ನುಣುಪಾದ ಟಾರು ರಸ್ತೆಯ ಮೇಲೆನ್ನ
ದಿನದಿನದ ಪಯಣ
ನಡೆಸಲಾರನು ದೇವ ಬದುಕ ಇಂತೆಯೇ
ಅನವರತ ಕಾಣಣ್ಣ||೧||
ಮೈಮೇಲೆ ಎಣ್ಣೆಯ ಪೂಸಿ ಉದರಕೆ
ಅಶನವನು ನೀಡಿ
ಸಾಕಿಹನು ಎನ್ನೊಡೆಯ ಎಳೆಯಲಿಕೆ
ಬಂಡಿಯನು ನೋಡಿ||೨||
ದೈವಚಿತ್ತವು ಬಗೆದಂತೆ ಸಾಗುತಿದೆ
ಬಾಳಿನ ಅಲೆದಾಟ
ಜನುಮವೆತ್ತ ಜೀವರಾಶಿಗಳ ನಿಲ್ಲದ
ಸಂತೃಪ್ತಿಯ ಹುಡುಕಾಟ||೩||
ಸುತ್ತ ಹಸಿರನು ಕಂಡು ಮನವು
ಮೀಟಿದೆ ಮುದಗೊಂಡು
ಅತ್ತ ನೋಡಿದರೆನ್ನ ಬೆನ್ನುಹುರಿ
ಚಾಟಿಯೇಟಿಗೆ ಒಡ್ಡಿಕೊಂಡು||೪||
ಮಣಭಾರದ ಪೆಟ್ಟಿಗೆ ಹೊರಲು
ನಾನೆ ಗಟ್ಟಿ ಆಳು
ಕೊರಳಪಟ್ಟಿಯ ಬಿಗಿದು ಹೊಸೆದರು
ನಡಿಗೆಯ ಠೀವಿ ಕೇಳು||೫||
ಮೇಲಿದ್ದಚಕ್ರಗಳು ಕೆಳಗೆ ಬರುತಿವೆ
ಮತ್ತೆ ಬಾಳವಿಧಿಯಂತೆ
ನಲಿವಿನಲೂ ನೋವಿನಲು ವಿಶ್ವಾಸದ
ಹೆಜ್ಜೆಯಿರಿಸಲುಬೇಕು ನನ್ನಂತೆ||೬||
ವರ್ಣವರ್ಣವ ಬೆರೆಸಿ ಮೈಮೇಲೆ
ಬಿಡಿಸಿದ ಚೆಲುಚಿತ್ತಾರ
ಭೇದ ಭಾವವ ಮರೆತು ದೃಢತೆಯಲಿ
ನಡೆದರೆ ಬಾಳುಬಂಗಾರ||೭||
✍️... ಅನಿತಾ ಜಿ.ಕೆ.ಭಟ್
02- 01-2020.
ಹವಿಸವಿ ಬಳಗದ ವಾರದ ಚಿತ್ರ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವನ.ಚಿತ್ರ ಕೃಪೆ :- ಹವಿಸವಿ ಬಳಗ.
ಸುಂದರ ಕವನ..
ReplyDeleteಅಭನಂದನೆಗಳು ಅನಿತಾ
ಧನ್ಯವಾದಗಳು 💐🙏
ReplyDelete