ಜೀವನ ಮೈತ್ರಿ ಭಾಗ ೫೯
ಮಂಗಳಮ್ಮನಿಗೆ ಮಾತ್ರ ಗಂಡನದು ಅತಿಯಾಯಿತು ಉದ್ಧಟತನ ಎಂದು ಸಿಟ್ಟು ನೆತ್ತಿಗೇರಿತು.. "ಎಲ್ಲರೆದುರು ಈ ಹಠ ಬೇಕಾ.. ಕಾಲಕಾಲಕ್ಕೆ ನಾವೂ ಕೆಲವೊಂದು ವಿಚಾರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು.ಮೊಂಡುವಾದ ಮಾಡುತ್ತಾ ಎಲ್ಲರನ್ನೂ ನೋಯಿಸುತ್ತಾ ಕಾಲಹರಣ ಮಾಡಬಾರದು.."ಎಂಬ ಭಾವ ಮನಸ್ಸನ್ನು ಕಲುಕಿತು.
ಭಾಸ್ಕರ ಶಾಸ್ತ್ರಿಗಳು ಮಾತನ್ನು ಮುಂದುವರಿಸುತ್ತಾ.." ಅನುಸರಿಸಬೇಕು ಎಂಬ ಆಸಕ್ತಿ ಇದ್ದರೆ ನಮ್ಮ ಸಂಪ್ರದಾಯದಲ್ಲಿ ನಾವು ಬಿಟ್ಟು ಬಂದಿರುವಂತಹ ಹಲವಾರು ಆಚರಣೆಗಳಿವೆ. ಅದನ್ನೇ ಮತ್ತೆ ನೆನಪಿಸಬಹುದು .ಅದು ಬಿಟ್ಟು ಇಂತಹ ಅಂಧಾನುಕರಣೆ ಯಾಕೆ..? " ಎಂದು ಕಿಶನ್ ನ ಮುಖ ನೋಡುತ್ತಾ ಹೇಳಿದರು. ಅವನ ಮುಖ ಸಪ್ಪಗಾಯಿತು.
ಮಂಗಳಮ್ಮನಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ದೈನ್ಯವಾಗಿ ಪುರೋಹಿತರ ಮುಖ ನೋಡಿದಳು. ಪಕ್ಕದಲ್ಲೇ ನಿಂತಿದ್ದ ಶ್ಯಾಮಾಶಾಸ್ತ್ರಿಗಳು ಮಹಾಲಕ್ಷ್ಮಿ ಅಮ್ಮ ಏನು ಮಾತನಾಡುವ ಲಕ್ಷಣ ಕಾಣಲಿಲ್ಲ.ಭಾವೀ ಅಳಿಯನನ್ನು ಈ ಸ್ಥಿತಿಯಲ್ಲಿ ನಿಲ್ಲಿಸುವುದು ಆಕೆಗೆ ಇಷ್ಟವಿಲ್ಲ.. ಆದ್ದರಿಂದ ಸ್ವಲ್ಪ ಧೈರ್ಯ ತೆಗೆದುಕೊಂಡು ಹೇಳಿದಳು
" ಮೊದಲೇ ತಿಳಿದಿದ್ದರೆ ಹೇಳಬಹುದಿತ್ತು .ಆದರೆ ಈಗ ಮೈತ್ರಿಯ ಮೇಲೆ ಪ್ರೀತಿಯಿಂದ ಆಕೆಗೆ ಕೊಡಬೇಕೆಂದು ತಂದದ್ದನ್ನು ನಾವು ನಿರಾಕರಿಸಬಾರದು. ಮದುವೆಯಾದ ನಂತರ ಅವರ ಮನೆಯ ಸೊಸೆ.. ಅವರಿಗೆ ತಕ್ಕಂತೆ ಬಾಳ ಬೇಕಾದವಳು ..ಹಾಗಿದ್ದಾಗ ನಾವು ನಮ್ಮ ಆಣತಿಯಂತೆ ನಡೆಯಬೇಕು ಎಂದು ವಾದಿಸಿದರೆ ಚೆನ್ನಾಗಿರುವುದಿಲ್ಲ.."
ಮಂಗಳಮ್ಮನ ಮಾತುಗಳಿಗೆ ಪುರೋಹಿತರಾದ ಶಂಭಟ್ಟರು ಕೂಡಾ ತಲೆ ಅಲ್ಲಾಡಿಸಿದರು.." ಹೌದಮ್ಮ.. ನೀನು ಹೇಳುವುದು ಸರಿ ..ನಾಳೆ ಅವರ ಮನೆಗೆ ಕಾಲಿಡುವ ಹೆಣ್ಣುಮಗಳಿಗೆ ಅವರು ಪ್ರೀತಿಯಿಂದ ಕೊಟ್ಟರೆ ಅದು ತಪ್ಪಲ್ಲ... ಸ್ವೀಕರಿಸುವುದು ನಮ್ಮ ದೊಡ್ಡ ಗುಣ..."
ಈಗ ಶ್ಯಾಮಶಾಸ್ತ್ರಿಗಳು ಕೂಡ ಬಾಯಿಬಿಟ್ಟರು.. "ಬೇರೆಯವರು ನಮ್ಮ ಸಂಪ್ರದಾಯವನ್ನು ಮೆಚ್ಚಿ ಅಳವಡಿಸಿಕೊಳ್ಳುತ್ತಿದ್ದಾರೆ.ಹಾಗೆಯೇ ನಮಗೆ ಇತರರ ಸಂಪ್ರದಾಯದಲ್ಲಿ ಸರಿ ಕಂಡದ್ದನ್ನು ಇಷ್ಟವಾದದ್ದನ್ನು ಅನುಸರಿಸಿದರೆ ಅದರಲ್ಲಿ ತಪ್ಪೇನಿದೆ ..? ಈಗ ಮದುವೆಗೆ ಮೊದಲೇ ಒಬ್ಬರೊಬ್ಬರು ಹಸ್ತ ಸ್ಪರ್ಶಿಸುತ್ತಾರೆ.ಆಮೇಲೆ ಉಂಗುರ ಹಾಕುವುದರಲ್ಲಿ ತಪ್ಪೇನಿದೆ..?"
"ತಪ್ಪು ಎಂದಲ್ಲ ...ಇದರ ಅಗತ್ಯವಿಲ್ಲ... ನಮ್ಮ ಸಂಪ್ರದಾಯವನ್ನು ನಾವು ಪಾಲಿಸಿದರೆ ಧಾರಾಳ ಸಾಕು ಎಂದು ನನ್ನ ಅಭಿಪ್ರಾಯ.. ಹಾಗೆಂದು ತಂದವರನ್ನು ತೊಡಿಸಬೇಡಿ ಎಂದು ನಾನು ಹೇಳುವುದಿಲ್ಲ.. ಅವರಿಗೆ ಬೇಕಾದಂತೆ ಮಾಡಲಿ.."
ಪುರೋಹಿತರು ಕಿಶನ್ ನಲ್ಲಿ "ನೀನು ಉಂಗುರ ತೊಡಿಸಪ್ಪ.. ನಾನು ಒಂದು ಮಂತ್ರೋಚ್ಚಾರಣೆ ಮಾಡುತ್ತೇನೆ "ಎಂದು ಹೇಳಿದರು..ಕಿಶನ್ ಮೈತ್ರಿಗೆ ಬಹಳ ಸಂಕೋಚದಿಂದಲೇ ಉಂಗುರ ತೊಡಿಸಿದ ..ಸೀರೆಯನ್ನಿತ್ತ..ಮಾವನ ಮಾತು ಆತನಿಗೆ ಮನಸಿಗೆ ನಾಟಿದಂತಿತ್ತು.
ಉಂಗುರ ತೊಡಿಸಿ ಸೀರೆಯನಿತ್ತ ಕಿಶನ್ ಗೆ ಮೈತ್ರಿಯ ನಗುವೆ ಉತ್ತರವಾಯಿತು. ಆಕೆ ಉಂಗುರವನ್ನು ನೋಡಿ ಸಂಭ್ರಮಿಸಿದಳು. ಆ ಸಂಭ್ರಮವನ್ನು ಕಂಡು ಕಿಶನ್ ಹಾಗೂ ಗಣೇಶ ಶರ್ಮ ತಮಗಾದ ಮುಜುಗರವನ್ನು ಮರೆತರು. ಕಿಶನ್ ಗೆ ಮೈತ್ರಿಗೆ ಇರುವ ಕಷ್ಟದ ಅರಿವಾಗಿತ್ತು.
ಕಾರ್ಯಕ್ರಮವೆಲ್ಲ ಸಾಂಗವಾಗಿ ಸಾಗಿ ಊಟ-ಉಪಚಾರ ಕ್ರಮಬದ್ಧವಾಗಿ ಸಾಗಿತ್ತು. ಪಾಯಸ ಬರುತ್ತಿದ್ದಂತೆ ಮೈತ್ರಿಯ ಸ್ವರದ ಇಂಪು ಗಾಯನ ಎಲ್ಲರಿಗೂ ಕರ್ಣಾನಂದ ಉಂಟುಮಾಡಿತು. ಕಿಶನ್ ಕೂಡಾ ಚೂರ್ಣಿಕೆ ಹೇಳಿ ಎಲ್ಲರನ್ನೂ ರಂಜಿಸಿದ. ಸಂಜನ, ವಂದನ ಕೂಡ ಒಂದೆರಡು ಆಲಾಪಗಳನ್ನು ಹಾಡಿಬಿಟ್ಟರು. ಎಲ್ಲರ ಗಮನವೂ ಮದುಮಗಳ ತಂಗಿಯಂದಿರ ಕಡೆಗೆ ಹರಿಯಿತು. ಮೂವರು ಮಕ್ಕಳು ಬಹಳ ಚೆನ್ನಾಗಿ ಹಾಡುಹೇಳುತ್ತಾರೆ ಎಂದು ಜನ ಹೊಗಳಿದರು.ಊಟದ ಕೊನೆಗೆ ಭಾಸ್ಕರ ಶಾಸ್ತ್ರಿಗಳು ಗೋವಿಂದ ನಾಮಸ್ಮರಣೆಯನ್ನು ಮಾಡಿದರು.
ಮೈತ್ರಿ ಕಿಶನ್ ಸ್ವಲ್ಪ ಹೊತ್ತು ಗಿಡಗಳ ಮಧ್ಯೆ ವಿಹರಿಸುತ್ತಾ ಫೋಟೋ ತೆಗೆಸಿಕೊಂಡರು ಅಕ್ಕ-ಭಾವನ ಫೊಟೋವನ್ನು ಚೆನ್ನಾಗಿ ಸೆರೆಹಿಡಿದ ಮಹೇಶ್.. ಭಾಸ್ಕರ ಶಾಸ್ತ್ರಿಗಳ ಗಂಭೀರತೆಯ ಅರಿವಾಗಿರುವ ಕಿಶನ್.. ಮೈತ್ರಿಯಲ್ಲಿ ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದು ಕೊಂಡು ಬೇಗನೆ ವಾಪಸಾದರು. ಕಿಶನ್ ಅವನ ಬಂಧುಗಳೊಂದಿಗೆ ಹೊರಟು ನಿಂತ.. ಅವನು ತನ್ನ ಕಣ್ಣಂಚಿನಿಂದ ಮರೆಯಾಗುವವರೆಗೂ ನೋಡಿದಳು ಮೈತ್ರಿ..ನಿಶ್ಚಿತಾರ್ಥದ ಸಂಭ್ರಮ ಮುಗಿಸಿ ಎಲ್ಲರೂ ತಮ್ಮ ಪಯಣವನ್ನು ಮುಂದುವರೆಸಿದರು.
*****
ಕೇಶವ್ ತಾನು ಮದುವೆಯಾದ ಯುವತಿಯಲ್ಲಿ ಸಿಂಧ್ಯಾಳ ವಿಷಯವನ್ನು ಹೇಳಬಾರದು ಅಂದುಕೊಂಡಿದ್ದ... ಆದರೆ ಸೌಜನ್ಯ ಅವಳ ನೋವನ್ನು ಹಂಚಿಕೊಂಡು ಬಿಕ್ಕಿಬಿಕ್ಕಿ ಅತ್ತಾಗ ಅವನ ಮನಸ್ಸು ಕೂಡ ನಡೆದ ಘಟನೆಯನ್ನು ಹೇಳಿದರೆ ತಪ್ಪಾಗಲಾರದು. ಒಬ್ಬರನ್ನೊಬ್ಬರು ಅರಿತು ಬಾಳುವುದು ಲೇಸು. ಇಂದು ಘಟನೆಯನ್ನು ಮುಚ್ಚಿಟ್ಟು ಮುಂದೊಂದು ದಿನ ಅದು ಬಯಲಾದಾಗ ಆಗುವ ವಿಶ್ವಾಸದ್ರೋಹಕ್ಕಿಂತ ಇಂದು ಅರುಹಿ ಹಗುರಾಗುವುದು ಲೇಸು ಎಂದು ತನ್ನ ಮನದ ನೋವನ್ನು ಬಿಚ್ಚಿಟ್ಟ.
ನಾನು ಓದಿದ್ದು ಡಿಪ್ಲೋಮಾ ಎಂಜಿನಿಯರಿಂಗ್ .ನಂತರ ಇಲ್ಲಿ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯವಾದವರು ಸಿಂಧ್ಯಾ. ಮೊದಲು ಇಬ್ಬರ ನಡುವೆ ಸ್ನೇಹ ಬೆಳೆಯಿತು .ಕೆಲವೇ ಸಮಯದಲ್ಲಿ ಅದು ಪ್ರೇಮವಾಗಿ ನಮ್ಮಿಬ್ಬರ ನಡುವೆ ಬೆಸೆದುಕೊಂಡಿದ್ದು. ನಿಂತರ ವೀಕೆಂಡ್ ನಲ್ಲಿ ಒಟ್ಟಿಗೆ ಸುತ್ತಾಟ ನಡೆಯಿತು .ಹೀಗೆ ಒಂದು ವರ್ಷ ಆದಾಗ ಸಿಂಧ್ಯಾ ಒಡಲಲ್ಲಿ ನಮ್ಮ ಪ್ರೇಮ ಅರಳಿತ್ತು. ಆಗ ನನಗೆ ಮನೆಯವರಲ್ಲಿ ಹೇಳದೆ ನಿರ್ವಾಹವಿಲ್ಲ. ಮನೆಯವರು ಒಪ್ಪುತ್ತಾರೋ ಇಲ್ಲವೋ ಎಂಬ ಸಂಶಯ ಇತ್ತು. ಮೊದಲು ಅಮ್ಮನಲ್ಲಿ ಹೇಳಿದೆ .ಅಮ್ಮ ನೋವಿನಿಂದ ಒಪ್ಪಿಗೆ ಇತ್ತಳು.ನಂತರ ಅಪ್ಪನಲ್ಲಿ ಹೇಳಿದಾಗ ಅಪ್ಪ ಕಡ್ಡಿ ತುಂಡು ಮಾಡಿದಂತೆ ಇದು ಸಾಧ್ಯವಿಲ್ಲ ಎಂದರು .ಮಾರನೇ ದಿನವೇ ಬೆಂಗಳೂರಿನಲ್ಲಿದ್ದರು. ಕೈತುಂಬ ಹಣ ತಂದಿದ್ದರು .."ನೋಡು ನೀನು ನನಗೆ ಒಬ್ಬನೇ ಮಗ .ನಿನ್ನನ್ನು ಮದುವೆಯಾಗುವ ಹುಡುಗಿ ನಮ್ಮದೇ ಸಂಪ್ರದಾಯದವಳು ಆಗಿರಬೇಕು. ನಮ್ಮದು ತಲೆತಲಾಂತರದಿಂದಲೂ ಶ್ರೀಮಂತ ಮನೆತನ . ಗೌರವಾದರಗಳನ್ನು ಕಾಯ್ದುಕೊಂಡಿದೆ .ಅಂತಹದರಲ್ಲಿ ಬಂಗಾರಣ್ಣನ ಮಗ ಇಂತಹ ಕೆಲಸ ಮಾಡಿದ ಎಂದರೆ ಅವಮಾನ... ದುಡ್ಡನ್ನು ಆಕೆಗೆ ಎಸೆದು ಊರಿಗೆ ಹೋಗೋಣ. ನಮ್ಮದೇ ಭೂಮಿಯಿದೆ ಇತರರ ಅಡಿಯಾಳಾಗಿ ದುಡಿಯುವುದು ಬೇಕಾಗಿಲ್ಲ." ಎಂದರು. ನಿಂತಲ್ಲೆ ಮೈಯೆಲ್ಲ ಉರಿದಂತೆ ಆಯಿತು..ಸಿಂಧ್ಯಾಳಿಗೆ ಮೋಸ ಮಾಡಲು ಮನಸ್ಸಿಲ್ಲ .ಅಪ್ಪ-ಅಮ್ಮನ ಮನಸ್ಸು ನೋಯಿಸುವ ಇರಾದೆಯಿಲ್ಲ ..ನಾನು ಇಬ್ಬಂದಿತನದಲ್ಲಿ ನರಳಾಡಿದೆ.
ಕೊನೆಗೂ ಅಪ್ಪನ ಮಾತು ನಡೆಯಿತು. ನಡೆಯುವಂತೆ ಒತ್ತಡ ಹೇರಿದರು. "ಮಾತು ಮೀರಿ ಮದುವೆಯಾದರೆ ಮತ್ತೆಂದೂ ಮುಖ ತೋರಿಸಬೇಡ ."ಎಂದರು .ಆಗ ನನ್ನಲ್ಲಿ ಈಗಿನಷ್ಟು ಗಟ್ಟಿತನವಿರಲಿಲ್ಲ .ಆದ್ದರಿಂದ ತಲೆತಗ್ಗಿಸಿಕೊಂಡು ಅಪ್ಪನ ಮಾತನ್ನು ಒಪ್ಪಿಕೊಂಡು ದುಡ್ಡನ್ನು ಆಕೆಯ ಕೈಗಿತ್ತೆ..ಆಕೆಗೂ ನೋವಿನಿಂದ ನನ್ನನ್ನು ಕಣ್ಣೆತ್ತಿ ನೋಡಲು ಸಾಧ್ಯವಾಗಲಿಲ್ಲ.. ನಾನು ಕಣ್ತುಂಬಿಕೊಂಡು ಬೀಳ್ಕೊಟ್ಟೆ. ಅವಳ ತಂದೆ-ತಾಯಿಗೆ ಸುದ್ದಿ ಗೊತ್ತಾಗಿ ನಮ್ಮ ಊರಿಗೆ ಬಂದು ಗಲಾಟೆ ಮಾಡಿದರು ..ಮತ್ತೂ ಒಂದಷ್ಟು ದುಡ್ಡು ಕೊಟ್ಟು ಅಪ್ಪ ಕೈತೊಳೆದು ಕೊಂಡರು.
ನಂತರ ನನ್ನ ಮನಸ್ಸು ಅದೇಕೋ ಸಿಂಧ್ಯಾಳನ್ನು ಕಂಡರೆ ದ್ವೇಷಿಸುತ್ತಿತ್ತು. ಅಲ್ಲದೇ ಅದೇ ವಯಸ್ಸಿನ ಹೆಣ್ಣುಮಕ್ಕಳನ್ನು ಕಂಡರೆ ಮನಸ್ಸು ನಿಯಂತ್ರಣಕ್ಕೆ ಬರುತ್ತಿರಲಿಲ್ಲ.. ನನಗೆ ಜಾತಕ ಕಳುಹಿಸಿದ್ದ ಮೈತ್ರಿ ಎನ್ನುವ ಹುಡುಗಿಯ ಮೇಲೆ ವಿನಾಕಾರಣ ದ್ವೇಷ ಸಾಧಿಸಲು ಹೊರಟಿದ್ದೆ.ನಿನ್ನ ಆಗಮನದ ನಂತರ ನನ್ನ ಮನಸ್ಸು ಒಂದು ಹಿಡಿತಕ್ಕೆ ಬಂದಿದ್ದು, ಹಾಗೆಯೇ ನಾನು ಮಾಡಿದ ತಪ್ಪುಗಳ ಅರಿವಾಗುತ್ತಿದೆ .ನಿನ್ನ ವಿಷಯದಲ್ಲಿ ನಾನು ತಪ್ಪು ಮಾಡಬಾರದು ಎಂದು ಅವತ್ತು ನಿನ್ನೊಂದಿಗೆ ಹೆಜ್ಜೆ ಹಾಕಿದೆ. ಹೇಳು ಸೌಜನ್ಯ... ನನ್ನನ್ನ ಕ್ಷಮಿಸುವೆಯಾ..?
"ಅಯ್ಯೋ ನಾನೇನು ಕ್ಷಮಿಸುವುದಿದೆ..ಅಂತ. ಮುಂದೆ ಯಾವತ್ತಾದರೂ ಸಿಂಧ್ಯಾಳನ್ನು ಸಂಪರ್ಕಿಸಿ ಕ್ಷಮೆ ಕೇಳೋಣ. ಪಶ್ಚಾತಾಪ ಪಟ್ಟುಕೊಂಡಿದ್ದಾರೆ ಎಂಬುದು ಅರಿವಾದರೆ ಆಕೆಯೂ ಕ್ಷಮಿಸಿಯಾಳು.. ಕ್ಷಮೆ ಕೇಳಿದರೆ ದೊಡ್ಡವರಾಗುವುದು.. ಸಣ್ಣವರಾಗುವುದೇನಲ್ಲ..." ಸೌಜನ್ಯಳ ಮಾತನ್ನು ಕೇಳಿ ಹಗುರಾದ ಕೇಶವ್ ಆಕೆಯನ್ನು ಬರಸೆಳೆದುಕೊಂಡ...
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
08-04-2020.
👏👏
ReplyDelete💐🙏
ReplyDelete