ಜೀವನ ಮೈತ್ರಿ ಭಾಗ ೬೦
ನಿಶ್ಚಿತಾರ್ಥ ಮುಗಿದು ಕಿಶನ್ ತೆರಳಿದ ಮೇಲೆ ಮೈತ್ರಿ ಬಹಳ ಅನ್ಯಮಸ್ಕಳಾಗಿದ್ದಳು.ಅಪ್ಪ ಎಲ್ಲರೆದುರು ಕಿಶನ್ ನನ್ನು ಅಂದಿದ್ದು ಅವಳಿಗೆ ಬಹಳ ಬೇಸರದ ಸಂಗತಿಯಾಗಿತ್ತು.ಅದೆಷ್ಟು ಪ್ರೀತಿಯಿಂದ ಮಾಡಿಸಿ ತಂದಿದ್ದರು. ಚಿನ್ನದ ಅಂಗಡಿಗೆ ತೆರಳಿ ಅಲ್ಲಿಂದ ಪ್ಯಾಟರ್ನ್ ಕೂಡ ತೋರಿಸಿ ಅದರಲ್ಲಿ ನನ್ನ ಆಯ್ಕೆಯನ್ನೇ ಫೈನಲ್ ಮಾಡಿ ಉಂಗುರ ಮಾಡಿಸಿ ತಂದಿದ್ದ. ಛೇ...!!.ಅಪ್ಪ.. ಸ್ವಲ್ಪವಾದರೂ ಅರ್ಥ ಮಾಡಿಕೊಳ್ಳಬೇಕಿತ್ತು. ಇನ್ನೊಬ್ಬರ ಭಾವನೆಗಳನ್ನು ಗೌರವಿಸುವುದು ದೊಡ್ಡತನ. ಎಲ್ಲರ ಮುಂದೆ ಅವಮಾನ ಮಾಡುವುದು ಸಣ್ಣತನ. ಇಷ್ಟು ಚಿಕ್ಕ ವಿಷಯ ಅಪ್ಪನಿಗೆ ಅರಿವಾಗದೇ...?
ಎಂದು ಯೋಚಿಸುತ್ತಿದ್ದಾಗ ತಲೆ ಜೋರಾಗಿ ಸಿಡಿಯುತ್ತಿತ್ತು. ಅಪ್ಪನ ನಿಷ್ಠುರತೆಯಿಂದಾಗಿ ನಂತರ ಕಿಶನ್ ನಲ್ಲಿ ಮಾತನಾಡುವ ಆಸಕ್ತಿಯೇ ಬತ್ತಿಹೋಗಿತ್ತು.. ಕನಸು ಕಂಡಿದ್ದಳು ಅದನ್ನು ಮಾತನಾಡಬೇಕು ...ಇದನ್ನು ಕೇಳಬೇಕು... ಯಾವುದು ಆಗಲಿಲ್ಲ ..ಎಂದು ಹತಾಶೆಯಿಂದ ಕುಳಿತವಳಿಗೆ ಮೊಬೈಲ್ ಸಂದೇಶವನ್ನು ಹೊತ್ತು ತಂದಿತ್ತು.
ಅದು ಅವನದೇ ಸಂದೇಶ ..ಕಿಶನ್ ನಿಗೂ ಅವನ ಹೃದಯದಲ್ಲಿ ಅವಿತಿದ್ದ ನೂರಾರು ಭಾವನೆಗಳನ್ನು ವ್ಯಕ್ತಪಡಿಸಲು ಆಗಲಿಲ್ಲ. ಅದೆಲ್ಲಾ ಈ ಸಂದೇಶದಲ್ಲಿ ರವಾನೆಯಾಗಿತ್ತು.
"ಮುದ್ಗೊಂಬೆ... ನಿನ್ನ ನೀಳ ಬೆರಳುಗಳಿಗೆ ತೊಡಿಸಿದೆ ಪ್ರೇಮದ ಮಣಿಗಳ ಪೋಣಿಸಿದ ಉಂಗುರ... ನನ್ನ ಒಲವಿನ ಸುಮಬಾಲೆಯ ಕಣ್ಣೊಳಗೆ ನಾ ಕಂಡೆ ಕನಸು ಸಾವಿರ.... ಕನಸ ಭಾವ ಉಕ್ಕಿ ಹರಿದು ಸೇರುವುದು ಪ್ರೇಮಸಾಗರ.. ಇಬ್ಬರು ಜೊತೆಯಾಗಿ ವಿಹರಿಸುವ ಬಾರಾ..."..
ಮೈತ್ರಿ ಅವನ ಸಂದೇಶವನ್ನು ಮತ್ತೆ-ಮತ್ತೆ ಓದಿದಳು .ಇನ್ನಷ್ಟು ಓದುತ್ತಲೇ ಇರೋಣ ಎನ್ನುವ ಆಪ್ತತೆ ಬರಹದಲ್ಲಿ... ಆ ಸಾಲುಗಳನ್ನು ತನ್ನ ಮನದಲ್ಲಿ ಅಚ್ಚು ಹಾಕಿ ಗುನುಗಿದಳು.ಎಷ್ಟು ಪ್ರೀತಿಸುತ್ತಾನೆ ನನ್ನ ಕಿಶನ್ ಎನ್ನುತ್ತಾ ಅವನ ಗುಂಗಿನಲ್ಲಿ ಕಳೆದುಹೋದಳು.
ಸ್ವಲ್ಪ ಸಮಾಧಾನವಾದ ಮೈತ್ರಿ ಒಳಗೆ ಅಮ್ಮನಿಗೆ ಕೆಲಸಕ್ಕೆ ನೆರವಾದಳು. ಸಂಜನಾ ವಂದನಾ "ಅಕ್ಕ.. ಅಕ್ಕ ..."ಎನ್ನುತ್ತಾ ತಾವು ಕೂಡ ಸಣ್ಣಪುಟ್ಟ ಸಹಾಯವನ್ನು ಮಾಡಿದರು .ಶಂಕರ ಚಿಕ್ಕಪ್ಪನಿಗೆ ಬೆಂಗಳೂರಿಗೆ ಕೊಂಡೊಯ್ಯಲಿರುವ ಸಾಮಾನುಗಳನ್ನು ಮೈತ್ರಿಯೇ ಮುಂದೆ ನಿಂತು ಪ್ಯಾಕ್ ಮಾಡಿದಳು. ಗಾಯತ್ರಿ ಉಳಿದ ಅಡುಗೆಗಳ ವಿಲೇವಾರಿಯಲ್ಲಿ ಅಕ್ಕನೊಂದಿಗೆ ಕೈಜೋಡಿಸಿದಳು.ಅಕ್ಕ ತಂಗಿ ಇಬ್ಬರೂ ಮಾತನಾಡುತ್ತಾ ಶಶಿ ಅತ್ತಿಗೆ ನಿಶ್ಚಿತಾರ್ಥಕ್ಕೆ ಬಾರದೇ ಇದ್ದ ವಿಷಯ ಕೂಡ ಬಂತು.
"ಆಕೆಗೆ ಹೇಳಿಕೆ ಹೇಳಿದ್ದೇವೆ ..ಆದರೂ ಬರಲು ಮನಸ್ಸಾಗಲಿಲ್ಲ ..ಇರಲಿ.. ಅವರು ಇಷ್ಟಪಟ್ಟಾಗ ಬರಲಿ ..ಒತ್ತಾಯ ಮಾಡಿ ಬರಿಸುವುದಕ್ಕಿಂತ ಅವರು ಮನಸ್ಸಾದಾಗ ಬರುವುದೇ ಲೇಸು.."
"ಹೌದು ಅಕ್ಕ.. ನಾನು ಹಾಗೆ ಆಲೋಚಿಸುತ್ತಿದ್ದೆ. ಅಂತಹವರನ್ನು ತುಂಬಾ ಒತ್ತಾಯ ಮಾಡಲು ಹೋಗಬಾರದು .ಅವರ ಮೊಂಡುತನ ಮತ್ತೂ ಹೆಚ್ಚಾಗುತ್ತದೆ...ನಮ್ಮ ಕರ್ತವ್ಯ ನಾವು ಪಾಲಿಸುತ್ತಾ ಸರಿಯಾದ ದಾರಿಯಲ್ಲಿ ನಡೆದರೆ ಮುಂದೆ ಅವರೇ ತಿದ್ದಿಕೊಳ್ಳುತ್ತಾರೆ.."
"ಗಾಯತ್ರಿ ...ಶಶಿ ಅತ್ತಿಗೆ ಯಾವಾಗ ತಿದ್ದಿಕೊಳ್ಳುತ್ತಾರೆ ..?ನನಗಂತೂ ಸಂಶಯವೇ... ನಾನು ಮದುವೆಯಾಗಿ ಬಂದಂದಿನಿಂದಲೂ ಇವರದು ಇದೇ ತರ್ಕ. ಅಕ್ಕನ ಮಾತು ತಮ್ಮನಿಗೆ ಸರಿ ಬಾರದು.. ತಮ್ಮನ ನಿರ್ಧಾರ ಅಕ್ಕನಿಗೆ ಹಿಡಿಸದು. ಮಧ್ಯ ನಾವೆಲ್ಲಾ ನಿಂತು ನೋಡುವವರು... ಮೂಕ ಪ್ರೇಕ್ಷಕರು."
"ಅವರವರ ಗುಣ ಅವರವರಿಗೆ ಬಿಟ್ಟುಬಿಡೋಣ. ಸಾವಿತ್ರಿ ಅತ್ತಿಗೆ ಬಂದರಲ್ಲ ನನಗಂತೂ ಬಹಳ ಖುಷಿಯಾಯ್ತು.."
"ಆಕೆ ನಿಜವಾಗ್ಲೂ ತವರೆಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವವಳು ..ಕರೆದರೆ ಬರಲಾರೆ ಎಂದು ಒಮ್ಮೆಯೂ ಹೇಳಿದವಳಲ್ಲ ..ಆದರೇನು ಆಕೆಯ ಗಂಡ ಕಳಿಸುವುದಿಲ್ಲ ..ಕಳುಹಿಸಿದರೆ ಮತ್ತೆ ಮನೆಗೆ ಹೋದಮೇಲೆ ಮತ್ತೆ ಏನು ಕ್ಯಾತೆ ತೆಗೆಯುತ್ತಾರೋ.. ಆಕೆಗೆ ಗೊತ್ತು.."
"ಅವಳ ತಾಳ್ಮೆಯಿಂದಲೇ ಅವಳ ಕುಟುಂಬ ನಡೆಯುತ್ತಿದೆ ಪಾಪ.. ಹಾಗೇನೇ ಅಕ್ಕ.. ನಿಮ್ಮ ತಾಳ್ಮೆಯಿಂದ ನೀವು ಎಲ್ಲರನ್ನೂ ಸಹಿಸಿಕೊಂಡು ಬರುತ್ತಿದ್ದೀರಿ. ನಿಜವಾಗ್ಲೂ ಗ್ರೇಟ್.. ನನಗಾದರೂ ಒಮ್ಮೊಮ್ಮೆ ಮೂಗಿನ ಮೇಲೆ ಸಿಟ್ಟು ಬರುತ್ತದೆ... ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತೇನೆ ..ಆದರೆ ನೀವು ಎಲ್ಲವನ್ನೂ ನುಂಗಿಕೊಂಡು ಬದುಕುತ್ತಿದ್ದೀರಿ.."
"ಏನ್ ಮಾಡುವುದು ಗಾಯತ್ರಿ... ನನ್ನ ಹಣೆಬರಹವೇ ಇಷ್ಟು ಅಂದುಕೊಳ್ಳುತ್ತೇನೆ.."
"ಈಗ ಮೈತ್ರಿಗೆ ಸಿಕ್ಕ ವರ ಬಹಳ ವಿನಯವಂತ ಎಂದು ಎದ್ದು ತೋರುತ್ತದೆ.. ಅವನು ತಂದೆ-ತಾಯಿ ಕೂಡ ಅಷ್ಟೇ ಸರಳವಾಗಿ ಸಂಸ್ಕಾರವಂತರಾಗಿ ಕಾಣುತ್ತಾರೆ. ಮೈತ್ರಿಯನ್ನು ಚೆನ್ನಾಗಿ ನೋಡಿಕೊಂಡರೆ ಸಾಕು..." ಎಂದು ಇಬ್ಬರೂ ಮಾತನಾಡುತ್ತಿದ್ದಾಗ ಅಲ್ಲಿಗೆ ಭಾಸ್ಕರ ಶಾಸ್ತ್ರಿಗಳ ಆಗಮನವಾಗಿ ಇಬ್ಬರು ಮಾತನಾಡುವುದು ನಿಲ್ಲಿಸಿದರು.
ರಾತ್ರಿಯೇ ಭಾಸ್ಕರ ಶಾಸ್ತ್ರಿಗಳ ಕುಟುಂಬ ಬೆಂಗಳೂರಿಗೆ ಪ್ರಯಾಣಿಸಿತು.
********
ಸೌಜನ್ಯ ಕೇಶವ್ ಇನ್ನೂ ಏಕೆ ಎದ್ದಿಲ್ಲ ಎಂದು ರೇಖಾ ಮಳಿಗೆಯತ್ತ ನೋಡಿದಳು. ಸೌಜನ್ಯ ಎಂದು ಎರಡು ಬಾರಿ ಕೂಗಿದಳು. ಅದನ್ನು ಕೇಳಿಸಿಕೊಂಡ ಇಬ್ಬರೂ ಫ್ರೆಶ್ ಆಗಿ ಕೆಳಗೆ ಬಂದರು... ಅಮ್ಮ ಇಬ್ಬರಿಗೂ ಬಿಸಿಬಿಸಿಯಾದ ತೆಳ್ಳವು ಮಾಡಿ ಚಟ್ನಿಯೊಂದಿಗೆ ಬಡಿಸಿದರು. ತಿಂಡಿ ತಿಂದ ಇಬ್ಬರೂ ಜೊತೆಯಾಗಿ ಹಾಲ್ ನಲ್ಲಿ ಕುಳಿತು ಹರಟುತ್ತಿದ್ದರು. ಹರಟುವಿಕೆಯಲ್ಲಿ ಇಬ್ಬರ ನಡುವೆ ಪ್ರೇಮವಿತ್ತು ತುಂಟತನವಿತ್ತು.. ಒಬ್ಬರನ್ನೊಬ್ಬರು ಕಾಲೆಳೆದು ಖುಷಿಪಡುತ್ತಿದ್ದರು.. ಸೌಜನ್ಯಳ ಮೆಡಲುಗಳನ್ನು ಕೇಶವ್ ನೋಡುತ್ತಿದ್ದ..ಹಿಂದಿನಿಂದ ಆತನಿಗೆ ಅಂಟಿಕೊಂಡು ನಿಂತಿದ್ದ ಸೌಜನ್ಯ ಅದನ್ನೆಲ್ಲ ವಿವರಿಸುತ್ತಿದ್ದಳು..
ಇದನ್ನೆಲ್ಲ ಕಂಡ ರೇಖಾ ಹಾಗೂ ನರಸಿಂಹರಾಯರು ಮನಸಾರೆ ಹರುಷಗೊಂಡರು.ಮಗಳ ಮತ್ತು ಬಶೀರ್ ವಿಚಾರ ತಿಳಿದರು ಕೇಶವ್ ವಿಚಲಿತನಾಗಲಿಲ್ಲ ಎಂಬುದು ಅವರಿಗೆ ದೃಢಪಟ್ಟಿದ್ದು... ಮಗಳ ಜೀವನ ಇನ್ನು ಮುಂದೆಯಾದರೂ ಸುಗಮವಾಗಿ ಸಾಗಲಿ ಎಂದು ಮಾತಾಪಿತರು ಆಶೀರ್ವದಿಸಿದರು..
"ನಿನ್ನ ನೃತ್ಯ ನನಗು ನೋಡಲು ಆಸೆ.. ನೋಡೋಣ.. ಒಂದೆರಡು ಸ್ಟೆಪ್ ಹಾಕಿಬಿಡು.."
"ಅಯ್ಯೋ ಇವತ್ತು ಆಗಲ್ಲ ಹೊಟ್ಟೆ ತುಂಬಾ ತಿಂಡಿ ತಿಂದಿದ್ದೇನೆ.."
"ಇರಲಿ ಬಿಡು...ಒಂದು ಆಲಾಪ ಆದರೂ ಹಾಡಿ ಬಿಡಮ್ಮಾ...ಕೇಳಿ ಕಿವಿ ಪಾವನವಾಗಲಿ"
"ರೀ ..ಇವತ್ತು ನನಗೆ ಸ್ವರವಿಲ್ಲ.. ಗಂಟಲು ಬಿದ್ದುಹೋಗಿದೆ ..ಇವತ್ತು ನನ್ನ ಹಾಡಿದರೆ ನೀವು ಇಲ್ಲಿಂದ ಓಡಿ ಹೋಗುವುದಷ್ಟೇ .. ಗ್ಯಾರಂಟಿ"
"ಬಿದ್ದು ಹೋದದ್ದನ್ನು ನಾನು ಹುಡುಕಿ ತಂದು ಕೊಡಲಾ.." ಎಂದು ಹೇಳುತ್ತಾ ಕಣ್ಣಲ್ಲಿ ಕೆಣಕಿದ ಕೇಶವ್..
ನಸುನಕ್ಕ ಸೌಜನ್ಯ "ಎಲ್ಲೋ...ಬಿದ್ದಿಲ್ಲ ಇಲ್ಲೇ ಬಿದ್ದಿದೆ "ಎನ್ನುತ್ತಾ ಕೇಶವನನ್ನು ನೋಡಿ ನಕ್ಕಳು..
"ಮತ್ತೇಕೆ ತಡ ...ಇಂದಿನಿಂದಲೇ ಹೆಕ್ಕುವುದು ಹಾಡುವುದು.. ಹಾಡು ನಾನು ಕೇಳಬೇಕು"
"ನೀವು ಓಡಿಹೋದರೆ...!!! ನಾನು ಹೇಗೆ ಹಾಡು ಹೇಳಲಿ"
"ಓಡಿಹೋಗುವುದಾದರೆ ನಿನ್ನೆ ನನ್ನ ಅಪ್ಪನ ಕೈಗಳನ್ನು ಹಿಡಿಯುತ್ತಿದ್ದೆ... ಅವರೊಡನೆ ಹೆಜ್ಜೆ ಹಾಕುತ್ತಿದ್ದೆ.."
"ಅಯ್ಯೋ.. ಅದೆಲ್ಲ ಯಾಕೆ .. ಇರ್ಲಿ ಬಿಡಿ ಈಗ ನಾನು ಹಾಡಬೇಕು ..ಅಲ್ವಾ ನೋಡಿ.. ಕೇಳಿ.."
ಎನ್ನುತ್ತಾ ಸ್ವರ ಸರಿ ಮಾಡಿಕೊಂಡು ಸ್ವಲ್ಪ ಹಾಡುವ ಪ್ರಯತ್ನ ಮಾಡಿದಳು.
"ಚೆನ್ನಾಗಿ ಹೇಳುತ್ತೀಯಾ ...ಹಾಗೆಯೇ ಒಳ್ಳೆಯ ರೋಮ್ಯಾಂಟಿಕ್ ಸಾಂಗ್ ಗಳನ್ನು ನಿನ್ನ ದನಿಯಲ್ಲಿ ಕೇಳುವಾಸೆ.."
ಎಂದಾಗ ಬೆನ್ನಿಗೆ ಮೃದುವಾದ ಗುದ್ದು ಕೊಟ್ಟು ಸೌಜನ್ಯ "ಬರೀ ತುಂಟ.." ಎನ್ನುತ್ತಾ ಅವನ ಕಣ್ಣಲ್ಲಿ ಕಣ್ಣಿರಿಸಿದಳು...
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
10-04-2020.
👌👌
ReplyDelete💐🙏
ReplyDelete