ಜೀವನ ಮೈತ್ರಿ ಭಾಗ ೬೬
ಮಂಗಳಮ್ಮನ ಕಣ್ಣಿನಿಂದ ಹನಿಗಳು ಉದುರುವುದನ್ನು ಕಂಡು ಶಾಸ್ತ್ರಿಗಳಿಗೂ ನೋವಾಯಿತು .ಅಕ್ಕನ ನಡತೆ ಅವರಿಗೆ ಎಳ್ಳಷ್ಟೂ ಸರಿಕಾಣಲಿಲ್ಲ.
"ಮಂಗಳ... ಶಶಿ ಅದೆಷ್ಟು ಬದಲಾಗಿದ್ದಾಳೆ. ನಮ್ಮ ಮನೆತನದಲ್ಲಿ ಇದುವರೆಗೆ ಯಾರನ್ನೂ ಕೂಡ ಅಷ್ಟು ಅಸಡ್ಡೆಯಿಂದ ನಾವು ಕಂಡಿಲ್ಲ. ನನ್ನ ತಂದೆ ತಾಯಿಗಳು ಈ ರೀತಿ ಮಾಡುವುದನ್ನು ಹೇಳಿಕೊಟ್ಟಿಲ್ಲ... ತಾವೂ ಮಾಡಿಲ್ಲ.ಶಾಸ್ತ್ರಿ ಮನೆತನದ ಗೌರವವನ್ನು ಕಾಪಾಡಿಕೊಳ್ಳುತ್ತಾ ಸಂಪ್ರದಾಯವನ್ನು ಪಾಲಿಸುತ್ತಿದ್ದೇನೆ ಎನ್ನುವವಳ ನಡತೆ ಹೇಗಿದೆ..?"
"ರೀ..ನಾವೇನು ಮಾಡಲು ಸಾಧ್ಯ ..ಎಲ್ಲಾ ಅವರವರು ಕಲಿತುಕೊಂಡದ್ದು.ತವರು ಮನೆಯಲ್ಲಿ ಒಳ್ಳೆಯ ಸಂಸ್ಕಾರವನ್ನು ಕಲಿಸಿದರೂ ಸಹ ಪತಿಯ ಮನೆಯಲ್ಲಿ ಜೊತೆಗೆ ಒಡನಾಡುವ ನಾದಿನಿಯರನ್ನು, ಅತ್ತೆ, ಓರಗಿತ್ತಿಯನ್ನು ನೋಡಿ ಕೆಟ್ಟ ಸಂಸ್ಕಾರವನ್ನು ಅಳವಡಿಸಿಕೊಂಡಿರಬೇಕು.ಮುರಳಿಗೆ ಮೈತ್ರಿಯನ್ನು ಕೊಟ್ಟಿಲ್ಲ ಎಂಬ ನೋವು ಕೂಡ ಇದರ ಹಿಂದಿರಬಹುದು .ಏನೇ ಆದರೂ ಶುಭಕಾರ್ಯಕ್ಕೆ ಬಂದವರನ್ನು ಈ ರೀತಿ ನೋಡುವುದು ಮಾತ್ರ ಸರಿಯಲ್ಲ.."
"ಶಶಿಯಕ್ಕನಿಂದ ನಾನು ಇಂತಹ ನಡೆಯನ್ನು ನಿರೀಕ್ಷಿಸಿರಲಿಲ್ಲ ಮಂಗಳ.."
"ಅವರ ಬುದ್ಧಿಗೆ ತಕ್ಕಂತೆ ಅವರ ನಡೆ. ನಾವು ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಸುವುದು ಬೇಡ .ಸಧ್ಯ ಮಗಳ ಮದುವೆ ಯೋಚನೆಯಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಿಕೊಳ್ಳೋಣ."
"ಇಂತಹವರ ಮಗನಿಗೆ ಮೈತ್ರಿಯನ್ನು ಕೊಟ್ಟಿದ್ದರೆ... ಒಂದು ಕ್ಷಣ ಯೋಚಿಸಿದಾಗ ಮೈ ಜುಮ್ಮೆನ್ನುತ್ತದೆ.."
"ದೇವರ ದಯ..ಮಗಳಿಗೆ ಒಳ್ಳೆ ಸಂಬಂಧ ದೊರಕಿದ್ದು. ಈ ಸಂದರ್ಭದಲ್ಲಿ 'ನೀವು ಮರ್ಯಾದೆ ಕೊಟ್ಟಿಲ್ಲ' ಎಂದು ನಾವು ಸೇಡು ತೀರಿಸಿಕೊಳ್ಳಲು ಹೋಗುವುದು ಬೇಡ. ನಮ್ಮ ಮಗಳು ಒಳ್ಳೆಯ ಸಂಸ್ಕಾರದಿಂದ ಬದುಕಿ ಬಾಳಿದರೆ ನಮಗೆ ಅಷ್ಟೇ ಸಾಕು .ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸೋಣ. ಕೇಡು ಬಗೆದವರಿಗೆ ದೈವವೇ ತಕ್ಕ ಶಿಕ್ಷೆಯನ್ನು ಪಾಟವನ್ನು ಕಲಿಸುತ್ತದೆ.."
ಹೀಗೆ ಇಬ್ಬರೂ ಅದೇ ವಿಷಯದಲ್ಲಿ ಚರ್ಚಿಸುತ್ತಾ ಇನ್ನೂ ಕೆಲವರ ಮನೆಗೆ ಕರೆಯೋಲೆಯನ್ನು ಹಂಚಿ ಮನೆಗೆ ಬಂದರು.ಮನೆಗೆ ಬರುತ್ತಲೇ ಮಹಾಲಕ್ಷ್ಮಿ ಅಮ್ಮ ಚಾವಡಿಯಲ್ಲಿ ನಿಂತು ಭಾಸ್ಕರನನ್ನು ಕೇಳಿದರು "ಮಗ ನೀವೇನು ಶಶಿ ಮನೆಯಲ್ಲಿ ಊಟ ಮಾಡದೆ ಪುರೋಹಿತರಲ್ಲಿ ಊಟ ಮಾಡಿದ್ದು...?"
"ಸಂದರ್ಭ ಹಾಗೆ ಬಂತು ..ಅದಕ್ಕಾಗಿ ಅಲ್ಲಿ ಉಂಡೆವು ..ಯಾವುದು ಪೂರ್ವನಿರ್ಧಾರಿತ ಅಲ್ಲ.."
"ಪಾಪ ...!!ಶಶಿ ಎಷ್ಟು ಬೇಸರ ಮಾಡಿಕೊಂಡಳು ಗೊತ್ತಾ..?"
ಅಮ್ಮನ ಮಾತನ್ನು ಕೇಳಿದ ಭಾಸ್ಕರ ಶಾಸ್ತ್ರಿಗಳಿಗೆ ಶಶಿಯ ಇನ್ನೊಂದು ಮುಖದ ಅನಾವರಣವಾಯಿತು .ಮಾಡುವುದೊಂದು.. ಅಮ್ಮನಲ್ಲಿ ಹೇಳುವುದು ಇನ್ನೊಂದು.ಏನೋ ಹೇಳಲು ಬಾಯೊಡೆದ ಗಂಡನನ್ನು ಮಂಗಳಾ ಕಣ್ಣಿನಲ್ಲೇ ಬೇಡ ಎಂದು ತಡೆದಳು.ಅಪರೂಪಕ್ಕೆ ಮಡದಿಯ ಮಾತನ್ನು ಪಾಲಿಸಿದರು ಶಾಸ್ತ್ರಿಗಳು.ಅವರಿಗೂ ಗೊತ್ತಿತ್ತು ಅಮ್ಮನಲ್ಲಿ ಶಶಿಯಕ್ಕನ ಬಗ್ಗೆ ಹೇಳಿದರೆ ಬಂಡೆಕಲ್ಲಿನ ಮೇಲೆ ನೀರು ಹೊಯ್ದಂತೆ ಎಂದು.
ಅಮ್ಮನಲ್ಲಿ ಏನೂ ಮಾತನಾಡದೆಯೇ ಸೀದಾ ಒಳ ನಡೆದರು ಶಾಸ್ತ್ರಿಗಳು. ಮಕ್ಕಳಲ್ಲಿ ಪರೀಕ್ಷೆಯ ಸುದ್ದಿಯನ್ನು ಕೇಳಿ"ಮುಂದಿನ ಪರೀಕ್ಷೆಗಾಗಿ ಚೆನ್ನಾಗಿ ತಯಾರಿ ನಡೆಸಿ " ಎಂದು ಇಬ್ಬರಿಗೂ ಸಲಹೆಯಿತ್ತರು.
ಮರುದಿನ ಮೈತ್ರಿ ಮತ್ತು ಮಂಗಳ ಇಬ್ಬರು ತರಲಿ ತೆರಳಿ ಬಟ್ಟೆಗಳನ್ನೆಲ್ಲಾ ಹೊಲಿಯಲು ಕೊಟ್ಟು ಬಂದರು. ಶಾಸ್ತ್ರಿಗಳು ಕೆಲವು ದಿನ ಕರೆಯೋಲೆಯನ್ನು ಹಂಚುವ ಕೆಲಸದಲ್ಲಿ ನಿರತರಾದರು.
****
ಗಣೇಶ ಶರ್ಮಾ ಮಗನಿಗೆ ಫೋನ್ ಮಾಡಿ "ಜವುಳಿ ಯಾವಾಗ ಬರುತ್ತೀಯಾ"ಎಂದು ಕೇಳಿದರೆ "ಒಂದೆರಡು ದಿನ ರಜೆ ಹಾಕಿ ಬರುತ್ತೇನೆ"ಎಂದ ಕಿಶನ್. ಅದೇ ದಿನಕ್ಕೆ ಮೇದಿನಿ ಚಾಂದಿನಿ ಕೂಡ ತಯಾರಾಗಿದ್ದರು ಸೀರೆ ಸೆಲೆಕ್ಷನ್ ಗೆ..
ಹೇಳಿದಂತೆ ಕಿಶನ್ ಆಗಮಿಸಿದ ..ಎಲ್ಲರೂ ಜೊತೆಯಾಗಿ ಹೋದರು ಮದುವೆಗೆ ಬೇಕಾದ ಬಟ್ಟೆಗಳನ್ನು ಕೊಂಡುಕೊಳ್ಳಲು .ಮೈತ್ರಿಗೆಂದು ಸಿಂಧೂರ ವರ್ಣದ ಕಾಂಜೀವರಂ ಸೀರೆಯನ್ನು ಖರೀದಿ ಮಾಡಿದರು. ಆಯ್ಕೆಯಲ್ಲಿ ಮೇದಿನಿ ಮತ್ತು ಚಾಂದಿನಿ ಇದ್ದುದರಿಂದ ಮಮತಾ ಸ್ವಲ್ಪ ನಿರಾಳರಾದರು.
ಮಾಂಗಲ್ಯ ಸರ ಕಂಡುಕೊಳ್ಳಲು ಮೈತ್ರಿಯನ್ನು "ಬಾ ಸೆಲೆಕ್ಷನ್ಗೆ " ಎಂದು ಕರೆದಿದ್ದರೂ ಆಕೆ ಫೈನಲ್ ಪರೀಕ್ಷೆ ಇರುವುದರಿಂದ ಸ್ವಲ್ಪ ಉದಾಸೀನ ತೋರಿಸಿದಾಗ... "ಅಡ್ಡಿಯಿಲ್ಲ" ಎಂದು ಕಿಶನ್ ಚಿನ್ನದ ಕಟ್ಟೆಯಿಂದಲೇ ಆಕೆಗೆ ಮಾಂಗಲ್ಯ ಸರವನ್ನು ಮೊಬೈಲ್ ಮೂಲಕ ತೋರಿಸಿ ಆಯ್ಕೆ ಮಾಡಲು ಹೇಳಿದ ಕಿಶನ್. ಆಕೆ ಹೇಳಿದ ಪ್ಯಾಟರ್ನ್ ಅನ್ನು ಆರು ಪವನ್ ಬಂಗಾರದಲ್ಲಿ ಮಾಡಿಸಿಕೊಡಲು ಹೇಳಿದರು. ಸೊಸೆಗೆ ಎಂದು ಎರಡು ಅಗಲದ ಚಿನ್ನದ ಬಳೆ, ಪುಟ್ಟ ನೆಕ್ಲೇಸ್ ಖರೀದಿ ಮಾಡಿದರು.
ಮನೆಗೆ ತೆರಳಿದ ಕೂಡಲೇ ಕಿಶನ್ ಮೈತ್ರಿ ಗೆ ಸಂದೇಶ ರವಾನಿಸಿದ
ಬಂಗಾರಿಗೆಂದು ಕೊಂಡೆನಿಂದು ಬಂಗಾರ
ಝರಿಸೀರೆಯು ಹೊತ್ತಿದೆ ವರ್ಣ ಸಿಂಧೂರ
ಮದುವೆಯ ದಿನಕ್ಕಾಗಿ ನಾನಿಲ್ಲಿ ಕಾತರ
ನೀ ಸಂದೇಶ ಕಳುಹಿಸದಿರೆ ಈ ಹೃದಯ ಭಾರ
ಕಿಶನ್ ನ ಸಂದೇಶವನ್ನು ಓದಿ ಕರೆ ಮಾಡಿದಳು ಮೈತ್ರಿ..
"ಹೇಗಾಯ್ತು ಸಾರಿ ಸೆಲೆಕ್ಷನ್.."
"ಮೊದಲ ಸಲಕ್ಕಿಂತ ಬೆಟರ್.. ಇವತ್ತು ತಂಗಿಯರಿಬ್ಬರು, ಅಮ್ಮ ಇದ್ದುದರಿಂದ ನನಗೇನೂ ಟೆನ್ಷನ್ ಇರಲಿಲ್ಲ.. ಆದರೂ.."
"ಆದರೂ.. ಸೆಲೆಕ್ಷನ್ ಗೆ ತುಂಬಾ ಹೊತ್ತು ಬೇಕಾಯ್ತು ಅಂತಾನಾ..?"
."ಅಲ್ಲ...ನನ್ನ ಮುದ್ಗೊಂಬೆಗೆ ಧಾರೆ ಸೀರೆಯನ್ನು ಫೈನಲ್ ಆಯ್ಕೆ ಮಾಡಿದ್ದು ನಾನೇ.. "
"ಹ್ಹ ಹ್ಹ ಹ್ಹಾ... ಹಾಗೆ .. ಹೌದು ಹೇಗೆ ಸೆಲೆಕ್ಟ್ ಮಾಡಿದ್ದು ಮೈಗೆ ಹಿಡಿದು ಕನ್ನಡಿಯಲ್ಲಿ ನೋಡ್ಕೊಂಡ್ರಾ..?😃😃"
"ಕಾಲೆಳೆಯೋದರಲ್ಲಿ ನೀನೂ ಭಾರೀ ಜೋರಾಗಿದ್ದೀಯಾ ...ಮುದ್ಗೊಂಬೆ.."
"ಇಲ್ಲಪ್ಪಾ...ನಾನು ಪಾಪದ ಕೂಸು..!! "
ಅದು ಇದು ಮಾತಾಡಿ ಕಾಲೆಳೆದು ಬಾಯ್ ಎಂದರು ಇಬ್ಬರೂ..
ತಂದೆ-ಮಗ ಇಬ್ಬರೂ ಮದುವೆಯ ವಿಷಯದಲ್ಲಿ ಸಾಕಷ್ಟು ಚರ್ಚಿಸಿದರು .ಆಗ ತಾನೆ ಮನೆಗೆ ಅಚ್ಚುಹಾಕಿಸಿ ತಂದಿದ್ದ ಮದುವೆಯ ಕರೆಯೋಲೆಯ ಮೇಲೆ ಕಣ್ಣಾಡಿಸಿದರು.
ಕಿಶನ್ ನಲ್ಲಿ ಗಣೇಶ ಶರ್ಮ "ಮಗ.. ನೀನು ಹೇಗೂ ಬಂದಿದ್ದೀಯಾ.. ಈ ಸಲವೇ ಮದುವೆಯ ಕರೆಯೋಲೆಯನ್ನು ಪುರೋಹಿತರಿಗೆ ಕೊಟ್ಟು ಬರೋಣ. ಆಗದೇ..?" ಎಂದು ಪ್ರಶ್ನಿಸಿದರು.." ಆಗಬಹುದು "ಎಂದು ಒಪ್ಪಿದ ಕಿಶನ್ .
ಮರುದಿನ ಬೆಳಗ್ಗೆ ಬೇಗನೇ ಗಣೇಶ ಶರ್ಮ ಮತ್ತು ಕಿಶನ್ ಮದುವೆಯ ಕರೆಯೋಲೆಯನ್ನು ತೆಗೆದುಕೊಂಡು ಹೊರಟರು. ಮೊದಲು ಗ್ರಾಮ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ನಂತರ ಕುಲಪುರೋಹಿತರಲ್ಲಿಗೆ ತೆರಳಿದರು.ಆ ದಿನ ಎಲ್ಲಿಯೂ ಕಾರ್ಯಕ್ರಮ ಇಲ್ಲದಿದ್ದುದರಿಂದ ಪುರೋಹಿತ ಶಂಕರನಾರಾಯಣ ಅವರು ಮನೆಯಲ್ಲಿಯೇ ಇದ್ದರು .ಗಣೇಶ ಶರ್ಮ ಮತ್ತು ಕಿಶನ್ ವಾಹನ ನಿಲ್ಲಿಸಿ ಕೈಕಾಲು ತೊಳೆದು ಪುರೋಹಿತರ ಮನೆಯ ಚಾವಡಿಗೆ ಬರುತ್ತಿದ್ದಂತೆ ಇವರನ್ನು ಗಂಭೀರವಾಗಿ ದಿಟ್ಟಿಸಿದರು ಪುರೋಹಿತರು.
ಮನೆಯೊಡತಿ ಬಾಯಾರಿಕೆ ತಂದುಕೊಟ್ಟರು. ಬಾಯಾರಿಕೆ ಕುಡಿದು ಗಣೇಶ್ ಶರ್ಮ ಮಗನ ಮದುವೆಯ ಕರೆಯೋಲೆಯನ್ನು ನೀಡಿದರು.ಎಲ್ಲಾ ಕಾರ್ಯಕ್ರಮಗಳನ್ನು ಸಾಂಗವಾಗಿ ನೆರವೇರಿಸಿ ಕೊಡಬೇಕೆಂದು ಕೋರಿದರು. ಬಹಳ ಗಂಭೀರವಾಗಿ ಮದುವೆಯ ಕರೆಯೋಲೆಯನ್ನು ವಿಮರ್ಶಾತ್ಮಕವಾಗಿ ಓದಿದ ಶಂಕರನಾರಾಯಣ ಪುರೋಹಿತರು ಕಿಶನ್ ನನ್ನ ಕಡೆಗೊಮ್ಮೆ ಕಣ್ಣೊಡೆದು ನೋಡಿದರು. ಆ ದೃಷ್ಟಿ ಹಿಂದಿನ ಅರ್ಥ ಕಿಶನ್ ಗೆ ಹೊಳೆಯಲಿಲ್ಲ.
ಒಂದೆರಡು ನಿಮಿಷ ಶಾಂತವಾಗಿ ಸುಮ್ಮನಿದ್ದ ಪುರೋಹಿತರು ನಂತರ
"ನನಗೆ ಈ ಮದುವೆ ಮಾಡಿಸಲು ಸಾಧ್ಯವಿಲ್ಲ .ಇಂತಹ ಲಜ್ಜೆಗೆಟ್ಟ ಯುವಜೋಡಿಯ ವಿವಾಹಕ್ಕೆ ನನ್ನಂತಹ ಸಂಪ್ರದಾಯಬದ್ಧ ಪುರೋಹಿತರು ಬೇಕಾಗಿಲ್ಲ. ಈ ವಿವಾಹವನ್ನೂ ಕೂಡಾ ಅವರೇ ಮಾಡಿಕೊಳ್ಳಲಿ .."ಎಂದು ಒಗಟಾಗಿ ನೋಡಿದರು. ಗಣೇಶ ಶರ್ಮ ಪುರೋಹಿತರಲ್ಲಿ "ನಿಮ್ಮ ಮಾತಿನ ಅರ್ಥ ನನಗೆ ತಿಳಿಯಲಿಲ್ಲ" ಎಂದರು .
"ಹೌದು ನಿನಗೆ ತಿಳಿಯದಿದ್ದದ್ದಕ್ಕೆ ಹೀಗೆಲ್ಲ ಆಗಿರೋದು.." ಎಂದರು.
ಗಣೇಶ ಶರ್ಮಾ ಮುಂದುವರಿಸುತ್ತಾ "ಪುರೋಹಿತರೇ... ನಿಮ್ಮ ಮನಸ್ಸಿನಲ್ಲಿರುವುದನ್ನು ವಿವರವಾಗಿ ತಿಳಿಸಿ.. ಒಗಟಿನಂತೆ ತಿಳಿಸಿದರೆ ನನಗೆ ಅರ್ಥವಾಗುವುದಿಲ್ಲ.. ಸುಮ್ಮನೆ ಸಮಯ
ವ್ಯರ್ಥ..ತಲೆಯೂ ಹಾಳು.." ಎಂದರು.
"ಎಲ್ಲಾ ನಿನ್ನ ಮಗನನ್ನು ಕೇಳು .ಎಲ್ಲಾ ಅವನೇ ಹೇಳುವನು..." ಎಂದಾಗ ಕಿಶನ್ ಕಕ್ಕಾಬಿಕ್ಕಿಯಾದ.
ಕಿಶನ್:-"ಪುರೋಹಿತರೇ ಅದೇನು ಅಂತ ಸರಿಯಾಗಿ ಹೇಳಬಾರದೇ..?"
ಪುರೋಹಿತರು:-"ನಾನು ಇಂತಹ ಮದುವೆಯನ್ನು ಮಾಡಿಸುವುದಿಲ್ಲ. ಸಂಪ್ರದಾಯಬದ್ಧವಾಗಿ ಹಿರಿಯರು ನಿರ್ಧರಿಸಿದ ಮದುವೆಯನ್ನು ಮಾತ್ರ ನಾನು ಮಾಡಿಸುವುದು. ಆಧುನಿಕ ಸಂಸ್ಕೃತಿಯನ್ನು ಅಪ್ಪಿಕೊಂಡು ನೈತಿಕತೆಯನ್ನು ಮಾರಿಕೊಂಡ ಯುವಜೋಡಿಯ ಮದುವೆ ನನ್ನಿಂದ ಮಾಡಿಸಲು ಸಾಧ್ಯವಿಲ್ಲ... ಅರ್ಥಮಾಡಿಕೊಳ್ಳಿ."
ಗಣೇಶ ಶರ್ಮಾ:- ಈ ವಿವಾಹವು ಸಂಪ್ರದಾಯಬದ್ಧವಾಗಿ ನಾವು ಎರಡು ಕಡೆಯ ಹಿರಿಯರು ಸೇರಿ ನಿರ್ಧರಿಸುವಂತಹದ್ದು. ಇದರಲ್ಲಿ ಎರಡು ಮಾತಿಲ್ಲ.
ಪುರೋಹಿತರು:- ಎಲ್ಲವೂ ಆದ ಮೇಲೆ ಎರಡು ಕಡೆಯವರಿಗೂ ಅನಿವಾರ್ಯತೆ ತಾನೇ..?
ಕಿಶನ್:-ಎಲ್ಲವೂ ಆದ ಮೇಲೆ ಅಂದರೇನು ..?ಅಂತಹ ಅನಿವಾರ್ಯತೆಯ ಪರಿಸ್ಥಿತಿಯನ್ನು ನಾವು ಸೃಷ್ಟಿಸಿಕೊಂಡಿಲ್ಲ. ನಿಮಗೆ ಏನಾದರೂ ಅಂತಹ ಗೊಂದಲವಿದ್ದರೆ ನೇರವಾಗಿ ಹೇಳಿ ಪರಿಹರಿಸಿಕೊಳ್ಳಬಹುದು.. ನಮಗೂ ತಿಳಿಯಲಿ ನಿಮಗೇನು ಅಸಮಾಧಾನವೆಂದು.
ಪುರೋಹಿತರು:- ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳದೆ ಇರುವವರಿಗೆ, ತಮ್ಮ ಹೆಸರನ್ನು ಕೆಡಿಸಿಕೊಂಡವರಿಗೆ ನಾನು ಪೌರೋಹಿತ್ಯ ಮಾಡುವುದಿಲ್ಲ.. ಸುಮ್ಮನೆ ಮಾತು ಬೇಡ..
ಕಿಶನ್:-ನಾನು ಬ್ರಹ್ಮಚರ್ಯವನ್ನು ಪಾಲಿಸಿಕೊಂಡು ಬಂದವನು.ನೀವು ಹೇಳಿದಂತೆ ಅಂತಹದ್ದು ನಮ್ಮ ಮಧ್ಯೆ ಏನೂ ನಡೆದಿಲ್ಲ.. ಆದರೂ ನಿಮಗೆ ಏನಾದರೂ ಅಂತ ಸುದ್ದಿ ಬಂದಿದ್ದರೆ ಈಗ ಅದನ್ನು ತಿಳಿಸಬೇಕು.
ಗಣೇಶ ಶರ್ಮ:-ನನ್ನ ಮಗನ ಬಗ್ಗೆ ಇಂತಹ ಆರೋಪ ಕೇಳಿ ನನಗೂ ಖೇದವಾಗಿದೆ. ದಯವಿಟ್ಟು ನಿಮಗೆ ಯಾರು ಅಂತ ಸುದ್ದಿ ತಲುಪಿಸಿದ್ದಾರೆ ಎಂದು ಹೇಳುವಿರಾ..
ಪುರೋಹಿತರು ಒಂದು ಕ್ಷಣ ಮೌನವಾದರು.
ಕಿಶನ್:-ಇಷ್ಟು ಆಪಾದನೆ ಹೊತ್ತ ಮೇಲೆ ನಾನು ಇಲ್ಲಿಗೆ ನಿಲ್ಲಿಸುವುದಿಲ್ಲ.. ಖಂಡಿತ ಆ ರೀತಿ ತಮಗೆ ಸುದ್ದಿ ಹಬ್ಬಿಸಿದವರು ಯಾರು ತಿಳಿಸಲೇ ಬೇಕು ..ಅನಾವಶ್ಯಕವಾಗಿ ಚಾರಿತ್ರ್ಯವಧೆ ಮಾಡುವುದೂ ಅಪರಾಧ.. ನಾನು ಯಾವತ್ತೂ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಕಂಡವನಲ್ಲ. ಸ್ತ್ರೀಯರನ್ನು ಗೌರವಿಸುವ ,ಹಿರಿಯರನ್ನು ಶಿರಬಾಗಿ ನಮಿಸುವ ಸಂಸ್ಕಾರವಂತ.
ಪುರೋಹಿತರು ಅವರ ಮಾತುಗಳನ್ನು ಕೇಳಿ ಆಲೋಚಿಸತೊಡಗಿದರು.ಬಹಳ ಸ್ಪಷ್ಟವಾಗಿ ಇಬ್ಬರೂ ನಿರಾಕರಿಸುತ್ತಿದ್ದಾರೆ. ಅಲ್ಲದೆ ನಾನು ಯಾರು ಹೇಳಿದ್ದಾರೆ ಎಂದು ಹೇಳಿದರೆ ....ಹೇಳಿದವರ ಮೇಲೆ ಅಪವಾದ ಹೊರಿಸಿದಂತೆ. ಸುಮ್ಮನಿದ್ದುಬಿಡುವುದೇ ಲೇಸು. ಅಲ್ಲದೆ ಆ ದಿನ ನನಗೆ ಯಾವುದೇ ಕಾರ್ಯಕ್ರಮಗಳಿಲ್ಲ.ಶಾಸ್ತ್ರಿಗಳ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಎಂದರೆ ಅದು ಒಂದು ಗೌರವವೇ ..ಸಾಕಷ್ಟು ದಕ್ಷಿಣೆಯನ್ನು ನೀಡುವ ಧಾರಾಳಿ ಶಾಸ್ತ್ರಿಗಳು.. ಅಲ್ಲದೆ ಇವನು ಕೂಡ ಇನ್ಫೋಸಿಸ್ನ ಸಾಫ್ಟ್ವೇರ್ ಇಂಜಿನಿಯರ್ ..ಸಾಕಷ್ಟು ದುಡ್ಡು ಇರಬಹುದು. ಎದುರು ಹಾಕಿಕೊಳ್ಳುವುದಕ್ಕಿಂತ ಒಪ್ಪುವುದೇ ಲೇಸು...
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
22-04-2020.
ಮುಂದಿನ ಭಾಗ.. ಶುಕ್ರವಾರ..