Thursday, 2 April 2020

ಗಜಲ್

ಸರ್ವರಿಗೂ ಶ್ರೀ ರಾಮನವಮಿಯ ಶುಭಾಶಯಗಳು 💐

ಗಜಲ್

ಮನದೊಳಗೆ ಮನೆಮಾಡು ಮನೋಹಾರಿ ರಾಮ
ಒಳಗಿಳಿದು ಕೊಳೆತೊಳೆದು ಬೆಳಗೆನ್ನ ರಾಮ||

ಅಡಿಗಡಿಗೆ ಎಡವುತಲಿ  ನಡೆಯುವೆನು ನಾನು
ಅಡೆತಡೆಯ ಸರಿಸಿ ಆವರಿಸೆನ್ನ ರಾಮ||

ಮತ್ಸರವು ತುಂಬಿರುವ ಜಗದೊಳಗೆ ಇಂದು
ಮನಶ್ಶಾಂತಿ ಸುಧೆಯೆನಗೆ ಹರಿಸೆನ್ನ ರಾಮ||

ಅರಿಯನ್ನು ಪರಿಹರಿಸಿ ಕರಪಿಡಿದು ನಿಲಿಸು
ಅರಿಕೆಯಿದು ಹರಕೆಯಿದು ಕನಿಕರಿಸೆನ್ನ ರಾಮ||

ಚರಾಚರದೊಳು ಚಂಚಲಿತ ಚಿತ್ತವಿಹುದಿಲ್ಲಿ
ಚಂದಿರನ ತಂಪಿನೊಳು ನಡೆಸೆನ್ನ ರಾಮ||

ಬಿಸಿಯುಸಿರ ಬೇಗೆಯಲಿ ಬೆಂದಿರುವೆ ನಾನು
ಬಿಡೆನಿನ್ನ ಚರಣವನು ಹರಸೆನ್ನ ರಾಮ||

ಇರುಳಲ್ಲಿ ಹೊರಳಿ ನರಳಿರುವೆ ನಾನು
ಕರುಣಾಳು ಕರೆಕೇಳಿ ಸಲಹೆನ್ನ ರಾಮ||

ಮೊರೆಯಿಡುವ ಮುಗುಧರ ಬಿನ್ನಹವ ಕೇಳಿ
ಮರೆಯದೆ ಮಧುತುಂಬಿ ಮಾರ್ದನಿಸೆನ್ನ ರಾಮ||

ಅಕ್ಷಿಯೊಳು ನಿನ ಬಿಂಬ ತುಂಬಿಹುದು ರಾಮ
ಅಂತರಾತ್ಮದಿ ನೆಲೆಸಿ ಅನುಗ್ರಹಿಸೆನ್ನ ರಾಮ||


✍️... ಅನಿತಾ ಜಿ.ಕೆ.ಭಟ್.
02-04-2020.

2 comments: