ಜೀವನ ಮೈತ್ರಿ ಭಾಗ ೬೩
ಶಾಸ್ತ್ರೀ ನಿವಾಸದಲ್ಲಿ ಮೈತ್ರಿಯ ಮದುವೆಯ ಸಿದ್ಧತೆ ಭರದಿಂದ ಸಾಗಿತ್ತು.ಭಾಸ್ಕರ ಶಾಸ್ತ್ರಿಗಳು ಮದುವೆಯ ಕರೆಯೋಲೆಯನ್ನು ಅಚ್ಚುಹಾಕಿಸಿ ತಂದರು.ಶ್ಯಾಮ ಶಾಸ್ತ್ರಿಗಳು ಕನ್ನಡಕವನ್ನು ಮೂಗಿನ ಮೇಲಿರಿಸಿ ಪ್ರಿಂಟ್ ಆದ ಅಕ್ಷರಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಿದರು.. ಮನೆಯವರೆಲ್ಲ ಒಬ್ಬೊಬ್ಬರಾಗಿ ಕರೆಯೋಲೆ ಓದಿದರು..
ಮಹೇಶ್ ಓದಿದವನೇ
" ಇದು ಭಾರೀ ಲಾಯಿಕಾಯಿದು" ಅಂದ.. ನಗುನಗುತ್ತಾ..
"ಏನು ..?ಪ್ರಿಂಟ್ ಹಾಕಿಸಿದ್ದು ನಾನೇ.. ಕೊಂಕು ನಗೆಯೇಕೆ ..?"ಎಂದರು ಅಪ್ಪ ಗಂಭೀರವಾಗಿ..
"ಅದು.. ಮಹೇಶ್ BE ಎಂದು ಅಚ್ಚಾಗಿದೆ.. ಅದು ಅಕ್ಕನ ಹೆಸರಿನ ಮುಂದೆ ಇರಬೇಕಾದ್ದಲ್ವಾ..ನಂದು ಪಿಯುಸಿಯೂ ಆಗಿಲ್ಲ ಅಂತ.."
"ಹೌದಾ .." ಎನ್ನುತ್ತಾ ತಾವು ಕೂಡಾ ರೂಮಿನೊಳಗೆ ಹೋಗಿ ಕನ್ನಡಕ ಹಾಕಿಕೊಂಡು ಬಂದರು.. ಕರೆಯೋಲೆಯ ಮೇಲೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದರು."ಹೌದಲ್ವಾ...ಮಹೇಶ...ನೋಡು ನಾಳೆ ವೈಟ್ನರ್ ತಂದು ಕೊಡುತ್ತೇನೆ..ನಿನ್ನ ಹೆಸರಿನ ಮುಂದೆ ಹಾಕುವುದು ನಿನ್ನ ಕೆಲಸ ಆಯ್ತಾ..."
ಸಮ್ಮನಿದ್ದ ಮಹೇಶ್..ಅಪ್ಪ ಆ ಕಡೆಗೆ ಹೋದ ಕೂಡಲೇ ಅಮ್ಮ, ಅಜ್ಜ ,ಅಕ್ಕನಲ್ಲಿ "ನಾನ್ಯಾಕೆ ಹಾಕ್ಬೇಕು ವೈಟ್ನರ್..ಅಕ್ಕ ಓದಿ ನಂಗೆ ಡಿಗ್ರಿ...!!
ಮುಂದೆ ನಾನು ಇಂಜಿನಿಯರಿಂಗ್ ಓದುವುದೆಂದು ಪ್ರೆಸ್ ನವರು ಭವಿಷ್ಯ ಹೇಳಿದ್ದಿದು.. ಇರಲಿ.. ಇರಲಿ..ನಂಗೆ ಹೆಮ್ಮೆ.."
ಎಂದು ಶರ್ಟಿನ ಕಾಲರ್ ಏರಿಸುತ್ತಿದ್ದಾಗ ಅಪ್ಪ ವಾಪಾಸಾಗಿ "ಹಾಂ.. ಮಹೇಶ್... ಇದು..ಈ ಪರೀಕ್ಷೆ ಮಧ್ಯದಲ್ಲಿ ಅಷ್ಟು ಕರೆಯೋಲೆಗಳಿಗೆ ವೈಟ್ನರ್ ಹಾಕುವುದು ನಿನಗೆ ಕಷ್ಟ..ಬೇಡ ಬಿಡು.. ನಾನು ಅವನಲ್ಲೇ ಹೇಳಿ ಪುನಃ ಸರಿಮಾಡಿಸುತ್ತೇನೆ..." ಎಂದರು..
ಮಾತು ಮುಂದುವರಿಸುತ್ತಾ...." ಮಂಗಳಾ...ಯಾರಿಗೆಲ್ಲ ಸೀರೆ ತೆಗೆದುಕೊಳ್ಳಬೇಕು.. ಎಷ್ಟು ರೇಟಿನದ್ದು ಎಂದೆಲ್ಲ ಒಂದು ಅಂದಾಜು ಪಟ್ಟಿ ಮಾಡಿಡು.ಮುಂದಿನವಾರ ಹೋಗಿ ತರೋಣ.."
"ಮಗಳಂದಿರಿಗೆ ಸೀರೆ ಒಳ್ಳೆಯ ರೇಟಿನದ್ದು ಕೊಡಬೇಕು ..ಇಲ್ಲದಿದ್ದರೆ ಶಶಿಗೆ ಸರಿಬರದು.ಅಳಿಯಂದಿರಿಗೆ ಪಂಚೆ ..ಮೊಮ್ಮಕ್ಕಳಿಗೆ ಶರ್ಟ್ ಪೀಸ್ ಚೂಡಿದಾರ್ ಪೀಸ್ ಕೊಡಲೇಬೇಕು.. ಮತ್ತೆ ಮನೆಯವರಿಗೆ ,ಮದುಮಗಳಿಗೆ ,ಮಂಗಳಾಳ ತವರುಮನೆಯವರಿಗೆ ಕೆಲಸದಾಳುಗಳಿಗೆ ಎಲ್ಲ ಬಟ್ಟೆ ಖರೀದಿ ಮಾಡಬೇಕು.."ಎಂದರು ಮಹಾಲಕ್ಷ್ಮಿ ಅಮ್ಮ.
"ಅಜ್ಜಿ... ನೀವು ನನ್ನ ಹೆಸರೇ ಹೇಳಿಲ್ಲ.."ಅಂದ ಮಹೇಶ್.
"ಅಲ್ಲ.. ನನ್ನನ್ನು ಮರೆತೇಬಿಟ್ಟೆಯಾ..." ಎಂದರು ಶ್ಯಾಮ ಶಾಸ್ತ್ರಿಗಳು..
ಮಹಾಲಕ್ಷ್ಮಿ ಅಮ್ಮ:-ಮನೆಯವರಿಗೆ ಅಂದರೆ ಅದರಲ್ಲಿ ನೀವೆಲ್ಲರೂ ಬಂದ ಹಾಗೇ..ಪ್ರತ್ಯೇಕ ಹೇಳಬೇಕೇ..
ಭಾಸ್ಕರ ಶಾಸ್ತ್ರಿಗಳು:-ಮಂಗಳಾ.. ಮಲ್ಲಿಗೆ ಹೂವು ಎಷ್ಟು ಬೇಕೆಂದು ಮೊದಲೇ ಹೇಳಬೇಕು .. ಬುಕ್ ಮಾಡಿಡಬೇಕು..ಈ ವಾರದಲ್ಲೇ ನಿರ್ಧರಿಸಿಬಿಡು.. ಮುಂದಿನವಾರ ಹೋಗುವಾಗಲೇ ಹೇಳಿಬಿಡೋಣ..
ಮಂಗಳಾ:-ಸರಿ.. ಆಲೋಚಿಸಿ ಹೇಳುತ್ತೇನೆ.. ಮತ್ತೆ ಫ್ಯಾನ್ಸಿ ಐಟಂ ಗಳೆಲ್ಲ ಆಗಬೇಕು..ಅದನ್ನೂ ಮುಂದಿನವಾರವೇ ಸಮಯವಿದ್ದರೆ ಕೊಂಡುಕೊಳ್ಳೋಣ..
ಭಾಸ್ಕರ:-ಸರಿ ಸರಿ..ಆದಷ್ಟನ್ನು ಖರೀದಿ ಮಾಡೋಣ...
ಹೀಗೆ ಮದುವೆಯ ತಯಾರಿಗಳು ಸಾಗುತ್ತಿದ್ದರೆ ಮೈತ್ರಿ ಓದಿನಲ್ಲಿ ತಲ್ಲೀನಳಾದಂತೆ ನಟಿಸಿ ಓದು, ಪ್ರೆಮಸಲ್ಲಾಪ ಎರಡನ್ನೂ ನಿಭಾಯಿಸುತ್ತಿದ್ದಳು.
******
ಕಿಶನ್ ಗೆ ಆಫೀಸಿನಲ್ಲಿ ವಿಪರೀತ ಒತ್ತಡವಿರುತ್ತಿತ್ತು..ಒಮ್ಮೆ ಮೈತ್ರಿ ಯಲ್ಲಿ ಮಾತನಾಡಿದಾಗ ಮನಸು ರಿಲಾಕ್ಸ್ ಆಗುತ್ತಿತ್ತು..ಹಾಗೇ ಕರೆಮಾಡಿದ ಕಿಶನ್
"ಹಾಯ್ ಹಲೋ...ಮುದ್ಗೊಂಬೆ"
"ಏನು ಮದುವೆ ಹುಡುಗ ಫುಲ್ ಜೋಶ್.."
"ಜೋಶ್ ನೀನೇ ತುಂಬಬೇಕು ಈಗ...ನಂದೊಂದು ಪ್ರಶ್ನೆ ಹುಡುಗಿಯರು ಆಗಾಗ ಕನ್ನಡಿ ನಾಡೋದ್ಯಾಕೆ ಅಂತ.."
"ಇದೆಲ್ಲ ಪ್ರಶ್ನೆ ತಮ್ಮ ತಲೆಯೊಳಗೆ ಈಗ್ಯಾಕೆ ಬಂತು ಅಂತ.."
"ಆಫೀಸಿನಲ್ಲಿ ಕೆಲಸದ ಬ್ಯುಸಿ ಶೆಡ್ಯೂಲ್ ಮಧ್ಯೆ ಮಧ್ಯೆ ಕೂಡಾ ಕನ್ನಡಿ ನೋಡಿ ಮುಖ ಓರೆ ಮಾಡಿ, ಆಕಡೆ ಈಕಡೆ ಮಾಡಿ ನೋಡಿ ಅದೇನು ಖುಷಿಪಟ್ಟುಕೊಳ್ಳುತ್ತಾರೋ ..ಈ..ಹುಡುಗೀರು.. ಕೆಲಸವೆಲ್ಲ ನಮ್ಮಂತಹ ಪಾಪದ ಹುಡುಗರ ಮೇಲೆ ಹೊರೆ.."
"ಒಬ್ಬೊಬ್ಬರಿಗೆ ತಮ್ಮ ಸೌಂದರ್ಯ ವನ್ನು ಕಂಡಾಗ ಆತ್ಮವಿಶ್ವಾಸ ಮೂಡುತ್ತದೆ, ಇನ್ನು ಕೆಲವರಿಗೆ ಇನ್ನೊಬ್ಬರನ್ನು ಮೆಚ್ಚಿಸುವ ತವಕ, ಮತ್ತೆ ಕೆಲವರಿಗೆ ಮೂಡುತಿರುವ ಮೊಡವೆಯ ಗೊಡವೆ ...ಹೀಗೆ ಕನ್ನಡಿಯ ನೋಟಕ್ಕೆ ಹಲವು ಕಾರಣಗಳು.."
"ತಾವೂ ಹೀಗೆಯಾ.."
"ನಿಮಗೆ ಬೋರಾಗುವಷ್ಟು ನೋಡಲ್ಲ.. ಹಾಗಂತ ನೋಡೋದೇ ಇಲ್ಲ ಅಂತ ಅಂದುಕೋಬೇಡಿ..ನನಗೂ ಸೌಂದರ್ಯ ಪ್ರಜ್ಞೆ ಇದೆ.. ಎಲ್ಲರನ್ನೂ ಅಲ್ಲದಿದ್ದರೂ ಒಬ್ಬರನ್ನಾದರೂ ಮೆಚ್ಚಿಸಬೇಕೆಂಬ ಆಸೆಯಿದೆ.."
"ಒಬ್ಬರು ಮೆಚ್ಚಿ .. ಮನಬಿಚ್ಚಿ ನಿವೇದಿಸಿದ್ದಾಗಿದೆ..."
"ಹ್ಞೂಂ... ಆದರೆ ದಿನವೂ ಮೆಚ್ಚಿಸಿಕೊಳ್ಳಬೇಕೆಂಬ ಆಸೆಗೆ ಕನ್ನಡಿ ನೆರವಾಗುತ್ತೆ..."
"ಹಾಗಾದ್ರೆ ಮುದ್ಗೊಂಬೆ ಮನೆಗೆ ಬರುವ ಹೊತ್ತಿಗೆ ಮನೆಯಲ್ಲಿ ನಾಲ್ಕಾರು ಕನ್ನಡಿ ನೇತು ಹಾಕೋದೇ.. ಆಯ್ತಾ.."
"ಹಾಕಿ.. ಹಾಕಿ..ಅದೇ ಕನ್ನಡಿಯ ಮುಂದೆ ನಿಂತು ನೀವೂ ಸ್ಟೈಲಿಶ್ ಶೇವ್ ಮಾಡ್ಕೋಬೇಕು..."
"ಹ್ಹ ಹ್ಹ ಹ್ಹಾ.. ಏಕೆ ಈಗಿನ ಶೇವಿಂಗ್ ಚೆನ್ನಾಗಿ ಇಲ್ವಾ.."
"ಅದೆಲ್ಲ ಈಗ ಹೇಳಲ್ಲ... ಪೂರ್ಣ ನನ್ನವರಾದ ಮೇಲೆ ಹೇಳೋದು.."
"ಮುದ್ಗೊಂಬೆ.. ಯಾವತ್ತೂ ಹೇಳದೇ ಸತಾಯಿಸೋದೇ ಆಯ್ತು ನಿಂದು.."
"ಸತಾಯಾಸಿದರೇ ಪ್ರೀತಿ ಜಾಸ್ತಿ ಅಂತೆ.. ನಂಗೀಗ ಓದ್ಕೋಬೇಕು ಬಾಯ್..."
"ಬಾಯ್.."
********
ಕೇಶವ್ ಕೋಣೆಯಲ್ಲಿ ಕುಳಿತು ಉದ್ಯೋಗ, ಇಂಟರ್ವ್ಯೂ ಬಗ್ಗೆ ಯೋಚಿಸುತ್ತಿದ್ದ.ಕೆಳಗಿನಿಂದ ಮೆಟ್ಟಿಲು ಹತ್ತಿ ಸೌಜನ್ಯ ಬಂದಳೆಂದು ಆಕೆಯ ಘಲ್ಲೆನಿಸುವ ಗೆಜ್ಜೆ ಸಪ್ಪಳವೇ ಹೇಳಿತು..ಆದರೂ ತಿಳಿಯದಂತೆ ಸುಮ್ಮನಿದ್ದ..
ಹಿಂದಿನಿಂದ ಬಂದವಳೇ ತನ್ನ ಕೈಗಳಿಂದ ಪತಿಯ ಹೆಗಲಿನ ಮೂಲಕ ಎದೆಯನ್ನು ಬಳಸಿ "ರೀ... " ಅಂದಳು ಮೆಲ್ಲನೆ.. ಕೇಶವ್ ಮೆತ್ತಗೆ ತನ್ನವಳ ಕೆನ್ನೆಗೆ ತನ್ನ ಗಡ್ಡವನ್ನು ಸವರಿದ.. ಮತ್ತಷ್ಟು ಕೇಶವನೆಡೆಗೆ ಬಾಗಿ ಕಿವಿಯಲ್ಲಿ "ರಾಜಾ...ಪರಾಟಾ ಮಾಡಿದ್ದೇನೆ ಬನ್ನಿ " ಎಂದಳು.
ಆತನ ಪ್ರೀತಿಯ ಪರಾಠಾ, ಕೊಡುತ್ತೇನೆ ಬನ್ನಿ ಎಂದು ಕರೆದವಳು ಮುದ್ದಿನ ಮಡದಿ ..ಮಡದಿಯ ಕೈಗಳನ್ನು ಸವರುತ್ತಾ ಮೆಲ್ಲನೆ ಎದ್ದ.ಅವಳನ್ನು ಹತ್ತಿರಕ್ಕೆಳೆದು ಸವಿಮುತ್ತೊಂದನ್ನು ನೀಡಬೇಕೆನ್ನುವಾಗ ನಗುನಗುತ್ತಾ ಕೊಸರಿಕೊಂಡು ಕೆಳಗೆ ಓಡಿದಳು.".ಎಲಾ..ಇವಳಾ...ಕೈಗೇ ಸಿಗಲಿಲ್ಲ..ಇರ್ಲಿ.. ಆಮೇಲೆ ಸಿಕ್ಕಾಗ ಈಗಿಂದು ಸೇರಿಸಿಯೇ ಕೊಡ್ತೀನಿ..." ಎನ್ನುತ್ತಾ ಕೈಕಾಲು ಮುಖ ತೊಳೆದು ಒರೆಸಿಕೊಂಡು ಕೆಳಗಡೆ ಹೋದ..
ಘಮ್ಮೆಂದು ಪರಿಮಳ ಬರುತ್ತಿದೆ.ತಟ್ಟೆಯ ಮುಂದೆ ಕುಳಿತ.ಮಾವ ಅತ್ತೆ ಹೊರಗಡೆ ಹೋಗಿದ್ದಾರೆಂದು ತಿಳಿಯಿತು.. ಸುನಿತಾ ಕೂಡಾ ಇರಲಿಲ್ಲ...ಸುತ್ತ ಮುತ್ತ ಯಾರೂ ಇಲ್ಲ ಎಂದು ತಿಳಿದು ತನ್ನಾಸೆಯನ್ನು ಪೂರೈಸಿದ ಕೇಶವ್.."ಛೀ..ತುಂಟ...ಇನ್ನೂ ಸಾಕಾಗಿಲ್ವಾ..." ಎನ್ನುತ್ತಾ ನಕ್ಕು ಅವನಿಂದ ಬಿಡಿಸಿಕೊಳ್ಳುವಷ್ಟರಲ್ಲಿ ಸುಸ್ತಾಗಿದ್ದಳು..ಸಕ್ಕರೆ ಗೊಂಬೆ..
ಪರಾಟ ತಿನ್ನುತ್ತಿದ್ದ ಪತಿಗೆ ಪ್ರೀತಿಯಿಂದ ಬಡಿಸಿದಳು ಸೌಜನ್ಯ.. ಸೌಜನ್ಯ ಆವತ್ತು ಅಡುಗೆಯೇ ಬರಲ್ಲ ಎಂದು ಹೇಳಿದ್ದ ನೆನಪು..ಆದರೂ ಟೇಸ್ಟಿ ಯಾಗಿ ಮಾಡಿದ್ದಾಳೆ..ಅಲ್ಲ ಅತ್ತೆ ಅಥವಾ ಸುನಿತಾ ಮಾಡಿರಬಹುದಾ... ಯಾವುದಕ್ಕೂ ಈಗ ಕೇಳೋದು ಬೇಡ... ಮತ್ತೆ ರೂಮಲ್ಲಿ ಸಿಕ್ಕಾಗ ಕೇಳುತ್ತೇನೆ.ಎಂದು ಸುಮ್ಮನಿದ್ದು ಹೊಟ್ಟೆ ತುಂಬಾ ತಿಂದ...ತಾನು ಕೈತೊಳೆದು ಬಂದು ಸೌಜನ್ಯ ಳಿಗೆ ಬಡಿಸಿದ.."ನಾನೇ ಹಾಕಿಕೊಳ್ಳುತ್ತೇನೆ" ಎಂದರೂ ಕೇಳದೆ ಅವಳ ಪಕ್ಕವೇ ಕುಳಿತು ಬಡಿಸಿದ..ಸಾಕೆಂದ ಮೇಲೂ ಒತ್ತಾಯ ಮಾಡಿ ಒಂದು ಬಡಿಸಿ ತಿನ್ನು ಎಂದ ಪತಿಯ ಮಾತಿಗೆ ಆಗಲ್ಲವೆನ್ನದೆ ತಿಂದಳು ಸೌಜನ್ಯ..ಅವನ ಕೈಗಳು ಅವಳ ಹೆಗಲಮೇಲೆ ತುಂಟಾಟವಾಡುತ್ತಿದ್ದವು...
ತಿಂಡಿ ತಿಂದು ಕ್ಲೀನ್ ಮಾಡಲೂ ಕೇಶವ್ ನೆರವಾದ..."ರೀ ನಾನೊಬ್ಬಳೇ ಮಾಡುತ್ತೇನೆ.ನೀವು ಹೋಗಿ ಮಲಗಿ "ಎಂದರೂ ಕೇಳದೆ ಜೊತೆಯಾದ.ಮಡದಿಯನ್ನು ಆಗಾಗ ಕಣ್ಣಲ್ಲೇ ಮುದ್ದಿಸುತ್ತಿದ್ದ ...ಪತಿಯ ಒಲವಿಗೆ ಸೋತಳು.. ಕೆಲಸವನ್ನು ಅಲ್ಲೇ ಮೊಟಕುಗೊಳಿಸಿ ಇಬ್ಬರೂ ರೂಮಿಗೆ ತೆರಳಿದರು..
ಪತಿಯ ಕೈಹಿಡಿದು ಬಾಲ್ಕನಿಗೆ ಸಾಗಿ ತಂಗಾಳಿಗೆ ಮೈಯೊಡ್ಡಿ ನಿಂತು ಮೆಲುದನಿಯಲ್ಲಿ "ರೀ.." ಅಂದಳು..
ಅವಳ ಮಾತಿಗೆ ಪೂರ್ಣವಿರಾಮ ಹಾಕಿ ಅಧರಗಳ ಮಧುಹೀರತೊಡಗಿದ ಅವನು.ಬೀಸುವತಂಗಾಳಿಯಲ್ಲಿ ಅವಳ ಕೂದಲುಗಳು ಅವನತ್ತ ತಮ್ಮನ್ನೂ ಪ್ರೀತಿಸೆಂದು ಬರುತ್ತಿದ್ದವು.ಅವನ ಮುಂಗುರುಳು ಸೋಕಿ ಮತ್ತಷ್ಟು ಮತ್ತೇರಿಸಿಕೊಂಡಳು ಅವಳು..ಮೌನವೂ ಮಾತಿಗಿಂತ ಪ್ರಬಲವಾಗಿತ್ತು... ಅವನೆದೆಗೆ ಒರಗಿ ಕಣ್ಮುಚ್ಚಿಕೊಂಡಳು..ಆಲಿಂಗನದಲ್ಲಿ ದೇಹದ ಕಣಕಣಗಳೆಲ್ಲ ಭಾಗಿಯಾದವು..ಎರಡು ಜೀವ ಒಂದೇ ಭಾವವಾಗಿ ಗಾಳಿಗೆ ಮಧ್ಯೆ ಪ್ರವೇಶವಿಲ್ಲವೆಂದು ಸಾರಿದವು..ಬಾಲ್ಕನಿಯಿಂದ ಒಳಗಡಿಯಿಟ್ಟ ಮಧುಹೀರಿದ ದುಂಬಿಗಳು ಕತ್ತಲಲ್ಲಿ ಬಾಗಿಲೆಳೆದುಕೊಂಡು ಒಲವಿನ ಹೂವಹಾಸಿಗೆಗೊರಗಿದರು...
ಮುಂದುವರಿಯುವುದು..
✍️.. ಅನಿತಾ ಜಿ.ಕೆ.ಭಟ್.
16-04-2020.
ಮುಂದಿನ ಭಾಗ..ಶನಿವಾರ..
ಚೆನ್ನಾಗಿ ಮೂಡಿ ಬರುತ್ತಿದೆ... ಹೀಗೆ ಮುಂದುವರಿಯಲಿ...
ReplyDeleteಧನ್ಯವಾದಗಳು ಅಶ್ವಿನಿ...💐🙏
ReplyDelete