ಜೀವನ ಮೈತ್ರಿ ಭಾಗ ೭೦
ಸೌಜನ್ಯ ತನ್ನ ಕಣ್ಣರಳಿಸಿ ನಸುನಗುತ್ತಾ "ಉತ್ತಮ ಅವಕಾಶ ದೊರೆತಿರುವುದು ನನ್ನ ಪುಣ್ಯ "ಎಂದು ಹೇಳಿದಳು.ಅದನ್ನು ಕೇಳಿದ ಕೇಶವ " ಏನು ಪುಣ್ಯ..? ಪರಪುರುಷನೊಂದಿಗೆ ವೇದಿಕೆಯ ಮೇಲೆ ನರ್ತಿಸುವುದು ನನಗೆ ಸರಿಕಾಣಲಿಲ್ಲ" ಎಂದಾಗ ಸೌಜನ್ಯಳ ಆಶಾಗೋಪುರ ಒಮ್ಮೆಲೆ ಕುಸಿದು ಬಿದ್ದಿತು.
"ಅಳಿಯಂದಿರೆ.. ನೀವು ತಿಳಿದುಕೊಂಡಿರುವುದು ತಪ್ಪು.ವೇದಿಕೆಯ ಮೇಲೆ ಹಾಡಿಗೆ ತಕ್ಕಂತೆ ಭಾವ ಹೊರಹೊಮ್ಮಿಸುತ್ತಾ ಬರೀ ನಟನೆ ಮಾಡುವುದೇ ಹೊರತು ಪಾತ್ರಧಾರಿಗಳ ನಡುವೆ ವೈಯಕ್ತಿಕ ಭಾವ ವಿನಿಮಯ ನಡೆಯುವುದಿಲ್ಲ.ಕಾರ್ಯಕ್ರಮ ಮುಗಿದ ನಂತರ ಆತನಾರೋ..ಈಕೆ ಯಾರೋ.." ಎಂದು ವಿವರಿಸಿದರು ರೇಖಾ.
"ಆದರೂ..ಅತ್ತೆ... ಇನ್ನು ಭರತನಾಟ್ಯದ ಸಮಾರಂಭಗಳಲ್ಲಿ ಭಾಗವಹಿಸುವುದು ಬೇಡವೆಂದು ನನ್ನ ಅಭಿಪ್ರಾಯ.."
ಸೌಜನ್ಯ ಗಾಳಿಹೋದ ಬೆಲೂನಿನಂತಾಗಿದ್ದಳು.
ರೇಖಾ ಮಾತು ಮುಂದುವರಿಸುತ್ತಾ"ಕಲೆ ಯಾರದೂ ವೈಯಕ್ತಿಕ ಸ್ವತ್ತಲ್ಲ.ಅದು ಒಬ್ಬೊಬ್ಬರಿಗೆ ತನ್ನಿಂತಾನೇ ಒಲಿಯುತ್ತದೆ.ಜೊತೆಗೆ ಪರಿಶ್ರಮ, ಆಸಕ್ತಿಯೂ ಸೇರಿದಾಗ ಜನರಿಂದ ಗುರುತಿಸಲ್ಪಡುತ್ತದೆ.ಪ್ರತಿಭೆಯನ್ನು ಬೆಳೆಸಬೇಕೇ ವಿನಃ ಚಿವುಟುವ ಪ್ರಯತ್ನ ಮಾಡಬಾರದು..."ಎಂದರು.
ಅವರೆದುರು ವಾದಮಾಡುವುದು ಬೇಡವೆಂದು ಸುಮ್ಮನಾದ ಕೇಶವ.ನರಸಿಂಹ ರಾಯರು ಇಂತಹ ವಿಷಯದಲ್ಲಿ ಚರ್ಚೆ ಬೇಡವೆಂದು ಸುಮ್ಮನಾದರು.ತಾವು ಫ್ರೆಶ್ ಆಗಿ ಬಂದರು.ಅಷ್ಟರಲ್ಲಿ ಕೇಶವನೂ ರೆಡಿಯಾದ.ಮಾವ ಅಳಿಯ ಡೈನಿಂಗ್ ಟೇಬಲ್ ಮೇಲೆ ರೇಖಾ ಇರಿಸಿದ್ದ ಊಟ ಮಾಡಿದರು.ರೇಖಾ ಬೇರೆ ಕೆಲಸಗಳಲ್ಲಿ ತೊಡಗಿದ್ದರು. ಸೌಜನ್ಯ ಮನಸ್ಸು ಸರಿಯಿಲ್ಲದೆ "ಹಸಿವಿಲ್ಲ" ಎಂದು ಹೇಳಿ ರೂಮು ಸೇರಿದ್ದಳು.
ಕೇಶವ ಊಟ ಮಾಡಿ ಬಂದಾಗ ಸೌಜನ್ಯ ತನ್ನ ನೃತ್ಯದ ಬಟ್ಟೆಗಳನ್ನು ಜೋಡಿಸುತ್ತಿದ್ದಳು.ಇನ್ನು ತನಗಿದನ್ನು ಧರಿಸಿ ನೃತ್ಯಗೈಯ್ಯಲು ಪತಿ ಒಪ್ಪುತ್ತಾರೋ ಇಲ್ಲವೋ ಎಂಬ ದುಃಖದಿಂದ ಕಾಲಿಗೆ ಧರಿಸುವ ಗೆಜ್ಜೆಯನ್ನೊಮ್ಮೆ ಮೈದಡವಿದಳು.ನುಣುಪಾದ ವರ್ಣರಂಜಿತವಾಗಿ ಮನಸೂರೆಗೊಳ್ಳುವ ನೃತ್ಯದ ಬಟ್ಟೆಯನ್ನೇ ದಿಟ್ಟಿಸುತ್ತಿದ್ದಳು.ಹಿಂದಿನಿಂದ ಪತಿ ಬಂದುದು ಅರಿವಾಗಲಿಲ್ಲ.ಕೇಶವ ಬಂದು ಪತ್ನಿಯ ಭುಜದ ಮೇಲೆ ಕೈಯಿಟ್ಟು ಪತ್ನಿಯ ಮುಖದ ಸಮೀಪವೇ ತನ್ನ ವದನವನ್ನು ತಂದು ಮೆಲ್ಲನೆ "ಸೌಜನ್ಯಾ.." ಅಂದ.ಅವಳು ಮಾತನಾಡದೆ ಗಂಭೀರವಾಗಿ ಇದ್ದಳು.ಮತ್ತಷ್ಟು ಹತ್ತಿರದಿಂದ ತನ್ನೆರಡೂ ಕೈಗಳನ್ನು ಅವಳ ಹೆಗಲಮೇಲಿರಿಸಿ ಕರೆದರೂ ಉತ್ತರವಿಲ್ಲ.ಬದಲಾಗಿ ಅಲ್ಲಿಂದ ಎದ್ದು ಬಾಲ್ಕನಿಗೆ ನಡೆದಳು.ಕೇಶವ ಆಕೆಯ ಹಿಂದೆಯೇ ಹೋದ.ಕೇಶವನಿಗೆ 'ನೃತ್ಯ ಮಾಡುತ್ತಿರಬೇಕಾದರೆ ಅಷ್ಟೆಲ್ಲ ಶೃಂಗಾರ ರಸವನ್ನು ವೈಭವೀಕರಿಸಿದ ಮಡದಿ ... ಪತಿ ಸನಿಹಕೆ ಬಂದರೆ ಹೀಗಾಡುವುದೇಕೆ ' ಎಂಬುದೇ ತಿಳಿಯಲಿಲ್ಲ.'ಕೆಲವೊಂದರಲ್ಲಿ ದಡ್ಡ..!! ನನ್ನ ಪತಿ' ಎಂದು ಕೊಳ್ಳುತ್ತಿದ್ದಳು ಸೌಜನ್ಯ.
ಕೇಶವ "ಏನಾಯ್ತು.. ಯಾಕೆ ಹೀಗೆ..?" ಎನ್ನುತ್ತಾ ಬಳಸಿ ಮಧುಹೀರುವ ದುಂಬಿಯಾದ..ಆಕೆ ಇದೇ ಸಮಯ ಪತಿಯನ್ನು ಮಣಿಸಲು ಎಂದು ಆ ಬಂಧನದಿಂದ ಬಿಡಿಸಿಕೊಂಡು ಮುಖ ಊದಿಸಿಕೊಂಡು ನಿಂತಳು.ಅವಳಾಟಕೆ ಕೇಶವ ಸೋಲಲೇಬೇಕಾಯಿತು.
ಸಮಾಧಾನಿಸಲು ಬಂದ ಕೇಶವನಿಗೆ ಒಂದು ಕಂಡೀಷನ್ ಹಾಕಿದಳು ಸೌಜನ್ಯ.. "ನನ್ನನ್ನು ಭರತನಾಟ್ಯ, ಸಂಗೀತದಲ್ಲಿ ತೊಡಗಿಸಿಕೊಳ್ಳಲು ಒಪ್ಪಿದರೆ ಮಾತ್ರ.." .ಎಂದವಳ ಮಾತಿಗೆ ಹೂಂಗುಟ್ಟಬೇಕಾದ ಅನಿವಾರ್ಯತೆ ಕೇಶವನಿಗೆ..ಕೇಶವನ ಒಪ್ಪಿಗೆಯ ಮುದ್ರೆ ಬಿದ್ದದ್ದೇ ತಡ ಅವನೊಲವಿನ ಕರೆಗೆ ಸಿಹಿಮುದ್ರೆಯನಿತ್ತು ಅವನಿಟ್ಟ ಕಚಗುಳಿಗೆ ಕೆನ್ನೆ ಕೆಂಪೇರಿಸಿಕೊಂಡಳು.
ಸೌಜನ್ಯಳಿಗೆ ಕೇಶವನನ್ನು ತನ್ನಿಷ್ಟಕ್ಕೆ ತಕ್ಕಂತೆ ಬಗ್ಗಿಸಲು ಅದೇ ಪ್ರಬಲವಾದ ಅಸ್ತ್ರ ವಾಯಿತು.ಕೇಶವನಿಗೆ ಅನಿವಾರ್ಯತೆ.ಗಂಡನನ್ನು ತನ್ನ ಬುದ್ಧಿಬಲದಿಂದ ಮಣಿಸಿದ ಅವಳಲ್ಲಿ ಇವನನ್ನು ತನ್ನ ಕಿರುಬೆರಳಿನಲ್ಲಿ ಆಡಿಸಬೇಕು ಎಂಬ ಭಾವನೆ ಬಲವಾಗಿತ್ತು.
******
ರೇಖಾ ಮಲಗಲು ಬಂದ ಪತಿಯನ್ನು "ಮಾತನಾಡುವುದಿದೆ.." ಎಂದು ಕರೆದು "ಅಳಿಯನಿಗೆ ನೀವಾದರೂ ಬುದ್ಧಿ ಹೇಳಬಾರದಿತ್ತೇ.. ?"ಎಂದು ಗದರಿದರು.
"ಇಂತಹ ವಿಷಯದಲ್ಲಿ ನಾವು ಮಧ್ಯೆ ಬಾಯಿ ಹಾಕಬಾರದು. ಅದು ಅವರಿಬ್ಬರೂ ಮಾತನಾಡಿ ಸರಿಪಡಿಸಬೇಕಾದದ್ದು."
"ಅಲ್ಲ..ರೀ ನಮ್ಮ ಎದುರೇ ಸೌಜನ್ಯಳನ್ನು ಹಾಗೆ ಹೇಳುತ್ತಾನಲ್ಲ.. ಮಗಳನ್ನು ಅವಮಾನಿಸಿದಾಗ ನಿಮಗೆ ಏನೂ ಅನಿಸುವುದಿಲ್ಲವೇ..?"
"ಮದುವೆಯಾಗುವವರೆಗೆ ಮಗಳು ನಮ್ಮವಳು. ಮತ್ತೇನಿದ್ದರೂ ಗಂಡನಿಗೆ, ಗಂಡನ ಮನೆಯವರಿಗೆ ಬೇಕಾದಂತೆ ಹೊಂದಿಕೊಂಡು ಹೋಗಬೇಕಾದವಳು. ಹಾಗಿರುವಾಗ ನಾವು ಬುದ್ಧಿ ಹೇಳುವುದರಲ್ಲಿ ಅರ್ಥವಿಲ್ಲ. ತೀರಾ ತಪ್ಪಾಗಿದ್ದರೆ ಮಾತ್ರ ಎಚ್ಚರಿಸಿದರೆ ಸಾಕು."
"ನೀವು ಅಳಿಯಂದಿರ ಪರವಾಗಿಯೇ ಮಾತನಾಡುತ್ತೀರಲ್ಲಾ...!!"
"ಮತ್ತೆ ಏನು ರೇಖಾ.. ಆಕೆಯ ಜೀವನ ಹಳಿ ತಪ್ಪಿ ಹೋಗಿ ಸರಿಪಡಿಸಲು ನಾವೆಷ್ಟು ಕಷ್ಟಪಟ್ಟಿದ್ದೇವೆ.ಯೋಚಿಸು ಒಮ್ಮೆ.. ಈಗ ಒಂದು ಹಂತಕ್ಕೆ ಬಂದಾಗ ಪುನಃ ಹಾಳು ಮಾಡಿಕೊಳ್ಳಬಾರದು ಅಲ್ವಾ..ನಮ್ಮ ಸಲಹೆಗಳು ಮಗಳ ಸುಂದರ ಬಾಳನ್ನು ಕೆಡಿಸಬಾರದು ಎಂಬ ಎಚ್ಚರ ನಮಗಿರಬೇಕು..."
"ಹೌದು ಹೌದು ... ಭರತನಾಟ್ಯ ಮಾಡಿದರೆ ಹಾಳಾಗುತ್ತದೆ ಬದುಕು.. ನೀವು ಇನ್ನೂ ಯಾವ ಕಾಲದಲ್ಲಿದ್ದೀರಿ.?."
"ಅರ್ಥವಿಲ್ಲದ ವಾದ ಮಾಡಬಾರದು. ಮೊನ್ನೆ ಮದುವೆಯಾಗಿ ವಧೂಗೃಹಪ್ರವೇಶ ಕಾರ್ಯಕ್ರಮ ಮುಗಿಯುವ ಮುನ್ನವೇ ಮತ್ತೆ ಬಶೀರ ಬಂದು ಆಕೆಯ ತೋಳು ಹಿಡಿದಿದೆಳೆದಿದ್ದ.. ನೆನಪಿದೆಯೇ..? ಹೀಗೆ ಪ್ರೋಗ್ರಾಮ್ ಅಂತ ಸುತ್ತಿದಾಗ ಅವನೆಲ್ಲಿಯಾದರೂ ಪುನಹ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದರೆ.."
ರೇಖಾ ಪತಿಯ ಮಾತನ್ನು ಅರ್ಥೈಸಿಕೊಂಡು 'ಹೌದು..ಇವರ ವಾದದಲ್ಲೂ ಹುರುಳಿದೆ'..ಎಂದು ಯೋಚಿಸುತ್ತಿದ್ದರು.
"ಕೆಟ್ಟವರಿಗೆ ಎಲ್ಲಿ ಕೇಡುಬಗೆಯಲು ಅವಕಾಶ ಸಿಗುತ್ತದೆ ಎಂದು ಕಾಯುವುದು ಕೆಲಸ .ನಮ್ಮ ಜಾಗ್ರತೆಯಲ್ಲಿ ನಾವಿರಬೇಕು. ನನ್ನ ಪ್ರಕಾರ ಸಧ್ಯ ಭರತನಾಟ್ಯ , ಸಂಗೀತ ಎಂದು ಮನೆಯಿಂದ ಹೊರಗೆ ಹೋಗದಿರುವುದೇ ಲೇಸು.."
"ಇನ್ನೂ ಸೇಡು ತೀರಿಸಲು ಪ್ರಯತ್ನಿಸಬಹುದು ಅಂದುಕೊಳ್ಳುತ್ತೀರ.."
"ಹೇಳಲು ಸಾಧ್ಯವಿಲ್ಲ. ಕಾಮಾತುರಾಣಾಂ ನ ಭಯಂ ನ ಲಜ್ಜಾಃ." ಎಂಬ ಮಾತೇ ಇದೆ. ಅಲ್ಲದೆ ಇಂತಹ ಕಾರ್ಯಕ್ರಮಗಳು ರಾತ್ರಿಯ ಹೊತ್ತಿನಲ್ಲಿ ನಡೆಯುವುದು.ನಾವೂ ಜೊತೆಗಿರುವುದಿಲ್ಲ... ಕೇಡು ಬಯಸುವವರಿಗೆ ಇಂತಹ ಸಂದರ್ಭ ಅತಿ ಸುಲಭ."
"ನಾನು ಈ ದೃಷ್ಟಿಕೋನದಿಂದ ಆಲೋಚನೆ ಮಾಡಿಲ್ಲ..ರೀತಿ.."
"ಅಲ್ಲದೆ ಈಗ ಮಗಳು ಅಳಿಯ ನಮ್ಮ ಮನೆಯಲ್ಲಿ ನೆಮ್ಮದಿಯಿಂದ ಇದ್ದಾರೆ. ಅದುವೆ ನಮ್ಮ ಸೌಭಾಗ್ಯ ಎಂದು ತಿಳಿಯಬೇಕು.ಅವರಿಗೆ ಬುದ್ಧಿ ಹೇಳುವುದು ,ತಿದ್ದುವುದು ಎಂದು ನಾವು ಕಿರಿಕಿರಿ ಮಾಡಿದರೆ ನಾಳೆ ತಮ್ಮದೇ ಮನೆ ಮಾಡಿಕೊಳ್ಳುತ್ತೇವೆ ಎಂದು ಬೇರೆ ಕಡೆ ಹೋದರೆ ನಮಗಾದರೂ ಯಾರಿದ್ದಾರೆ..
? ಮನೆ ಅಳಿಯ ಸಿಕ್ಕಿದ್ದು, ಮಗಳ ಬಾಳು ಸರಿ ಹೋದದ್ದು ನಮ್ಮ ಪುಣ್ಯ ಎಂದು ತಿಳಿ. ಪ್ರತಿಯೊಂದರಲ್ಲೂ ಎದುರು ಮಾತನಾಡಲು ಹೋಗಬಾರದು ತಿಳಿಯಿತಾ.."
"ಆಯ್ತು ..ಹಾಗೆ ಮಾಡುವೆ..ಒಟ್ಟಿನಲ್ಲಿ ಮಗಳು ಚೆನ್ನಾಗಿದ್ದರೆ ಸಾಕು."ಎಂದು ತಾವು ಮುಸುಕೆಳೆದುಕೊಂಡರು.
******
ಶಾಸ್ತ್ರೀ ನಿವಾಸದಲ್ಲಿ ಮದುವೆಗೆ ಇನ್ನು 10 ದಿನಗಳು ಇರುವುದು ಎಂದು ಚಪ್ಪರದ ಕೆಲಸ ವೇಗವಾಗಿ ಸಾಗುತ್ತಿತ್ತು. ದಿನವೂ 25 ಕೆಲಸದಾಳುಗಳು ಮದುವೆಯ ತಯಾರಿಗೆಂದೇ ಶ್ರಮ ಪಡುತ್ತಿದ್ದರು.ಶ್ಯಾಮಶಾಸ್ತ್ರಿಗಳು ಮುಂದೆ ನಿಂತು ಮಗನಿಗೆ ಮಾರ್ಗದರ್ಶನವನ್ನು ಮಾಡುತ್ತಿದ್ದರು.ದೊಡ್ಡದಾಗಿ ಕೊಪ್ಪರಿಗೆ ಒಲೆಯನ್ನು ಹಾಕಿದ್ದು ಹಿಂದಿನಿಂದಲೇ ಶಾಸ್ತ್ರಿಗಳ ಮನೆತನಕ್ಕೆ ಕೊಪ್ಪರಿಗೆ ಒಲೆ ಹಾಕುತ್ತಿದ್ದ ಸೀನಪ್ಪ. ಶ್ಯಾಮ ಶಾಸ್ತ್ರಿಗಳೇ ಸ್ಥಳ ತೋರಿಸಿ ತಾವೇ ನಿಂತು ಉಸ್ತುವಾರಿ ವಹಿಸಿದ್ದರು. ಸೀನಪ್ಪನಿಗೆ ಈಗ ವಯಸ್ಸು 78 ಆದರೂ... ಶಾಸ್ತ್ರಿ ದನಿಯ ಮನೆ ಮದುವೆಯೆಂದರೆ ಅವನಿಗೂ ಯೌವ್ವನದ ಹುರುಪು ಬಂದಿತ್ತು.ಕಾಲು ನೋವು ಅನ್ನುವುದನ್ನು ಲೆಕ್ಕಿಸದೆ ಅಚ್ಚುಕಟ್ಟಾಗಿ ಕೊಪ್ಪರಿಗೆ ಒಲೆಯನ್ನು ಸಿದ್ಧಪಡಿಸಿ ಕೊಟ್ಟಿದ್ದ.ಮದುವೆಯ ಮುನ್ನಾ ದಿನವೇ ಬಂದು ಕೊಪ್ಪರಿಗೆಯನ್ನು ಉಪ್ಪರಿಗೆಯಿಂದ ಕೆಳಗಿಳಿಸಿ.. ತೊಳೆದು ಶುಚಿ ಗೊಳಿಸುವ ಜವಾಬ್ದಾರಿಯು ನನ್ನದೇ ಎಂದು ಹೇಳಿ ತೆರಳಿದ್ದ.
ಶಾಸ್ತ್ರೀ ನಿವಾಸದಲ್ಲಿ ಮದುವೆ ಎಂದು ಗೊತ್ತಾದಾಗ ಲೀಸಾ ಬಾಯಮ್ಮ "ನಮ್ಮ ಮನೆಯ ಮಲ್ಲಿಗೆ ಆ ದಿನ ನಿಮ್ಮ ಮನೆಗೆ .ಮೈತ್ರಿಯಮ್ಮ ನಮ್ಮ ತೋಟದ ಮಲ್ಲಿಗೆ ಮುಡಿದು ಮಂಟಪದಲ್ಲಿ ನಿಲ್ಲಬೇಕು..ಪೇಟೆ ಮಲ್ಲಿಗೆ ಬೇಗ ಕಪ್ಪಾಗುವುದು..ನಮ್ಮದು ತಾಜಾ ಮಲ್ಲಿಗೆ..".ಎಂದು ಶಾಸ್ತ್ರೀ ಮೇಸ್ಟ್ರಿಗೆ ಮೊದಲೇ ಹೇಳಿದ್ದಳು. ಲೀಸಾ ಬಾಯಮ್ಮ ಮಲ್ಲಿಗೆ ಕೃಷಿಯಲ್ಲಿ ಬಹಳ ಮುಂದೆ ಇರುವ. ದಿನವೂ 15 ಅಟ್ಟೆ ಮಲ್ಲಿಗೆ ಮಾರುವವರು. ಆಕೆಯ ಗಂಡ ಗುಡ್ಡದಲ್ಲಿ ತರಕಾರಿ ಬೆಳೆಯುತ್ತಿದ್ದಾರೆ."ತರಕಾರಿ ನಮ್ಮಲ್ಲಿಂದ ಕೊಡುತ್ತೇವೆ ಮೇಷ್ಟ್ರೇ .."ಎಂದಿದ್ದ.
ಶಾಸ್ತ್ರಿ ಮನೆತನದ ಅದ್ದೂರಿ ಸಾಂಪ್ರದಾಯಿಕ ಮದುವೆಗೆ ಊರಿಗೆ ಊರೇ ಸಂಭ್ರಮಪಟ್ಟು ಕೈಜೋಡಿಸಿ ಕಾತರದಿಂದ ಕಾಯುತ್ತಿತ್ತು.
ಮುಂದುವರಿಯುವುದು..
✍️...ಅನಿತಾ ಜಿ .ಕೆ .ಭಟ್
01-05-2020.
👌👌
ReplyDeleteಥ್ಯಾಂಕ್ಯೂ 💐🙏
ReplyDelete