ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನೀಳ್ಗತೆ.
💐💐
ಯಾವ ತರುವು ಆವ ಲತೆಗೋ: ಅಧ್ಯಾಯ ೬
ಸಂಜೆಯಾಗುವ ಹೊತ್ತು ಕೋದಂಡರಾಮನ ಮಠದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಕಾರು ನಿಂತಿತು. ಸುತ್ತಲೂ ಹಬ್ಬಿ ಫಲತುಂಬಿ ನಿಂತಿರುವ ಮಾವಿನ ತೋಪು. ಹಕ್ಕಿಗಳು ಹಣ್ಣನ್ನು ಕುಕ್ಕಿ ಕುಕ್ಕಿ ರಸ ಹೀರುತ್ತಿದ್ದವು. ಗೋವುಗಳು ಮರದಡಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದವು. ಯಾವುದೋ ಮನೆಯಿಂದ ಗೋಮಾತೆಯನ್ನು ಗಂಗೇ ಬಾ.. ಕಪಿಲೇ ಬಾ.. ಎಂದು ಕರೆಯುವುದು ಸ್ಪಷ್ಟವಾಗಿ ಕಿವಿಗಪ್ಪಳಿಸುತ್ತಿತ್ತು. ಮೇಪ್ಲವರ್ ಮರಗಳು ನಡೆಯುವ ಹಾದಿಗೆ ಕೆಂಪು ಹಾಸನ್ನು ಹಾಸಿದ್ದವು.. ಕಾರಿನಿಂದಿಳಿದ ಕುಟುಂಬ ತೋಟದೊಳಗಿನ ಹಾದಿಯಲ್ಲಿ ನಡೆಯುತ್ತಾ ಸಾಗಿತು. ಮಧ್ಯದಲ್ಲಿ ಪುಟ್ಟ ತೋಡು. ತೋಡಿಗೊಂದು ಆಡಕೆ ಮರದ ಕಾಲುಸಂಕ.. ಓಜಸ್, ಯಶಸ್ವಿ ದಾಟುವುದಕ್ಕೆ ಭಯಗೊಂಡು "ನಾವು ಬರಲ್ಲ ನವೀನಣ್ಣ" ಎಂದು ಬೊಬ್ಬಿರಿದಾಗ " ಇನ್ನು ನವೀನಣ್ಣ ಅನ್ನೋ ಹಾಗಿಲ್ಲ. ಅಪ್ಪ ಅನ್ನಬೇಕು. ಒಪ್ಪಿದ್ರೆ ಮಾತ್ರ ಆಚೆ ಬದಿಗೆ ದಾಟಿಸೋದು" ಎಂದು ಷರತ್ತು ವಿಧಿಸಿದಳು ಪಾವನಾ. ವಿಧಿಯಿಲ್ಲದೆ ಇಬ್ಬರೂ ಒಪ್ಪಿದರು. "ಅಪ್ಪಾ.. ನಮ್ಮನ್ನು ದಾಟಿಸಿ " ಎಂದಾಗ ನಗುತ್ತಾ ಅಪ್ಪ ಒಬ್ಬೊಬ್ಬರನ್ನೇ ದಾಟಿಸಿದರು.
ಕೋದಂಡ ರಾಮನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ರಾತ್ರಿ ಮಂಗಳೂರಿನಲ್ಲಿರುವ ನವೀನ್ ನ ಮನೆಗೆ ಬರುವುದು ಎಂದು ಎಲ್ಲರೂ ನಿರ್ಧರಿಸಿದ್ದರು. ನಾವೇನೇ ನಿರ್ಧಾರ ಮಾಡಿದರೂ ಶ್ರೀರಾಮನ ನಿರ್ಧಾರ ಬೇರೆಯೇ ಇರುತ್ತದೆ. ಎಲ್ಲೆಲ್ಲಿ ಯಾವಾಗ ಏನೇನು ಆಗಬೇಕು ಎಂದು ಅವನು ನಿರ್ಧರಿಸುತ್ತಾನೋ ಹಾಗೆಯೇ ನಾವು ನಡೆಯಬೇಕು. ನಮ್ಮ ಲೆಕ್ಕಾಚಾರವೇ ಬೇರೆ ಅವನಾಟವೇ ಬೇರೆ.
ಕೋದಂಡರಾಮನ ಮಠದ ಅಂಗಣಕ್ಕೆ ಮುಟ್ಟಿದಾಗ ಗಂಧ, ಪುಷ್ಪಗಳ ಸೌರಭ ಗಾಳಿಯಲ್ಲಿ ತೇಲಿಬರುತ್ತಿತ್ತು. ಇನ್ನೊಂದು ಬದಿಯಿಂದ ಪ್ರಸಾದದ ಪರಿಮಳ ಹರಡುತ್ತಿತ್ತು. ನಳ್ಳಿಯಲ್ಲಿ ಕೈಕಾಲು ಮುಖ ತೊಳೆದು ನವೀನ್, ಓಜಸ್ ಇಬ್ಬರೂ ಅಂಗಿ ಬನಿಯನ್ ಕಳಚಿ ಒಳಗಡಿಯಿಟ್ಟರು. ವಿಶಾಲವಾದ ಜನಜಂಗುಳಿ ಇಲ್ಲದ ಪ್ರಶಾಂತ ವಾತಾವರಣ. ಪಾವನಾಳಿಗೆ ಮನಸ್ಸು ಪ್ರಫುಲ್ಲವಾಯಿತು. ದೇವಾಲಯಕ್ಕೆ ಸುತ್ತು ಬಂದು ಕೋದಂಡರಾಮನ ಮುಂದೆ ಸೆರಗೊಡ್ಡಿ ಬೇಡಿ ಸಾಷ್ಟಾಂಗ ನಮಿಸಿದಳು.
ಅರ್ಚಕರಾದ ನವೀನನ ಕುಟುಂಬದ ದೊಡ್ಡಪ್ಪ "ಎಂತ ಮಾಣಿ. ಭಾರೀ ಅಪರೂಪ" ಎನ್ನುತ್ತಾ ಮಾತಿಗೆಳೆದರು. "ಇವತ್ತು ಇಲ್ಲೊಂದು ರಂಗಪೂಜೆಯಿದೆ. ಹೇಗೂ ದೂರದೂರಿನಿಂದ ನವವಿವಾಹಿತ ದಂಪತಿ ಕುಟುಂಬದೊಂದಿಗೆ ಬಂದಿದ್ದೀರಿ. ಪೂಜೆ ಪ್ರಸಾದ ಸ್ವೀಕರಿಸಿ ಭೋಜನ ಮಾಡಿ ತೆರಳಿ" ಎಂದಾಗ ಇಲ್ಲವೆನ್ನಲಾಗಲಿಲ್ಲ ನವೀನನಿಗೆ.
ಮಠದ ಸುತ್ತಲಿನ ವಠಾರವನ್ನೆಲ್ಲ ಪಾವನಾಳಿಗೆ ತೋರಿಸುತ್ತಾ ತಾನು ಆಡಿ ಬೆಳೆದ ಜಾಗವೆಂದು ನೆನಪುಗಳನ್ನು ಹಂಚಿಕೊಂಡ ನವೀನ್. ಮಕ್ಕಳು ಅಜ್ಜಿಯ ಜೊತೆಗೆ ಆಟವಾಡುತ್ತಿದ್ದರು. ಮಾತನಾಡುತ್ತಾ ಕುಳಿತ ಜೋಡಿಗೆ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ. ಪುರೋಹಿತರು ಮಹಾಪೂಜೆ ಮಂಗಳಾರತಿ ಎಂದಾಗ ಇಬ್ಬರೂ ತೆರಳಿದರು.
ಹೆಚ್ಚೆಂದರೆ ನಲುವತ್ತು ಭಕ್ತರು ಸೇರಿದ್ದರು. ನವೀನ್ ಒಂದು ಬದಿಯಲ್ಲಿ ಸಾಲಿನಲ್ಲಿ ನಿಂತುಕೊಂಡ. ಆಚೆಬದಿ ಪಾವನಾ ನಿಂತಳು. ವಿದ್ಯುದ್ದೀಪಗಳನ್ನು ಆರಿಸಿದರು. ಇನ್ನೇನು ಪೂಜೆ ಆರಂಭವಾಗುತ್ತದೆ ಎನ್ನುವಾಗ ಯಾರೋ ಬೆನ್ನ ಮೇಲೆ ಕೈಯಿಟ್ಟ ಅನುಭವ ನವೀನನಿಗೆ. ಪಾವನಾ ಇರಬಹುದೇ? ಎಂದು ಕೈ ಮುಟ್ಟಿದಾಗ ಒರಟಾಗಿ ಸುಕ್ಕುಗಟ್ಟಿದ ಕೈಗಳು. ಮೆಲ್ಲನೆ ಹಿಂತಿರುಗಿ ನೋಡಿದ. ತನ್ನ ಕಣ್ಣನ್ನೇ ನಂಬದಾದ. ದೇವಾಲಯದ ಮುಂಭಾಗದಲ್ಲಿ ಅಲ್ಲಲ್ಲಿ ಉರಿಸಲಾಗಿದ್ದ ದೀಪಗಳ ಮಂದಬೆಳಕಿನಲ್ಲಿ, ಅಂದು ತನ್ನನ್ನು ಇದೇ ಕೈಗಳಿಂದ ಹೊಡೆದು ಮನೆಯಿಂದ ಹೊರಗಟ್ಟಿದ ತಂದೆ ಹದಿಮೂರು ವರ್ಷಗಳ ನಂತರ ಕೈಯನ್ನು ಬೆನ್ನ ಮೇಲಿಟ್ಟು ಸವರುತ್ತಿದ್ದರು. ಅವನಿಗರಿವಿಲ್ಲದೇ ಪಟಪಟನೆ ಕಣ್ಣಿಂದ ಹನಿಗಳು ಜಾರಿದವು. ಮಗನ ಕಣ್ಣಲ್ಲಿ ಕಣ್ಣಿಟ್ಟು ಅಪ್ಪ "ಮಗನೇ.. " ಎಂದರು. ಮಾತು ಹೊರಡಲಿಲ್ಲ ನವೀನನಿಗೆ.
ಮಂಗಳಾರತಿ ಆರಂಭವಾಯಿತು. ಕೋದಂಡರಾಮನ ಅಲಂಕೃತ ಮೂರುತಿಯನ್ನು ಕಣ್ತುಂಬಿಸಿಕೊಂಡರು ರಾಮನ ಭಕ್ತರಾದ ದಂಪತಿ. ಮಂಗಳಾರತಿ ಮುಗಿಯುತ್ತಿದ್ದಂತೆ ಪಾವನಾ ನವೀನ್ ಇಬ್ಬರೂ ಜೊತೆಯಾಗಿ ತಿರುಗಿ ಸಾಷ್ಟಾಂಗ ನಮಸ್ಕರಿಸಿದರು. ವಿದ್ಯುದ್ದೀಪಗಳು ಉರಿದವು. ಮಗ ಮದುವೆಯಾಗಿದ್ದಾನೆ ಎಂದು ಅರಿತರು ಅಪ್ಪ. ಅಪ್ಪನ ಜೊತೆಗೆ ಮಾತನಾಡುತ್ತಿದ್ದಂತೆ ಆಚೆ ಕಡೆಯಿಂದ "ಬಂಗಾರು.." ದನಿಕೇಳಿಸಿ ತಿರುಗಿದರೆ ಅಲ್ಲಿ ಅಬ್ಬೆ! ಮಮತಾಮಯಿ ಅಮ್ಮನನ್ನು ಅಗಲಿ ಅದೆಷ್ಟು ಬಾರಿ ನೆನಪಿಸಿಕೊಂಡಿದ್ದಾನೋ ಏನೋ ನವೀನ. ತಬ್ಬಿ ಆಲಿಂಗಿಸಿಬಿಟ್ಟಿದ್ದ. ಸುತ್ತಮುತ್ತ ಯಾರಿದ್ದಾರೆ ಎಂಬ ಗೊಡವೆಯೇ ಅವನಿಗಿರಲಿಲ್ಲ. ಪಾವನಾ ಕೂಡ ಭಾವುಕಳಾದಳು. ಅಪ್ಪ ಅಬ್ಬೆ ಇಬ್ಬರಿಗೂ ಮಡದಿ ಪಾವನಾಳನ್ನು ಮಕ್ಕಳನ್ನು ಅತ್ತೆಯನ್ನು ಪರಿಚಯಿಸಿದ. ಕೋದಂಡರಾಮನ ಸನ್ನಿಧಿಯಲ್ಲಿ ಮತ್ತೆ ಕುಟುಂಬ ಒಂದಾಯಿತು.
ಊಟ ಮುಗಿಯುತ್ತಿದ್ದಂತೆ ಅಪ್ಪ ಅಮ್ಮ ಇಬ್ಬರೂ "ಮನೆಗೆ ಹೋಗೋಣ " ಎಂದು ನವೀನ್ ನನ್ನು ಕರೆದು ಒತ್ತಾಯಿಸಿದರು. "ಇವತ್ತು ಮಂಗಳೂರಿನ ಮನೆಗೆ ತೆರಳುತ್ತೇವೆ. ಮುಂದೆ ಇನ್ನೊಮ್ಮೆ ಬರುತ್ತೇವೆ" ಎಂದು ನವೀನ್ ಹೇಳಿದರೂ ಅವರು ಒಪ್ಪಲಿಲ್ಲ. ಕ್ಷಣಿಕದ ಕೋಪದಿಂದ ವರುಷಗಳ ಕಾಲ ನೊಂದು ಬೆಂದ ಜೀವವದು. ಮತ್ತೆ ಕರುಳ ಕುಡಿಯನ್ನು ಕಂಡಾಗ ಪ್ರೀತಿಯೊಸರು ಜಿನುಗದಿದ್ದೀತೇ..?? ಪಾವನಾ "ರೀ.. ಅವರು ಅಷ್ಟೊಂದು ಕೇಳಿಕೊಳ್ಳುವಾಗ ಹಿರಿಯರ ಮಾತಿಗೆ ಬೆಲೆಕೊಡಬೇಕು. ಮನೆಗೆ ಹೋಗೋಣ. ನಾಳೆ ಮಂಗಳೂರಿನತ್ತ ಪ್ರಯಾಣ ಬೆಳೆಸೋಣ." ಎಂದಾಗ ಅವಳ ಅಮ್ಮನೂ ದನಿಗೂಡಿಸಿದರು.
ಹಲವಾರು ವರುಷಗಳ ನಂತರ ಮನೆಯಂಗಳಕ್ಕೆ ಬಂದಿಳಿದ ನವೀನ್. ಅದೇ ಮನೆ, ಅದೇ ಅಂಗಳ, ಸಾರಿಸಿದ ಸೆಗಣಿಯ ಘಮಲು, ದನದ ಕೊಟ್ಟಿಗೆ, ಒಂದಿನಿತೂ ವ್ಯತ್ಯಾಸವಿಲ್ಲ, ಅಂದು ಗರ್ವದಿಂದಿದ್ದ ತಂದೆ, ಇಂದು ಸೋತು ಬಳಲಿದ ತಂದೆ. ಅಷ್ಟೇ ವ್ಯತ್ಯಾಸ. ಮನೆಗೆ ಬಂದ ಮಗಸೊಸೆಯನ್ನು ಹಾನ ತಂದು ಕಾಲ್ತೊಳೆದು ಬರಮಾಡಿಕೊಂಡರು ನವೀನನ ಅಮ್ಮ. ಅಣ್ಣಂದಿರಿಬ್ಬರೂ ತಡರಾತ್ರಿ ಮನೆಗೆ ಬಂದರು. ಇಬ್ಬರೂ ಅವಿವಾಹಿತರು. ತಮ್ಮ ತಮಗಿಂತ ಮೊದಲೇ ಮದುವೆಯಾದ್ದು ಅರಿತು ತುಸು ಮತ್ಸರ ಅವರ ಮಾತಿನಲ್ಲಿ ಇಣುಕಿದ್ದು ತಿಳಿದರೂ ಸುಮ್ಮನಿದ್ದ ನವೀನ್. ರಾತ್ರಿ ಮಗಸೊಸೆಗೆ ರೂಮಿನಲ್ಲಿ ಹಾಸಿಗೆ ಹಾಸಿಕೊಟ್ಟ ನವೀನನ ತಾಯಿ ಪಾವನಾಳ ಅಮ್ಮನಲ್ಲಿ ಮಾತನಾಡುತ್ತಾ ಕುಳಿತರು.
ಪಾವನಾಳ ಕಾಲ್ಗುಣವನ್ನು ಹೊಗಳಿ ಅಟ್ಟಕ್ಕೇರಿಸಿ ಲಾಭಪಡೆಯಲೆತ್ನಿಸಿದ ನವೀನ್. "ಸಾಕು.. ಸಾಕು..ರಾಯರು ಹೊಗಳಿದ್ದು.." ಎಂದು ಮೆಲ್ಲನೆ ಗಡ್ಡವನ್ನು ಸವರಿದಳು ಪಾವನಾ. ಹಿತವಾಗಿ ಅವಳೆದೆಯಲ್ಲಿ ಶಿರವಿಟ್ಟ ಅವನು ಉಸುರಿದ್ದು ಬೇರೇನೂ ಅಲ್ಲ.. ನಿನ್ನಿಂದಲೇ ನನ್ನ ಮನಸು ಅರಳಿದ್ದು.. ನಿನ್ನಿಂದಲೇ ಬಾಳಲ್ಲಿ ಪ್ರೇಮಜ್ಯೋತಿ ಬೆಳಗಿದ್ದು.. ನಿನ್ನಿಂದಲೇ ಬಾಳಕತ್ತಲೆಯು ಸರಿದದ್ದು... ನಿನ್ನಿಂದಲೇ ನಾನು ತುಂಟನಾದದ್ದು..."
"ಅರರೇ... ಫುಲ್..ಜೋಷ್... ಏನಪ್ಪಾ...ಹೀಗೆಲ್ಲ.. ಇಷ್ಟೊಂದು ಹೊಗಳ್ಬಾರ್ದು ರೀ.."ಎನ್ನುತ್ತಾ ನಾಚಿದವಳ ಗುಳಿಕೆನ್ನೆಗೆ ರಂಗುತುಂಬಿದ ನವೀನ್.. " ನನ್ನದೊಂದು ಆಸೆಯಿದೆ... ಚಿನ್ನಾ.." ಎಂದುಸುರಿದ ಅವಳ ಗಲ್ಲ ಹಿಂಡಿ.. "ಏನು ಹೇಳಿ...ಬೇಗ..ನನ್ನ ಕಾಯಿಸ್ಬೇಡಿ.." ಎಂದಳು ಆತುರದಿಂದ.
"ನೀನು ತುಂಬಾ ಓದಿದೀಯಾ.. ಒಳ್ಳೆಯ ಸ್ಥಾನಮಾನದಲ್ಲಿದ್ದೀಯಾ.. ನಾನು ನಿನಗೆ ಯಾವ ರೀತಿಯಲ್ಲೂ ಸಮನಲ್ಲ.. ಆದರೂ ನನ್ನ.. ಪ್ರೇಮಿಸಿದೆ.. ಬಾಳರಥದಿ ನನ್ನ ಮೆರೆಸಿದೆ.. ಈಗ ನನ್ನ ಆಸೆಗೆ ನೀರೆರೆದು ಪೋಷಿಸಬಲ್ಲೆಯಾ? ಹೇಳು.." ಎಂದಾಗ...
ಪತಿಯನ್ನು ಮುದ್ದಿನಿಂದ ರಮಿಸಿ ಕಣ್ನೋಟದಲ್ಲೇ ಒಪ್ಪಿಗೆ ಸೂಚಿಸಿದಳು.. ತನಗೆ ಪದವಿಯ ನಂತರ ಓದಬೇಕೆಂದಿದ್ದನ್ನು ,ನಡೆದ ಅನಿರೀಕ್ಷಿತ ತಿರುವುಗಳನ್ನು ಹೇಳಿಕೊಂಡ ನವೀನ್. "ಹೇಳು..ನನ್ನನ್ನು ಓದಿಸುವೆಯಾ..." ಎಂದು ದೈನ್ಯವಾಗಿ ಕೇಳಿಕೊಂಡಾಗ ಅದಕ್ಕೊಪ್ಪಿ
"ಖಂಡಿತಾ ರೀ.. ಅದಕ್ಕೆ ಇಷ್ಟೆಲ್ಲ ಪೀಠಿಕೆ ಬೇಕಿತ್ತಾ.." ಎಂದು ಮೆಲ್ಲನೆ ಅಧರಕಧರವ ಬೆಸೆದಳು. ಪ್ರೇಮರಾಗ ಸರಾಗವಾಗಿ ಪಲ್ಲವಿಸಿತು. ಬೆಳಗೆದ್ದು ಮತ್ತೆ ಹೊರಟು ಮಂಗಳೂರಿನತ್ತ ಪಯಣ ಬೆಳೆಸಿದರು. ಅಪ್ಪ ಅಮ್ಮ ಇಬ್ಬರೂ ಆಗಾಗ ಬರುತ್ತಿರಿ ಎಂದು ಹೇಳಲು ಮರೆಯಲಿಲ್ಲ.
ಮಂಗಳೂರಿನಲ್ಲಿ ನವೀನನಿದ್ದ ಪುಟ್ಟ ಬಾಡಿಗೆ ಮನೆಯಲ್ಲಿ ಸಂಸಾರ ಆರಂಭವಾಯಿತು. ಚಿಕ್ಕ ಸಂಸಾರ. ಪ್ರೀತಿ ,ಆನಂದ ತುಂಬಿ ತುಳುಕುತ್ತಿದ್ದವು. ಕೆಲವು ದಿನಗಳ ಕಾಲ ಮನೆಯಲ್ಲಿದ್ದ ಪಾವನಾ ನಂತರ ಬೆಂಗಳೂರಿನಿಂದ ಕ್ಲಿನಿಕ್ ಮಂಗಳೂರಿಗೆ ಬದಲಾಯಿಸಿಕೊಂಡಳು. ಉದ್ಯೋಗ ಮಾಡುವುದು ಪತಿ ಇದ್ದ ಊರಿನಲ್ಲಿಯೇ.. ಪತಿಯ ಜೊತೆ ಹೆಜ್ಜೆ ಹಾಕಿ ಅವರನ್ನು ಅನುಸರಿಸುವವಳು ನಾನು.. ಎನ್ನುತ್ತಾ ಯಾವುದೇ ಅಹಂಕಾರ ತೋರದೆ ಪುಟ್ಟ ಮನೆಯಲ್ಲಿ ಸಂತೃಪ್ತಿಯಿಂದ ಜೀವನ ಸಾಗಿಸುತ್ತಿದ್ದರು.
ಸೊಸೆ ಮೊಮ್ಮಕ್ಕಳು ಮಂಗಳೂರಿಗೆ ತೆರಳಿದ ನಂತರ ಗಂಗಾಧರ ರಾಯರಿಗೆ ಒಬ್ಬಂಟಿತನ ಕಾಡಿತು. ಒಮ್ಮೆ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾದಾಗ ಮಗ ಗಣೇಶ ವೈದ್ಯರೇ ಆಗಿದ್ದರೂ ಕೂಡ ನೋಡಿಕೊಳ್ಳುವ ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿಲ್ಲ. ಅದನ್ನು ತಿಳಿದ ಪಾವನ ಬಹಳ ನೊಂದುಕೊಂಡಳು. ಪತಿ ಹಾಗೂ ಮಕ್ಕಳಲ್ಲಿ ವಿಷಯ ತಿಳಿಸಿದಾಗ ಓಜಸ್ "ಅಜ್ಜನನ್ನು ನಾನು ನೋಡಿಕೊಳ್ಳುತ್ತೇನೆ. ಶಾಲೆಗೆ ರಜೆ ಆದರೂ ಸರಿ ನನಗೆ ಅಜ್ಜನನ್ನು ನೋಡಲೇಬೇಕು" ಎಂದ. ನವೀನ್ ಕೂಡ " ನಾವು ಅವರನ್ನು ಕೈ ಬಿಡುವುದು ಸರಿಯಲ್ಲ. ನಾನು , ಓಜಸ್ ಹೋಗಿ ಬರುತ್ತೇವೆ." ಎಂದು ಬೆಂಗಳೂರಿಗೆ ತೆರಳಿದರು. ಗಂಗಾಧರ ರಾಯರ ಜೊತೆಯಲ್ಲಿ ಯಾರೂ ಇರಲಿಲ್ಲ.. ಪತ್ನಿ ತನ್ನ ಮಹಿಳಾ ಸಂಘದೊಂದಿಗೆ ವಿದೇಶಕ್ಕೆ ಟೂರ್ ಹೋಗಿದ್ದರು. ಮಗ ಸನಿಹದಲ್ಲಿ ಇದ್ದರೂ ತಂದೆ ದಾಖಲಾಗಿದ್ದ ಆಸ್ಪತ್ರೆಯ ಕಡೆಗೆ ತಲೆಯೇ ಹಾಕಲಿಲ್ಲ. ಇಂತಹ ಸಂದರ್ಭದಲ್ಲಿ ನವೀನ್ ಗಂಗಾಧರರಾಯರಿಗೆ ಬೇಕಾದ ಚಿಕಿತ್ಸೆಯನ್ನು ಕೊಡಿಸಿ ಗುಣವಾದ ನಂತರ "ನಿಮಗೆ ಅಭ್ಯಂತರವಿಲ್ಲದಿದ್ದರೆ ನೀವು ಮಂಗಳೂರಿಗೆ ಬಂದು ನಮ್ಮ ಜೊತೆ ಇರಿ. ಸರಿಯಾಗಿ ಗುಣವಾದ ನಂತರ ಮತ್ತೆ ಬೆಂಗಳೂರಿಗೆ ಬರಬಹುದು" ಎಂದಾಗ ಒಪ್ಪಿದ ಗಂಗಾಧರರಾಯರು ಮಂಗಳೂರಿಗೆ ಆಗಮಿಸಿದ್ದರು. ಸೊಸೆ ಹಾಗೂ ಎರಡನೇ ಮಗ ನಂತಿರುವ ನವೀನ್ ಹಾಗೂ ಮೊಮ್ಮಕ್ಕಳ ಜೊತೆ ಕಾಲಕಳೆಯುತ್ತಾ ಬಹಳ ಬೇಗ ಆರೋಗ್ಯವಂತರಾಗಿ, ನಂತರ ಆಗಾಗ ಬೆಂಗಳೂರಿಗೆ ತನ್ನ ಮನೆಗೆ ಹೋಗುತ್ತಾ ಸೊಸೆ ಮೊಮ್ಮಕ್ಕಳ ನೋಡಲು ಮಂಗಳೂರಿಗೂ ಬರುತ್ತಾ ಎರಡೂ ಕುಟುಂಬಗಳ ಜೊತೆ ಬೆರೆಯುತ್ತಿದ್ದರು.
ಸುಮಾರು ಮೂರು ವರ್ಷಗಳ ನಂತರ ನವಿನ್ ದಂಪತಿ, ಮಕ್ಕಳು, ಗಂಗಾಧರ ರಾಯರು ಕಿಕ್ಕಿರಿದ ಸಮಾರಂಭವೊಂದರಲ್ಲಿ ಕುಳಿತಿದ್ದರು. ವೇದಿಕೆಯಲ್ಲಿ ಗಣ್ಯರು ಉಪಸ್ಥಿತರಿದ್ದರು. ನವೀನ್ ಎಂದೋ ಕಂಡಿದ್ದ ಘಟಿಕೋತ್ಸವದಲ್ಲಿ ಭಾಗವಹಿಸುವ ಕನಸು ಪಾವನಾಳ ಬೆಂಬಲದಿಂದ ಇಂದು ಈಡೇರಿತ್ತು. ನವೀನ್ ತನ್ನ ಗೌನ್ ಮುಟ್ಟಿ ಖುಷಿಪಡುತ್ತಿದ್ದ. ಅದರಿಂದ ನೇತಾಡುವ ಬಳ್ಳಿಗಳು ಗಾಳಿಗೆ ತೂರಾಡಿ ಪಾವನಾಳತ್ತ ಹಾರಿಹೋಗುತ್ತಿದ್ದವು. ತನ್ನ ಹೆಸರು ಬರುತ್ತಿದ್ದಂತೆ ಓಡೋಡಿ ವೇದಿಕೆಯೇರಿದ ನವೀನ್. ನಾಲ್ಕು ಚಿನ್ನದ ಪದಕಗಳನ್ನು ಎಂಬಿಎ ಪದವಿಯಲ್ಲಿ ತನ್ನ ಮುಡಿಗೇರಿಸಿಕೊಂಡಿದ್ದ. ತನ್ನ ಸಾಧನೆಗೆ ಕಾರಣವಾದ ಪತ್ನಿಯನ್ನು ವೇದಿಕೆಯಲ್ಲಿ ಸ್ಮರಿಸಿದ. ಕಾರ್ಯಕ್ರಮದ ನಿರ್ವಾಹಕರಂತೂ ಅವನಲ್ಲಿ ಪತ್ನಿಯ ಹೆಸರು ಕೇಳಿ "ಡಾ|ಪಾವನಾ ವೇದಿಕೆಗೆ ಬನ್ನಿ " ಎಂದು ಕರೆದೇಬಿಟ್ಟರು. ಸಭಾಸದರೆಲ್ಲರೂ ಕಿವಿಗಡಚಿಕ್ಕುವ ಕರತಾಡನದೊಂದಿಗೆ ಪಾವನಾರನ್ನು ಅಭಿನಂದಿಸಿದರು. ವೇದಿಕೆಯ ಎಡಭಾಗದಲ್ಲಿ ಪ್ರೆಸ್ ನವರು ಸಂದರ್ಶನಕ್ಕಾಗಿ ಕಾದುನಿಂತಿದ್ದರು. ಮರುದಿನ ಎಲ್ಲಾ ಪತ್ರಿಕೆಗಳಲ್ಲೂ " ನಾಲ್ಕು ಚಿನ್ನದ ಪದಕ ಪಡೆದ ಅಡುಗೆ ಭಟ್ರು.." ಎಂಬ ಶೀರ್ಷಿಕೆಯಡಿ ನವೀನನ ಫೊಟೋ ರಾರಾಜಿಸುತ್ತಿತ್ತು. ಕುಟುಂಬದ ಸಂತೋಷಕ್ಕೆ ಪಾರವೇ ಇರಲಿಲ್ಲ. ಗಂಗಾಧರ ರಾಯರೂ ನವೀನ್ ನನ್ನು ಕೈಕುಲುಕಿ ಬೆನ್ನುತಟ್ಟಿದರು.
ಕಂಪೆನಿಯೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಉದ್ಯೋಗ ಗಳಿಸಿದ ನವೀನ್ ನ ಮುಖದಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ.
ಮಡದಿ ಪಾವನಾ ಮಗ ಓಜಸ್, ಮಗಳು ಯಶಸ್ವಿ ಹಾಗೂ ಮುದ್ದಾದ ಪುಟಾಣಿ ಹತ್ತು ತಿಂಗಳ ಕಂದ ತೇಜಸ್ ನೊಂದಿಗೆ, ಆಗಾಗ ಬಂದು ಹೋಗುವ ಗಂಗಾಧರ ರಾಯರೊಂದಿಗೂ ಉತ್ತಮ ಬಾಂಧವ್ಯ ಉಳಿಸಿಕೊಂಡು ಸುಖವಾಗಿ ಬಾಳುತ್ತಿದ್ದಾನೆ.
ಪಾವನಾಗೆ ಮನವರಿತು ನಡೆವ ಸಂಗಾತಿ ಸಿಕ್ಕ ಸಂತೃಪ್ತಿ. ಅಷ್ಟ ಐಶ್ವರ್ಯ ತಂದು ಸುರಿದರೂ ಬೇಡ. ಇವನನ್ನೇ ಸಂಗಾತಿಯಾಗಿ ನನಗೆ ಏಳೇಳು ಜನುಮದಲ್ಲೂ ಕರುಣಿಸು ಎಂದು ರಾಮನಲ್ಲಿ ಬೇಡಿಕೊಳ್ಳುತ್ತಿದ್ದಾಳೆ ಸುಮಂಗಲಿ ಪಾವನಾ..
ಯಾವ ತರುವು ಆವ ಲತೆಗೊ
ಒಲವ ಹೂವು ಅರಳಲು
ಯಾರ ಆಸೆಗೆ ಆರ ಒಸಗೆಯೊ
ಯಶದ ಮೆಟ್ಟಿಲೇರಲು...||
🙏 ಶುಭಂ 🙏
✍️... ಅನಿತಾ ಜಿ.ಕೆ.ಭಟ್.
31-10-2020.