Sunday, 12 January 2020

ನನಗೂ ಒಬ್ಳು ಗೆಳತಿ ಬೇಕು




   ನಮ್ಮ ಬದುಕಿನ ಯಾನದಲ್ಲಿ ಸ್ನೇಹವು ಮಹತ್ವದ ಸ್ಥಾನವನ್ನು ಪಡೆದಿದೆ.ಸ್ನೇಹವೆಂಬುದು ಮನುಷ್ಯ ಮನುಷ್ಯನನ್ನು ಬೆಸೆಯುವ ಸರಪಳಿ.ಇಲ್ಲಿ ಪ್ರೀತಿ,, ಮಮತೆ ,ಅನುಕಂಪ,ಸಹಾಯ, ಸಲಹೆ ಸೂಚನೆಗಳ ವಿನಿಮಯ ಅಡೆತಡೆಯಿಲ್ಲದೆ ಸಾಗುತ್ತದೆ.ಆತ್ಮವಿಶ್ವಾಸವನ್ನು ಹೆಚ್ಚಿಸಿ ಧೈರ್ಯದಿಂದ ಬದುಕನ್ನು ಎದುರಿಸಲು ಉತ್ತಮ ಸ್ನೇಹಿತರು ಬೇಕು.ಸ್ನೇಹವೆಂಬುದು ದಿನನಿತ್ಯವೂ ಬದಲಾಗುತ್ತಿರುವ ಬಾಂಧವ್ಯ.ಸಂದರ್ಭಕ್ಕೆ ತಕ್ಕಂತೆ ಪಾತ್ರಗಳು ಬದಲಾಗುತ್ತಾ ಹೋಗುತ್ತವೆ.ಆದರೆ ಅಂತರಾಳದ ಭಾವನೆಗಳನ್ನು ಅರ್ಥೈಸಿಕೊಳ್ಳುವ ಪರಿ ಬದಲಾಗದು.ಸ್ನೇಹ ಬಳಸಿದಷ್ಟು ಅಗಲ..ಆಳಕ್ಕಿಳಿದಷ್ಟೂ ವಿಶಾಲ... ಇಲ್ಲಿ ಪರಸ್ಪರ ಆಸಕ್ತಿಯ ವಿಷಯಗಳನ್ನು ಹಂಚಿಕೊಳ್ಳಲು ಚರ್ಚಿಸಲು ಯಾವುದೇ ಚೌಕಟ್ಟು ಇಲ್ಲ.. ನಮ್ಮತನವನ್ನು ಒಪ್ಪಿಕೊಂಡು ನಮ್ಮ ವಿಭಿನ್ನತೆಯನ್ನು  ಗೌರವಿಸುತ್ತಾ ನಮ್ಮ ದೌರ್ಬಲ್ಯದ ಅರಿವು ಮೂಡಿಸುವುದೇ ಉತ್ತಮವಾದ ಸ್ನೇಹಬಂಧನ..


    ಪ್ರತಿಹೆಣ್ಣಿಗೂ ಇಂತಹ ಒಬ್ಬ ಆಪ್ತ ಗೆಳತಿಯ ಅವಶ್ಯಕತೆಯಿದೆ.ನಾವೆಷ್ಟೋ ಕನಸುಗಳನ್ನು ಕಂಡಿರುತ್ತೇವೆ.ಕೆಲವು ಸಾಕಾರಗೊಂಡಿರಬಹುದು ಇನ್ನು ಕೆಲವು ಈ ಬದುಕಿನಲ್ಲಿ ಪೂರೈಸಲು ಸಾಧ್ಯವೇ ಇಲ್ಲ ಎನ್ನುವ ನಿರಾಸೆಯಿರಬಹುದು ಮತ್ತೆ ಹಲವು ವಿಷಯಗಳಲ್ಲಿ ನಾವು ಬಯಸಿದ್ದಕ್ಕಿಂತ ಅತಿಯಾದ್ದೇ ದೊರಕಿರಬಹುದು.. ಹೀಗೆ ನಮ್ಮ ನೋವು ನಲಿವನ್ನು ಹಂಚಿಕೊಳ್ಳಲು, ಅವರ ದನಿಗೆ ಕಿವಿಯಾಗಲು ಪರಸ್ಪರ ಸ್ನೇಹ ಸಂಬಂಧವೊಂದು ಚಿಗುರೊಡೆಯುತ್ತದೆ. ಬದುಕನ್ನು ಸಹನೀಯವಾಗಿಸುವ ,ಸಂತಸದ ಅಲೆಯೆಬ್ಬಿಸುವ ,ದೇಹಗಳು ಬೇರೆಯಾದರೂ ಮನಸು ಆಸಕ್ತಿ ಒಂದೇ ಇರುವಂತಹ ಸ್ನೇಹಸಂಗಕ್ಕೆ ಬಾಳುವಿಕೆ ಹೆಚ್ಚು.


     "Wishing to be a friend is quick work,but friendship is a slow ripening fruit"---Aristotle.ಅಂದರೆ ಗೆಳೆಯ/ಗೆಳತಿ ಆಗುವುದು ಸುಲಭ ಆದರೆ ಗೆಳೆತನ ಎಂಬುದು ನಿಧಾನವಾಗಿ ಮಾಗುವ ಹಣ್ಣು ಎಂದಿದ್ದಾನೆ ಅರಿಸ್ಟಾಟಲ್.ನಮ್ಮ ಗೆಳತಿ ಯಾರು ಎಂದು ನಮಗರಿವಾಗುವುದು ನಮಗೆ ಕಷ್ಟ ಬಂದಾಗಲೇ ..ಮುಖವಾಡದ ,ಲಾಭಪಡೆವ ಹುನ್ನಾರದ ಗೆಳೆತನದ ಅರಿವಾಗಿ ಪರಿಶುದ್ಧ ಸ್ನೇಹವೆನ್ನುವ ಸೌರಭವು ವಜ್ರದಂತೆ ಹೊಳೆಯುತ್ತದೆ. ಷೇಕ್ಸ್ ಪಿಯರ್ ತನ್ನ ನಾಟಕವೊಂದರಲ್ಲಿ "ಒಮ್ಮೆ ಗೆಳೆತನದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಬಿಟ್ಟರೆ ಅವರನ್ನು ನಮ್ಮ ಆತ್ಮಕ್ಕೆ ಬಂಧಿಸಿಕೊಂಡು ಬಿಡಬೇಕು"ಎಂದಿದ್ದಾನೆ..

       ಹೆಣ್ಣಿಗೆ ಒಬ್ಬ ಉತ್ತಮ ಗೆಳತಿ  ಸಿಕ್ಕರೆ ಜಗತ್ತನ್ನೇ ಗೆಲ್ಲುವ ಧೈರ್ಯ ತುಂಬಿ ತನ್ನ ದಾರಿಯಲ್ಲಿ ವಿಶ್ವಾಸ ಮೂಡುತ್ತದೆ.ಗೆಳೆತನವು ಜವಾಬ್ದಾರಿಯನ್ನು ಬಯಸುತ್ತದೆ ಬರಿಯ ಅವಕಾಶವಾದಿತನವಲ್ಲ..ಪರಸ್ಪರ ಒಬ್ಬರಿಗೊಬ್ಬರು ಹೆಗಲುಕೊಡುವ ಸಾಂತ್ವನ ಹೇಳುವ ಸುಂದರ ಪರಿಭಾಷೆ ಮೂಡಿದಾಗ ಗೆಳೆತನಕ್ಕೊಂದು ಅರ್ಥಬರುವುದು..

        ನನ್ನ ಬಾಳಪಯಣದಲ್ಲೂ ಹಲವಾರು ಗೆಳತಿಯರು ಒಂದಲ್ಲಾ ಒಂದು ಸಂದರ್ಭದಲ್ಲಿ ಜೊತೆಯಾದರು..ಹಲವರ ಜೊತೆಗೆ ಈಗಲೂ ನಂಟು ಮುಂದುವರಿದಿದೆ..ನನ್ನ ಬರವಣಿಗೆಯ ಪಯಣದಲ್ಲಿ ನನ್ನ ಆಪ್ತಗೆಳತಿಯ ನೆರಳಿದೆ.'ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು'ಎಂಬ ಕವಿ ಚೆನ್ನವೀರ ಕಣವಿಯವರ ಕವನದ ಸಾಲಿನಂತೆ ನನಗೆ ತಣ್ಣೆಳಲನ್ನು ನೀಡಿದ ಗೆಳತಿ ಅಶ್ವಿನಿ..ನನ್ನ ತಂತ್ರಜ್ಜಾನದ ಅಜ್ಞಾನದಲ್ಲಿ ಅವಳು ತೋರಿದ ಬೆಳಕಿನ ಕಿರಣಗಳು ನನ್ನನ್ನು ಮುನ್ನಡೆಸಿವೆ.ನೋವಿನಲ್ಲಿ ಕಣ್ಣೀರೊರೆಸುವ, ನಲಿವಿನಲ್ಲಿ ನನ್ನೊಡನಿದ್ದು ಸಂಭ್ರಮಿಸುವ ಆಪ್ತಗೆಳತಿ...ನನ್ನ ದೌರ್ಬಲ್ಯಗಳು ನನಗಿಂತ ಚೆನ್ನಾಗಿ ಅವಳಿಗೇ ಅರಿವಾಗುವುದು...ಅವಳ ಮನದ ತಲ್ಲಣಗಳು ನನ್ನ ಹೃದಯವನ್ನು ತಟ್ಟಿ ಸಾಂತ್ವನದ ನುಡಿಗಳು ತಾನಾಗಿಯೇ ಹೊರಬಂದು ಧೈರ್ಯದಿಂದ ಬದುಕನ್ನು ಎದುರಿಸಲು ಅವಳಿಗೂ ಸಹಕಾರಿಯಾಗುತ್ತವೆ. ಬತ್ತಿ ತಾನುರಿದು ಜಗವನು ಬೆಳಗುವಂತೆ ನನ್ನ ಹಿಂದಿನ ಶಕ್ತಿಯಾಗಿ ನಿಂತು  ಮನ್ನಡೆಸುವ ಬಲು ಅಪರೂಪದ ಗೆಳತಿ...ಈ ಬಾಂಧವ್ಯದಲ್ಲಿ ಮುಚ್ಚುಮರೆಯಿಲ್ಲ..ಎಲ್ಲಿ ಭಾವನೆಗಳು ಇತರ ಕಿವಿಗಳಿಗೆ ರವಾನೆಯಾಗುತ್ತವೆಯೋ ಎಂಬ ಆತಂಕವಿಲ್ಲ...ಇಂತಹ ಆಪ್ತಗೆಳತಿ 2020 ರಲ್ಲಿ ಎಲ್ಲ ತಾಯಂದಿರಿಗೂ ಸಿಗಲಿ ಎಂಬುದೇ ನನ್ನ ಆಶಯ.



   ಜೀವನವನ್ನು ಪ್ರೀತಿಸಲು,ಬಂದ ಎಡರುತೊಡರುಗಳನ್ನು ಎದೆಗುಂದದೆ ಹಿಮ್ಮೆಟ್ಟಿಸಲು ಉತ್ತಮ ಗೆಳೆತನ ಹೆಣ್ಮಕ್ಕಳಿಗೆ ವರದಾನ. ರಾಮನಿಗೆ ಸುಗ್ರೀವನಿದ್ದಂತೆ , ಕೃಷ್ಣನಿಗೆ ಕುಚೇಲನಿದ್ದಂತೆ  ಪರಸ್ಪರ ಒಬ್ಬರಿಗೊಬ್ಬರು ಬೆನ್ನುತಟ್ಟಿಕೊಂಡು ಬಾಳಪಯಣದಲ್ಲಿ ಉತ್ಸಾಹದಿಂದ ಸಾಗಲು ಗೆಳತಿ ಒಬ್ಬ ಆಪ್ತಸಲಹೆಗಾರ್ತಿಯಿದ್ದಂತೆ ...

'ನಾನು ಈಗ ಪ್ರೀತಿಯಲ್ಲಿ ಬೀಳಬೇಕು...
ನನಗೂ ಒಬ್ಬ ಗೆಳೆಯ ಬೇಕು...'ಅನ್ನುವ ಹಾಡನ್ನು ಎಲ್ಲರೂ ಗುನುಗಿರ್ತೀರಾ...ಅದೇ ರೀತಿ ಇದನ್ನೂ ಗುನುಗೋಣವೇ...ನೀವೂ ದನಿ ಸೇರಿಸಿ...

ನನಗೂ ಒಬ್ಳು ಗೆಳತಿ ಬೇಕು
ನಾನು ಸ್ನೇಹದಲ್ಲಿ ಮೀಯಬೇಕು...||

ತಾಣದಲ್ಲಿ ಜೊತೆಯಾಗಿದ್ದು
ಅವಳ ಹೃದಯ ನಾನು ಗೆದ್ದು
ನಮ್ಮ ಒಂಟಿತನವ ಮರೆಯಬೇಕು...||೧||

ನನ್ನ ಮಾತನೆಲ್ಲ ಕೇಳಿ
ಹೃದಯದಲ್ಲಿ ಜಾಗಕೊಟ್ಟು
ಜೋಪಾನ ಮಾಡಬೇಕು...||೨||

ನನಗೂ ಒಬ್ಳು ಗೆಳತಿ ಬೇಕು
ನಾನು ಸ್ನೇಹದಲ್ಲಿ ಮೀಯಬೇಕು...||

ಚಿಂತೆಯಿಂದ ಬಳಲುವಾಗ
ಅವಳ ಮನಸ ಅರಿತು ನಾನು
ಸಾಂತ್ವನ ಹೇಳಬೇಕು...||೩||

ದಾರಿ ತಪ್ಪಿ ನಡೆಯುವಾಗ
ಜಾರಿ ಮೋಸಕೆ ಸಿಲುಕಿದಾಗ
ನನ್ನ ತಿದ್ದಿಬುದ್ಧಿ ಹೇಳಬೇಕು...||೪||

ನನಗೂ ಒಬ್ಳು ಗೆಳತಿ ಬೇಕು
ನಾನು ಸ್ನೇಹದಲ್ಲಿ ಮೀಯಬೇಕು...||

ಹೊತ್ತು ಗೊತ್ತು ಯಾವ್ದೂ ನೋಡ್ದೇ
ಅವಳು ಬಯಸಿದಾಗಲೆಲ್ಲ
ಸ್ನೇಹಬಂಧ ಬೆಸೆಯಬೇಕು...||೫||

ಮಾತಿನಲ್ಲೆ ನಕ್ಕುನಲಿದು
ಭಾವದಲ್ಲಿ ಸಿಹಿಯ ಸವಿದು
ಹಾಲುಜೇನಂತೆ ಬೆರೆಯಬೇಕು...||೬||

ನನಗೂ ಒಬ್ಳು ಗೆಳತಿ ಬೇಕು
ನಾನು ಸ್ನೇಹದಲ್ಲಿ ಮೀಯಬೇಕು...||
 


  ಗೆಳತಿ ...ಪ್ರತೀ ಹೆಣ್ಣಿನ ಶಕ್ತಿ...ಗೆಳತಿಯಲ್ಲಿ ತಾಯಿಯ ಅಂತಃಕರಣವಿದೆ ,ತಂದೆಯ ಕರ್ತವ್ಯಪ್ರಜ್ಞೆಯಿದೆ,ಮುಗ್ಧಮನಸಿದೆ,ನೋವನ್ನು ಮರೆಸಿ ಮರೆತ ನಗುವನ್ನು ಮತ್ತೆ ಮೂಡಿಸುವ ಚಾಕಚಕ್ಯತೆಯಿದೆ , ನಿನ್ನ ಆಂತರ್ಯದ ದನಿಗೆ ಕಿವಿಯಾಗುತ್ತೇನೆ ಎಂಬ ಭರವಸೆಯಿದೆ... ಇಂತಹ  ಸದಾ ಸ್ಪಂದಸುವ ಗೆಳತಿ ಮೊದಲು ನಾವಾಗಬೇಕು...ಆಗ ನಮಗೂ ಅಂತಹದೇ ಗೆಳತಿಯ ಇರುವಿಕೆಯ ಅರಿವಾಗುವುದು...


   

✍️... ಅನಿತಾ ಜಿ.ಕೆ.ಭಟ್.
08-01-2020.
Momspresso Kannada ದ ಬ್ಲಾಗಿಂಗ್ ಸ್ಪರ್ಧೆಗೆ ಬರೆದ ಬರಹ..

2 comments: