ಮೈತ್ರಿ ಕೆಂಪಂಗಿ ತೊಟ್ಟು ಹಣೆಗೊಪ್ಪುವ ಬಿಂದಿಯಿಟ್ಟು ಕೈತುಂಬಾ ಬಳೆತೊಟ್ಟು ತನ್ನ ನೀಳಜಡೆಯ ತುಂಬಾ ಘಮಘಮಿಸುವ ಮಂಗಳೂರು ಮಲ್ಲಿಗೆಯನ್ನು ಮುಡಿದು ಸುಂದರವಾಗಿ ಕಾಣುತ್ತಿದ್ದಳು.ಆಕೆ ಸಹಜವಾಗಿ ಸೌಂದರ್ಯವತಿ. ಮಾತಿನ ಮಲ್ಲಿ.ಎಲ್ಲರನ್ನೂ ತನ್ನ ಮಧುರ ಮಾತುಗಳಿಂದ ಸೆಳೆಯಬಲ್ಲ ಚತುರೆ.ಆದರೂ ಸರಳ ಸ್ವಭಾವದ ಹುಡುಗಿ . ಹಮ್ಮು ಬಿಮ್ಮು ಅವಳ ಬಳಿ ಸುಳಿಯಲು ಆಸ್ಪದ ಕೊಟ್ಟವಳಲ್ಲ.
ಹಳ್ಳಿಯ ಸುಂದರ ಪರಿಸರದಲ್ಲಿ ಅಡಿಕೆ ತೆಂಗಿನ ತೋಟದ ಮಧ್ಯೆ ಇರುವ ವಿಶಾಲವಾದ ಎರಡಂತಸ್ತಿನ ಮನೆ 'ಶಾಸ್ತ್ರೀ ನಿವಾಸ'ದಲ್ಲಿ ಸಾಂಪ್ರದಾಯಿಕ ವಾತಾವರಣದಲ್ಲಿ ಹುಟ್ಟಿ ಬೆಳೆದವಳು.ಅಜ್ಜ ಶ್ಯಾಮಶಾಸ್ತ್ರಿಗಳು.ಅಜ್ಜಿ ಮಹಾಲಕ್ಷ್ಮೀ ಅಮ್ಮನವರು.ಇವರ ಆರುಜನ ಮಕ್ಕಳಲ್ಲಿ ಇಬ್ಬರು ಗಂಡುಮಕ್ಕಳು.ದೊಡ್ಡವನು ಭಾಸ್ಕರ ಎರಡನೆಯವನು ಶಂಕರ.ಭಾಸ್ಕರ ಶಾಸ್ತ್ರಿ ಬಿಎಸ್ಸಿ ಬಿಎಡ್ ಓದಿ ಸ್ಥಳೀಯ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಶಂಕರ ಶಾಸ್ತ್ರಿ ಎಂಎಸ್ಸಿ ಓದಿ ಬೆಂಗಳೂರಿನಲ್ಲಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಭಾಸ್ಕರ ಶಾಸ್ತ್ರಿಗಳ ಪತ್ನಿ ಮಂಗಳಾದೇವಿ..ಮಗಳು ಮೈತ್ರಿ.ಮಗ ಮಹೇಶ ಶಾಸ್ತ್ರಿ.ಶಂಕರ ಶಾಸ್ತ್ರಿಗಳ ಪತ್ನಿ ಬೆಂಗಳೂರು ಮೂಲದ ಗಾಯತ್ರೀ ದೇವಿ. ಇಬ್ಬರು ಹೆಣ್ಣು ಮಕ್ಕಳು ವಂದನಾ ಮತ್ತು ಸಂಜನಾ..
ಶಾಸ್ತ್ರಿಗಳದು ಸಂಪ್ರದಾಯವ ಪಾಲಿಸುವ, ಪೂಜೆ ಪುನಸ್ಕಾರ ಇರುವ ಮನೆತನ.ನಿತ್ಯವೂ ಬೆಳಿಗ್ಗೆ ನಾಲ್ಕು ಗಂಟೆಗೆ ಶ್ಯಾಮಶಾಸ್ತ್ರಿಗಳು ಮತ್ತು ಮಹಾಲಕ್ಷ್ಮೀ ಅಮ್ಮ ಏಳುತ್ತಾರೆ.ಶಾಸ್ತ್ರಿಗಳು ಮಿಂದು ಪೂಜೆಗೆ ಕುಳಿತರೆ ಅಮ್ಮನವರು ಮಿಂದು ಮಡಿಯುಟ್ಟು ಪೂಜೆಗೆಂದು ನೈವೇದ್ಯ ತಯಾರಿಸುತ್ತಾರೆ.ನಂತರ ಲಲಿತ ಸಹಸ್ರನಾಮ ಪಠಣ, ಕುಂಕುಮಾರ್ಚನೆ, ಸ್ತೋತ್ರ ಪಾರಾಯಣ ಎಂದು ತಾವೂ ಭಕ್ತಿ ಶ್ರದ್ಧೆಯಿಂದ ಶಾಸ್ತ್ರಿಗಳಿಗೆ ಜೊತೆಯಾಗುತ್ತಾರೆ.
ಭಾಸ್ಕರ ರಾಯರು ಕೊಟ್ಟಿಗೆಯಲ್ಲಿದ್ದ ದನಗಳ ಹಾಲುಹಿಂಡಿ,ಹಿಂಡಿ,ಹುಲ್ಲು ನೀಡುವ ಕಾಯಕದಲ್ಲಿ ಮಗ್ನರಾಗುತ್ತಾರೆ.ಮಂಗಳಮ್ಮ ಎಲ್ಲರಿಗೂ ತಿಂಡಿ, ಬುತ್ತಿ ಮಧ್ಯಾಹ್ನದ ಅಡುಗೆಯೆಂದು ಅಡುಗೆ ಕೆಲಸದತ್ತ ಹೊರಳುತ್ತಾರೆ.ನಿತ್ಯವೂ ಇಪ್ಪತ್ತು ಆಳುಗಳಿಗೆ ಕೆಲಸಕೊಟ್ಟು ತಿಂಡಿ ,ಊಟ ಕೊಡುವ ಕರಾವಳಿಯ ಹವ್ಯಕರ ಹೆಮ್ಮೆಯ ಶಾಸ್ತ್ರೀ ಮನೆತನವದು..
ಅಂದು ಮೈತ್ರಿಯ ಜನ್ಮದಿನ.ಸುಂದರವಾಗಿ ಅಲಂಕರಿಸಿಕೊಂಡು ಹಿರಿಯರಿಗೆ ನಮಸ್ಕರಿಸಿ,ಪೂಜೆಯ ಮಂಗಳಾರತಿಗೆ ತಾನು ಘಂಟಾನಾದ ಮಾಡಿ.. ದೇವರ ತೀರ್ಥ ಪ್ರಸಾದ ಸ್ವೀಕರಿಸಿದಳು.ಹತ್ತಿರದ ನಗರದ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಳೆ.ತಮ್ಮ ಮಹೇಶ್ ಪಿಯುಸಿ ವಿಜ್ಞಾನದ ವಿದ್ಯಾರ್ಥಿ..
ಶಾಸ್ತ್ರೀ ನಿವಾಸ ಸಾಂಪ್ರದಾಯಿಕವಾಗಿ ನಿರ್ಮಿಸಿದ ವಿಶಾಲವಾದ ಮನೆ.ಮನೆಯೆದುರು ಅಚ್ಚುಕಟ್ಟಾದ ಸೆಗಣಿ ಸಾರಿಸಿದ ವಿಶಾಲವಾದ ಅಂಗಳದಲ್ಲಿ ಹರಡಿರುವ ಅಡಿಕೆ.ಒಂದು ಬದಿಯಲ್ಲಿ ಅರಳಿನಿಂತಿರುವ ಗುಲಾಬಿ, ದಾಸವಾಳದ ಹೂಗಳು. ಮನೆಯ ಹಿಂಭಾಗದಲ್ಲಿ ಅಂಬಾಕಾರಗೈಯ್ಯುತ್ತಿರುವ ದನಕರುಗಳು..ಅವುಗಳ ಕೊಟ್ಟಿಗೆ.ಅಂಗಳದಲ್ಲಿ ನಿಂತು ಎತ್ತ ದೃಷ್ಟಿ ಹರಿಸಿದರೂ ಹಚ್ಚಹಸಿರಾಗಿ ಕಂಗೊಳಿಸುವ ಅಡಿಕೆ ,ತೆಂಗು ,ಬಾಳೆಯ ತೋಟವಿದೆ.
ಭಾಸ್ಕರ ಶಾಸ್ತ್ರಿಗಳು ಶಾಲೆಗೆ ಹೊರಡುವ ಮುನ್ನವೇ ಕೆಲಸದಾಳು ಜಿನ್ನಪ್ಪ ಬರುವುದು ರೂಢಿ.ಅವನಲ್ಲಿ ಆ ದಿನ ಮಾಡಬೇಕಾದ ಕೆಲಸಗಳ ವಿವರವನ್ನು ಒಪ್ಪಿಸಿ ಶಾಲೆಗೆ ತೆರಳುತ್ತಿದ್ದರು.ಶ್ಯಾಮಶಾಸ್ತ್ರಿಗಳು ವಯಸ್ಸಾಗುತ್ತಿದ್ದಂತೆ ತೋಟದ ಜವಾಬ್ದಾರಿಯನ್ನು ಮಗನಿಗೆ ವಹಿಸಿದ್ದರು.ಏನಾದರೂ ಅಗತ್ಯ ಬಿದ್ದರೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು.
ಮಹಾಲಕ್ಷ್ಮಿ ಅಮ್ಮ ಮತ್ತು ಸೊಸೆ ಮಂಗಳಾದೇವಿ ಇಬ್ಬರೂ ಅನ್ಯೋನ್ಯತೆಯಿಂದ ಮನೆಯನ್ನು ನಿಭಾಯಿಸುತ್ತಿದ್ದರು.ಎಲ್ಲರೂ ಗೌರವಿಸುವಂತಹ ಅತ್ತೆಸೊಸೆಯಾಗಿದ್ದರು.ಅತ್ತಿಗೆಯರ ಪಾಲಿಗೆ ಮಂಗಳಮ್ಮ ಸ್ನೇಹಿತೆಯಾಗಿದ್ದಳು.ಶಂಕರನು ವರುಷಕ್ಕೆರಡು ಬಾರಿ ಊರಿಗೆ ಕುಟುಂಬ ಸಮೇತವಾಗಿ ಬಂದು ಎಲ್ಲರೊಂದಿಗೆ ಬೆರೆತು ಹಳ್ಳಿಯ ಸೊಗಡನ್ನು ಸವಿದು ಬೆಂಗಳೂರಿಗೆ ವಾಪಾಸಾಗುತ್ತಿದ್ದ.
"ಅಮ್ಮಾ.. ತಿಂಡಿ ಆಯ್ತಾ..ಬಸ್ಸಿಗೆ ತಡವಾಗುತ್ತಿದೆ" ಎಂದಳು ಮೈತ್ರಿ.."ಬಾ..ಮಗಳೇ..ಬಟ್ಟಲು ಲೋಟ ಇಟ್ಟುಕೊಂಡು ಕುಳಿತುಕೋ..ಚಟ್ನಿಗೊಂದು ಒಗ್ಗರಣೆ ಹಾಕಿಬಿಟ್ರೆ ಮುಗೀತು.."ಎಂದರು ತಾಯಿ ಮಂಗಳಮ್ಮ.. ಮೈತ್ರಿ ಎಲ್ಲರಿಗೂ ತಿಂಡಿಗೆ ಪಂಕ್ತಿ ಹಾಕಿದಳು..ಅಜ್ಜ ಅಜ್ಜಿ ಅಪ್ಪನಿಗೆ ಬಾಳೆಎಲೆ ಇಟ್ಟು ತನಗೂ ತಮ್ಮನಿಗೂ ಬಟ್ಟಲು ಇಟ್ಟಳು.ಅಲ್ಲಲ್ಲಿ ಇದ್ದ ಲೋಟಗಳನ್ನು ಒಟ್ಟುಗೂಡಿಸಿ ತಂದು ಹುಡುಕಿ ಅಜ್ಜನಿಗೆ ಅಜ್ಜನದೇ ದೊಡ್ಡ ಲೋಟವನ್ನು ಇಟ್ಟಳು... ಅಷ್ಟರಲ್ಲಿ ಬಂದ ತಮ್ಮ ಮಹೇಶ..."ಅಕ್ಕ ಇದು ಚೀಟಿಂಗ್.... ಅಜ್ಜನಿಗೆ ಅವರ ಲೋಟವೇ ಇಟ್ಟಿದ್ದೀಯಾ ...ನನಗೂ ನನ್ನದೇ ಲೋಟ ಇಡು...ಈ ಲೋಟ ನನಗೆ ಬೇಡ.."ಎಂದ..
"ನಿನಗೆ ಬೇಕಾದ್ದು ಇಟ್ಟುಕೋ..ನೀನೇ..ನಾನೇ ಏಕೆ ಇಡಬೇಕು... ಹುಡುಗರು ಕೆಲಸ ಮಾಡಬಾರದು ಅಂತ ರೂಲ್ಸ್ ಇದೆಯಾ...ನಂಗೂ ಕಾಲೇಜಿಗೆ ಲೇಟಾಗ್ತಿದೆ..."ಎಂದು ತಮ್ಮನನ್ನು ತರಾಟೆಗೆ ತೆಗೆದುಕೊಂಡಳು.
"ಹಾಗಿದ್ರೆ ನಿನ್ನ ಲೋಟವನ್ನೇ ಹುಡುಕಿ ಅದರಲ್ಲೇ ಇವತ್ತು ಕಾಫಿ ಕುಡೀತೀನಿ ಅಕ್ಕಾ..ನೋಡ್ತಾಯಿರು..."ಎಂದು ಕೀಟಲೆ ಮಾಡಿದ ಮಹೇಶ್..
"ಅಮ್ಮಾ...ನೋಡಿಲ್ಲಿ..ಮಹೇಶನ ಕೆಲಸ..."ಎಂದು ತನ್ನ ಲೋಟವನ್ನು ಇಟ್ಟುಕೊಂಡು ಕುಳಿತ ತಮ್ಮನ ಬಗ್ಗೆ ದೂರುಕೊಟ್ಟಳು ಮೈತ್ರಿ..
"ಏನು ನಿಮ್ಮದು..ಬೆಳಗ್ಗೇನೇ..ಅಕ್ಕಂದು ನೀನು ತೊಗೊಂಡು ಆಕೆಯನ್ನು ಗೋಳುಹೊಯ್ಕೋಬೇಡ ಮಹೇಶ..."
"ಗೋಳಂತೆ.. ಗೋಳು...ಬೇಕಂತಲೇ ನನ್ನ ಲೋಟ ಅಜ್ಜಿಗಿಟ್ಟಿದ್ದಾಳೆ ಮಳ್ಳಿ..."
"ಹಾಗೆಲ್ಲ ಅನ್ಬಾರ್ದು.. ಮಹೇಶ್.. ಅಕ್ಕನನ್ನು.. ಇವತ್ತು ಅವಳ ಹುಟ್ಟುಹಬ್ಬ ಬೇರೆ..."
"ಹ್ಯಾಪಿ ಬರ್ತ್ ಡೇ ಅಕ್ಕೋ... ಏನು ಯಾವತ್ತೂ ಮಾಡಿರದ ಅಲಂಕಾರ ಇವತ್ತು.. ಮದುಮಗಳನ್ನು ಮೀರಿಸುವಂತಿದೆ ..."ಅಕ್ಕನನ್ನು ಯಾವಾಗಲೂ ಹೀಗೇ ರೇಗಿಸುವುದು ಮಹೇಶನ ಅಭ್ಯಾಸ..
"ಅಮ್ಮಾ... ಇವನನ್ನು ಸುಮ್ಮನಿರಲು ಹೇಳು..ಏನೇನೋ ಅಂತಿದಾನೆ.."
"ಹೇಳಬಾರದ್ದು ನಾನೇನಂದೆ...ಇರೋದನ್ನೇ ಹೇಳಿದ್ದು...ಇಂಡೈರೆಕ್ಟ್ ಆಗಿ ಬಹಳ ಚಂದ ಕಾಣ್ತೀಯಾ ಅಂತ ಹೇಳಿದ್ದು.....ಓಹೋ.. ಸ್ವಲ್ಪ ಟ್ಯೂಬ್ ಲೈಟ್ ಅಲ್ವಾ.." ಅಂತ ಹೇಳಿ ಮುಗಿಸುವಷ್ಟರಲ್ಲಿ ಅಜ್ಜ ಬಂದಾಗ ಇಬ್ಬರೂ ಗಂಭೀರವಾಗಿ ಕುಳಿತರು..
ಮಂಗಳಮ್ಮ ಎಲ್ಲರಿಗೂ ತೆಂಗಿನಕಾಯಿ ಚಟ್ನಿ,ತೆಳ್ಳವು ದೋಸೆ(ನೀರ್ದೋಸೆ) ಬಡಿಸಿದರು.ಬೆಲ್ಲಕಾಯಿಸುಳಿ ಮಾಡಿದ್ದನ್ನು ಒಮ್ಮೆ ಎಲ್ಲರಿಗೂ ಬಡಿಸಿದರು ಮಂಗಳಮ್ಮ..ಇನ್ನೂ ಸ್ವಲ್ಪ ಬಡಿಸು ಎಂದು ಸೊಸೆಯಲ್ಲಿ ಹೇಳಿ ಸ್ವಲ್ಪ ಹೆಚ್ಚೇ ಬಡಿಸಿಕೊಂಡರು ಶ್ಯಾಮಶಾಸ್ತ್ರಿಗಳು.ಮಾವನವರಿಗೆ ದೊಡ್ಡ ಲೋಟದಲ್ಲಿ ಸ್ವಲ್ಪವೇ ಡಿಕಾಕ್ಷನ್ ಬೆರೆಸಿ ಹಾಲು ಜಾಸ್ತಿ ಹಾಕಿ ಲೈಟ್ ಕಾಫಿ ಕೊಟ್ಟರು ಮಂಗಳಾ..
ಮೊಮ್ಮಗಳತ್ತ ಒಮ್ಮೆ ನೋಟಬೀರಿದ ಅಜ್ಜ.."ಯಾವಾಗಮ್ಮಾ.. ಪರೀಕ್ಷೆ..."ಎಂದು ಕೇಳಿದರು...
"ಮುಂದಿನ ತಿಂಗಳು ಇಂಟರ್ನಲ್ ಪರೀಕ್ಷೆಯಿದೆ ಅಜ್ಜಾ.."ಎಂದು ಹೇಳಿ ಬೇಗನೆ ತಿಂಡಿ ತಿಂದು ಎದ್ದಳು..
ಅಷ್ಟರಲ್ಲಿ ಅಮ್ಮ ಇನ್ನೆರಡು ಬಿಸಿಬಿಸಿ ದೋಸೆ ತಂದು.."ಇಷ್ಟು ಬೇಗ ಎದ್ದು ಬಿಟ್ಟೆಯಾ.. ಇನ್ನೆರಡು ದೋಸೆ ತಿಂದು ಹೋದರೆ ಸಾಕಲ್ಲ.. ಏನು ಮಕ್ಕಳೋ ಏನೋ..ಓದು ಓದು..ಅಂತ ಹೊಟ್ಟೆಗೂ ಸರಿ ಹಾಕ್ಕೊಳಲ್ಲ.."
"ಸರಿ..ಅವಳ ಪಾಲಿಂದೆಲ್ಲ ನನಗೇ ಬಡಿಸಿಬಿಡಿ.." ಎನ್ನುತ್ತಾ ದೋಸೆ ಹಾಕಿಸಿಕೊಂಡ ಮಹೇಶ.. ಮೈತ್ರಿ ಅವಸರವಸರವಾಗಿ ಕೈತೊಳೆದು, ಬಟ್ಟಲು ಲೋಟವನ್ನು ತೊಳೆದು ಕವಚಿಟ್ಟು ಬಂದಳು.. ಒಂದು ಬಾಟಲ್ ಕಾದಾರಿದ ನೀರು ತುಂಬಿಸಿಕೊಂಡ ಮೈತ್ರಿ ಅಲ್ಲಿಂದ ಹೊರಡುತ್ತಿದ್ದಂತೆ ಅಜ್ಜ ಕಾಫಿಕುಡಿದು ಏಳುವ ಪ್ರಯತ್ನ ಮಾಡುತ್ತಿದ್ದರು.ಕಾಲಗಂಟು ನೋವಿನಿಂದ ಏಳಲು ಕಷ್ಟಪಡುತ್ತಿದ್ದ ಅಜ್ಜನಿಗೆ ಕೈನೀಡಿ ಮೆಲ್ಲನೆ ಎಬ್ಬಿಸಿ ಗೋಡೆಹಿಡಿದು ಅಜ್ಜ ನಿಂತು.."ನೀನಿನ್ನು ಹೋಗು.ನಾನು ಹೋಗಿ ಕೈತೊಳೆಯಬಲ್ಲೆ"ಎಂದಾಗ ಹೊರನಡೆದಳು.. ಅಷ್ಟರಲ್ಲಿ ಅಪ್ಪ ಬಂದು ಮಗಳ ಕೈಯಲ್ಲಿ ಖರ್ಚಿಗೆಂದು ದುಡ್ಡು ಕೊಟ್ಟರು.ದುಡ್ಡು ತೆಗೆದುಕೊಂಡು ಮೈತ್ರಿ ತಮ್ಮನ ಕಡೆಗೊಂದು ನಸುನಗೆ ಬೀರಿದಳು..
"ತೆಗೆದುಕೋ..ತೆಗೆದುಕೋ...ಅಪ್ಪನ ಕೈಯಿಂದ ದುಡ್ಡು...ನಾನೂ ಕಲಿತು ಒಳ್ಳೆ ನೌಕರಿ ಸೇರಿ ಸಂಪಾದನೆ ಮಾಡ್ತೀನಿ ನೋಡ್ತಾಯಿರು.."ಎನ್ನುವಂತೆ ಕಣ್ಣಲ್ಲೇ ಅಕ್ಕನನ್ನು ಗುರಾಯಿಸಿದ ತಮ್ಮ.ದೊಡ್ಡಕ್ಕೆ ಹೇಳಲು ಧೈರ್ಯವಿಲ್ಲ ಅಜ್ಜ, ಅಪ್ಪ ಅಲ್ಲೇ ಇದ್ದಾರೆ.... ಅಕ್ಕನಿಗೆ ಧಾರಾಳವಾಗಿ ದುಡ್ಡು ಕೊಡುವ ಅಪ್ಪ ನನಗೆ ಮಾತ್ರ ಲೆಕ್ಕಾಚಾರದ್ದು ಕೊಡುವುದು ಮತ್ತೆ ಆಗಾಗ ದಿನದ ಹಣದ ಖರ್ಚಿನ ಲೆಕ್ಕಾಚಾರವನ್ನು ತಂದು ತೋರಿಸಲು ಹೇಳುವುದು ಎಂದು ನಸುಗೋಪ ಮಹೇಶನಿಗೆ...
ಭಾಸ್ಕರ ರಾಯರು ತನ್ನ ಇಬ್ಬರು ಮಕ್ಕಳಿಗೂ ದುಡ್ಡು ತೆಗೆದುಕೊಂಡ ವಿವರ,ಯಾವುದಕ್ಕೆ ಎಷ್ಟು ಖರ್ಚು,ವಾರದ ಉಳಿಕೆ ಎಷ್ಟು ಎಂದು ಬರೆಯಲು ಒಂದು ಡೈರಿ ನೀಡಿದ್ದರು.ಆಗಾಗ ನೋಡುವಾಗ ಮೈತ್ರಿಯ ಲೆಕ್ಕ ಯಾವಾಗಲೂ ಸರಿಯಾಗಿ ಇರುತ್ತಿತ್ತು..ಮಹೇಶನ ಲೆಕ್ಕ ಮಾತ್ರ ಅನುಮಾನ ಬರುವಂತೆ ಇರುತ್ತಿತ್ತು..ಎಲ್ಲದರಲ್ಲೂ ಸ್ವಲ್ಪ ಹೆಚ್ಚು ಹಣ ಬರೆದು ತಂದೆಯಿಂದ ಹೆಚ್ಚು ಕೇಳುತ್ತಿದ್ದ..ಅಕ್ಕನಲ್ಲೂ ಹಾಗೇ ಮಾಡೇ..ಎನ್ನುತ್ತಿದ್ದ.. ವ್ಯವಹಾರದಲ್ಲಿ ಅನುಭವವಿರುವ ತಂದೆಗೆ ಇದು ಗೊತ್ತಾಗದೇ ಇದ್ದೀತೇ...?? ಹಾಗಾಗಿ ಮಹೇಶನಿಗೆ ದುಡ್ಡು ಕೊಡುವಾಗ ಸ್ವಲ್ಪ ಕೈ ಗಿಡ್ಡ ಮಾಡುತ್ತಿದ್ದರು ಅಪ್ಪ.. ಇದು ಅಕ್ಕನ ಮೇಲೆ ಅವನಿಗೆ ಸ್ವಲ್ಪ ಹೊಟ್ಟೆಯುರಿ ತರಿಸಿದೆ...ಮಕ್ಕಳು ದಾರಿತಪ್ಪಬಾರದು ಎಂದು ಭಾಸ್ಕರ ರಾಯರ ಉದ್ದೇಶ..
ಮುಂದುವರಿಯುವುದು....
✍️... ಅನಿತಾ ಜಿ.ಕೆ.ಭಟ್.
27-01-2020.
ನಮಸ್ತೇ...
ನಿಮಗೆ ಬೇರೆ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..
ಹಾಗೇನೇ ... > ಈ ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...
share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..
ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.
Interesting....
ReplyDeleteಧನ್ಯವಾದಗಳು 💐🙏
ReplyDelete