ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನೀಳ್ಗತೆ.
💐💐
ಯಾವ ತರುವು ಆವ ಲತೆಗೋ: ಅಧ್ಯಾಯ ೨
ಆಗಲೇ ಗಂಟೆ ಒಂದೂ ಮುಕ್ಕಾಲಾಗಿತ್ತು. ಕಾರ್ಯಕ್ರಮದ ಮನೆಯಲ್ಲಿ ಊಟವೂ ಆಗಿರುತ್ತದೆ. ಆದರೂ ಹೋಗದಿದ್ದರೆ ಅವರಿಗೆ ಸಮಾಧಾನವಾಗದು ಎಂದು ಒಳಹೋದಳು ಪಾವನಾ. ಒಳಗಡಿಯಿಡುತ್ತಲೇ "ಪಾವನಾ.. ಬಾರಮ್ಮ" ಎಂದು ಪ್ರೀತಿಯಿಂದ ಸ್ವಾಗತಿಸಿ, ದೇವರ ತೀರ್ಥ ಪ್ರಸಾದ ಕೊಟ್ಟರು ಪ್ರಭಾಕರ ರಾಯರು. ಉಷಾತ್ತೆ ಪಾವನಾಳಿಗೆ ಊಟ ಬಡಿಸುವ ವ್ಯವಸ್ಥೆ ಮಾಡಿದರು. ಅವರಿಗೆ ನವೀನ್ ನೂ ಜತೆಯಾದ.
"ಈಗ ಹೇಗಿದೆ ಜ್ವರ?" ಕೇಳಿದಳು ಪಾವನಾ.
"ಕಡಿಮೆಯಾಗ್ತಿದೆ" ಎಂದಷ್ಟೇ ಚುಟುಕಾಗಿ ಉತ್ತರಿಸಿದ. ಉಷಾತ್ತೆ ಇನ್ನಾರೋ ಬಂದರೆಂದು ತೆರಳಿದರು. ನವೀನ್ ಬಡಿಸಿದ. ನವೀನನನ್ನು ಮಾತಿಗೆಳೆದ ಪಾವನಾ ಅವನೂ ತನ್ನ ತಂದೆತಾಯಿಯ ಹುಟ್ಟೂರಿನವನೇ ಎಂದು ಅರಿತಳು. ತನ್ನ ವಿಸಿಟಿಂಗ್ ಕಾರ್ಡ್ ನೀಡಿ "ಎರಡು ದಿನಗಳ ಔಷಧ ಮುಗಿದ ನಂತರ ಔಷಧ ಬೇಕಾದರೆ ಕ್ಲಿನಿಕ್ ಗೆ ಬನ್ನಿ. ವನದುರ್ಗಾ ಮೈನ್ ರೋಡ್ ನಲ್ಲಿ ಎರಡನೇ ತಿರುವು. ಒಂದು ಕಿಲೋಮೀಟರ್ ಸಾಗಿ ಬಲಗಡೆ ತಿರುಗಿದರೆ ಅಲ್ಲೇ ಬಲಬದಿಯಲ್ಲಿ ನನ್ನ ಕ್ಲಿನಿಕ್" ಎಂದಳು..
ತಲೆಯಾಡಿಸಿದ ನವೀನ್..
ಊಟ ಮುಗಿಸಿ ತನ್ನ ಮನೆಗೆ ಹೋದಳು ಪಾವನಾ. ಮಕ್ಕಳು ಬರುವುದು ಇನ್ನು ಸ್ವಲ್ಪ ಹೊತ್ತಿನಲ್ಲೇ. ಅವರಿಗೆ ಆಹಾರ ತಯಾರಿಸಿಟ್ಟಳು. ಮಕ್ಕಳು ಬಂದಾಗ ಅವರ ಸ್ನಾನ ಮಾಡಿಸಿ, ಹೊಟ್ಟೆ ತುಂಬಿಸಿ ಎಂದಿನಂತೆ ಪಕ್ಕದ್ಮನೆ ಶಾಂತಮ್ಮನ ಜೊತೆ ಮಾಡಿ ಕ್ಲಿನಿಕ್'ಗೆ ತೆರಳಿದಳು.
ಮರುದಿನ ಬೆಳಿಗ್ಗೆ ಪ್ರಭಾಕರ ರಾಯರು ಕರೆ ಮಾಡಿ "ಪಾವನಾ.. ನವೀನ್ ಅತಿಯಾದ ಜ್ವರದಿಂದ ಬಳಲುತ್ತಿದ್ದಾನೆ. ಒಮ್ಮೆ ಬಾ"ಎಂದು ಕರೆದಾಗ ಮತ್ತೆ ಬರುತ್ತೇನೆ ಎಂದು ಹೇಳಲು ಮನಸ್ಸಾಗದೆ ತನ್ನ ಕೆಲಸಗಳನ್ನು ಅಲ್ಲೇ ಬಿಟ್ಟು ತೆರಳಿದಳು. ಪರೀಕ್ಷಿಸಿ ನೋಡಿ "ನಿನ್ನೆ ಕೊಟ್ಟಿದ್ದ ಮಾತ್ರೆ ಬೇಡ " ಎಂದು ಹೇಳಿ
ಜ್ವರದ ಇಂಜೆಕ್ಷನ್ ಕೊಟ್ಟಳು. "ಮಧ್ಯಾಹ್ನ ಬಂದು ನೋಡುತ್ತೇನೆ." ಎಂದು ಹೇಳಿದಾಗ "ಮೇಡಂ.. ನಾನು ಮಧ್ಯಾಹ್ನ ಇಲ್ಲಿರುವುದಿಲ್ಲ" ಎಂದ ನವೀನ.
"ಇಷ್ಟು ಜ್ವರ ಬರುವಾಗ ಎಲ್ಲಿ ಹೋಗ್ತೀಯಾ?" ಎಂದು ಆತ್ಮೀಯವಾಗಿ ವಿಚಾರಿಸಿಕೊಂಡಳು ಪಾವನಾ.
"ಇಲ್ಲಿ ಅಡುಗೆಗೆಂದು ಬಂದೆ. ಇಲ್ಲಿ ಆಯಿತು. ಇನ್ನು ಮುಂದಿನ ಪಯಣ. ಸಾಧ್ಯವಾಗದಿದ್ದಲ್ಲಿ ಊರಿಗೆ ಹೋಗುತ್ತೇನೆ" ಎಂದಾಗ ಪ್ರಭಾಕರ ಮಾವ "ಇವತ್ತು ನೀನು ಇಲ್ಲೇ ಉಳಿದುಕೊಳ್ಳಬಹುದು ನವೀನ್" ಎಂದರು. ನವೀನ್ ತಲೆಯಲ್ಲಾಡಿಸಿದ. ಪಾವನಾ ಪ್ರಭಾಕರ ಮಾವನಲ್ಲಿ ಅವನಿಗೆ ಚಿಕಿತ್ಸೆಯ ಅವಶ್ಯಕತೆ ಇದೆ ಎಂಬುದನ್ನು ತಿಳಿಸಿ ತೆರಳಿದಳು.
ಪಾವನಾ ಮೂರು ಹೊತ್ತು ನವೀನ್ ನನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದಳು. ರಾತ್ರಿ ತುಸು ಜ್ವರ ಕಡಿಮೆಯಾಗುತ್ತಿರುವುದು ಕಂಡುಬಂತು. ಮರುದಿನ ತೆಗೆದುಕೊಳ್ಳಬೇಕಾದ ಔಷಧವನ್ನು ನೀಡಿದಳು. ನಾಳೆ ಕ್ಲಿನಿಕ್ ನಿಂದ ಬಂದು ಪರೀಕ್ಷಿಸುತ್ತೇನೆ ಎಂದಳು. ಆಕೆಗೆ ಮರುದಿನ ಬೆಳಿಗ್ಗೆ ತನ್ನ ಆರಾಧ್ಯದೈವ ಶ್ರೀ ಸೀತಾರಾಘವನ ಸನ್ನಿಧಿಗೆ ತೆರಳುವುದಿತ್ತು.
ಮರುದಿನ ಬೆಳಿಗ್ಗೆ ಎದ್ದು ಬಂದ ಪ್ರಭಾಕರ ರಾಯರ ಮಗ "ಅಪ್ಪ ಇವತ್ತು ಭಾನುವಾರ. ಮತ್ತೆ ಸೋಮವಾರ, ಮಂಗಳವಾರ ನನಗೂ ಅನುಪಮ ಇಬ್ಬರಿಗೂ ಒಟ್ಟಿಗೆ ಅಪರೂಪಕ್ಕೆ ರಜೆ ದೊರೆತಿದೆ. ತೀರ್ಥಯಾತ್ರೆ ಮಾಡಿಕೊಂಡು ಬರೋಣ. ತುಂಬಾ ದಿನಗಳಿಂದ ಹೇಳುತ್ತಿದ್ದಿರಲ್ಲ" ಎಂದಾಗ ಪ್ರಭಾಕರ ರಾಯರು ಹಿಂದೆ ಮುಂದೆ ನೋಡದೆ ಒಪ್ಪಿದರು. ಅವರಿಗೀಗ ಪ್ರಯಾಣಕ್ಕೆ ನವೀನ್ ತೊಡಕಾಗಿದ್ದ. ಅವನನ್ನೇನು ಮಾಡೋಣ?. ಜ್ವರ ಪೂರ್ಣ ಗುಣವಾಗಿಲ್ಲ. ಎಂದು ಯೋಚಿಸುತ್ತಿದ್ದಾಗ "ಅಪ್ಪಾ.. ಹೀಗೆ ಯಾರೋ ಪರಿಚಯವಿಲ್ಲದವರನ್ನು ಆರೈಕೆ ಮಾಡುವುದು ಉಚಿತವಲ್ಲ. ನನಗೆ ಒಂದು ನರ್ಸಿಂಗ್ ಹೋಂ ಪರಿಚಯವಿದೆ. ಅಲ್ಲಿ ಸೇರಿಸೋಣ. ಟ್ರೀಟ್ ಮೆಂಟ್ ಕೊಡ್ತಾರೆ" ಎಂದ ಮಗನ ಮಾತನ್ನು ಪ್ರಭಾಕರ ರಾಯರು ಉಷಾ ಇಬ್ಬರೂ ಪುರಸ್ಕರಿಸಿದರು.
ನವೀನ್ ನಲ್ಲಿ ವಿಷಯ ತಿಳಿಸಿದಾಗ "ಬೇಡ...ನನ್ನನ್ನು ಮೆಜೆಸ್ಟಿಕ್ ನಲ್ಲಿ ಬಿಡಿ..ಹೇಗೋ ನಮ್ಮೂರು ಸೇರಿಕೊಳ್ಳುವೆ" ಎಂದ. "ಆರೋಗ್ಯ ಸುಧಾರಿಸಿಲ್ಲ. ಇಲ್ಲೇ ಗೊತ್ತಿರುವ ನರ್ಸಿಂಗ್ ಹೋಂ ಇದೆ. ಅಲ್ಲಿ ಚೆಕಪ್ ಗೆ ಕರೆದೊಯ್ಯುತ್ತೇವೆ. ವೈದ್ಯರು ಪ್ರಯಾಣ ಮಾಡಲು ಒಪ್ಪಿದರೆ ಮೆಜೆಸ್ಟಿಕ್ ಬಸ್ ಹತ್ತು" ಎಂದು ಹೇಳಿದರು ಪ್ರಭಾಕರ ರಾಯರ ಮಗ, ಪ್ರಶಾಂತ್.
"ಸರಿ "ಎಂದು ತಲೆಯಾಡಿಸಿದ ನವೀನ್.
ಆರು ಗಂಟೆಗೆ ಎಲ್ಲರೂ ಹೊರಟರು ನವೀನ್ ಕೂಡ. ನರ್ಸಿಂಗ್ ಹೋಂ ಪಕ್ಕದಲ್ಲಿ ನವೀನ್ ನನ್ನು ಇಳಿಸಿದ ಪ್ರಶಾಂತ್ "ನಾನು ಬರಬೇಕಾ?" ಎಂದು ಉದಾಸೀನತೆಯಿಂದ ಅನಾದರದಿಂದ ಬೇಡವಲ್ಲ ಎಂಬ ಧಾಟಿಯಲ್ಲಿ ಕೇಳಿದಾಗ ನವೀನ್ ಮನನೊಂದು ಮಾತನಾಡಲಿಲ್ಲ. ಕಾರು ರೊಂಯ್ಯನೆ ಮುಂದಕ್ಕೆ ಓಡಿತು. ಆರೋಗ್ಯವಿಲ್ಲದೆ ಯಾರೂ ಜೊತೆಯೂ ಇಲ್ಲದೆ ಏಕಾಂಗಿಯಾದ ನವೀನ್. ನಿತ್ರಾಣವಿದ್ದ ನವೀನ್ ಆಸ್ಪತ್ರೆಯ ಕುರ್ಚಿಯಲ್ಲಿ ಕುಳಿತ. ನರ್ಸ್ ವಿಚಾರಿಸಿ ಡ್ಯೂಟಿ ಡಾಕ್ಟರ್ ಬಳಿ ಕರೆದೊಯ್ದಳು. ಪರೀಕ್ಷಿಸಿದ ವೈದ್ಯರು "ಜ್ವರ, ಉಸಿರಾಟದ ಸಮಸ್ಯೆ ಅಧಿಕವಾಗಿರುವುದರಿಂದ ಡ್ರಿಪ್ ಹಾಕಬೇಕಾಗಿದೆ" ಎಂದು ಅಡ್ಮಿಟ್ ಮಾಡಿಕೊಂಡರು. ಮುಗ್ಧ ನವೀನ್ ಗೆ ಅಳು ಉಕ್ಕಿ ಬಂದಿತ್ತು. ಗುರುತು ಪರಿಚಯವಿಲ್ಲದ ಊರು, ಜನ. ಯಾರೂ ತನ್ನವರಿಲ್ಲ. ಅಡುಗೆಯಲ್ಲಿ ಸಿಕ್ಕಿದ ದುಡ್ಡು ಇಲ್ಲಿಗೆ ಸರಿಯಾಯಿತು ಎಂದು ನೊಂದುಕೊಂಡನು. ವೈದ್ಯರು ಬಂದು ಡ್ರಿಪ್ ಹಾಕಿ ಹೋದರು.
ಒಂಟಿಯಾದ ನವೀನ್ ಅಡುಗೆ ವೆಂಕಣ್ಣನಿಗೆ ಕರೆ ಮಾಡಿದ. ಅವರು ಫೋನೆತ್ತುತ್ತಲೇ ಇಲ್ಲ. ಪಾವನಾರ ನೆನಪಾಯಿತು. ಅವರು ಕೊಟ್ಟಿದ್ದ ವಿಳಾಸ ಹುಡುಕಲು ಮಲಗಿದಲ್ಲಿಂದ ಏಳಲಾಗದೆ ಚಡಪಡಿಸಿದ. ಆಯಾ ಬಂದಾಗ ತನ್ನ ಬ್ಯಾಗ್ ನಲ್ಲಿದ್ದ ವಿಳಾಸದ ಚೀಟಿ ಹುಡುಕಿ ಕೊಡಲು ಹೇಳಿದರೂ ಆಕೆಗೆ ಸಿಕ್ಕಲೇಯಿಲ್ಲ. ವಿಧಿಯಿಲ್ಲದೆ ತನ್ನ ಆರಾಧ್ಯದೈವ ರಾಮನ ಧ್ಯಾನದಲ್ಲಿ ಮುಳುಗಿದ. ಅವನಿಗೆ ಮೊರೆಯಿಟ್ಟ.
ಮುಂಜಾನೆ ಬೇಗ ಶ್ರೀ ಸೀತಾರಾಘವನ ಸನ್ನಿಧಾನಕ್ಕೆ ತೆರಳಿ ತಲೆಬಾಗಿ ಅವನ ಪಾದಗಳಿಗೆ ನಮಸ್ಕರಿಸಿ ಬಂದರು ಪಾವನಾ ಮತ್ತು ಮಕ್ಕಳು. ನಂತರ ಮನೆಗೆ ಬಂದು ಕ್ಲಿನಿಕ್ ಗೆ ಹೊರಟ ಪಾವನಾ ನವೀನ್ ನನ್ನು ರಾತ್ರಿ ಪರೀಕ್ಷಿಸಲು ಬರುತ್ತೇನೆ ಎಂದು ಹೇಳಿದ್ದರೂ ಮನಸ್ಸು ತಡೆಯದೆ ಕ್ಲಿನಿಕ್'ಗೆ ಹೋಗುವ ಮುನ್ನವೇ ಪ್ರಭಾಕರ ರಾಯರ ಮನೆಗೆ ಬಂದಳು. ಮನೆಗೆ ಬೀಗ ಜಡಿದು ಮನೆಯವರೆಲ್ಲರೂ ಎಲ್ಲಿಗೋ ತೆರಳಿದ್ದು ಅರಿವಾದಾಗ ಪಾವನಾ ಚಡಪಡಿಸಿದಳು. ನವೀನ್ ಗೆ ಆರೋಗ್ಯ ಸರಿಹೋಗಿರಬಹುದಾ? ಎಲ್ಲರೂ ಎಲ್ಲಿ ಹೋಗಿರಬಹುದು? ನಿನ್ನೆ ರಾತ್ರಿ ಬಂದಿದ್ದ ನನಗೆ ಒಂದು ಮಾತೂ ಕೂಡಾ ಹೇಳದೆ..! ಎಂದು ಯೋಚಿಸುತ್ತಾ ಕಾರ್ ಸ್ಟಾರ್ಟ್ ಮಾಡಿದಳು.
ಕ್ಲಿನಿಕ್ ಮುಂದೆ ರೋಗಿಗಳು ಸಾಲುಗಟ್ಟಿ ಕುಳಿತಿದ್ದರು. ಅವರನ್ನು ಒಬ್ಬೊಬ್ಬರನ್ನಾಗಿ ಬರಹೇಳಿದಳು. ರೋಗಿಗಳನ್ನು ಪರೀಕ್ಷಿಸುತ್ತಿದ್ದರೂ ಪಾವನಾಳ ಮನವು ನವೀನ್ ಕುರಿತು ಚಿಂತಿಸುತ್ತಿತ್ತು. ಒಂದು ಮಾತು ನನಗೆ ಹೇಳಿಲ್ಲವಲ್ಲ..! ಎಷ್ಟು ಕಾಳಜಿಯಿಂದ ಚಿಕಿತ್ಸೆ ಕೊಟ್ಟಿದ್ದೆ. ಛೇ...!! ಈ ಉದ್ಯೋಗವೇ ಹೀಗೆ. ಜನ ಸೇವೆಯಂತೆ.. ಜನಸೇವೆ..! ನಮ್ಮಿಂದ ಸೇವೆ ಮಾಡಿಸಿಕೊಂಡವರಿಗೆ ನಮ್ಮ ನೆನಪೇ ಇಲ್ಲ.
ನಮಗೂ ಚಿಕಿತ್ಸೆ ಪಡಕೊಂಡವರು ಗುಣವಾದರಾ? ಹೇಗಿದ್ದಾರೆ? ಇನ್ನೇನಾದರೂ ಚಿಕಿತ್ಸೆಯಲ್ಲಿ ಬದಲಾವಣೆ ಮಾಡಬೇಕಾ ಎಂಬೆಲ್ಲ ಯೋಚನೆಗಳು ಕಾಡುತ್ತಿರುತ್ತವೆ. ನಮ್ಮ ಸಂಬಂಧಿಗಳಲ್ಲದಿದ್ದರೂ ನಮ್ಮ ಬಳಿ ಬರುವ ರೋಗಿ ಎಂಬ ಆತ್ಮೀಯತೆ ಬೆಳೆಯುತ್ತದೆ. ಇದನ್ನಾದರೂ ಏಕೆ ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಆರೋಗ್ಯ ಏರುಪೇರಾದರೆ ತಡರಾತ್ರಿ, ನಸುಕಾದರೂ ಸರಿ ಕರೆ ಮಾಡಿ ಬರಹೇಳುವವರಿಗೆ ಹೀಗೆ ಇದ್ದಕ್ಕಿದ್ದಂತೆ ಎದ್ದು ಹೋಗುವಾಗ ಹೇಳಿಹೋಗುವ ಸೌಜನ್ಯವಾದರೂ ಇದ್ದರೆ ಚೆನ್ನ..!!
ಎಂದೆಲ್ಲ ಯೋಚಿಸುತ್ತಾ ತಲೆಚಿಟ್ಟುಹಿಡಿಸಿಕೊಂಡಳು. ಪ್ರಭಾಕರ ರಾಯರ ಮಡದಿ ಉಷಾಗೆ ಕರೆಮಾಡಿದಳು ಪಾವನಾ. ಅವರು ಫೋನ್ ಎತ್ತುತ್ತಿರಲಿಲ್ಲ. ಪ್ರಭಾಕರ ರಾಯರಿಗೇ ಕರೆ ಮಾಡಿದಳು. ಅವರಲ್ಲಿ ' ಏಕೆ ಹೀಗೆ ಮಾಡಿದಿರಿ?' ಎಂದು ಕೇಳಬೇಕು ಎಂದುಕೊಂಡಳು. ಅವರೂ ಫೋನ್ ಸ್ವೀಕರಿಸುತ್ತಿಲ್ಲ. ಕ್ಷಣಕ್ಷಣಕ್ಕೂ ಮನಸು ಸ್ತಿಮಿತ ಕಳೆದುಕೊಳ್ಳುವಂತಾಯಿತು.
ಒಮ್ಮೆ ವಾಶ್ ರೂಂ ಗೆ ಹೋಗಿ ಮುಖಕ್ಕೆ ನೀರು ಚಿಮುಕಿಸಿ ಬಂದಳು. ಸ್ವಲ್ಪ ಹಿತಕರವೆನಿಸಿತು. ಯಾರದೋ ಅನಾದರಕ್ಕೆ ನಾನೇಕೆ ಚಿಂತಿಸಬೇಕು ಎಂದು ತನ್ನ ಜವಾಬ್ದಾರಿಯತ್ತ ಗಮನಹರಿಸಿದಳು. ರೋಗಿಗಳ ಸರತಿ ಸಾಲು ಕರಗುತ್ತಾ ಬಂದಿತು. ಅಷ್ಟರಲ್ಲಿ ಒಂದು ಫೋನ್ ಕರೆ ಬಂದಿತು. ಗೊತ್ತಿಲ್ಲದ ನಂಬರ್ ಎಂದು ಸ್ವಲ್ಪ ನಿಧಾನಿಸಿದಳು. ಮತ್ತೆ ಮತ್ತೆ ರಿಂಗಾಗುತ್ತಿತ್ತು. ರೋಗಿಗಳನ್ನೆಲ್ಲ ಪರೀಕ್ಷಿಸಿ ಕಳುಹಿಸಿದ ನಂತರ ಕರೆ ಸ್ವೀಕರಿಸಿದರು. ಆ ಕಡೆಯಿಂದ ಪ್ರಭಾಕರ ರಾಯರು ಮಾತನಾಡುತ್ತಿದ್ದರು ''ಹಲೋ.ಪಾವನಾ..ನಾನಮ್ಮ ಪ್ರಭಾಕರ ಮಾವ, ನೀನು ಕರೆ ಮಾಡಿದರೂ ನನಗೆ ರಿಸೀವ್ ಮಾಡೋಕೆ ಆಗಲಿಲ್ಲ. ಫೋನ್ ಚಾರ್ಜ್ ಮುಗಿದಿತ್ತು. ಈಗ ಚಾರ್ಜ್ ಮಾಡಿದಾಗ ಗೊತ್ತಾಯಿತು. ಈಗ ಸಿಗ್ನಲ್ ಕೂಡ ಸಿಗ್ತಿಲ್ಲ. ಅದಕ್ಕೆ ಮಗನ ಫೋನ್ ನಿಂದ ಕರೆಮಾಡಿದ್ದೇನೆ."
ಚುಟುಕಾಗಿ "ಹೂಂ.."ಎಂದ ಪಾವನಾ.
"ಗಡಿಬಿಡಿಯಲ್ಲಿ ನಿಂಗೆ ಹೇಳೋದು ಮರೆತಿದ್ದೆ. ನಾನಿವತ್ತು ಬೆಳಿಗ್ಗೆ ಕುಟುಂಬ ಸಮೇತ ತೀರ್ಥಯಾತ್ರೆ ಹೊರಟಿದ್ದೇವೆ. ನವೀನ್ ನನ್ನು ಅಲ್ಲಿಯೇ ಸಮೀಪದಲ್ಲಿರುವ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಹೇಳಿದ್ದೇವೆ. ನಂತರ ನಾವು ಅವನ ಕಾಂಟಾಕ್ಟ್ ಮಾಡಿಲ್ಲ" ಎಂದಾಗ ಪಾವನಾ ನೊಂದುಕೊಂಡು ಫೋನಿಟ್ಟಳು.
ದುಡಿಯಲು ಬಡವರು ಬೇಕು. ಅಕಸ್ಮಾತ್ ಎಲ್ಲಾದರೂ ಆರೋಗ್ಯ ಏರುಪೇರಾದರೆ ಅಂತಹವರು ಯಾರಿಗೂ ಬೇಡ. ಎಂತಹ ಶೋಚನೀಯ ಸ್ಥಿತಿ ಶ್ರಮಿಕರಿಗೆ. ಶ್ರಮಿಕ ಕಾರ್ಮಿಕರಿಲ್ಲದೆ ಯಾವ ಕಾರ್ಯವೂ ನಡೆಯದು. ಆದರೂ ತಾತ್ಸಾರ, ಅಸಡ್ಡೆ.. ಎಂದುಕೊಳ್ಳುತ್ತಾ ಕ್ಲಿನಿಕ್ ನ ಶಟರ್ ಎಳೆದು ಕಾರು ಚಲಾಯಿಸಿದಳು.
ಕಾರು ಅದೇ ನರ್ಸಿಂಗ್ ಹೋಂ ನ ಎದುರು ಬಂದು ನಿಂತಿತು. ಪಾವನಾ ರಿಸೆಪ್ಷನ್ ನಲ್ಲಿ ನವೀನ್ ನನ್ನು ವಿಚಾರಿಸಿಕೊಂಡಳು. ಅವರನ್ನು ಅಡ್ಮಿಟ್ ಮಾಡಿಕೊಳ್ಳಲಾಗಿದೆ ಎಂದ ರಿಸೆಪ್ಷನಿಸ್ಟ್ ರೂಂ ನಂಬರ್ ಹೇಳಿದಳು. ಪಾವನಾ ಅತ್ತ ಧಾವಿಸಿದಳು. ರೂಂ ನಂಬರ್ 114 ಎಲ್ಲಿ ಬರುತ್ತದೆ ಎಂದು ಹುಡುಕುತ್ತಾ ಹೊರಟಳು. ಮೊದಲ ಮಹಡಿಯಲ್ಲಿ ಎಡಗಡೆಗೆ ತಿರುಗಿ ಮುಂದೆ ಸಾಗಿದಾಗ ಕೊನೆಯ ರೂಂ 114. ರೂಂ ನ ಹೊರಗೆ ನಿಂತು ಬಾಗಿಲಿಗೆ ಮೆಲ್ಲನೆ ಕುಟ್ಟಿ ಟಕ್ ಟಕ್ ಸದ್ದು ಮಾಡಿದಳು. ಒಳಗಿನಿಂದ ಯಾವುದೇ ಸದ್ದಿಲ್ಲ. ಮೆಲ್ಲನೆ ಒಳಗೆ ಇಣುಕಿದಳು.
ನವೀನ್ ಎತ್ತಲೋ ನೋಡುತ್ತಾ ಮಲಗಿಕೊಂಡಿದ್ದಾನೆ. ಯಾವುದೋ ಯೋಚನೆಯಲ್ಲಿ ಮುಳುಗಿಹೋಗಿದ್ದಾನೆ. ಟಕ್ ಟಕ್ ದನಿ ಅವನ ಅರಿವಿಗೆ ಬರುತ್ತಿಲ್ಲ. ಮೆಲ್ಲಗೆ ಬಾಗಿಲು ಸರಿಸಿ ಒಳಗಡಿಯಿಟ್ಟರು ಡಾಕ್ಟರ್ ಪಾವನಾ "ಹಲೋ ನವೀನ್.." ಎಂದಾಗ ಒಮ್ಮಿಂದೊಮ್ಮೆಲೇ ಬೆಚ್ಚಿಬಿದ್ದ ನವೀನ್
"ಮೇಡಂ.. ನೀವು... ಇಲ್ಲಿ..."
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
27-10-2020.
ಚೆನ್ನಾಗಿದೆ
ReplyDeleteಧನ್ಯವಾದಗಳು 💐🙏
Delete👌🏻👌🏻
ReplyDelete