ಜೀವನ ಮೈತ್ರಿ ಭಾಗ ೬೧
ಸೌಜನ್ಯಳ ಕಂಗಳ ಸೆಳೆತಕ್ಕೆ ಮಾರುಹೋಗಿದ್ದ ಕೇಶವ್ ಮೆದುವಾಗಿ ಕೈಗಳಿಂದ ಆಕೆಯನ್ನು ಬಳಸಿ ಪ್ರೀತಿತೋರಿದ..ಪತಿಯ ಒಲವಿಗೆ ತನ್ನ ನಲ್ಮೆಯನ್ನೂ ಬೆರೆಸಿದಳು..ಇಬ್ಬರೂ ಅಂಟಿಕೊಂಡೇ ಸೋಫಾದಲ್ಲಿ ಕುಳಿತು ಪರಸ್ಪರ ಕೀಟಲೆ ತುಂಟಾಟದಲ್ಲಿ ತೊಡಗಿದರು..ಆಯಾಸದಿಂದ ಸೌಜನ್ಯಳಿಗೆ ಆಕಳಿಕೆ ಬರುತ್ತಿತ್ತು..ಅದನ್ನರಿತ ಕೇಶವ್ "ನೀನು ಹೋಗಿ ರೆಸ್ಟ್ ಮಾಡು.ನಾನು ಹೊರಗೆ ಸ್ವಲ್ಪ ಅಡ್ಡಾಡಿ ಬರುತ್ತೇನೆ "ಎಂದನು.ಕೇಶವನನ್ನು ಒಂದು ಕ್ಷಣ ಅಗಲಿರಲೂ ಬಯಸದ ಸೌಜನ್ಯ "ನೀವೂ ಬನ್ನಿ "ಎಂಬಂತೆ ನೋಟ ಬೀರಿದರೆ ಕೇಶವ್ ಗೆ ಹುಚ್ಚು ಹುಡುಗಿ..!! ಅನಿಸಿತು.
ನಿದ್ದೆ ತೂಗುತ್ತಿದ್ದರೂ ಬಯಕೆಗಳಿಗೆ ಕಡಿವಾಣವಿಲ್ಲ .." ನನ್ನ ಅಪ್ಸರೆ .. ನಾನು ಆಮೇಲೆ ಬರುವೆ..ಇಬ್ಬರೂ ಜೊತೆಯಾದರೆ ವಿಶ್ರಾಂತಿ ಸಿಗಲ್ಲ.."ಎಂದು ನಗುತ್ತಾ ಹೇಳಿ ಹೊರಗೆ ಹೊರಟ..
ಒಂದು ಫರ್ಲಾಂಗ್ ದೂರನಡೆದು ಅಮ್ಮನಿಗೆ ಕರೆ ಮಾಡಿದ.ಅಮ್ಮ ಫೋನೆತ್ತಲಿಲ್ಲ..ಬಹಳ ದುಃಖವಾಯಿತು ಕೇಶವನಿಗೆ.ಅಮ್ಮ ಬೇಕೆಂದೇ ನನ್ನ ಮೇಲೆ ಸಿಟ್ಟಿನಿಂದ ಈ ರೀತಿ ಮಾಡಿರಬಹುದಾ..? ಅಲ್ಲ ಬೇರೇನಾದರೂ ಕೆಲಸದಲ್ಲಿರಬಹುದಾ ..ಎಂಬ ಸಂದೇಹ ಕಾಡಿತು...ನನ್ನ ಮುಂದಿನ ಜೀವನದ ಬಗ್ಗೆ ನಾನೇ ಯೋಚಿಸಿ ನಿರ್ಧಾರ ಮಾಡಬೇಕು.ಮಾವನ ಮುಂದೆ ಈ ಬಂಗಾರಣ್ಣನ ಮಗ ಕೈಯೊಡ್ಡುವಂತಾಗಬಾರದು.ಆದರೆ ನನ್ನ ಡಿಪ್ಲೋಮಾ ಪದವಿಗೆ ಎಲ್ಲಿ ಒಳ್ಳೆಯ ಉದ್ಯೋಗ ಲಭಿಸೀತು..? .ಇಲ್ಲೇ ಒಳ್ಳೆಯ ವರಮಾನವಿದ್ದರೆ ಸೆಟ್ಲ್ ಆಗಬಹುದು.. ಪುನಃ ತಂದೆಯ ಮುಂದೆ ಮನೆಗೆ ಬರಲು ಒಪ್ಪಿಗೆ ಕೇಳುವುದು ತಪ್ಪುತ್ತದೆ.. ಅಲ್ಲಿ ಊರಜನರು ಬಾಯಿಗೊಂದರಂತೆ ಆಡುವವರಿಂದ ಅವಮಾನ ಅನುಭವಿಸುವುದೂ ತಪ್ಪುತ್ತದೆ.. ಸರಿ.. ಯಾವುದಕ್ಕೂ ಅಮ್ಮನಿಗೆ ಫೋನ್ ಮಾಡಿ ಡಿಪ್ಲೋಮಾ ಸರ್ಟಿಫಿಕೇಟ್ ತರಿಸಿಕೊಳ್ಳಬೇಕು.. ಎಂದೆಲ್ಲ ಯೋಚನೆಯಲ್ಲಿ ಮುಂದೆ ಇದ್ದ ಸೂಪರ್ ಬಜಾರ್ ಗೆ ಹೋಗಿ ತನಗೆ ಆಗತ್ಯವಿರುವ ಸಾಮಾಗ್ರಿಗಳನ್ನು ತೆಗೆದುಕೊಂಡ.. ಕಿಸೆಯಿಂದ ದುಡ್ಡು ಎಣಿಸಿಕೊಟ್ಟಾಗ ಮಾವ ಕೊಟ್ಟ ದುಡ್ಡಿದು.ಮುಂದಿನ ಬಾರಿ ನನ್ನ ಖರ್ಚಿಗೆ ನನ್ನದೇ ಸಂಪಾದನೆಯ ದುಡ್ಡು ನನ್ನ ಕೈಯಲ್ಲಿ ಇರಬೇಕು.. ಎಂದು ಗಟ್ಟಿಯಾದ ಸಂಕಲ್ಪ ಮಾಡಿದ..
ಸಾಮಾನು ಪಡೆದುಕೊಂಡು ವಾಪಾಸಾಗುತ್ತಿದ್ದ ಕೇಶವನ ಮುಂದೆ ಬೈಕೊಂದು ಗಕ್ಕನೆ ನಿಂತಿತು. ಸ್ಕಲ್ ಕ್ಯಾಪ್, ಹೆಲ್ಮೆಟ್ ಧರಿಸಿದ್ದ ವ್ಯಕ್ತಿ ಯಾರೆಂದು ಗುರುತು ಹಿಡಿಯಲಾಗಲಿಲ್ಲ.. ಕಟ್ಟುಮಸ್ತಾದ ದೇಹ ,ಶರ್ಟಿನ ಒಂದೆರಡು ಬಟನ್ಗಳನ್ನು ಬಿಟ್ಟು ಕೆಳಗಿನ ಬಟನ್ ಮಾತ್ರವೇ ಹಾಕಿದ್ದ... ಆ ವ್ಯಕ್ತಿ ಯಾರಿರಬಹುದೆಂದು ಕೇಶವನಿಗೆ ಕುತೂಹಲ..
"ಅರೆ.. ಕೇಶವ್...ಕುಡ್ಲದ ಭಟ್ರು..." ಎಂದ ಆತನ ದನಿ ಎಲ್ಲೋ ಕೇಳಿದ ಚಿರಪರಿಚಿತ ದನಿಯಂತಿತ್ತು.
"ಕೇಶವ್ ನೀನೇನೋ ಇಲ್ಲಿ.. ನಿನ್ನನ್ನು ನೋಡಿ ಬಹಳ ದಿನಗಳು ಆಯ್ತು ಕಣೋ.." ಎಂದು ಹೆಲ್ಮೆಟ್ ತೆಗೆದ..
"ಓಹೋ...ಸಿಂಗರ್ ಸೀನ... ಹೇಗಿದ್ದೀಯಾ..?"
"ನಂದೇನೋ...ಹೀಗಿದೀನಿ..ನೋಡು..ನೀನು ಹೇಗಿದ್ದೀಯಾ...ಊರಿಗೆ ಹೋದವನು ಅಲ್ಲಿ ಸೆಟ್ಲ್ ಆಗದೆ ಬಂದಿದ್ದೇನು.."
ಅವನ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ಅವನಿಗೆ ಯಾವುದಾದರೂ ಉದ್ಯೋಗ ಖಾಲಿಯಿರುವುದು ಗೊತ್ತಾ ಎಂದು ಕೇಳುವ ಕುತೂಹಲ ಕೇಶವನಿಗೆ...
"ಮದುವೆ ಆಗಿ ಈ ಕಡೆ ಬಂದೆ.. ಎಲ್ಲಾದರೂ ಜಾಬ್ ಸಿಗಬಹುದೇನೋ ಸೀನ..."
"ಜಾಬ್ ಏನು ಬೇಕಾದಷ್ಟಿವೆ.. ನಿಂಗೆ ಸೂಟ್ ಆಗುವಂತಹದ್ದು ಸಿಗಲು ಸ್ವಲ್ಪ ಹುಡುಕಿ, ಕಾದುನೋಡಬೇಕು.."
"ಅರ್ಜೆಂಟಾಗಿ ಆಗಲೇಬೇಕು..ಕಣೋ..."
"ಹಾಗಿದ್ರೆ ನಾನಿರುವ ಕಂಪೆನಿಯಲ್ಲಿ ಇದೆ..ಬಾ.. ಫೀಲ್ಡ್ ವರ್ಕ್ ಜಾಸ್ತಿ ಇರುತ್ತೆ... ಒಂದು ಬೈಕ್ ಬೇಕು.. ಆರಂಭದಲ್ಲಿ ಇಲ್ಲದಿದ್ದರೆ ಕೆಲವು ತಿಂಗಳು ಕಂಪೆನಿಯದ್ದನ್ನೇ ಬಳಸಬಹುದು.."
ಸಿಂಗರ್ ಸೀನನಲ್ಲಿ ಮಾತನಾಡಿ ನಾಳೆ ಅವನ ಕಂಪೆನಿಗೆ ಉದ್ಯೋಗಕ್ಕೆ ಅಪ್ಲೈ ಮಾಡುವುದಾಗಿ ತಿಳಿಸಿದ.
"ಬಾಯ್ " ಮಾಡಿ ಸೀನನನ್ನು ಬೀಳ್ಕೊಟ್ಟ ಕೇಶವನಿಗೆ ಬ್ಯಾಚುಲರ್ ಲೈಫ್ ನ ನೆನಪಾಯಿತು.. ಅಂದು ಸಿಂಗರ್ ಸೀನ,ವಟವಟ ವೆಂಕು, ನಾನು , ಟಿಪ್ ಟಾಪ್ ಮೋಹನ್ ಎಲ್ಲರೂ ಒಂದೇ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದವರು.ಕಂಪೆನಿಯಿಂದ ಕೊಟ್ಟ ರೂಮಿನಲ್ಲಿ ಒಟ್ಟಿಗೆ ಇರುತ್ತಿದ್ದವರು..ಇವನಂತೂ ಯಾವತ್ತೂ ಹಾಡ್ತಾ ಇರ್ತಿದ್ದ.. ಅದಕ್ಕೆ ಸಿಂಗರ್ ಸೀನ ಅಂತ ಹೆಸರು ಬಂತು.. ನಂತರ ವೆಂಕು ಅವನು ಯಾವಾಗ ನೋಡಿದ್ರು ವಟವಟ ಅಂತಿರುತ್ತಿದ್ದ... ಮತ್ತೊಬ್ಬ ಮೋಹನ್ . ಅವನು ಯಾವಾಗಲೂ ಇಸ್ತ್ರಿ ಮಾಡಿದ ಪ್ಯಾಂಟ್ ಶರ್ಟ್ ಧರಿಸಿ ದಿನವೂ ಪಾಲಿಶ್ ಮಾಡಿ ಧರಿಸುತ್ತಿದ್ದ. ಅದಕ್ಕೆ ಅವನಿಗೆ ಟಿಪ್-ಟಾಪ್ ಮೋಹನ್ ಎಂಬ ಹೆಸರು. ನನಗೆ ಕುಡ್ಲದ ಭಟ್ಟರು ಎಂದೇ ಕರೆಯುತ್ತಿದ್ದರು. ಎಷ್ಟು ಮೋಜು-ಮಸ್ತಿ ಮಾಡಿದ್ದೆವು. ಈಗ ಎಲ್ಲವೂ ನೆನಪು. ಸಮಯಕ್ಕೆ ಸರಿಯಾಗಿ ಈ ದಿನ ಮತ್ತೆ ಸಿಕ್ಕಿದ ..ನೋಡೋಣ ನಾಳೆ ಏನಾಗುತ್ತೆ.. ಎಂದು.
ಕೇಶವ್ ಹೋಗಿ ಒಂದು ಗಂಟೆಯಾದರೂ ಬಾರದಿದ್ದನ್ನು ಕಂಡು ನರಸಿಂಹರಾಯರಿಗೆ ಸ್ವಲ್ಪ ಗಾಬರಿ ಉಂಟಾಯಿತು.. ಅಳಿಯಂದಿರು ಹೇಳದೆ ಎಲ್ಲಿಗೆ ಹೋದರು..? ಮಡದಿಯಲ್ಲಿಯೂ ಕೇಳಿದರು." ಆಕೆ ನನಗೆ ತಿಳಿದಿಲ್ಲ "ಎಂದು ತಲೆಯಾಡಿಸಿ ಸುನಿತಾಳಲ್ಲಿ ಕೆಲಸ ಹೇಳಲು ಹೋದರು. ಸೌಜನ್ಯಳನ್ನು ಕೇಳೋಣ ಮಾಳಿಗೆಯ ರೂಮಿನತ್ತ ಹೆಜ್ಜೆ ಹಾಕತೊಡಗಿದರು. ಅಷ್ಟರಲ್ಲಿ ಗೇಟು ತೆರೆದ ಸದ್ದು ಕೇಳಿದ್ದು ಹಿಂದಿರುಗಿ ಮುಂಬಾಗಿಲಿನ ಕಡೆಗೆ ಬಂದರು.. ಅಳಿಯಂದಿರು ಗೇಟ್ ತೆಗೆದು ಒಳಗೆ ಬರುತ್ತಿದ್ದಾರೆ ..ನರಸಿಂಹರಾಯರಿಗೆ ಸಮಾಧಾನವಾಯಿತು ಬಾಗಿಲು ತೆರೆದು ಅಳಿಯಂದಿರನ್ನು ಬರಮಾಡಿಕೊಂಡು ಒಂದಷ್ಟು ಮಾತುಕತೆ ನಡೆಸಿದರು..
*******
ಮೈತ್ರಿ ತನ್ನ ಪರೀಕ್ಷೆಗೆ ಸಿದ್ಧತೆಯ ನಡೆಸುತ್ತಿದ್ದಳು. ಮಧ್ಯೆ ಮಧ್ಯೆ ನಿದ್ದೆ ತೂಗದಂತೆ ಕಿಶನ್ ಸಂದೇಶ ಕಳುಹಿಸುತ್ತಿದ್ದ.ಮೈತ್ರಿ ಕಿಶನ್ ಸಂದೇಶವನ್ನು ಓದುತ್ತಾ ತನ್ನ ಪಠ್ಯವನ್ನು ಅಧ್ಯಯನ ನಡೆಸುತ್ತಿದ್ದಳು. ಅವಳು ಓದಿನಲ್ಲಿ ಬುದ್ಧಿವಂತೆ ..ಯಾವಾಗಲೂ ತರಗತಿಯಲ್ಲಿ ಒಳ್ಳೆಯ ಅಂಕ ಪಡೆದು ಟಾಪ್ ಫೈವ್ ಸ್ಟುಡೆಂಟ್ ಗಳಲ್ಲಿ ಒಬ್ಬಳಾಗಿದ್ದಳು. ಈ ಸಲ ಮಾತ್ರ ಎಷ್ಟು ಅಂಕ ಬರುವುದು ಅವಳಿಗೂ ಸಂದೇಹವಿತ್ತು. ಮನಸ್ಸಿನ ತುಂಬಾ ಕಿಶನ್ ನ ಮಧುರವಾದ ಭಾವಗಳ ಆಂದೋಲನ. ಓದಿದ್ದು ಕ್ಷಣದಲ್ಲಿ ಮರೆಯುವ ಮರೆಗುಳಿತನ.. ಜೊತೆಯಲ್ಲಿ ಮನೆಯಲ್ಲಿ ಮದುವೆಯ ತಯಾರಿ ಎಲ್ಲರೂ ಸೇರಿ ಅವಳಿಗೆ ಗೊಂದಲ ..
ಅಂದು ಅವಳ ಗೆಳತಿ ಸುನಿಧಿ ಮದುವೆ ಸಮಾರಂಭ. ಬರಲೇಬೇಕೆಂದು ಕರೆದಿದ್ದರು. ಸ್ವಲ್ಪ ಹೊತ್ತಿಗಾದರು ಹೋಗಿಬರುತ್ತೇನೆ ಎಂದ ಮೈತ್ರಿಗೆ ಅಜ್ಜಿ "ನೀನು ಹಸಿ ಮೈ ಕೂಸು.. ಹಾಗೆಲ್ಲ ಎಂದು ಹೊರಗೆ ಓಡಾಡುವಂತಿಲ್ಲ"ಎಂದು ಹೇಳಿದರು. ಮೈತ್ರಿಗೆ ದುಃಖವಾಯಿತು ..ಆಗ ಮಂಗಳಮ್ಮ " ಮೈತ್ರಿ ನಿನಗೆ ಹೋಗಲೇ ಬೇಕೆಂದು ಇದ್ದರೆ ನಾನು ಬರುವೆ ಜೊತೆಗೆ.." ಅಮ್ಮನ ಮಾತಿಗೆ ಒಪ್ಪಿ ಅಮ್ಮ ಮಗಳು ಇಬ್ಬರು ಗೆಳತಿಯ ಮದುವೆಗೆ ತೆರಳಿದರು.
ಸರಳವಾದ ಚೂಡಿದಾರ್ ಧರಿಸಿ ಮೈತ್ರಿ ಸುಂದರಿಯಂತೆ ಕಂಗೊಳಿಸುತ್ತಿದ್ದಳು. ಎಲ್ಲಾ ಗೆಳೆಯ-ಗೆಳತಿಯರು ಆಗಮಿಸಿದ್ದರು ಎಂಗೇಜ್ಮೆಂಟ್ ಆಗಿರುವುದು ಯಾರಿಗೂ ತಿಳಿದಿರಲಿಲ್ಲ. ಕೈಯಲ್ಲಿ ಉಂಗುರ ನೋಡಿ ನೋಡಿ ಎಲ್ಲರೂ ಕೇಳಿದರು.. ಹೌದೆಂದು ಒಪ್ಪಿಕೊಂಡಳು. ಫೋಟೋ ತೋರಿಸೆಂದು ಗೋಗರೆದರು. ಫೋಟೋ ನೋಡಿ.
". ಏಯ್..ನಿನ್ನ ರಾಜಕುಮಾರ ಎಷ್ಟು ಸ್ಮಾರ್ಟ್ ಲುಕಿಂಗ್ ಗೈ.."
"ಎಷ್ಟು ಬೆಳಗಿದ್ದಾನೆ... ನೋಡು ಹಾಲಿನ ಕೆನೆ ಇದ್ದಂಗೆ"
"ಅಷ್ಟು ಒಳ್ಳೆಯ.. ಹ್ಯಾಂಡ್ಸಮ್ ಹುಡುಗನ ಪಕ್ಕ ಏಕೆ ಮುಖ ಊದಿಸಿಕೊಂಡು ನಿಂತಿದ್ದೀಯಾ ಸ್ವಲ್ಪ ನಗಬಾರದಾ..?"
"ಕ್ಯೂಟ್ ಪೇರ್.."
ಎಂದೆಲ್ಲ ಹೇಳಿದಾಗ ಮೈತ್ರಿ ಗೆ ಖುಷಿಯಾಯ್ತು..
ಸುನಿಧಿಯ ಹಳೇ ಬಾಯ್ಫ್ರೆಂಡ್ ಸಚಿನ್ ಕೂಡ ಬಂದಿದ್ದ..ಯಾವುದೇ ಬೇಸರ ತೋರಿಸಿಕೊಳ್ಳದೆ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದ..ಶಮಾ ಮೈತ್ರಿಯಲ್ಲಿ ಹೇಳಿದಳು.. "ಅವನಿಗೆ ನಮ್ಮ ಜೂನಿಯರ್ ಒಬ್ಬಳು ಗರ್ಲ್ ಫ್ರೆಂಡ್ ಸಿಕ್ಕಿದಾಳೆ...ಸೋ.. ಹ್ಯಾಪಿ ಮೂಡ್ ನಲ್ಲಿದ್ದಾನೆ.."
ಮೈತ್ರಿ ತನಗೆ ಮತ್ತು ಕಿಶನ್ ಗೆ ಮಾತ್ರ ಹೀಗೆ ಒಬ್ಬರನ್ನೊಬ್ಬರು ಅಗಲಿ ಬದುಕುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಾಗಲಿಲ್ಲ..ಹಾಗಾಗಿಯೋ ಏನೋ ಆ ದೇವರೇ ನಮ್ಮನ್ನು ಆಶೀರ್ವದಿಸಿದ್ದು... ಎಂದು ತನ್ನ ಬದುಕಿಗೆ ಹೋಲಿಸಿಕೊಂಡಳು.
ಮದುವೆಮುಗಿಸಿ ಹೊರಡುವಾಗ
ಮಂಗಳಮ್ಮ ಫ್ರೆಂಡ್ ಗಳನ್ನು ಮಗಳ ವಿವಾಹಕ್ಕೆ ಬರಬೇಕೆಂದು ಹೇಳಿ.. ಪರೀಕ್ಷೆ ಗೆ ಶುಭಕೋರಿದರು... ಎಲ್ಲರಿಗೂ ಬಾಯ್ ಹೇಳಿ ಅಮ್ಮನೊಂದಿಗೆ ಹೆಜ್ಜೆ ಹಾಕಿದಳು ಮೈತ್ರಿ..
********
ಮನೆಗೆ ಬಂದಾಗ ಮಹಾಲಕ್ಷ್ಮಿ ಅಮ್ಮ ಚಾವಡಿಯಲ್ಲಿ ಕುಳಿತಿದ್ದರು..ಒಳಬಂದ ಸೊಸೆ ಮೊಮ್ಮಗಳನ್ನು ಕಂಡು.."ಹೊರಗೆ ಮದುವೆಗೆ ಹೋಗಿ ಸೀದಾ ಒಳಗೆ ಬರುವುದಾ.. ಮಂಗಳಾ ನಿನಗಾದರೂ ಬುದ್ಧಿ ಬೇಡವಾ.. ಚೆನ್ನಾಗಿ ಕೈ ಕಾಲು ಮುಖ ತೊಳೆದು ಒಳಗೆ ಬನ್ನಿ.." ಅಂದಾಗ ಅಮ್ಮ ಮಗಳಿಬ್ಬರೂ ಮರುಮಾತನಾಡದೆ ಅಜ್ಜಿಯ ಆದೇಶವನ್ನು ಪಾಲಿಸಿದರು...
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
12-04-2020.
ಮುಂದಿನ ಭಾಗ..ಮಂಗಳವಾರ..
Thank you..
ReplyDelete