ಭಾಸ್ಕರ ರಾಯರಿಗೆ ಅಳಿಯ ವೆಂಕಟನ ಮಾತು ಕೇಳಿದಾಗ ಕುತೂಹಲದಿಂದ ಒಮ್ಮೆ ಕಣ್ಣು ಮೇಜಿನ ಮೇಲೆ ಹೋಯಿತು.ಮೈತ್ರಿಯ ಫೋನ್ ಕಾಣುತ್ತಿಲ್ಲ.. ತೆಗೆದುಕೊಂಡಿದ್ದಾಳೆ.. ಮಹೇಶನ ಫೋನ್ ಅಲ್ಲೇ ಪಕ್ಕದಲ್ಲಿ ಚಾರ್ಜ್ ಆಗುತ್ತಿದೆ.ಮಗಳು ಬೆಳಿಗ್ಗೆ ಮೊಬೈಲ್ ತೆಗೆದುಕೊಂಡರೆ ಸಾಕೆಂಬ ನನ್ನ ಮಾತನ್ನು ಕೇಳದೆ ಮೊಬೈಲ್ ಒಯ್ದಿದ್ದಾಳೆ..ಈಗಿನ ಕಾಲದ ಮಕ್ಕಳೇ ಹೀಗೆ.ಹೋಗಲಿ...ಓದುವಷ್ಟು ಹೊತ್ತಾದರೂ ಮೊಬೈಲ್ ಬಿಟ್ಟು ಇದ್ದಳಲ್ಲಾ..ಅದು ಸಮಾಧಾನ... ಯಾವುದಕ್ಕೂ ನಾಳೆ ಸಂಜೆ ಒಮ್ಮೆ ಸ್ವಲ್ಪ ಅವಳನ್ನು ವಿಚಾರಿಸಿಕೊಳ್ಳಬೇಕು.ಇತ್ತೀಚೆಗೆ ಮೊಬೈಲ್ ಅವಳ ಸಂಗಾತಿಯಾಗಿಬಿಟ್ಟಿದೆ...
ವೆಂಕಟನಿಗೆ ಮಲಗಲು ಹಾಸಿಗೆ ಹಾಸಿ ಕೊಟ್ಟರು ಮಾವ ಭಾಸ್ಕರ ಶಾಸ್ತ್ರಿಗಳು.ಮೈತ್ರಿ, .ಮಹೇಶ ಬೆಳಗ್ಗೆ ಬೇಗ ಕಾಲೇಜಿಗೆ ಹೊರಟರು.. ವೆಂಕಟ್ ನಿಧಾನವಾಗಿ ಎದ್ದು ಅಜ್ಜಿ ಅಜ್ಜನಲ್ಲಿ ಪಟ್ಟಾಂಗ ಹೊಡೆಯುತ್ತಾ ತಿಂಡಿ ತಿಂದನು.ಅಪರೂಪದಲ್ಲಿ ಬಂದ ಮೊಮ್ಮಗನಿಗೆ ಮಹಾಲಕ್ಷ್ಮಿ ಅಮ್ಮ ಒತ್ತಾಯದಿಂದ ಬಡಿಸುತ್ತಿದ್ದರು.ಅವನು ಸಾಕೆಂದರೂ ಇನ್ನು ಸ್ವಲ್ಪ ತಿನ್ನು ಎಂದು ಅಜ್ಜಿಯ ಒತ್ತಾಯ.. ಅಂತೂ ತಿಂಡಿಕಾಫಿ ಮುಗಿಸಿ ಎದ್ದ ವೆಂಕಟನಿಗೆ ಡರ್.. ಎಂದು ದೊಡ್ಡದಾದ ತೇಗು ಬಂದಿತು.
ಮೈತ್ರಿ ಕಾಲೇಜು ಬಸ್ಸಿಗೆ ಕಾಯುತ್ತಿದ್ದಳು.ಇನ್ನೂ ಸಮಯವಿದೆ ಎಂದು ಕಿಶನ್ ನ ಉತ್ತರ ಬಂದಿದೆಯೇ ಎಂದು ಪರೀಕ್ಷಿಸತೊಡಗಿದಳು.. ಊಹೂಂ...ಬಂದಿಲ್ಲ...ಅರೇ... ಏನಾಯಿತು ಇವನಿಗೆ.. ಯಾವತ್ತೂ .. ಮುದ್ದುಗೊಂಬೆ.. ಮುದ್ದುಗೊಂಬೆ...ಅನ್ನುತ್ತಿದ್ದವ ಯಾಕ್ಹೀಗೆ ಒಮ್ಮಿಂದೊಮ್ಮೆಲೇ ಮೌನಿಯಾಗಿಬಿಟ್ಟ.. ಸಂದೇಶ ತಲುಪಿದೆ.. ಅವನು ಓದಿದ್ದಾನೆ..ಆದರೂ ಉತ್ತರಿಸಿಲ್ಲ.. ತುಂಬಾ ನೊಂದಿರಬೇಕು...ಪಾಪದ ಮಾಣಿ ...ಛೇ.. ನಾನು ಅಸಡ್ಡೆ ಮಾತಾಡಬಾರದಿತ್ತು... ಯಾವುದಕ್ಕೂ ನಾನೇ ಒಮ್ಮೆ ಕಾಲ್ ಮಾಡಿ ಕ್ಷಮೆ ಕೇಳುತ್ತೇನೆ...
ಕರೆಮಾಡಿದಳು ಮೈತ್ರಿ.. ಕಿಶನ್ ರಿಸೀವ್ ಮಾಡಲಿಲ್ಲ.. ಆಗ ಬಸ್ ಬಂತು.. ಕಾಲ್ ಕಟ್ ಮಾಡಿ ಬಸ್ ಹತ್ತಿದಳು.ಕಾಲೇಜಿನಲ್ಲಿಳಿದ ಮೈತ್ರಿ ಗೆ ಇಂದು ಪ್ರಾಕ್ಟಿಕಲ್ ಎಕ್ಸಾಂ ಇತ್ತು..ತಯಾರಿಯ ಗಡಿಬಿಡಿಯಲ್ಲಿ ಬೇರೇನೂ ಯೋಚಿಸಲೂ ಬಿಡುವಿರಲಿಲ್ಲ..ಗೆಳತಿಯರೊಂದಿಗೆ ಕೂಡಿ ಕಲಿತ ವಿಷಯಗಳನ್ನು ಮೆಲುಕುಹಾಕುತ್ತಿದ್ದಳು..
"ಹೇಗಿತ್ತು ನಿನ್ನೆಯ ಗಮ್ಮತ್ತು.". ಎನ್ನುತ್ತಾ ತನ್ನೆರಡು ಹಲ್ಲುಗಳನ್ನು ಫ್ರೀಯಾಗಿ ತೋರಿಸುತ್ತಾ ಗಹಗಹಸಿ ನಗುತ್ತಾ ಪಕ್ಕದಲ್ಲಿ ಬಂದು ನಿಂತ ಚರಣ್...
"ಓಹೋ... ಅದು ನಿನ್ನ ಕೆಲಸವೋ.."ಎಂದು ಕೇಳಿದಳು ಮೈತ್ರಿ..
"ಹೇಳು ಈಗಲಾದರೂ ಸೋಲೊಪ್ಪಿಕೊಳ್ತೀಯಾ..."
"ನೋ... ಛಾನ್ಸ್....ಅದು ಮೋಸ..."ಎಂದಳು ಮೈತ್ರಿ..
ಮಾಡಿದ್ದು ತಪ್ಪೆಂದು ಗೊತ್ತಿದ್ದರೂ ಗತ್ತಿನಿಂದ ಬೀಗಿ ನಗುತ್ತಿದ್ದ ಚರಣ್..
ಎರಡು ದಿನದ ಹಿಂದೆ ಕ್ಲಾಸ್ ಫ್ರೀಯಿದ್ದಾಗ ಯುವಕ ಯುವತಿಯರು ಸೇರಿ ಅಂತ್ಯಾಕ್ಷರಿ ಆಡಿದ್ದರು..ಹುಡುಗಿಯರದೇ ಮೇಲುಗೈ..ಹಾಡು ಗೊತ್ತಿಲ್ಲದೆ ಹುಡುಗರು ಸೋಲೊಪ್ಪಲೇಬೇಕಾಯಿತು.ಮೈತ್ರಿ .".ನೋಡಿ ನಾವು ಹುಡುಗೀರು ಎಲ್ಲದರಲ್ಲೂ ಸೈ.."ಎಂದು ಎದೆತಟ್ಟಿಕೊಂಡಿದ್ದಳು.ಇದನ್ನು ಸಹಿಸದ ಹುಡುಗರು ಹುಡುಗಿಯರನ್ನು ಅವಮಾನಿಸಲು ಬೆಂಚಿನ ಮೇಲೆ ಬಬಲ್ ಗಮ್ ಅಂಟಿಸಿದ್ದರು.. ಕೆಲವರು ಕುಳಿತುಕೊಳ್ಳುವಾಗ ತೆಗೆದು ಕುಳಿತರು.. ಮೈತ್ರಿ ಪಾಪ ಲೇಟಾಗಿ ತರಗತಿಗೆ ಬಂದಿದ್ದಳು..ನೋಡದೆ ಕುಳಿತಿದ್ದಳು.. ಡ್ರೆಸ್ ಗೆ ಗಮ್ ಹಿಡಿದಿತ್ತು.. ಎಲ್ಲರೂ ನಕ್ಕಾಗ ಮುಖ ಸಣ್ಣದಾಗಿತ್ತು.
ಪರೀಕ್ಷೆಯ ಸಮಯವಾಯಿತು.ಎಲ್ಲರೂ ಲ್ಯಾಬ್ ನ ಒಳಗೆ ತೆರಳಿದರು.ಪ್ರಾಕ್ಟಿಕಲ್ ಮಾಡತೊಡಗಿದರು.ಚರಣ್ ಸರಿಯಾಗಿ ತಿಳಿಯದೆ ಗೊಂದಲದಲ್ಲಿದ್ದ.ಪಕ್ಕದಲ್ಲಿದ್ದ ಮೈತ್ರಿ ಯನ್ನು ಕೇಳುತ್ತಿದ್ದ.ಅವಳು ಪರೀಕ್ಷೆಯಲ್ಲಿ ಹೇಳಿಕೊಡುವುದು ತಪ್ಪೆಂದು ..ಕೇಳಿದರೂ ಕೇಳಿಸದಂತೆ ತನ್ನ ಪ್ರಯೋಗವನ್ನು ಮುಂದುವರಿಸಿ ಬಂದ ರೀಡಿಂಗ್ ಬರೆಯುತ್ತಿದ್ದಳು.ಬಂದ ಉತ್ತರವು ಅಪ್ರೋಕ್ಸಿಮೇಟ್ ಆಗಿತ್ತು.. ಖುಷಿಯಿಂದ ಉತ್ತರ ಪತ್ರಿಕೆ ಪ್ರೊಫೆಸರ್ ಗೆ ಕೊಟ್ಟಳು.ಅವಳ ಹಿಂದೆಯೇ ಚರಣ್ ಇದ್ದ.ತಾನು ಉತ್ತರಪತ್ರಿಕೆ ಕೊಟ್ಟ.. ಅದನ್ನು ನೋಡಿದ ಪ್ರೊಫೆಸರ್.."ಅಯ್ಯಾ... ಪ್ರಾಕ್ಟಿಕಲ್ ಕ್ಲಾಸ್ ಗೆ ಸರಿಯಾಗಿ ಬರುತ್ತಿಲ್ಲ.. ರೆಕಾರ್ಡ್ ಬುಕ್ ಕಂಪ್ಲೀಟ್ ಆಗ್ಲಿಲ್ಲ...ಆದರೆ ಕೊನೆಯ ರೀಡಿಂಗ್ ಮಾತ್ರ ಕರೆಕ್ಟ್ ಇದೆಯಲ್ಲಾ.. ಯಾವುದಕ್ಕೂ ನಿನ್ನ ಪ್ಲೇಸ್ ಗೇ ಬಂದು ಚೆಕ್ ಮಾಡುತ್ತೇನೆ ಎಂದು ಅವನ ಜೊತೆ ಹೆಜ್ಜೆ ಹಾಕಿದರು..
ಸರಿಯಾಗಿ ಪ್ರಾಕ್ಟಿಕಲ್ ಮಾಡಿಯೇ ಇಲ್ಲ.. ಎಲ್ಲಾ ಅರ್ಧಂಬರ್ಧ..ಆದರೂ ಉತ್ತರ ಹೇಗೆ ಸಿಕ್ಕಿತು ಎಂದು ಅವನನ್ನು ಪ್ರಶ್ನಿಸಿದರೆ ಸ್ಪಷ್ಟ ಉತ್ತರವಿಲ್ಲ..ಸಂಶಯದಿಂದ ಪರಿಶೀಲಿಸಿದಾಗ ಒಂದು ಪೆನ್ ನೊಳಗಿನ ರಿಫಿಲ್ ತೆಗೆದು ಅದರೊಳಗೆ ಉತ್ತರದ ಚೀಟಿಯನ್ನು ತುರುಕಿಸಿ ಕೊಂಡು ಬಂದಿದ್ದ.ಪ್ರೊಫೆಸರ್ ನ ಕೈಗೆ ಸಿಕ್ಕಿ ಬಿದ್ದ.."ಮುಂದಿನ ಪರೀಕ್ಷೆ ಬರೆಯಬೇಕಾದರೆ ಪೇರೆಂಟ್ಸ್ ಕರೆದುಕೊಂಡು ಬಾ" ಎಂದು ಗದರಿದರು.ಪೆಚ್ಚು ಮುಖ ಹೊತ್ತು ಬಂದ ಚರಣ್ ನ ಮುಂದೆ ..." ಮೋಸದ ಗೆಲುವು ಕ್ಷಣಿಕ...ಹುಡ್ಗೀರ್ದೇ ಎತ್ತಿದಕೈ...ಈಗ ಸೋಲೊಪ್ಪಿಕೋ..."ಎಂದು ಹುಡುಗಿಯರೆಲ್ಲ ತಮಾಷೆ ಮಾಡಿದರೆ..."ಹೌದು ಗೆಳತಿಯರೆ... ನೀವೇ ಗೆದ್ದವರು.. ನಾನು ತಪ್ಪು ಮಾಡಿ ಸಿಕ್ಕಿಹಾಕ್ಕೊಂಡಿದೀನಿ ...ಸೋತಿದೀನಿ..."ಎನ್ನುತ್ತಾ ಕಣ್ಣೊರೆಸಿಕೊಳ್ಳುತ್ತಿದ್ದರೆ..ಈ ಹುಡುಗಿಯರೆಲ್ಲ ಭಾವುಕರಾಗಿಬಿಟ್ಟಿದ್ದರು...
ಪಾಪ..!!ಚರಣ್..ಅಳ್ಬೇಡ ಕಣೋ.. ಇನ್ಮುಂದೆ ಇಂಥಾ ಕೆಲ್ಸ ಮಾಡೋಕೆ ಹೋಗ್ಬೇಡ... ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ...
ಎಂದು ಎಲ್ಲರೂ ಸೇರಿ ಬುದ್ಧಿಹೇಳಿದ್ದರು..
ಕಿಶನ್ ಆಫೀಸಿನ ಕೆಲಸದಲ್ಲಿ ಇವತ್ತು ಪ್ರಯಾಣ ಮಾಡಬೇಕಾಗಿ ಬಂದಿತ್ತು.ಆದ್ದರಿಂದ ತುಂಬಾ ಒತ್ತಡದಲ್ಲಿದ್ದ.ಜೊತೆಗೆ ಹಿರಿಯ ಆಫೀಸರ್ ಗಳೂ ಇದ್ದರು.ಆದ್ದರಿಂದ ಮೊಬೈಲ್ ಕಡೆಗೆ ಗಮನ ಹೋಗಲೇಯಿಲ್ಲ.
"ಕಿಶನ್ .... ಇವತ್ತು ನಾವು ವಿಶೇಷವಾಗಿ ಹೊಸ ಪ್ರಾಜೆಕ್ಟ್ ಒಂದನ್ನು ಒಪ್ಪಿಕೊಳ್ಳುತ್ತಿದ್ದೇವೆ.ಬಹಳ ಮುಖ್ಯವಾದ ಪ್ರಾಜೆಕ್ಟ್ ಅದು.ಅದನ್ನು ಯಶಸ್ವಿಯಾಗಿ ಮಾಡಿಕೊಟ್ಟರೆ ಮುಂದೆ ಇನ್ನಷ್ಟು
ಪ್ರಾಜೆಕ್ಟ್ ಗಳು ನಮ್ಮ ಕೈಸೇರಲಿವೆ."
"ಸರಿ.. ಸರ್..." ಎಂದ ಕಿಶನ್..
"ಯಾವುದೇ ಕಾರಣಕ್ಕೂ ಡಿಲೇ ಮಾಡದೆ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಳ್ಳಿ..ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕು..ಹಾಗಾದರೆ ನಿಮಗೆ ಬೋನಸ್ ಸಿಗಲಿದೆ...."
"ಹಾಗೇ ಆಗಲಿ ಸರ್..."ಎಂದ ಕಿಶನ್ ಪ್ರಾಜೆಕ್ಟ್ ಫೈಲ್ ನ ಮೇಲೆ ಕಣ್ಣಾಡಿಸಿದ.
ಸಮಯಕ್ಕೆ ಸರಿಯಾಗಿ ಮುಗಿಸಿಕೊಡಬಹುದು ಎಂದು ಭರವಸೆ ಹುಟ್ಟಿತು ಕಿಶನ್ ಗೆ.ಪ್ರಯಾಣ ಮಾಡುತ್ತಾ ಸುಂದರ ಪ್ರಕೃತಿಯನ್ನು ಆಸ್ವಾದಿಸಿದರು.ದಾರಿ ಮಧ್ಯದಲ್ಲಿ ಒಂದು ಶಿವನ ದೇವಾಲಯವಿತ್ತು.ಡ್ರೈವರ್ ಅಲ್ಲಿಗೆ ಹೋಗಿ ಪ್ರದಕ್ಷಿಣೆ ಹಾಕಿ ಬರೋಣ ಎಂದ.ಎಲ್ಲರೂ ಸರಿಯೆಂದರು...
ದೇವಾಲಯದ ಪಕ್ಕದಲ್ಲೊಂದು ನಂದಿಯ ಏಕಶಿಲಾ ವಿಗ್ರಹವಿತ್ತು."ಇದಕ್ಕೆ ಹನ್ನೆರಡು ಪ್ರದಕ್ಷಿಣೆ ಹಾಕಿದರೆ ಮುಂದಿನ ಯುಗಾದಿಯೊಳಗೆ ಕಂಕಣಭಾಗ್ಯ ಕೂಡಿಬರುವುದೆಂಬ ನಂಬಿಕೆಯಿದೆ"ಎಂದ ಡ್ರೈವರ್..
ಹೋದವರಲ್ಲಿ ಕಿಶನ್ ನನ್ನು ಬಿಟ್ಟು ಉಳಿದವರು ವಿವಾಹಿತರು.ಎಲ್ಲರೂ ಕಿಶನ್ ನತ್ತ ನಗುತ್ತಾ ನೋಡಿದರು..
ಡ್ರೈವರ್ ನಸುನಗುತ್ತಾ..."ಹಾಗಾದ್ರೆ..
ಯಾಕ್ ತಡಾ ಸರ್...ಬೇಗ ಬೇಗ ಪ್ರದಕ್ಷಿಣೆ ಹಾಕ್ಕೊಂಬಿಡಿ..."ಎಂದಾಗ ಎಲ್ಲರೂ ದನಿಗೂಡಿಸಿದರು...
"ಬ್ಯಾಗ್ ಇತ್ತ ಕೊಡಿ ಸರ್.."ಎಂದರು ಒಬ್ಬರು..
"ಅಂಗಿ ಬನಿಯನ್ ಕಳಚಿ "ಎಂದರು ಇನ್ನೊಬ್ಬರು.
ಅಂತೂ ಎಲ್ಲರ ಮಾತನ್ನೂ ಕಿವಿಗೆ ಹಾಕಿಕೊಂಡು ಹನ್ನೆರಡು ಬಾರಿ ಮೈತ್ರಿ ಯ ಜಪ ಮಾಡಿಕೊಂಡು ಪ್ರದಕ್ಷಿಣೆ ಹಾಕಿದ ಕಿಶನ್...
"ಈ ವರ್ಷ ಪಾಯಸದೂಟ ಪಕ್ಕಾ..."ಎಂದು ಎಲ್ಲರೂ ಹಾಸ್ಯಮಾಡುತ್ತಿದ್ದರೆ ಕಿಶನ್ ನ ಮನದಲ್ಲಿ ಮೈತ್ರಿ ಯೇ ತುಂಬಿದ್ದಳು.
ರಾತ್ರಿಯಾಗುವ ಮುನ್ನ ಬೆಂಗಳೂರು ಸೇರಿದರು..ಆಯಾಸಗೊಂಡಿದ್ದ ಕಿಶನ್ ಹೋಟೇಲಲ್ಲಿ ಊಟ ಮಾಡಿ ರೂಂ ಗೆ ತೆರಳಿದ..
ಮನೆಗೆ ತಲುಪಿ ಮೊಬೈಲ್ ನೋಡಿದಾಗ ಹತ್ತು ಬಾರಿ ಮೈತ್ರಿ ಕಾಲ್ ಮಾಡಿದ್ದಳು.. ಸಾಕಿನ್ನು ಇವಳನ್ನು ಸತಾಯಿಸಿದ್ದು .....ಎಂದು ಕಿಶನ್ ಮೈತ್ರಿ ಗೆ ಕಾಲ್ ಮಾಡಿದ...
ಮುಂದುವರಿಯುವುದು...
ನಮಸ್ತೇ...
ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..
ಹಾಗೇನೇ ... > ಈ ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...
share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..
ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.
✍️... ಅನಿತಾ ಜಿ.ಕೆ.ಭಟ್.
01-02-2020.