ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನೀಳ್ಗತೆ.
💐💐
ಯಾವ ತರುವು ಆವ ಲತೆಗೋ: ಅಧ್ಯಾಯ ೫
ಅಡುಗೆ ಭಟ್ಟ ಮತ್ತು ವೈದ್ಯೆ ಎತ್ತಣ ಮಾಮರ ಎತ್ತಣ ಕೋಗಿಲೆ ಎನ್ನುವಂತೆ ಇದು ಕಷ್ಟಸಾಧ್ಯ ಎಂದು ಮತ್ತೆ ನಿರಾಸೆಯಾಗುವ ಮುನ್ನ ತಾನೇ ಮನಸ್ಸನ್ನು ಹಿಡಿತದಲ್ಲಿಡಬೇಕು ಎಂದುಕೊಂಡನು.
ಪಾವನಾ ಕರೆಮಾಡಿದಾಗ ಬ್ಯುಸಿ ಇದ್ದೇನೆ ಎಂದು ತಪ್ಪಿಸಿಕೊಂಡ. ಓಜಸ್ ಅಂತೂ "ನೀನು ಹಾಗೆಲ್ಲ ಹೇಳಿದರಾಗಲ್ಲ" ಎಂದು ಹಠ ಹಿಡಿದು ಐದು ನಿಮಿಷ ಮಾತನಾಡುತ್ತಿದ್ದ. ಪಾವನಾಳೊಡನೆ ಮಾತ್ರ ಮೌನ. ಒಂದು ವಾರ ತಡೆದುಕೊಂಡ ಪಾವನಾ ಕರೆ ಮಾಡಿದಾಗ ಪುನಃ ಅದೇ ಉತ್ತರ. ಅಳುತ್ತಾ "ನವೀನ್ ನನ್ನನ್ನು ಮರೆತೇಬಿಟ್ಟೆಯಾ?" ಎಂದು ಹೇಳಿ ಗದ್ಗದಿತಳಾದಾಗ ಅವಳ ಮನಸ್ಸೂ ನನ್ನತ್ತ ವಾಲಿದೆ ಎಂದು ಅರಿವಾಯಿತು. ಆಕೆಯಲ್ಲಿ ಪ್ರೀತಿಸುತ್ತಿರುವ ವಿಷಯ ಪ್ರಸ್ತಾಪಿಸುವುದು ಹೇಗೆ ಎಂದು ಅಳುಕುತ್ತಿದ್ದ ನವೀನ್ ಕೇಳಿಯೇಬಿಟ್ಟ "ನನ್ನನ್ನು ಮದುವೆಯಾಗಲು ಸಿದ್ಧವಿದ್ದೀಯಾ?"ಎಂದು.
ಉತ್ತರಿಸಲಿಲ್ಲ ಪಾವನಾ.
"ಬೇಕಾದಷ್ಟು ಸಮಯ ತೆಗೆದುಕೊಂಡು ನಿರ್ಧಾರ ತಿಳಿಸು. ನೇರವಾಗಿ ಹೇಳುತ್ತಿದ್ದೇನೆ ಮದುವೆಯಾಗುವುದಾದರೆ ಮಾತ್ರ ದಿನವೂ ನಿನ್ನೊಂದಿಗೆ ಮಾತು. ಇಲ್ಲವೆಂದಾದರೆ ಬರೀ ಸ್ನೇಹ. ಅಪರೂಪಕ್ಕೆ ಹರಟೆ. ಹೆಣ್ಣುಮಕ್ಕಳೊಂದಿಗೆ ಸಲುಗೆಯಿಂದ ನಡೆದುಕೊಳ್ಳುವವ ಅನ್ನುವ ಹಣೆಪಟ್ಟಿ ನನಗೆ ಬರಬಾರದು" ಎಂದಾಗ
"ನನ್ನ ರಾಮ ನಿನ್ನನ್ನು ನನಗೆ ತೋರಿಸಿಕೊಟ್ಟಿದ್ದಾನೆ. ಇದು ರಾಮನಾಣತಿ" ಎಂದು ಹೇಳಿ ತನಗೆ ನವೀನ್ ನನ್ನು ಪರಿಚಯವಾಗುವ ದಿನ ಮುಂಜಾನೆ ಬಿದ್ದ ಕನಸನ್ನು ಹೇಳಿಕೊಂಡಳು. ಆ ಕನಸಲ್ಲಿ ನನಗೆ ಕಂಡ ಮುಖ ನಿನ್ನದೇ" ಎಂದಳು.
ಪಾವನಾಳ ಮಾತಿನಿಂದ ಮೂಕವಾದನು ನವೀನ್. ಅವನೂ ಕೂಡ ಪ್ರಭು ಶ್ರೀರಾಮನ ಆರಾಧಕ. ತಂದೆ ಮನೆಯಿಂದ ಹೊರದಬ್ಬಿದಾಗ ರಾಮನನ್ನು ನೆನಪಿಸಿಕೊಂಡು ಹೆಜ್ಜೆ ಹಾಕಿದ್ದು ಮನೆಯ ಸಮೀಪವಿದ್ದ, ಅವನದೇ ಕುಟುಂಬದ ಹಿರಿಯರು ಆರಾಧಿಸಿಕೊಂಡು ನಿತ್ಯ ಪೂಜೆ ಪುನಸ್ಕಾರ ಮಾಡಿಕೊಂಡು ಬರುತ್ತಿದ್ದ ಕೋದಂಡರಾಮನ ಪುಟ್ಟ ಮಠಕ್ಕೆ. ಅಲ್ಲಿಂದ ನಂತರ ಪ್ರತಿ ನೋವಿನಲ್ಲೂ ನಲಿವಿನಲ್ಲೂ ಸಖನಾದದ್ದು ರಾಮನೇ. ರಾಮನನ್ನು ಧ್ಯಾನಿಸಿದರೆ ಎಂತಹಾ ಕಷ್ಟವೂ ನಿವಾರಣೆಯಾಗಿ ಮುನ್ನಡೆಯಲು ಶಕ್ತಿ ದೊರಕುತ್ತಿತ್ತು. ಬಾಳ ಸಂಗಾತಿ ಬೇಕೆಂದು ಮನವು ಬೇಡಿಕೊಂಡಾಗ ಈ ರೂಪದಲ್ಲಿ ಅನುಗ್ರಹಿಸಿದನೇ? ಇರಬಹುದು. ಇದು ರಾಮನ ಲೀಲೆಯೇ ಸರಿ ಎಂದು ಮತ್ತೊಮ್ಮೆ ರಾಮನನ್ನು ಧ್ಯಾನಿಸುತ್ತಾ..
"ನನ್ನ ಕಷ್ಟದಲ್ಲಿ ಮಾನವೀಯತೆಯಿಂದ ಸಹಾಯಮಾಡಿ ಕಾಪಾಡಿದ ನಿನ್ನನ್ನು ಕೊನೆಯ ಉಸಿರಿನವರೆಗೆ ಜೋಪಾನಮಾಡುವ ಜವಾಬ್ದಾರಿ ನನ್ನದು ಪಾವನಾ.." ಎಂದನು.
ಪಾವನಾಗೆ ಕಣ್ಣೀರು ಉಕ್ಕಿಬರುತ್ತಿದ್ದುದು ಈಗ ಆನಂದ ಭಾಷ್ಪವಾಯಿತು. ನವೀನ್ ಕೂಡಾ ಭಿನ್ನವಾಗಿರಲಿಲ್ಲ.
"ಹೇ.. ಮುದ್ದು.. ಸ್ವಲ್ಪ ಫ್ರೆಶ್ ಆಗಿ ಬಾ.. ನಾನು ಫ್ರೆಶ್ ಆಗಿ ಬರ್ತೀನಿ.. ಐದುನಿಮಿಷದ ನಂತರ ಮಾತಾಡೋಣ.." ಎಂದ.
ಹೂಂಗುಟ್ಟಿದ ಪಾವನಾ ಫೋನಿಟ್ಟಳು.
ಫ್ರೆಶ್ ಆಗಿ ಬಂದ ಪಾವನಾ ಮೊದಲು ತನ್ನ ಪುಟ್ಟ ದೇವರ ಕೋಣೆಯೊಳಗೆ ನಗುತ್ತಿದ್ದ ರಾಮನ ದಿವ್ಯಮಂಗಲ ಮೂರುತಿಗೆ ದೀಪ ಬೆಳಗಿದಳು. ತೇಜೋಮಯ ರಾಮನ ಮಹಿಮೆಯನ್ನು ಕೊಂಡಾಡಿದಳು.
"ಮನದೊಳಗೆ ಮನೆಮಾಡು ಮನೋಹಾರಿ ರಾಮ||
ಒಳಗಿಳಿದು ಕೊಳೆತೊಳೆದು ಬೆಳಗೆನ್ನ ರಾಮ||
ರಾಮಾ.....ರಾಮಾ..." ಎನ್ನುತ್ತಾ ಧ್ಯಾನಿಸುತ್ತಿದ್ದರೆ ನವೀನ್ ಪಾವನಾಳಲ್ಲಿ ಮಾತನಾಡಲು ತವಕಿಸುತ್ತಿದ್ದ.
ಹೊರಬಂದು ಫೋನ್ ಕರೆ ಸ್ವೀಕರಿಸಿದಳು ಪಾವನಾ.
" ಚಿನ್ನಾ...." ಅಂದ ಅವನ ಮಾತನ್ನು ಕೇಳುತ್ತಿದ್ದರೆ ಅವಳ ಹೃದಯ ಕಂಪಿಸುತ್ತಿತ್ತು. ಇಂತಹಾ ಸವಿನುಡಿಯನ್ನು ಕೇಳಲು ಅದೆಷ್ಟು ವರ್ಷಗಳಿಂದ ಕಾಯುತ್ತಿದ್ದೆ ಎನಿಸಿತು ಅವಳಿಗೆ.
"ಹೂಂ..." ಅಂದಳು. ಮತ್ತೆ ಸುಮ್ಮನಾದಳು.
" ಈಗ ಮಾತಾಡಲ್ವಾ.."
"........."
"ಬರೀ ಮೌನಕ್ಕೆ ದುಡ್ಡು ಕೊಡ್ತಿದೀನಿ.. ಏನಾದ್ರೂ ಮಾತಾಡು.." ಎಂದರೆ ಅವಳ ಹೃದಯದಿಂದ ನೂರಾರು ಮಾತುಗಳು ಹೊರಬರದೆ ಅವಿತಿದ್ದವು.
" ಏನು ಮಾತಾಡ್ಲಪ್ಪಾ...ರಾಯರಲ್ಲಿ?"
"ನೀನು ಏನಂದರೂ ಕೇಳಲು ಖುಷಿ. ಅದ್ಕೆ ನಿಮ್ಮನ್ನು ಆರಾಧಿಸಲಾರಂಭಿಸಿದ್ದು.."
"ಓಹೋ...ಯಾವತ್ತೋ ಕದ್ದುಬಿಟ್ಟಿದೀನಿ ಹಾಗಾದ್ರೆ.. ಆ ಹೃದಯ..."
"ಅಲ್ವಾ ಮತ್ತೆ.. ನಿನ್ನ ದನಿ ಕೇಳದಿದ್ರೆ ನಂಗೂ ವೇದನೆ..."
"ಅಂತೂ ಇಬ್ರೂ ಒಂದೇ ಟ್ರ್ಯಾಕ್ ನಲ್ಲಿ ಓಡ್ತಾ ಇದ್ವಿ ಅಂತ ಆಯ್ತು.."
ಹರಟುತ್ತಾ ಸಮಯ ಹೋದದ್ದೇ ಗೊತ್ತಾಗಲಿಲ್ಲ. "ಬಾಯ್ ಪಾವನಾ.." ಅಂದಾಗ ತಡರಾತ್ರಿಯಾಗಿತ್ತು. ನವೀನ್ ವೇಗವಾಗಿ ಹೆಜ್ಜೆ ಮುಂದಿಟ್ಟ. ಒಂದೇ ದಿನದಲ್ಲಿ ಜಾತಕ ತೋರಿಸಿ ಮದುವೆಯ ದಿನಾಂಕ ನಿಗದಿಪಡಿಸಿ ಪಾವನಾಳಿಗೆ ತಿಳಿಸಿದಾಗ ಇದು ನಿಜವೋ ಸುಳ್ಳೋ ಎಂದು ತನ್ನನ್ನು ತಾನೇ ಚಿವುಟಿಕೊಂಡಳು. ಅಡುಗೆ ವೆಂಕಣ್ಣ ನವೀನ್ ಗೆ ತಂದೆಯ ಸ್ಥಾನದಲ್ಲಿ ನಿಂತು ಜವಾಬ್ದಾರಿ ನಿರ್ವಹಿಸುವ ಭರವಸೆಯಿತ್ತ. ಒಂದು ಶುಭ ಮುಹೂರ್ತದಲ್ಲಿ ಪಾವನಾಳ ಆರಾಧ್ಯದೈವ ಶ್ರೀ ಸೀತಾರಾಘವನ ಸನ್ನಿಧಿಯಲ್ಲಿ ಸರಳವಾಗಿ ವಿವಾಹ ನೆರವೇರಿತು. ಗಂಗಾಧರ ರಾಯರು ಸೊಸೆಯ ಮದುವೆಗೆ ಆಗಮಿಸಿ ಮನದುಂಬಿ "ಸುಖವಾಗಿ ಬಾಳಿ" ಎಂದು ಹರಸಿದರು. ಹೊರಡುವಾಗ ನವೀನ್ ನ ಕೈಕುಲುಕಿ "ನೀನು ನನ್ನ ಎರಡನೇ ಮಗ ಅಂತ ತಿಳೀತೀನಿ ಕಣೋ.." ಎಂದಾಗ ಪಾವನಾ ಆಹಾ!! ಎಂತಹ ಹೃದಯ ವೈಶಾಲ್ಯತೆ ಮಾವನವರದು. ಇಂತಹ ಸಹೃದಯಿಗೆ ಎಂತಹ ಮಗ!! ಎಂದು ಒಂದು ಕ್ಷಣ ಭಾವುಕಳಾದಳು.
ಓಜಸ್ ಗೆ ಅಂತೂ ತುಂಬಾ ಸಂತೋಷ ಆಗಿತ್ತು. ಇನ್ನು ನವೀನಣ್ಣ ನಾವು ಜೊತೇಲೇ ಇರೋದು ಅಂತ ಎಲ್ಲರಲ್ಲೂ ಹೇಳ್ತಾ ಇದ್ರೆ ಪಾವನಾ ಮಾತ್ರ "ಇನ್ನು ಅಪ್ಪ ಅನ್ಬೇಕು" ಎಂದು ತಾಕೀತು ಮಾಡಿದಳು. "ಇರ್ಲಿ ಬಿಡಿ.. ಅವನಿಷ್ಟದಂತೆ ಹೇಳಲಿ" ಎನ್ನುತ್ತಾ ತುಂಟ ನಗೆಯನ್ನು ಬೀರಿದ ನವೀನ್. ಪಾವನಾ ನಾಚಿ ಕೆಂಪೇರಿದಳು. ಕೆಂಪಡರಿದ ಅವಳ ಮುದ್ದು ಮುಖವನ್ನು ಮತ್ತೆ ಮತ್ತೆ ನೋಡಿ ಆನಂದಿಸಿದ ನವೀನ್.
ಮದುವೆ ಮುಗಿಸಿ ಎಲ್ಲರೂ ಅವರವರ ಮನೆಗೆ ತೆರಳಿದರು. ಪಾವನಾಳ ಅಮ್ಮ ಮದುಮಕ್ಕಳ ಜೊತೆ ಫ್ಲಾಟ್ ಗೆ ಬಂದರು. ರಾತ್ರಿ ಊಟ ಮುಗಿಸಿ ಮಗಳು ಅಳಿಯನನ್ನು ಮಧುಮಂಚದತ್ತ ಕಳುಹಿಸಿಕೊಟ್ಟರು ತಾಯಿ ಸಾವಿತ್ರಿ.
ಆ ಬೆಳ್ಳಿಯ ಚಂದಿರನ ತಂಪಲಿ ಬೀಸುವ ತಂಗಾಳಿಗೆ ಮೈಯೊಡ್ಡಿ ನಿಂತ ಜೋಡಿ.. ನಿನ್ನ ಕೈಬಿಡಲಾರೆ, ಕೂದಲು ಕೊಂಕದಂತೆ ಕಾಯುವೆ.. ಎಂಬ ಅವನ ಭರವಸೆಗೆ ಪರವಶಳಾದ ಅವಳು ಅವನೆದೆಗೆ ಮುಖವಿಟ್ಟಳು. ನಾಚಿದ ಚಂದಿರ ಮೋಡದ ಮರೆಯಲ್ಲಿ ಅವಿತ. ಅವಳ ಹಾರುವ ಕೂದಲು ತಾನೂ ತನ್ನಿರುವ ಮರೆತು ಬಂಧನದಿ ಜೊತೆಯಾಯಿತು. ಹಣೆಯ ಮೇಲಿನ ಸಿಂಧೂರ ಅವನೊಲುಮೆಯ ಉಂಗುರಕೆ ಸಾಕ್ಷಿಯಾಯಿತು.
ಯಾವ ತರುವು ಆವ ಲತೆಗೊ
ಒಲವ ಹೂವು ಅರಳಲು
ಯಾವ ದುಂಬಿಗೆ ಆವ ಸುಮವೊ
ಮಧುವ ಹೀರಿ ನಲಿಯಲು...||
ಯಾವ ಹನಿಗೆ ಆರ ಕೈಯೋ
ಮೆಲ್ಲಮೆಲ್ಲನೆ ಒರೆಸಲು
ಹೆಜ್ಜೆಹೆಜ್ಜೆಗೂ ಲಜ್ಜೆದುಂಬಿ
ಹೃದಯಕದವ ತೆರೆಯಲು...||
ಯಾವ ಕಸುಬೋ ಆವ ಧನವೋ
ಬರಿಯ ಉದರ ತುಂಬಲು
ಪ್ರೇಮದೊಸರಲಿ ಕೊಚ್ಚಿಹೋಗಿ
ಮನವು ತನುವ ಬೆಸೆಯಲು...||
ಪ್ರೀತಿಯೊಂದೆ ಸುಖಿಸಲು
ಮಧುರ ಮೈತ್ರಿ ಸವಿಯಲು
ಕರದಿ ಕರವನಿರಿಸುತ
ಕುದಿವ ಹೃದಯವ ತಣಿಸಲು..||
ಅವನ ನುಡಿಸುವ ಕೊಳಲಾದಳು ಅವಳು. ಅವನ ಗಾನದಿ ಮೈಮರೆತು ತಲೆದೂಗಿದಳು. ಉಸಿರಿಗೂ ತಾನು ಪರಕೀಯ ಅನಿಸುವಷ್ಟು ಸನಿಹವಾದಳು. "ನನ್ನ ಹೀಗೇ ನೋಡ್ಕೊಳ್ತೀಯೇನೋ.." ಎನ್ನುತ್ತಾ ಕಣ್ಣಲ್ಲಿ ಕಣ್ಣಿಟ್ಟು ಕಣ್ತುಂಬಿಕೊಂಡಳು. "ಹುಚ್ಚು ಹುಡುಗಿ. ಈಗ ಯಾರಾದ್ರೂ ಅಳ್ತರೇನೋ.." ಎನ್ನುತ್ತಾ ಕಂಬನಿಯೊರೆಸಿದ. ಅವನ ಪ್ರತಿಯೊಂದು ನುಡಿಯೂ ಹೃದಯದೊಳಗೆ ಜಾಗಪಡೆದಿತ್ತು.
ಕಣ್ಣ ಹನಿಯನೆಲ್ಲ ತನ್ನೆದೆಯ ಚಿಪ್ಪಿನೊಳಗೆ ಬಂಧಿಸಿ ಮುತ್ತಾಗಿಸಿದ ಇನಿಯ. ನಲ್ಲೆಯ ಸನಿಹ ಮುದನೀಡಿದ ರಸಘಳಿಗೆ ತನ್ನ ನೋವಿನ ಪಯಣವನೆಲ್ಲ ಮರೆಸಿ ನಿನಗೆ ನಾನು ನನಗೆ ನೀನು ಒಲವೇ ನಮ್ಮ ಬದುಕು ಎಂದು ಯುಗಳಗೀತೆ ಹಾಡಿದರು.
ಬೆಳಿಗ್ಗೆ ಐದು ಗಂಟೆಗೆ ಏಳುತ್ತಿದ್ದ ಪಾವನಾಗೆ ಇಂದು ದೇಹ ಭಾರವಾಗಿತ್ತು. ಮನಸ್ಸು ಸಂತಸದಿ ಕುಣಿಯುತಿತ್ತು. ತನ್ನ ಹೊದಿಕೆಯನ್ನು ಅವನಿಗೆ ಹೊದೆಸಿ ಏಳಹೊರಟ ಅವಳನ್ನು ಕೈಹಿಡಿದು ಬರಸೆಳೆಯಿತು ಹಿಂದಿನಿಂದ ಬಂದ ಕೈ.."ರೀ.." ಎಂದು ಮೆದುವಾಗಿ ಸರಿಸಿದಳು. ಮತ್ತೆ ಸುತ್ತುವರಿದ ಬಾಹುಬಂಧನ.. ಅವನ ರಾಗಕೆ ಸೋತ ರಾಧೆ ಆದಳು.
ರೂಮಿನಿಂದ ಹೊರಬಂದಾಗಲೇ ಗಂಟೆ ಆರೂವರೆ ಆಗಿತ್ತು. ಬೇಗನೆ ಸ್ನಾನ ಮುಗಿಸಿ ದೀಪ ಬೆಳಗಿ ಗಣಪತಿ, ದುರ್ಗೆ, ರಾಮನಿಗೆ ನಮಸ್ಕರಿಸಿದಳು. "ಮನದೊಳಗೆ ಮನೆಮಾಡು ಮನೋಹಾರಿ ರಾಮ..ಒಳಗಿಳಿದು ಕೊಳೆತೊಳೆದು ಬೆಳಗೆನ್ನ ರಾಮ...ರಾಮ...
ರಾಮ...." ಎಂದು ಸುಶ್ರಾವ್ಯವಾಗಿ ಹಾಡುವಾಗ ನವೀನ್ ಕೂಡ ಫ್ರೆಶ್ ಆಗಿ ಬಂದು ಪಾವನಾಳ ಹಿಂದೆ ನಿಂತಿದ್ದ. ತಿಳಿಯದ ಪಾವನಾ ನಮಸ್ಕರಿಸಲು ಬಗ್ಗಿದಾಗ ಹೊಕ್ಕುಳ ಮೇಲೇನೋ ಹರಿದಂತಾಗಿ ಹಿಂದಿರುಗಿದರೆ.. ಅವರೇ..! "ಹೂಂ.. ಏನ್ರೀ.. ಈಗ್ಲೂ.." ಅಂತ ಮೆಲುದನಿಯಲ್ಲಿ ಹೇಳಿ ಕೆನ್ನೆ ಕೆಂಪಾಗಿಸಿ ದೇವರಿಗೆ ನಮಸ್ಕರಿಸಿದಳು. ನವೀನ್ ಕೂಡಾ ಅವಳನ್ನು ಅನುಸರಿಸಿದ. ಮಗಳು ಅಳಿಯನ ಅನುರಾಗವನ್ನು ಕಣ್ತುಂಬಿಸಿಕೊಂಡ ಅಮ್ಮ ಸಾವಿತ್ರಿ.
"ನೂರ್ಕಾಲ ಸುಖವಾಗಿ ಬಾಳಲಿ ಈ ಜೋಡಿ" ಎಂದು ಮನದುಂಬಿ ಹರಸಿದರು.
"ಅಮ್ಮಾ.. " ಎನ್ನುತ್ತಾ ಒಳಬಂದ ಪಾವನಾ ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಾಗ ನವೀನ್ ತಾನೂ ಹಿಂಬಾಲಿಸಿದ. ಬಾಗಿ ನಮಸ್ಕರಿಸಿದವನಿಗೆ ಕಟಿ ತನ್ನ ಇರುವಿಕೆ ತಿಳಿಸಿತ್ತು. "ಇಬ್ರೂ ಸುಖವಾಗಿ ಬಾಳಿ" ಎಂದು ಮನದುಂಬಿ ಹರಸಿದರು ಅಮ್ಮ.
ನವೀನ್ ತಾನು ನಂಬಿದ ತನ್ನೂರಿನ ಕೋದಂಡರಾಮನ ಮಠಕ್ಕೆ ತೆರಳಬೇಕು ಎಂದು ಹೇಳಿದಾಗ ಎಲ್ಲರೂ ಸೇರಿ ಇಂದೇ ಹರಡೋಣವೆಂದು ದನಿಗೂಡಿಸಿದರು. ಕಾರಿನಲ್ಲಿ ಕುಟುಂಬ ಕರಾವಳಿಯತ್ತ ಪಯಣ ಬೆಳೆಸಿತು.
ಮುಂದುವರಿಯುವುದು....
✍️...ಅನಿತಾ ಜಿ.ಕೆ.ಭಟ್.
30-10-2020.
👏👏👏👏
ReplyDelete