Wednesday, 29 January 2020

ಜೀವನ ಮೈತ್ರಿ- ಭಾಗ ೪




      ಹೆಬ್ಬಾವನ್ನು ನೋಡಿ ಬಂದ ಮೈತ್ರಿ ಯ ಮೊಬೈಲ್ ಗೆ ಒಂದು ಮೆಸೇಜ್ ಬಂದಿತ್ತು.
ಓದಿದ ಮೈತ್ರಿಗೆ ಶಾಕ್ ಆಯಿತು.... ಕಿಶನ್ ನ ಸಂದೇಶವದು...ಕಣ್ಣೀರು ಸುರಿಸುವ ಎಮೋಜಿ ಹಾಕಿ ಕೆಳಗೆ ಈ ಸಾಲುಗಳ ಬರೆದಿದ್ದ...

ಪ್ರೇಮದ ಪ್ರಶಾಂತ ಕೊಳಕ್ಕೆಸೆದೆ ಕಲ್ಲು...
ಅಲೆಗಳೆದ್ದು ಹರಡಿವೆ ಹೃದಯದಲ್ಲೂ...

      ಮೈತ್ರಿ ಒಂದು ಕ್ಷಣ ಸುಮ್ಮನಿದ್ದು ಯೋಚಿಸಿದಳು.ತಾನು ಕಿಶನ್ ಗೆ ಮಧ್ಯಾಹ್ನ ಗದರಿದ್ದು ನೆನಪಾಯಿತು..ಛೇ..!! ಸಿಟ್ಟಿನಲ್ಲಿ ಒಂದು ಮಾತು ಅಂದುಬಿಟ್ಟಿದ್ದೆ . ಅದನ್ನು ಇಷ್ಟು ಗಂಭೀರವಾಗಿ ಪರಿಗಣಿಸುತ್ತಾನೆಂದು ಅಂದುಕೊಂಡಿರಲಿಲ್ಲ..ನನ್ನ ಇನಿಯ ಬಲು ಮೃದುಹೃದಯಿ..ಈಗಲೇ ಅವನಿಗೆ ಕ್ಷಮೆ ಕೇಳಿ ರಮಿಸಿಬಿಡಬೇಕು...ಅವನ ಪ್ರೇಮಸಂದೇಶಗಳಿಲ್ಲದೆ ನನಗೇನೋ ಕಳೆದುಕೊಂಡ ಅನುಭವ.. ಎಂದು ಸಂದೇಶವನ್ನು ಟೈಪ್ ಮಾಡುತ್ತಿದ್ದಾಗ ಅಪ್ಪ ಬಂದರು...
"ಮಗಳೇ...ಓದಿನ ಸಮಯದಲ್ಲಿ ಓದು.. ಮೊಬೈಲ್, ಟಿವಿ ಎಲ್ಲ ಆಮೇಲೆ ಸಮಯ ಉಳಿದರೆ ಮಾತ್ರ..ಈಗೀಗ ಬರೀ ಮೊಬೈಲು ನೋಡುತ್ತಾ ಕಾಲಕಳೆಯುವುದು ಹೆಚ್ಚಾಗಿದೆ.ಮೊಬೈಲ್ ಆಫ್ ಮಾಡಿ ನನ್ನ ಟೇಬಲ್ ಮೇಲೆ ಇಟ್ಟು ಬಾ.. ಇನ್ನು ನಾಳೆ ಬೆಳಿಗ್ಗೆ ತೆಗೆದುಕೊಂಡರೆ ಸಾಕು... ಮೊಬೈಲ್ ಅಗತ್ಯಕ್ಕೆ ತಕ್ಕಂತೆ ಬಳಸಬೇಕು.."ಎಂದರು ಅಪ್ಪ ಭಾಸ್ಕರ ಶಾಸ್ತ್ರಿಗಳು..
ಅಪ್ಪನ ಮಾತಿಗೆ ಹೂಂಗುಟ್ಟಿ .. ಬರೆಯುತ್ತಿದ್ದ
ಸಂದೇಶವನ್ನು ಅಳಿಸಿ.. ಮೊಬೈಲ್ ಆಫ್ ಮಾಡಿ ಅಪ್ಪನ ಮೇಜಿನಲ್ಲಿಟ್ಟು ಬಂದು ಓದಲು ಕುಳಿತಳು.ಓದಲು ಕುಳಿತವಳಿಗೆ ತಲೆಯೊಳಗೆ ಕಿಶನ್ ನದೇ ಧ್ಯಾನ... ನಾನು ಮರುಸಂದೇಶ ಬರೆಯುತ್ತಿರುವುದು ಅವನಿಗೆ ತಿಳಿದಿರಬಹುದು..ಆದರೂ ಕಳುಹಿಸದಿದ್ದಾಗ ನನ್ನ ಬಗ್ಗೆ ತಪ್ಪು ತಿಳಿದುಕೊಂಡು ಬೇಸರಪಟ್ಟುಕೊಂಡರೆ..ನಾನೇನು ಮಾಡಲಿ..!! ಒಮ್ಮೆ ಮೊಬೈಲ್ ನಲ್ಲಿ ಟೈಪ್ ಮಾಡಿ ಬೇಗ ಕಳಿಸಿಬಿಡುವೆ ಎಂದರೆ... ಅಪ್ಪನಾದರೂ ಮೇಜಿನ ಪಕ್ಕವೇ ಕುಳಿತುಕೊಂಡಿದ್ದಾರೆ...ಅಜ್ಜ ಅಜ್ಜಿ ಅಪ್ಪ ಎಲ್ಲರೂ ಹೆಬ್ಬಾವಿನ ವಿಷಯ ಚರ್ಚಿಸುತ್ತಿದ್ದಾರೆ..ಅವರ ಮಾತುಕತೆ ನಿಲ್ಲುವಂತೆ ಕಾಣುತ್ತಿಲ್ಲ...ನನಗೆ ಈಗ ಮೊಬೈಲ್ ಸಿಗಲೂ ಸಾಧ್ಯವಿಲ್ಲ..


        ಆಫೀಸಿನಿಂದ ರೂಮಿಗೆ ಬಂದ ಕಿಶನ್ ಗೆ ತಲೆಭಾರವಾಗುತ್ತಿತ್ತು.. ತಾನು ಇಷ್ಟು ದಿನ ಪ್ರೀತಿಸುತ್ತಿದ್ದ ಆರಾಧಿಸುತ್ತಿದ್ದ ಮೈತ್ರಿ ಗೆ ತನ್ನ ಪ್ರೀತಿಯ ಮಾತು ಬೇಡವಾಗಿದೆಯೇ ...ನೀರಸವೆನಿಸುತ್ತಿದೆಯೇ...ಯಾಕಾದರೂ ನನ್ನ ಆ ರೀತಿ ಗದರಿದಳು... ನಾನು ಮಾತಾಡಿದ್ದು ತಪ್ಪಾ..ಏನೋ ಡಲ್ ಇದಾಳೆ ಅನಿಸಿತು..ಕಾರಣ ಕೇಳಿದೆ...ಆಕೆಯ ಮನಸ್ಸಿನ ಗೊಂದಲ ನನಗೆ ತಿಳಿದದ್ದು ಸಹಜ ಅಲ್ವಾ...ಎಂದೆಲ್ಲ ಯೋಚಿಸಿದಷ್ಟೂ ಉತ್ತರ ಸಿಗದೇ ಕಣ್ಣಿಂದ ಹನಿಗಳು ಪಟಪಟನೆ ಉದುರಿದವು...


        ಸೀದಾ ಕೈಕಾಲು ತೊಳೆಯಲು ತೆರಳಿದ...ನಂತರ ಅಡುಗೆ ಮನೆಗೆ ತೆರಳಿ ಫ್ರಿಜ್ ನಲ್ಲಿ ಇದ್ದ ಹಾಲನ್ನು ತೆಗೆದುಕೊಂಡು ಒಂದು ಲೋಟ ಕಾಫಿ ಮಾಡಲೆಂದು ಕಾಯಲು ಇಟ್ಟನು..ಹಾಲು ಕುದಿದು ಇನ್ನೇನು ಇನ್ಸ್ಟಾಂಟ್ ಕಾಫಿ ಪೌಡರ್ ಬೆರೆಸಬೇಕು ಎನ್ನುವಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದು ಮಾಡಿತು..ತೆರೆದಾಗ
ರೂಂ ಮೇಟ್ ಸುಂದರ್ ಮತ್ತು ಅವನ ಗೆಳೆಯ ಪ್ರಣವ್ ಬಂದಿದ್ದರು.ಅವರಿಗೆಂದು ಪುನಃ ಹಾಲು ಸೇರಿಸಿ ಕಾಯಿಸಿ ಕುದಿಸಿ ಕಾಫಿ ತಯಾರಿಸಿ.. ಎಲ್ಲರೂ ಜೊತೆಯಾಗಿ ಹರಟುತ್ತಾ ಕುಡಿದರು..


      ಸುಂದರ್ ಬಹಳ ತಮಾಷೆಯ ವ್ಯಕ್ತಿ.. ಕಾಫಿ ಕುಡಿಯುತ್ತಾ  ಬಾಳೆಹಣ್ಣನ್ನು ಸಿಪ್ಪೆ ಸುಲಿಯದೆ ಬಾಯಿಗಿಡುತ್ತಿದ್ದ ಕಿಶನ್ ನನ್ನು ಕಂಡು ..." ಕಿಶ್..ಏನೋ.. ಲವ್ವಲ್ಲಿ ಬಿದ್ದಿದೀಯಾ ಹೇಗೆ.. ಬಾಳೆಹಣ್ಣು ಸಿಪ್ಪೆ ಸುಲಿಯೋದೇ ಮರೆತುಬಿಟ್ಟೆ..ಯಾರ ಗುಂಗಿನಲ್ಲಿದೀಯಾ... ಮೊದಲು ಹಣ್ಣನ್ನು ಸರಿಯಾಗಿ ಸಿಪ್ಪೆ ಸುಲಿದು ತಿನ್ನು...ಆಮೇಲೆ ಮನಕದ್ದ ಹೆಣ್ಣಿನ ಕನವರಿಕೆ..."ಎಂದಾಗ

ಪ್ರಣವ್..." ಕಿಶನ್ ...ಪಾಯಸದೂಟ ಬೇಗ ಹಾಕ್ಸಪ್ಪಾ... ಇನ್ನು ಆರು ತಿಂಗಳಿಗೆ ನಾನು ಫಾರಿನ್ ಗೆ ಹಾರ್ತೀನಿ.... ಅದಕ್ಕಿಂತ ಮೊದಲು ನಿಮ್ಮೂರಿಗೆ ಬಂದು ನಿನ್ನ ಮದುವೆ ಫಂಕ್ಷನ್ ನಲ್ಲಿ ಭಾಗವಹಿಸಬೇಕು..ಕಣೋ.."ಎಂದು ತಾನೂ ದನಿಗೂಡಿಸಿದನು..

"ಇಲ್ಲಪ್ಪಾ..ಹಾಗೇನೂ ಇಲ್ಲ.."ಎಂದು ಕಿಶನ್ ಹೇಳುತ್ತಿದ್ದರೂ ...ಹಾಲುಬಣ್ಣದ ಕಿಶನ್ ನ ಕೆನ್ನೆ ಕೆಂಬಣ್ಣಕ್ಕೆ ತಿರುಗಿ... ಅವರಿಗೆ ಉತ್ತರವ ನೀಡಿತ್ತು...

       ಪ್ರಣವ್ ಅರ್ಧಗಂಟೆ ಮಾತನಾಡಿ ನಂತರ ತೆರಳಿದನು.. ಕಿಶನ್ ,ಸುಂದರ್ ಇಬ್ಬರೂ ಸೇರಿ ಅಡುಗೆ ಮಾಡಿದರು..ಸುಂದರ್ ಅನ್ನ, ಸಲಾಡ್ ಮಾಡಿದನು.. ಕಿಶನ್ ಅಮ್ಮ ಕೊಟ್ಟಿದ್ದ ಸಾಂಬಾರ್ ಪುಡಿ ಹಾಕಿ ಸ್ವಲ್ಪ ಕೊಬ್ಬರಿ ತುರಿಯನ್ನು ರುಬ್ಬಿ ಸಾಂಬಾರ್ ಮಾಡಿದನು.. ಇಬ್ಬರೂ ಸ್ನಾನ ಮಾಡಿ ಫ್ರೆಶ್ ಆಗಿ ಬಂದು ಊಟಮಾಡಿದರು...


       ಅವರಿಬ್ಬರೂ ಇದ್ದುದು ಒಂದು ಸಣ್ಣ ಸಿಂಗಲ್ ಬೆಡ್ ರೂಂ ಮನೆಯಲ್ಲಿ..ಒಂದುಪುಟ್ಟ ಹಾಲ್,ಒಂದು ಬೆಡ್ ರೂಮ್,ಹಾಲ್ ಗೆ ತಾಗಿಕೊಂಡು ಪುಟ್ಟ ಅಡುಗೆ ಕೋಣೆ, ಕಾಮನ್ ಬಾತ್ ರೂಮ್ ಟಾಯ್ಲೆಟ್..ಹೀಗಿರುವ ಮನೆಯಲ್ಲಿ ಇಬ್ಬರೂ ಬ್ಯಾಚ್ಯುಲರ್ ಲೈಫ್ ಕಳೆಯುತ್ತಿದ್ದರು.. ಸುಂದರ್ ಒಂದು ತಿಂಗಳು ಬೆಡ್ ರೂಂ ನಲ್ಲಿ ಮಲಗಿದರೆ ಕಿಶನ್ ಹಾಲ್ ನಲ್ಲಿ ಮಲಗುತ್ತಿದ್ದ.ಮುಂದಿನ ತಿಂಗಳು ಬೆಡ್ ರೂಂ ಕಿಶನ್ ಗೆ..ಹಾಲ್ ಸುಂದರ್ ಗೆ.. ಹೀಗೆ ಶಿಫ್ಟ್ ನಲ್ಲಿ ಹೊಂದಾಣಿಕೆಯಿಂದ ಬಾಳುತ್ತಿದ್ದರು..

     ಕಿಶನ್ ಬೆಡ್ ರೂಂ ನಲ್ಲಿ ಮಲಗಿದ.ಸುಂದರ್ ಹಾಲ್ ನಲ್ಲಿ ಸುಖವಾಗಿ ಗೊರಕೆಹೊಡೆದು ನಿದ್ರಿಸುತ್ತಿದ್ದ.. ಕಿಶನ್ ಗೆ ಕಣ್ಣಿಗೆ ನಿದ್ರೆ ಆವರಿಸಲಿಲ್ಲ.. ಮೈತ್ರಿಯ ನೆನಪೇ ಸುಳಿಯುತ್ತಿತ್ತು..ಅವಳೇಕೆ ನನ್ನನ್ನು ಅವಾಯ್ಡ್ ಮಾಡಲು ನೋಡುತ್ತಿದ್ದಾಳೆ..ನನ್ನ ಸಂದೇಶಕ್ಕೆ ಮರುಸಂದೇಶ ರವಾನಿಸದಷ್ಟು ಅಸಡ್ಡೆ ಏಕೆ..ಎಂದೆಲ್ಲ ಮನಸ್ಸು ಎಡೆಬಿಡದೆ ಯೋಚಿಸುತ್ತಿತ್ತು...


   ಇಲ್ಲ..ನನ್ನ ಮುದ್ದು ಗೊಂಬೆ ಅಂತಹವಳಲ್ಲ..ಅವಳಿಗೂ ಏನೋ ಟೆನ್ಷನ್ ಗಳು,,,ಕಲಿಕೆಯ ಒತ್ತಡಗಳೋ,,,ಮನೆಯ ನಿರ್ಬಂಧಗಳೋ,, ಸಂಪ್ರದಾಯ ಪಾಲಿಸುವ ಮನೆತನದ ಕಟ್ಟುನಿಟ್ಟು... ಮಗಳ ಮೇಲಿನ ಜವಾಬ್ದಾರಿಯ ಹಿತನುಡಿಗಳೋ..
ಹೀಗೇ ಏನೋ ಇರಬಹುದು...ನನ್ನ ಮೈತ್ರಿ ಅಪ್ಪಟ ಅಪರಂಜಿ... ಅವಳು ಅಂತಹವಳಲ್ಲ... ಎನ್ನುತ್ತಾ ಪ್ರೇಯಸಿಯ ಬಗ್ಗೆ ಧನಾತ್ಮಕವಾಗಿ ಯೋಚಿಸುತ್ತಾ ನಿದ್ರೆಗೆ ಶರಣಾಗಲು ಪ್ರಯತ್ನಿಸುತ್ತಿದ್ದನು..

ಕಣ್ಣಿಗೆ ನಿದ್ರೆ ಆವರಿಸುತ್ತಿತ್ತು.. ಅಷ್ಟರಲ್ಲಿ ಮೆಸೇಜ್ ಬಂದಾಗ ಫಕ್ಕನೇ ಎಚ್ಚೆತ್ತು ಮೊಬೈಲ್ ನತ್ತ  ಕೈ ತೆಗೆದುಕೊಂಡು ಹೋದನು ಕಿಶನ್...


     ಮುಂದುವರಿಯುವುದು....

✍️.... ಅನಿತಾ ಜಿ.ಕೆ.ಭಟ್.
30-01-2020.

ನಮಸ್ತೇ...

       ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.



2 comments:

  1. ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ.

    ReplyDelete
  2. ಧನ್ಯವಾದಗಳು 💐🙏

    ReplyDelete