ಜೀವನ ಮೈತ್ರಿ ಭಾಗ ೬೪
ಬೆಳಗ್ಗೆ ಕೇಶವ ಬೇಗನೆ ಎದ್ದು ತಯಾರಾಗಿದ್ದ. ಸೌಜನ್ಯ ಕೆಳಗೆ ಹೋಗಿ ಗಂಡನಿಗೆ ತಿಂಡಿಗೆ ತಯಾರು ಮಾಡಿದಳು. ಬಿಸಿಬಿಸಿಯಾದ ಉದ್ದಿನ ದೋಸೆ ,ಬಟಾಟೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿ ರೆಡಿ ಮಾಡಿ ಗಂಡನನ್ನು ಕರೆದು ಬಡಿಸಿದಳು ಕೇಶವನಿಗೆ.. ಅಂತೂ ಕೇಶವನಿಗೆ ಬಹಳವೇ ಖುಷಿಯಾಗಿತ್ತು. ನನ್ನವಳಿಗೆ ರುಚಿ ರುಚಿಯಾಗಿ ಅಡುಗೆ ಮಾಡಲು ಬರುತ್ತದೆ ಎಂದು. ಆದರೂ ಒಂದು ಸಂದೇಹ... ನನಗೆ ಅಡುಗೆ ಮಾಡಲು ಬರುವುದಿಲ್ಲ ಎಂದು ಮದುವೆಗೂ ಮುನ್ನ ಹೇಳಿರುವುದು ಸುಳ್ಳೇ..
ಎಂದು.. ಯಾವುದಕ್ಕೂ ಅವಸರ ಮಾಡದೆ ನಿಧಾನವಾಗಿ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು ಎಂದು ತಿಂಡಿಯನ್ನು ಸವಿದ. ಅಷ್ಟರಲ್ಲಾಗಲೇ ಸುನಿತಾ ಮನೆಗೆ ಹಾಜರಾಗಿದ್ದಳು. ರಾತ್ರಿ ತಡವಾಗಿ ಮನೆಗೆ ಬಂದಿದ್ದ ಮಾವ ಅತ್ತೆ ಕೂಡ ಎದ್ದು ಬಂದರು. ಬೆಳ್ಳಂಬೆಳಗ್ಗೆ ಹೊರಟುನಿಂತ ಅಳಿಯನನ್ನು ವಿಚಾರಿಸಿಕೊಂಡು ಶುಭಹಾರೈಸಿದರು. ಕೇಶವ್ ಅತ್ತೆ-ಮಾವನ ಕಾಲಿಗೆರಗಿ ಹೊರಟ. ಸೌಜನ್ಯ ಗಂಡನತ್ತ ಒಂದು ತುಂಟ ನಗೆ ಬೀರಿ... "ರೀ ಆಲ್ ದಿ ಬೆಸ್ಟ್" ಎನ್ನುತ್ತಾ ಗಂಡನ ಕೈಗೆ ಕೈ ಬೆಸೆದು ತೋಳುಗಳ ಮೇಲೆ ತುಟಿಯನ್ನು ಒತ್ತಿ ಗಂಡನಿಗೆ ಬಾಯ್ ಹೇಳಿ ಕಳುಹಿಸಿದಳು.
ನಿಗದಿತ ಸಮಯಕ್ಕೆ ಸಿಂಗರ್ ಸೀನ ಹೇಳಿದ ವಿಳಾಸಕ್ಕೆ ತಲುಪಿದ ಕೇಶವ . ಅವನೆದುರಿಗೆ ಪ್ರಣತಿ ಸಾಫ್ಟ್ವೇರ್ ಸಿಸ್ಟಮ್ಸ್ ಎಂಬ ಬೋರ್ಡ್ ಕಾಣಿಸಿತು ಒಳಗೆ ನಡೆದ. ರಿಸೆಪ್ಶನಿಸ್ಟ್ ಅಲ್ಲಿ ಬಂದ ವಿಷಯ ಹೇಳಿದ . "ಜಸ್ಟ್ ವೇಟ್ ಫಾರ್ ಫೈವ್ ಮಿನಿಟ್ಸ್. "ಎಂದು ಹೇಳಿ ಅವಳ ಕೆಲಸದಲ್ಲಿ ತೊಡಗಿದಳು. ಅಷ್ಟರಲ್ಲಿ ಸಿಂಗರ್ ಸೀನ ಆಫೀಸಿಗೆ ಎಂಟ್ರಿಕೊಟ್ಟಿದ್ದು ಕೇಶವನ ಕೈಕುಲುಕಿ "ಈಗ ಸ್ವಲ್ಪ ಹೊತ್ತಲ್ಲಿ ಬಾಸ್ ಆಗಮಿಸುತ್ತಾರೆ.. ನಾನೆಲ್ಲ ವಿಷಯ ಹೇಳಿದ್ದೇನೆ " ಎಂದ.
ಕಟ್ಟುಮಸ್ತಾದ ದೇಹ...ಶಿಸ್ತಿನಿಂದ ಡ್ರೆಸ್ ಮಾಡಿಕೊಂಡಿದ್ದ ಯುವಕನೋರ್ವ ಕೈಯಲ್ಲಿ ಬ್ಯಾಗ್ ಹಿಡಿದು ಒಳಗೆ ಬಂದ. ರಿಸೆಪ್ಶನಿಸ್ಟ್ ಸಹಿತ ಎಲ್ಲರೂ "ಗುಡ್ ಮಾರ್ನಿಂಗ್ ಸರ್" ಎಂದರು. ಗಂಭೀರವಾಗಿ ಗುಡ್ ಮಾರ್ನಿಂಗ್ ಹೇಳುತ್ತಾ ತನ್ನ ಛೇಂಬರ್ ಗೆ ಸಾಗಿದರು. ಇವರೇ ಬಾಸ್ ಇರಬೇಕು ಎಂದುಕೊಂಡ ಕೇಶವ. ಸ್ವಲ್ಪ ಹೊತ್ತಿನಲ್ಲಿ ಕೇಶವನಿಗೆ ಒಳಗಿನಿಂದ ಕರೆಬಂತು ರಿಸೆಪ್ಷನಿಸ್ಟ್ "ಸರ್ ನೀವು ಒಳಗೆ ಹೋಗಬಹುದು" ಎಂದರು.
ಒಳಗೆ ತೆರಳಿದ ಕೇಶವ..ಕೇಶವನ ನಡೆಯನ್ನು ಬಾಸ್ ಗಮನಿಸುತ್ತಿದ್ದರು. ಔಪಚಾರಿಕವಾಗಿ ಒಂದೆರಡು ಪ್ರಶ್ನೆಗಳನ್ನು ಕೇಳಿ
"ಯಾವಾಗಿನಿಂದ ಜಾಬ್ ಗೆ ಬರಲು ಇಷ್ಟಪಡುತ್ತೀರಿ ..?"ಎಂದು ಕೇಳಿದರು .
."ನೀವು ಎಸ್ ಎಂದರೆ ನಾಳೆಯಿಂದಲೇ ಬರಲು ಸಿದ್ಧ" ಎಂದ ಕೇಶವ.
"ಸರಿ ಹಾಗಾದರೆ ನಾಳೆಯಿಂದಲೇ ಬನ್ನಿ. ನಮ್ಮ ಟೀಂ ಲೀಡರ್ ನಿಮಗೆ ಅಪಾಯಿಂಟ್ಮೆಂಟ್ ಆರ್ಡರ್ ಲೆಟರ್ ಕೊಡುತ್ತಾರೆ. ಮಾಡಬೇಕಾದ ಕೆಲಸ ಕಾರ್ಯಗಳ ವಿವರವನ್ನು ಕೂಡ ನೀಡುತ್ತಾರೆ "ಎಂದು ಹೇಳಿದರು. ಅದಕ್ಕೆ ಸಮ್ಮತಿಸಿ ಕೇಶವ ಹೊರಬಂದ. ಅಪಾಯಿಂಟ್ಮೆಂಟ್ ಲೆಟರ್ ಅವನ ಕೈಗಿತ್ತ ಟೀಮ್ ಲೀಡರ್.ಅಪಾಯಿಂಟ್ಮೆಂಟ್ ಲೆಟರ್ ನ ಮೇಲೆ ಕಣ್ಣಾಡಿಸಿ ನಿಟ್ಟುಸಿರು ಬಿಟ್ಟುಕೊಂಡು... ಮುಳುಗುವವನಿಗೆ ಹುಲುಕಡ್ಡಿ ಆಸರೆ ಎಂಬಂತೆ ಈ ಉದ್ಯೋಗ ನನಗೆ ಎಂದು ತೃಪ್ತಿಪಟ್ಟುಕೊಂಡನು ಕೇಶವ.
ಮನೆಗೆ ಹಿಂತಿರುಗಿದ ಕೇಶವನಿಗೆ ಮಾವ, ಅತ್ತೆ ,ಸೌಜನ್ಯಳ ಪ್ರಶ್ನೆಗಳಿಗೆ ಉತ್ತರಿಸುವುದೇ ಸವಾಲಾಯಿತು.ಇಷ್ಟು ಕಡಿಮೆ ಸಂಬಳಕ್ಕೆ ಬೆಂಗಳೂರಿನಲ್ಲಿ ಜೀವನ ಮಾಡಲು ಸಾಧ್ಯವಾ ಎಂಬುದು ಸೌಜನ್ಯಳ ಅಳಲಾಗಿತ್ತು.
"ಅಳಿಯಂದಿರೇ ಇದಕ್ಕಿಂತ ಬೇರೆ ಕೆಲಸ ಸಿಗಬಹುದು. ಸ್ವಲ್ಪ ದಿನ ಕಾದು ನೋಡೋಣ" ಎಂದರು ನರಸಿಂಹರಾಯರು.
"ಇದಕ್ಕೂ ಮೊದಲು ಕಾರ್ಯನಿರ್ವಹಿಸಿದ ಅನುಭವ ಇದೆಯಲ್ಲವೇ.. ನಮ್ಮ ಪರಿಚಯದವರಲ್ಲಿ ಯಾರಲ್ಲಾದರೂ ಹೇಳಿ ಉದ್ಯೋಗಕ್ಕೆ ಪ್ರಯತ್ನಿಸೋಣ .ಯಾವುದಕ್ಕೂ ಅವಸರ ಬೇಡ " ಎಂದು ಹೇಳಿದರು ರೇಖಾ.
ಯಾರು ಏನೇ ಅಂದರೂ ಸಿಕ್ಕಿದ ಉದ್ಯೋಗವನ್ನು ಬಿಡುವ ಮನಸ್ಸು ಅವನಿಗೆ ಇರಲಿಲ್ಲ .ಬಂಗಾರಣ್ಣ ತಿಂಗಳಿಗೆ ಐವತ್ತು ಸಾವಿರ ತನ್ನ ಕೃಷಿಯ ಕೆಲಸದಾಳುಗಳಿಗೆ ನೀಡುತ್ತಿದ್ದ. ಅಂತಹವನ ಮಗ ಇಂದು ಕೇವಲ ಹದಿನಾಲ್ಕು ಸಾವಿರ ರೂಪಾಯಿಗಳಿಗೆ ಕೆಲಸ ಮಾಡಬೇಕಾಗಿತ್ತು.. ಕೇಶವ ಎಲ್ಲದಕ್ಕೂ ಸಿದ್ದನಾಗಿದ್ದ .ಜೀವನ ಮಾಡಬೇಕಾದರೆ ಕಷ್ಟವನ್ನು ಎದುರಿಸಬೇಕು ಎಂಬುದು ಅವನಿಗೆ ಇತ್ತೀಚಿನ ವಿದ್ಯಮಾನಗಳಿಂದ ಸರಿಯಾದ ಪಾಠವಾಗಿತ್ತು . ಮರುದಿನದಿಂದಲೇ ಉದ್ಯೋಗಕ್ಕೆ ಹೋಗಲು ಬೇಕಾದ ತಯಾರಿಯನ್ನು ಮಾಡಿಕೊಂಡ.
********
ಬಂಗಾರಣ್ಣನ ಮಾತಿನಲ್ಲಿ ಸೊಸೆಯ ಬಗ್ಗೆ ಹೀಯಾಳಿಕೆ ಆಗ ಕೇಳುತ್ತಿತ್ತು., ಸೌಜನ್ಯಳ ಬಗ್ಗೆ ಏನೇ ಹೇಳಿದರೂ ಬಶೀರನ ಹೆಂಡತಿ ಎಂದೇ ಸಂಬೋಧಿಸುತ್ತಿದ್ದರು. ಸುಮಾಳಿಗೆ ಇದು ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಒಮ್ಮೆ ಮಿತಿಮೀರಿದಾಗ ಕಟುವಾಗಿ ಹೇಳಿಬಿಟ್ಟರು.
"ಮಾತುಮಾತಿಗೆ ಸೊಸೆಯನ್ನು ಬಶೀರನ ಹೆಂಡತಿ ಅನ್ನುತ್ತೀರಲ್ಲ ...ಹಾಗಿದ್ದರೆ ಮಗ ಕೇಶವನನ್ನು ಸಿಂಧ್ಯಾ ಳ ಗಂಡ ಅನ್ನುತ್ತೀರೇನು...?ಎಳೆಯ ಪ್ರಾಯದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ವಯೋಸಹಜ ಆಕರ್ಷಣೆಯಿಂದಲೋ ಹೆಜ್ಜೆಯನ್ನಿಟ್ಟಿದ್ದಾರೆ. ನಮ್ಮ ಮಗ ತಪ್ಪು ಮಾಡಿದಾಗ ನಾವು ಹೇಗೆ ಕ್ಷಮಿಸಿ ಅದನ್ನು ಹೊಟ್ಟೆಗೆ ಹಾಕಿಕೊಂಡು ಅವನನ್ನು ಸರಿದಾರಿಯಲ್ಲಿ ನಡೆಸಿದ್ದೇವೆಯೋ.. ಹಾಗೆಯೇ ಆಕೆಯ ಪೋಷಕರು ಕೂಡ ಆಕೆಯನ್ನು ತಿದ್ದಿದ್ದಾರೆ ... ಅದನ್ನು ನಾವು ಅರ್ಥಮಾಡಿಕೊಳ್ಳಬೇಕು .... ಮಗನನ್ನು ಕ್ಷಮಿಸಿದಂತೆ ಸೊಸೆಯನ್ನೂ ಕ್ಷಮಿಸಬೇಕು..ಇನ್ನೊಮ್ಮೆ ಆ ಮಾತನ್ನು ಪುನರಾವರ್ತಿಸಿದ್ದಾದರೆ ನಾನು ಮತ್ತೆ ಈ ಮನೆಯಲ್ಲಿ ನಿಲ್ಲಲ್ಲ."
ಎಂದ ಮಡದಿಯ ಮಾತಿಗೆ ಪೆಚ್ಚುಮೋರೆ ಹಾಕಿಕೊಂಡು ಹೊರಗೆ ಹೋದವರು ಬಂಗಾರಣ್ಣ.ಏನೇ ಆದರೂ ಬಂಗಾರಣ್ಣನಿಗೆ ಸುಮಾ ಇಲ್ಲದೆ ಇರುವುದು ಕಷ್ಟ. ಹೆಣ್ಣುಮಕ್ಕಳಿಗೆ ಮನೋಬಲ ದೇವರು ಕೊಟ್ಟಿದ್ದಾನೆ... ಗಂಡನನ್ನು ಅಗಲಿ ಬದುಕುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ಆದರೆ ಗಂಡಸರಿಗೆ ಮಾತ್ರ ಹೆಂಡತಿಯನ್ನು ಬಿಟ್ಟು ಇರುವುದು ಸ್ವಲ್ಪ ಕಷ್ಟದ ಮಾತೇ.. ಆದ್ದರಿಂದ ಬಂಗಾರಣ್ಣ ಹೆಂಡತಿ ಹಾಕಿದ ಗೆರೆಯನ್ನು ದಾಟುವುದಿಲ್ಲ... ಆಕೆ ಕೋಪಿಸಿಕೊಂಡು ತವರಿಗೆ ಹೋದರೆ ನನ್ನ ಗತಿ ಎಂದು ಅವನ ಪಜೀತಿ..!!
*****
ಗಂಡನಿಗೆ ಇಂದು ಆಫೀಸಿಗೆ ಹೋಗಲಿರುವುದು ಸೌಜನ್ಯಳಿಗೆ ಗೊತ್ತಿದ್ದರೂ ಗಾಢ ನಿದ್ರೆ ಆವರಿಸಿತ್ತು.. ಅಲಾರಾಂ ರಿಂಗಣಿಸುತ್ತಿತ್ತು.. ಏಳಲೂ ಮನಸ್ಸಿರಲಿಲ್ಲ.. ಆದರೆ ಏಳಲೇಬೇಕಿತ್ತು.. ಕಷ್ಟದಿಂದ ಎದ್ದು ಫ್ರೆಶ್ ಆಗಿ ಕೆಳಗಿಳಿದಳು.ಅಡುಗೆ ಮನೆಗೆ ತೆರಳಿ ಸಿಂಪಲ್ ಆಗಿ ವೆಜ್ ಪಲಾವ್ ಮಾಡಿದಳು. ಫ್ರೆಶ್ ಆಗಿ ಬಂದ ಕೇಶವನಿಗೆ ಪಲಾವ್ ಬಡಿಸಿದಳು. ಎಂದಿನಂತೆ ಕೇಶವನ ಮುಖದ ಮೇಲೆ ತುಂಟತನವಿರಲಿಲ್ಲ. ಗಂಭೀರವಾಗಿದ್ದ ಪತಿಯನ್ನು ಕಂಡು ಸೌಜನ್ಯಳಿಗೂ ಅವನ ತಳಮಳ ಅರ್ಥವಾಗಿತ್ತು.
ಬೇಗನೆ ತಿಂಡಿ ಮುಗಿಸಿ ಹೊರಟು ಆಫೀಸಿಗೆ ತೆರಳಿದ ಕೇಶವ್.
ಹೊಸ ಉದ್ಯೋಗ ಹೊಸ ಹುರುಪನ್ನು ಕೇಶವನಲ್ಲಿ ಮೂಡಿಸಿತು. ಆಫೀಸಿಗೆ ತೆರಳಿದ ಕೇಶವನಿಗೆ ಟೀಂ ಲೀಡರ್ ಆ ದಿನದ ಕೆಲಸವನ್ನು ಒಪ್ಪಿಸಿದ. ತನಗೆ ತಿಳಿಯದ ವಿಷಯಗಳನ್ನು ಸಹವರ್ತಿಗಳಿಗೆ ಕೇಳುತ್ತಾ ಆದಷ್ಟು ಬೇಗನೆ ಮುಗಿಸಿದ. ಉದ್ಯೋಗದ ಮೊದಲ ದಿನ ಅವನಲ್ಲಿ ಆತ್ಮವಿಶ್ವಾಸ ಮೂಡಿಸಿತು.
******
ಶಾಸ್ತ್ರಿ ನಿವಾಸದಲ್ಲಿ ಮದುವೆಯ ಕರೆಯೋಲೆಯನ್ನು ದೇವರ ಮುಂದಿಟ್ಟು ಪೂಜೆಗೈದ ಶ್ಯಾಮಶಾಸ್ತ್ರಿಗಳು ಮಗನಲ್ಲಿ ಕೊಡುತ್ತಾ
"ಭಾಸ್ಕರ... ಮೊದಲು ಕುಲಪುರೋಹಿತರ ಮನೆಗೆ ತೆರಳಿ ಕರೆಯೋಲೆ ಕೊಟ್ಟು ನಮಸ್ಕರಿಸಿ ಬನ್ನಿ.. ಆಮೇಲೆ ಒಬ್ಬೊಬ್ಬರಿಗೆ ಕೊಡಲು ಆರಂಭಿಸೋಣ.."
ಅಪ್ಪನ ಮಾತಿಗೆ ಹೂಂಗುಟ್ಟಿದ ಭಾಸ್ಕರ ಶಾಸ್ತ್ರಿಗಳು "ಆದಷ್ಟು ಬೇಗ ಹೋಗುತ್ತೇವೆ ನಾನು ಮತ್ತು ಮಂಗಳಾ..ಹಾಗೆಯೇ ಪುರೋಹಿತರಲ್ಲಿ ಹೋಮ,ನಾಂದಿ, ಮದುವೆಯ ವೈದಿಕ ಕಾರ್ಯಕ್ರಮಗಳಿಗೆ ಬೇಕಾದ ವಸ್ತುಗಳನ್ನು ಪಟ್ಟಿ ಮಾಡಿಸಿಕೊಂಡು ಬರುತ್ತೇವೆ.."ಎಂದರು..
"ಅದಕ್ಕೂ ಮೊದಲು ಪೇಟೆಗೆ ಹೋಗಿ ಚಿನ್ನ, ಬಟ್ಟೆ ಖರೀದಿ ಮಾಡೋಣ..ಪುರೋಹಿತರ ಮನೆಗೆ ಹೋಗಿ ಬರುವಾಗ ದಾರಿಯಲ್ಲಿ ಶಶಿಯತ್ತಿಗೆ ಸಾವಿತ್ರಿಯತ್ತಿಗೆಯ ಮನೆ ಸಿಗುತ್ತದೆ.ಅಲ್ಲಿ ಅವರ ಸೀರೆ ಕೊಟ್ಟು ಕರೆಯೋಲೆಯನ್ನೂ ನೀಡಿ ಬರಬಹುದು" ಎಂದರು ಮಂಗಳಮ್ಮ.
"ಹೌದು ಮಂಗಳಾ..ಅದು ಒಳ್ಳೆಯದು.. ಇಲ್ಲದಿದ್ದರೆ ಮತ್ತೆ ಹೊಲಿಸಿಕೊಳ್ಳಲು ಸಮಯ ಸಿಕ್ಕಿಲ್ಲ ಎಂದಾಗುವುದು ಬೇಡ.."ಎಂದರು ಮಹಾಲಕ್ಷ್ಮಿ ಅಮ್ಮ.
"ಹಾಗೆಯೇ ಮಾಡೋಣ" ಎಂದರು ಭಾಸ್ಕರ ಶಾಸ್ತ್ರಿಗಳು.
ಮರುದಿನ ಮದುವೆಗೆ ಚಿನ್ನ,ಬಟ್ಟೆ ಖರೀದಿಗೆ ತೆರಳಿದರು.ಮಹೇಶ ಮತ್ತು ಅಜ್ಜಿ ಮನೆಕಾವಲಿಗೆಂದು ಮನೆಯಲ್ಲೇ ಉಳಿದರು.ಮೈತ್ರಿಗೆ ಕೈಗೆ ನಾಲ್ಕು ಚಿನ್ನದ ಬಳೆ, ಎರಡು ಮುತ್ತಿನ ಬಳೆ ,ಆರು ಪವನಿನ ಚಿನ್ನದ ಲಾಂಗ್ ನೆಕ್ಲೇಸ್, ಕಿವಿಯೋಲೆ ಜುಮುಕಿ, ಕುತ್ತಿಗೆಗೆ ಮೆರುಗು ಕೊಡುವ ಪುಟಾಣಿ ನೆಕ್ಲೇಸ್ , ಕಾಲ್ಗೆಜ್ಜೆ ,ಮಂಗಳಮ್ಮನಿಗೆ ಬೆಂಡೋಲೆ ಖರೀದಿಸಿದರು.
ನಂತರ ಬಟ್ಟೆಯಂಗಡಿಗೆ ಕಾಲಿಟ್ಟಾಗ ಕಾಂಜೀವರಂ ಸೀರೆಯನ್ನು ಮೊದಲು ಆಯ್ಕೆ ಮಾಡಲು ತೆರಳಿದರು.. ಒಂದಕ್ಕಿಂತ ಒಂದು ಸುಂದರ ಸೀರೆಯನ್ನು ಕಂಡಾಗ ಯಾವುದನ್ನು ಆಯ್ಕೆ ಮಾಡಬೇಕೆಂದು ತಿಳಿಯಲಿಲ್ಲ ತಾಯಿ ಮಗಳಿಗೆ..
"ಅಮ್ಮಾ ..ಈಗ ಗಾಯತ್ರಿ ಚಿಕ್ಕಮ್ಮನೂ ಬಂದಿದ್ರೆ ಚೆನ್ನಾಗಿತ್ತು..."
"ನಂಗೂ ಹಾಗೇ ಅನಿಸ್ತಿದೆ ಮೈತ್ರಿ..."
"ಭಾಸ್ಕರ ಶಾಸ್ತ್ರಿಗಳು ಆಯ್ತಾ ಸೆಲೆಕ್ಷನ್.." ಎಂದು ಕೇಳಲಾರಂಭಿಸಿದರು..ಶ್ಯಾಮ ಶಾಸ್ತ್ರಿಗಳು ಎರಡೆರಡು ಸಲ ಬಂದು "ಸೀರೆ ಆಯ್ಕೆ ಆಯಿತಾ" ಎಂದು ನೋಡಿ ಹೋದರು..
"ಅಮ್ಮಾ ಇದಾಗಬಹುದೇ..?" ..ಎಂದು ಸೇಲ್ಸ್ ಗರ್ಲ್ ತೆಗೆದುಹಾಕಿದ ಸೀರೆಯನ್ನೆಲ್ಲ ಮೈಗೆ ಹಿಡಿದು ಕನ್ನಡಿಯಲ್ಲಿ ನೋಡುತ್ತಾ ಕೇಳುತ್ತಿದ್ದಳು ಮೈತ್ರಿ..ಕನ್ನಡಿ ನೋಡುತ್ತಿದ್ದಂತೆ ನಿನ್ನೆ ಕಿಶನ್ ಕೇಳಿದ್ದು ನೆನಪಾಗಿ ಅವಳ ಮುಖದಲ್ಲಿ ನಸುನಗೆ ಮೂಡಿತು."ಯಾವ ಲೋಕದಲ್ಲಿದ್ದಿ ಮಗಳೇ.." ಎಂದು ಅಮ್ಮ ಎಚ್ಚರಿಸಿದರು.
ಬಂಗಾರದ ಬಣ್ಣದ ಝರಿಯಿರುವ ಹಿನ್ನೆಲೆಯಲ್ಲಿ ಕೆಂಪು ಬಣ್ಣದಿಂದ ಕೂಡಿರುವ ಸೀರೆಯೊಂದನ್ನು ಆಯ್ಕೆ ಮಾಡಿದರು."ಒಂದು ಸೀರೆಯ ಆಯ್ಕೆಗೆ ಒಂದೂವರೆ ಗಂಟೆ... ಅಬ್ಬಬ್ಬಾ..!! "ಎಂದರು ಕೈಗಡಿಯಾರ ನೋಡುತ್ತಾ ಶ್ಯಾಮ ಶಾಸ್ತ್ರಿಗಳು..
" ಮಂಗಳಾ ..ನಿನಗೂ ಒಳ್ಳೆಯದನ್ನೇ ಆಯ್ಕೆ ಮಾಡಿಕೋ "ಎಂದರು ಭಾಸ್ಕರ ಶಾಸ್ತ್ರಿಗಳು..ಮಡದಿ ಆಯ್ಕೆ ಮಾಡುತ್ತಿದ್ದಾಗ ತಾವೇ ಮುಂದಾಗಿ ಬಂದು ಸಹಕರಿಸಿದರು.ತಾವೇ "ನೋಡು ಮಂಗಳಾ.. ನಿನಗಿದು ಚೆನ್ನಾಗಿ ಒಪ್ಪುತ್ತದೆ "ಎಂದು ಸೀರೆಯನ್ನು ಕೈಗಿತ್ತರು.ಪತಿಯ ಆಯ್ಕೆ ಅವರಿಗೂ ಹಿಡಿಸಿತು.ಹೊಳೆಯುವ ಹಸಿರು ಕೆಂಪು ಮಿಶ್ರಿತ ಬಣ್ಣದ ಸೀರೆಯ ಮೇಲೆ ಅಲ್ಲಲ್ಲಿ ಬಂಗಾರದ ಬಣ್ಣದ ಚಿತ್ತಾರ ಎದ್ದು ಕಾಣುತ್ತಿತ್ತು.. ಮೈತ್ರಿಗೂ ಅಮ್ಮನಿಗೆಂದು ಅಪ್ಪ ಮಾಡಿದ ಆಯ್ಕೆ ಇಷ್ಟವಾಯಿತು..
ಉಳಿದವರಿಗೆಲ್ಲ ಬಟ್ಟೆ ಖರೀದಿ ಮಾಡಿ ಮನೆಸೇರುವಾಗ ರಾತ್ರಿ ಎಂಟಾಗಿತ್ತು.ದಿನವಿಡೀ ಮೈತ್ರಿಯ ಸಂದೇಶವಿರದ ಕಾರಣ ಕಿಶನ್ ಗೆ ಅವಳ ನೆನಪು ಜೋರಾಗಿತ್ತು..
"ಮುದ್ಗೊಂಬೆ....ಏನೇ ಭಾರೀ ಬ್ಯುಸಿ...ಈ ದಿನ ಒಂಚೂರೂ ನನ್ನ ನೆನಪಾಗಿಲ್ವೇನೇ.."ಎಂದು ಸಂದೇಶ ರವಾನಿಸಿದ್ದ..
"ಅಯ್ಯಾ.. ಸ್ವಲ್ಪ ಸುಮ್ನಿರಿ.. ಇಡೀ ದಿನ ನಾನು ಅಪ್ಪ ಅಮ್ಮನ ಜೊತೆಗೆ ಇದ್ದೆ.. ರಾತ್ರಿ ಮೆಸೇಜ್ ಮಾಡ್ತೀನಿ.. ಬಾಯ್.."
ಮೈತ್ರಿ ರಾತ್ರಿ ಆದರೂ ಚಾಟ್ ಮಾಡಲು ಸಿಗುತ್ತಾಳಲ್ಲ ಎಂದು ಸಮಾಧಾನದಿಂದ ಅಡುಗೆ ಉಟದತ್ತ ಗಮನಹರಿಸಿದ.. ಕಿಶನ್..
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
18-04-2020.
ಮುಂದಿನ ಭಾಗ.. ಸೋಮವಾರ...
👏👏
ReplyDelete💐🙏
ReplyDelete