ಮೈತ್ರಿ ಮನೆಯವರಿಗೆ ಬಾಯ್ ಮಾಡಿ ಕಾಲೇಜಿಗೆ ಹೊರಟಳು.ಹದಿನೈದು ನಿಮಿಷ ನಡೆದು ಬಸ್ ಸ್ಟ್ಯಾಂಡ್ ತಲುಪುವುದು ಅವಳ ನಿತ್ಯದ ಅಭ್ಯಾಸ.ಇವತ್ತು ಸುಂದರವಾಗಿ ಅಲಂಕರಿಸಿಕೊಂಡು ನಡೆಯಲು ಉದಾಸೀನ ಮಾಡಿದ ಮೈತ್ರಿ ತನ್ನನ್ನು ಅಲ್ಲಿ ತನಕ ಬೈಕ್ ನಲ್ಲಿ ಬಿಡು ಎಂದು ತಮ್ಮನಲ್ಲಿ ಕೇಳಿಕೊಂಡಳು.. ಅವನು "ಹೋಗಕ್ಕಾ.. ನಡೆದರೆ ದೇಹಕ್ಕೆ
ವ್ಯಾಯಾಮ..ನಡಿ.."
"ಲೋ..ಒಂದ್ಸಲ ತಮ್ಮಾ...ಇನ್ನೊಮ್ಮೆ ಹೇಳಲ್ಲ... ಪ್ಲೀಸ್ ಕಣೋ..ಆಗಲ್ಲ ಅನ್ಬೇಡ...."
ಭಾಸ್ಕರರಾಯರು ಅಕ್ಕ ತಮ್ಮನ ಮಾತು ಕೇಳಿ ಚಾವಡಿಗೆ ಬಂದರು."ಮಹೇಶ .....ಅಕ್ಕನನ್ನು ಬಸ್ ವರೆಗೆ ಬಿಟ್ಟು.. ಬಸ್ ಬರುವವರೆಗೆ ನಿಂತು ಬಾ..''ಎಂದು ಆದೇಶಿಸಿದರು..ಅಪ್ಪನಾಣತಿಯನ್ನು ಮೀರಲು ಸಾಧ್ಯವಿಲ್ಲದ ಮಹೇಶ್ ಒಪ್ಪಿದ..
ಬೈಕ್ ಸ್ಟಾರ್ಟ್ ಮಾಡಿದ..ಆ ಸ್ಟೈಲಲ್ಲೇ ಅವನ ಹುಸಿಮುನಿಸು ಗುರುತಿಸಿದಳು ಮೈತ್ರಿ..ಅಂಜುತ್ತಲೇ ಗಾಡಿಯೇರಿ ಕುಳಿತಳು.ಮಹೇಶ್ ಗಾಡಿ ಚಲಾಯಿಸಿದ.ಮನೆಯಿಂದ ಹೊರಟು ಸ್ವಲ್ಪ ದೂರ ಬಂದಾಗ ಇರುವ ಮಾರ್ಗ ಮಧ್ಯದ ಗುಂಡಿಗೆ ಬೇಕೆಂದೇ ಬೈಕ್ ಇಳಿಸಿ ಅಕ್ಕನನ್ನು ಹೆದರಿಸಿದ.."ಅಯ್ಯೋ..ಬೇಡ ಮಹರಾಯ...ಹೊಂಡಗುಂಡಿ ತಪ್ಪಿಸಿ ಮೆಲ್ಲನೆ ಡ್ರೈವ್ ಮಾಡು ಕೋತಿ..."
"ಏನು ಕೋತಿಯಂತೆ ಕೋತಿ..ಆಗ ಕರೆದುಕೊಂಡು ಹೋಗಲು ಗೋಗರೆದೆ..ಈಗ ಹೀಗೇ..ಮಾಡ್ತೀನಿ ಇರು... ಎನ್ನುತ್ತಾ ಇನ್ನೊಂದು ಗುಂಡಿಗಿಳಿಸಿ ಮೇಲೆತ್ತಿದ.."
"ಅಯ್ಯಮ್ಮಾ..ಬೇಡ ಪುಣ್ಯಾತ್ಮ..."
"ಹಾಗಾದ್ರೆ ನಾನು ಹೇಳಿದಂತೆ ಕೇಳಬೇಕು ಆಯ್ತಾ.."
"ಆಯ್ತು ..ಒಮ್ಮೆ ಸುರಕ್ಷಿತವಾಗಿ ತಲುಪಿಸಿ ಬಿಡು.."
"ನೋಡು..ಆಗ ಕೊಟ್ರಲ್ಲ ಅಪ್ಪ ದುಡ್ಡು.. ಅದರಲ್ಲಿ ನೂರು ರೂಪಾಯಿ ನನಗೆ ಕೊಡು... ಇಲ್ಲಾಂದ್ರೆ ಗೊತ್ತಲ್ಲ... ಪುನಃ.."
"ಏಯ್..ಅದೆಲ್ಲ ಆಗಲ್ಲ ತಮ್ಮಾ..ಮತ್ತೆ ನಾನು ನೂರು ರೂಪಾಯಿ ಹೇಗೆ ಖರ್ಚು ಆಯಿತೆಂದು ಲೆಕ್ಕ ಬರೆಯೋದು..."
"ಅಪ್ಪ ನಿನ್ನನ್ನು ಈಗ ಕೇಳಲ್ಲ... ಕೇಳಿದರೆ ಒಂದು ಸುಳ್ಳು ಹೇಳಿಬಿಡು.."
"ಆಗಲ್ಲ.. ತಮ್ಮಾ..ನಾನಿಲ್ಲಿಂದ ಬೇಕಾದ್ರೆ ನಡ್ಕೊಂಡೇ ಹೋಗ್ತೀನಿ.. ಮತ್ತೆ ಅಪ್ಪನ ಕೈಗೆ ಸಿಕ್ಕಿಹಾಕಿಕೊಳ್ಳುವುದರಿಂದ ಅದೇ ಉತ್ತಮ.."
"ಇಳಿಯೋಕೆ ಬಿಡಲ್ಲ..ಎಲ್ಲಾ ಗುಂಡಿಗಳಿಗೆ ಬೈಕ್ ಇಳಿಸಿ ಬಿಡ್ತೀನಿ...ಏನ್ಮಾಡ್ತೀಯಾ..."
"ಸಾಕು ತಲೆಹರಟೆ... ಹೂಂ ಕೊಡ್ತೀನಿ ನೂರು ರೂಪಾಯಿ.."
"ಹಾಗೆ ಹೇಳು ನನ್ನಕ್ಕಾ..ಮುದ್ದಿನ ಅಕ್ಕಾ..."
ಬಸ್ಟಾಪ್ ಬಂದಾಗ ಮೊದಲು ಅಕ್ಕನಿಂದ ನೂರು ರೂಪಾಯಿ ತೆಗೆದುಕೊಂಡು ಕಿಸೆಗೆ ತುರುಕಿಸಿದ ಮಹೇಶ್..ಅಕ್ಕನ ಕಡೆಗೊಂದು ಮುಗ್ಧನಗೆ ಬೀರಿದ....
"ಬಸ್ ಬಂದಾಗ ನೀನೇ ಹತ್ತಿಕೋ..ಅಲ್ಲೀವರೆಗೆ ನಾನೇಕೆ ನಿನಗೆ ಬಾಡಿಗಾರ್ಡ್ ಥರಾ ನಿಂತ್ಕೋಬೇಕು..ನಂಗೂ ಓದೋದಿದೆ..ಅಪ್ಪನತ್ರ ಬಸ್ಸಿಗೆ ಹತ್ತಿಸಿ ಬಂದೆ ಅಂತೀನಿ.. ಬಾಯ್ ಅಕ್ಕಾ.. "ಎನ್ನುತ್ತಾ ಹೊರಟ ಮಹೇಶ್..
ತಮ್ಮನಿಗೆ ಬಾಯ್ ಮಾಡಿ ಕಳುಹಿಸಿದಳು ಮೈತ್ರಿ..ಶುದ್ಧ ತರಲೆ ತಮ್ಮ.. ಎಂದು ತನ್ನೊಳಗೇ ಗೊಣಗಿಕೊಂಡಳು..
ಬಸ್ ಬರುವುದಕ್ಕೆ ಇನ್ನೂ ಸ್ವಲ್ಪ ಸಮಯ ಇದೆಯೆಂದು ಮೈತ್ರಿ ಮೊಬೈಲ್ ಫೋನ್ ತೆಗೆದುಕೊಂಡು ಒಂದು ಸೆಲ್ಫೀ ಕ್ಲಿಕ್ಕಿಸಿಕೊಂಡಳು.ತನ್ನ ಭಾವಚಿತ್ರವನ್ನು ತಾನೇ ಮೆಚ್ಚಿ ಹೆಮ್ಮೆ ಪಟ್ಟುಕೊಂಡು ಹನ್ನೆರಡು ಗಂಟೆಗೆ ಸರಿಯಾಗಿ ತನಗೆ ಹುಟ್ಟಿದ ಹಬ್ಬದ ಶುಭಾಶಯ ಕೋರಿದ ಕಿಶನ್ ಗೆ ಫೊಟೋ ಕಳುಹಿಸಿದಳು.
ತಕ್ಷಣವೇ ಉತ್ತರಿಸಿದ ಕಿಶನ್ " ಸುರಸುಂದರಿ ನನ್ನ ಮುದ್ದು ಗೊಂಬೆ". ಮೈತ್ರಿ ಖುಷಿಯಿಂದ
"ಥ್ಯಾಂಕ್ಯೂ ಮೈ ಜಂಟಲ್ ಮ್ಯಾನ್"ಎಂದು ಪ್ರತ್ಯುತ್ತರ ಕಳುಹಿಸಿದಾಗಲೇ ಕಾಲೇಜು ಬಸ್ ಬಂತು.
ಮೈತ್ರಿಯ ಸಂಪರ್ಕ ಕಡಿತಗೊಂಡಾಗ ಕಿಶನ್ ಮುದ್ದುಗೊಂಬೆಯ ಪ್ರೇಮದ ಗುಂಗಿನಲ್ಲಿ ಮುಳುಗಿದನು.ಅಂದು ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿದ್ದಾಗ ಇಂಟರ್ನಲ್ ಪರೀಕ್ಷೆಯ ದಿನ.ಕೊನೆಯ ಕ್ಷಣದ ಮನನ ಕಾರ್ಯ ಮಾಡುತ್ತಿದ್ದಾಗ ಎಲ್ಲಿಂದಲೋ ಒಂದು ಕಾಗದ ಹಾರಿ ಬಂದಿತ್ತು.ಕೈಯಲ್ಲಿ ಹಿಡಿದು ಏನಿದೆ ಎಂಬುದಾಗಿ ನೋಡಿದಾಗ ಅಂದದ ಕೈಬರಹದಲ್ಲಿ ಇಲೆಕ್ಟ್ರಾನಿಕ್ಸ್ ವಿಷಯದ ಮುಖ್ಯ ಸೂತ್ರ, ಡೆಫಿನಿಷನ್ ಗಳನ್ನು ಬರೆದ ಕಾಗದವಾಗಿತ್ತು.
ಕಾಗದ ಓದಿ ಪೂರ್ಣಗೊಳ್ಳುತ್ತಿದ್ದಂತೆ ಮುದ್ದಾದ ಬೆಡಗಿಯೊಬ್ಬಳು ವೈಯಾರದಿಂದ ಬಳುಕುತ್ತಾ ಮೆಟ್ಟಲಿಳಿದು ತನ್ನತ್ತವೇ ಬರುತ್ತಿದ್ದಳು.. ತುಟಿಯಂಚಿನ ಕಿರುನಗೆಯಲಿ ನಾ ತೇಲಾಡಬೇಕು ಎನ್ನುವಷ್ಟರಲ್ಲಿ "ಸಾರಿ..ಆ ಪೇಪರ್ ಗಾಳಿಗೆ ಹಾರಿ ಬಂತು..."ಎನ್ನುತ್ತಾ ಕೈ ಮುಂದೆ ಮಾಡಿದಳು...ಗುಳಿಕೆನ್ನೆಯ ಮೇಲಿತ್ತು ನನ್ನ ನೋಟ.. ನಾಚಿ ಕಾಗದ ಪಡೆಯಲು ಯತ್ನಿಸಿದವಳ ಕಿರುಬೆರಳು ನನ್ನ ಕೈಸೋಕಿ ರೋಮಾಂಚನವನ್ನುಂಟುಮಾಡಿತು."ಓಹ್.. ಸಾರಿ..."ನಾನೆಂದೆ..ತುಂಟಕಣ್ಣಿನಲ್ಲಿ ನನ್ನನ್ನು ಗದರಿ ವೇಗವಾಗಿ ಮೆಟ್ಟಿಲುಹತ್ತಿದಳು..ನನ್ನಲ್ಲೇನೋ ಹೇಳಲಾರದ ಭಾವಗಳ ಮಳೆಯಾಗಿ...ಅವಳೇ ಕಾಡತೊಡಗಿದಳು.. ಯೋಚಿಸುತ್ತಾ ಕಿಶನ್ ತನ್ನ ಆಫೀಸಿನ ಕೆಲಸಗಳತ್ತ ಗಮನಹರಿಸಿದ.
ಬಸ್ಸಿನಲ್ಲಿ ಕುಳಿತ ಮೈತ್ರಿಯ ಪಕ್ಕದ ಸೀಟಿನಲ್ಲಿ ಕುಳಿತ ಹುಡುಗಿ ಪರಿಚಯದವಳಲ್ಲ..ಅಂದ ಮೇಲೆ ಮಾತಾಡಲು ಯಾರಿಲ್ಲ.. ಹಾಗೇ ಕುಳಿತವಳಿಗೆ ಕಿಶನ್ ನ ನೆನಪು ಬಂತು..ಅದ್ಯಾವ ಘಳಿಗೆಯಲ್ಲಿ ಕಣ್ಣು ಕಣ್ಣು ಮಿಲನವಾಯ್ತೋ ...ಅಂದಿನಿಂದ ಅವನ ಕಣ್ಣುಗಳು ನನ್ನನ್ನೇ ಹಿಂಬಾಲಿಸಿದವು...ಆಗಾಗ ಏನಾದರೊಂದು ನೆಪ ಹುಡುಕಿ ಮಾತಿಗೆಳೆಯುತ್ತಿದ್ದ...ಯಾವ ಹುಡುಗನ ಪ್ರೇಮದ ಬಲೆಗೂ ಕೂಡ ಬೀಳಬಾರದು ಎಂದು ಗಟ್ಟಿಮನಸು ಮಾಡಿದ್ದ ನನ್ನ ಮನಸ್ಸು ನಿಧಾನವಾಗಿ ಅವನೆಡೆಗೆ ವಾಲಿದ್ದು ಗೊತ್ತಾಗಲೇಯಿಲ್ಲ ..ನನ್ನ ತರಗತಿಯ ಪಕ್ಕ ನನ್ನ ಕಾಣಲೆಂದೇ ಬರುತ್ತಿದ್ದನಾ...ಅಲ್ಲ ಕಾರಿಡಾರ್ ನಲ್ಲಿ ಅವನು ನಡೆಯುತ್ತಿದ್ದರೆ ನನ್ನ ನಯನಗಳೇ ಅವನ ಹಿಂದೆ ಸುಳಿಯುತ್ತಿದ್ದುದಾ ... ಅರಿವಾಗುವ ಮುನ್ನ ಮೋಹದ ಬಲೆಗೆ ಬಿದ್ದಿದ್ದೆ..ನಿದ್ರೆಯಿಲ್ಲದ ರಾತ್ರಿಗಳು.ಹುಣ್ಣಿಮೆಯ ಚಂದಿರನು ಇಣುಕಿ ನಿನ್ನಿನಿಯನ ಕರೆಯಲೇ ಎನುವಂತೆ ಭಾಸವಾಗುತ್ತಿತ್ತು...ಬೀಸುವ ತಂಗಾಳಿಯಲೂ ನಿನ್ನ ಸ್ನೇಹ ಸೌಗಂಧದ ಕಂಪು ಹರಡಿತ್ತು..ಬೆಳಗಿನ ಇಬ್ಬನಿಯಲ್ಲಿ ತೋಯ್ದ ಅರೆಬಿರಿದ ಗುಲಾಬಿ ಮೊಗ್ಗು ಚಳಿಯಲ್ಲಿ ಇನಿಯನಪ್ಪುಗೆ ಬಯಸಿದಂತೆ ನಾನು ನಿನ್ನೊಳಗಿನ ಬೆಚ್ಚನೆಯ ಆಸರೆಗೆ ಆಸೆಪಡುತಿದ್ದೆ..
ಅದೊಂದು ದಿನ ಮನೆಯವರ ಒತ್ತಾಯಕ್ಕೆ ಬಂಧುಗಳ ಮನೆ ಮದುವೆಗೆ ತೆರಳಿದ್ದೆ..ಮೊದಲ ಬಾರಿ ಝರಿ ಸೀರೆಯನುಟ್ಟಿದ್ದೆ...ಕಾರಿನಿಂದಿಳಿದು ಮಂಟಪಕ್ಕೆ ತೆರಳುವ ಹಾದಿಯಲ್ಲಿ ಎದುರಾದೆಯಲ್ಲ ನೀನು..ಅರೆ..ನೀನು ಎಲ್ಲಿದ್ದೆ...ನಾ ಬರುವಲ್ಲೆಲ್ಲ ನೀನೂ ಹಾಜರಿ ಹಾಕುತಿದ್ದೆಯಾ...ಕಣ್ಣಲ್ಲಿ ಕಣ್ಣಿಟ್ಟು ನೀನನ್ನ ನೋಡಿದಾಗ ನಾನೆಷ್ಟು ನಾಚಿದ್ದೆ ಗೊತ್ತಾ...ನಿನ್ನ ಮುಖಭಾವವನ್ನು ಅರಿತು ಕರಗಿ ಹೋದೆ... ಈ ಕಲ್ಲು ಮನಸನ್ನು ಕರಗಿಸುವ ಶಕ್ತಿ ನಿನಗೆಲ್ಲಿಂದ ಬಂತು...ನಿನ್ನ ನಯನದ ವ್ಯಾಪ್ತಿಗೆ ಸಿಗದಂತೆ ನಾ ಕುಳಿತಿದ್ದರೆ ಅಲ್ಲೇ ಪಕ್ಕದಲ್ಲೇ ಬಂದು ಕುಳಿತೆಯಲ್ಲಾ ...ನನ್ನೆದೆ ಕಿವಿಗೆ ಕೇಳಿಸುವಂತೆ ಹೊಡೆದುಕೊಳ್ಳುತ್ತಿತ್ತು...
ನಿನ್ನಿಂದ ತಪ್ಪಿಸಿಕೊಳ್ಳಲು ನಾ ಗೆಳತಿಯರ ಜೊತೆ ಪಕ್ಕದ ದೇವಾಲಯದತ್ತ ಹೆಜ್ಜೆ ಹಾಕಿದೆ..ಪ್ರದಕ್ಷಿಣೆ ಹಾಕಿ ದೇವರಿಗೆ ನಮಸ್ಕರಿಸುವಾಗ ಕಣ್ಮುಚ್ಚಿದ್ದೆ...ಕಣ್ತೆರೆದಾಗ ಮುಂದೆ ನೀ ಬಂದು ಎದುರು ನಿಂತಿದ್ದೆಯಲ್ಲ... ಕೈಯಲ್ಲಿ ಕೆಂಗುಲಾಬಿ ಹಿಡಿದು...ಎಲ್ಲರೆದುರು ಪ್ರೊಪೋಸ್ ಮಾಡ್ತಾ ಇದ್ದಾನೆ ಎಂದು ನಾ ಕಂಪಿಸುತ್ತಿದ್ದೆ..ನನ್ನ ಗಂಟಲು ಮಾತನಾಡಲು ಮರೆತಿತ್ತು..ತುಟಿಗಳು ಒಣಗತೊಡಗಿದವು...ಗೆಳತಿಯರೆಲ್ಲ ಗೊಳ್ಳೆಂದು ನಗುವ ಮೊದಲೇ..." ಸಾರಿ.. ಮೇಡಂ..ನಿಮ್ಮ ಜಡೆಯಿಂದ ಹೂ ಕೆಳಗೆ ಬಿದ್ದಿತ್ತು..".ಎಂದೆಯಲ್ಲ.. ಅಬ್ಬಾ..ಹೋದ ಜೀವ ಬಂದಂತಾಗಿತ್ತು...ಹೂ ಕೈಗೆ ಕೊಟ್ಟು ಪಕ್ಕನೆ ಏನೂ ಆಗಿಲ್ಲವೆಂಬಂತೆ ದೂರಸರಿದು ದೇವಾಲಯದಿಂದ ಹೊರ ಹೋಗುವಾಗ ಒಂದು ತುಂಟ ನಗೆಬೀರಿದೆ ನೋಡು ...ಅಲ್ಲೇ ಅರ್ಥವಾಗಿತ್ತು ನಿನ್ನ ಮನದ ಭಾವವೆಲ್ಲ...ಸಂಜೆ ಮನೆಗೆ ಹೊರಡುವ ಮುನ್ನ ನನಗೊಂದು ಮೆಸೇಜ್ ಕಳಿಸಿದೆಯಲ್ಲ...ಇಂದಿಗೂ ಅದರ ಗುಟ್ಟು ಬಿಟ್ಟುಕೊಟ್ಟಿಲ್ಲ..ನಿನಗೆ ನನ್ನ ಫೋನ್ ನಂಬರ್ ಕೊಟ್ಟವರಾರೆಂದು ....ಅಂತೂ ನೀನು ನನ್ನೊಳಗೆ ಆವರಿಸಿಬಿಟ್ಟಿದ್ದೆ ...ನನಗೆ ತಿಳಿಯದೆಯೆ...
ಹೀಗೆ ಸ್ನೇಹ ಬೆಳೆದು ಗಾಢವಾಯಿತು.ನಾನು ಮೊದಲ ವರ್ಷದಲ್ಲಿ ಅವನು ಕೊನೆಯ ವರ್ಷದಲ್ಲಿ.. ಕಿಶನ್ ಗೆ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಇನ್ಫೋಸಿಸ್ ನಲ್ಲಿ ಉದ್ಯೋಗ ದೊರೆಯಿತು.. ದಿನಕ್ಕೊಮ್ಮೆ ಮಾತಾಡುತ್ತಾ ಸ್ನೇಹ ಪ್ರೇಮಕ್ಕೆ ತಿರುಗಿತು..
ಓದು ಮುಗಿಯಲಿ.. ಆಮೇಲೆ ಮುದ್ದು ಗೊಂಬೆ ನನ್ನರಸಿ.. ಎಂದು ಆಗಾಗ ರೇಗಿಸುತ್ತಾನೆ..ಅವನ ನಲ್ಮೆಯ ನುಡಿಗಳೇನೋ ಬಲು ಆನಂದ ತಂದರೂ ಮನೆಯವರ ನೆನಪಾದರೆ ಭಯವಾಗುತ್ತದೆ..ಅಜ್ಜ ,ಅಜ್ಜಿ ,ಅಪ್ಪ ಏನಂತಾರೋ..ಅವನು ಬೇಡ ಬೇರೆ ಮದುವೆ ಮಾಡುತ್ತೇವೆ ಎಂದರೆ ನಾನೇನು ಮಾಡಲಿ.. ಎಂದುಕೊಳ್ಳುತ್ತಿದ್ದಂತೆ ಕಾಲೇಜಿನ ಮುಂದೆ ಬಸ್ ನಿಂತಿತು.. ಬಸ್ಸಿಳಿದ ಮೈತ್ರಿ ತನ್ನ ಕಾಲೇಜಿನತ್ತ ಹೆಜ್ಜೆ ಹಾಕಿದಳು.
ಮುಂದುವರಿಯುವುದು.....
✍️... ಅನಿತಾ ಜಿ.ಕೆ.ಭಟ್.
28-01-2020.
ನಮಸ್ತೇ...
ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..
ಹಾಗೇನೇ ... > ಈ ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...
share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..
ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.
ಚೆನ್ನಾಗಿದೆ
ReplyDeleteಥ್ಯಾಂಕ್ಯೂ 💐🙏
ReplyDelete