ಮುದುಡಿಹೋದ ಬೆಸುಗೆಯೊಂದು
ಮತ್ತೆ ಮೂಡಬಲ್ಲದೇ
ಕದಡಿಹೋದ ಮನಸದಿಂದು
ಮತ್ತೆ ಕೂಡಬಲ್ಲದೇ...||೧||
ಜಾರಿಹೋದ ಕಣ್ಣಹನಿಯು
ನೂರು ಅರ್ಥವ ಸಾರಿದೆ
ತೂರಿಬಂದ ಭಾವವೆಲ್ಲ ಸೋರಿ
ಸೋರಿ ಕರಗಿದೆ...||೨||
ತಾಳಲಯದ ಗತಿಯದಿಂದು
ಹೇಳಕೇಳದೆ ಹೊರಟಿದೆ
ತೋಳಬಂಧನ ಒಲವಸ್ಪಂದನ
ಕೇಳಿಯೀಗ ಮರೆತಿದೆ...||೩||
ಸೂಜಿಬಿದ್ದ ಸದ್ದು ಕೂಡಾ
ಸೋಜಿಗದಿ ಅನುರಣಿಸಿದೆ
ಹೂಜಿಯಲ್ಲಿನ ತಂಪುನೀರೂ
ಬಿಸಿಯನಳಿಸಲು ಸೋತಿದೆ...||೪||
ಅರೆಬಿರಿದ ಮಲ್ಲೆ ಹೂವು
ಪರಿಮಳವ ತಾ ಹರಡಿದೆ
ಇರುಳುಗತ್ತಲ ಮರುಳುಮನವು
ಪ್ರೇಮಗಂಧವ ಮರೆತಿದೆ...||೫||
ಎಲ್ಲೆಮೀರಿದ ಸೊಲ್ಲದೆಂದು
ಮಾತು ಹೃದಯದಿ ಅವಿತಿದೆ
ಮೆಲ್ಲನುಸುರಿದ ನಲ್ಲನೆಂದು
ಮೌನ ಸುಖಕರವೆನಿಸಿದೆ...||೬||
ಕಾಂತಿಯಿರದ ಕಣ್ಣಕೊಳದಿ
ಭ್ರಾಂತಿಯೊಂದೇ ತುಂಬಿದೆ
ಇಂತಿ ಮನ್ನಿಸು ಎಂಬ ಭಾವದಿ
ಬಾಳಬಂಧವು ಚಿಗುರಿದೆ...||೭||
✍️... ಅನಿತಾ ಜಿ.ಕೆ.ಭಟ್.
04-01-2020.
ಚಿತ್ರ ಕೃಪೆ:-ಸೌಹಾರ್ದ ಬಳಗ
ಈ ಹಾಡನ್ನು ಯೂಟ್ಯೂಬ್ ನಲ್ಲಿ ಕೇಳಲು ಕೆಳಗಿನ ಲಿಂಕ್ ಬಳಸಿ..https://youtu.be/mTJxLCXehGo
👌👌
ReplyDeleteThank you..
ReplyDelete