Tuesday, 28 January 2020

ಜೀವನ ಮೈತ್ರಿ- ಭಾಗ ೩






  ಕಾಲೇಜಿನತ್ತ ಹೆಜ್ಜೆ ಹಾಕಿದ ಮೈತ್ರಿ ಲೇಡೀಸ್ ರೂಮಿಗೆ ತೆರಳಿದಳು.ಒಳಕಾಲಿಡುತ್ತಿದ್ದಂತೆಯೇ ಹ್ಯಾಪಿ ಬರ್ತ್ ಡೇ ಟು ಯು... ಡೀಯರ್ ಮೈತ್ರಿ... ಎಂದು ಒಮ್ಮೆಲೇ ಬಂದ ದನಿಯನ್ನು ಕೇಳಿ ಆಶ್ಚರ್ಯವಾಯಿತು ಮೈತ್ರಿಗೆ.ಫ್ರೆಂಡ್ಸ್ ಸುನಿಧಿ, ರೀನಾ, ಸೀಮಾ,ಸಾಜಿದಾ,ಶಮಾ... ಎಲ್ಲರೂ ಸೇರಿ ಗೆಳತಿಯ ಹುಟ್ಟುಹಬ್ಬಕ್ಕೆ ಒಳ್ಳೆಯ ಸರ್ಪ್ರೈಸ್ ಕೊಟ್ಟಿದ್ದರು.. ಮೈತ್ರಿ ಕೇಕ್ ಕಟ್ ಮಾಡಿ ಎಲ್ಲರಿಗೂ ತಿನಿಸಿದಳು...ಫ್ರೆಂಡ್ಸ್ ಮೈತ್ರಿಯ ಮುಖಕ್ಕೆ ಕ್ರೀಂ ಹಚ್ಚುವ ಪ್ರಯತ್ನ ದಲ್ಲಿದ್ದರು.." ಏಯ್..ಬೇಡ..ಬೇಡ ಫ್ರೆಂಡ್ಸ್...ಈಗ ಫಸ್ಟ್ ಪೀರಿಯಡ್ ಇಲೆಕ್ಟ್ರಾನಿಕ್ಸ್ ಕ್ಲಾಸ್..ಆ ಸಂತೋಷ್ ಸರ್... ಕೈಗೆ ಸಿಕ್ಕರೆ ಅಷ್ಟೇ ಮತ್ತೆ..ಈ ಸೆಮಿಸ್ಟರ್ ಮುಗಿಯೋವರೆಗೆ ನನ್ನನ್ನೇ ಟಾರ್ಗೇಟ್ ಮಾಡ್ತಾರೆ..."


   ಹೇಳುವ ಮೊದಲೇ ಸುನಿಧಿ ಸ್ವಲ್ಪ ಕ್ರೀಂ ಅನ್ನು ಮೈತ್ರಿ ಯ ಕೆನ್ನೆಗೆ ಹಚ್ಚಿಯಾಗಿತ್ತು... ಅದನ್ನು ತೊಳೆಯಲೆಂದು ಹೋದಳು ಮೈತ್ರಿ...ಕೆನ್ನೆ ಉಜ್ಜಿ ಉಜ್ಜಿ ನೋವಾದರೂ ಆಕೆಗೆ ಸಮಾಧಾನ ಆಗಲಿಲ್ಲ.. ಮೇಕಪ್ ಹೋಯಿತೆಂಬ ಆತಂಕ..ಶಮಾಳ ಬ್ಯಾಗ್ ನಿಂದ ಮೇಕಪ್ ಕಿಟ್ ಬಳಸಿಕೊಂಡು ಅಲಂಕಾರ ಮಾಡಿಕೊಂಡಳು.. ಕೇಕ್ ಕಟ್ ಮಾಡಿದ್ದು ತಿಂದು ಇನ್ನೂ ಉಳಿದಿತ್ತು.. ಅದನ್ನು ಅಚ್ಚುಕಟ್ಟಾಗಿ ಪುನಃ ಕವರ್ ಮಾಡಿ ತಂದ ಬ್ಯಾಗ್ ಗೆ ತುಂಬಿಕೊಂಡರು.ಇನ್ನೇನು ಕ್ಲಾಸ್ ಗೆ ಲೇಟಾಗುತ್ತೆ ಅಂತಾ ವೇಗವಾಗಿ ನಡೆಯತೊಡಗಿದರು.. "ಸಂತೋಷ್ ಸರ್..ನಾನು ಬಂದ ಕಾಲೇಜು ಬಸ್ಸಲ್ಲೇ ಬಂದಿದ್ದಾರೆ...ಈಗ ನಾನು ಕ್ಲಾಸ್ ಗೆ ತಡವಾದರೆ ಕಾರಣ ಕೇಳಿಯಾರು "ಎಂದು ಹೆದರುತ್ತಲೇ ವೇಗವಾಗಿ ಗೆಳತಿಯರೊಂದಿಗೆ ಹೆಜ್ಜೆಹಾಕಿದಳು ಮೈತ್ರಿ.. ವೇಗವಾಗಿ ಮೆಟ್ಟಲೇರುತ್ತಿದ್ದಾಗ ಎಡವಿದಳು ಮೈತ್ರಿ..ಬೀಳುತ್ತಿದ್ದ ಮೈತ್ರಿ ಯನ್ನು ಸಾಜಿದಾ ಗಟ್ಟಿಯಾಗಿ ಹಿಡಿದುಕೊಂಡಳು.. "ಅಬ್ಬಾ..ಸಾಜಿದಾ.. ನೀನು ಹಿಡಿದದ್ದಕ್ಕೆ ಬಚಾವಾದೆ..ಇಲ್ಲದಿದ್ದರೆ ಏನು ಅನಾಹುತ ಕಾದಿತ್ತೋ ಏನೋ.. "ಎನ್ನುತ್ತಾ ಕುಂಟುತ್ತಾ ತರಗತಿಯತ್ತ ಸಾಗಿದರು...


    ಆಗಲೇ ತರಗತಿಗೆ ಸರ್ ಎಂಟ್ರಿ ಕೊಟ್ಟಿದ್ದರು..ಎಲ್ಲರ ಎದೆ ಢವಗುಟ್ಟುತ್ತಿತ್ತು... ತಡವಾಗಿ ಬಂದವರನ್ನು ಒಮ್ಮೆ ತನ್ನ ಗಂಭೀರವಾದ ನೋಟದಿಂದ ಗದರಿ "ಯಸ್..ಕಮಿನ್..".ಅಂದರು... ಅವಸರವಸರವಾಗಿ ಎಲ್ಲರೂ ತಮ್ಮ ಸ್ಥಳದಲ್ಲಿ ಕುಳಿತುಕೊಂಡರು...ಪಾಠಮಾಡುತ್ತಿದ್ದ ಸಂತೋಷ್ ಸರ್ .. ಪ್ರಶ್ನೆಯೊಂದನ್ನು ಕೇಳಿ ಉತ್ತರ ಯಾರು ಹೇಳುತ್ತಾರೆಂದು ಗಮನಿಸುತ್ತಿದ್ದರು.. ಕೆಲವರು ಕೈ ಮೇಲೆ ಮಾಡಿದ್ದರು . ಮೈತ್ರಿ ಸುಮ್ಮನಿದ್ದಳು..ಅವಳತ್ತ ಬೆರಳು ತೋರಿದರು ...ಮೇಲೇಳಲು ಪ್ರಯತ್ನಿಸಿದ ಅವಳ ಬಟ್ಟೆಗೆ ಚೂಯಿಂಗ್ ಗಮ್ ಅಂಟಿತ್ತು.. ಎದ್ದು ನಿಂತು ಉತ್ತರಿಸಲು ಏನು ಬಡಬಡಾಯಿಸಿದಳು.. ಹಿಂದಿನಿಂದ ಗೆಳೆಯ ಗೆಳತಿಯರ ಗುಂಪು ಗೊಳ್ಳೆಂದು ನಕ್ಕಿತು.. ಸರ್..ಗರಂ ಆದರು... ಮೈತ್ರಿ ಚೂಯಿಂಗ್ ಗಮ್ ಹಿಡಿದದ್ದು ಕಾಣದಂತೆ ಮೆಲ್ಲನೆ ಬಟ್ಟೆ ಮೇಲೆ ವೇಲ್ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು..

       ನಕ್ಕವರನ್ನು ಒಬ್ಬೊಬ್ಬರನ್ನೇ ನಿಲ್ಲಿಸಿ ಪ್ರಶ್ನೆ ಗೆ ಸರಿಯಾದ ಉತ್ತರ ಸಿಗುತ್ತದೋ ಎಂದು ನೋಡುತ್ತಿದ್ದರು..ನಕ್ಕ ಎಲ್ಲರನ್ನೂ ಕೇಳಿದರೂ ಗುರುಗಳಿಗೆ ಬೇಕಾದ ಉತ್ತರ ಸಿಗಲೇಯಿಲ್ಲ... ಕೊನೆ ಗೆ ಮುಂದೆ ಕುಳಿತಿದ್ದ ಪ್ರತಿಭಾವಂತ ವಿದ್ಯಾರ್ಥಿಯಿಂದ ಉತ್ತರ ಪಡೆದ ಗುರುಗಳು ನಕ್ಕವರನ್ನು ತರಾಟೆಗೆ ತೆಗೆದುಕೊಂಡರು...
ನಗುವಿನ ಕಾರಣವನ್ನು ವಿಚಾರಿಸಿಕೊಂಡರು..ಯಾರೂ ಬಾಯಿಬಿಡಲೇಯಿಲ್ಲ.. ಕೊನೆಗೆ ಅನಿವಾರ್ಯ ವಾಗಿ ಮೈತ್ರಿ ಬಾಯಿಬಿಡಬೇಕಾಯಿತು.. ವಿಷಯ ತಿಳಿಸಿದ ಮೈತ್ರಿ ಗೆ ಕುಳಿತುಕೊಳ್ಳಲು ಅವಕಾಶ ನೀಡಿದರು.. ಚೂಯಿಂಗ್ ಗಮ್ ಅಂಟಿಸಿದವರು ಯಾರು ಎಂದು ತನಿಖೆ ಮಾಡಿದರು..ಯಾರೂ ಒಪ್ಪಿಕೊಳ್ಳಲಿಲ್ಲ..ಹೇಳದಿದ್ದವರಿಗೆ
ಇಡೀ ಪೀರಿಯಡ್ ನಿಲ್ಲುವ ಶಿಕ್ಷೆಯನ್ನು ವಿಧಿಸಿದರು...

    ಮೈತ್ರಿ ನನ್ನ ಬರ್ತ್ ಡೇ ದಿನ ವೇ ಹೀಗೆಲ್ಲ ಆಗಬೇಕೇ ಎನ್ನುತ್ತಾ ಮೂಡ್ ಔಟ್ ಆದಳು.. ತರಗತಿ ಮುಗಿಸಿ ಸರ್ ತೆರಳಿದರು.. ಬಟ್ಟೆಗೆ ಅಂಟಿದ್ದ ಗಮ್ ಹೋಗಲೇಯಿಲ್ಲ.. ಇಡೀ ದಿನ ಮೈತ್ರಿ ಗೆ ಅದನ್ನು ಮುಚ್ಚಿಡಲು ದುಪ್ಪಟ್ಟಾ ನೆರವಾಯಿತು..

   ಬರ್ತ್ ಡೇ ಗರ್ಲ್ ...ತನ್ನ ಡಾರ್ಲಿಂಗ್ ಗೆ ಆಗಾಗ  ಮೆಸೇಜ್ ಕಳಿಸುತ್ತಿದ್ದ ಕಿಶನ್.. ಅವನಿಗೆ ಉತ್ತರಿಸು ಮೂಡ್ ಅವಳಿಗಿರಲಿಲ್ಲ...ಏನೋ ನನ್ನ ಮುದ್ದು ಗೊಂಬೆ ಇವತ್ತು ಯಾವತ್ತಿನಂತೆ ಇಲ್ಲ ಎಂದು ಅನಿಸಿತ್ತು ಅವನಿಗೆ... ಊಟದ ಬಿಡುವಿನಲ್ಲಿ ಕಾಲ್ ಮಾಡಿ ಮಾತಾಡುತ್ತೇನೆ ಎಂದು ಕೊಂಡ ಕಿಶನ್..ಮಧ್ಯಾಹ್ನ ಕಾಲ್ ಮಾಡಿದ.. ಯಾವತ್ತೂ ಕಿಲಕಿಲ ನಗುತ್ತಾ ಮಾತಾಡುವವಳು ಇಂದು "ಏನು ನಿಂಗೆ ಕಾಲ್ ಮಾಡೋದಕ್ಕೆ ಹೊತ್ತು ಗೊತ್ತು ಇಲ್ವಾ.."ಎಂದು ರೇಗಿಯೇ ಬಿಟ್ಟಳು ಮೈತ್ರಿ...

ಪೆಚ್ಚಾದ ಕಿಶನ್..ಮೊದಲ ಬಾರಿಗೆ ತನ್ನ ಪ್ರೇಯಸಿ ಸಿಟ್ಟುಮಾಡಿಕೊಂಡಿದ್ದಳು.. ಯಾವತ್ತೂ ಶಾಂತಚಿತ್ತಳಾಗಿರುತ್ತಿದ್ದ ಮೈತ್ರಿ ಇಂದು.. ತನ್ನ ಬರ್ತ್ ಡೇ ದಿನ ಸಿಟ್ಟುಮಾಡಿಕೊಂಡದ್ದು ಅವನಿಗೆ ಬೇಸರತರಿಸಿತು...

ಉಳಿದಿದ್ದ ಕೇಕ್ ಅನ್ನು ತರಗತಿಯ ಗೆಳತಿಯರಿಗೆಲ್ಲ ಹಂಚಲಾಯಿತು.. ಎಲ್ಲರೂ ಮೈತ್ರಿ ಗೆ ಶುಭಹಾರೈಸಿದರು... ಸಂಜೆ ಮನೆಗೆ ಬಂದ ಮೈತ್ರಿ ಮಂಕಾಗಿದ್ದದ್ದನ್ನು ತಾಯಿ ಮಂಗಳಮ್ಮ ಗಮನಿಸಿದರು..ಕಾರಣ ಕೇಳಿದ ಅಮ್ಮನಲ್ಲಿ ನನ್ನ ಡ್ರೆಸ್..ಹೊಸದು..ಇದಕ್ಕೆ ಚೂಯಿಂಗ್ ಗಮ್ ಹಿಡಿದುಬಿಟ್ಟಿದೆ ನೋಡು ಎನ್ನುತ್ತಾ ತೋರಿಸಿದಳು... ಅದನ್ನು ನೋಡಿದ ಅಮ್ಮ ಎಣ್ಣೆ ಹಾಕಿ ತೊಳೆಯೋಣ..ಹೋಗುತ್ತದೆ.
ಚಿಂತೆಮಾಡದೆ ತಿಂಡಿತಿನ್ನು ಎನ್ನುತ್ತಾ ಸಂಜೆ ಮಾಡಿದ್ದ ಜೀವಿಹಲಸಿನ ಪೋಡಿ ,ನಿನ್ನೆ ನೆರೆಮನೆಯ ಶ್ರಾದ್ಧದಿಂದ ಕೊಟ್ಟ ಹೋಳಿಗೆಯನ್ನು ಕೊಟ್ಟರು... ಜೊತೆಗೆ ಒಂದು ಲೋಟ ಹಾಲನ್ನಿತ್ತರು ..."ಹಾಲು ಬೇಡಮ್ಮಾ.."ಎಂದಳು ಮೈತ್ರಿ... "ಹೀಗೇ ಏನೂ ತಿನ್ನದಿದ್ದರೆ ಸೊರಗುತ್ತೀಯಾ..ಪೌಷ್ಟಿಕಾಂಶ ದೊರೆಯುವುದು ಹೇಗೆ...ಮನೆಯಲ್ಲಿ ಸಾಕಿದ ಕಪಿಲೆ ದನದ ಹಾಲು ಕುಡಿ.. ಎಂದು ಒತ್ತಾಯಿಸಿದರು"..ಮಂಗಳಮ್ಮ... ಅಜ್ಜಿಬಂದು..."ಅದಕ್ಕೆ ಸ್ವಲ್ಪ ಕಾಫಿ ಡಿಕಾಕ್ಷನ್ ಬೆರೆಸಿ ಕೊಡು..ಕಡೀತಾಳೆ..."ಎಂದರೆ ..."ಅಜ್ಜೀ.. ನಂಗೆ ಕಾಫಿ ಬೇಡಜ್ಜಿ..."ಎಂದಳು...

ಅಷ್ಟರಲ್ಲಿ ಕಾಲೇಜಿನಿಂದ ಬಂದ ಮಹೇಶ್   ".. ಅಕ್ಕನಿಗೆ ಕಾಫಿ ಕುಡಿಯಲು ಭಯ.. ಎಲ್ಲಾದರೂ ಕಪ್ಪಾದರೆ ಎಂದು.. ಮತ್ತೆ ನೋಡಲು ಬಂದ ಹುಡುಗ... ಹುಡುಗಿ ಕಪ್ಪು ಎಂದು ಕೊರತೆ ಹೇಳಿದರೆ.."

"ನೀನ್ ಯಾವಾಗ ಬಂದ್ಯೋ ..
ತಮ್ಮಣ್ಣ...ಎಮ್ಮೆ ತಮ್ಮಣ್ಣ.. ನೀನು ಬೆಳ್ಳಗಾಗಿ ಗುಂಡಗಾಗಲೂ ಎಮ್ಮೆ ಹಾಲು ಕುಡಿ..."ಎನ್ನುತ್ತಾ ತಾನೂ ಬಿಡದೆ ರೇಗಿಸಿದಳು...

ತಿಂಡಿ ಮುಗಿಸಿ ತನ್ನ ರೂಮು ಸೇರಿದಳು ಮೈತ್ರಿ.. ಯಾವತ್ತೂ ಈ ಹೊತ್ತಿನಲ್ಲಿ ಕಿಶನ್ ದು ಮೆಸೇಜ್ ಬರುವುದು ರೂಢಿ..ಇವತ್ತೇನು ಬಂದಿಲ್ಲ.. ಎನ್ನುತ್ತಾ ಯೋಚಿಸುತ್ತಾ ಕುಳಿತವಳಿಗೆ... ತಾನು ಮಧ್ಯಾಹ್ನ ರೇಗಿದ್ದು ನೆನಪಾಗಲೇಯಿಲ್ಲ.. ಹೋಂ ವರ್ಕ್ ಮಾಡಲು ಕುಳಿತವಳಿಗೆ ಮನಸ್ಸಾಗದೆ ಸೀದಾ ಸ್ನಾನ ಕ್ಕೆ ತೆರಳಿದಳು..ಸ್ನಾನ ಮುಗಿಸಿ ದೇವರ ಮುಂದೆ ಕುಳಿತು ಸುಶ್ರಾವ್ಯವಾಗಿ ಭಜನೆಯನ್ನು ಹಾಡಿದಳು..ಹೊರಗೆ ಚಾವಡಿಯಲ್ಲಿ ಕುಳಿತಿದ್ದ ಅಜ್ಜ ಅಜ್ಜಿ ಮೊಮ್ಮಗಳ  ಸಿರಿಕಂಠದಿಂದ ಹೊರಹೊಮ್ಮಿದ  ದೇವರ ನಾಮಕ್ಕೆ ಕುಳಿತಲ್ಲಿಂದಲೇ ತಾಳ ಹಾಕುತ್ತಾ ತಲೆದೂಗುತ್ತಿದ್ದರು...


  ಹತ್ತು ನಿಮಿಷ ಭಜನೆ ಮಾಡಿದಾಗ ಮೈತ್ರಿಯ ಮನಸ್ಸು ಶಾಂತವಾಯಿತು...ಪರಿಶುದ್ಧವಾಯಿತು...
ಓದಲು ಬರೆಯಲು ಆರಂಭಿಸಿದಳು.. ಮನೆಯ ಹೊರಗಿನ ಬದಿಯಲ್ಲಿದ್ದ ಕೊಟ್ಟಗೆಯಲ್ಲಿ ಅಡಿಕೆ ಸುಲಿಯುತ್ತಿದ್ದರು ಜಾನಪ್ಪ ಮತ್ತು ಮೋನಪ್ಪ...ಒಮ್ಮೆಲೇ ಏನೋ ಸದ್ಧಾಗಿ ಹೆದರಿ ಮನೆಯತ್ತ ಧಾವಿಸಿದ್ದರು.. ಶ್ಯಾಮ ಶಾಸ್ತ್ರಿಗಳು ಏನೆಂದು ನೋಡಲು ಹೇಳಿದರು.ನೋಡುತ್ತಿದ್ದಂತೆ ಮೇಲಿನ ಅಟ್ಟದ ಹಲಗೆಯಲ್ಲೆಲ್ಲ ಬಿಳಿ ನೊರೆ ಕಾಣಿಸುತ್ತಿತ್ತು..ಜಾನಪ್ಪ,,ಮೋನಪ್ಪ ಕಾಲು ಮುಂದಿಡಲು ಭಯಪಡುತ್ತಿದ್ದರು.. ಭಾಸ್ಕರ ರಾಯರು ಪೇಟೆಗೆ ಹೋಗಿದ್ದವರು ಮನೆಗೆ ಬರುತ್ತಿದ್ದಂತೆ ವಿಷಯ ತಿಳಿದು ಕೊಟ್ಟಿಗೆಗೆ ಧಾವಿಸಿದರು..ನೊರೆಯೇನೆಂದು ತಿಳಿಯಲು ಮೆಲ್ಲನೆ ಅಟ್ಟಕ್ಕೆ ಹತ್ತುವ ಏಣಿಯನ್ನು ಏರಿದರು..ನೋಡಿದರೆ ಅಲ್ಲೊಂದು ಹೆಬ್ಬಾವು ಇಲಿಯನ್ನು ಹಿಡಿದು ನುಂಗುತ್ತಿತ್ತು.ಇಲಿಯನ್ನು ಬೇಟೆಯಾಡುವಾಗ ಅಲ್ಲಿದ್ದ ವಸ್ತುಗಳು ಬಿದ್ದು ಸದ್ದಾಗಿತ್ತು ..ಯಾವಾಗ ಬಂತೋ..ಏನೋ..ಕೂಡಲೇ ಭಾಸ್ಕರ ರಾಯರು ಸ್ನೇಕ್ ಪ್ರಸಾದ್ ಗೆ ಕರೆಮಾಡಿದರು.. ಸ್ನೇಕ್ ಪ್ರಸಾದ್ ಅರ್ಧಗಂಟೆಯಲ್ಲೇ ಬಂದರು..ಅಷ್ಟರಲ್ಲಿ ಸುದ್ದಿ ತಿಳಿದು ಮನೆಯ ಸುತ್ತ ಜನ ನೆರೆದಿದ್ದರು...ಬಂದವರೇ ತನ್ನಲ್ಲಿರುವ ಸ್ಟಿಕ್ ಹಿಡಿದು ಗೋಣಿಚೀಲವೊಂದನ್ನು ಕೈಯಲ್ಲಿ ನೇಲಿಸಿಕೊಂಡು ಕಾರ್ಯಾಚರಣೆಗೆ ಇಳಿದರು.. ಸ್ವಲ್ಪ ಹೊತ್ತಿನಲ್ಲಿ ಸೆರೆಹಿಡಿದು ಎರಡು ಜನ ಯುವಕರು ಹೆಬ್ಬಾವನ್ನು ಅಟ್ಟದಿಂದ ಕೆಳಗಿಳಿಸಿದರು..


   ಹೆಬ್ಬಾವನ್ನು ನೋಡಿ ಬಂದ ಮೈತ್ರಿ ಯ ಮೊಬೈಲ್ ಗೆ ಒಂದು ಮೆಸೇಜ್ ಬಂದಿತ್ತು.
ಓದಿದ ಮೈತ್ರಿ ಗೆ ಶಾಕ್ ಆಯಿತು..

   ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
29-01-2020.ನಮಸ್ತೇ...

       ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.


2 comments: