ಹಲಸಿನ ಬೀಜದ ಹಲ್ವಾ
ಈ ವರ್ಷ ಫುಡ್ ಬ್ಲಾಗ್'ಗಳಲ್ಲಿ, ಫೇಸ್ಬುಕ್'ನ ಅಡುಗೆ ಗ್ರೂಪ್'ಗಳಲ್ಲಿ ಬಹಳವೇ ಪ್ರಚಾರಕ್ಕೆ ಬಂದಂತಹ ಹೊಸ ರುಚಿ ಹಲಸಿನ ಬೀಜದ ಹಲ್ವಾ/ಬೇಳೆ ಹಲ್ವಾ/ಹಲಸಿನ ಬೇಳೆ ಹಲ್ವಾ. ಈ ಪಾಕ ಮೊದಲೇ ಇತ್ತಾ..? ಇತ್ತೀಚೆಗೆ ಯಾರಾದರೂ ಅನ್ವೇಷಿಸಿದರೋ ನನಗಂತೂ ಗೊತ್ತಿಲ್ಲ. ಆದರೆ ಲಾಕ್ಡೌನ್ ಸಮಯದಲ್ಲಿ ಎಲ್ಲಾ ಕಡೆಯೂ ಬಹಳ ಹೊಗಳಿಸಿಕೊಂಡಿತ್ತು.
ಎಲ್ಲರೂ ಅದರ ಸವಿ ರುಚಿಯನ್ನು ಹೊಗಳುವುದನ್ನು ಕಂಡು ನನಗೂ ಒಮ್ಮೆ ಪ್ರಯತ್ನಿಸಬೇಕೆಂದು ಅನಿಸಿತು.
ಹಲಸಿನ ಬೀಜ ಪೌಷ್ಟಿಕಾಂಶದ ಆಗರ.ಆದರೂ ಜನ ಎಳೆ ಹಲಸಿನಕಾಯಿ, ಬಲಿತ ಹಲಸಿನಸೊಳೆ, ಹಣ್ಣು ಹಲಸಿನ ಸೊಳೆಗೆ ಕೊಡುವಷ್ಟು ಮಹತ್ವ ಹಲಸಿನ ಬೀಜಕ್ಕೆ ಕೊಡುತ್ತಿಲ್ಲ. ಹಲಸಿನಕಾಯಿಯನ್ನು ಕೊರೆದು ಸೊಳೆಯನ್ನು ಬಳಸಿ ಹಲಸಿನ ಬೀಜವನ್ನು ದನಕ್ಕೆ ನೀಡುವುದು ಹೆಚ್ಚು.(ಕೆಲವರು ಬಿಸಾಡುವುದು ಸಾಮಾನ್ಯ).ಹಲಸಿನ ಬೀಜದಿಂದ ದನದ ಹಾಲಿನ ಉತ್ಪಾದನೆ ಹೆಚ್ಚುತ್ತದೆ.ಅಡುಗೆಯಲ್ಲಿ ಬಳಸುವುದಾದರೆ ಸೌತೆಕಾಯಿ ಪಲ್ಯ ,ಸೌತೆಕಾಯಿ ಹುಳಿ ಮೇಲೋಗರ ಮಾಡುವಾಗ ಸಾಮಾನ್ಯವಾಗಿ ಬಳಸುತ್ತಾರೆ. ಇದಲ್ಲದೆ ಅಪರೂಪಕ್ಕೆ ಬೇಳೆ ಉಂಡೆ, ಬೇಳೆ ಹೋಳಿಗೆ ಇತ್ಯಾದಿ ಮಾಡುವುದು ಇದೆ. ಇತ್ತೀಚೆಗೆ ಬೇಳೆ/ಹಲಸಿನ ಬೀಜದ ಲಾಡು , ಖಾರಕಡ್ಡಿ,ಕರ್ಜಿಕಾಯಿ, ವಡೆ,ಪರೋಟ ಪ್ರಚಲಿತಕ್ಕೆ ಬರುತ್ತಿದೆ.ಲಾಕ್ ಡೌನ್'ನಿಂದಾಗಿ ಸ್ಥಳೀಯವಾಗಿ ಉಪೇಕ್ಷಿತವಾಗಿದ್ದ ಆಹಾರವಸ್ತುವೊಂದು ಮುನ್ನಲೆಗೆ ಬಂದಿರುವುದು ಸಂತೋಷದ ಸಂಗತಿ.
ಬೇಳೆ ಹಲ್ವಾ/ ಹಲಸಿನ ಬೀಜದ ಹಲ್ವಾ ಮಾಡಲು ಬೇಕಾದ ಸಾಮಗ್ರಿಗಳು:-
ಬೇಯಿಸಿದ ಬೇಳೆಯ ಪೇಸ್ಟ್- 2 ಕಪ್
ಸಕ್ಕರೆ -ಮುಕ್ಕಾಲು ಕಪ್
ತುಪ್ಪ- ಕಾಲು ಕಪ್(ಬೇಕಾದಲ್ಲಿ ಜಾಸ್ತಿ ಹಾಕಬಹುದು)
ಸಲ್ಪ ಹಾಲು, ಏಲಕ್ಕಿ ಪುಡಿ ,ಗೋಡಂಬಿ ದ್ರಾಕ್ಷಿ
ಮಾಡುವ ವಿಧಾನ:-
ಹಲಸಿನ ಬೀಜವನ್ನು ಸ್ವಚ್ಛಗೊಳಿಸಿ ಹೊರಗಿನ ಸಿಪ್ಪೆ ,ಕಪ್ಪಾದ ಭಾಗವನ್ನು ಪ್ರತ್ಯೇಕಿಸಿ.ನಂತರ ಕುಕ್ಕರಿನಲ್ಲಿ ಹಲಸಿನ ಬೀಜ ಸರಿಯಾಗಿ ಮುಳುಗುವುದರಿಂದಲೂ ಸ್ವಲ್ಪ ಜಾಸ್ತಿ ನೀರು ಹಾಕಿ 8-9 ಸೀಟಿ ಕೂಗಿಸಿ.ತಣ್ಣಗಾದ ಮೇಲೆ ಸ್ವಲ್ಪ ಹಾಲು ಬಳಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. (ಅಥವಾ ಹಾಲಲ್ಲೇ ಬಾಏಯಿಸಿಕೊಂಡು,ಅದೇಹಾಲಿನಲ್ಲಿ ರುಬ್ಬಬಹುದು)ಬಾಣಲೆಗೆ ರುಬ್ಬಿದ ಮಿಶ್ರಣ, ಸ್ವಲ್ಪ ತುಪ್ಪ ಹಾಕಿ ತಿರುವುತ್ತಿರಿ. ಸ್ವಲ್ಪ ಗಟ್ಟಿಯಾದ ನಂತರ ಸಕ್ಕರೆ, ತುಪ್ಪ ಹಾಕಿ ಕಾಯಿಸಿ. ಪಾಕ ತಳ ಬಿಡುತ್ತ ಬಂದಾಗ ಏಲಕ್ಕಿ ಪುಡಿ ಬೆರೆಸಿ ಗೋಡಂಬಿ ದ್ರಾಕ್ಷಿ ಬೇಕಾದರೆ ಹಾಕಿ.ಹಾಕದಿದ್ದರೂ ರುಚಿಗೆ ಕೊರತೆಯಾಗುವುದಿಲ್ಲ.ತುಪ್ಪ ಸವರಿದ ತಟ್ಟೆಯ ಮೇಲೆ ಹರಡಿ. ಈಗ ಪುಷ್ಟಿಕರವಾದ ಹಲಸಿನ ಬೀಜದ ಹಲ್ವಾ/ಬೇಳೆ ಹಲ್ವಾ ಸವಿಯಲು ಸಿದ್ಧ.
ನಾನಿದನ್ನು ತಯಾರು ಮಾಡಿದಾಗ ಮನೆಯವರೆಲ್ಲ ಬಹಳ ಇಷ್ಟಪಟ್ಟರು.ಅದರಲ್ಲಂತೂ ಮಕ್ಕಳು ನಮ್ಮ ಕಡೆ ಮಾಡುವ ಸಪಾದ ಭಕ್ಷ್ಯದ ರುಚಿಯನ್ನು ಇದರಲ್ಲಿ ಕಂಡುಕೊಂಡರು. ಯಾಕೆಂದರೆ ಸತ್ಯನಾರಾಯಣ ಪೂಜೆಗೆ ಮಾಡುವ ಸಪಾದ ಭಕ್ಷ್ಯ ಸುಮ್ಮನೆ ಮಾಡುವ ಕ್ರಮವಿಲ್ಲ. ಅತ್ಯಂತ ರುಚಿಕರವಾದ ಸಪಾದ ಭಕ್ಷ್ಯ ಎಲ್ಲರಿಗೂ ಇಷ್ಟ. ಹಲಸಿನ ಬೀಜದ ಹಲ್ವವನ್ನು ಸಪಾದ ಭಕ್ಷ್ಯ ಎಂದುಕೊಂಡು ಸ್ವಾಹ ಮಾಡುತ್ತಿದ್ದರು ಮಕ್ಕಳು. ಹಾಗಾಗಿ ಅಮ್ಮನಲ್ಲೂ ರೆಸಿಪಿಯನ್ನು ಹಂಚಿಕೊಂಡೆ. ಅಮ್ಮನೂ ತಯಾರಿಸಿ ರುಚಿಕರವಾಗಿದೆ.. ಆಗಾಗ ಮಾಡುತ್ತಿರಬಹುದು ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಮತ್ತೆ ಯಾಕೆ ತಡ ಹಲಸಿನ ಬೀಜವಿದ್ದರೆ ನೀವು ಮಾಡಿ ನೋಡಿ. ಖಂಡಿತ ಇದನ್ನು ಆವಿಷ್ಕರಿಸಿದವರಿಗೆ ಒಂದು ಸಲಾಂ ಹೊಡೆಯೋಣ ಅಂತಲೇ ಅನಿಸುತ್ತದೆ.
✍️...ಅನಿತಾ ಜಿ.ಕೆ.ಭಟ್.
23-09-2020.
Ruchikara halva
ReplyDeleteಥ್ಯಾಂಕ್ಯೂ 💐🙏
Delete