Friday, 31 January 2020

ಜೀವನ ಮೈತ್ರಿ -ಭಾಗ ೫




       ಮೈತ್ರಿ ಓದಲೆಂದು ಪುಸ್ತಕ ತನ್ನೆದುರು ಟೇಬಲ್ ಮೇಲೆಲ್ಲ ಹರವಿಕೊಂಡು ಕುಳಿತಿದ್ದರೂ ಓದಿನಲ್ಲಿ ಏಕಾಗ್ರತೆ ಇರಲಿಲ್ಲ.ಮನಸ್ಸು ಕಿಶನ್ ನ ಧ್ಯಾನಿಸುತ್ತಿತ್ತು .ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನನಗೆ ಈ ಪ್ರೀತಿ ಪ್ರೇಮ ಬೇಕಿತ್ತಾ.. ಎಂದು ಮಗದೊಮ್ಮೆ ಬುದ್ಧಿ ಮನಸ್ಸನ್ನು ಪ್ರಶ್ನಿಸಿತು.ಎಲ್ಲಾದರೂ ಮನೆಯವರಿಗೆ ತಿಳಿದರೆ ಸುಮ್ಮನೆ ಬಿಟ್ಟಾರೇ..ಎಂದು ಯೋಚಿಸಿ ಮೈಯೆಲ್ಲಾ ಬೆವರಿತು.ಕೈಕಾಲು ಶಕ್ತಿ ಉಡುಗಿದಂತೆ ಭಾಸವಾಯಿತು.

ಒಳಗಿನಿಂದ ಅಮ್ಮ "ಮಹೇಶ.. ಮೈತ್ರಿ..ಊಟಕ್ಕೆ ಬನ್ನಿ.."ಎಂದು ಕರೆದರು.
"ನಾನು ಸ್ವಲ್ಪ ಮತ್ತೆ ಬರುವೆ..ಓದುತ್ತಿದ್ದೇನೆ.."ಎಂದು ಹೇಳಿ ಮೈತ್ರಿ ತಪ್ಪಿಸಿಕೊಂಡಳು.ದುಗುಡತುಂಬಿದ ತಲೆಯನ್ನು ಹೊತ್ತು ಅವರೆಲ್ಲರ ಜೊತೆ ಸೇರಿ ಉಣ್ಣಲು ಅವಳಿಗೂ ಕಷ್ಟಸಾಧ್ಯವಾಗಿತ್ತು . ಮನಸ್ಸು ಏಕಾಂತವನ್ನು ಬಯಸಿತ್ತು..ಮೌನದಲ್ಲೂ ಇನಿಯನ ಪಿಸುದನಿಯ ಕಂಪನವಿತ್ತು..ಅವನ ಪ್ರೇಮಭರಿತ ಹಾಯ್ಕುಗಳ ಮೋಹವಿತ್ತು..

      ಎಲ್ಲರೂ ಊಟಕ್ಕೆ ಹೋದಂತೆ ಕಾಣುತ್ತಿದೆ.. ಒಮ್ಮೆ ನಾನು ಮೊಬೈಲ್ ತೆಗೆದುಕೊಂಡು ಕಿಶನ್ ಗೆ ಸಂದೇಶ ರವಾನಿಸುತ್ತೇನೆ ಎಂದು ಮೆಲ್ಲನೆ ಚಾವಡಿಯಲ್ಲಿದ್ದ ಅಪ್ಪನ ಮೇಜಿನ ಬಳಿಗೆ ತೆರಳುವ ಸಿದ್ಧತೆಯಲ್ಲಿದ್ದಳು.ಮೆಲ್ಲನೆ ರೂಮಿನಿಂದ ಹೊರಗೆ ಇಣುಕಿದಳು.ಅಲ್ಲಿ ಮೇಜಿನ ಮೇಲೆ ಮಲ್ಲಿಗೆಯ ಮೊಗ್ಗುಗಳನ್ನು ಹರವಿಕೊಂಡು ಅಜ್ಜಿ ಮಾಲೆಹೆಣೆಯುತ್ತಿದ್ದರು.ಒಂದು ಮೊಳದ ಮಾಲೆ ಸಿದ್ಧವಾಗಿತ್ತು.ಇನ್ನೂ ಎರಡು ಹಿಡಿ ಮೊಗ್ಗು ನೇಯಲು ಬಾಕಿಯಿತ್ತು.. ಹೂಂ... ಎಲ್ಲರೂ ಊಟಮಾಡಿ ಬರುವವರೆಗೆ ಇವರ ಮಾಲೆಹೆಣೆಯುವ ಕೆಲಸ ಮುಗಿಯಲಾರದು ಎಂದು ಎಣಿಸಿ ನಿಟ್ಟುಸಿರು ಬಿಟ್ಟಳು...


      ಮೊಮ್ಮಗಳು ಒಮ್ಮೆ ಎದ್ದು ಬಗ್ಗಿ ನೋಡಿ .. ಹೋಗಿ ಪುನಃ ಕುಳಿತಿದ್ದನ್ನು ಗಮನಿಸಿದ ಅಜ್ಜಿ ಮಹಾಲಕ್ಷ್ಮಿ ಅಮ್ಮ..."ಪುಳ್ಳೀ.. ಮೈತ್ರಿ...ನಿನಗೆ ಎಂತಾರು ಬೇಕಾ..."ಎಂದು ಕೇಳಿದರು..

"ಇಲ್ಲೆ.. ಅಜ್ಜಿ...ನನಗೆ ಎಂತ ಬೇಡ..."ಎಂದು ಹೇಳಿ ಅಜ್ಜಿಗೆ ನಾನೆಷ್ಟು ಜಾಗರೂಕತೆಯಿಂದ ಇಣುಕಿದರೂ ಗೊತ್ತಾಗಿಬಿಟ್ಟಿದೆ ...ಈ ಇಳಿವಯಸ್ಸಿನಲ್ಲೂ ಭಾರೀ ಚುರುಕು ಅಜ್ಜಿಯ ಕಿವಿ..ಎಂದುಕೊಂಡಳು..

       ಅಜ್ಜ ಅಪ್ಪ ಮಹೇಶ್ ಊಟ ಮಾಡಿ ಹೊರಬಂದರು..ಅಮ್ಮ ಮಗಳ ರೂಮಿಗೆ ಬಂದು "ಊಟಕ್ಕೆ ಬಾ.." ಎಂದು ಕರೆದರು..ಇವತ್ತೇನೋ ಮಗಳ ಮೂಡ್ ಸರಿಯಿಲ್ಲ ಎಂಬುದನ್ನು ಅವರು ಗಮನಿಸಿದಂತೆ ಇತ್ತು ಅವರ ಮಾತಿನ ಧಾಟಿ.. ಎಂದಿನಂತೆಯೇ ಇದ್ದೇನೆ ಎಂಬಂತೆ ನಟಿಸುವುದು ಮೈತ್ರಿಗೆ ಈಗ ಅನಿವಾರ್ಯವಾಗಿತ್ತು.ಅಮ್ಮ ಅಜ್ಜಿ ಯೊಂದಿಗೆ ಊಟಕ್ಕೆ ಕುಳಿತಳು ಮೈತ್ರಿ.. ಅಷ್ಟರಲ್ಲಿ  ಮೈತ್ರಿ ಯ ದೊಡ್ಡತ್ತೆ ಶಶಿಯ ಫೋನ್ ಬಂದಿತು...ಸುದ್ದಿ, ಸೌಖ್ಯ ಸಮಾಚಾರ ಮಾತನಾಡಿದ ಶಶಿ ತನ್ನ ಮಗ ಇವತ್ತು ತಡರಾತ್ರಿ ಶಾಸ್ತ್ರಿನಿವಾಸಕ್ಕೆ ಬರುವುದಾಗಿ ತಿಳಿಸಿದರು..


       ಶ್ಯಾಮ ಶಾಸ್ತ್ರಿಗಳ ದೊಡ್ಡಮಗಳು ಶಶಿಕಲಾ.ಎಲ್ಲರೂ ಪ್ರೀತಿಯಿಂದ ಶಶಿಯೆಂದು ಕರೆಯುವುದು.ಹದಿನೆಂಟನೇ ವಯಸ್ಸಿನಲ್ಲಿ ಮದುವೆಯಾಗಿ ತುಂಬು ಸಂಸಾರಕ್ಕೆ ಕಾಲಿಟ್ಟವರು.ತವರು ಮನೆಗೆ ಯಾವಾಗಲಾದರೂ ಒಮ್ಮೊಮ್ಮೆ ಬರುತ್ತಿದ್ದರು.ಮನೆಯ ಹಿರಿಸೊಸೆಯಾದ ಅವರ ಮೇಲೆ ಜವಾಬ್ದಾರಿ ಹೆಚ್ಚಿತ್ತು..ಇಬ್ಬರು ಗಂಡುಮಕ್ಕಳನ್ನು ಹೆತ್ತುಬೆಳೆಸಿದರು.. ದೊಡ್ಡ ಮಗ  ಮುರಲಿ...ಒಳ್ಳೆಯ ವಿದ್ಯಾಭ್ಯಾಸ ಪಡೆದು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ..ಎರಡನೆಯವನಿಗೆ ಓದಲು ಆಸಕ್ತಿ ಕಡಿಮೆ.ವೆಂಕಟ ಬುದ್ಧಿವಂತನೇ...ಆದರೆ ಹವ್ಯಾಸಗಳತ್ತ ಸೆಳೆತ ಹೆಚ್ಚು.. ಹಾಗಾಗಿ ಓದಿನ ಕಡೆಗೆ ಗಮನ ಕೊಡುತ್ತಿರಲಿಲ್ಲ..ಹತ್ತನೇ ತರಗತಿ ವರೆಗೆ ಮನೆಯಲ್ಲಿದ್ದು ಓದಿದ ಮಗನನ್ನು .. ಪಿಯುಸಿ ಗೆ ತವರುಮನೆ ಶಾಸ್ತ್ರಿ ನಿವಾಸ ದಿಂದ ಕಾಲೇಜಿಗೆ ಕಳುಹಿಸಿದರು ಶಶಿ..ಸೋದರಮಾವ ಭಾಸ್ಕರ ಶಾಸ್ತ್ರಿಗಳು ಅಧ್ಯಾಪಕರಾದ್ದರಿಂದ ಅವರ ಅಂಜಿಕೆಗೆ ಚೆನ್ನಾಗಿ ಓದಬಹುದು ಎಂದು ಶಶಿಯತ್ತೆಯ ಲೆಕ್ಕಾಚಾರ.. ಅಜ್ಜಿ ಮಹಾಲಕ್ಷ್ಮಿ ಅಮ್ಮ ಪೋಕರಿ ಮೊಮ್ಮಗನನ್ನು ಮನೆಯಿಂದ ಕಾಲೇಜಿಗೆ ಕಳುಹಿಸಲು ಮೊದಲು ಅಂಜಿದ್ದರು..ಮಗನ ಮಕ್ಕಳಿಗೂ ಅವನ ಪೋಲಿ ಅಭ್ಯಾಸಗಳೇ ಬಂದರೆ ಎಂದು..ಆಗ ಮಂಗಳಮ್ಮ ತಾವೇ ಖುದ್ದಾಗಿ " ಬರಲಿ..ಇಲ್ಲಿಯೇ ಓದಬಹುದು "ಎಂದು ಹೇಳಿದರು..ಹೀಗೆ ಶಶಿಯತ್ತೆಯ ಮಗ ವೆಂಕಟ್ ಅಜ್ಜಿ ಮನೆಯಿಂದ ಕಾಲೇಜಿಗೆ ಹೋಗಲಾರಂಭಿಸಿದ.. ಆದರೆ ಓದಿಗಿಂತ ತರಲೆಯೇ ಹೆಚ್ಚು..ಪಿಯುಸಿ ಹೇಗೋ ಮುಗಿಸಿ..ಓದಿಗೆ ತಿಲಾಂಜಲಿ ಬಿಟ್ಟಿದ್ದ..ಯಾರ ಮಾತಿಗೂ ಮಣಿಯಲಿಲ್ಲ..ಪ್ರಸಿದ್ಧ ಭಾಗವತರಲ್ಲಿ ಯಕ್ಷಗಾನ ಪದ ಹಾಡಲು ಕಲಿಯತೊಡಗಿದ.. ಮುಂದೆ ಅದೇ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಅವನದಾಗಿತ್ತು..ಶಶಿಯತ್ತೆ ಮಾವನಿಗಂತೂ ಇದು ಇಷ್ಟವಿಲ್ಲ..ಭಾಗವತರಿಗೆ ಈಗ ಸಂಪಾದನೆ ಸಾಲದು..ಯಾರೂ ಮದುವೆಯಾಗಲು ಹುಡುಗಿ ಕೊಡುವುದಿಲ್ಲ ಎಂದು ಅವರ ಅಂಬೋಣ.. ವೆಂಕಟ್ ಮಾತ್ರ ಪಟ್ಟು ಸಡಿಲಿಸಲಿಲ್ಲ... ಹೀಗೆ ಇವತ್ತು ಇದೇ ಊರಿಗೆ ಯಕ್ಷಗಾನ ಭಾಗವತಿಕೆಗೆ
ಬಂದಿದ್ದ ವೆಂಕಟ್ ರಾತ್ರಿ ಅಜ್ಜನ ಮನೆಯಲ್ಲಿ ಉಳಿದುಕೊಳ್ಳಲು ಬರುವೆನೆಂದು ತಿಳಿಸಲು ಅಮ್ಮನಲ್ಲಿ ಹೇಳಿದ್ದ..

     ಮೊಮ್ಮಗ ಬರುತ್ತಾನೆಂದು ತಿಳಿದ ಅಜ್ಜಿ ಸಂತಸಪಟ್ಟರು.ಬೇಗನೆ ಊಟಮಾಡಿ ಶ್ಯಾಮಶಾಸ್ತ್ರಿಗಳಿಗೆ ಮಲಗಲು ಚಾವಡಿಯಲ್ಲಿ ಮಂಚದಲ್ಲಿದ್ದ ಹಾಸಿಗೆಯನ್ನು ಬಿಡಿಸಿ ಹಾಸಿಕೊಟ್ಟರು..ಬೇಗನೆ ಮಲಗಿ ತಡರಾತ್ರಿ ಮೊಮ್ಮಗ ಬರುತ್ತಾನೆ ಎಂದ ಅವರ ದನಿಯಲ್ಲಿ ಸಂಭ್ರಮವಿತ್ತು.

      ಊಟಮಾಡಿ ರೂಮು ಸೇರಿ ಮಲಗಿದ ಮೈತ್ರಿಯ ಗಮನ ಅಜ್ಜ ಗೊರಕೆಹೊಡೆಯಲು ಯಾವಾಗ ಶುರುಮಾಡುತ್ತಾರೆ..ಅಪ್ಪ ಯಾವಾಗ ಲೈಟ್ ಆಫ್ ಮಾಡಿ ಕೋಣೆ ಸೇರುತ್ತಾರೆ ಎಂಬಲ್ಲಿತ್ತು.. ಹನ್ನೊಂದು ಗಂಟೆಯ ಹೊತ್ತು..ಮನೆಯ ಹೆಚ್ಚಿನ ಲೈಟ್ ಆಫ್ ಆಗಿದ್ದವು..ಅಪ್ಪ ಅಮ್ಮ ರೂಮುಸೇರಿ  ಮಲಗಿದ್ದನ್ನು ಬಾಗಿಲಿನ ದನಿಯಲ್ಲೇ ಅರಿತಳು ಮೈತ್ರಿ.. ಇನ್ನೊಂದು ಸಣ್ಣ ಬೆಳಕು ಕಾಣಿಸುತ್ತಿತ್ತು.. ದೊಡ್ಡದಾದ ಚಾವಡಿಯ ಮೂಲೆಯಲ್ಲಿ ಮಹೇಶ್ ಪರೀಕ್ಷೆಗೆ ಓದುತ್ತಿದ್ದ.. ಎಲ್ಲರೂ ಮಲಗಿದರೂ ಇವನೊಬ್ಬ ಎಚ್ಚರದಲ್ಲಿದ್ದಾನಲ್ಲ..!!ನಾನೇನಾದರೂ ಮೇಜಿನ ಮೇಲಿನ ಫೋನ್ ತೆಗೆದುಕೊಂಡಿದ್ದು ಗೊತ್ತಾದರೆ ನಾಳೆ ಅಪ್ಪನಿಗೆ ವರದಿ ಮಾಡಿದರೆ ಕಷ್ಟ..ಎಂದುಕೊಳ್ಳುತ್ತಲೇ ಮೆಲ್ಲನೆ ಚಾವಡಿಯತ್ತ ಇಣುಕಿದಳು..ಎರಡು ಹೆಜ್ಜೆ ಮುಂದೆ ಬಂದು ತಮ್ಮನತ್ತ ನೋಡಿದಳು.ಕೈಯಲ್ಲೊಂದು ಪುಸ್ತಕ ಹಿಡಿದಿದ್ದ.ತೂಕಡಿಸುತ್ತಿದ್ದ ..ಓಹೋ..ಹೀಗೆ ಸಂಗತಿ..!!! ಇವನು ಪೂರ್ತಿ ಎಚ್ಚರದಲ್ಲಿಲ್ಲ.. ಮೆಲ್ಲನೆ ಮೊಬೈಲ್ ತೆಗೆದುಕೊಂಡು ಹೋದರೆ ಇವನಿಗೆ ತಿಳಿಯದು ಅಂತ ಮೆಲ್ಲನೆ ಹತ್ತು ಹೆಜ್ಜೆ ಮುಂದಿಟ್ಟಳು.. ಕಾಲ್ಗೆಜ್ಜೆಯನ್ನು ರೂಮಿನಲ್ಲಿ ತೆಗೆದಿರಿಸಿ ಬಂದಿದ್ದಳು... ಮೊಬೈಲ್ ಹಿಡಿದು ರೂಮು ಸೇರಿದಳು.. ಮಹೇಶ್ ಏನೋ ಸಪ್ಪಳವಾದಂತೆ ಎಚ್ಚರವಾಗಿ ಪುಸ್ತಕ ಮಡಚಿ ಲೈಟ್ ಆಫ್ ಮಾಡಿ ಹಾಲ್ ನಲ್ಲಿ ಹಾಸಿಗೆ ಹಾಸಿ ಮಲಗಿಕೊಂಡನು.. ನಾನು ಬಂದದ್ದು ಇವನಿಗೆ ಅರಿವಾಗಿರಲಾರದು ಎಂದು ಮೈತ್ರಿ ಭಾವಿಸಿದಳು..

ಬಾಗಿಲು ಭದ್ರಪಡಿಸಿ ಮೈತ್ರಿ ಕಿಶನ್ ಗೆ ಸಂದೇಶ ರವಾನಿಸಿದಳು..


ನಾ ಬರೆದ ಒಲವಿನ ಓಲೆ ನೀ
ಮರೆತೆಯಾ ಗೆಳೆಯಾ...
ಕ್ಷಣ ಕೋಪದ ನನ್ನ ಉಲಿಯು
ಮನಸು ಮುರಿಯಿತೇ ಗೆಳೆಯಾ...

ನನ್ನ ನಿನ್ನ ಪ್ರೀತಿಬೆಸುಗೆಗೆ ಬೇಲಿ
ಎಲ್ಲಿಹುದು ಗೆಳೆಯಾ...
ನೀನಿಲ್ಲದ ನಾನಿಂದು ಖಾಲಿ
ಜೇನುಗೂಡು ಗೆಳೆಯಾ...

ನಿನ್ನೊಲುಮೆ ಸಂದೇಶಕೆ
ನಾ ಹೂವು ಗೆಳೆಯಾ..
ನನ್ನಧರದ ಮಧುಹೀರೋ
ದುಂಬಿ ನೀನೇ ಗೆಳೆಯಾ...


ಸಂದೇಶವನ್ನು ಕಿಶನ್ ಗೆ ಕಳುಹಿಸಿದ ಮೈತ್ರಿ ನನ್ನ ನಲ್ಲ ನನ್ನನ್ನು ಚೆನ್ನಾಗಿ ಬಲ್ಲ ಎಂದು ನಂಬಿದಳು.ಇಂದಲ್ಲದಿದ್ದರೆ ನಾಳೆ ಬೆಳಿಗ್ಗೆ ಯಾದರೂ ಪ್ರತಿಸಂದೇಶ ಕಳುಹಿಸುವನು ಎಂದು ಕಾದುಕುಳಿತಳು..

      ಹೊರಗೆ ಬೈಕ್ ಸದ್ದಾಯಿತು.. ವೆಂಕಟ್ ಬಂದಿರಬೇಕು..ಅಜ್ಜ ಎದ್ದು ಹೊರಗೆ ಹೋದರು.. ಬಾಯ್ತುಂಬಾ ಕವಳ ಜಗಿದುಕೊಂಡು ಥೇಟ್ ಅಜ್ಜಂದಿರಂತೆ ಫೋಸ್ ಕೊಡುತ್ತಾ ಒಳಬಂದಿದ್ದ ವೆಂಕಟ್.. ಅಜ್ಜಿ ಎದ್ದು ಬಂದು ಮೊಮ್ಮಗನನ್ನು ಉಪಚರಿಸಿದಳು.. ಭಾಸ್ಕರ ಶಾಸ್ತ್ರಿಗಳು ಕೂಡ ಅಳಿಯನನ್ನು ಮಾತನಾಡಿಸಿದರು.. ವೆಂಕಟ್ ಹೊರಗೆ ಹೋಗಿ ಮೈತ್ರಿಯ ರೂಮಿನ ಹೊರಗಡೆಯ ಜಗಲಿಯ ಪಕ್ಕದಲ್ಲಿ ನಿಂತು ಕವಳವನ್ನು ಪಿಚಕ್ಕೆಂದು ಉಗಿದು ಅಲ್ಲೇ ಇದ್ದ ನೀರಿನಿಂದ ಬಾಯಿ ಮುಕ್ಕಳಿಸಿ ಬಂದ.. ಅಜ್ಜಿ ಕುಡಿಯಲು ನೀರು ತಂದರು..ಕ್ಷೇಮ ಸಮಾಚಾರ ಹರಟಿದರು.


     ಮಾತನಾಡುತ್ತಾ ತನ್ನ ಮೊಬೈಲ್ ನಲ್ಲಿ ಗುರುಟುತ್ತಿದ್ದ ವೆಂಕಟ್ ..."ಅಲ್ಲ ಈ ಹೊತ್ತಿನಲ್ಲಿ ಇಲ್ಲಿ ವೈಫೈ ಕನೆಕ್ಷನ್ ಸಿಗುತ್ತಿದೆ.ಇಲ್ಲಿ ಈಗ ಯಾರಾದರೂ ಮೊಬೈಲ್ ಬಳಸುತ್ತಿದ್ದಾರಾ...' ಎಂದು ಕೇಳಿದ ವೆಂಕಟ್ ಭಾವನ ಮಾತು ಮೈತ್ರಿ ಯ ಸಂಕಟಕ್ಕೆ ಕಾರಣವಾಯಿತು... ಅಪ್ಪನಿಗೆ ನಾನು ಮೊಬೈಲ್ ತೆಗೆದುಕೊಂಡದ್ದು ತಿಳಿದೇ ಹೋಗಿರಬೇಕು ಈಗ ಎನ್ನುತ್ತಾ ಹೆದರುತ್ತಿದ್ದವಳ ಕಣ್ಣಂಚಿಂದ ನೀರು ಜಿನುಗಿತ್ತು.. ಕಾಲುಗಳು ನಡುಗುತ್ತಿದ್ದವು...

    ಮೊದಲು ನೆಟ್ ಆಫ್ ಮಾಡಿ ಮಲಗಿ ನಿದ್ರಿಸುವ ನಾಟಕ ಮಾಡಿದಳು ಮೈತ್ರಿ...


                     ****
      ಮಲಗಿದ್ದ ಕಿಶನ್ ಸಂದೇಶ ಬಂದದ್ದನ್ನು ಕಂಡು ಯಾರದ್ದೆಂದು ನೋಡಿದ.. ಮೈತ್ರಿ ಯ ಸಂದೇಶವೆಂದು ತಿಳಿದು ಓದಿದ..ಓದಿದವನಿಗೆ ಏಕೋ ಕೂಡಲೇ ಪ್ರತಿಸಂದೇಶ ಕಳುಹಿಸುವ ಮನಸ್ಸಾಗಲಿಲ್ಲ.. ಅವಳನ್ನು ಸ್ವಲ್ಪ ಸತಾಯಿಸಿ ನೋಡಬೇಕು ಅಂತ ಅನಿಸಿ..ಮೊಬೈಲ್ ಆಫ್ ಮಾಡಿ ಮಲಗಿ ನಿದ್ರೆಗೆ ಜಾರಿದ...


      ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
31-01-2020.

ನಮಸ್ತೇ...

       ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.


2 comments:

  1. ಕುತೂಹಲ ಮುಂದುವರಿದಿದೆ.... ಧನ್ಯವಾದಗಳು 💐🙏

    ReplyDelete