂತೆ ನೆಟಿಗೆ ತೆಗೆದೆ..

ಪಟತೆಗೆದು ಮೊಬೈಲ್ ಪಕ್ಕಕ್ಕಿಟ್ಟು ಅವಳ ಸೀರೆ ಬಿಚ್ಚಲು ಹೊರಟೆ... ಊಹೂಂ.. ಎಂದು ನನ್ನ ಕೈಗಳನ್ನು ದೂರ ತಳ್ಳಿದಳು.. ಮೊಬೈಲ್ ತಂದು ನನ್ನ ಕೈಗಿತ್ತಳು..ಹಾಕು..ಪಟ ಹಾಕು..
ಅರೇ...ನನ್ನ ಮಗಳು ನನಗಿಂತ ಫಾಸ್ಟ್... ಅಡ್ಡಿಯಿಲ್ಲ..

ಮೊಬೈಲ್ ತೀಡಿದೆ.. ಓಪನ್ ಮಾಡಿದೆ... ಸೀರೆ ಚಾಲೆಂಜ್ ನ ಮುಂದಿನ ಹಂತ ವಿದೌಟ್ ಮೇಕಪ್ ಎಂದು ಚಾಲೆಂಜ್ ಶುರುವಾಗಿತ್ತು... ಎರಡನ್ನೂ ಜೊತೆ ಸೇರಿಸಿ "ಸೀರೆ ವಿದೌಟ್ ಮೇಕಪ್"ಎಂದು ನನ್ನದೇ ಹೆಡ್ಡಿಂಗ್ ನೀಡಿದೆ..ಆದ್ಯಾನ ಪಟ ಹಾಕಿ ಅವಳ ಎದುರು ಹಿಡಿದೆ...

ಏನು ಖುಷಿ ಅಂತೀರಿ.. ಪುಟಾಣಿ ಮಗಳ ಮೊಗದಲ್ಲಿ... ಒಂದು ಕ್ಷಣ ನಂಗೆ ..ಮುದ್ದು ಮಗಳನ್ನು ಕರ್ಕೊಂಡು ಹೋಗಿ ಕಷ್ಟಪಟ್ಟು ಶಾಪಿಂಗ್ ಸಾರ್ಥಕ ಅನಿಸಿತು..

ಮಗಳನ್ನು ಸ್ನಾನ ಮಾಡಿಸಿ ನಿದ್ದೆ ಮಾಡಿಸಿ ಮನೆಕೆಲಸ ಮುಗಿಸಿದೆ.. ಅಷ್ಟೊತ್ತಿಗೆ ನಿದ್ದೆಯಿಂದೆದ್ದಳು.. ಮೊಬೈಲ್ ಕಡೆ ಬೆರಳು ತೋರಿಸ್ತಾಳೆ.. ಈಗಲೇ ಎಷ್ಟು ಕುತೂಹಲ..!!

ಹತ್ತು ಲೈಕ್ ಬಂದಿದೆ ಎಂದು ತೋರಿಸಿದೆ..ಸಂತಸವಿತ್ತು ಮುಖದಲ್ಲಿ.. ಎಂದಿನಂತೆ ನಿದ್ದೆಯಿಂದೆದ್ದು ಅಳುತ್ತಿರಲಿಲ್ಲ...

ರಾತ್ರಿಯ ಅವಳ ಊಟದ ಹೊತ್ತು..ಅವಳ ತುಂಟಾಟ.. ಮೊಬೈಲ್ ನೋಡೊಣ ಅಂದಿತು ಮನಸ್ಸು...ಬೇಡ ಎಂದು ಮುರಳಿ ಹೇಳಿದ ಬುದ್ಧಿಮಾತು ನೆನಪಾಯಿತು.. ಸುಮ್ಮನಾದೆ ‌‌ಬಾಯಿತುಂಬಾ ತುತ್ತು ಹಾಕ್ಕೊಂಡು ಮಗಳು ಒಳಗಿನ ರೂಮಿಗೆ ತೆರಳಿದಳು..ಚಾರ್ಜಿಗಿಟ್ಟಿದ್ದ ಮೊಬೈಲ್ ನ್ನು ತಂದು ಕೈಗಿತ್ತಳು.. ನೋಡು ಎಂಬಂತೆ ಕೈಸನ್ನೆ ಮಾಡಿದಳು..

ಮುರಳಿಯ ಬುದ್ಧಿಮಾತು ಮರೆತು ಮನಸ್ಸು ಮಗಳ ಮುದ್ದುಮಾತಿನಂತೆ ನಡೆದುಕೊಂಡಿತು.. ಪುನರಪಿ ಮೊಬೈಲ್ ತೀಡನಂ..
ಲೈಕ್ ಕಮೆಂಟಿಗೆ ಉತ್ತರ ಲೇಖನಂ...

ಸಂತಸದಲ್ಲಿದ್ದ ಆದ್ಯಾ ಇಂದು ಬೇಗಬೇಗನೇ ಉಂಡಳು..ಆಗಲೇ ಗೇಟು ತೆಗೆದ ಶಬ್ದ ಕೇಳಿಸಿತು.. ಮುರಳಿ ಬಂದರು ಅಂತ ಅನಿಸುತ್ತೆ..ಬೇಗ ಹೋಗಿ ಮೊಬೈಲ್ ಚಾರ್ಜಿಗಿಟ್ಟು ಬಂದೆ..

ಬಾಗಿಲು ತೆರೆದು ಎಂದಿನಂತೆ ಪತಿ, ಗೆಳೆಯ ಮುರಳಿಗೆ ನಗುಮೊಗದ ಸ್ವಾಗತ ಕೋರಿದೆ...
ನನಗಿಂತ ಮೊದಲೇ ಅಪ್ಪನತ್ತ ಓಡಿದ ಆದ್ಯಾ..
"ಅಪ್ಪಾ...
ಅಮ್ಮನ ಚಾಲೆಂಜಿಗಿಂತ ನಂಗೇ ಜಾಸ್ತಿ ಲೈಕೂ,ಕಮೆಂಟೂ..
ಅವಳು ತುಂಬಾ ಮೆತ್ಕೊಂಡಿದ್ಳು ಪೌಡ್ರೂ, ಲಿಪ್ಸ್ಟಿಕ್,ಸೆಂಟೂ..
ನನ್ನ ಪಟ ವಿದೌಟ್ ಮೇಕಪ್ಪು ಗೊತ್ತೇ..
ಅಮ್ಮಂಗಿಂತ ನಾನೇ ಸುಂದರಿ ಅನಿಸುತ್ತೆ.."

ಎಂದು ತೊದಲು ಮಾತಲ್ಲಿ ಎಲ್ಲವನ್ನೂ ಅರುಹಿದ ಮಗಳ ಹಣೆಗೊಂದು ಮುತ್ತು ಕೊಟ್ಟ ಮುರಳಿ ನನ್ನತ್ತ ತಿರುಗಿ.."ಪರವಾಗಿಲ್ವೇ... ಮಗಳು ಈಗಲೇ ನಿನ್ನನ್ನು ಮೀರಿಸಿಬಿಟ್ಳು..."ಎನ್ನುತ್ತಾ ನಸುನಕ್ಕು ಮೆಲ್ಲನೆ ನನ್ನ ಹೆಗಲ ಮೇಲೆ ಕೈಯಿಟ್ಟಿದ್ದರು....

ಮನೆಯೊಳಗೆ ಬಂದ ಮುರಳಿಗೆ ಓಡೋಡಿ ಹೋಗಿ ಮೊಬೈಲ್ ತಂದು ಕೊಟ್ಟಳು ಆದ್ಯಾ...
ಅಮ್ಮ ಮಗಳು ಇಬ್ಬರ ಪಟವನ್ನೂ ನೋಡಿದ ಮುರಳಿ ಸಣ್ಣಕ್ಕೆ ಗುನುಗಿದ್ದು ಕೇಳಿಸಿತು..

"ಆಹಾ...!! ಮನಮೋಹಕ ಚೆಲುವೆಯರು...ಅಮ್ಮ ಮಗಳಿಬ್ಬರೂ...

ನೂಲಿನಂತೆ ಸೀರೆ...
ತಾಯಿಯಂತೆ ಮಗಳು..."

ಮುರಳಿಯ ಬಾಯಿಯಿಂದ ಇದಕ್ಕಿಂತ ದೊಡ್ಡ ಹೊಗಳಿಕೆ ನಂಗೆ ಬೇಕಾ....ನಾನೀಗ ಸಂತೃಪ್ತ ಮಡದಿ, ಅಮ್ಮ, ಗೆಳತಿ....

✍️... ಅನಿತಾ ಜಿ.ಕೆ.ಭಟ್.
03-10-2019

ಚಿತ್ರ ಕೃಪೆ :ಅಂತರ್ಜಾಲ.

ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ Home, >,<

ಸಂಕೇತಗಳನ್ನು ಬಳಸಿಕೊಳ್ಳಬಹುದು.


2 comments: