Monday, 27 April 2020

ಜೀವನ ಮೈತ್ರಿ ಭಾಗ ೬೮(68)



ಜೀವನ ಮೈತ್ರಿ ಭಾಗ ೬೮


          ನೀರು ಕುಡಿದು ಭಾಸ್ಕರ ಶಾಸ್ತ್ರಿಗಳು ಭಾವನನ್ನು ಕರೆದರು.  ತಮ್ಮ ಎಂದಿನ ಶೈಲಿಯಲ್ಲಿ ಅವರ ಕಿವಿಗೆ ಬಿದ್ದ ಸುದ್ದಿಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಬಂದಿದ್ದೇವೆ ಎಂದು ಪೀಠಿಕೆ ಹಾಕಿದರು...ಶಶಿಗೆ ಹೊಟ್ಟೆ ಒಳಗೆ ಕಿವುಚಿದಂತೆ ಆಯಿತು. ಶಂಕರ ಭಾವ
"ಏನೋ ಹೆಣ್ಣುಮಕ್ಕಳು... ನಾಲಿಗೆ ಸ್ವಲ್ಪ ಉದ್ದ ಜಾಸ್ತಿ... ಇಲ್ಲಿಗೆ ಬಿಟ್ಟುಬಿಡೋಣ ಭಾವ" ಎಂದು ಹಾರಿಕೆಯ ಉತ್ತರವನ್ನು ನೀಡಿದರು.. ಆದರೆ ಶಶಿ ಮಾತ್ರ
" ನಾನು ಹಾಗೆ ಹೇಳಿಲ್ಲ .."ಎಂದು ವಾದಿಸಲು ಆರಂಭಿಸಿದರು..ಶ್ಯಾಮ ಶಾಸ್ತ್ರಿಗಳು ಕೂಡ ಮಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಆದರೆ ಆಕೆ "ನನಗೆ ಇಂತಹ ಕೆಲಸ ಮಾಡಲು ಹೇಗಾದರೂ ಮನಸ್ಸು ಬಂದೀತು..ಅದೂ ತವರು ಮನೆಯವರ ಬಗ್ಗೆ..ತಮ್ಮನ ಮಗಳೆಂದರೆ ಹೆಣ್ಣುಮಕ್ಕಳಿಲ್ಲದ ನನಗೂ ಮಗಳಂತೆ..ನಾನು ಇಂತಹಾ ಕೆಲಸವನ್ನು ಮಾಡಿಲ್ಲ.." ಎಂದು ನಯವಾಗಿ ಜಾರಿಕೊಂಡರು. ಸಿಟ್ಟು ಬಂದ ಭಾಸ್ಕರ ಶಾಸ್ತ್ರಿಗಳು 'ಈ ವಿಷಯದಲ್ಲಿ ಮಾತ್ರ ನಿನ್ನನ್ನು ಸುಮ್ಮನೆ ಬಿಡಲಾರೆ ..ಮಾಡಿದ ತಪ್ಪು ಲೋಕಕ್ಕೆ ತಿಳಿಯಬೇಕು.ಇನ್ನೊಮ್ಮೆ ಇಂತಹಾ ನೀಚಬುದ್ಧಿಗಿಳಿಯದಂತೆ ಎಚ್ಚರಿಕೆಯ ಪಾಠವಾಗಬೇಕು.. 'ಎಂದು ತನ್ನಲ್ಲೇ ಅಂದುಕೊಂಡು ತನ್ನ ಭಾವಿ ಅಳಿಯನಿಗೆ ಕರೆ ಮಾಡಿ ಪುರೋಹಿತರ ಸಂಪರ್ಕ ಸಂಖ್ಯೆಯನ್ನು ಪಡೆದುಕೊಂಡರು...ಪುರೋಹಿತರಲ್ಲಿ  ತಾವೇ ಖುದ್ದಾಗಿ ಲೌಡ್ ಸ್ಪೀಕರ್ ಹಾಕಿ ಮಾತನಾಡಿದರು...ಅವರ ಮಾತುಗಳು ರೆಕಾರ್ಡ್ ಆಗುತ್ತಿದ್ದವು...ಶಂಕರ ಭಾವ ಗಮನವಿಟ್ಟು ಕೇಳುತ್ತಿದ್ದಂತೆ ಅವರ ಮುಖ ವಿವರ್ಣವಾಯಿತು..  ಶಶಿ  ನಾನು ಮಾಡಿಲ್ಲ ಎಂದು ಗರ್ವದಿಂದ ವಾದಮಾಡುತ್ತಿದ್ದವರು ತಲೆ ಕೆಳಗೆ ಹಾಕಿ ನಿಂತರು..  ಆಕೆಯ ಕೈಕಾಲುಗಳು ನಡುಗುತ್ತಿದ್ದವು...ಮೈ ಬೆವರುತ್ತಿತ್ತು..

          ಪುರೋಹಿತರ ಬಳಿ ಕೇಳಿದಾಗ ಅವರು ಮೊದಲಿನಂತೆಯೇ ಅಂದರು... ಈಗ ಶಶಿ ಒಪ್ಪಿಕೊಳ್ಳಲೇ ಬೇಕಾಯಿತು... ಆಕೆಯ ಪತಿ ಆಕೆಯ ಬಳಿಗೆ ತೆರಳಿ " ಮಾಡಬಾರದನ್ನು ಮಾಡಿ.. ಹೇಳಬಾರದ್ದನ್ನು ಹೇಳಿದ ಮೇಲೆ... ಸುಳ್ಳು ಹೇಳುವುದಲ್ಲ.... ನೀನು ಮಾಡಿದ ತಪ್ಪನ್ನು  ಒಪ್ಪಿಕೋ.. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ ..." ಎಂದು ಸಿಟ್ಟಿನಿಂದ ಗದರಿದರು..

         ಈಗ ತಪ್ಪನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ...ಕೊನೆಗೂ ಮಾಡಿದ್ದನ್ನು ಒಪ್ಪಿಕೊಳ್ಳಲೇಬೇಕಾಯಿತು.. ತಮ್ಮ ಭಾಸ್ಕರ ಶಾಸ್ತ್ರಿ ಮಾತ್ರ ಬಂದಿದ್ದರೆ ಏನಾದರೂ ಸುಳ್ಳು ಹೇಳಬಹುದಿತ್ತು ...ಅಪ್ಪನೇ ಬಂದಾಗ... ಗಂಡನೆದುರೇ ವಿಚಾರಿಸಿಕೊಂಡಾಗ ...ಆಕೆಗೆ ಅನ್ಯದಾರಿಯಿರಲಿಲ್ಲ..



          ಶಂಕರ್ ಭಾವನಿಗೆ  ಪತ್ನಿಯ ಮೇಲೆ ಬಹಳ ಕೋಪ ಬಂದಿತು ..."ಇಂತಹ ಸಣ್ಣ ಬುದ್ಧಿ  ನಿನಗೇಕೆ...? " ಎಂದು ಜೋರಾಗಿ  ದನಿ ತೆಗೆದರು.. ಶಂಕರ ರಾಯರಿಗೆ ಮಾವನ ಮನೆಯ ಮೇಲೆ ಬಹಳ ಗೌರವ. ಇಂತಹ ಗೌರವದಿಂದಾಗಿ ಪತ್ನಿಯ ಮೇಲೆ ಗರಂ ಆಗಿಯೇ ನಡೆದುಕೊಂಡರು..
ಶಂಕರರಾಯರು "ಇನ್ನೆಂದೂ ಇಂತಹ ತಪ್ಪು ಮಾಡಲಾರೆ ..ಎಂದು ನಿನ್ನ ತಂದೆಯನ್ನು ಕಾಲು ಹಿಡಿ ದು ನಮಸ್ಕರಿಸಿ ಕೇಳು "ಎಂದು ಗಡಸು ದನಿಯಲ್ಲಿ ಹೇಳಿದಾಗ ಆಕೆ ಮನಸ್ಸಿಲ್ಲದಿದ್ದರೂ ನಮಸ್ಕಾರ ಮಾಡಲೇಬೇಕಾಯಿತು.. ಕಾಲಿಗೆ ನಮಸ್ಕರಿಸಿ "ಇನ್ನೊಮ್ಮೆ ಇಂತಹ ಅಪಪ್ರಚಾರವನ್ನು ಮಾಡುವುದಿಲ್ಲ  , ನನ್ನನ್ನು ಕ್ಷಮಿಸಿ " ಎಂದು ಬೇಡಿಕೊಂಡಳು.


        " ಉಂಡ ಮನೆಗೆ ಕನ್ನ ಹಾಕುವ ಬುದ್ಧಿ ನಿನಗೆಲ್ಲಿಂದ ಬಂತು ..?"ಎಂದು ಶ್ಯಾಮಾಶಾಸ್ತ್ರಿಗಳು ಮಗಳನ್ನು ತರಾಟೆಗೆ ತೆಗೆದುಕೊಂಡರು..  "ಮೊದಲು ಹೇಳು... ನಿನಗೆ ಅಲ್ಲಿಂದ ಸುದ್ದಿಯನ್ನು ರವಾನಿಸುವವರು ಯಾರು ...ಅಮ್ಮನೇ.?... ಇನ್ನು ಮುಂದೆಯಾದರೂ ವಯಸ್ಸಾದವರಿಂದ ಸುದ್ದಿಯನ್ನು ಕಲೆ ಹಾಕುವುದನ್ನು ನಿಲ್ಲಿಸಿಬಿಡು. ಏನಾದರೂ ಹೇಳಬೇಕೆಂದರೆ ತಮ್ಮ ಅಥವಾ ಅವನ ಹೆಂಡತಿಯಲ್ಲಿ ಕೇಳು... ಇಲ್ಲದಿದ್ದರೆ ಮುಂದೆ ಪರಿಣಾಮ ನೆಟ್ಟಗಿರಲ್ಲ.."


        ಶಶಿ ತಲೆ ಕೆಳಗೆ ಹಾಕಿ ಅಪ್ಪನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಳು. "ಇಲ್ಲಿಗೆ ಇಂತಹ ಕೆಟ್ಟಬುದ್ಧಿ ಕೊನೆಯಾಗಬೇಕು. ಯಾರೇ ಆಗಲಿ ಅವರು ನನ್ನಂತೆಯೆ ಮನುಷ್ಯರು ಎಂಬ ಭಾವನೆ ಮನದಲ್ಲಿರಲಿ. ಸಣ್ಣಪುಟ್ಟ ಲೋಪದೋಷಗಳು ಎಲ್ಲರಲ್ಲೂ ಇರುತ್ತವೆ. ಅದನ್ನೇ ದೊಡ್ಡದು ಮಾಡಿ ಹಾಗಂತೆ ಹೀಗಂತೆ ಎಂದರೆ ಚೆನ್ನಾಗಿರುವುದಿಲ್ಲ.. ಇನ್ನೊಮ್ಮೆ ಇಂತಹ ವಿಷಯದಲ್ಲಿ ನಾನು ಎಚ್ಚರಿಕೆ ಕೊಡುವಂತೆ ಆಗಬಾರದು ತಿಳಿಯಿತಾ..." ಶ್ಯಾಮ ಶಾಸ್ತ್ರಿಗಳ ಮಾತಿಗೆ ಸಣ್ಣದಾಗಿ ಹೂಂಗುಟ್ಟಿದಳು.



          ನಂತರ ಅಪ್ಪ-ಮಗ ಚಹಾ ಕುಡಿದು ಮನೆಗೆ ತೆರಳಿದರು. ಅವರು ತೆರಳುತ್ತಿದ್ದಂತೆ ಶಂಕರರಾಯರು ಮಡದಿಯ ಮೇಲೆ ಅರ್ಧಗಂಟೆ ಬೈಗುಳಗಳ ಸುರಿಮಳೆಗೈದರು.. "ಇನ್ನು ಯಾರಿಗೆಲ್ಲ ಇಂತಹ ಸುದ್ದಿ ಮುಟ್ಟಿಸಿದ್ದೀಯ.. ಏನೋ...ಎಲ್ಲರ  ಬಳಿ ಹೇಳಿ ಗಾಳಿ ಸುದ್ದಿ ಹಬ್ಬಿಸಿದ್ದನ್ನು ಮತ್ತೆ ಹಿಂಪಡೆಯಲು ಸಾಧ್ಯವೇ?"ಎಂದಾಗ ಎಂದಿನಂತೆ ಗಂಡನಿಗೆ ಎದುರು ಮಾತನಾಡಲು ಅವಳಿಗೆ ಇಂದು ಅವಕಾಶವೇ ಇರಲಿಲ್ಲ.. ಶಶಿ ಅವಳ ದುರ್ಬುದ್ಧಿ ಯಿಂದ ತವರು ಮನೆಯಲ್ಲಿ ಇರುವ ಸ್ಥಾನಮಾನವನ್ನು ಕಳೆದುಕೊಂಡು.... ಶಂಕರರಾಯರು ತಮ್ಮ ಗುಣದಿಂದಾಗಿ 'ಅಳಿಯಂದಿರು ಒಳ್ಳೆಯವರು' ಎಂಬ ಗೌರವವನ್ನು ಶ್ಯಾಮಶಾಸ್ತ್ರಿಗಳಿಂದ ಪಡೆದರು.

        ಶಂಕರ ರಾಯರು ತಮ್ಮ ಅಕ್ಕ ,ತಂಗಿ ಹಾಗೂ ಅಣ್ಣನ ಮನೆಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದರು ಹಾಗೂ ಶಶಿ ಹೇಳಿದ ಮಾತುಗಳನ್ನೆಲ್ಲಾ ನಂಬಬೇಡಿ ,ಯಾರೊಂದಿಗೂ ದಯವಿಟ್ಟು ಹಂಚಿಕೊಳ್ಳಬೇಡಿ ಎಂದರು. ಅಣ್ಣನ ಮನೆಗೆ ಕರೆ ಮಾಡಿದಾಗ ಅತ್ತಿಗೆ ಮತ್ತಷ್ಟು ಕೂಲಂಕುಶವಾಗಿ ವಿಷಯವನ್ನು ತಿಳಿದುಕೊಂಡಾಗ ಶಶಿಯ ಮೈ ಉರಿಯುತ್ತಿತ್ತು. ಅಷ್ಟಕ್ಕೇ ನಿಲ್ಲಿಸಿದರೆ ಸಾಕಿತ್ತು ..ಆದರೆ ಶಂಕರ ರಾಯರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮಗ ವೆಂಕಟ್ ಹಾಗೂ ಮುರಳಿಗೂ ಕರೆ ಮಾಡಿ ಎಲ್ಲ ವಿಷಯವನ್ನು ಚಾಚೂತಪ್ಪದೆ ಹಂಚಿಕೊಂಡಾಗ ಶಶಿ ಅವಮಾನದಿಂದ ಕುಗ್ಗಿಯೇ ಹೋದಳು. ಶಶಿಯ ಎರಡು ನಾಲಗೆಯ ಬುದ್ಧಿ ಅವಳಿಗೆ  ಮುಳುವಾಯಿತು.


    ನಿಜ ಹೇಳಬೇಕೆಂದರೆ ಶಶಿ ತನ್ನ ಮಕ್ಕಳಲ್ಲಿ ಅಜ್ಜನಮನೆ ಅವರ ಬಗ್ಗೆ ಬಹಳ ಗೌರವಯುತವಾಗಿ ಮಾತನಾಡುತ್ತಿದ್ದರು. ಇನ್ನು ತನ್ನ ನಾದಿನಿ ಓರಗಿತ್ತಿಯಲ್ಲಂತೂ ಮಾತನಾಡುವಾಗ ತನ್ನ ತವರನ್ನು ಹೊಗಳಿ ಅಟ್ಟಕ್ಕೇರಿಸಿ ತಾನು ಬಹಳ ಒಳ್ಳೆಯ ಕುಲದಿಂದ ಬಂದಿದ್ದೇನೆ ಎಂದು ಜಂಭ ಕೊಚ್ಚಿಕೊಳುತ್ತಿದ್ದರು. ಮೈತ್ರಿಯ ಬಗ್ಗೆ ಇಲ್ಲಸಲ್ಲದನ್ನು ಇವರುಗಳಲ್ಲಿ ಹೇಳಿಕೊಂಡಿರಲಿಲ್ಲ. ತನ್ನ ತವರಿನಲ್ಲಿ ಮದುವೆ ನಿಶ್ಚಯವಾಗಿದೆ ಹುಡುಗ ಹಾಗೆ ಹೀಗೆ ಎಂದು ಸ್ವಲ್ಪ ಹೆಚ್ಚೇ ಆಡಿದ್ದರು. ವಿನಃ ಒಂದು ಮಾತೂ ದೂಷಿಸಿರಲಿಲ್ಲ.ತವರಿನ ಬಗ್ಗೆ ಇವರಲ್ಲೆಲ್ಲ ಕೇವಲವಾಗಿ ಮಾತನಾಡಿದರೆ ತಾನು  ಸಣ್ಣವಳಾಗುತ್ತೇನೆ ಎಂದು ಅವಳ ಭಾವನೆ.


          ಆದರೆ ಮನದೊಳಗಿನ ನಂಜು ಬಿಡಬೇಕಲ್ಲ..?  ತಮ್ಮ ಭಾಸ್ಕರ  ತನ್ನ ಮಗನಿಗೆ ಮೈತ್ರಿಯನ್ನು ಮದುವೆ ಮಾಡಿಕೊಡಲು ಒಪ್ಪಲಿಲ್ಲ ಎಂಬ ಸಿಟ್ಟಿನಿಂದ ಹತ್ತಿರದ ಬಂಧುಗಳನ್ನು ಹೊರತುಪಡಿಸಿ ಪುರೋಹಿತರಲ್ಲಿ, ಕಿಶನ್ ಗೆ ಸಂಬಂಧಿಗಳಾದ ನನ್ನ ಗೆಳತಿಯರಲ್ಲಿ ಇಂತಹ ಅಪಪ್ರಚಾರಕ್ಕೆ ಮುಂದಾಗಿದ್ದಳು.ಶಶಿಯ ಇಂತಹ ಸೂಕ್ಷ್ಮ ಗುಣಗಳ ಅರಿವಿರದ ಶಂಕರರಾಯರು ಮಾತ್ರ ತನ್ನ ಕುಟುಂಬದ ಬಂಧುಗಳೊಡನೆ ಇದನ್ನೆಲ್ಲಾ ಹಂಚಿಕೊಂಡದ್ದು... ಶಶಿಗೆ ಪಾತಾಳಕ್ಕಿಳಿದ ಅನುಭವವನ್ನು ತಂದುಕೊಟ್ಟಿತು.'ಇನ್ನು ಯಾವತ್ತೂ ಇಂತಹ ಕೆಲಸ ಮಾಡಿ  ನನ್ನ ಗೌರವವನ್ನು ಮಣ್ಣು ಪಾಲು ಮಾಡಿಕೊಳ್ಳುವುದಿಲ್ಲ' ಎಂದು ತನಗೆ ತಾನೇ ನಿಬಂಧನೆಯನ್ನು ಹಾಕಿಕೊಳ್ಳುವಷ್ಟು ಬುದ್ಧಿಕೊಟ್ಟಿತು.


           ಮನೆಗೆ ತೆರಳಿದ ಭಾಸ್ಕರ ಮತ್ತು ಶ್ಯಾಮ ಶಾಸ್ತ್ರಿಗಳಿಗೆ ಕಾರಿನಿಂದ ಇಳಿಯುತ್ತಲೇ ಮಹೇಶ ತಾನು ಮಾಡಿದ ವಿಡಿಯೋ ತೋರಿಸಿದ. ಶಾಸ್ತ್ರಿಗಳು ಚಾವಡಿಗೆ ಬಂದಾಗ ಮಂಗಳಮ್ಮ ಮಹಾಲಕ್ಷ್ಮಿ ಅಮ್ಮ ಹಾಜರಾದರು. ಮಹಾಲಕ್ಷ್ಮಿ ಅಮ್ಮನಿಗೆ ಶಶಿಯ ಬಗ್ಗೆ ತಿಳಿದುಕೊಳ್ಳುವ ಹಂಬಲ .ಇನ್ನೇನು ಪ್ರಶ್ನೆ ಕೇಳಬೇಕು ಎನ್ನುವಷ್ಟರಲ್ಲಿ ಶ್ಯಾಮಶಾಸ್ತ್ರಿ ಗಳಿಂದ ಬಿರು ನುಡಿಗಳು ಬಂದವು.

ಶ್ಯಾಮಶಾಸ್ತ್ರಿಗಳು:-ಅಲ್ವೇ... ಮಹಾಲಕ್ಷ್ಮಿ ನಿನಗೆ ಹೇಳಿದರೆ ಅರ್ಥವಾಗುವುದಿಲ್ವಾ..?

ಮಹಾಲಕ್ಷ್ಮಿ ಅಮ್ಮ:-ಏನು ..?ಏನಾಯ್ತು ...ಎಂದು ಹೇಗೆ ಹೇಳುತ್ತೀರಿ.
 ನಾನೇನು ಮಾಡಿದೆ..?

ಶ್ಯಾಮ ಶಾಸ್ತ್ರಿಗಳು:-ನಿನ್ನಿಂದಲೇ ಇಷ್ಟು ಹಾಳಾಗುತ್ತಿರುವುದು.. ನೀನು ತಿದ್ದಿಕೊಳ್ಳಬೇಕು.. ಹಿರಿಯವರಾದ ಮಾತ್ರಕ್ಕೆ ಮಾಡುತ್ತಿರುವ ಎಲ್ಲಾ ಸರಿ ಇಲ್ಲ...

ಮಹಾಲಕ್ಷ್ಮಿ ಅಮ್ಮ:-ನಾನೇನು ತಪ್ಪು ಮಾಡಿದೆ..?

ಶ್ಯಾಮ ಶಾಸ್ತ್ರಿಗಳು:-ನಿನಗೆ ಮಗ ಭಾಸ್ಕರ ನಿನ್ನೆಯಷ್ಟೇ ಹೇಳಿದ್ದ ಶಶಿಗೆ ಫೋನ್ ಮಾಡಬೇಡ ಎಂದು.. ನೀನೇನು ಮಾಡಿದೆ..?


ಮಹಾಲಕ್ಷ್ಮಿ ಅಮ್ಮ:-ನಾನು ಫೋನ್ ಮಾಡಿಲ್ಲ ಅದು ಕೆಟ್ಟು ಹೋಗಿತ್ತು..

ಶ್ಯಾಮ ಶಾ..:-ಕೆಟ್ಟು ಹೋಗಿದ್ದರಿಂದ ಮಾತನಾಡಿಲ್ಲ .ಕೆಟ್ಟುಹೋಗದೆ ಇರುತ್ತಿದ್ದರೆ ಮಾತನಾಡಿ ನಾವು ಹೋದ ವಿಚಾರವನ್ನು ಕೆಡಿಸುತ್ತಿದ್ದೆ ಅಲ್ಲವೇ..?

ಎಂದು ಮಡದಿಯನ್ನು ತರಾಟೆಗೆ ತೆಗೆದುಕೊಂಡರು.

ಮಹಾಲಕ್ಷ್ಮಿ ಅಮ್ಮ:- ಇಲ್ಲಪ್ಪಾ ನಾನು ಶಶಿ ಗೆ ಫೋನ್ ಮಾಡಲೆಂದು ನೋಡಿದ್ದಲ್ಲ..

ಶ್ಯಾಮ ಶಾಸ್ತ್ರಿಗಳು:-ನಿನ್ನ ಬುದ್ಧಿ ಗೊತ್ತಿಲ್ಲ ಎಂದು ತಿಳಿಯಬೇಡ .ಮನೆಯ ಸುದ್ದಿಯನ್ನು ಅಗತ್ಯವಿಲ್ಲದಿದ್ದರೂ ರವಾನಿಸುತ್ತಿರುವುದು ನೀನೆಂದು ತಿಳಿದಿದೆ... ಮುಂದಕ್ಕೆ ಏನಾದರೂ ಇಂತಹ ಬುದ್ಧಿ ಮುಂದುವರಿಸಿದರೆ.. ಲ್ಯಾಂಡ್ಲೈನ್ ಫೋನ್ ನಿನಗೂ ಬೇಡ ನನಗೂ ಬೇಡ .ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದರೆ ಸಾಕು .ನಾವು ಫೋನ್ ಮಾಡಿ ಮನೆತನದ ಗೌರವವನ್ನು ಮಣ್ಣುಮುಕ್ಕಿಸುವ ಬೇಡ...


ಪತಿಯ ಸಿಡುಕಿನ ಮಾತುಗಳನ್ನು ಕೇಳಿದ ಮಹಾಲಕ್ಷ್ಮಿ ಅಮ್ಮನ ಕಂಗಳಿಂದ ನೀರು ಹರಿಯಲಾರಂಭಿಸಿತು. ಇದುವರೆಗೆ ಮಂಗಳಮ್ಮ, ಮೈತ್ರಿಯನ್ನು ಭಾಸ್ಕರ ಶಾಸ್ತ್ರಿಗಳು ಏನಾದರೂ ಅಂದರೆ ಸುಮ್ಮನೆ ನಿಂತು ನೋಡುತ್ತಿದ್ದ ಮಹಾಲಕ್ಷ್ಮಿ ಅಮ್ಮನ ಪರವಾಗಿ ಇಂದು ಅವರು  ಯಾರೂ ಬರಲಿಲ್ಲ.. ಸೊಸೆಯಾದರೂ ನನ್ನ ಪರವಾಗಿ ಮಾತನಾಡಬಾರದೇ ಎಂದು ಮಹಾಲಕ್ಷ್ಮಿ ಅಮ್ಮನ ಮನಸ್ಸು ಹೇಳಿದ್ದು ಸುಳ್ಳಲ್ಲ


      ಕಾಲಚಕ್ರ ಉರುಳುತ್ತದೆ.. ಇಂದು ಇನ್ನೊಬ್ಬರಿಗೆ ನೋವಾದಾಗ ಸುಖಿಸಿದವರು ನಾಳೆ ತಾವು ಕೂಡ ಅದೇ ಸ್ಥಾನದಲ್ಲಿ ಇರುತ್ತೇವೆ ಎಂಬುದು ಕಲ್ಪಿಸಿಕೊಳ್ಳಬೇಕು. . ಹಿಂದೆ ಸೊಸೆಯ ಕಣ್ಣೀರಿಗೆ ಭಾವ ರಹಿತವಾಗಿ ವರ್ತಿಸಿದವರಿಗೆ ....ಇಂದು ಸೊಸೆ ಭಾವರಹಿತವಾಗಿ ನಿಲ್ಲಬೇಕಾದ ಅನಿವಾರ್ಯತೆ ವಿಧಿ ತಂದುಕೊಟ್ಟಿದೆ. ಅತ್ತೆ ಗೌಪ್ಯವಾಗಿರಬೇಕಾಗಿದ್ದ ಮನೆಯ ಎಲ್ಲ ವಿಷಯಗಳನ್ನು ಅತ್ತಿಗೆಯರಿಗೆ ಮುಟ್ಟಿಸುತ್ತಿದ್ದರೂ ಅಸಹಾಯಕಳಾಗಿದ್ದ ಸೊಸೆಗೆ ಇಂದಾದರೂ ಅತ್ತೆಯ ತಪ್ಪು ಮಾವನವರಿಗೆ ,ಗಂಡನಿಗೆ  ಅರಿವಾಯಿತಲ್ಲ ಎಂಬ ಸಮಾಧಾನ...


ಮುಂದುವರಿಯುವುದು....


✍️... ಅನಿತಾ ಜಿ.ಕೆ.ಭಟ್.
27-04-2020.

ಮುಂದಿನ ಭಾಗ..ಬುಧವಾರ.

2 comments:

  1. ಮಹಾಲಕ್ಷ್ಮಿ ಅತ್ತೆಗೂ.. ಶಶಿ ಅತ್ತಿಗೆಗೂ ಒಳ್ಳೆ ಪಾಠ ಆಯ್ತು. ಇನ್ನಾದರೂ ಒಳ್ಳೆ ಬುದ್ದಿ ಕಲಿಯಲೀ...

    ReplyDelete
    Replies
    1. ಹೌದು...ಮರೆಯಬಾರದಂತಹ ಪಾಠ.ಥ್ಯಾಂಕ್ಯೂ💐🙏

      Delete