Sunday, 19 April 2020

ಜೀವನ ಮೈತ್ರಿ ಭಾಗ ೬೫(65)



ಜೀವನ ಮೈತ್ರಿ ಭಾಗ ೬೫

            ಕೇಶವ ತನ್ನ ಆಫೀಸಿನಲ್ಲಿದ್ದ ಸಹೋದ್ಯೋಗಿಗಳನ್ನು ಬಹಳ ಬೇಗನೆ ಪರಿಚಯ ಮಾಡಿಕೊಂಡನು.ಒಂದು ತಿಂಗಳು ಆಫೀಸಿನಲ್ಲಿ ಕೆಲಸ ಮಾಡಿ ಅನುಭವ ಆದನಂತರ ಅರ್ಧ ದಿನ    ಫೀಲ್ಡ್ ವರ್ಕ್ ಕೊಡಲಾಗುವುದು ಎಂದು ಟೀಮ್ ಲೀಡರ್ ಹೇಳಿದರು. ಅವನ ಹತ್ತಿರವೇ ಕುಳಿತಿದ್ದ ಧನಂಜಯ ಕೆಲಸ ಗೊತ್ತಿಲ್ಲದಿದ್ದರೆ ಹೇಳಿಕೊಡುತ್ತಿದ್ದ. ಸಂಜೆ 6:00 ವರೆಗೂ ದುಡಿದು ಬಸ್ ಹತ್ತಿ ಮಾವನ ಮನೆಗೆ ವಾಪಸಾದ.

           ಮನೆಗೆ ಮರಳುವಾಗ ಸಮಯ 7.30 ಆಗಿತ್ತು .ಸೌಜನ್ಯ ಪತಿಯ ದಾರಿ ಕಾಯುತ್ತಿದ್ದಳು. ಪತಿಯನ್ನು ಬಿಟ್ಟಿರುವುದು  ಆಕೆಗೆ ಎಂದು ಬಹಳ ಪ್ರಯಾಸದ ಕೆಲಸವಾಗಿತ್ತು . ಕ್ಷಣಕ್ಷಣವೂ ಕೇಶವನ ಮುಖವೇ ಕಣ್ಣಮುಂದೆ ಬರುತ್ತಿತ್ತು. ಕೇಶವ ಬಂದಾಗಲೇ ಅವನಿಗೆ ತಾಗಿ ನಿಂತ ಮೆಲ್ಲನೆ ಬೆನ್ನನ್ನು ಸವರಿದಳು. ಕೇಶವನು ಅಷ್ಟೇ.. ತನ್ನ ಕೈಗಳನ್ನು ಮಡದಿಯ ಹೆಗಲ ಮೇಲಿಟ್ಟು ಕಣ್ಣಲ್ಲೇ ಮುತ್ತಿನ ಮಳೆಗರೆದ..

"ರಾಜಾ ಹೇಗಾಯಿತು ಆಫೀಸ್ ಕೆಲಸ..?"

"ಅಂದಾಜು ಮಾಡಿದ್ದಕ್ಕಿಂತ ಖುಷಿಯಾಗಿ ಇತ್ತು. ನನ್ನ ಗೆಳೆಯ ಜೊತೆಗಿರುವುದರಿಂದ ಕಷ್ಟವಾಗಿಲ್ಲ ನನಗೆ ಹೊಸ ಪರಿಸರ ಇಷ್ಟವಾಯಿತು. ಇಷ್ಟವಾದರೆ ಯಾವ ಕೆಲಸವೂ ಕಠಿಣವಲ್ಲ."

"ಆಗಲಿ. ಒಂದು ಉದ್ಯೋಗವಾದರೂ ದೊರೆಯಿತಲ್ಲ. ಅಷ್ಟಾದರೂ ಸ್ವಂತ ಸಂಪಾದನೆ ಇದೆಯೆಂದು ತೃಪ್ತಿ.."

" ನಾವೇ ದುಡಿದ ಹಣ ನಮ್ಮ ಕೈಯಲ್ಲಿದ್ದರೆ ಅದರಲ್ಲಿ ಒಂದು ಸಂತೃಪ್ತಿಯೇ ಬೇರೆ. ನಾನಂತೂ ಪರರ ದುಡ್ಡಿಗಾಗಿ ಕೈಚಾಚಲು ಇಷ್ಟಪಡುವವನಲ್ಲ."


"ರಾಜ .. ನನ್ನ ಅಪ್ಪ-ಅಮ್ಮ ನನ್ನ ಪರರು ಎಂದು ಭಾವಿಸಬೇಡಿ. ಅವರಿಗೆ ನೀವು ಮಗನಂತೆ."

"ಅತ್ತೆ-ಮಾವ ಪರರು ಎಂದಲ್ಲ. ಆದರೂ ನನಗೆ ನನ್ನದೇ ಆದ ಸ್ವಾಭಿಮಾನ ಅನ್ನೋದು ಇದೆ."

"ಸ್ವಾಭಿಮಾನ ಒಳ್ಳೆಯದೇ..ಹಾಗೆಂದು ಅತಿಯಾದಲ್ಲಿ ಒಳ್ಳೆಯದಲ್ಲ. ಅದು ಅಹಂ ಅನ್ನು ತರುತ್ತದೆ . ಹೊಂದಾಣಿಕೆ ಮಾಡಿಕೊಳ್ಳಲು  ಕಷ್ಟವಾಗುತ್ತದೆ."


"ನಮ್ಮ ಕಾಲ ಮೇಲೆ ನಾನೇ ನಿಲ್ಲಬೇಕು ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಹಿರಿಯರಿಂದ ಬಂದ ದುಡ್ಡು ,ಅಂತಸ್ತು ಯಾವತ್ತೂ ಶಾಶ್ವತವಲ್ಲ. ನಮ್ಮ ಜೀವನವನ್ನು ನಾವೇ ರೂಪಿಸಿಕೊಂಡಾಗ ಅದರಲ್ಲಿ ಒಂದು ಮಜವೇ ಬೇರೆ."


"ಹಿರಿಯರಿಂದ ಬಂದ್ದು  ಜೊತೆಜೊತೆಗೆ ಇರಲಿ. ನಮ್ಮದು ಕೂಡ ಅದಕ್ಕೆ ಸೇರಲಿ. ಹಿರಿಯರು ದುಡಿದು ಕೂಡಿಡುವುದು ಮಕ್ಕಳಿಗೆ ಮೊಮ್ಮಕ್ಕಳಿಗೆ ಅಂತ ತಾನೇ...?"


"ಅಲ್ಲವೆಂದು ನಾನು ಹೇಳುತ್ತಿಲ್ಲ ಸೌಜನ್ಯ. ಆದರೆ ಲಕ್ಷ್ಮಿ ಯಾವತ್ತು ಚಂಚಲೆ. ಅಂದರೆ ದುಡ್ಡು ನಿಂತಲ್ಲಿ ನಿಲ್ಲುವುದಿಲ್ಲ.ಅದು ಚಲಿಸುತ್ತಲೇ ಇರುತ್ತದೆ. ಆದರೆ ಸರಸ್ವತಿ ಸ್ಥಿರೆ.. ಅವಳು ಆಗಾಗ ಸ್ಥಾನಪಲ್ಲಟ ಮಾಡುವವಳಲ್ಲ.
 ಹಿರಿಯರು ನಮಗೆ ಕಲಿಸಿದ ವಿದ್ಯೆ ,ಬುದ್ಧಿ ನಮ್ಮನ್ನು ಕಠಿಣ ಸಂದರ್ಭದಲ್ಲಿ ತಲೆಯೆತ್ತಿ ನಿಲ್ಲುವಂತೆ ಮಾಡುತ್ತದೆ. ಇದನ್ನು ಯಾರಿಂದಲೂ ಕೊಳ್ಳೆ ಹೊಡೆಯುವುದಕ್ಕೆ ,ನನ್ನ ಆಸ್ತಿ..ನನಗೆ ಪಾಲು ಕೊಡು ಎನ್ನುವುದಕ್ಕೆ  ಸಾಧ್ಯವೇ ಇಲ್ಲ. ನಾನು ಕಲಿತ ವಿದ್ಯೆ ನನ್ನ ಕುಟುಂಬವನ್ನು ಮೂರು ಹೊತ್ತು ಹೊಟ್ಟೆ ತುಂಬ ಉಣಿಸಲು ಸಾಕು."

      ಹೀಗಂದ ಗಂಡನನ್ನು "ಹೋಗಿ ಪ್ರೆಶ್ ಆಗಿ ಬನ್ನಿ.. ತಿಂಡಿ ಮಾಡಿಕೊಡುತ್ತೇನೆ " ಎಂದಳು. ಅಮೇಲೆ ಅವಳ ಮನಸ್ಸು ಏನೆಲ್ಲ ಯೋಚಿಸುತ್ತಿತ್ತು. ನಾನು ಅಂದಾಜು ಮಾಡಿದ್ದೇನು..? .ಶ್ರೀಮಂತ ಮನೆತನದ ಯುವಕ ಹಳ್ಳಿಯಾದರೂ ಚೆನ್ನಾಗಿ ಜೀವಿಸಬಹುದೆಂದು.. ಆದರೆ ಹಣೆಯಲ್ಲಿ ಬರೆದಿಲ್ಲವಲ್ಲ ...ಏನು ಮಾಡುವುದು. ಗಂಡ ಸ್ವಾಭಿಮಾನಿ.  ತಂದೆಯವರ ಬಳಿ ಕೂಡ ಕೈಯೊಡ್ಡುವುದಕ್ಕೆ ಇಷ್ಟಪಡಲಾರರು ಎಂದು ಕಾಣುತ್ತಿದೆ . ಒಂದು ದೃಷ್ಟಿಯಿಂದ ಒಳ್ಳೆಯದೇ.. ಆದರೂ ಇನ್ನೊಂದು ದೃಷ್ಟಿಯಿಂದ ಯೋಚಿಸಿದರೆ ಬೇಸರವೂ ಮೂಡುತ್ತಿದೆ.ಎಷ್ಟು ಶ್ರೀಮಂತಿಕೆಯಲ್ಲಿ ಅಪ್ಪ-ಅಮ್ಮನ ಪ್ರೀತಿಯಲ್ಲಿ ಬೆಳೆದವಳಿಗೆ ಗಂಡನ ಕೆಲವೇ ಕೆಲವು ಸಾವಿರ ರೂಪಾಯಿಗಳಲ್ಲಿ ಬದುಕುವ ಅನಿವಾರ್ಯತೆ. ನಾನು ಕೆಲಸಕ್ಕೆ ಹೋದರೆ ಹೇಗೆ....?ಎಂಬ ಯೋಚನೆ ಮನದಲ್ಲಿ ಮೂಡಿತು.


        ಗಂಡನಿಗೆ ತಿಂಡಿ ಬಡಿಸಿ ತಾನೂ ತಿಂದಾಗ ಅಪ್ಪ-ಅಮ್ಮ ಆಫೀಸಿನಿಂದ ಬಂದಿದ್ದರು. ಬರುತ್ತಲೇ ಅಳಿಯನನ್ನು ವಿಚಾರಿಸಿಕೊಂಡರು. ಅಪ್ಪ-ಅಮ್ಮನಿಗೂ ತಿಂಡಿ ಬಡಿಸಿದಳು ಸೌಜನ್ಯ. "ನೀನು ಕಷ್ಟ ತೆಗೆದುಕೊಳ್ಳುವುದು ಬೇಡ.. ನಾವೇ ಮಾಡುತ್ತೇವೆ ಹಾಕಿಕೊಳ್ಳುತ್ತೇವೆ." ಎಂದರು ಅಮ್ಮ. ಎಷ್ಟಾದರೂ ತಾಯಿ ಹೃದಯ ತಾನೆ..?


    ಸೌಜನ್ಯ ಕೇಶವ ರೂಮಿನಲ್ಲಿದ್ದಾನೆಂದು  ರೂಮಿಗೆ ತೆರಳಿದಳು. ಸಣ್ಣದನಿಯಲ್ಲಿ ಹಾಡೊಂದನ್ನು ಗುನುಗುತ್ತಿದ್ದ ಕೇಶವ ಮಡದಿಯ ಹತ್ತಿರ ಮೆಲ್ಲನೆ ಸರಿದು "ಏನು ಮಹಾರಾಣಿಯವರು ಬೇಗನೆ ಚಿತ್ತೈಸಿದ್ದು..?"ಎಂದ.

"ಏನಿಲ್ಲ ..ತಮ್ಮೊಡನೆ ಹರಟೋಣ ಎಂದು.."

ಬೆಡ್ ಮೇಲೆ ಕುಳಿತ ಸೌಜನ್ಯಳ ತೊಡೆಯಲ್ಲಿ ತಲೆಯಿಟ್ಟು ತುಂಟತನದಿಂದ ನಕ್ಕ ಕೇಶವ. ಅವಳ ಕೈಗಳು ಅವನ ಕೂದಲಿನ ಜತೆಗೆ ಸರಸವಾಡಿದವು. ವಾತ್ಸಲ್ಯದ ಹೊಳೆ ಹರಿಸಿದಳು ಪತ್ನಿ ಸೌಜನ್ಯ..ಅವಳ ಸನಿಹ ಕೇಶವನಿಗೆ ದಿನದ ಆಯಾಸವನ್ನು  ಮರೆಸಿತ್ತು. ಸೌಜನ್ಯ "ನನ್ನ ಕೈಗಳು ಘಮ್ಮೆನ್ನುತ್ತಿವೆ.. ಅದೆಷ್ಟು  ರುಚಿಕರವಾಗಿ ಅಡುಗೆ ಮಾಡುತ್ತೀಯಾ.."

"ಅದರಲ್ಲಿ ಹೊಗಳುವುದು ಏನಿದೆ..? ಮಾಡಬೇಕಾದದ್ದೇ ತಾನೇ..?"

"ಅಂತೂ ನಾನು ಬಹಳ ಅದೃಷ್ಟವಂತ. ಅಡುಗೆ ನೇ ಬರಲ್ಲ ನಿಂಗೆ ಅಂತ ಅಂದುಕೊಂಡಿದ್ದೆ.."

"ರಾಜಾ.. ಅದೆಲ್ಲ ಈಗ ಬೇಕಾ .. ರುಚಿಯಾಗಿ ಅಡುಗೆ ಮಾಡಿಕೊಡುತ್ತೇನೆ ಅಷ್ಟು ಸಾಲಲ್ಲವಾ.."

" ಸಾಕು ..ಆದರೂ ನನಗೆ  ಕುತೂಹಲ.. ನನ್ನ ರಾಣಿ ಮದುವೆಗೆ ಮೊದಲು ಅಡುಗೆ ಏನೂ ಬರಲ್ಲ ಅಂದದ್ದೇಕೆ..."

"(ಕೇಶವನ ಗಲ್ಲ ಹಿಂಡುತ್ತಾ) ಸುಮ್ಮನೆ ಅಂದೆ.ಅಡುಗೆ ಮಾಡಲು ಬರುತ್ತದೆ ಅಂದರೆ ಅಷ್ಟು ದೊಡ್ಡ ಮನೆಯಲ್ಲಿ ಆಳುಕಾಳುಗಳಿಗೆ ಸಮೇತ ಅಡುಗೆ ಮಾಡಿ ಹಾಕಬೇಕಾದರೆ ತುಂಬಾ ಕಷ್ಟವಿದೆ.. ಇಲ್ಲಿ ಪಟ್ಟಣದಲ್ಲಿ ಹದಿನೈದು ಚಪಾತಿ ಮಾಡಬೇಕಾದರೆ ..ಹಳ್ಳಿಯಲ್ಲಾದರೆ 50 ಮಾಡಬೇಕಾದೀತು.ಮದುವೆಯಾದ ಆರಂಭದಲ್ಲಿಯೇ ನನ್ನ ಮೇಲೆ ಜವಾಬ್ದಾರಿ ಎಲ್ಲ  ಹೊರಿಸಿ ಬಿಟ್ಟರೆ ...ಎಂಬ ಭಯದಿಂದ ಆ ರೀತಿ ಹೇಳಿದೆ.. ಪ್ಲೀಸ್ ರಾಜ ಏನೋ ಅಂದುಕೊಳ್ಳಬೇಡಿ.." ಎನ್ನುತ್ತಾ ಬೆರಳುಗಳನ್ನು ಎದೆಯ ಮೇಲೆ ಇರಿಸಿದಳು. ಕೇಶವ ಕರಗಿಹೋದ.


       ಹೆಣ್ಣುಮಕ್ಕಳಿಗೆ ಅದೆಷ್ಟು ಚಾಣಾಕ್ಷತೆ.ನಾವು ಗಂಡಸರು ಮದುವೆ ಅಂದರೆ ಮಡದಿ ಪಕ್ಕಕ್ಕೆ ಬರುವಲ್ಲಿವರೆಗೆ ಮಾತ್ರ ಯೋಚನೆ ಮಾಡೋದು..ಅದರಿಂದ ಮುಂದಿನ ವಿಷಯಕ್ಕೆ ಅಷ್ಟಾಗಿ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ.ಇವರು ಅಬ್ಬಾ...!!ಭಯಂಕರ ಮಂಡೆ..!!
 ದುರಾಲೋಚನೆ -- ದೂರಾಲೋಚನೆ  ..ತನ್ನ ಮೇಲೆ ಯಾರೂ  ಹೆಚ್ಚು ಜವಾಬ್ದಾರಿ ಹೊರಿಸದಂತೆ ಮೊದಲೇ ಬೇಲಿ ಹಾಕಿಕೊಳ್ಳುತ್ತಾರೆ...ನಾಟಕ ಮಾಡುವುದರಲ್ಲಿ ಎಕ್ಸ್ಪರ್ಟ್..ಯಾವ ಮಾತನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂದೇ ತಿಳಿಯದು.ಪಕ್ಕಾ ಪ್ಲಾನ್ಡ್ ಬಿಹೇವಿಯರ್..!!


          ಮಾತನಾಡದೆ ಸುಮ್ಮನಿದ್ದ ಕೇಶವನಲ್ಲಿ ಉದ್ಯೋಗಕ್ಕೆ ತೆರಳಬೇಕೆಂಬ ತನ್ನಾಸೆಯನ್ನು ಅರುಹಿದಳು.ಕೇಶವನ ಮೌನವೇ ಉತ್ತರವಾಗಿತ್ತು.ತಾನೊಂದು ಉದ್ಯೋಗ ಹಿಡಿದು ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳಬೇಕು.ಮಡದಿ ಸೌಜನ್ಯ ಮನೆಯಲ್ಲಿ ಇದ್ದು ತನ್ನ ಇಷ್ಟಾರ್ಥಗಳನ್ನು ಪೂರೈಸುತ್ತಾ ಮನೆಯನ್ನು ನಿಭಾಯಿಸಬೇಕು ಎಂದು ಅವನ ಇಚ್ಛೆಯಾಗಿತ್ತು.ಹಾಗೆಂದು ಖಡಕ್ಕಾಗಿ ಸೌಜನ್ಯ ಳಲ್ಲಿ ಹೇಳುವ ಮನಸ್ಸಾಗಲಿಲ್ಲ.ಸಮಾಧಾನದಲ್ಲಿ ತಿಳಿಸಿ ಹೇಳೋಣ.ಎಂದು  ಯೋಚಿಸುತ್ತಾ ಕಣ್ಮುಚ್ಚಿಕೊಂಡ ಪತಿಯನ್ನು ಕಂಡು ಸೌಜನ್ಯಾ ಳಿಗೆ ನಿರಾಸೆಯಾಯಿತು.



            *********


           ಭಾಸ್ಕರ ಶಾಸ್ತ್ರಿಗಳು ಮತ್ತು ಮಂಗಳಮ್ಮ ಮಗಳ ಮದುವೆ ಕಾಗದವನ್ನು ಕರೆಯೋಲೆಯನ್ನು ಕುಲ ಪುರೋಹಿತರ ಮನೆಗೆ ಕೊಡಲು ಹೊರಟರು.ಶ್ಯಾಮ ಶಾಸ್ತ್ರಿಗಳು ಅಲ್ಲೇ ಹತ್ತಿರ ಇರುವ ನೆಂಟರ ಹೆಸರುಗಳನ್ನು ಮಗನಿಗೆ ನೆನಪಿಸಿದರು.  ಆಗ ಬಂದ ಮಹಾಲಕ್ಷ್ಮಿ ಅಮ್ಮ "ಶಶಿಯ ಮನೆ ಇರುವುದು ಆ ಕಡೆಯೇ.ಅಲ್ಲಿಗೆ ಹೋಗಿ ಮದುವೆ ಕರೆಯೋಲೆ, ಸೀರೆ, ವಸ್ತ್ರಗಳನ್ನು ಕೊಟ್ಟು ಬನ್ನಿ ಎಂದರು. ಹಾಗೆಯೇ ಶಶಿ ಹಾಗೂ ಅಳಿಯಂದಿರನ್ನು ಪ್ರೀತಿಯಿಂದ ಆಹ್ವಾನಿಸುವುದನ್ನು ಮರೆಯಬೇಡಿ.. " ಎಂದ ಎಂದ ತಾಯಿಯ ಮಾತನ್ನು ಭಾಸ್ಕರ ಶಾಸ್ತ್ರಿಗಳು ಒಪ್ಪಿದರು.


      ಬೆಳಿಗ್ಗೆ ಮನೆಯಿಂದ ಒಮ್ಮೆಯ ಕೆಲಸಗಳನ್ನೆಲ್ಲಾ ಮಾಡಿ ಹೊರಟರು. ಹೊರಡುವಾಗಲೇ ಗಂಟೆ ಒಂಭತ್ತಾಗಿತ್ತು. ಮಂಗಳಾ  ಕರೆಯೋಲೆ ಸೀರೆ ವಸ್ತ್ರಗಳನ್ನು ನೆನಪುಮಾಡಿ ತೆಗೆದುಕೊಂಡಿದ್ದರು.ಮನೆಯಿಂದ ಹೊರಟವರು ಪೇಟೆಯಲ್ಲಿ ಅಗತ್ಯದ ಕೆಲಸಗಳನ್ನು ಮುಗಿಸಿಕೊಂಡು ಪುರೋಹಿತರ ಮನೆಗೆ ತಲುಪುವಾಗ ಸಮಯ ಹನ್ನೊಂದೂವರೆಯಾಗಿತ್ತು.ಪುರೋಹಿತರಾದ ಶಂಭಟ್ಟರು ಮಧ್ಯಾಹ್ನದ ಪೂಜೆಗೆ ಕುಳಿತಿದ್ದರು.ಪುರೋಹಿತರ ಪತ್ನಿ "ಪೂಜೆ ಆಗದೆ ಅವರು ಮಾತನಾಡಲಾರರು.ನೀವು ಕಾಯಬೇಕು "ಎಂದು ಹೇಳಿ ಬಾಯಾರಿಕೆ ತಯಾರಿಸಿ ಕೊಟ್ಟು ಉಪಚರಿಸಿದರು."ಮಧ್ಯಾಹ್ನದ ಊಟ ಇಲ್ಲಿಯೇ ಮಾಡಿ ಹೋಗಿ" ಎಂದು ಹೇಳುತ್ತಾ ಒಳನಡೆದರು.ಸೊಸೆಯಲ್ಲಿ" ಸ್ವಲ್ಪ ಬೆಳ್ತಿಗೆ ಅನ್ನ ಮಾಡು" ಎಂದು ಹೇಳಿ ಹೊರಗೆ ಬಂದು ಮಾತನಾಡುತ್ತಾ ಕುಳಿತರು.ಹನ್ನೆರಡೂವರೆಗೆ ಪೂಜಾ ಮಂಗಳಾರತಿಯನ್ನು ನೋಡುವ ಸೌಭಾಗ್ಯ ಶಾಸ್ತ್ರಿ ದಂಪತಿಗೆ ದೊರಕಿತು.ತೀರ್ಥ ಪ್ರಸಾದ ಸ್ವೀಕರಿಸಿದರು.


         ಹತ್ತು ನಿಮಿಷದಲ್ಲಿ ಪುರೋಹಿತರು ಶಾಸ್ತ್ರಿಗಳಿಗೆ ನಮಸ್ಕರಿಸುತ್ತಾ ಹೊರಬಂದು ತಮ್ಮ ಎಂದಿನ ಹಲಸಿನ ಮರದ ಹಳೇ ಕುರ್ಚಿಯಲ್ಲಿ ಕುಳಿತರು.ಮದುವೆಯ ಕರೆಯೋಲೆಯನ್ನು ನೀಡಿ ನಮಸ್ಕರಿಸಿದ ದಂಪತಿಯನ್ನು ಹರಸಿ ವೈದಿಕ ಕಾರ್ಯಕ್ರಮ ಗಳಿಗೆ ಬೇಕಾದ ವಸ್ತುಗಳ ಪಟ್ಟಿಗಳನ್ನು ನೀಡಿ ಊಟ ಮಾಡಿ ಹೋಗುವಂತೆ ವಿನಂತಿಸಿದರು.ಊಟಮಾಡಿ ಶಾಸ್ತ್ರಿ ದಂಪತಿ ಶಶಿಯಕ್ಕನ ಮನೆಗೆ ತೆರಳಿದರು.

      ಸುಮಾರು ಎರಡುಗಂಟೆಯ ಹೊತ್ತಿಗೆ ಮನೆಯಂಗಳದಲ್ಲಿ ಕಾರು ನಿಂತ ಸದ್ದಾದಾಗ ಹೊರಗಿಣುಕಿದರು ಶಶಿ."ಓಹೋ ಇವರದಾ ಸವಾರಿ.". ಎನ್ನುತ್ತಾ ಅಸಡ್ಡೆಯಿಂದ ಉದ್ಗಾರವೊಂದನ್ನು ಹೊರಡಿಸಿ  ತಾವು ನೋಡುತ್ತಿದ್ದ ಟಿವಿ ಧಾರಾವಾಹಿ ಯ ವಾಲ್ಯೂಮ್ ಇನ್ನೂ ಸ್ವಲ್ಪ ಹೆಚ್ಚಿಸಿದರು.ಚಾವಡಿಗೆ ಬಂದು ನಿಂತ ತಮ್ಮನನ್ನು ಕಂಡು"  ಓಹೋ ತಮ್ಮಾ.. ನೀನು ಯಾವಾಗ ಬಂದದ್ದು.ಗೊತ್ತೇ ಆಗಲಿಲ್ಲ"ಎನ್ನುತ್ತಾ "ನಿಮಗಿನ್ನೂ ಊಟ ಆಗಿಲ್ಲಾಂತ ಕಾಣುತ್ತದೆ ಆಲ್ವಾ.." ಎಂದವರ ಮುಖದಲ್ಲಿ ಇನ್ನು ಇವರಿಗೆ ಬಡಿಸಬೇಕಲ್ವಾ ಎಂಬ ಅಸಡ್ಡೆಯಿದ್ದಿತು.


"ಪುರೋಹಿತರಲ್ಲಿ ಊಟ ಮಾಡಿ ಬಂದಿದ್ದೇವೆ" ಎಂದ ಭಾಸ್ಕರ ಶಾಸ್ತ್ರಿಗಳು
 "ಸ್ವಲ್ಪ ನೀರು ಕೊಡಿ ವಿಪರೀತ ಬಾಯಾರಿಕೆ "ಎಂದರು.
"ತಮ್ಮಾ.. ನೀವು ಈ ಕಡೆಗೆ ಬರುವುದಾದರೆ ಇಲ್ಲಿಯೇ ಊಟಮಾಡಬಹುದಿತ್ತು.ನಿನ್ನೆಯೇ ಗೊತ್ತಾಗಿದ್ದರೆ ನಾನೇ ಇಲ್ಲಿಗೆ ಬರಲು ಹೇಳುತ್ತಿದ್ದೆ.. ಇಷ್ಟು ಹತ್ತಿರ ಅಕ್ಕನ ಮನೆಯಿದ್ದರೂ ಪುರೋಹಿತರ ಮನೆಯಲ್ಲಿ ಉಣ್ಣಬೇಕೇ" ಎಂಬ ಅವರ ಮಾತು ಸಾಗುತ್ತಲೇ ಇತ್ತು.


      ನೀರು ತರಲು ಹೋದವರು ಹತ್ತು ನಿಮಿಷ ಬೇಕಾಯಿತು ತರಲು.. ಮತ್ತೆ ಯಾರೋ ಒಬ್ಬರು ಪಕ್ಕದ ಮನೆಗೆ ತೆರಳುವವರು ಅಂಗಳದ ಬದಿಯಲ್ಲಿ ಸಾಗುತ್ತಿದ್ದರು.ಅವರನ್ನು ಕರೆದು ಪಟ್ಟಾಂಗದಲ್ಲಿ ತೊಡಗಿದರು.ಒಳಗೆ ಕುಳಿತಿದ್ದ ಶಾಸ್ತ್ರಿಗಳನ್ನು ಮಾತನಾಡಿಸುವವರು ಯಾರೂ ಇರಲಿಲ್ಲ.ಊಟಮಾಡಿ ಒಂದು ಸಣ್ಣ ನಿದ್ದೆಎಳೆದ ಭಾವ ಎದ್ದು ಬಂದು ಮಾತನಾಡಿಸಿದರು.ಭಾಸ್ಕರ ಶಾಸ್ತ್ರಿಗಳು ಕರೆಯೋಲೆ ವಸ್ತ್ರವನ್ನು ಅವರ ಕೈಗಿತ್ತು ನಮಸ್ಕರಿಸಿದರು."ನಿಮಗೆ ಬಾಯಾರಿಕೆ "ಎಂದು ರಾಗ ಎಳೆದರು..ಭಾವ.

"ಬೆಲ್ಲ ನೀರು ಕೊಟ್ಟಿದ್ದಾರೆ ಅದಕ್ಕಿಂತ ಹೆಚ್ಚೇನಿದೆ ಭಾವ" ಎಂದರು ಭಾಸ್ಕರ ಶಾಸ್ತ್ರಿಗಳು.

      ಅದು ಇದು ಮಾತನಾಡುತ್ತಿದ್ದಂತೆ "ಇನ್ನೂ ಹಲವು ಕಡೆ ಹೋಗುವುದಿದೆ.. ನಾವಿನ್ನು ಹೊರಡುತ್ತೇವೆ" ಅಂದು ಹೊರಗೆ ಕಾಲಿಟ್ಟಾಗ ಶಶಿ ಪಟ್ಟಾಂಗ ಮೊಟಕುಗೊಳಿಸಿ.. "ಹ್ಞಾಂ.. ನೀವು ಈಗಲೇ ಇಷ್ಟುಬೇಗ ಹೊರಟದ್ದಾ... ಸ್ವಲ್ಪ ಚಹಾ.. ಮಾಡುತ್ತೇನೆ "ಎಂದು ಗಂಡನನ್ನೂ ತಮ್ಮನನ್ನೂ ನೋಡುತ್ತಾ ಅಂದರು..

         ಭಾಸ್ಕರ ಶಾಸ್ತ್ರಿಗಳು ಸ್ವಲ್ಪ ನಿಧಾನಿಸಿದರೂ ಶಶಿಯಕ್ಕ ಟೀ ಮಾಡಲು ತೆರಳುವ ಯಾವ ಸೂಚನೆಯೂ ಇರಲಿಲ್ಲ.ಅವರಿಗೆ ಟೀ ಬೇಕಾಗಿಯೂ ಇರಲಿಲ್ಲ.ಆದರೆ ಏನೂ ಕುಡಿಯದೆ ಹೋದರು ಎಂಬ ಅಪವಾದ ಬೇಡವೆಂದು ಕಾದರು.ಕೊನೆಗೆ ಶಶಿಯ ಕೈಗೆ ಸೀರೆ ಕೊಟ್ಟು ನಮಸ್ಕರಿಸಿ ಹೊರಟು ಅಂಗಳಕ್ಕಿಳಿದರು.ಶಶಿಯಕ್ಕ  ತಾವು ತಮ್ಮ ಕೆಲಸಕ್ಕೆಂದು ಒಳ ತೆರಳಿದವರು ಹೊರಬರಲೇಯಿಲ್ಲ.ಭಾವ ಕಾರು ಹೊರಡುತ್ತಿದ್ದಂತೆ ಕೈಬೀಸಿದರು.


    ಅತ್ತಿಗೆಯ ವರ್ತನೆಯನ್ನು ಕಂಡು ಮಂಗಳಾಳಿಗೆ ಕಣ್ತುಂಬಿ ಬಂತು..ತವರಿನಿಂದ ಶುಭಕಾರ್ಯಕ್ಕೆಂದು ಕರೆಯಲು ಬಂದರೆ ಹೀಗಾ ನಡೆದುಕೊಳ್ಳುವುದು..ಶಾಸ್ತ್ರೀಮನೆತನ ಇಂತಹಾ ಕೆಟ್ಟ ನಡತೆಯನ್ನು ಯಾವತ್ತಾದರೂ ಕಲಿಸಿದೆಯಾ.. ಮಾತೆತ್ತಿದರೆ ಶಾಸ್ತ್ರಿ ನಿವಾಸದ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದೇನೆ ಎನ್ನುತ್ತಾರೆ.ನಾನು ಸೊಸೆಯಾಗಿ ಕಾಲಿಟ್ಟ ಮೇಲೆ ಇದುವರೆಗೆ ಯಾರೊಬ್ಬರನ್ನೂ  ಉಪಚರಿಸದೆ ಕಳುಹಿಸಿದ್ದು ನಾನು ಕಂಡಿಲ್ಲ..ಛೀ... ಎಂತಹಾ ಕೀಳುಬುದ್ಧಿ ಹಿರಿಯತ್ತಿಗೆ ಶಶಿಯದು.. ಎಂದು ಯೋಚಿಸುತ್ತಿದ್ದಂತೆ ಕಣ್ಣಿಂದ ನಾಲ್ಕು ಹನಿಗಳು ಪಟಪಟನೆ ಉದುರಿದವು.

ಮುಂದುವರಿಯುವುದು..

✍️.. ಅನಿತಾ ಜಿ.ಕೆ.ಭಟ್.
20-04-2020.


ಮುಂದಿನ ಭಾಗ... ಬುಧವಾರ.




3 comments: