Friday, 3 January 2020

ಪ್ರೇಮದ ದಾರ





       "ಲೋ... ಪವನ್...ಏಳೋ.. ಎದ್ದೇಳು ಮರಿ... ಏಳು ಗಂಟೆ ಆಯ್ತು ನೋಡು.. ಶಾಲೆಗೆ ತಡವಾಗುತ್ತಿದೆ..."ಎಂದು ಅಜ್ಜ ಸೋಮಪ್ಪ ಮೊಮ್ಮಗನನ್ನು ಎಬ್ಬಿಸಲು ಪ್ರಯತ್ನಿಸಿದ.ರಾತ್ರಿ ತಡವಾಗಿ ಮಲಗಿದ ಪವನ್ ಗೆ ಇನ್ನೂ ಕಣ್ಣಿಂದ ನಿದ್ದೆ ಬಿಟ್ಟಿಲ್ಲ..ಒಳಗಿಂದ ಸೊಸೆ ಗಡಿಬಿಡಿಯಲ್ಲಿ ಅಡುಗೆ ಮಾಡುತ್ತಿದ್ದವಳು ಸೀದಾ ಮಗನ ಸಮೀಪಕ್ಕೆ ಬಂದು "ಏಳಕಾಗಲ್ವಾ.. ಪವನ್..ಇತ್ತೀಚೆಗೆ ಸೋಮಾರಿಯಾಗಿಬಿಟ್ಟಿದ್ದೀಯಾ..."ಎಂದು ಗದರಲು ಆರಂಭಿಸಿದಳು.. "ಪ್ಲೀಸ್... ಫೈವ್ ಮಿನಿಟ್ಸ್ ಮಮ್ಮೀ..."ಎನ್ನುತ್ತಾ ಮತ್ತೆ ಮುಸುಕು ಹೊದ್ದು ಮಲಗಿದ..

"ಇರು.. ನಿನಗೆ  ಸ್ಕೂಲ್ ಬಸ್ ಮಿಸ್ ಆಗಿ ಸ್ಕೂಲ್ ಗೆ ಲೇಟಾಗಿ ಮಿಸ್ ನಿಂದ ವಾರ್ನಿಂಗ್ ಬಂದರೇನೇ ಸರಿಯಾಗೋದು.. ಮಲ್ಕೋ..ಮಲ್ಕೋ..."ಎನ್ನುತ್ತಾ ಅಡುಗೆಮನೆಗೆ ತೆರಳಿ ಸೌಟನ್ನೊಮ್ಮೆ ಕುಕ್ಕಿದಳು.

      ಸೋಮಪ್ಪ ಮೆಲ್ಲನೆ ಮೊಮ್ಮಗನ ಹೊದಿಕೆ ತೆಗೆದು ಪವನ್ ನನ್ನು ಮಾತಿಗೆಳೆದರು.ಅದೂ ಇದೂ ಹಳೆಯ ಬಾಳಿನ ಪುಟಗಳನ್ನು ಮೊಮ್ಮಗನೆದುರು ತೆರೆದದ್ದೇ ಸರಿ..ದಿಗ್ಗನೆದ್ದು ಕುಳಿತ ಪವನ್...ಅಜ್ಜನ ಬದುಕಿನ ಕಥೆಗಳನ್ನು ಕಣ್ಣುಬಾಯಿಯಗಲಿಸಿ ಕೇಳುತ್ತಿದ್ದ ಪವನ್ ನನ್ನು ಅಮ್ಮ "ಹೋಗು ಫ್ರೆಶ್ ಆಗಿ ಬಾ..ಲೇಟಾಗುತ್ತೆ.." ಎಂದು ಪುನಃ ದಬಾಯಿಸಿದರು..ಅಜ್ಜನ ಮಾತುಗಳನ್ನು ಕೇಳುವ ಕುತೂಹಲವಿದ್ದರೂ ಅಮ್ಮನ ಆಣತಿಯನ್ನು ಪಾಲಿಸದಿದ್ದರೆ ಮಿಸ್ ನಿಂದ ಬೈಗುಳ ತಪ್ಪಿದ್ದಲ್ಲ ಎಂದು ಸಣ್ಣ ಮುಖ ಮಾಡಿಕೊಂಡು ಹೊರಟ ಪವನ್..


    ಪವನ್ ಫ್ರೆಶ್ ಆಗಿ ಬಂದಾಗ ತಿಂಡಿ ಮಾಡಿ ಬಟ್ಟಲಿಗೆ ಬಡಿಸಿದ್ದ ಸೊಸೆ "ಇನ್ನು ಪುನಃ ಅಜ್ಜನ ಬಳಿ ಕಥೆಕೇಳಲು ಹೋಗಬೇಡ..ಬೇಗ ತಿಂಡಿ ತಿಂದು ಹೊರಡು..ಹೋಗುವ ದಾರಿಯಲ್ಲಿ ಅಜ್ಜನಿಂದ ಕಥೆ ಹೇಳಿಸಿಕೋ.."ಎಂದರು..

     ಸೊಸೆಯ ಮಾತನ್ನು ಕೇಳಿಸಿಕೊಂಡ ಸೋಮಪ್ಪ ಒಳಗೊಳಗೆ ಮೊಮ್ಮಗನ ಒತ್ತಡದ ಜೀವನವನ್ನು ಕಂಡು ನೊಂದರು.ಪುಟ್ಟ ಮಗು.ಈಗಲೇ ಮಣಭಾರದ ಬ್ಯಾಗ್, ಪುಸ್ತಕ ಹೇರಿಕೊಂಡು ನಡೆಯಬೇಕು.ಅವನಿಗಾದರೂ ಪುಸ್ತಕದ ಕಥೆಗಿಂತ ನನ್ನ ಬದುಕಿನ ಅನುಭವದ ಕಥನಗಳೇ ಇಷ್ಟ.. ಅದನ್ನು ಕೇಳುತ್ತಾ ಕುಳಿತರೆ ಸೊಸೆಗೂ ಸಿಟ್ಟು..ಅಗತ್ಯದ ಹೋಂ ವರ್ಕ್ ಮಾಡೋದಕ್ಕೇ , ಶಾಲೆಗೆ ಹೊರಡೋದಕ್ಕೆ ಟೈಮಿಲ್ಲ..ಇನ್ನೂ ಆ ಹಳೆಯ ಗೋಳೆಲ್ಲ ಯಾಕೆ.. ಅದನ್ನೆಲ್ಲ ಗಂಟುಮೂಟೆ ಕಟ್ಟಿ ಹೊರಗೆ ಬಿಸಾಕಿ ಎಂದು ಯಾವತ್ತೋ ಆಜ್ಞಾಪಿಸಿದ್ದಾಗಿದೆ ...ಪಾಪ..!!ಅವಳದ್ದಾದರೂ ಏನು ತಪ್ಪು..ಈಗಿನ ಕಾಲದ ಎಲ್ಲಾ ಪೋಷಕರಂತೆ ಅವಳೂ ತನ್ನ ಮಗ ಚೆನ್ನಾಗಿ ಕಲಿತು ಜಾಣನಾಗಬೇಕು..ಉನ್ನತ ವ್ಯಾಸಂಗ ಮಾಡಬೇಕು ಎಂದು ಬಯಸಿದರೆ ತಪ್ಪಲ್ಲವಲ್ಲ.. ನಾವೂ ಯೌವ್ವನದಲ್ಲಿ ಮಕ್ಕಳಿಂದ ಬಯಸಿದ್ದು ಅದೇ ತಾನೇ.. ಎಂದುಕೊಂಡು ಮೊಮ್ಮಗನ ಸ್ಕೂಲ್ ಬ್ಯಾಗ್ ಮತ್ತು ಟಿಫಿನ್ ಬ್ಯಾಗ್ ಹೊರಗಿಟ್ಟರು.. ಪವನ್ ತಿಂಡಿಯನ್ನು ಅರ್ಧದಲ್ಲೇ ಸಾಕು.. ಎಂದು ಬಿಟ್ಟೇಳುವುದರಲ್ಲಿದ್ದ.." ಏನು ಪವನ್ ಹೊಟ್ಟೆ ಸರಿ ತುಂಬಿಸಿಕೊಳ್ಳಲ್ಲ "ಎನ್ನುತ್ತಾ  ಸೊಸೆ ಬಾಯಿಗೆ ತುರುಕಿದಳು..ನಮ್ಮ ಕಾಲದಲ್ಲಿ ನಾವು ಅಮ್ಮ ತಟ್ಟೆ ಯಾವಾಗ ಹಾಕ್ತಾಳೆ ಅಂತ ಕಾಯ್ತಿದ್ದರೆ..ಈಗಿನ ಮಕ್ಕಳಿಗೆ ಕಣ್ಣೆದುರು ಮೃಷ್ಟಾನ್ನ ಭೋಜನ ಇದ್ದರೂ ಬೇಡ..ಹಸಿವೆನೂ ಗೊತ್ತಾಗಲ್ಲ.. ಎಂದು ಗೊಣಗಿಕೊಂಡರು ಸೋಮಪ್ಪ..

     ಯುನಿಫಾರ್ಮ್ ಹಾಕಿ ತಯಾರಾಗಿ ಬಂದ ಮೊಮ್ಮಗನನ್ನು ಕರೆದುಕೊಂಡು ಅವನ ಚೀಲವನ್ನು ತನ್ನ ಹೆಗಲಮೇಲೆ ಹೊತ್ತು, ಬುತ್ತಿ ಚೀಲ ಕೈಯಲ್ಲಿ ಹಿಡಿದು ಇನ್ನೊಂದು ಕೈಯಲ್ಲಿ ಮೊಮ್ಮಗನ ಪುಟ್ಟ ಕೈಯನ್ನು ಹಿಡಿದುಕೊಂಡು ಮನೆಯಿಂದ ಹೊರನಡೆದರು.. ಸೊಸೆ .."ಬಾಯ್ ಪವನ್.. "ಎಂದು ಹೇಳಲು ಮರೆಯಲಿಲ್ಲ..ಹತ್ತು ನಿಮಿಷ ನಡೆದು ಮುಖ್ಯ ರಸ್ತೆ ತಲುಪಿ ಕಾನ್ವೆಂಟ್ ಶಾಲೆಯ ಬಸ್ ಬಂದಾಗ ಮೊಮ್ಮಗನನ್ನು ಹತ್ತಿಸಿ..
"ಬಾಯ್..."ಎಂದು ಕೈಬೀಸುವುದು ಸೋಮಪ್ಪನ ದಿನಚರಿ..ದಾರಿ ಮಧ್ಯೆ ಅಜ್ಜನ ಅನುಭವ ಕಥನ ಕೇಳಲು ಪವನ್ ಕಾತರನಾಗಿರುತ್ತಿದ್ದ...ಅಜ್ಜ.. ನೀನ್ಯಾಕೆ ನನ್ನಷ್ಟು ಬೆಳ್ಳಗಿಲ್ಲ..ಅಜ್ಜ..ನಿನ್ನ ಕೈಗಳೇಕೆ ದೊರಗಾಗಿವೆ...ಅಜ್ಜ.. ನೇಯ್ಗೆ ಮಾಡಿ ಕೈನೋವು ಬರ್ತಿರಲಿಲ್ವಾ.....ಅಜ್ಜಾ ನಿನ್ನ  ಕೂದ್ಲು ಯಾಕೆ ಬೆಳ್ಳಗಾಗಿದೆ...ಅಜ್ಜಾ..ನೀನೀಗ ಮುದುಕನಾ...ಎಂದು ಆಗಾಗ ಮಧ್ಯೆ ಪ್ರಶ್ನೆ ಕೇಳಿ ಅಜ್ಜ ಉತ್ತರ ಹೇಳಿದಾಗ ಸಮಾಧಾನದಿಂದ ಹೂಂ ಗುಟ್ಟುತ್ತಿದ್ದ..


       ಮೊಮ್ಮಗನನ್ನು ಕಳುಹಿಸಿಕೊಟ್ಟು ಬಂದು ಉಪಾಹಾರ ಸೇವಿಸಿದಾಗ ಮಗಸೊಸೆ ರೊಯ್ಯನೆ ಬೈಕಿನಲ್ಲಿ ಉದ್ಯೋಗಕ್ಕೆ ತೆರಳಿ ಯಾಗಿರುತ್ತದೆ.. ಆಮೇಲೆ ಉಳಿಯುವುದು ಸೋಮಪ್ಪ ಮತ್ತು ಮಡದಿ ಗಂಗಮ್ಮ ಮಾತ್ರ..ಗಂಗಮ್ಮನಾದರೂ ಅಲ್ಲಿ ನೋವು...ಇಲ್ಲಿ ನೋವು ಎನ್ನುತ್ತಾ ಬಾಕಿ ಉಳಿದಿದ್ದ ಮನೆಕೆಲಸಗಳತ್ತ ಗಮನಹರಿಸುತ್ತಾಳೆ.ಸೋಮಪ್ಪನಿಗೆ ಸಮಯ ಕಳೆಯಲು ಕಷ್ಟ..ಮೊಮ್ಮಗ ಪುನಃ ಬರುವುದು ಮೂರು ಗಂಟೆಗೆ .ಅಲ್ಲಿ ತನಕ ಅಜ್ಜನಿಗೆ ಅಜ್ಜಿಯೇ ದೋಸ್ತಿ ಎಂದು ಪವನ್ ಹೇಳಿ ಛೇಡಿಸುತ್ತಿದ್ದುದೂ ಇದೆ..


      ಬಾಲ್ಯದಿಂದಲೇ ಕೈಮಗ್ಗದಲ್ಲಿ ದುಡಿದ ಸೋಮಪ್ಪ ಅದರಿಂದಲೇ ಬದುಕು ಕಟ್ಟಿಕೊಂಡವರು.ಶಾಲೆಗೆ ಹೋಗುವ ವಯಸ್ಸಿಗೆ ತಂದೆಯ ಜೊತೆಗೆ ನೇಯ್ಗೆ ಕಾಯಕಕ್ಕೆ ಸಹಕರಿಸುತ್ತಾ ಅದನ್ನೇ ಮುಂದುವರಿಸಿದರು.ನೇಯುತ್ತಾ ನೇಯುತ್ತಾ ಕೈಗಳು ಗುಳ್ಳೆ ಬಂದು ಗುಳ್ಳೆಯೊಡೆದು ಹುಣ್ಣುಗಳಾದ್ದೂ ಇದೆ.ಕೈಯ ಗಾಯಗಳಿಗೆ ಅಮ್ಮ ಪ್ರೀತಿಯಿಂದ ತೈಲ ಹಚ್ಚುತ್ತಿದ್ದಳು.ಗಂಗಮ್ಮ ಬಂದ ಮೇಲಂತೂ ಆಕೆ ಅನುರಾಗ ತುಂಬಿ ಕೈಗಳಿಗೆ ತೈಲ ಸವರುತ್ತಿದ್ದರೆ ಬದುಕಿನ ಬವಣೆಗಳೆಲ್ಲ ತಂಪಾಗುತ್ತಿದ್ದವು.ಆಕೆಯ ಮಡಿಲಲ್ಲಿ ಮಲಗಿ ಸುಖ ನಿದ್ರೆಗೆ ಜಾರುತ್ತಿತ್ತು ದುಡಿದು ದಣಿದ ದೇಹ.. ಹಣದಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತಿಕೆಯಿತ್ತು ..ಸಾಂಗತ್ಯದಲ್ಲಿ ಮುದವಿತ್ತು...ಮೈ ಕೈ ನೋವಿಲ್ಲದಿದ್ದರೂ ಇರುವಂತೆ ನಟಿಸಿ ಆಕೆಯಿಂದ ತೈಲ ಪೂಸಿಕೊಳ್ಳುವುದು ಆಪ್ಯಾಯಮಾನವಾಗಿತ್ತು. ಹುಣ್ಣಿಮೆಯ ಚಂದಿರ ಕೂಡ ಒಬ್ಬರಲ್ಲೊಬ್ಬರು ಬೆರೆತು ಹೋಗುವುದನ್ನು ನೋಡಿ ಮುಸಿಮುಸಿ ನಕ್ಕಿರಬೇಕು.

       ಬದುಕು ಏರುಪೇರುಗಳನ್ನು ಅನುಭವಿಸುತ್ತಿದ್ದಾಗ ಮಗನಿಗೆ ಶಿಕ್ಷಣ ಅಗತ್ಯವೆಂದು ಮನಗಂಡು ಶಿಕ್ಷಣ ಕೊಡಿಸಿದರು.ಹೊಟ್ಟೆಹೊರೆಯಲು ಒಂದು ಉದ್ಯೋಗ ದೊರೆಯುವಷ್ಟು ವಿದ್ಯೆ ಇರಲಿ ಎಂದು ಸೋಮಪ್ಪನ ಯೋಜನೆ..ಮಗ ಅಪ್ಪನ ನಿರೀಕ್ಷೆಯನ್ನು ಹುಸಿಗೊಳಿಸದೆ ಪುಟ್ಟ ಉದ್ಯೋಗವನ್ನು ಗಿಟ್ಟಿಸಿಕೊಂಡ.. ಮಗನಿಗೆ ಯೋಗ್ಯ ವಧುವನ್ನರಸಿ ವಿವಾಹವನ್ನು ಮಾಡಿದರು ಸೋಮಪ್ಪ ದಂಪತಿ...ವರುಷದೊಳಗೆ ಮುದ್ದಾದ ಮೊಮ್ಮಗ ಬಂದು ಸೋಮಪ್ಪನಿಗೆ ಅಜ್ಜನ ಸ್ಥಾನ ತಂದುಕೊಟ್ಟಿದ್ದ.


     ಆಗ ಕೈಮಗ್ಗದ ಜಾಗವನ್ನು ಟೆಕ್ಸ್ಟೈಲ್ ಕಂಪೆನಿಗಳು ಆಕ್ರಮಿಸಿಕೊಳ್ಳಲು ಆರಂಭವಾಗಿತ್ತು..ಕೈಮಗ್ಗದ ಸೀರೆ ಉಡುವಲ್ಲಿ ಪಾಲಿಸ್ಟರ್ ನೈಲಾನ್ ಸೀರೆಗಳು ಬಂದುವು... ಸೀರೆಯ ಜಾಗವನ್ನು ನಿಧಾನವಾಗಿ ಚೂಡಿದಾರ್, ಪ್ಯಾಂಟ್ ,ಶರ್ಟ್, ಕುರ್ತಾಗಳು ಆಕ್ರಮಿಸಿಕೊಂಡವು.. ನಿಧಾನವಾಗಿ ಕೈಮಗ್ಗದ ಉದ್ಯಮವನ್ನು ಮುಚ್ಚಬೇಕಾಗಿ ಬಂತು.ದಿನವೂ ದುಡಿಯುತ್ತಿದ್ದ ಸೋಮಪ್ಪನಿಗೆ ಸುಮ್ಮನಿರಲು ಸ್ವಾಭಿಮಾನದ ಮನಸ್ಸು ಒಪ್ಪಲಿಲ್ಲ..


     ಅಂದು ಮಡದಿ ಸಂಭ್ರಮದಿ ಉಟ್ಟುಕೊಳ್ಳುತ್ತಿದ್ದ ಮಗ್ಗದ ಸೀರೆಗಳು ಒಂದೊಂದು ಕೂಡ ರಸಭರಿತ ಕಥೆಗಳನ್ನು ಹೇಳುತ್ತಿದ್ದವು.ನೈಲಾನ್ ಸೀರೆಯುಟ್ಟು ಬಳುಕುವ ಬಳ್ಳಿಯಂತೆ ಓಲಾಡುತ್ತಾ ಮಡದಿ ಬಂದರೆ ಕಚಗುಳಿಯಿಟ್ಟ ... ಅವಳು ನಾಚಿ ನೀರಾಗಿ ದೂರಸರಿದ ...ಮತ್ತೆ ಮೆಲ್ಲನೆ ಹತ್ತಿರಕ್ಕೆಳೆದು ಲಲ್ಲೆಗರೆದ ಸವಿನೆನಪುಗಳು... ಈ ಕೈಗಳು ಈಗ ಕೆಲಸವಿಲ್ಲದೆ ಸುಮ್ಮನೆ ಕೂರಲು ಸಿದ್ಧವಿಲ್ಲ...

    ಮಾಸಿದ ಸೀರೆಗಳನ್ನು ತಂದ ಸೋಮಪ್ಪ.. ಅವುಗಳನ್ನು ಎಳೆಗಳನ್ನಾಗಿ ಮಾಡಿದ..ಪ್ರತಿಯೊಂದು ಎಳೆಯೂ ಬಾಳಿನ ಪ್ರೀತಿ,ಪ್ರೇಮದ,ಬೆವರಿನ ದುಡಿಮೆಯ ಸಾರುವ ಎಳೆಯಾಗಿತ್ತು.. ಎಲ್ಲವನ್ನೂ ಸೇರಿಸಿ ತನ್ನ ಕಾಲುಗಳಿಗೆ ಸುತ್ತಿ ಕೈಗಳಿಂದ ಬಳ್ಳಿ ಹೊಸೆಯುತ್ತಿದ್ದನು.ಅದನ್ನೇ ಕಾಯಕ ಮಾಡಿ ನಾಲ್ಕು ಕಾಸು ಸಂಪಾದಿಸಿ ಸ್ವಾವಲಂಬಿಯಾಗಿ ಬದುಕಬೇಕೆಂದು ಸೋಮಪ್ಪನ ಬಯಕೆ.

      ಮನೆಕೆಲಸ ಮಾಡುತ್ತಾ ಗಂಡನನ್ನು ಉಪಚರಿಸುತ್ತಿದ್ದ ಗಂಗಮ್ಮನನ್ನು ಕಂಡು.." ಆಗಿನ ಅನುರಾಗವೇ ಬೇರೆ.. ಅದು ಈಗ ರೂಪಾಂತರವಾಗಿ ಮಾಗಿ ಮಮತೆ, ಕಾಳಜಿಯಾಗಿ ಮಗನನ್ನು ಆದರಿಸುವ ತೆರದಿ ಬದಲಾಗಿದೆ.ಮಾಸಿದ ಸೀರೆ ರೂಪಾಂತರಗೊಂಡು ಪ್ರೀತಿಯನ್ನು ತನ್ನೊಳಗೆ ತುಂಬಿಕೊಂಡು ಇನ್ನೊಮ್ಮೆ  ವಿಶ್ವಾಸದಿಂದ ಬಂಧಿಸುವ ನೇಯ್ಗೆಯಾಗಿದೆ... ಹಗ್ಗವಾಗಿದೆ.."ಎಂದು ಮನದಲ್ಲೇ ಅಂದುಕೊಂಡು ನಿಟ್ಟುಸಿರು ಬಿಟ್ಟನು.


      ಹಗ್ಗ ಹೊಸೆಯುತ್ತಿದ್ದ ಸೋಮಪ್ಪನನ್ನು ಕರೆದ ಗಂಗಮ್ಮ "ರೀ.. ಒಂದು ಗಂಟೆ ಆಯ್ತು.. ಊಟಕ್ಕೆ..ಬನ್ನಿ.."ಎಂದು ಕರೆದಾಗ ಸೋಮಪ್ಪ ನೆನಪಿನ ಸುಳಿಯಿಂದ ಹೊರಗೆ ಬಂದನು.ಮಡದಿಯ ಕೈರುಚಿಯ ಅಡುಗೆಯನ್ನು ಹಿತವಾಗಿ ಸವಿದು ಸಣ್ಣದಾಗಿ ನಿದ್ದೆ ಮಾಡಿದ.. ಎಚ್ಚರವಾದಾಗ ಮೊಮ್ಮಗ ಬರುವ ಸಮಯವಾಯಿತು..ಗಡಿಬಿಡಿಯಿಂದ ರಸ್ತೆಗೆ ಧಾವಿಸಿದ..

      ಮೊಮ್ಮಗನನ್ನು ಕರೆತಂದಾಗ ತಿಂಡಿಮಾಡಿಟ್ಟಿದ್ದ ಗಂಗಮ್ಮ ಮೊಮ್ಮಗನಿಗೆ ನೀಡಿದಳು.." ಅಜ್ಜಿ .. ನಂಗೆ ಹಸಿವಿಲ್ಲ.. ಸ್ವಲ್ಪ ಆಡಿಬರುವೆ.."ಎಂದು ಓಡುತ್ತಿದ್ದವನನ್ನು ತಡೆದು .."ಎರಡು ತುತ್ತು ತಿನ್ನೋ.." ಎನ್ನುತ್ತಾ ಸೋಮಪ್ಪನೂ ಬಂದು ಹತ್ತಿರ ಕುಳಿತರು..

      ಆಗಲೇ ಟ್ಯೂಷನ್ ಗೆ ಹೋಗುವ ಸಮಯವಾಗಿತ್ತು..ಮನಸಿಲ್ಲದ ಮನಸಿನಿಂದ ಹೊರಟ ಪವನ್ ದಾರಿಯಲ್ಲಿ "ಅಜ್ಜಾ..ನಾನೂ ನಿನ್ನಂತೆಯೇ ಹಾಯಾಗಿ ಇರುವುದು ಯಾವಾಗ.."ಎಂದು ಕೇಳಿದಾಗ ಅಜ್ಜ ನಗುತ್ತಲೇ ಅವನಿಗೆ ಕಾರ್ಯತತ್ಪರತೆಯ ಅಗತ್ಯವನ್ನು ತಿಳಿಹೇಳಿ ಟ್ಯೂಷನ್ ಗೆ ಬಿಟ್ಟು ಬಂದರು.. ರಾತ್ರಿ ಅಪ್ಪ ಅಮ್ಮನ ಜೊತೆ ಮನೆಗೆ ಬಂದ ಪವನ್ "ಅಜ್ಜಾ... ನೀನು ಆಗ ಏನೋ ನೇಯುತ್ತಿ ಅಂದೆಯಲ್ಲ..ಏನದು..ನಂಗೂ ತೋರಿಸು.." ಎಂದ ಪವನ್ ನನ್ನು ಕರೆದು ಹಗ್ಗವನ್ನು ತೋರಿಸುತ್ತಾನೆ..ಪುಟ್ಟ ಕೈಗಳಿಂದ ಮೆದುವಾಗಿ ದಾರವನ್ನು ಸವರಿ.."ಅಜ್ಜಾ.. ತುಂಬಾ ಚೆನ್ನಾಗಿದೆ... ಇದರಲ್ಲಿ ನಂಗೆ ಜೋಕಾಲಿ ಕಟ್ಟಿಕೊಡು.." ಎಂದು ದುಂಬಾಲು ಬಿದ್ದ..ಮೊಮ್ಮಗನ ಜೊತೆ ಸೇರಿ ಹಗ್ಗವನ್ನು ಮೇಲ್ಛಾವಣಿಗೆ ನೇತು ಹಾಕಿ ಮರದ ಸಣ್ಣ ಹಲಗೆಯನ್ನು ಹಗ್ಗದ ಮೇಲಿಟ್ಟು ಜಾರದಂತೆ ಬಿಗಿಯಾಗಿ ಬಂಧಿಸಿದ..ಜೋಕಾಲಿ ಸಿದ್ಧವಾಯಿತು.. ಮೊಮ್ಮಗನನ್ನು ಎತ್ತಿ ಕೂರಿಸಿದ ಸೋಮಪ್ಪ ಜೋಕಾಲಿ ಜೀಕಿದ... "ಅಜ್ಜಾ.. ಇನ್ನೂ ಫಾಸ್ಟ್... ಇನ್ನೂ.."ಎನ್ನುತ್ತಾ ಕೇಕೆ ಹಾಕಿ ನಗುತ್ತಿದ್ದರೆ ಔದ್ಯೋಗಿಕ ಒತ್ತಡದಿಂದ ನಗುವನ್ನೇ ಮರೆತಿದ್ದ ಮಗಸೊಸೆ ಇಬ್ಬರೂ ಸಂತಸದಿಂದ ತಾವೂ ಜೊತೆಯಾದರು..ತನ್ನ ಹಳೆಯ ಸೀರೆ ಹೊಸ ಜೋಕಾಲಿಯಾಗಿ ಮನೆಯಿಡೀ ನಗುವಿನ ಹೊನಲನ್ನು ಹರಿಸಿದ್ದನ್ನು ಕಂಡು ಗಂಗಮ್ಮ  ತನ್ನ ಬೊಚ್ಚುಬಾಯಗಲಿಸಿ ಮನದುಂಬಿ ನಕ್ಕರು..


    ಜೋಕಾಲಿಯಾಡಿ ಅಜ್ಜ ಮೊಮ್ಮಗ ಇಬ್ಬರೂ ಸುಸ್ತಾದಾಗ ಊಟದ ಹೊತ್ತಾಗಿತ್ತು.. ಎಲ್ಲರೂ ಜೊತೆಯಾಗಿ ಉಣ್ಣುವಾಗ ಇಂದು ಎಂದಿನಿಂದ ಹೆಚ್ಚು ಆತ್ಮೀಯತೆಯಿತ್ತು ..ಆಪ್ತತೆಯಿತ್ತು.. ಊಟಮಾಡಿ ಮಲಗಲು ತೆರಳುವಾಗ "..ಅಜ್ಜ..ಬನ್ನಿ ಅಜ್ಜಾ... ನಂಗೆ ಹಾಡು ಹೇಳಿ ಮಲಗಿಸಿ.."ಎಂದು ಪವನ್ ಕೈಹಿಡಿದು ಎಳೆದುಕೊಂಡು ಹೋದನು.. ಮೊಮ್ಮಗನನ್ನು ಮಲಗಿಸಿಕೊಂಡು ಸೋಮಪ್ಪ ಮಗುವಿನ ಬೆನ್ನ ಮೇಲೆ ಕೈಯಾಡಿಸಿ ಸವರುತ್ತಾ...


ನಗ್ನಗ್ತಾ_ದುಡಿಯೋನ_ಶಿವಮೆಚ್ತಾನೆ


ಯಾರೂನೂ ಮನಸಿಂದ ಮುದುಕರಲ್ಲ
ಒಂದ್ ರೋಗ ಬರ್ತದೆ ಒಂದ್ ಕಾಯ್ಲೆ ಹೋಯ್ತದೆ
ನೋವಲ್ಲೂ ನಡೆಯೋನು ಮನುಜ ತಾನೇ
ನಗ್ನಗ್ತಾ ದುಡಿಯೋನ ಶಿವ ಮೆಚ್ತಾನೆ...||೧||


ಯಾರೂನೂ  ವಯಸಿಂದ ಪಾರಾಗಲ್ಲ
ಕಾಲ್ನೋವು ಬರ್ತಾದೆ ಕೈ ಉಳುಕಿ ಹೋಯ್ತದೆ
ಸಂಸಾರವ ಉಣಿಸೋನು ಯಜಮಾನನೇ
ಸೋಂಬೇರಿ ಯುವಕರನೂ ಮೀರಿಸ್ತಾನೇ...||೨||


ಯಾರೀಗೂ ಬಿಳಿಕೂದ್ಲು ತಪ್ಪೋದಿಲ್ಲ
ಕೂದ್ಲುದುರಿ ಹೋಯ್ತಾದೆ ಬಿಳಿಯಂಗಿ ಕರಿಯಾಯ್ತದೆ
ಚಿಂತಿಸದೆ ಗುರಿ ತಲುಪೋನು ನಾಯಕನೇ
ರಂಗಿನ ದಾರವ ಹೊಸೆಯೋದು ಹೊಟ್ಟೆಗೇನೇ...||೩||




ಯಾರೂನೂ ಮಕ್ಳತ್ರ ಕೈಯೊಡ್ಡಲ್ಲ
ಮಕ್ಳೂನೂ ದುಡೀತಾವ್ರೆ ದುಡ್ಡಲ್ಲೆ ಮೆರೀತಾವ್ರೆ
ಬೆವರ್ಸುರಿಸಿ ದುಡಿಯೋನು ಸ್ವಾಭಿಮಾನಿನೇ
ಬಾಳತಿರುವಲ್ಲೂ ಸೋಲ್ದೇನೆ ದಡಸೇರ್ತಾನೆ...||೪||


ಯಾರೂನೂ ಶಿವನಾಟವ ಬಲ್ಲೋರಿಲ್ಲ
ಎಲ್ಲೋ ಹುಟ್ಟಿಸ್ತಾನೆ ಇನ್ನೆಲ್ಲೋ ಬೆಳೆಸ್ತಾನೆ
ಬಾಳಿನೆಳೆಯಲ್ಲಿ ಬಿಗುಮಾನ ಬೇಡತಾನೆ
ಪ್ರೀತಿ ವಿಶ್ವಾಸ ನೇಯ್ದರೆ ಸಾಕು ತಾನೇ...||೫||


     ಎನ್ನುತ್ತಾ ತನ್ನ ಬಾಳಿನ ಹಾಡನ್ನು ಹಾಡಿ ಮೊಮ್ಮಗನ ಮೊಗವನ್ನು ದಿಟ್ಟಿಸಿದರು..ಮೊಮ್ಮಗ ನಿದಿರೆಗೆ ಶರಣಾಗಿದ್ದ..ಅಜ್ಜ ಪ್ರೀತಿಯಿಂದ ಹೊದಿಕೆ ಹೊದೆಸಿ .."ನಾನು ನೇಯ್ದದ್ದು ಬರಿ ಬಟ್ಟೆಯನ್ನಲ್ಲ..ಪ್ರೀತಿ,ಪ್ರೇಮ ,ವಿಶ್ವಾಸ,ಸ್ವಾಭಿಮಾನದ ಸರಪಳಿಯನ್ನು .. "ಎಂದುಕೊಳ್ಳುತ್ತಾ ಎದ್ದು ಬಾಗಿಲೆಳೆದು ಹೊರನಡೆದರು..


✍️... ಅನಿತಾ ಜಿ.ಕೆ.ಭಟ್.
04-01-2020.
ಚಿತ್ರ ಕೃಪೆ:-ಕಥಾಗುಚ್ಛ.





2 comments:

  1. ಚೆನ್ನಾಗಿದೆ.. ಕಥೆಯ ಕೊನೆಗೆ ಬರೆದ ಹಾಡು ಇಷ್ಟ ಆಯ್ತು...

    ReplyDelete
  2. ಧನ್ಯವಾದಗಳು 💐🙏

    ReplyDelete