Saturday, 4 January 2020

ಪ್ರಕೃತಿಯೊಡನೆ ಪ್ರೇಮಪಯಣ


ಚಳಿಯೂರಿನಿಂದ ಕರೆಯೊಂದು ಬಂದಿಹುದು
ಹೋಗೋಣವೇ ನಲ್ಲ ಚಳಿಯೂರಿಗೆ...
ಬಿಳಿಯಾದ ಆಗಸವು ನೀಲಿಸೆರಗನು ಹೊದ್ದು
ಕಾತರದಿ ಕಾದಿಹುದು ನಮ್ಮ ಬರುವಿಕೆಗೆ...||

ಹರಿಯುತಿಹ ಸಲಿಲವು ಶಶಿಯ ಪ್ರೇಮಕೆ
ಘನವಾಗಿ ಬುವಿಯ ತಬ್ಬಿಹುದು
ದಿನಕರನ ತುಂಟನೋಟಕೆ ಅದುರಿ
ಬಾಯ್ಬಿರಿದು ಆವಿಯಾಗಿಹುದು....||

ನಿನ್ನ ಒಲವಿನ ಕರವ ನನ್ನ ಕರದಲಿ
ಪಿಡಿದು ನಡೆಸುವೆಯ ಗೆಳೆಯ
ತೀರಿಸುವೆಯ ತೀರದ ಮರಳಿನಲಿ
ಜೋಡಿಯಾಗುತ ನೀ ನನ  ಬಯಕೆಯ...||

ಹೂ ಹಣ್ಣು ಹಸಿರಾಗಿ ಮಾಗಿಹುದು
ನೋಡಲ್ಲಿ ನನ್ನ ದೊರೆಯೇ
ಒಂಟಿ ಆಸನವು  ಮೇಲೆ ಕುಳಿತಿಹುದು
ವಿರಹದ ಬೇಗೆ ಮರೆಯೆ...||

ಮನದ ಜಂಜಡವೆಲ್ಲ ಕಾಡಿಸದೆ ಕಳೆದು
ಹಸಿರ ಮಡಿಲಲ್ಲಿ ಹಾಡುಹಕ್ಕಿಯಾಗಿ
ಇಂಪಾದ ಸಂಗೀತ ಹೊಮ್ಮುತಿರಬೇಕು
ತಂಪಾದ ಇಳೆಯಲ್ಲಿ ಶುಭ ಉದಯಕಾಗಿ...||

✍️... ಅನಿತಾ ಜಿ.ಕೆ.ಭಟ್.
04-01-2020.
ಚಿತ್ರ ಕೃಪೆ :-ಹವಿಸವಿ ಬಳಗ

2 comments: