Saturday, 4 April 2020

ಜೀವನ ಮೈತ್ರಿ ಭಾಗ ೫೭(57)




ಜೀವನ ಮೈತ್ರಿ -ಭಾಗ ೫೭



   ಬಾರಂತಡ್ಕದ ಮನೆಯಲ್ಲಿ ಗೊಂದಲವು ಏರ್ಪಟ್ಟಿತ್ತು. ಎಲ್ಲರ ಬಾಯಲ್ಲೂ ಅಂತೆಕಂತೆಗಳ ಕಾರು-ಬಾರು .ಗುರಿಕಾರರು ಊಟವನ್ನು ಬಡಿಸುವ ಯೋಚನೆ ಮಾಡಿದರು .ಸ್ಟೇಷನ್ಗೆ ತೆರಳಿದವರು ಪ್ರಕರಣ ಇತ್ಯರ್ಥವಾದ ಮೇಲೆ ಬರಬಹುದು .ಅಲ್ಲಿವರೆಗೆ ಬಂದ ನೆಂಟರನ್ನು ಕಾಯುವುದರಲ್ಲಿ ಅರ್ಥವಿಲ್ಲ.. ಎಂದು ಭೋಜನ ಆರಂಭಿಸಿದರು.

     ಸುಮಾರು ಎರಡು ಗಂಟೆಯ ಹೊತ್ತು. ಬಂಗಾರಣ್ಣ ಒಬ್ಬನೇ ವಾಪಸ್ ಆದದ್ದು ಕಂಡು ಸುಮಾಳಿಗೆ ಕಳವಳ ಹೆಚ್ಚಾಯಿತು ."ನನ್ನ ಪ್ರೀತಿಯ ಮಗ ಕೇಶವ ಎಲ್ಲಿ ?"ಎಂದು ಪ್ರಶ್ನಿಸಿದಳು. "ಅದೆಲ್ಲಾ ಆಮೇಲೆ ಮಾತಾಡೋಣ. ಮೊದಲು ಬಂದವರನ್ನು  ಕಳುಹಿಸೋಣ "ಎಂದರು ಬಂಗಾರಣ್ಣ. ವಧುವಿನ ಕಡೆಯವರು ಊಟ ಮುಗಿಸಿ ಸಪ್ಪೆ ಮೋರೆಯಿಂದ ಮರಳಿದರು. ರೇಖಾ ತಲೆತಗ್ಗಿಸಿ ಮಗಳ ಮನೆಯನ್ನು ಕಂಬನಿದುಂಬಿ ದಿಟ್ಟಿಸಿ 'ಮಗಳಿಗೆ ಆದಷ್ಟು ಬೇಗ ಈ ಮನೆಯ ಹೊಸ್ತಿಲು ದಾಟುವ ಸೌಭಾಗ್ಯ ಬರಲಿ ' ಎಂದು ಆಶಿಸುತ್ತಾ ಹೊರಟರು.

            ಮಾವನೊಂದಿಗೆ ಹೊರಟಿದ್ದ ಕೇಶವ್ ಹಸಿವೆ ತಡೆಯಲಾರದೆ ಹೋಟೆಲ್ ಗೆ ತೆರಳಿದ. ಮನೆಯಲ್ಲಿ ತಯಾರಿಸಿದ ಶಾಖ ಪಾಕಗಳ ನೆನಪಾಗಿ ಕಂಬನಿ ತುಂಬಿ ಬಂತು ಅವನಿಗೆ. ಮೊದಲೇ ಸಿಹಿತಿಂಡಿ ಎಂದರೆ ಬಲು ಪ್ರೀತಿ.. ಹೋಳಿಗೆ ,ಹೆಸರು ಪಾಯಸ ಎಲ್ಲವನ್ನು ನೆನಪು ಮಾಡಿಕೊಂಡು ಚಪಾತಿ ,ಪೂರಿ ತಿಂದು ತೃಪ್ತಿಪಟ್ಟುಕೊಂಡನು. ಸೌಜನ್ಯಳ ಮನೆಗೆ ತೆರಳಿ ವಿಶ್ರಾಂತಿ ಪಡೆದುಕೊಂಡು ರಾತ್ರಿ ಅವಳ ತಂದೆ-ತಾಯಿಯೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಕಾರು ಸಾಗುತ್ತಿದ್ದಂತೆಯೇ  ಪಕ್ಕದಲ್ಲಿ ಕುಳಿತಿದ್ದ ಸೌಜನ್ಯ ನಿದ್ದೆಯಿಂದ ತೂಕಡಿಸತೊಡಗಿದಳು. ತೂಕಡಿಸಿ ಮೈಮೇಲೆ ಬೀಳುತ್ತಿದ್ದ ಮಡದಿಯನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡ. ಚಂದಿರನ ಬೆಳದಿಂಗಳಿನಲ್ಲಿ ಮುದ್ದು ಮುಖ ಹಾಯಾಗಿ ನಿದ್ರಿಸುವುದನ್ನು ಕಂಡು ಸಂತಸ ಪಟ್ಟು ಕೊಂಡ ..ತಾನಿಂದು ತೆಗೆದುಕೊಂಡ ನಿರ್ಧಾರದಿಂದ ಈ  ಜೀವ ಇಂದು ಸುಖವಾಗಿ ನಿದ್ರಿಸುತ್ತಿದೆ. ಅಲ್ಲಿ ನನ್ನ ತಾಯಿ ತಂದೆ ಇಬ್ಬರೂ ಇಂದು ನಿದ್ರಾಹೀನರಾಗಿರಬಹುದು... ಏನು ಮಾಡುವುದು ? ವಿಧಿ ಹೀಗೆ ಬರೆದಿದ್ದರೆ... ಒಂದಲ್ಲ ಒಂದು ದಿನ ತಾಯಿ ಮತ್ತೆ ನನ್ನನ್ನು ಕರೆಸಿಕೊಂಡಾರು.. ಆ ದಿನಕ್ಕಾಗಿ ನಾನು ತಾಳ್ಮೆಯಿಂದ ಕಾಯಬೇಕು.. ನನ್ನನ್ನ ನಂಬಿ ಬಂದ ಈ ಜೀವಕ್ಕೆ ನಾನು ಆಸರೆಯಾಗಬೇಕು.. ಎಂದು ಯೋಚಿಸುತ್ತಿದ್ದ ಅವನು ಆಕೆಯ ಕೆನ್ನೆ ಮೇಲೆ ಹೊರಳುತ್ತಿದ್ದ ಜಮುಕಿಯನ್ನ ಮೆಲ್ಲನೆ ಮುಟ್ಟಿದ.. ನಿದ್ರಾ ಭಂಗವಾದಂತೆ ಒಮ್ಮೆ ಶರೀರ ಅಲ್ಲಾಡಿಸಿ ಮತ್ತಷ್ಟು ಕೇಶವನಿಗೆ ಅಂಟಿಕೊಂಡು ಮಲಗಿದಳು.

                        *****

         ಶಾಸ್ತ್ರಿ ನಿವಾಸದಲ್ಲಿ ನಿಶ್ಚಿತಾರ್ಥದ ಸಂಭ್ರಮ. ಶನಿವಾರ ಸಂಜೆಯಾಗುತ್ತಿದ್ದಂತೆಯೇ ಒಬ್ಬೊಬ್ಬರೇ ನೆಂಟರು ಆಗಮಿಸಿದರು.ಮೈತ್ರಿಯ ಮುಖದ ಮೇಲೆ ಒಂದು ದೃಷ್ಟಿ ಬೊಟ್ಟಿನಂತೆ ಸಣ್ಣದೊಂದು ಮೊಡವೆ ಎದ್ದದ್ದು ಮಂಗಳಮ್ಮನಿಗೆ  ಬಹಳ ಹಿಂಸೆಯಾಯಿತು. ಕೂಡಲೇ ಅಂಗಳದ ಬದಿಯಲ್ಲಿದ್ದ ಅರಸಿನ ಗಿಡದ ಬುಡದಿಂದ ಸಣ್ಣ ಗಡ್ಡೆಯನ್ನು ತಂದು ಶುಚಿಗೊಳಿಸಿ ಅರೆದು ಅದನ್ನು ಮೊಡವೆಯ ಮೇಲೆ ಲೇಪಿಸಿದರು.ಶ್ಯಾಮಶಾಸ್ತ್ರಿಗಳು ಹಾಗೂ ಮಹಾಲಕ್ಷ್ಮಿ ಅಮ್ಮ ಬಂದವರೆಲ್ಲರನ್ನೂ ಆದರಿಸಿ ಮಾತನಾಡಿಸುತ್ತಿದ್ದರು. ಬೆಂಗಳೂರಿನಿಂದ ಶಂಕರನ ಕುಟುಂಬ ಆಗಮಿಸಿದ್ದು ,ತಂಗಿಯರಾದ ಸಂಜನಾ ವಂದನಾ ಬಂದದ್ದು ಮೈತ್ರಿಗೆ ಆನೆಬಲ ಬಂದಂತಾಯಿತು. ಭಾಸ್ಕರ್ ಶಾಸ್ತ್ರಿಗಳು ಅಡಿಗೆ ಕಿಟ್ಟಣ್ಣನ ಅಡುಗೆಗೆ ಬೇಕಾದ ಎಲ್ಲಾ ಸಾಮಾನುಗಳನ್ನು ಹೊರಗಿಟ್ಟು ಕೊಟ್ಟರು .ಮಂಗಳಮ್ಮ ಕಾಫಿ-ತಿಂಡಿ ಮಾಡಿಕೊಡುವುದರಲ್ಲಿ,ಉಟದ ತಯಾರಿಯಲ್ಲಿ ನಿರತರಾದರು.


       ತಡರಾತ್ರಿವರೆಗೂ ಸಂಜನಾ ವಂದನ ಮೈತ್ರಿ ಹರಟೆ ಹೊಡೆಯುತ್ತಿದ್ದರು. ಮಹೇಶ್ ಮೆಲ್ಲನೆ ರೂಮಿನೊಳಗೆ ಒಮ್ಮೆ ಇಣುಕಿ "ಅಕ್ಕ ನಿದ್ದೆ ಬರ್ತಿಲ್ವಾ..ಮೊದಲನೇ ಅತಿಥಿಯಾಗಿ ಮೊಡವೆ ಹಾಜರಾಗಿದೆ.ಇನ್ನು
ನಿದ್ದೆಗೆಟ್ಟು ಕಣ್ಣ ಸುತ್ತಲು ಕಪ್ಪಾದರೆ ಭಾವನಿಗೆ ಪರಿಚಯವೇ ಸಿಗಲಾರದು. "

"ಹೋಗೋ ತಮ್ಮ ನಿನಗೇನು ಗೊತ್ತು ನಮ್ಮ ಹರಟೆಯ ಗಮ್ಮತ್ತು.."

"ಓಹೋ..ಹಾಗೆ ತಂಗಿಯರಲ್ಲಿ ವರದಿ ..ವಾಚ್ ಕಟ್ಟಿದ್ದು... ಕಾಲ್ಗೆಜ್ಜೆ ತೊಡಿಸಿದ್ದು... ನಾಳೆ ಏನು ಕೊಡುತ್ತಾರೆ ಎಂಬುದನ್ನು ಹೇಳದೆ ನಿದ್ದೆ ಬರಲಾರದು"

"ನಿಂಗೆ ಪರೀಕ್ಷೆ ಹತ್ತಿರ ಬಂತು. ಓದುತ್ತಾ ಇರುವವನಿಗೆ ಇಲ್ಲಿಗೆ ಏಕೆ ಗಮನ?.. ಏಕಾಗ್ರತೆಯಿಂದ ಓದು"


ಅಪ್ಪ .."..ಮಹೇಶ್.." ಎಂದು ಕರೆದಾಗ ಆತ ಮೆಲ್ಲನೆ ತೆರಳಿದ. ನಾಳೆಗೆ ಎಂದು ಬಾಳೆ ಎಲೆಗಳನ್ನು ಸ್ವಚ್ಛಗೊಳಿಸಿ ಕಟ್ಟು ಕಟ್ಟಿ ಇಡುವ ಕೆಲಸವನ್ನು ಅವನಿಗೆ ಹೊರಿಸಿದರು. ಶಂಕರ ಚಿಕ್ಕಪ್ಪನು ಜೊತೆಯಾದರು.


                *****


      ಕಿಶನ್ ಬೆಂಗಳೂರಿನಿಂದ ಹೊರಟು ಊರಿಗೆ ತಲುಪಿ ಹಾಗೆಯೇ ಒಂದು ಸಂದೇಶ ರವಾನಿಸಿದ.


ನನ್ನ ಬದುಕಿನ ಭಾವಗಳಿಗೆ ರಂಗು ತುಂಬಿದವಳೇ...
ನನ್ನೊಳಗಿನ ಹೃದಯಕ್ಕೂ ಪ್ರೇಮವೇನೆಂದು ಕಲಿಸಿದವಳೇ...
ನನ್ನ ನಯನಗಳಿಗೆ ಆರಾಧನೆಯ ಹುಚ್ಚು ಹಿಡಿಸಿದವಳೆ...
ಇಂದು ನನ್ನ ಜೀವದ ಕಣಕಣದ ತುಂಬಾ
ಅನುರಾಗದ ಹೊಳೆ...
ರಚ್ಚೆ ಹಿಡಿದಿದೆ ನನ್ನ ಮನವು ನಿನ್ನ ಕಾಣಬೇಕೆಂದು ನಾಳೆ...


ಕಿಶನ್ ನ ಸಂದೇಶವನ್ನು ಮೈತ್ರಿ ಖುಷಿ. ಇನಿಯನನ್ನು ಕಾಣುವ ತವಕ. ಅಜ್ಜಿ ರೂಮಿಗೆ ಬಂದವರೇ "ಇನ್ನು ಮಲಗು ಸಾಕು ಮೊಬೈಲ್ನಲ್ಲಿ ಗುರುಟಿದ್ದು. "ಎಂದಾಗ ಮೊಬೈಲ್ ಆಫ್ ಮಾಡಿ ಮಲಗಿ ಕೊಂಡಳು.


                ******

        ಬೆಳಗಿನ ಜಾವ4:00 ಗಂಟೆಗೆ ಕೇಶವ್ ಮಡದಿಯೊಂದಿಗೆ ಮಾವನ ಮನೆ ಸೇರಿದ್ದ. ಸಾಮಾನುಗಳನ್ನು ಕಾರಿನಿಂದ ಕೆಳಗಿಳಿಸಿ ಮನೆಯೊಳಗೆ ಕಾಲಿಡುವ ಮುನ್ನ ಸುನಿತಾ ಮದುಮಕ್ಕಳನ್ನು ಬರಮಾಡಿಕೊಳ್ಳಲು ಹಾನ (ಕುಂಕುಮ ನೀರು) ತಂದರು. ರೇಖಾ ಮಗಳು-ಅಳಿಯನನ್ನ ದೃಷ್ಟಿ ತೆಗೆದು ಒಳಗೆ ಕರೆದುಕೊಂಡು ಬಂದರು.ರೇಖಾ ಸುನಿತಾಳಲ್ಲಿ ಸೌಜನ್ಯಳ ಬೆಡ್ ಗೆ ವಸ್ತ್ರವನ್ನು ಹಾಸಲು ಹೇಳಿದಳು.. ಸುನಿತಾಗೆ ಆಶ್ಚರ್ಯವಾದರೂ ಮರುಮಾತನಾಡದೆ ಹೇಳಿದ ಕೆಲಸವನ್ನು ಮಾಡಿದಳು .ಗಂಡನ ಮನೆಗೆ ತೆರಳಬೇಕಾದವಳು ಇಲ್ಲಿಗೆ ಬಂದದ್ದು ಏನು? ಎಂಬ ಸಣ್ಣ ಸಂಶಯದ ಪ್ರಶ್ನೆ ಅವಳನ್ನು ಕಾಡಿತ್ತು.ಬೆಡ್ ರೂಮ್ ಕಡೆಗೆ ರೇಖಾ ಒಮ್ಮೆ ಹೋಗಿ ಎಲ್ಲ ಸರಿಯಾಗಿದೆ ಎಂದು ನೋಡಿ ಬಂದಳು. ಮಗಳಲ್ಲಿ ಅಳಿಯನನ್ನು ಕರೆದುಕೊಂಡು ಹೋಗು ಎಂದು ಸೂಚಿಸಿದರು. ಪತಿಯೊಂದಿಗೆ ಕೈಗೆ ಕೈ ಬೆಸೆದು ಮಾಳಿಗೆಯ ಮೆಟಲ್ ಹತ್ತಿದ ಸೌಜನ್ಯ ರೂಮಿನೊಳಗೆ ಹೋಗಿ ಕೇಶವ್ ಬಾಗಿಲು ಭದ್ರಪಡಿಸಿದಂತೆ ಅವನನ್ನು ಗಟ್ಟಿಯಾಗಿ ಆಲಂಗಿಸಿ ಅತ್ತಳು. ಅಳುತ್ತಿದ್ದ ತನ್ನ ಮಡದಿಯ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ನಿನ್ನ ಜೊತೆಗೆ ನಾನಿದ್ದೇನೆ ಎಂಬ ಭರವಸೆಯನ್ನು ನೀಡಿದ ನಾನು ಎಂದಿಗೂ ಕೈ ಬಿಡಲಾರೆ ..ಇದು ಅಳುವ ಸಮಯವಲ್ಲ ಎಂದವನೇ ಕಣ್ಣೀರನ್ನು ಒರೆಸಿ ತುಟಿಗೆ ತುಟಿ ಬೆಸೆದ.ನೋವಿನಲ್ಲಿ ಪತಿ ನೀಡಿದ ಸಾಂತ್ವನ   ಪ್ರೇಮವನ್ನು ದುಪ್ಪಟ್ಟು ಗೊಳಿಸಿತು. ಒಬ್ಬರಿಗೊಬ್ಬರು ಅಂಟಿ ಬಾಲ್ಕನಿಯಲ್ಲಿ ನಿಂತು ತಂಗಾಳಿಗೆ ಮೈಯ್ಯೊಡ್ಡಿದರು .. ,ಚಂದಿರನೂ ಕೂಡಾ ನಿಮ್ಮೊಂದಿಗೆ ನಾನಿದ್ದೇನೆ ಎಂಬಂತೆ ನಡೆಯುತ್ತಿದ್ದ. ಕೇಶವನ ತುಂಟತನಕ್ಕೆ ಸೋತ ಸೌಜನ್ಯ ಆತನ ಬಾಹುಬಂಧನದಲ್ಲಿ ಮೈಮರೆತಳು. ರೂಮಿನೊಳಗೆ ಬಂದು  ಲೈಟ್ ಆರಿಸಿದರು .ಪ್ರೇಮ ದೀಪ ಉರಿಯಿತು. ಶೃಂಗಾರ ಭಾವ ಉದಿಸಿ ಎರಡೂ ಜೀವವನ್ನು ಒಂದಾಗಿಸಿತು.


       ಬೆಳಗ್ಗೆ ಗಂಟೆ ಹತ್ತು ಆಗುತ್ತಿದ್ದಂತೆ ಎಚ್ಚರವಾದ ನವದಂಪತಿ ಏಳುವ ಆತುರ ತೋರದೆ ಮತ್ತೆ ಮುಸುಕೆಳೆದುಕೊಂಡರು.ಮಡದಿಯ ಪ್ರಶಾಂತ ಮುಖವನ್ನು ಕಂಡು ಕುತೂಹಲ ತಡೆಯದೆ "ಬಶೀರ್ ನ ಮತ್ತು ನಿನ್ನ ಮಧ್ಯೆ ನಡೆದುದಾದರೂ ಏನು ?"ಎಂದು ಪ್ರಶ್ನಿಸಿದ..

 ಸೌಜನ್ಯಾ ತಾನು ಬಶೀರ್ ನಿಂದ ಹೇಗೆ ಮೋಸಕ್ಕೊಳಗಾದೆ ಎಂದು ಹೇಳಿಕೊಂಡಳು.. ಆತ ಭರತ್  ಕುಮಾರ್..ಜ್ಯೂಸ್ ಕುಡಿಯೋಣ  ಎಂದು ಜ್ಯೂಸ್ ಸೆಂಟರ್ ಒಂದಕ್ಕೆ ಕರೆದೊಯ್ದಿದ್ದ .ಅವನ ಮೇಲೆ ನಂಬಿಕೆ ಇದ್ದು ನಾನು ತೆರಳಿದೆ.ಜ್ಯೂಸ್ ಕುಡಿದ ಬಳಿಕ ಏನಾಗಿದೆಯೋ ನನಗೆ ಗೊತ್ತಿಲ್ಲ. ಹಾಗೆ ಮೆಲ್ಲನೆ ಕಣ್ಣು ಒಡೆಯಲು ಪ್ರಯತ್ನಿಸುತ್ತಿದ್ದೆ. ಕಷ್ಟವಾಗುತ್ತಿತ್ತು ಆದರೂ ಪ್ರಯತ್ನಿಸಿದಾಗ ಮನೆಯಲ್ಲಿ ಇಲ್ಲ ಬೇರೆಲ್ಲೋ ಇದ್ದೇನೆ ಎಂಬುದು ಅರಿವಾಗಿತ್ತು ..ಪೂರ್ತಿ ಕಣ್ಣೊಡೆದಾಗ ಬಟ್ಟೆ ಅಸ್ತವ್ಯಸ್ತವಾಗಿತ್ತು  .ಪಕ್ಕನೆ ಮುಚ್ಚಿಕೊಳ್ಳಲು ಹೊರಟ ನನಗೆ ಕಂಡಿದ್ದು ಬೆನ್ನು ಹಾಕಿ ಮಲಗಿದ್ದ ಭರತ್ ... ಆಗಲೇ ನನಗೆ ಮೋಸದ ಅರಿವಾಗಿದ್ದು ..ನನ್ನತನವನ್ನು ಬಲಿತೆಗೆದುಕೊಂಡಿದ್ದ.. ಏಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದರೆ ವಿಕಟ ನಗುವೇ ಉತ್ತರ.. ಸ್ವಲ್ಪ ಹೊತ್ತಿನಲ್ಲಿ ಕೆಳಗಿನಿಂದ ಯಾರೋ ಬಶೀರ್ ಎಂದು ಕರೆದಾಗ ಆತ ಭರತ್ ಕುಮಾರ್ ಅಲ್ಲ ಬಶೀರ್ ಎಂದು ತಿಳಿದು ತಲೆಸುತ್ತು ಬಂದಂತಾಯಿತು.


       ನಂತರ ನನಗೆ ಸದಾ ಗೃಹ ಬಂಧನವೇ ಜೀವನ ಆಯ್ತು ..ರಾತ್ರಿಯಾದರೆ ಆಗಮಿಸುತ್ತಿದ್ದ .. ತನ್ನ ಕಾಮದ ಹಸಿವು ತೀರಿಸಿ ಬೆಳ್ಳಂಬೆಳಗ್ಗೆ ಮರೆಯಾಗುತ್ತಿದ್ದ.. ಯಾರೋ ಒಬ್ಬಾಕೆ ಬುರ್ಖಾ ಧರಿಸಿದ ಹೆಣ್ಣುಮಗಳೊಬ್ಬಳು ಆಹಾರ ತಂದುಕೊಡುತ್ತಿದ್ದಳು. ಹೀಗೆ ಒಂದು ದಿನ ಎಲ್ಲಿಗೋ ಹೋಗಲಿದೆ ಎಂದು ನನ್ನನ್ನು ಹೊರಡಿಸಿದ್ದ .ಆಮೇಲೆ ನನಗೆ ತಿಳಿಯಿತು ನನ್ನ ಅವನ ಮದುವೆಯೆಂದು .ತಪ್ಪಿಸಿಕೊಳ್ಳಲು ನನಗೆ ಯಾವುದೇ ದಾರಿ ಇರಲಿಲ್ಲ.  ಮದುವೆಯಾಯಿತು ..ಒಂದಷ್ಟು ಫೋಟೋಗಳನ್ನು ಸೆರೆಹಿಡಿದಾಯಿತು . ನಂತರದ್ದು ಬುರ್ಖಾದೊಳಗಿನ ಜೀವನ.


      ಗೂಳಿಯಂತೆ ನನ್ನ ಮೇಲೆರಗುತ್ತಿದ್ದ.ನಾನು ಆತನಿಗೆ ಕಾಮದ ವಸ್ತುವಾಗಿದ್ದೆನೇ ಹೊರತು ಯಾವುದೇ ಪ್ರೇಮದಭಾವನೆಗಳು ಇರಲಿಲ್ಲ.. ನನಗೆ ಅಂತಹ ಪರಿಸ್ಥಿತಿಯಲ್ಲಿ ಮಗು ಬೇಡವಾಗಿತ್ತು. ಪರಿಪರಿಯಾಗಿ ಬೇಡಿಕೊಂಡೆ ಕಾಂಡೋಮ್ ಆದರೂ ಬಳಸು ಎಂದು..." ನಾವು ಗಂಡಸರು ಇರುವುದು ಹೆಣ್ಣನ್ನು ಅನುಭವಿಸಲು ..ಹೆಣ್ಣುಮಕ್ಕಳು ಇರುವುದೇ ಗಂಡನಿಗೆ ತೃಪ್ತಿ ನೀಡಿ ,ಮಕ್ಕಳನ್ನು ಹೆರಲು..."ಎಂದಿದ್ದ.
ಈ ಮಾತನ್ನು ಕೇಳಿದ ನನಗೆ ನಮ್ಮ ಧರ್ಮದ ಮೇಲೆ ಮೊತ್ತ ಮೊದಲಬಾರಿಗೆ ಅಭಿಮಾನವುಂಟಾಯಿತು.ಸ್ತ್ರೀಯರನ್ನು ಗೌರವಿಸುವ, ಪೂಜಿಸುವ ಧಾರ್ಮಿಕ ಪರಂಪರೆ ನಮ್ಮದು.ನಮ್ಮ ಹಿಂದೂ ಧರ್ಮ ಎಷ್ಟು ಪವಿತ್ರವಾದುದು ಎಂದು ನನಗೆ ಅರಿವಾಗಿತ್ತು.    ಆ ಕ್ಷಣದಿಂದಲೇ ಹನುಮಂತನನ್ನು ಆರಾಧಿಸಿದೆ. ಯಾವುದೋ ಒಂದು ಭಜನಾ ಮಂದಿರದಿಂದ ಶನಿವಾರದಂದು ಕೇಳಿಬರುತ್ತಿದ್ದ ಹನುಮಾನ್ ಚಾಲೀಸ್ ಅನ್ನು ನಾನು ಸದಾ ನಾಲಗೆಯಲ್ಲಿ ಗುನುಗಲು  ಆರಂಭಿಸಿದೆ . ನಿರಂತರ ಹನುಮನ ಧ್ಯಾನವೇ ನನಗೆ ಶಕ್ತಿಯನ್ನು ಒದಗಿಸಿತು..

ಮುಂದುವರಿಯುವುದು...


✍️... ಅನಿತಾ ಜಿ.ಕೆ.ಭಟ್.
04-04-2020.







2 comments: