Tuesday, 21 January 2020

ನನ್ನ ಮಗಳು


ಮಗಳು ಜನಿಸಿದ ಸಂಭ್ರಮ
ನೋವ ಮರೆತು ನಕ್ಕ ಶುಭದಿನ
ನಿನ್ನೊಡನೆ ಕಳೆದೆ ಅನುದಿನ
 ನುಡಿಯು ಜೇನ ಸವಿಸಂಗಮ||೧||

ನಾ ಕಣ್ರೆಪ್ಪೆ ಮಿಟುಕಿಸದೆ ಕಾದೆ
ಅಪ್ಪನ ಹೆಗಲ ಕೂಸುಮರಿಯಾದೆ
 ಅಣ್ಣನ ಆಟಕೆ ಜೊತೆನೀಡಿ ನಲಿದೆ
ಅಜ್ಜಿ ಅಜ್ಜನ ಕಾಡಿ ಮನತುಂಬಿದೆ||೨||

ನಿನ್ನ ಕಿಲಕಿಲ ನಗೆ ಆವರಿಸಿ ಎಲ್ಲೆಲ್ಲೂ
ಚೆಲ್ಲಿತ್ತು ನವೋಲ್ಲಾಸ ಸಡಗರವ ಬಿತ್ತಿ
ಕಲೆಯ ಕೋಮಲೆ ಜಯದ ಮಾಲೆ
ರೂಪವತಿ ದೇವ ಕಡಿದ ಶಿಲ್ಪವ ಕೆತ್ತಿ||೩||

ಹಬ್ಬಹರಿದಿನದಂದು ಚಂದದುಡುಗೆಯ
ಧರಿಸಿ ನೀ ನಲಿದರೆ ಎಂಥ ಸೊಗಸು
ಪ್ರತಿಯೊಂದು ದೀಪದಲೂ ನಿನ್ನದೇ
ಬಿಂಬವು ಮೊಗದಿ ತುಂಬಿ ತೇಜಸ್ಸು||೪||

ಮಗಳ ವಯಸಿಗೆ ಕೂಡಿದ ಕಂಕಣ
ನಾ ಚಡಪಡಿಸಿದೆ ಆತಂಕ ಪ್ರತಿಕ್ಷಣ
ಮನವಗೆದ್ದಿತು ಅಳಿಯನ ಮೆದುಗುಣ
ಈ ತಾಯ ಮಡಿಲೀಗ ಭಣಭಣ||೫||

ಸಂಜೆಯಾದರೆ ಸಾಕು ಕಣ್ಣು ಬಾಗಿಲಿನತ್ತ
ಮಗಳು ಕಾಲೇಜಿಂದ ಬಂದಳೇ ಎಂಬ ಚಿತ್ತ
ಸಿಹಿತಿನಿಸು ತಿನ್ನಲು ಮನಸಿಲ್ಲ ಬಿಟ್ಟು
ಸೆರಗಿಡಿದು ಬಂದಿದ್ದೆ ಸವಿಪಾಕವ ಇಷ್ಟಪಟ್ಟು||೬||

ದೀಪಹಚ್ಚುವ ವೇಳೆ ಉದುರಿತು ಪನ್ನೀರು
ಹಂಬಲಿಸಿದೆ ನೀನು ಹೋದಮನೆ ಬೆಳಗೆಂದು
ಮನೆಸೊಸೆಯೆ ಮಗಳೆಂಬ ಮಮಕಾರ
ತುಂಬಿ ನಿನ್ನ ಬಾಳಲಿ ಸಂತಸವುಕ್ಕಲೆಂದು||೭||

✍️... ಅನಿತಾ ಜಿ.ಕೆ.ಭಟ್.
22-01-2020.

2 comments:

  1. ಮಗಳು ❤️...
    ಓದಿ ಖುಷಿ ಆಯ್ತು

    ReplyDelete
  2. ಧನ್ಯವಾದಗಳು 💐🙏

    ReplyDelete