ಜೀವನ ಮೈತ್ರಿ - ಭಾಗ ೫೪
ಮನೆಗೆ ತಲುಪಿದ ಶೇಷಣ್ಣ "ಸುಬ್ಬೀ.." ಎಂದು ಕರೆಯುತ್ತಲೇ ಕೈಕಾಲು ತೊಳೆದು ಒಳಗೆ ಬಂದ.. "ಏನ್ರೀ.. ಪ್ರಾತಃ ಕಾಲದಲ್ಲೇ ಜೋರಾಗಿ ಬೊಬ್ಬೆ ಹೊಡೀತಿದೀರಾ..?"
"ಮತ್ತೇನೇ ಸುಬ್ಬಿ..ನೋಡು ಇಲ್ಲಿ ನೋಡು.." ಎನ್ನುತ್ತಾ ತನ್ನ ಮೊಬೈಲ್ ತೋರಿಸುತ್ತಾನೆ.
ಸುಬ್ಬಿ ಕಣ್ಣು ಚಿಕ್ಕದು ಮಾಡಿ ನೋಡುತ್ತಾ.. "ಏನಪ್ಪಾ... ನಂಗೆ ಕಾಣೋದೇ ಇಲ್ಲ.ಇರಿ ಕನ್ನಡಕ ಹಾಕಿಕೊಂಡು ಬರುತ್ತೇನೆ " ಎಂದಳು.
"ನೋಡು ನಿಶ್ಚಿತಾರ್ಥ ಮುಗಿಯುತ್ತಿದ್ದಂತೆ ಎರಡೂ ಕಡೆಯಿಂದ ಇಪ್ಪತ್ತೈದು ಸಾವಿರ ನನ್ನ ಅಕೌಂಟ್ ಗೆ ಬಿದ್ದಿತು... ಹ್ಹ ಹ್ಹ ಹ್ಹಾ.. ಇನ್ನು ಅರ್ಧಾಂಶ ಮದುವೆ ದಿನ ವಧೂವರರು ಸಪ್ತಪದಿ ತುಳಿಯುತ್ತಿದ್ದಂತೆ ವಸೂಲಿ ಮಾಡಿಬಿಡುತ್ತೇನೆ.."
"ಆಗ್ಲಿ ಆಗ್ಲಿ... ಈ ಸಲ ನನ್ನ ಕೈಗೆರಡು ಬಂಗಾರದ ಬಳೆ ಗ್ಯಾರಂಟಿ.. "ಎನ್ನುತ್ತಾ ತನ್ನಯ ಕೈಗಳನ್ನು ದಿಟ್ಟಿಸಿದಳು.
*******
ಬಂಗಾರಣ್ಣನ ಮನೆಯಲ್ಲಿ ಮಗನ ಮದುವೆಗೆ ಸಿದ್ಧತೆ ಜೋರಾಗಿಯೇ ಇತ್ತು.ಮರುದಿನವೇ ಹೆಂಡತಿ, ಮಗನೊಂದಿಗೆ ತೆರಳಿ ಮದುವೆ ಕಾಗದ ಅಚ್ಚು ಹಾಕಿಸಿ ಒಡವೆ ಬಟ್ಟೆ ಖರೀದಿಸಿ ಬಂದರು ಬಂಗಾರಣ್ಣ.ಚಪ್ಪರದ ಕಾರ್ಯ ಸೇಸಪ್ಪ ಹಾಗೂ ಹತ್ತಾರು ಜನ ಸೇರಿ ಮಾಡಿದರು.ಅಂಗಳಕ್ಕೆಲ್ಲ ಶಕ್ಕು ಸೆಗಣಿ ಸಾರಿಸಿದಳು.ಕೇಶವ್ ತಂದೆ ವಹಿಸಿದ ಜವಾಬ್ದಾರಿಯನ್ನು ಚಾಚೂ ತಪ್ಪದೆ ನಿರ್ವಹಿಸುತ್ತಿದ್ದ.ಪುರೋಹಿತರಲ್ಲಿಗೆ ಬಂಗಾರಣ್ಣ ಮತ್ತು ಕೇಶವ್ ಇಬ್ಬರೂ ತೆರಳಿ ಕರೆಯೋಲೆ ಕೊಟ್ಟು ಕಾರ್ಯಕ್ರಮಗಳನ್ನು ಸಾಂಗವಾಗಿ ನೆರವೇರಿಸಿಕೊಡಬೇಕೆಂದು ಕೋರಿ ನಮಸ್ಕರಿಸಿ ಬಂದರು.ಅಡುಗೆಗೆ ಪಟ್ಟಿ ಮಾಡಿ ಸಾಮಾನು ತರಿಸುವ ಎಲ್ಲವೂ ಸುಸೂತ್ರವಾಗಿ ನಡೆಯಿತು.
ಕೇಶವ್ ಮೈತ್ರಿಯ ಫೋಟೋ ನೋಡಿ "ನೋಡು ನಿನಗೆ ನಿಶ್ಚಿತಾರ್ಥ ಆಗುವ ಮೊದಲೇ ನನ್ನ ವಿವಾಹ ನೆರವೇರುತ್ತದೆ.ನನ್ನ ಚೆಲುವೆಗೆ ನೀನೆಲ್ಲಿ ಸಮ ?.. ಶಾಸ್ತ್ರಿಗಳು ನನಗೆ ಜಾತಕ ಕೊಟ್ಟು ನಂತರ ಇನ್ಯಾರಿಗೋ ಬಡವನಿಗೆ ಕೊಟ್ಟಿದ್ದಾರಲ್ಲ... ಜೋಯಿಸರ ಮುಂದೆ ಅವಮಾನವಾಗುವಂತೆ ಮಾಡಿದ್ದರಲ್ಲ ...ಅವರಿಗೆ ತಕ್ಕ ಶಾಸ್ತಿ ಆಗಬೇಕು. ಅವನ ಮಗಳೇನು..? ಅವಳಿಗಿಂತ ಚೆಲುವೆಯೇ ನನ್ನ ರಾಣಿ. ಆಕೆಗೆ ಬಡ ಬ್ರಾಹ್ಮಣನೇ ಸೂಕ್ತ.ಹ್ಹ ಹ್ಹ ಹ್ಹಾ.."
ಎಂದು ಸೊಕ್ಕಿನಿಂದ ತನ್ನಲ್ಲೇ ಆಡಿದ..
******
ನರಸಿಂಹ ರಾಯರು ರೇಖಾ ತಮ್ಮ ಆಫೀಸಿಗೆ ಹದಿನೈದು ದಿನ ರಜೆ ಹಾಕಿದರು.ಮಗಳಿಗೆ ಇಷ್ಟವಾದ ಆಭರಣವೂ ಬಟ್ಟೆಬರೆಗಳನ್ನು ಖರೀದಿಸಿ ಅವಳ ಆತ್ಮೀಯ ಗೆಳತಿಯರನ್ನು ಮದುವೆಗೆ ಆಹ್ವಾನಿಸಿದರು.ನೆಂಟರಿಗೆಲ್ಲ ಕರೆಯೋಲೆಯನ್ನು ತಲುಪಿಸಿದರು.ನರಸಿಂಹ ರಾಯ ರ ತಮ್ಮ ಊರಿನಲ್ಲಿ ಮದುವೆಗೆ ಬೇಕಾದ ಸಿದ್ಧತೆ ನಡೆಸಿದರು.
ಮದುವೆಯ ಮುನ್ನಾ ದಿನ ಬೆಳಿಗ್ಗೆ ಪುತ್ತೂರಿಗೆ ತನ್ನ ಮನೆಗೆ ..ಹಿರಿಮನೆಗೆ ಆಗಮಿಸಿದ ನರಸಿಂಹ ರಾಯರು ನಂತರ ಮದುವೆ ನೆರವೇರಲಿರುವ ದೇವಸ್ಥಾನದಲ್ಲಿ ಮಗಳಿಗೆ ನಾಂದೀ ಕಾರ್ಯಕ್ರಮವನ್ನು ನೆರವೇರಿಸಿದರು.ಅರಿಶಿನ ಕೊಂಬಿನ ಕಂಕಣಕಟ್ಟಿ ಸೌಜನ್ಯ ಮದುವೆವಧು ಸಿದ್ಧವಾದಳು.ರಾತ್ರಿ ತರಕಾರಿ ಹೆಚ್ಚಲು ನೆಂಟರಿಷ್ಟರು ನೆರೆಹೊರೆಯವರು ಆಗಮಿಸಿದ್ದರು.ವಧುವಿನ ಅಲಂಕಾರಕ್ಕಾಗಿ ಮಂಗಳೂರು ಮಲ್ಲಿಗೆಯ ಚೆಂಡು ತರಿಸಲಾಗಿತ್ತು.ದಿನವಿಡೀ ಓಡಾಡಿ ದಣಿದಿದ್ದ ಸೌಜನ್ಯ ರಾತ್ರಿ ಗಾಢ ನಿದ್ರೆಗೆ ಶರಣಾದಳು.
*****
ಕೇಶವ್ ಗೆ ಗುರುವಾರವೇ ನಾಂದೀ ಕಾರ್ಯಕ್ರಮ.ಕಾಶಿಗೆಂದು ಹೊರಟ ಕೇಶವನನ್ನು ತಡೆದು ಮದುವೆ ಮಾಡೋಣ ಎಂದು ಮನವೊಲಿಸಿ ಕರೆದುಕೊಂಡು ಬರುವ ಸನ್ನಿವೇಶ ವನ್ನು ಯಾರೋ ವಿಡಿಯೋ ಮಾಡಿದ್ದರು.ಅದನ್ನು ಸೌಜನ್ಯ ಗೆ ಕಳುಹಿಸಿದ ಕೇಶವ್.ಚಾಟ್ ಮಾಡಲು ಬಹಳ ಆಸೆಯಿಂದ.ಆಕೆ ಅದನ್ನು ನೋಡೇ ಇಲ್ಲ...!!
ಕೇಶವನ ಪರಿಸ್ಥಿತಿ
"ನಿದ್ದೇ ಬರುತಿಲ್ಲ ನನಗೆ
ನಿದ್ದೆ ಬರುತಿಲ್ಲ
ನಾಳೆ ನನ್ನ ಕಲ್ಯಾಣವಂತೆ
ಕೈ ಹಿಡಿವಳು ರೂಪವಂತೆ
ಕಣ್ ಮುಚ್ಚಿ ಮಲಗಿದರೂ
ನಿದ್ದೆ ಹತ್ತಿಲ್ಲ ನನಗೆ ನಿದ್ದೆ ಹತ್ತಿಲ್ಲ.."
ಎಂಬಂತಾಗಿತ್ತು.
ಮರುದಿನ ಬೇಗನೆದ್ದು ಹೊರಟ ಬಾರಂತಡ್ಕದ ಬಂಗಾರಣ್ಣನ ನೆಂಟರು ಕುಟುಂಬದವರು ಮದುವೆ ಹಾಲ್ ಗೆ ತೆರಳಿದರು.ಎಲ್ಲಾ ಕಾರ್ಯಕ್ರಮ ಗಳು ಸುಸೂತ್ರವಾಗಿ ನೆರವೇರಿದವು.ಸೌಜನ್ಯ ಮಲ್ಲಿಗೆ ಮುಡಿದು ಸುಂದರವಾದ ಹಳದಿ ಕೆಂಪು ಮಿಶ್ರಿತ ಝರಿಸೀರೆಯುಟ್ಟು ಕೈ ತುಂಬಾ ಬಳೆ ತೊಟ್ಟು ಆಭರಣ ಗಳನ್ನು ಧರಿಸಿ ಅಪ್ರತಿಮ ಲಾವಣ್ಯದಿಂದ ಕಂಗೊಳಿಸುತ್ತಿದ್ದಳು.
ಸೋದರ ಮಾವ ಸೌಜನ್ಯ ಳನ್ನು ಮದುವೆ ಮಂಟಪಕ್ಕೆ ಕರೆತಂದು ನಿಲಿಸಿದ.ಅಂತಃಪಟದ ಆ ಕಡೆ ಇದ್ದ ಕೇಶವ್ ಗೆ ತನ್ನರಸಿಯನ್ನು ಕಣ್ತುಂಬಿಸಿಕೊಳ್ಳುವ ತವಕ.
ಸುಮುಹೂರ್ತೇ ಸಾವಧಾನೌ .
ಸುಲಗ್ನೇ ಸಾವಧಾನೌ.. ಋತ್ವಿಜರ ಮಂತ್ರಘೋಷ ಎಲ್ಲರ ಕಿವಿಯಲ್ಲೂ ಅನುರಣಿಸಿತು.ಅಂತಃಪಟ ಸರಿಯಿತು.ಕೇಶವ್ ಸೌಜನ್ಯ ಳಿಗೆ ಹೂಮಾಲೆ ಹಾಕಿದ.ಸೌಜನ್ಯಳೂ ಕೇಶವನಿಗೆ ಹೂಮಾಲೆ ಹಾಕಿದಳು.ಕೇಶವನಿಗೆ ವಧುವಿನ ಮುಖ ನೋಡುವಂತೆ ಪುರೋಹಿತರು ಅಂದಾಗ ಕಣ್ಣು ಕಣ್ಣು ಕಲೆತು ವದನದಲಿ ಮಂದಹಾಸ ಬಿರಿಯಿತು. ಈ ಚೆಲುವೆಯನ್ನು ನೋಡಲು ಎರಡು ಕಣ್ಣು ಸಾಲದು ಎಂಬಂತಿತ್ತು ಕೇಶವನ ಸ್ಥಿತಿ.
ಮಾಂಗಲ್ಯಂ ತಂತುನಾನೇನ ಎಂಬ ಮಂತ್ರ ಘೋಷದೊಂದಿಗೆ ಕೇಶವ್ ಸೌಜನ್ಯಳ ಕೊರಳಿಗೆ ತಾಳಿ ಸಹಿತ ಕರಿಮಣಿ ಕಟ್ಟಿದ.ಇಬ್ಬರೂ ಜೊತೆಯಾಗಿ ಸಪ್ತಪದಿ ತುಳಿದರು.ಪುರೋಹಿತರು ಮಂತ್ರಘೋಷಣೆ ಮಾಡುತ್ತಿದ್ದಾಗ ಮದುಮಕ್ಕಳು ಅವರದೇ ಲೋಕದಲ್ಲಿ ಮುಳುಗಿದ್ದರು.ಪರಸ್ಪರ ಪಟ್ಟಾಂಗ ,ಫೊಟೋ ,ಕಿಲಕಿಲ ನಗು ... ಇದರೊಂದಿಗೆ ಪುರೋಹಿತರು ತನ್ನ ಕಾರ್ಯಕ್ರಮಗಳನ್ನು ಮುಗಿಸುವ ಧಾವಂತವನ್ನು ತೋರಿದರು.
ಕೇಶವ್ ಸೌಜನ್ಯ ಖುಷಿಯಿಂದ ಹರಟುತ್ತಿದ್ದರು.ಇದನ್ನು ಕಂಡ ರೇಖಾ ನರಸಿಂಹ ರಾಯರು ಖುಷಿಯಿಂದ ಮಗಳಿಗೆ ಆಶೀರ್ವದಿಸಿದರು. ಬಂಗಾರಣ್ಣ ಮತ್ತು ಸುಮಾ ಮಗ ಸೊಸೆಯನ್ನು ಹರಸಿದರು. ಬಂದ ಗಣ್ಯರು ಮಂತ್ರಾಕ್ಷತೆಯನ್ನು ಹಾಕಿದರು. ನಂತರ ಬಹಳ ಅದ್ದೂರಿಯಾಗಿ ಭೋಜನಕೂಟವನ್ನು ಏರ್ಪಡಿಸಲಾಗಿತ್ತು. ಎಲ್ಲರೂ ಎಲ್ಲರೂ ಭೋಜನವನ್ನು ಸವಿದರು .ಖುಷಿಯಿಂದ ತೆರಳಿದರು. ನಂತರ ಬಂಗಾರಣ್ಣ ಮತ್ತು ಕುಟುಂಬದವರು ಬಾರಂತಡ್ಕಕ್ಕೆ ಮರಳಿದರು. ರೇಖಾ ನರಸಿಂಹರಾಯರು ಮಗಳು ಅಳಿಯನೊಂದಿಗೆ ತಮ್ಮ ಮನೆಗೆ ತೆರಳಿದರು.
ಹಳ್ಳಿಯ ಮನೆ. ಸೌಜನ್ಯ ಚಿಕ್ಕವಳಿದ್ದಾಗ ಆಡಿ ಬೆಳೆದ ಮನೆ.ಇಂದು ಮದುವೆಯಾಗಿ ನಾಳೆ ಗಂಡನ ಮನೆಗೆ ತೆರಳುವ ಮುನ್ನ ಉಳಕೊಳ್ಳಲು ಇದೇ ಹಿರಿಯರ ಮನೆಯೇ ಆಗಬೇಕಿತ್ತು. ಸೌಜನ್ಯಳ ಅಜ್ಜಿ, ಚಿಕ್ಕಪ್ಪ ,ಚಿಕ್ಕಮ್ಮ ಮಕ್ಕಳು ವಾಸವಾಗಿರುವ ಸುಂದರವಾದ ಮನೆ.ಆ ಮನೆಯ ಚಾವಡಿಯ ಪಕ್ಕದಲ್ಲಿ ಒಂದು ಕೋಣೆ.ಕಾವಿ ಸಾರಣೆಯ ನೆಲ.ಮರದ ಕಿಟಕಿ.ಗೋಡೆಯಲ್ಲೊಂದು ಚಿಕ್ಕ ಶೆಲ್ಫ್.ಒಂದು ಕಪಾಟು ಇರುವಂತಹ ಕೋಣೆ.ಸರಳ ಸುಂದರವಾಗಿ ಅಲಂಕಾರಗೊಂಡಿತ್ತು.
ಊಟ ಮುಗಿಸಿ ಬಂದ ಸೌಜನ್ಯಳಿಗೆ ಅಮ್ಮ "ಬಾ .."ಎಂದು ಕರೆದರು.ತಲೆಗೆ ಮಲ್ಲಿಗೆ ಹೂವು ಮುಡಿಸಿ , ಹಸಿರು ಸೀರೆ ಉಡಲು ಹೇಳಿದರು.ತಯಾರಾದಾಗ ಕೈಯಲ್ಲೊಂದು ಲೋಟ ನೊರೆ ಹಾಲು ಕೊಟ್ಟು ಕೋಣೆಯತ್ತ ಕರೆದೊಯ್ದರು.
ಮೆಲ್ಲನೆ ಕೋಣೆಯೊಳಗಡಿಯಿಟ್ಟಳು ಮದುಮಗಳು.ಕೇಶವ್ ಕಿಟಕಿಯಿಂದ ಹೊರಗೆ ದಿಟ್ಟಿಸುತ್ತಾ ನಿಂತಿದ್ದ.ಕಾಲ್ಗೆಜ್ಜೆ ಸದ್ದಿಗೆ ತನ್ನವಳ ಆಗಮನದ ಸೂಚನೆಯೆಂದು ಹಿಂತಿರುಗಿದ.ತನ್ನ ಅಪ್ಸರೆ ..!! ಕೈಯಲ್ಲಿ ಕ್ಷೀರವನ್ನು ಹಿಡಿದು ನಿಂತಿದ್ದಳು.ಒಂದು ಕ್ಷಣ ನಿಧಾನಿಸಿದ.ಕಣ್ಣಲ್ಲಿ ಕಣ್ಣಿಟ್ಟು ನೋಡಿದ.ತಲೆತಗ್ಗಿಸಿದಳು.ಇನ್ನು ಅವಳನ್ನು ಕಾಯಿಸಲಾರೆ ಎಂದು ಹೆಗಲಮೇಲೆ ಕೈಯಿರಿಸಿ ಹಾಲನ್ನು ತೆಗೆದುಕೊಂಡು ಅವಳ ತುಟಿಗಿರಿಸಿದ .ನಿರಾಕರಿಸಿದ ಅವಳಿಗೆ "ಇಬ್ಬರೂ ಜೊತೆಯಾಗಿ ಕುಡಿಯೋಣ.ಜೊತೆಯಾಗಿ ನಡೆಯೋಣ.ಬಾಳ ಪ್ರತಿ ತಿರುವಿನಲ್ಲೂ ನಿನ್ನೊಂದಿಗೆ ನಾನಿರುವೆ.ನನ್ನೊಂದಿಗೆ ನೀನಿರಬೇಕು.. " ಎಂದು ಗಲ್ಲ ಹಿಂಡಿದಾಗ ಆ ಚಂದಿರನೂ ನಾಚಿ ಮೋಡದ ಮರೆಗೆ ಸರಿದ.
ಉಸಿರಿನೊಳಗೆ ಉಸಿರು ಬೆರೆತು ಸಮಾಗಮವಾಗುವ ವೇಳೆ...ಕೇಶವನ ಹುಚ್ಚು ಹುಡುಗಾಟಿಕೆಗಳಿಗೆಲ್ಲ ಕಡಿವಾಣ ಬೀಳುವ ದಿನ.ಹಲವು ದಿನಗಳಿಂದ ಕನಸು ಕಾಣುತ್ತಿದ್ದ ಅಪ್ಸರೆ ತೋಳಬಂಧಿಯಾಗಿ ಕೂಡುವ ರಸಘಳಿಗೆ.ಅವನ ಮುಖದ ಭಾವದಲ್ಲಿ ಕಂಡ ರಸಿಕತೆಗೆ ನಾಚಿ ನಿಂತಳು ಅವಳು.ತನ್ನ ವದನಕಮಲವನ್ನು ಬೊಗಸೆಯಲ್ಲಿ ಹಿಡಿದು ಪ್ರೀತಿತುಂಬಿದವನನ್ನು ಮನಸಾರೆ ಮೆಚ್ಚಿದಳು.ಅವನ ಬಿಗಿದ ತೋಳುಗಳೂ ಅವಳಿಗೆ ಉಸಿರುಗಟ್ಟಿಸಲಿಲ್ಲ .ಅವನೆದೆಯ ಕುರುಚಲು ಕೂದಲಿನೊಳಗೆ ಮುಖವಿಟ್ಟವಳಿಗೆ ತಾನಿನ್ನು ಇವನ ರಕ್ಷಣೆಯ ಕವಚದೊಳಗೆ ಪರಮಸುಖಿ ಎನಿಸಿತು.ಅವನ ಕರಗಳು ಅವಳ ಕಟಿಯ ಮೇಲೆ ಹರಿದಾಡಿದವು.ಅಧರಗಳು ಮಧುಪಾನನಿರತವಾದವು.ಕುಚಗಳು ಅವನ ಲೀಲೆಗೆ ಸಾಕ್ಷಿಯಾದವು.ಕೇಶವನಿಗೆ ಅವನ ಪ್ರೇಮಕ್ಕೆ ಮೌನವಾಗಿ ಶರಣಾದಳು.
ಅಲ್ಲೊಂದು ಪುಟ್ಟ ಅನುಮಾನದ ಗೆರೆಯನ್ನೂ ಆಕೆ ಉಳಿಸಲಿಲ್ಲ ಆಕೆ.
ಪರಸ್ಪರ ವಿಶ್ವಾಸ ದಾಂಪತ್ಯದ ಮೂಲ ತಳಪಾಯ.ಅನುರಾಗ ,ರಸಿಕತೆ ದಾಂಪತ್ಯವನ್ನು ಭದ್ರವಾಗಿಸುವ ಗೋಡೆ.ಪರಸ್ಪರ ಭಾವನೆಗಳ ಅರಿತು ಒಲಿಯುವುದು, ಒಲಿದು ನಲಿಯುವುದು ದಾಂಪತ್ಯದ ಭದ್ರ ಛಾವಣಿ. ಶುಭಮಿಲನ,ತುಂಟತನ, ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಬದುಕುವುದು,ಹೊಂದಾಣಿಕೆ ಇವು ದಾಂಪತ್ಯಗೃಹದ ನಿರಂತರತೆಯ ಭಾವಗಳು..
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
01-04-2020.
No comments:
Post a Comment