ರಾತ್ರಿ ಹತ್ತುಗಂಟೆಯ ಸಮಯ.ಚಂದ್ರಗಿರಿ ಎಸ್ಟೇಟ್ ಮುಂದೆ ಐಷಾರಾಮಿ ಕಾರೊಂದು ಬಂದು ನಿಂತಿತು.ವಾಚ್ಮನ್ ಗೇಟು ತೆಗೆದ.ಕಾರು ಒಳಗೆ ಹೋಯಿತು.ಕಾರಿನಿಂದ ಸುಮಾರು ನಲುವತ್ತು ವರ್ಷ ಪ್ರಾಯದ ವ್ಯಕ್ತಿ ಕೆಳಗಿಳಿದ.ವಾಚ್ಮನ್ ಅವನನ್ನು ಯಾರು ಏನು ಎಂದು ಪ್ರಶ್ನಿಸಿದ.. ವಿವರವನ್ನು ತಿಳಿದುಕೊಂಡು ಒಳಗಿದ್ದ ಚಂದ್ರಕಾಂತ ರಾಯರಿಗೆ ಸುದ್ದಿ ಮುಟ್ಟಿಸಿದ.ಚಂದ್ರಕಾಂತ ರಾಯರು ಅವನನ್ನು ಒಳಗೆ ಕರೆಯುವಂತೆ ಸೂಚಿಸಿದರು.ಅವನು ಕಂದು ಬಣ್ಣದ ಕಡತ ಹಿಡಿದು ಒಳಗೆ ಬರುತ್ತಿದ್ದಂತೆ ಬಾಗಿಲು ಮುಚ್ಚಿಕೊಂಡಿತು.ಇಬ್ಬರ ನಡುವಿನ ವ್ಯವಹಾರ ಮುಂದುವರಿಯಿತು.. ಅರ್ಧ ಗಂಟೆಯಲ್ಲಿ ಮಾತುಕತೆ ಮುಗಿದು ಬಂದವ್ಯಕ್ತಿ ಹೊರಗೆ ನಡೆದನು.
ಮರುದಿನ ಬೆಳಿಗ್ಗೆ ಹತ್ತುಗಂಟೆಯ ಸಮಯ . ಆಫೀಸಿಗೆ ಕರ್ತವ್ಯಕ್ಕೆ ಹಾಜರಾದ ಚಂದ್ರಗಿರಿರಾಯರು.. "ಸಾರ್.. ಇವತ್ತು ರತ್ನಾಪುರದ ರೋಡ್ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಇದೆ.. ಈಗಾಗಲೇ ಹತ್ತಾರು ಅರ್ಜಿಗಳು ಬಂದಿವೆ.. ಫೈಲುಗಳನ್ನು ಇಲ್ಲಿ ಇರಿಸಿದ್ದೇನೆ..ಪರಿಶೀಲಿಸಿ ಅಂಗೀಕರಿಸಿದರೆ... ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ.."ಎಂದು ಹೇಳಿದ ಅಟೆಂಡರ್ ರಾಮಣ್ಣ..
"ಸರಿ.. ಅದನ್ನು ಫೈನಲೈಸ್ ಮಾಡುತ್ತೇನೆ..."ಎಂದು ಕಡತಗಳ ಮೇಲೆ ಕಣ್ಣಾಡಿಸಿದರು..ಕಂದು ಬಣ್ಣದ ಕಡತಕ್ಕಾಗಿ ಕಣ್ಣು ಹುಡುಕಿತು..ಕೈಗೆತ್ತಿಕೊಂಡು ಸಹಿ ಹಾಕಿದರು.. ಅಟೆಂಡರ್ ರಾಮಣ್ಣ ನನ್ನು ಕರೆದು
" ಸಮರ್ಥ್ ರೋಡ್ ಕನ್ಸ್ಟ್ರಕ್ಷನ್ ಅಂಡ್ ಮೈಯ್ಟೆನೆನ್ಸ್.."ಕಂಪನಿಗೆ ಗುತ್ತಿಗೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.. ನೋಟೀಸ್ ಕಳುಹಿಸಿಬಿಡು..
"ಸಾರ್.. ಅದು.."
"ಏನು.."
"ಅವನೊಬ್ಬ ಮೋಸಗಾರ ಸರ್..ಕೆಲಸ ಅರ್ಧಂಬರ್ಧ ಮಾಡಿ ಕೊಳ್ಳೆಹೊಡೆಯುವ ಕಂಪೆನಿ ರಾಜಶೇಖರ್ ಅವರದು.."
"ನೋಡು.ಅದು ನಿನಗೆ ಸಂಬಂಧಪಟ್ಟ ವಿಷಯವಲ್ಲ.. ಹೇಳಿದಷ್ಟು ಮಾಡು.."ಎಂದ
ಪಿ ಡಬ್ಲ್ಯು ಡಿ ಆಫೀಸರ ಮಾತಿಗೆ ತಲೆಯಲ್ಲಾಡಿಸಿದ ರಾಮಣ್ಣ..
ಟೆಂಡರ್ ರಾಜಶೇಖರ್ ಪಾಲಾಯಿತು.. ರೋಡ್ ನ ಕಾಮಗಾರಿ ಪ್ರಾರಂಭವಾಯಿತು. ಕೋಟಿಗಟ್ಟಲೆ ಹಣ ಬಿಡುಗಡೆಯಾಯಿತು.. ಊರಿನ ಜನರೆಲ್ಲ ತಮ್ಮ ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಕನಸು ಕಂಡರು.ಹೊಸ ರಸ್ತೆಯಲ್ಲಿ ಓಡಾಡುವ ಜನರ ಸಂಭ್ರಮವೇನು.. ಸಡಗರವೇನು...ಮಿರಮಿರ ಮಿಂಚುವ ಡಾಂಬರು ರಸ್ತೆ ತನ್ನದೇ ಗತ್ತಿನಲ್ಲಿ ಬೀಗಿತು.. ಪೂರ್ಣ ಕಾಮಗಾರಿ ಮುಗಿಯುವ ಮುನ್ನವೇ ಅಲ್ಲಲ್ಲಿ ಬೋರ್ಡಗಳು ರಾರಾಜಿಸಿದವು..
ಹಣ ಬಿಡುಗಡೆ ಗೊಳಿದವರು...
ಕಾಮಗಾರಿ ನಡೆಸಿದವರು...
ಉದ್ಘಾಟನಾ ಸಮಾರಂಭ..
ಅದರಲ್ಲಿ ನಮೂದಿಸಿದ ದಿನವೇ ಉದ್ಘಾಟನಾ ಸಮಾರಂಭ ಜರುಗಿತು.. ಪಿ ಡಬ್ಲ್ಯು ಡಿ ಆಫೀಸರ್ ಚಂದ್ರಕಾಂತ ರಾಯರು ಕಪ್ಪನೆಯ ಕೋಟು ಧರಿಸಿ ಬೆಲೆಬಾಳುವ ಕಾರಿನಲ್ಲಿ ಬದಿಳಿದರು.ಅವರಿಗೆ ಊರವರೆಲ್ಲ ನಮ್ಮ ಊರಿನ ಅಭಿವೃದ್ಧಿಯ ಹರಿಕಾರ ಎಂದು ಕೊಂಡಾಡಿ ಸುಸ್ವಾಗತ ವನ್ನು ಕೋರಿದರು.. ರಿಬ್ಬನ್ ಕತ್ತರಿಸಿ ಡಾಮರೀಕೃತ ರೋಡನ್ನು ಉದ್ಘಾಟನೆ ಮಾಡಿ ಅಮೋಘವಾದ ಭಾಷಣಗೈದರು.ಊರವರೆಲ್ಲ ಕಿವಿಗಡಚಿಕ್ಕುವಂತೆ ಕರತಾಡನಗೈದರು..
ಮರುದಿನವೇ ಗುತ್ತಿಗೆ ಕಂಪೆನಿಯವರು ಅಲ್ಲಿಂದ ಕಾಲ್ಕಿತ್ತರು.ಮೋರಿಗಳ ನಿರ್ಮಾಣಕ್ಕೆಂದು ಬಂದು ಬಿದ್ದಿದ್ದ ಬೃಹತ್ ಸಿಮೆಂಟಿನ ಪೈಪುಗಳು ಅನಾಥ ಸ್ಥಿತಿಯಲ್ಲಿ ಉಳಿದವು ..ಅಲ್ಲಲ್ಲಿ ಡಾಂಬರಿನ ಡಬ್ಬಿಗಳು ,ಜಲ್ಲಿಕಲ್ಲುಗಳು , ಕಬ್ಬಿಣದ ಸರಳುಗಳು ಬಿದ್ದಿದ್ದವು ..ಕ್ರಮೇಣ ಯಾರ್ಯಾರದೋ ಪಾಲಾದವು.
ಒಂದು ಮಳೆಗಾಲ ಬರುತ್ತಿದ್ದಂತೆ ಡಾಂಬರು ರಸ್ತೆಯಿಂದ ಎದ್ದುಬಂದಿತು.ಮೋರಿಯಿಲ್ಲದೆ ನೀರು ರಸ್ತೆಯ ಮೇಲೆಯೇ ಹರಿದು ಪರಿಸ್ಥಿತಿ ಇನ್ನಷ್ಟು ಶೋಚನೀಯವಾಯಿತು.ಮಾರ್ಗ ಸರಿಯಾಯಿತೆಂದು ಬರಲಾರಂಭಿಸಿದ ಬಸ್ಸುಗಳೆಲ್ಲ ಅರ್ಧ ದಾರಿಯಲ್ಲಿ ಜನರನ್ನು ಇಳಿಸಿ ತಿರುಗಿದವು. ಹೊಸಕನಸು ಹೊತ್ತು ಶಾಲಾಕಾಲೇಜುಗಳಿಗೆ ಸೇರಿಕೊಂಡ ವಿದ್ಯಾರ್ಥಿಗಳು ಎರಡು ಮೂರು ಮೈಲು ನಡೆದುಕೊಂಡೇ ಸಾಗಬೇಕಾದ ಅನಿವಾರ್ಯತೆ ಎದುರಾಯಿತು.. ಜನರಿಗೆ ಈಗ ಮೋಸ ಅರಿವಿಗೆ ಬಂದಿತ್ತು.
ರಾಜಶೇಖರ್ ಮತ್ತು ಚಂದ್ರಕಾಂತ ರಾಯರು ಜನರ ಬೆವರಿನ ತೆರಿಗೆ ದುಡ್ಡಿನಲ್ಲಿ ಮೆರೆದರು.ಕೋಟಿ ಅನುದಾನದಲ್ಲಿ ತಮ್ಮ ತಮ್ಮ ಪಾಲನ್ನು ಹಂಚಿಕೊಂಡರು.ರಾಜಶೇಖರ್ ಅವರಿಗೆ ಇನ್ನಷ್ಟು ರೋಡ್ ಪ್ರಾಜೆಕ್ಟ್ ಗಳು ಕೈಸೇರಿದವು.ಚಂದ್ರಗಿರಿ ರಾಯರು ತಮ್ಮ ಮಕ್ಕಳಿಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣ ಕೊಡಿಸಿದರು.
ಅಂದು ಚಂದ್ರಗಿರಿ ಎಸ್ಟೇಟ್ ಮತ್ತಷ್ಟು ರಂಗೇರಿಸಿಕೊಂಡಿತ್ತು.ಎಲ್ಲೆಲ್ಲೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು.ಅದ್ದೂರಿಯ ಸಮಾರಂಭ ಏರ್ಪಾಡಾಗಿದೆ ಎಂದು ಊರಿಗೆ ಊರೇ ಮಾತನಾಡುತ್ತಿತ್ತು.ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಜನರ ದುಡ್ಡು ನೀರಿನಂತೆ ಪೋಲಾಗಿತ್ತು.ಅಂದು ತಮ್ಮ ಮಗಳ ಮದುವೆಯ ಸಮಾರಂಭದಲ್ಲಿ ಭಾಗಿಯಾದರು ಚಂದ್ರಗಿರಿರಾಯರು.ಸಂಜೆ ಆರತಕ್ಷತೆ ಸಮಾರಂಭ ನಗರದ ಹೋಟೇಲೊಂದರಲ್ಲಿ ಏರ್ಪಾಡಾಗಿತ್ತು.ಚಂದ್ರಗಿರಿರಾಯರು ಕುಟುಂಬ ಸಮೇತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದ್ದಕ್ಕಿದ್ದಂತೆ ಒಮ್ಮೆ ಮೈನಡುಗುವ ಸದ್ದು ಕೇಳಿಸಿತು.ಏನಾಗುತ್ತಿದೆ ಎಂದು ನೋಡುತ್ತಿದ್ದಂತೆ ನೂರಾರು ಜನ ಸೇರಿದರು.ಎದ್ದೇಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು ಎಲ್ಲರೂ.ಜನರು ಒಬ್ಬೊಬ್ಬರನ್ನೇ ಕಾರಿನಿಂದ ಹೊರಗೆಳೆದು ತೆಗೆದರು.ಕಳೆದ ವರ್ಷ ಸಮರ್ಥ್ ಕನ್ಸ್ಟ್ರಕ್ಷನ್ ಗೆ ಗುತ್ತಿಗೆ ನೀಡಿದ್ದ ರೋಡ್ ನಲ್ಲಿ ದೊಡ್ಡದಾಗಿ ಹೊಂಡವೆದ್ದಿತ್ತು .ಅದರ ಅರಿವಾಗದ ಚಾಲಕ ..
ಹತ್ತಿರ ಬಂದಾಗ ತಿಳಿದು ಕಾರು ಪಕ್ಕಕ್ಕೆ ತಿರುಗಿಸಿದ್ದಾನೆ.ಮಾರ್ಗದ ಬದಿಯಲ್ಲಿದ್ದ ಕರೆಂಟಿನ ಕಂಬಕ್ಕೆ ಡಿಕ್ಕಿಹೊಡೆದು ಕಾರು ಸಂಪೂರ್ಣ ಜಖಂ ಆಗಿತ್ತು...
ಕಾಲು ಕೈಯ ಮೂಳೆ ಮುರಿದು ಚಂದ್ರಗಿರಿರಾಯರು ನೋವನುಭವಿಸುತ್ತಿದ್ದಾರೆ.
ರಾಜಶೇಖರ ರಾಯರ ಮೇಲೆಯೇ ರೋಡ್ ನ ಅಪೂರ್ಣ ಕಾಮಗಾರಿಗೆ ಕೇಸು ದಾಖಲಿಸಿದ್ದಾರೆ.
ಕೋರ್ಟು ಕಛೇರಿ ಅಲೆದಾಟ ರಾಜಶೇಖರ ರಾಯರ ನೆಮ್ಮದಿಯನ್ನು ಕಸಿದುಕೊಂಡಿದೆ.ಶಿಕ್ಷೆಯಾಗುವ ಭೀತಿ ಕಾಡುತ್ತಿದೆ...ಹಗಲಿನ ಸೂರ್ಯ ☀️ ಇರುಳಿನ ಚಂದ್ರ ಎಲ್ಲದಕ್ಕೂ ಸಾಕ್ಷಿಯಾಗಿದ್ದಾರೆ...
✍️... ಅನಿತಾ ಜಿ.ಕೆ.ಭಟ್.
28-01-2020.
ಕಥಾ ಅರಮನೆಯ 'ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ 'ಥೀಂ ಗೆ ಬರೆದ ಬರಹ.ಮೂಲ ಎಳೆ ನೈಜ ಘಟನೆ.. ಕಾಲ್ಪನಿಕ ನಿರೂಪಣೆ... ದ್ವಿತೀಯ ಬಹುಮಾನ ಪಡೆದಿದೆ.
ಕಥೆ ಚೆನ್ನಾಗಿದೆ
ReplyDeleteಥ್ಯಾಂಕ್ಯೂ 💐🙏
ReplyDelete