ಜಗತ್ತಿನಾದ್ಯಂತ ಕೋವಿಡ್ 19 ವೈರಾಣುವಿನ ವಿಷವರ್ತುಲ ಪ್ರಬಲವಾಗುತ್ತಿದೆ. ಈ ಹೆಮ್ಮಾರಿಯಿಂದ,ಇತರ ವೈರಾಣುಗಳಿಂದ ನಮ್ಮ ದೇಹವನ್ನು ರಕ್ಷಿಸಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರ ವಿಹಾರಗಳತ್ತ ಗಮನಹರಿಸಬೇಕು.ನಮ್ಮ ಸುತ್ತಮುತ್ತ ಸಿಗುವಂತಹ, ಅಡುಗೆಯಲ್ಲಿ ನಿತ್ಯವೂ ಬಳಸುವಂತಹ ಪದಾರ್ಥಗಳಿಂದ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಲು ಸಾಧ್ಯ.
ನಮ್ಮ ಮನೆಯ ಹಿತ್ತಲಲ್ಲಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳು ಇರುತ್ತವೆ.ಇದ್ದರೂ 'ಹಿತ್ತಲ ಗಿಡ ಮದ್ದಲ್ಲ' ಎಂಬ ನಮ್ಮ ಅಸಡ್ಡೆಯನ್ನು ಈಗ ಬದಿಗಿರಿಸಬೇಕಾಗಿದೆ.ಯಾವ ರೀತಿಯಲ್ಲಿ ಇವುಗಳನ್ನು ಬಳಸಬೇಕು ಎಂಬುದನ್ನು ನಮಗಿಂತ ಚೆನ್ನಾಗಿ ನಮ್ಮ ಹಿರಿಯರು ಅರಿತಿದ್ದರು.ನಾವು ಅಳವಡಿಸಿಕೊಳ್ಳದೆ ಇದ್ದ ಸರಳ ಮನೆಮದ್ದುಗಳು ಇಂದು ವೈರಾಣುವಿನ ವಿರುದ್ಧದ ನಮ್ಮ ಹೋರಾಟಕ್ಕೆ ಅತೀ ಅಗತ್ಯ.
ಪಾನಕಗಳು:-
ಕಾಳುಮೆಣಸು:- ಕಾಳುಮೆಣಸನ್ನು ಚೆನ್ನಾಗಿ ಗುದ್ದಿ ಪುಡಿಮಾಡಿಟ್ಟುಕೊಳ್ಳಿ.ಎಂಟು ಲೋಟ ನೀರಿಗೆ ಅರ್ಧ ಚಮಚ ಈ ಪುಡಿಯನ್ನು ಹಾಕಿ ಐದು ನಿಮಿಷ ಕುದಿಸಿ.ಚಿಟಿಕೆ ಅರಶಿನ ಪುಡಿ ಹಾಕಿ . ಆರಿದ ನಂತರ ಒಂದು ಲೋಟ ಪಾನಕಕ್ಕೆ ಒಂದು ಚಮಚ ಜೇನು ಬೆರೆಸಿ ಸೇವಿಸಿ.ಅಥವಾ ಕುಡಿಯುವಷ್ಟು ಬಿಸಿಯಿದ್ದಾಗ ಒಂದು ಚಮಚ ನಿಂಬೆರಸ ಸೇರಿಸಿ ಸೇವಿಸಿದರೆ ಗಂಟಲು ಕೆರೆತ,ಶೀತ , ಕೆಮ್ಮು ಶಮನವಾಗುತ್ತದೆ. ಬಾರದಂತೆಯೂ ತಡೆಯುತ್ತದೆ.
ತುಳಸಿ:- ಎರಡು ಲೋಟ ನೀರಿಗೆ ಒಂದು ಹಿಡಿ ತುಳಸಿ ದಳಗಳನ್ನು ಹಾಕಿ ಕುದಿಸಿ.ಹದವಾಗಿ ಬಿಸಿಯಿದ್ದಾಗ ನಿಂಬೆ ರಸದೊಂದಿಗೆ ಅಥವಾ ತಣ್ಣಗಾದ ನಂತರ ಜೇನುತುಪ್ಪದೊಂದಿಗೆ ಸೇವಿಸಿ.
ಅರ್ಧ ಕಪ್ ನಷ್ಟು ತುಳಸಿದಳಗಳನ್ನು ರುಬ್ಬಿ ಅದಕ್ಕೆ ನಾಲ್ಕೈದು ಚಮಚ ನಿಂಬೆರಸ ಸೇರಿಸಿ.ಎಂಟು ಲೋಟ ನೀರು ಕುದಿಸಿ ಬೆಲ್ಲ ಸೇರಿಸಿ.ಆರಿದ ನಂತರ ಇದಕ್ಕೆ ರುಬ್ಬಿದ ತುಳಸಿಯ ಮಿಶ್ರಣವನ್ನು ಸೇರಿಸಿ.ಏಲಕ್ಕಿ ಪುಡಿ ಬೆರೆಸಬೇಕು.ಇದನ್ನು ಖಾಲಿಹೊಟ್ಟೆಯಲ್ಲಿ ಕುಟುಂಬದ ಸದಸ್ಯರು ದಿನಕ್ಕೆ ಎರಡು ಬಾರಿ ಸೇವಿಸಬಹುದು.ವೈರಸ್ ಹತೋಟಿಗೆ,ಅಜೀರ್ಣದ ಸಮಸ್ಯೆಗೆ ಉತ್ತಮ ಪರಿಹಾರ.
ಪುದೀನಾ:- ಪುದೀನಾ ಎಲೆಗಳನ್ನು ಶುಂಠಿಯ ಜೊತೆ ಎಂಟು ಲೋಟ ನೀರಿನಲ್ಲಿ ಕುದಿಸಿ .ಕುಟುಂಬದ ಸದಸ್ಯರು ದಿನಕ್ಕೆ ಮೂರು ಬಾರಿ ಇದನ್ನು ಸೇವಿಸಬಹುದು.
ಅಮೃತ ಬಳ್ಳಿ,ಕಿರಾತಕಡ್ಡಿ,ಕಹಿಬೇವು, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು ಎಲ್ಲವನ್ನೂ ಜೊತೆಯಾಗಿ ಕುದಿಸಿ ಕೊನೆಯಲ್ಲಿ ಸ್ವಲ್ಪ ಬೆಲ್ಲ ಸೇರಿಸಿ.ನಿಂಬೆರಸ ಬೆರೆಸಿ ಸೇವಿಸಿ.ಇದು ಶೀತ ,ಕೆಮ್ಮು ,ಕಫ ,ಜ್ವರದ ಬಾಧೆಯನ್ನು ಹತೋಟಿಗೆ ತರುತ್ತದೆ.
ದೊಡ್ಡ ಪತ್ರೆ/ಸಾಂಬ್ರಾಣಿ ಎಲೆಗಳನ್ನು ಬಾಡಿಸಿಕೊಂಡು ರಸತೆಗೆದು ಚಮಚ ಜೇನಿನೊಂದಿಗೆ ಸೇವಿಸಿದರೆ ಶೀತ ಜ್ವರ ಹತೋಟಿಗೆ ಬರುತ್ತದೆ.ಹಾಗೆಯೇ ಸೊಪ್ಪನ್ನು ನೀರಿನಲ್ಲಿ ಕುದಿಸಿ ಬೆಲ್ಲ ಸೇರಿಸಿ ಕಷಾಯ ಕೂಡ ತಯಾರಿಸಬಹುದು.
ಆಡುಸೋಗೆ:- ಆಡುಸೋಗೆಯನ್ನು ಜಜ್ಜಿ ರಸವನ್ನು ಹಿಂಡಿ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಶ್ವಾಸಕೋಶದ ಸೋಂಕಿಗೆ ಉತ್ತಮ ಪರಿಹಾರ ದೊರೆಯುತ್ತದೆ.ನೀರಿನಲ್ಲಿ ಎಲೆಗಳನ್ನು ಕುದಿಸಿ ಸೋಸಿ ಜೇನುತುಪ್ಪ ದೊಂದಿಗೆ ಸಹ ಸೇವಿಸಬಹುದು.
ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ನಮ್ಮ ದೇಹದಲ್ಲಿ ರೋಗದ ವಿರುದ್ಧ ಹೋರಾಡುವ ಕೋಶಗಳ ಸಾಮರ್ಥ್ಯವನ್ನು ವೃದ್ಧಿಸುತ್ತದೆ.ತುಳಸಿಯು ಆಂಟಿವೈರಲ್ ಗುಣವನ್ನು ಹೊಂದಿದ್ದು ಶ್ವಾಸಕೋಶದ ಮತ್ತು ಉಸಿರಾಟದ ಸಮಸ್ಯೆಗಳಿಗೆ ಮನೆಮದ್ದು.ಅಮೃತಬಳ್ಳಿಯು ಸುಲಭವಾಗಿ ಬೆಳೆಯುವ ಸಸ್ಯವಾಗಿದ್ದು ಜ್ವರವನ್ನು ಶಮನಗೊಳಿಸಿ ದೇಹದ ವೈರಿಣುಗಳ ವಿರುದ್ಧ ಹೋರಾಡುವ ಗುಣವನ್ನು ವರ್ಧಿಸಲು ಸಹಾಯಕ.ಕಹಿಬೇವು ರೋಗನಿರೋಧಕ ಶಕ್ತಿಯನ್ನು ವರ್ಧಿಸುವುದರಲ್ಲಿ ಎತ್ತಿದ ಕೈ.ಅರಿಶಿನವು ನಂಜು ನಿರೋಧಕವಾಗಿದ್ದು, ಸೌಂದರ್ಯ ವರ್ಧಕ ಕೂಡ ಹೌದು.
ಆಹಾರದಲ್ಲಿ ನೆಲ್ಲಿಕಾಯಿ ಬಳಸುವುದು ನಮ್ಮಲ್ಲಿ ಇಂದಿಗೂ ಮುಂದುವರಿದಿದೆ. ನೆಲ್ಲಿಕಾಯಿ ತೊಕ್ಕು,ನೆಲ್ಲಿಚಟ್ಟು, ನೆಲ್ಲಿಕಾಯಿ ಪುಡಿ,ಉಪ್ಪಿನಲ್ಲಿ ಅದ್ದಿದ ನೆಲ್ಲಿಕಾಯಿ.. ಹೀಗೆ ಹಲವು ವಿಧಾನದಲ್ಲಿ ಬೆಟ್ಟದ ನೆಲ್ಲಿಕಾಯಿಯನ್ನು ಶೇಖರಿಸಿಟ್ಟು ಬಳಸುತ್ತೇವೆ.ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿಯನ್ನು ವರ್ಧಿಸುವುದರಲ್ಲಿ ಎರಡು ಮಾತಿಲ್ಲ.ಉಪ್ಪಿನಲ್ಲಿರಿಸಿದ ನೆಲ್ಲಿಕಾಯಿಯಿಂದ ಚಟ್ನಿ,ತುಂಬುಳಿ ಮಾಡಿ ಅನ್ನದ ಜೊತೆ ಸೇವಿಸಬಹುದು.ನಾಲಿಗೆಗೂ ರುಚಿ , ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.
ಅಡುಗೆಯಲ್ಲಿ ಬಳಕೆಯಾಗುವ ಕೊತ್ತಂಬರಿ, ಜೀರಿಗೆ, ಮೆಂತ್ಯ,ಚಕ್ಕೆ , ಶುಂಠಿ ...ಇವುಗಳು ಕೂಡ ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.ನಾಲ್ಕು ಚಮಚ ಕೊತ್ತಂಬರಿ ಬೀಜ, ಎರಡು ಚಮಚ ಜೀರಿಗೆ, ಒಂದು ಚಮಚ ಮೆಂತ್ಯ,ಸಣ್ಣ ತುಂಡು ಒಣ ಶುಂಠಿ, ಐದು ಕಾಳುಮೆಣಸು .. ಇವುಗಳನ್ನು ಹುರಿದು ಪುಡಿಮಾಡಿಟ್ಟುಕೊಳ್ಳಿ.ಇದರಿಂದ ಕಷಾಯ ತಯಾರಿಸಿ ಹಾಲು ಬೆರೆಸಿ ಸೇವಿಸಬಹುದು.ಕಾಫಿ ಟೀ ಗಿಂತ ಉತ್ತಮ.
ಸಾಂಕ್ರಾಮಿಕ ರೋಗ ಹರಡದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುತ್ತಾ ಆಗಾಗ್ಗೆ ಬಿಸಿಯಾದ ನೀರನ್ನು ಸೇವಿಸಬೇಕು. ಉಪ್ಪುನೀರಿನಲ್ಲಿ ಗಾರ್ಗಲ್ ಮಾಡಿಕೊಳ್ಳಬೇಕು.ಹೊರಗಡೆ ಹೋಗಬೇಕಾದಾಗ ಮನೆಯಲ್ಲೇ ತಯಾರಿಸಿದ ಕಾಟನ್ ಮಾಸ್ಕ್ ಧರಿಸಿ.
ಇವುಗಳೆಲ್ಲಕ್ಕಿಂತ ಮುಖ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛವಾಗಿ ಕೈ ತೊಳೆದುಕೊಳ್ಳುವುದು ,ಆಗಾಗ ಕಣ್ಣು ಮೂಗು ಮುಟ್ಟದಿರುವುದು, ನಮ್ಮ ಮನೆಯಲ್ಲೇ ಇದ್ದು ವೈರಾಣುವಿನ ಸಂಪರ್ಕಕ್ಕೆ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು.. .ನಮ್ಮ ದೇಹವನ್ನು ರಕ್ಷಿಸಿಕೊಂಡು ಇತರರಿಗೂ ನಮ್ಮಿಂದ ಹರಡದಂತೆ ಎಚ್ಚರವಹಿಸೋಣ.
(ಸಾಧಾರ)
✍️... ಅನಿತಾ ಜಿ.ಕೆ.ಭಟ್.
26-04-2020.
Momspresso Kannada ಮತ್ತು Pratilipi Kannada ದಲ್ಲಿ ಪ್ರಕಟಿಸಿದ ಬರಹ.
No comments:
Post a Comment