Tuesday, 21 January 2020

ನಮ್ಮ ದಕ್ಷಿಣಕನ್ನಡ ಜಿಲ್ಲೆಯ ಪರಿಚಯ



ನಮ್ಮದು ಪರಶುರಾಮ ತನ್ನ ಕೊಡಲಿಯನ್ನು ಎಸೆದು ಸೃಷ್ಟಿಸಿದನು  ಎಂಬ ಐತಿಹ್ಯವಿರುವ 'ಪರಶುರಾಮ ಸೃಷ್ಟಿ'ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆ.ಕಡಲ ತೀರದ ನಾಡು ಕುಡ್ಲ_ಮಂಗಳೂರು ಜಿಲ್ಲಾ ಕೇಂದ್ರ.


ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.ಕಟೀಲು.

ದಕ ಜಿಲ್ಲೆಯಲ್ಲಿ ಆರು ತಾಲೂಕುಗಳು.ಅವುಗಳು ಮಂಗಳೂರು, ಮೂಡುಬಿದಿರೆ, ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ.ಇಲ್ಲಿನ ಪ್ರಮುಖ ಭಾಷೆ ತುಳು.ಆದ್ದರಿಂದ ತುಳುನಾಡು ಎಂಬ ಹೆಸರು ಇದೆ.ಕನ್ನಡ ಮತ್ತು ತುಳು ಎರಡೂ ವ್ಯಾವಹಾರಿಕ ಭಾಷೆ.ಕೊಂಕಣಿ, ಮಲೆಯಾಳ, ಮರಾಠಿ,ಅರೆಕನ್ನಡ, ಹವ್ಯಕ ಕನ್ನಡ ಇವು ಇಲ್ಲಿನ ಇತರ ಭಾಷೆಗಳು.

ಪೋರ್ಚುಗೀಸ್ ರೊಂದಿಗೆ ಹೋರಾಡಿದ ಉಳ್ಳಾಲದ ವೀರರಾಣಿ ಅಬ್ಬಕ್ಕ ದೇವಿಯ ನಾಡಿದು.ಸೋಮೇಶ್ವರದ ಸೋಮನಾಥ ದೇವಾಲಯ ಆಕೆಯ ಶಕ್ತಿ ಕ್ಷೇತ್ರ.

ದಕ ಬ್ಯಾಂಕ್ ಗಳ ತವರು.ಅಮ್ಮೆಂಬಳ ಸುಬ್ಬರಾವ್ ಪೈ,ಅತ್ತಾವರ ಎಲ್ಲಪ್ಪ, ಕಾರ್ನಾಡ್ ಸದಾಶಿವ ರಾವ್,ಕುದ್ಮಲ್ ರಂಗರಾವ್,ರಾಜಕಾರಣಿ ಜಾರ್ಜ್ ಫರ್ನಾಂಡಿಸ್.. ಹೀಗೇ ಇನ್ನೂ ಅನೇಕ ಧುರೀಣರ ತವರು.

ಬುದ್ಧಿವಂತರ ನಾಡು ಎಂದು ಕರೆಸಿಕೊಳ್ಳುವ ಈ ನಾಡು ಶಿಕ್ಷಣ ಕಾಶಿ ಎಂದೇ ಪ್ರಸಿದ್ಧ.ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NITK) ಇರುವುದು ಸುರತ್ಕಲ್ ನಲ್ಲಿ. ಇದು ಹಲವಾರು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆಗಳಿಗೆ  ನಾಂದಿ ಹಾಡಿದೆ.ಹಲವಾರು ವೈದ್ಯಕೀಯ, ಅರೆ ವೈದ್ಯಕೀಯ, ಇಂಜಿನಿಯರಿಂಗ್ ಸಂಸ್ಥೆಗಳು ಇಲ್ಲಿವೆ.

ರಾಜ್ಯದ ಮೂರನೇ ದೊಡ್ಡ ನಗರ ಮಂಗಳೂರು ಒಂದು ಬದಿಯಿಂದ ಅರಬ್ಬೀ ಸಮುದ್ರ ದಿಂದ ಸುತ್ತುವರಿದಿದೆ.ಮೀನುಗಾರಿಕೆ, ಕೃಷಿ, ಹೈನುಗಾರಿಕೆ, ಹೋಟೆಲ್, ಬ್ಯಾಂಕ್ ಪ್ರಮುಖ ಉದ್ಯಮಗಳು.ಉಳ್ಳಾಲದ ತೆಂಗು ಸಂಶೋಧನಾ ಕೇಂದ್ರ,CPCRI   (ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ  )ವಿಟ್ಲ,ಫಶುಸಂಗೋಪನಾ ಕೇಂದ್ರ ಕೊಯ್ಲ,ಗೇರು ಸಂಶೋಧನ ಕೇಂದ್ರ ಪುತ್ತೂರು ಇವು ಪ್ರಮುಖ ಕೃಷಿ ಸಂಸ್ಥೆ ಗಳು.ತೆಂಗು, ಅಡಿಕೆ,ಭತ್ತ ಪ್ರಮುಖ ಕೃಷಿ.
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಾಲಯ.ಧರ್ಮಸ್ಥಳ.

ಧಾರ್ಮಿಕ ಕೇಂದ್ರಗಳು_ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ, ಅಣ್ಣಪ್ಪ ಸ್ವಾಮಿ, ಬಾಹುಬಲಿ ವಿಶ್ವ ಪ್ರಸಿದ್ಧ.ಇತ್ತೀಚೆಗಷ್ಟೇವಿಜೃಂಭಣೆಯಿಂದ ಮಹಾಮಸ್ತಕಾಭಿಷೇಕ ನೆರವೇರಿದೆ.ಜೈನ ಹಿಂದೂ ಧರ್ಮದ ಸಂಗಮ ಸ್ಥಳ.ಅನ್ನದಾನ,ವಿದ್ಯಾದಾನ,ನ್ಯಾಯದಾನ ನಡೆಸುತ್ತಾ ಬಂದಿರುವ ಪೂಜ್ಯ ರಾಜರ್ಷಿ ಡಾ|| ವೀರೇಂದ್ರ ಹೆಗ್ಗಡೆ ಯವರು ಆದರ್ಶ ಪ್ರಾಯರು.
ಕುಕ್ಕೆಸುಬ್ರಹ್ಮಣ್ಯ ದ ದೇವಾಲಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಕದ್ರಿ ಮಂಜುನಾಥ ಸ್ವಾಮಿ ದೇವಾಲಯ, ಕುಡುಪು ಶ್ರೀ ಅನಂತ ಪದ್ಮನಾಭ ದೇಗುಲ, ಗೋಕರ್ಣ ನಾಥ ದೇವಾಲಯ ಕುದ್ರೋಳಿ, ಮಂಗಳಾದೇವಿ ದೇವಸ್ಥಾನ ,ಮೂಡುಬಿದಿರೆ ಸಾವಿರ ಕಂಬದ ಬಸದಿ,ಸೌತೆಡ್ಕ ಮಹಾಗಣಪತಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಮಂಗಳೂರು ಬಾವುಟಗುಡ್ಡೆಯಲ್ಲಿರುವ ಸಂತ ಅಲೋಶಿಯಸ್ ಚಾಪೆಲ್,ಉಳ್ಳಾಲದ ಸಯ್ಯದ್ ದರ್ಗಾ ಪ್ರಮುಖ ಧಾರ್ಮಿಕ ಕ್ಷೇತ್ರಗಳು.

ಸಾವಿರ ಕಂಬದ ಬಸದಿ ,ಮೂಡುಬಿದಿರೆ.

ಸಂತ ಅಲೋಶಿಯಸ್ ಚಾಪೆಲ್, ಮಂಗಳೂರು.

ಪ್ರವಾಸಿ ತಾಣಗಳು_
ಇಲ್ಲಿನ ಸಮುದ್ರ ತೀರದಲ್ಲಿ ಸಂಜೆಯ ಸೊಬಗನ್ನು ಒಮ್ಮೆಯಾದರೂ ಆಸ್ವಾದಿಸಬೇಕು.ಸುರತ್ಕಲ್, ಸಸಿಹಿತ್ಲು, ಪಣಂಬೂರು, ತಣ್ಣೀರು ಬಾವಿ, ಉಳ್ಳಾಲದ ಸಮ್ಮರ್ ಸ್ಯಾಂಡ್, ಸೋಮೇಶ್ವರ ಸಮುದ್ರ ತೀರಗಳು ರಜಾದಿನಗಳಲ್ಲಿ ಪ್ರವಾಸಿಗರಿಂದ ತುಂಬಿರುತ್ತದೆ.ನಮ್ಮನೆಯಿಂದ ಸಮುದ್ರ ತೀರಕ್ಕೆ ಕೇವಲ ಎರಡು ಕಿಲೋಮೀಟರ್ ಅಂತರ.ಸಮುದ್ರತೀರದಲ್ಲಿ ಸಂಜೆಯ ವಿಹಾರ ಮನಸಿಗೆ ಆಹ್ಲಾದಕರ.

ಕಡಲ ತೀರದ ಸೂರ್ಯಾಸ್ತದ ವಿಹಂಗಮ ನೋಟ

ಸುಲ್ತಾನ್ ಬತ್ತೇರಿ ಕೋಟೆ  ಪ್ರೇಕ್ಷಣೀಯ ಸ್ಥಳ.ಕೋಟೆಯ ಮೇಲೆ ನಿಂತು ಅರಬ್ಬೀ ಸಮುದ್ರದ ದಿಗಂತದಲ್ಲಿ ಸೂರ್ಯಾಸ್ತದ ವಿಹಂಗಮ ನೋಟವನ್ನು ನೋಡಿಯೇ ಆನಂದಿಸಬೇಕು.

ಮಂಗಳೂರು ನಗರದ ಹೊರವಲಯದ ವಾಮಂಜೂರಿನಲ್ಲಿ ಪಿಲಿಕುಳ ಜೈವಿಕ ಉದ್ಯಾನವನ,ಡಾ|ಶಿವರಾಮ ಕಾರಂತ ಪ್ರಾದೇಶಿಕ ವಿಜ್ಞಾನ ಕೇಂದ್ರವಿದೆ.ಇಲ್ಲಿನ ಸ್ವಾಮಿ ವಿವೇಕಾನಂದ ತಾರಾಲಯವು ಭಾರತದ ಪ್ರಥಮ 3ಡಿ ತಾರಾಲಯ.ಉದ್ಯಾನವನದಲ್ಲಿ ಸುಂದರ ಪ್ರಕೃತಿಯ ಐಸಿರಿ ಮಧ್ಯೆ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ.ಜೈವಿಕ ಉದ್ಯಾನವನದಲ್ಲಿ ನಾನಾ ಪ್ರಾಣಿ ಪಕ್ಷಿಗಳ ಕಲರವ ಮುದನೀಡುವುದು .ಗುತ್ತಿನ ಮನೆ ಕೂಡ ಬಹಳ ಆಕರ್ಷಕವಾಗಿದೆ.
ಮಂಗಳೂರಿನ ಬಿಜೈ ಯಲ್ಲಿ ಶ್ರೀಮಂತಿಬಾಯಿ ವಸ್ತು ಸಂಗ್ರಹಾಲಯವಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಸುಬ್ರಹ್ಮಣ್ಯ.

MRPL (ಪೆಟ್ರೋಲಿಯಂ),MCF (ರಸಗೊಬ್ಬರ),KIOCL(ಕಬ್ಬಿಣದ ಅದಿರು)ನಂತಹ ಕೈಗಾರಿಕೆಗಳು ಇಲ್ಲಿವೆ.ಬಜ್ಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶ ವಿದೇಶಗಳ ಪ್ರಮುಖ ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ.ರೈಲುಸಂಚಾರ ಅನುಕೂಲವಾಗಿದ್ದು ಕೊಂಕಣ ರೈಲ್ವೆ ವಲಯಕ್ಕೆ ಸೇರಿದೆ.ಅತ್ಯಾಧುನಿಕ ಬಂದರು ನವಮಂಗಳೂರು ಬಂದರು(NMPT) ದೇಶವಿದೇಶದ ಬಂದರುಗಳೊಂದಿಗೆ ಸಂಬಂಧ ಕಲ್ಪಿಸುತ್ತದೆ.ಮೂರು ರಾಷ್ಟ್ರೀಯ ಹೆದ್ದಾರಿ ಗಳು ಜಿಲ್ಲೆಯ ಮೂಲಕ ಸಾಗುತ್ತವೆ.
ವಾಯು, ಭೂ (ರೈಲ್ವೇ ಮತ್ತು ಹೆದ್ದಾರಿ),ಸಾಗರ ಮಾರ್ಗಗಳ ಸಂಪರ್ಕ ಇರುವ ಜಿಲ್ಲೆ ನಮ್ಮದು.ಇನ್ಫೋಸಿಸ್ ಸಾಫ್ಟವೇರ್ ಸಂಸ್ಥೆ ತನ್ನೆರಡು ಶಾಖೆಗಳನ್ನು ನಮ್ಮ ಜಿಲ್ಲೆಯಲ್ಲಿ ಹೊಂದಿದೆ.
                           ಯಕ್ಷಗಾನ ಬಯಲಾಟ

ಭೂತಕೋಲ,ಕಂಬಳ, ಯಕ್ಷಗಾನ ಬಯಲಾಟ ಇಲ್ಲಿನ ಪ್ರಮುಖ ಜಾನಪದ ಕಲೆ.ಕಟೀಲು ಮೇಳದಿಂದ ನಡೆಯುವ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಎಂದರೆ ಭಕ್ತಿ ಭಾವದ ಪರಾಕಾಷ್ಠೆ, ಜಾತಿ ಧರ್ಮದ ಭೇದ ಇಲ್ಲದೆ ಎಲ್ಲರೂ ಮಂತ್ರಮುಗ್ಧರಾಗುವಂಥದ್ದು.ಕಟೀಲು ಮೇಳದ ಬಯಲಾಟಗಳು ಇನ್ನು ಮೂವತ್ತು ವರ್ಷಗಳ ವರೆಗೆ ಈಗಲೇ ಬುಕ್ ಆಗಿದೆಯೆಂದರೆ ಆ ಭಕ್ತಿ ಅಂಥಾದ್ದು.
                              ಕಂಬಳ

ನಮ್ಮ ಜಿಲ್ಲೆಯ ಮಂಗಳೂರು ಬನ್ಸ್, ಪತ್ರೊಡೆ ಪ್ರಸಿದ್ಧ ತಿಂಡಿಗಳು.ಮಂಗಳೂರು ಮಲ್ಲಿಗೆ ದೇಶವಿದೇಶಗಳಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡಿದೆ.ಇಲ್ಲಿಗೆ ಭೇಟಿ ನೀಡಿದಾಗ ಮಂಗಳೂರು ಮಲ್ಲಿಗೆ ಕೊಳ್ಳಲು ಮರೆಯದಿರಿ.

ಕಡಲ ತೀರದ ಭಾರ್ಗವ ಎಂದೇ ಪ್ರಸಿದ್ಧಿ ಪಡೆದ ಕಾರಂತರು ತಮ್ಮ ಜೀವನವನ್ನು ಪುತ್ತೂರಿನಲ್ಲಿ ಕಳೆದಿದ್ದಾರೆ.ಅವರ ಮನೆ,ಸುತ್ತಲಿನ ವಿಶಾಲ ಉದ್ಯಾನ ಈಗ ಬಾಲವನ ಎಂದು ಪ್ರಸಿದ್ಧಿ ಪಡೆದಿದೆ.ಕನ್ನಡದ ಮೊದಲ ಶಬ್ದಕೋಶ ಕಿಟ್ಟೆಲ್ ಡಿಕ್ಷನರಿ ಪ್ರಿಂಟಾಗಿದ್ದು ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್ ನಲ್ಲಿ.

ಬರೆಯುತ್ತಾ ಹೋದರೆ ಮುಗಿಯುವಂತೆ ಕಾಣುತ್ತಿಲ್ಲ.ಇವೆಲ್ಲ ನನ್ನ ನೆನಪಿನ ಪುಟಗಳನ್ನ ಕೆದಕಿ ಬರೆದದ್ದು.ಅಲ್ಪ ಸ್ವಲ್ಪ ವ್ಯತ್ಯಾಸ ಗಳಿದ್ದರೆ ಮನ್ನಿಸಿ.ತಪ್ಪದೆ ಈ ಬೇಸಿಗೆಯಲ್ಲಿ ನಮ್ಮೂರಿಗೆ ಭೇಟಿ ನೀಡಲು ಮರೆಯದಿರಿ.

                 🌴🌴🌴🌴

✍️.. ಅನಿತಾ ಜಿ.ಕೆ.ಭಟ್
22-01-2020.
ಚಿತ್ರ: ಗೂಗಲ್ ಕೃಪೆ.
ಕಥಾ ಅರಮನೆ ಯ ಥೀಂ ಗೆ ಬರೆದ ಲೇಖನ.'ಪ್ರೋತ್ಸಾಹ ಬರವಣಿಗೆ ' ಎಂದು ಅಭಿನಂದನೆ ಪಡೆದಿದೆ.

********************************

2 comments:

  1. ನಮ್ಮ ಊರು ತುಂಬಾ ಚಂದ...

    ReplyDelete
  2. ಹೌದು ನಿಜ..ನಮ್ಮ ಊರು ನಮಗೆ ಸೊಗಸು... ಧನ್ಯವಾದಗಳು 💐🙏.

    ReplyDelete