Thursday, 2 April 2020

ಜೀವನ ಮೈತ್ರಿ ಭಾಗ ೫೫(55)




ಜೀವನ ಮೈತ್ರಿ ಭಾಗ ೫೫



        ಮುಂಜಾನೆಯ ಚಿಲಿಪಿಲಿ ಸದ್ದು ಕೇಳಿಬರುತ್ತಿತ್ತು. ತಂಪಾದ ಗಾಳಿ ಸುಯ್ಯೆಂದು ಬೀಸುತ್ತಿತ್ತು. ಎಚ್ಚರವಾದಾಗ ಸೌಜನ್ಯ ಮೆಲ್ಲನೆ ಗಡಿಯಾರವನ್ನು ನೋಡಿದಳು. ಆಗ ಗಂಟೆ ಐದಾಗಿತ್ತು. ಏಳಲು ಏನೋ ಉದಾಸೀನ..ಮೈಭಾರವಾಗಿತ್ತು..ಇನ್ನೂ ಸವಿನಿದ್ದೆಯನ್ನು ಕಣ್ಣೊಳಗೆ ಎಳೆದುಕೊಳ್ಳುವ ತವಕ.. ಆದರೂ ಏಳಲೇಬೇಕಿತ್ತು. ಸಮಯ ಮೀರುವ ಮುನ್ನ ಹೊರಡಬೇಕಾದ ಅನಿವಾರ್ಯತೆ ಇತ್ತು. ಮೆಲ್ಲನೆ ಪಕ್ಕಕ್ಕೆ ಹೊರಳಿದಳು. ಕೇಶವ ಸುಖವಾಗಿ ನಿದ್ರಿಸುತ್ತಿದ್ದ. ಮೆಲ್ಲನೆ ಅವನೆಡೆಗೆ ಬಾಗಿ ಮುಖವನ್ನು ದಿಟ್ಟಿಸಿದಳು. ಪ್ರಶಾಂತತೆ ಅವನ ಮುಖದಲ್ಲಿ ನೆಲೆಸಿತ್ತು.ನಿದ್ದೆ ಇರದೇ ಪರಿತಪಿಸಿದ ಕಣ್ಣುಗಳಿಗೆ ಸುಖನಿದ್ದೆ ತಾನಾಗಿಯೇ ಆವರಿಸಿತ್ತು. ಸರಿದಿದ್ದ ಹೊದಿಕೆಯನ್ನು ಸರಿಮಾಡಿ  ಹೊದೆಸಿದಳು. ಹಣೆ ಮೇಲೆ ಒಂದು ಸಿಹಿ ಮುತ್ತನಿತ್ತು ಮೆಲ್ಲನೆ ಬಲ ಮಗ್ಗುಲಲ್ಲಿ ಏಳಲು ತೊಡಗಿದಳು. ಎಚ್ಚರಗೊಂಡ ಕೇಶವ್ "ಇಷ್ಟು ಬೆಳಗ್ಗೆ ಏಕೆ ಏಳುವೆ? ಬಂಗಾರಿ...."ಎಂದು ಪ್ರಶ್ನಿಸಿದಾಗ ತಾನೇ ನೆನಪಿಸಿದಳು.
"ಇವತ್ತಿನ ಸಮಾರಂಭಕ್ಕೆ ತಯಾರಾಗಬೇಕು. ನನ್ನನ್ನ ನಿಮ್ಮ ಮನೆಗೆ ಕರೆದೊಯ್ಯುತ್ತೀರಲ್ಲ. ಮರೆತೇಬಿಟ್ಟಿರಾ...? "
"ಹೌದು ..ನಾನೂ ಏಳುತ್ತೇನೆ .." ಎಂದವನು ಮಡದಿಯನ್ನೊಮ್ಮೆ ಬಾಹುಗಳಲ್ಲಿ ಬಂಧಿಸಿದ..

"ರಾಯರೇ..ಸಮಯ ಮೀರುತ್ತಿದೆ.." ಎಂದಾಗ ಜೊತೆಯಾಗಿ ಎದ್ದ ಇಬ್ಬರು ಬೇಗನೆ ಫ್ರೆಶ್ ಆಗಿ ಹೊರಟರು.


      ಆಗಲೇ ಮನೆಯಲ್ಲಿ ಗೌಜು ಗದ್ದಲ ಕೇಳಿಬರುತ್ತಿತ್ತು. ಎಲ್ಲರೂ ಎದ್ದು ಹೊರಟು ತಯಾರಾಗಿದ್ದರು. ಮದುಮಕ್ಕಳು ರೂಮಿನಿಂದ ಹೊರ ಬರುತ್ತಿದ್ದಂತೆ "ನಿದ್ದೆ ಬಂತ ..?"ಎಂದು ವಿಚಾರಿಸುತ್ತಾ,ಕಾಲೆಳೆಯುವ ತವಕ. ಮಗಳು ಅಳಿಯನ ಮುಖ ನೋಡಿದ ರೇಖಾ ಮತ್ತು ನರಸಿಂಹರಾಯರು ಸಮಾಧಾನ ಪಟ್ಟುಕೊಂಡರು."ಅಳಿಯಂದಿರೆ ತಿಂಡಿ ತಿನ್ನಲು ಬನ್ನಿ "ಎಂದು ಮಾವ ಅಳಿಯನನ್ನು ಕರೆದು ತಮ್ಮ ಪಕ್ಕ ತಿಂಡಿ ತಿನ್ನಲು ಕೂರಿಸಿದರು. ಸೌಜನ್ಯಳು ಪತಿಯ ಪಕ್ಕವೇ ಕುಳಿತು ತಿಂಡಿ ತಿಂದಳು.


   ಸುಮಾರು ಆರೂವರೆ ಸಮಯ ಮನೆಯಂಗಳದಲ್ಲಿ ಜೀಪು ,ಬಸ್ ತಯಾರಾಗಿ ನಿಂತಿತ್ತು. ವಧೂವರರು ತಂದೆತಾಯಿ ಜೀಪು ಏರಿದರು. ನಂತರ ಎಲ್ಲರೂ ಬಸ್ಸನ್ನೇರಿ ಹೊರಟರು. ಅಲ್ಲಿಂದ ಕೇವಲ ಆರು ಕಿಲೋಮೀಟರ್ ದೂರ ಬಾರಂತಡ್ಕ ಮನೆ. ಇದು ರೇಖಾ ದಂಪತಿಗೆ ಬಹಳ ಸಂತಸದ ವಿಚಾರವಾಗಿತ್ತು.ನಾವು ಬೆಂಗಳೂರಿನಲ್ಲಿದ್ದರೂ ಮಗಳಿಗೆ ಅಜ್ಜಿ ,ಚಿಕ್ಕಪ್ಪ  ,ಚಿಕ್ಕಮ್ಮ ಎಲ್ಲರೂ ಹತ್ತಿರದಲ್ಲಿ ಇದ್ದಾರಲ್ಲ ಎಂದು ಖುಷಿ ಪಟ್ಟುಕೊಂಡಿದ್ದರು. ರೇಖಾಳ ತವರುಮನೆಯಿಂದ ಬಾರಂತಡ್ಕಕ್ಕೆ ಕೇವಲ ಮೂರು ನಾಲ್ಕು ಕಿಲೋಮೀಟರ್ ಅಷ್ಟೇ. ಆಗಾಗ ಸೌಜನ್ಯಳಿಗೆ ಅಜ್ಜಿಮನೆಗೆ ಕೂಡ ಹೋಗುವ ಅನುಕೂಲವಿತ್ತು.ಇದನ್ನೆಲ್ಲ ಗಮನಿಸಿ ರೇಖಾ ಮಗಳನ್ನು ಬಾರಂತಡ್ಕಕ್ಕೆ ಮದುವೆ ಮಾಡಿಕೊಡಲು ಒಪ್ಪಿದ್ದು.


      7:00 ಗಂಟೆಯಾಗುತ್ತಲೇ  ವಧುವರರಿದ್ದ ವಾಹನ ಬಾರಂತಡ್ಕದ ಅಂಗಳದಲ್ಲಿ ನಿಂತಿತು.ಹಳೆಯ ಕಾಲದ ವಿಶಾಲವಾದ ಮನೆ .ಈಗಿನ ಕಾಲಕ್ಕೆ ತಕ್ಕಂತೆ ನವೀಕರಣಗೊಂಡಿತ್ತು.ಮನೆ ಮುಂದೆ ವಿಶಾಲವಾದ ಚಪ್ಪರ ಹಾಕಲಾಗಿತ್ತು. ಹಳ್ಳಿಯ ಪದ್ಧತಿಗೆ ತಕ್ಕಂತೆ ಸರಳ ಸುಂದರವಾಗಿ ಅಲಂಕಾರ ಗೊಂಡಿತ್ತು.ಸಾಂಪ್ರದಾಯಿಕವಾಗಿ ವಧೂವರರನ್ನು ಹಾಗೂ ನೆಂಟರನ್ನು ಬರಮಾಡಿಕೊಂಡು ಆದರ ಉಪಚಾರಗಳನ್ನು ತೋರಿದರು. ಕೇಶವ ಪ್ರತಿಯೊಂದಕ್ಕೂ "ಸೌಜನ್ಯ ಸೌಜನ್ಯ " ಎಂದು ಆಕೆಯನ್ನು ಪದೇ ಪದೇ ಕರೆಯುತ್ತಿದ್ದ. ಬಂಗಾರಣ್ಣನಿಗೆ ಖುಷಿಯ ವಿಚಾರವಾಗಿತ್ತು. ಅಮ್ಮ ಸುಮ ಮಗಸೊಸೆಯನ್ನು ನೋಡಿ ಸಮಾಧಾನ ಪಟ್ಟುಕೊಂಡರು.ಇನ್ನಾದರೂ ನನ್ನ ಮಗ ಬೇರೆ ಹೆಣ್ಣುಮಕ್ಕಳ ತಂಟೆಗೆ ಹೋಗದಿರಲಿ ಎಂದು ತಾಯಿಯ ಕರುಳು ಬಯಸಿತ್ತು.


        ವಧುವಿನ ಅಲಂಕಾರ ಸಾಂಪ್ರದಾಯಕವಾಗಿ ನಡೆಯಿತು.ಜಡೆಗೆ ಅಂದವಾಗಿ ಮಲ್ಲಿಗೆ ಮಾಲೆಯನ್ನು ಸುತ್ತಿ ಅದರ ಮೇಲೆ ಕೆಂಪು ಗುಲಾಬಿಯ ಎಸಳುಗಳನ್ನಿಟ್ಟು ಸುಂದರವಾಗಿ ಅಲಂಕಾರ ಮಾಡಿದ್ದರು. ಮೊದಲೇ ಸುಂದರಿಯಾಗಿದ್ದಾರೆ ಸೌಜನ್ಯ ಇನ್ನಷ್ಟು ಅಂದವಾಗಿ ಕಂಡಳು.ಬಂದವರ ದೃಷ್ಟಿ ತಾಕೀತು ಎಂಬಂತೆ ಇದ್ದ ಮದುಮಗಳಿಗೆ ಗಲ್ಲದ ಪಕ್ಕದಲ್ಲೊಂದು ಚುಕ್ಕೆಯನಿಟ್ಟರು.ಗಂಟೆ ಒಂಬತ್ತು ಆಗುತ್ತಿದ್ದಂತೆಯೇ ಪುರೋಹಿತರು ವಧು-ವರರನ್ನು ಅವರ ತಂದೆ ತಾಯಿಯನ್ನು ಮಂಟಪಕ್ಕೆ ಬರಲು ಆಮಂತ್ರಿಸಿದರು. ಬಂಗಾರಣ್ಣ ತರಾತುರಿಯಲ್ಲಿ ಪುರೋಹಿತರು ಹೇಳಿದ್ದಕ್ಕೆಲ್ಲ ಸ್ಪಂದಿಸುತ್ತಿದ್ದ. ಅಷ್ಟರಲ್ಲಿ ಬಂದ ಶೇಷಣ್ಣ
"ಬಂಗಾರಣ್ಣ ನಮ್ಮ ಪೇಮೆಂಟ್ ಇನ್ನು ಆಗಲಿಲ್ಲ. ಅದೊಂದು ಬೇಗ ಕೊಟ್ಟುಬಿಡಿ."

"ಖಂಡಿತ ಕೊಡುವ ...ಕಾರ್ಯಕ್ರಮ ಮುಗಿಯಲಿ. ನಾನೇನು ಓಡಿಹೋಗುತ್ತೇನಾ..?ಇಲ್ಲವಲ್ಲ."

"ನಿಮ್ಮ ಬಗ್ಗೆ ನನಗೇನು ಅನುಮಾನ ಇಲ್ಲ. ಆದರೂ ಮಾತಿನಂತೆ ನಡೆದುಕೊಂಡರೆ ಚೆನ್ನ."

"ವಧೂ ಗೃಹಪ್ರವೇಶ ಸಮಾರಂಭ ಆಗಲಿ ಶೇಷಣ್ಣ.. ಆಮೇಲೆ ನಾನೇ ಕೊಡುತ್ತೇನೆ ನೀನು ಊಟ ಮಾಡಿ ಹೊರಡುವ ಮುನ್ನ.."

"ವಧು ಗೃಹಪ್ರವೇಶ ಮಾಡದಿರುತ್ತಾಳೆಯೇ? ಬಂಗಾರಣ್ಣ... ನಿನ್ನ ಮಗ ವಯಸ್ಕರ ಲೀಲೆಗಳನ್ನು ತೋರಿದ ಮೇಲೆ. ನೋಡಿದರೆ ತಿಳಿಯುವುದಿಲ್ಲವೆ ವಧು-ವರರ ಅನ್ಯೋನ್ಯತೆ.."


"ಅದಕ್ಕೇನೀಗ ನಿನ್ನ ಫೀಸು ಕೊಡಬೇಕು ತಾನೇ..?"

"ಹೌದು ಬಂಗಾರಣ್ಣ..ಆದಷ್ಟು ಬೇಗ ವ್ಯವಹಾರ ಸೆಟ್ಲ್ ಮಾಡ್ಕೊಂಡು ಬಿಡೋಣ"

"ಅಯ್ಯಾ.. ಪುರೋಹಿತರು ಕರೆಯುತ್ತಿದ್ದಾರೆ... ಇನ್ನೊಂದು ಕಡೆ ಅಡುಗೆಯವರ ತಲೆಬಿಸಿ ..ಅದು ಕಡಿಮೆ.. ಇದು ಬಂದಂತಿಲ್ಲ...ಎಂದು ..ಆಗಲಿ ಆದಷ್ಟು ಬೇಗ ಖಾತೆಗೆ ಹಣ ಜಮಾ ಮಾಡಿಬಿಡೋಣ" ಎನ್ನುತ್ತಾ ತನ್ನ ಮೊಬೈಲ್ ಮೂಲಕ ಶೇಷಣ್ಣ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿದರು.

         ಇದನ್ನು ಖಾತರಿಪಡಿಸಿಕೊಂಡು ಶೇಷಣ್ಣ ಬಹಳ ಖುಷಿಯಿಂದ "ನೀನು ಬಂಗಾರಣ್ಣ ಮೋಸ ಮಾಡಲ್ಲ ಅಂತ ನನಗೆ ಗೊತ್ತು" ಎನ್ನುತ್ತಾ ತನ್ನ ಜೋಳಿಗೆ ಚೀಲವನ್ನು ಹೆಗಲಿಗೇರಿಸಿಕೊಂಡು ಕೆಳಗೆ ನೆಲದಲ್ಲಿ ಓಲಾಡುತ್ತಿದ್ದ ಪಂಚೆಯನ್ನು ಮೇಲೆತ್ತಿಕೊಳ್ಳುತ್ತಾ.. ಬಾಯ್ತುಂಬಾ ಕವಳ ಜಗಿದುಕೊಂಡು ಸಾಗಿದ. ಬಂಗಾರಣ್ಣ ಮದುವೆ ಮಂಟಪಕ್ಕೆ ತೆರಳಿ ಕಾರ್ಯಕ್ರಮದಲ್ಲಿ ನಿರತನಾದ. ಕಾರ್ಯಕ್ರಮಗಳಲ್ಲಿ ಸಾಂಗವಾಗಿ ನೆರವೇರುತ್ತಿತ್ತು.ಹೊಸ್ತಿಲು ಪೂಜೆಯ ಕಾರ್ಯಕ್ರಮ ನೆರವೇರಿತು.ಕೇಶವನ ಪಕ್ಕದಲ್ಲಿ ಮಡದಿ ಸೌಜನ್ಯ ..ಅಪ್ರತಿಮ ಸೌಂದರ್ಯದ ಖನಿ ಕುಳಿತುಕೊಂಡು ಹೊಸ್ತಿಲ ಪೂಜೆಯನ್ನು ಮಾಡುತ್ತಿದ್ದರೆ ಸುಮಾಳಿಗೆ ಭಾಗ್ಯಲಕ್ಷ್ಮಿ ಮನೆಗೆ ಬಂದಂತೆ  ಭಾಸವಾಯಿತು. ಮಗ-ಸೊಸೆ ನೂರು ಕಾಲ ಚೆನ್ನಾಗಿ ಬಾಳಲಿ ಎಂದು ತಾಯಿ ಹೃದಯ ಹರಿಸಿತು.


     ಮದುವೆ ಮಂಟಪದಲ್ಲಿ ಒಸಗೆ ಕಾರ್ಯಕ್ರಮ ನಡೆದು ಬಂದವರೆಲ್ಲ ಮಂತ್ರಾಕ್ಷತೆ ಹಾಕಿ ಹರಸಿದರು. ಫೋಟೋಗ್ರಾಫರ್ ಪ್ರಕಾಶ್ ಭಾವಚಿತ್ರವನ್ನು ಸುಂದರವಾಗಿ ಸೆರೆ ಹಿಡಿಯುತ್ತಿದ್ದರು. ಸೌಜನ್ಯಳ ನಗು ಮುಖವನ್ನು ಸೆರೆಹಿಡಿಯುವುದು ಅವರಿಗೂ ಬಹಳ ಖುಷಿ ತಂದಿತ್ತು. ವಿಡಿಯೋದಲ್ಲಂತೂ ಪ್ರದ್ಯುಮ್ನ ಕೇಶವ್ ಹಾಗೂ ಸೌಜನ್ಯಾಳನ್ನು ಬಹಳ ಅಂದವಾಗಿ ಚಿತ್ರಿಸಿದ. ಮದುವೆ ಮಂಟಪದಲ್ಲಿ ಕಾರ್ಯಕ್ರಮಗಳ ಮುಂದುವರಿಕೆ "ಹೆಣ್ಣುಒಪ್ಪಿಸಿಕೊಡುವ" ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿತ್ತು. ಮದುಮಗಳು ಸೌಜನ್ಯಳನ್ನು ಆಕೆಯ ತಂದೆ ಗಂಡನ ಮನೆಯವರಿಗೆ ಒಪ್ಪಿಸಿ ಕೊಡುವಂತ ಬಹಳ ಭಾವಪೂರ್ಣ ಸಮಾರಂಭ. ತಾಯಿ ರೇಖಾಳಿಗೆ ಹೃದಯ ತುಂಬಿಬಂದಿತ್ತು. ರೇಖಾಳ ಕಂಗಳನ್ನು ದಿಟ್ಟಿಸಿದ ಸುಮಾಳ ಕಣ್ಣಲ್ಲಿ ಕಂಬನಿ ತುಂಬಿತ್ತು. .ಎಲ್ಲರ ಗಮನವೂ ಮದುವೆ ಮಂಟಪದ ಹಾಗೂ ಸಭೆಯಲ್ಲಿತ್ತು.ಮುಂದೆ ಅಂಗಳದಲ್ಲಿ ಅದೇ ಹೊತ್ತಿಗೆ ನಾಲ್ಕಾರು ಬೈಕುಗಳು ಸದ್ದು ಮಾಡುತ್ತಾ ಬಂದು ನಿಂತವು. "ನಿಲ್ಲಿಸಿ " ಎಂಬ ಕರ್ಕಶ ಧ್ವನಿಯೊಂದು ತೂರಿ ಬಂತು.

"ಏನು ನಡೆಯುತ್ತಿದೆ  ಇಲ್ಲಿ...??? ಸೌಜನ್ಯ ನನ್ನ ಮಡದಿ.." ಎಂಬ ಮಾತಿಗೆ ಎಲ್ಲರೂ ಬೆಚ್ಚಿ ಬಿದ್ದರು.


ಮುಂದುವರೆಯುವುದು..

✍️... ಅನಿತಾ ಜಿ.ಕೆ.ಭಟ್.
02-04-2020.

4 comments:

  1. Ayyo... Ee ghatane ashcharyakara !!!!

    ReplyDelete
  2. ಚೆನ್ನಾಗಿ ಮೂಡಿಬಂದಿದೆ
    ಟಿವಿ ಧಾರಾವಾಹಿಯ ತರಹ
    ಮುಂದಿನ ಕಂತಿಗಾಗಿ ಕಾಯುತ್ತಿರುವೆ

    ReplyDelete