Wednesday, 22 January 2020

ಕೈಬರಹ ವ್ಯಕ್ತಿತ್ವದ ಕೈಗನ್ನಡಿ





       "ಮಗಳೇ...ಅಕ್ಷರ ದುಂಡಗೆ ಬರೆದರೆ ಬೆಲ್ಲದುಂಡೆ ಕೊಡುವೆ "ಎಂದು ಅಮ್ಮ  ಪುಸಲಾಯಿಸಿ ಬರೆಯಿಸುತ್ತಿದ್ದರು ನನ್ನ ಬಾಲ್ಯದ ಅಕ್ಷರಾಭ್ಯಾಸದ ಆರಂಭದ ದಿನಗಳಲ್ಲಿ.ಸಿಹಿಯ ಆಸೆಗೆ ಮನಸ್ಸುಕೊಟ್ಟು ಬರೆಯಲು ಆರಂಭಿಸುತ್ತಿದ್ದೆವು.ನಂತರ ಶಾಲೆಯಲ್ಲಿ ಕಾಪಿ ಬರೆಯಲು ಹೇಳಿದರೆ ನಮಗೇ ಜಾಸ್ತಿ ಅಂಕ ಸಿಗಬೇಕು ಎಂಬ ಸಹಪಾಠಿಗಳ ನಡುವಿನ ಸ್ಪರ್ಧಾತ್ಮಕ ದೃಷ್ಟಿಕೋನ ಸುಂದರ ಅಕ್ಷರ ಮೂಡಿಬರಲು ಕಾರಣವಾಯಿತು.ಕೈಯಲ್ಲಿ ಕಡ್ಡಿ ಹಿಡಿದು ಅ ಆ ಇ ಈ ಅಕ್ಷರಗಳ ಮೇಲೆ ಅದೆಷ್ಟು ಬಾರಿ ಕೈ ತಿರುವಿದ್ದೇವೋ ಏನೋ..ಅವೆಲ್ಲ ಕೈಬರಹದಲ್ಲಿ ಶಿಸ್ತು ಅಚ್ಚುಕಟ್ಟುತನ ಮೂಡುವುದಕ್ಕೆ ಬಹಳ ಮುಖ್ಯ.


    ಜನವರಿ 23 ವಿಶ್ವ ಕೈಬರಹ ದಿನ.ಬರೆಯುವ ಸಾಮಗ್ರಿಗಳ ಉತ್ಪಾದಕರ ಸಂಘದವರು ಆರಂಭಿಸಿದ ಆಚರಣೆಯಿದು.ಬರವಣಿಗೆಯು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಮನೋದೈಹಿಕ ಚೈತನ್ಯವನ್ನು ತುಂಬುತ್ತದೆ.ಋಣಾತ್ಮಕ ಯೋಚನೆಗಳಿಂದ ನಮ್ಮನ್ನು ದೂರವಿಟ್ಟು ಧನಾತ್ಮಕ ಚಿಂತನೆಯನ್ನು, ಪ್ರೇರಣೆಯನ್ನು ನಮ್ಮಲ್ಲಿ ಮೂಡಿಸುತ್ತದೆ.

    ನಮ್ಮ ಕೈಬರಹದಿಂದಲೇ ವ್ಯಕ್ತಿತ್ವವನ್ನು ಅಳೆಯಬಹುದಂತೆ.ಕೆಲವರದು ದುಂಡನೆಯ ಅಕ್ಷರವಾದರೆ ಇನ್ನು ಕೆಲವರದು ಒಂದೆಡೆಗೆ ಬಲ ಅಥವಾ ಎಡಕ್ಕೆ ವಾಲಿದ ಅಕ್ಷರ..ಕೆಲವರ ಕೈಬರಹ ಸ್ಫುಟವಾಗಿದ್ದು ಓದುವಂತಿದ್ದರೆ ಇನ್ನು ಕೆಲವರದು ಓದಲು ಹರಸಾಹಸ ಪಡಬೇಕಾಗುತ್ತದೆ.ಶಾಲೆಯಲ್ಲಿ ಅಧ್ಯಾಪಕರು ಆಗಾಗ ದುಂಡಗೆ ಬರೆಯಿರಿ..ಗೆರೆಗಳಿಗೆ ತಾಗಿಸಿ ಬರೆಯಿರಿ.. ಅಕ್ಷರಗಳು ಒಂದಕ್ಕೊಂದು ಅಂಟದಿರಲಿ..ಮಾರ್ಜಿನ್ ಹಾಕಿ ಬರೆಯಿರಿ...ಅಕ್ಷರಗಳು ತಪ್ಪಾಗದಿರಲಿ.. ಅಲ್ಪಪ್ರಾಣ ,ಮಹಾಪ್ರಾಣ, ಹೃಸ್ವ, ದೀರ್ಘ ಲೋಪವಾಗಬಾರದು.. ಕೊನೆಗೊಂದು ಪೂರ್ಣ ವಿರಾಮ ಹಾಕಲು ಮರೆಯದಿರಿ ..ಎಂದೆಲ್ಲ ಹೇಳುತ್ತಿದ್ದುದು ಈಗ ಸವಿನೆನಪಿನ ಹಾಳೆಯಲ್ಲಿ ಭದ್ರವಾಗಿ ಅಚ್ಚೊತ್ತಿ ನಿಂತಿವೆ.


       ಒಬ್ಬೊಬ್ಬರು ಪೆನ್ನು ಹಿಡಿಯುವ ಶೈಲಿ , ಪುಸ್ತಕ ಹಿಡಿಯುವ ರೀತಿ ಭಿನ್ನವಾಗಿರುತ್ತದೆ.ಕೆಲವರು ಬರೆಯುವಾಗ ಕೈಯ ಎಲ್ಲಾ ಬೆರಳುಗಳನ್ನು ಸೇರಿಸಿ ಪೆನ್ನು ಹಿಡಿದುಕೊಂಡರೆ,ಇನ್ನು ಕೆಲವರದು ನಾಲ್ಕು ಬೆರಳು ಸೇರಿಸಿ ಬರೆಯುವ ಅಭ್ಯಾಸ.ನಾನೂ ಇದೇ ರೀತಿ ಬರೆಯುತ್ತಿದ್ದೆ.ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಆರನೇ ತರಗತಿಯಲ್ಲಿ ನಮಗೆ ಶ್ರೀಪತಿ ನಾಯಕ್ ಅನ್ನುವ ಗುರುಗಳಿದ್ದರು.."ಪೆನ್ನು ಹಿಡಿಯುವುದು ಹಾಗಲ್ಲ.. ಹೀಗೆ.."ಎಂದು ಮೂರು ಬೆರಳಿನಲ್ಲಿ ಪೆನ್ ಹಿಡಿದು ಬರೆಯಲು ಆದೇಶ ಮಾಡಿದ್ದರು.ಆರಂಭದಲ್ಲಿ ಬೆರಳು ನೋವು ಬಂದರೂ ಸತತ ಮೂರು ದಿನ ಅದೇ ರೀತಿ ಕಷ್ಟಪಟ್ಟಾಗ ಆ ಕಲೆ ಸಿದ್ಧಿಸಿತು ಅನ್ನಿ..ಈಗ ನಾನು ಬರೆಯುವುದು ಮೂರು ಬೆರಳಲ್ಲಿ ಪೆನ್ನು ಹಿಡಿದು.. ಸಾಮಾನ್ಯವಾಗಿ ಹೆಬ್ಬೆರಳು ಮತ್ತು ತೋರು ಬೆರಳನ್ನು ಸೇರಿಸಿ ನೇರವಾಗಿ ಕುಳಿತುಕೊಂಡು ಜ್ಞಾನ ಮುದ್ರೆಯನ್ನು ಮಾಡುವುದು ಹೆಚ್ಚಿನವರಿಗೆ ತಿಳಿದಿದೆ.ಈ ಜ್ಞಾನ ಮುದ್ರೆ ನೆನಪು ಶಕ್ತಿ, ಏಕಾಗ್ರತೆ, ಬುದ್ಧಿಮತ್ತೆಯನ್ನು ವೃದ್ಧಿಸಲು ಸಹಕಾರಿ.ತೋರುಬೆರಳು ಮತ್ತು ಹೆಬ್ಬೆರಳಲ್ಲಿ ಪೆನ್ನು ಗಟ್ಟಿಯಾಗಿ ಹಿಡಿದು ಪೆನ್ನಿನ ಅಡಿಭಾಗದಲ್ಲಿ ಮಧ್ಯದ ಬೆರಳನ್ನು ಆಧಾರವಾಗಿಸಿ ಹಿಡಿದು ಬರೆಯುವ 'ತ್ರಿಬೆರಳ ಹಿಡಿತ ' ಕೂಡ ಜ್ಞಾನ ಮುದ್ರೆಯ ಪ್ರಭಾವವನ್ನೇ ನಮ್ಮ ಮೇಲೆ ಬೀರುತ್ತವೆ.ಆದ್ದರಿಂದ ಬರವಣಿಗೆ ನಮ್ಮ ಕ್ರಿಯಾಶೀಲತೆ ಮತ್ತು ಸೃಜನಾತ್ಮಕ ಕೌಶಲ್ಯಗಳನ್ನು ವೃದ್ಧಿಸುವುದಲ್ಲಿ ಎರಡು ಮಾತಿಲ್ಲ.

   ನಾವು ಓದಿದ ಸರಕಾರಿ ಶಾಲೆಯಲ್ಲಿ ನಮಗೆ ಯಾವ ಸ್ಪರ್ಧೆಗಳೂ ಇರಲಿಲ್ಲ.ಪಕ್ಕದ ಖಾಸಗಿ ಶಾಲೆಯಲ್ಲಿ ದುಂಡಕ್ಷರ ಸ್ಪರ್ಧೆಯಿದ್ದಾಗ ತಪ್ಪದೇ ಭಾಗವಹಿಸುತ್ತಿದ್ದೆ.ಮೊದಲ ಬಹುಮಾನ ನನಗೆ ದೊರೆತು ಪುಟ್ಟ ಸ್ಟೀಲ್ ಲೋಟ ಸಿಕ್ಕಿದ್ದು ಆಗ ದೊಡ್ಡ ವಿಷಯವೇ ಆಗಿತ್ತು.ಪಕ್ಕದ ಶಾಲೆಯಲ್ಲಿ ದೊರೆತ ಪುಟ್ಟ ಲೋಟ ನಮ್ಮ ಸಹಪಾಠಿಗಳ ಬಾಯಿಯಿಂದ ಹೊಗಳಿಕೆಯ ಮಹಾಪೂರವನ್ನೇ ಹರಿಸಿತ್ತು.. ನಂತರ ಅದೇ ಶಾಲೆಗೆ ಸೇರಿ ನಿರಂತರವಾಗಿ ಹಲವಾರು ಬಾರಿ ದುಂಡಕ್ಷರ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದೆ..


    ನನ್ನ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಸಮಯದಲ್ಲಂತೂ ಸ್ಲೇಟು ಕಡ್ಡಿ ಬಳಸಿದ್ದು ಬಹಳ ಕಡಿಮೆ..ನರ್ಸರಿಯಿಂದಲೇ ಪುಸ್ತಕ ಪೆನ್ಸಿಲ್ ಬಳಸಿ ಮೆಲ್ಲನೆ ನಾನೂ ಕೈಹಿಡಿದು ಬರೆಸಿ ಅಕ್ಷರವ ತಿದ್ದುತ್ತಿದ್ದೆ..ನಾವೆಲ್ಲ ಅ ಆ ಇ ಈ ಬರೆಯಲು ಆರಂಭಿಸಿದ್ದರೆ ನಮ್ಮ ಮಕ್ಕಳಿಗೆ ಸ್ಟ್ರೈಟ್ ಲೈನ್,ಸ್ಲಾಂಟಿಂಗ್ ಲೈನ್, ಸರ್ಕಲ್,ಸೆಮಿ ಸರ್ಕಲ್ ,ಕರ್ವ್ಡ್ ಲೈನ್.. ಎಂದು ಕಲಿಸುವ ಆಂಗ್ಲಪದ್ಧತಿ ಅನುಸರಿಸಿದ್ದು ಹೆಚ್ಚು...ಆದರೂ ಅಕ್ಷರಗಳು ಸುಂದರವಾಗಿ ರೂಪುಗೊಂಡಿವೆ ಎಂದು ನನಗೆ ಹೆಮ್ಮೆಯಿದೆ..


     ಬರೆಯುವುದು ನಮ್ಮ ಮೆದುಳು ಸಕ್ರಿಯವಾಗಿರಲು ಸಹಕಾರಿ.ಓದುವಾಗ ಮನಸ್ಸು ಚಂಚಲವಾಗುವುದು ಅಧಿಕ.ಬರೆಯುವಾಗ ಏಕಾಗ್ರತೆ ಮೂಡುತ್ತದೆ .ಹೇಳುವುದನ್ನು ಕೇಳಿಸಿಕೊಂಡು ಬರೆಯುವಾಗ ಆಲಿಸುವ ಕೌಶಲ್ಯ,ನೋಡಿ ಕಾಪಿ ಮಾಡುವಾಗ ದೃಷ್ಟಿಯ ಮತ್ತು ಕೈಯ ಸ್ನಾಯುಗಳಲ್ಲಿ ಏಕಾಗ್ರತೆ ಮತ್ತು ಹೊಂದಾಣಿಕೆ...,ನಮ್ಮದೇ ಆಲೋಚನೆಯಲ್ಲಿ ಬರೆಯುವಾಗ ಮೆದುಳು ಸಂಪೂರ್ಣವಾಗಿ ಒಂದೇ ವಿಷಯದಲ್ಲಿ ಕೇಂದ್ರೀಕೃತವಾಗಿರುತ್ತದೆ . ಇದಕ್ಕೇ ಗುರುಹಿರಿಯರು  ಓದಿ ಕಲಿಯುವುದಕ್ಕಿಂತ ಬರೆದು ಕಲಿಯುವುದು ಉತ್ತಮ ಎಂದಿರುವುದು..


    ಸುಂದರವಾದ ಕೈಬರಹವು ವ್ಯಕ್ತಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ .ಅಕ್ಷರಗಳು ಚಂದವಿದ್ದವರನ್ನು ಶಿಕ್ಷಕರು ಸಹಪಾಠಿಗಳು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.ಬರಹವು ಅಚ್ಚುಕಟ್ಟಾಗಿ ಇದ್ದವರಲ್ಲಿ ಕಾರ್ಯದಕ್ಷತೆ, ಕೆಲಸವನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸುವ ಮನೋಬಲ ಇರುವುದರಿಂದಲೇ  ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಕೈಬರಹದಲ್ಲಿ ಇರಬೇಕು ಎಂದು ಕೆಲವು ಕಡೆ ನಿಬಂಧನೆಗಳಿರುತ್ತವೆ.

    ಆಧುನಿಕ ತಂತ್ರಜ್ಞಾನ ಬಳಕೆ ಆರಂಭವಾದರೂ ಕೂಡ ಕೈಬರಹ ತನ್ನದೇ ಆದ ಸ್ಥಾನವನ್ನು ಕಾಯ್ದುಕೊಂಡಿದೆ.ಪರೀಕ್ಷೆಯಲ್ಲಿ ಸುಂದರವಾದ ಸ್ಫುಟವಾದ ಕೈಬರಹವು ಉತ್ತಮ ಅಂಕಗಳಿಕೆಗೆ ಸಹಾಯಕವಾಗಿದೆ.ನಮ್ಮ ಅಕ್ಷರಗಳು ನಮ್ಮ ವ್ಯಕ್ತಿತ್ವದ ಪ್ರತಿಬಿಂಬ.ಸೊಗಸಾದ ಅಕ್ಷರಗಳು ಬರೆದವರ ಬಗ್ಗೆ ಸದಭಿಪ್ರಾಯವನ್ನು ಮೂಡಿಸುತ್ತವೆ.ಆಗಾಗ ಬರೆಯುತ್ತಿರೋಣ.. ಬರವಣಿಗೆಯ ಅಭ್ಯಾಸ ನಮ್ಮ ಜೊತೆಗಿರಲಿ..

✍️... ಅನಿತಾ ಜಿ.ಕೆ.ಭಟ್.
23-01-2020.
Momspresso Kannada  ಮತ್ತು Pratilipi Kannada ದಲ್ಲಿ ಪ್ರಕಟಿಸಿದ ಲೇಖನ..

No comments:

Post a Comment