Friday, 3 April 2020

ಜೀವನ ಮೈತ್ರಿ ಭಾಗ ೫೬(56)




ಜೀವನ ಮೈತ್ರಿ ಭಾಗ ೫೬

       ಚಪ್ಪರದ ಮುಂದೆ ಅಂಗಳದಲ್ಲಿ ಅದೇ ಹೊತ್ತಿಗೆ ನಾಲ್ಕಾರು ಬೈಕುಗಳು ಸದ್ದು ಮಾಡುತ್ತಾ ಬಂದು ನಿಂತವು. "ನಿಲ್ಲಿಸಿ " ಎಂಬ ಕರ್ಕಶ ಧ್ವನಿಯೊಂದು ತೂರಿ ಬಂತು.ಎಲ್ಲರ ಗಮನ ಅತ್ತ ಹರಿಯಿತು.ಸುಮಾರು ಮೂವತ್ತರ ಆಸುಪಾಸಿನ ಯುವಕ.ಶೇವ್ ಮಾಡದ ಗಡ್ಡ. ಶಿಸ್ತಿಲ್ಲದ ಉಡುಗೆ ತೊಡುಗೆ.ವ್ಯಗ್ರನಾದಂತೆ ತೋರುತ್ತಿದ್ದ ಒಬ್ಬ ವ್ಯಕ್ತಿ...

"ಏನು ನಡೆಯುತ್ತಿದೆ  ಇಲ್ಲಿ...??? ಸೌಜನ್ಯ ನನ್ನ ಮಡದಿ.." ಎಂದಾಗ ...ಆ ಮಾತಿಗೆ ಎಲ್ಲರೂ ಬೆಚ್ಚಿ ಬಿದ್ದರು.ಮದುಮಗಳತ್ತ ತಿರುಗಿ
"ಸೌಜನ್ಯ.. ಏನ್ ಮಾಡ್ತಾ ಇದ್ದೀಯಾ ಸ್ವಲ್ಪವಾದರೂ ಜ್ಞಾನ ಬೇಡ್ವಾ..? "ಎನ್ನುತ್ತಾ ಆಕೆಯ ಕೈಯನ್ನು ಬಲವಾಗಿ ಹಿಡಿದು ದರದರನೆ ಎಳೆದುಕೊಂಡು ಹೊರಟ. ನರಸಿಂಹರಾಯರ ಕಡೆಗೆ ತಿರುಗಿ "ನಿಮಗಾದರೂ ತಿಳಿಯಲ್ವ...? ಮಗಳಿಗೆ ಪುನಃ ಮದುವೆ ಮಾಡೋಕೆ ಹೊರಟಿದ್ದೀರಲ್ಲ.."

ನರಸಿಂಹರಾಯರು ಆತನಲ್ಲಿ ಕೈಮುಗಿದು ದೈನ್ಯತೆಯಿಂದ ಬೇಡಿಕೊಂಡರು "ದಯವಿಟ್ಟು ನನ್ನ ಮಗಳನ್ನು ಬಿಟ್ಟು ಬಿಡು... ಹೊರಟುಹೋಗು. ಮಗಳ ಬಾಳನ್ನು ಹಾಳು ಮಾಡಬೇಡ ...ನಿನ್ನ ಸಹೋದರಿಯಂತೆ ತಿಳಿ."


         ಆತ ತಾನು ಮತ್ತು ಸೌಜನ್ಯ ಮದುವೆಯಾದ ಫೋಟೋಗಳನ್ನು ತೋರಿಸಿದ. ದಾಂಪತ್ಯದ ಹಸಿಬಿಸಿ ಚಿತ್ರಗಳು ಚಿತ್ರಗಳನ್ನು ತೋರಿಸಿದ. ಇದೆಲ್ಲವೂ ಸೌಜನ್ಯ ಆತನ ಪತ್ನಿ ಎಂಬುದನ್ನು ಪುಷ್ಟೀಕರಿಸಲು ಸಾಕ್ಷಿಯಾಗಿ ಆತ ತಂದಿದ್ದ.

       ಎಲ್ಲವನ್ನೂ ನೋಡುತ್ತಿದ್ದ ಬಂಗಾರಣ್ಣನಿಗೆ ಅಸಹ್ಯ ಭಾವನೆ  ಮೂಡಿತು. "ಥೂ ಏನ್ ಮಾಡಿದ್ದಾನೆ ಶೇಷಣ್ಣ ...ವಿವಾಹಿತ ಯುವತಿಯನ್ನು ನನ್ನ ಮಗನಿಗೆ ಮದುವೆ ಮಾಡಿದ್ದಾನೆ. ಎಲ್ಲಿ ಎಲ್ಲಿ ಶೇಷಣ್ಣ...?" ಎಂದು ಅಬ್ಬರಿಸುತ್ತಾ ಹುಡುಕುತ್ತಾರೆ. ಅವನಾಗಲೇ ಪರಾರಿಯಾಗಿದ್ದ....!!!!
ಕೇಶವ್ ಒಂದು ಕ್ಷಣ ಯೋಚಿಸಿದ. ತನಗೆ ಒಲಿದ ಯುವತಿಯನ್ನು.. ಮಡದಿಯಾಗಿ ಸ್ವೀಕರಿಸಿದ ಸ್ತ್ರೀಯನ್ನು ರಕ್ಷಣೆ ಮಾಡಬೇಕು . ಇಲ್ಲಿ ಅನುಮಾನ ಪಡುವುದಕ್ಕಿಂತ ಅರ್ಥಮಾಡಿಕೊಳ್ಳುವುದೇ ಹೆಚ್ಚುಗಾರಿಕೆ  ಅನಿಸಿತು. ಅವನ ಬ್ರಹ್ಮಚರ್ಯದ ಸಾಚಾತನ ಅವನಿಗೂ ಗೊತ್ತಿತ್ತು. ತನ್ನ ಒಂಟಿತನವನ್ನು ನೀಗಿ ಬಾಳನ್ನು  ಬೆಳಗಲೆಂದು ಬಂದವಳನ್ನು ಹೀಗೆ ಇಂತಹ ಪರಿಸ್ಥಿತಿಯಲ್ಲಿ ನಿಲ್ಲಿಸಿ ಸುಮ್ಮನಿರಬಾರದು.. ಎಂದು ಶರ್ಟ್ ನ ತೋಳು ಮೇಲೆ ಮಾಡಿದ.. ಯುವಕನ ಕೆನ್ನೆ ಮೇಲೆ ಬಾರಿಸಿದ ಕೇಶವ್. ಕೇಶವನ ಬಲವಾದ ಏಟಿಗೆ ಆತನ ಕೈ ಸಡಿಲವಾಯಿತು. ಆತನ ಸಹಚರರು ಮುಗಿಬಿದ್ದರು. ಕೇಶವನ ಗೆಳೆಯರು ಕೇಶವನ ಬೆಂಬಲಕ್ಕೆ ನಿಂತರು. ಮದುವೆ ಮನೆಯಲ್ಲಿ ಗೊಂದಲ ಸೃಷ್ಟಿಯಾಯಿತು. ಬಂಗಾರಣ್ಣ ನರಸಿಂಹರಾಯರನ್ನು "ನೀವೂ ಬೇಡ ..ನಿಮ್ಮ ಮಗಳೂ ಬೇಡ ...ನಿಮ್ಮ ಸಹವಾಸವೇ ಬೇಡ... ಕರೆದೊಯ್ಯಿರಿ ಮಗಳನ್ನು.."ಎಂದು ಕೂಗಾಡಿದರು .ನರಸಿಂಹರಾಯರು "ದಯವಿಟ್ಟು ಹಾಗೆ ಹೇಳಬೇಡಿ . ವಿಷಯವನ್ನು ಅರಿತು ಮಾತನಾಡಿ " ಎಂದು ಕೋರಿಕೊಂಡರು.

       ಸಮಾಜದ ಮುಖಂಡರಾದ ಗುರಿಕಾರರು ಇದನ್ನೆಲ್ಲವನ್ನು ಗಮನಿಸುತ್ತಿದ್ದರು "ಇದು ಇಲ್ಲಿ ಇತ್ಯರ್ಥವಾಗುವ ಪ್ರಕರಣದಂತೆ ಕಾಣುತ್ತಿಲ್ಲ. ಕಾರ್ಯಕ್ರಮವನ್ನು ಇಲ್ಲಿಗೆ ನಿಲ್ಲಿಸಿ ಪೊಲೀಸ್ ಠಾಣೆಗೆ ಕರೆದೊಯ್ಯುವುದು ಒಳಿತು ."ಎಂದು ಎರಡು ತಂಡದವರನ್ನು ಶಾಂತಗೊಳಿಸಿ ನಾಲ್ಕಾರು ಕಿಲೋಮೀಟರ್ ಗಳಷ್ಟು ದೂರದಲ್ಲಿದ್ದ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ದಾಖಲಿಸಿದರು. ಎರಡು ಕಡೆಯವರು ಪೊಲೀಸ್ ಠಾಣೆಗೆ ನಡೆದರು.ಪೊಲೀಸರು ವಿಚಾರಣೆ ನಡೆಸಿದರು .ಬಂಗಾರಣ್ಣ "ಈ ಯುವತಿ ನಮಗೆ ಬೇಡ "ಎಂದು ಮಗನಲ್ಲಿ ಖಡಾಖಂಡಿತವಾಗಿ ಹೇಳಿದರು. ಈಗ ಕೇಶವನಿಗೆ ಸಂದಿಗ್ಧ ಪರಿಸ್ಥಿತಿ. ಆತ ಮದುವೆಯಾಗಿ ನಿನ್ನೆಯಷ್ಟೇ ಮಡದಿಯಾಗಿ ಸ್ವೀಕರಿಸಿದ್ದ. ಇಂದು ದೂರಮಾಡು ಎಂದರೇನು ?ಅದು ಅಷ್ಟು ಸುಲಭದ ಮಾತೇ.? ಜನುಮ ಜನುಮದ ಅನುಬಂಧದಂತೆ ಭಾಸವಾಗಿತ್ತು ಕೇಶವನಿಗೆ.ಬಾಳ ಪ್ರತಿ ತಿರುವಲ್ಲೂ ಜೊತೆಗಿದ್ದೇನೆ ಎಂದು ಭರವಸೆ ನೀಡಿದವನು ಇಂದು ಮುಖತಿರುಗಿಸಿ ಹೋಗಲು ಮನಸ್ಸು ಬರಲಿಲ್ಲ. ಯುವಕನು ಹೇಳುತ್ತಿದ್ದ ವಿಷಯವನ್ನು ಸೂಕ್ಷ್ಮವಾಗಿ ನರಸಿಂಹ ರಾಯರಿಂದ ತಿಳಿದುಕೊಂಡ ಕೇಶವ್ ತಾನು ಸೌಜನ್ಯಳನ್ನು ಬಿಟ್ಟು ಬಿಡುವ ಮಾತೇ ಇಲ್ಲ ಎಂಬ ದೃಢ ನಿರ್ಧಾರಕ್ಕೆ ಬಂದ.

          ಎರಡೂ ಕಡೆಯವರು ಪೊಲೀಸ್ ಸ್ಟೇಷನ್ ನಲ್ಲಿ ಮುಖಾಮುಖಿಯಾದರು. ಯುವಕ ತನ್ನದೇ ವಾದ ಮಂಡಿಸುತ್ತಿದ್ದ. ಪೊಲೀಸ್ ಪೇದೆ ಆತನಲ್ಲಿ
"ನಿನ್ನ ಹೆಸರೇನು ..?"ಎಂದು ಕೇಳಿದರು.
"ನನ್ನ ಹೆಸರು ಬಶೀರ್ "ಎಂದ. ಇದನ್ನು ಕೇಳಿದ ಬಂಗಾರಣ್ಣನ ಮುಖ ಕಪ್ಪಿಟ್ಟಿತು. ಆಗ ನರಸಿಂಹರಾಯರು
"ಈತ ಭರತ್ ಕುಮಾರ್ ಎಂಬ ಹೆಸರಿನಿಂದ ಫೇಸ್ಬುಕ್ನಲ್ಲಿ 2 ವರ್ಷಗಳ ಹಿಂದೆ ನನ್ನ ಮಗಳಿಗೆ ಪರಿಚಿತನಾದ. ಇಬ್ಬರ ನಡುವೆ ಸ್ನೇಹ ಬೆಳೆಯಿತು. ಹಾಗೆಯೇ ಸ್ನೇಹವು ಪ್ರೇಮಕ್ಕೆ ತಿರುಗುವ ಹಂತದಲ್ಲಿತ್ತು.ಒಂದು ದಿನ ಮಗಳನ್ನು ಹೀಗೆ ಭೇಟಿಯಾಗೋಣ ಎಂದು ಜ್ಯೂಸ್ ಸೆಂಟರ್ ಒಂದಕ್ಕೆ  ಕರೆದಿದ್ದ. ಸೌಜನ್ಯ ಆತನ ಸ್ನೇಹದ ಮೇಲೆ ನಂಬಿಕೆಯಿಟ್ಟು ತೆರಳಿದ್ದಾಳೆ. ಇಬ್ಬರೂ ಜ್ಯೂಸ್ ಕುಡಿದ ಮೇಲೆ ಏನಾಗಿದೆ ಎಂಬುದು ಆಕೆ ಗೊತ್ತಿಲ್ಲ. ಎಚ್ಚರವಾದಾಗ ಆಕೆ ಆತನ ಬಂಧನದಲ್ಲಿದ್ದಳು.ಎನ್ನುತ್ತಾ ತನ್ನ ಮಗಳಿಗಾದ ಅನ್ಯಾಯವನ್ನು ಹೇಳಿ ಕಣ್ಣೀರುಗರೆದರು.

        "ಇಲ್ಲ ಸರ್ ನಾನು ಬಶೀರ್ ಎಂದೇ ಪರಿಚಯಿಸಿಕೊಂಡಿದ್ದೆ. ಇವರು ಮಾತ್ರ ಸುಳ್ಳು ಹೇಳ್ತಾ ಇದ್ದಾರೆ. ಆಕೆಯೂ ನನ್ನನ್ನು ಪ್ರೇಮಿಸಿ ನನ್ನ ಜೊತೆ ಬಂದಿದ್ದಳು. ನಂತರ ನಾವು ವಿವಾಹ ಕೂಡ ಆಗಿದ್ದೇವೆ ".ವಿವಾಹ ಫೋಟೋಗಳನ್ನು ತೋರಿಸಿದ ."ಮದುವೆಯಾಗಿ ಜೀವನ ನಡೆಸುತ್ತಿದ್ದ ನನ್ನ ಮಡದಿ ಆರು ತಿಂಗಳ ಗರ್ಭಿಣಿಯಾಗಿದ್ದಳು .ಆ ದಿನ ನಾನು ಅವಳನ್ನು ಚೆಕಪ್ ಗೆ ಎಂದು ಕರೆದೊಯ್ದಿದ್ದೆ.ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ."


       ಪೋಲೀಸ್ ಇಬ್ಬರ ಮಾತನ್ನು ಆಲಿಸುತ್ತಿದ್ದರು. ಸೌಜನ್ಯ ಮಾತ್ರ ತಲೆತಗ್ಗಿಸಿ ಕಣ್ಣೀರುಗರೆಯುತ್ತಿದ್ದಳು. ಬಂಗಾರಣ್ಣ ..ನಮಗೂ ಇದಕ್ಕೂ ಸಂಬಂಧವಿಲ್ಲ. ನಮಗೇಕೆ..?.. ಎನ್ನುವಂತೆ ಕೇಶವನ ಕಡೆ ನೋಡುತ್ತಿದ್ದರು. ನರಸಿಂಹರಾಯರು ಮುಂದುವರಿಸಿ

"ಮಗಳು ಬಶೀರನ ಗೃಹಬಂಧನದಿಂದ ತಪ್ಪಿಸಿಕೊಂಡು ಮನೆಗೆ ವಾಪಸಾದಾಗ ಮಗಳನ್ನು ಕಂಡ ನಮಗೆ ಕಂಬನಿ ತುಂಬಿ ಬಂತು.ಏಳೆಂಟು ತಿಂಗಳಿನಿಂದ ಮಗಳಿಗಾಗಿ ಹುಡುಕಾಡುತ್ತಿದ್ದೆವು.ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದೆವು.ಶೋಚನೀಯ ಸ್ಥಿತಿಯಲ್ಲಿ ವಾಪಾಸಾದ ಆಕೆಯನ್ನು ಮಾತಾಡಿಸಿ ಆಕೆಯ ಅಭಿಪ್ರಾಯ , ಅನುಭವಿಸಿದ ಕಷ್ಟವನ್ನು ತಿಳಿದುಕೊಂಡೆವು. ಆಕೆಯ ಅಭಿಪ್ರಾಯ ಕೂಡ ಸ್ಪಷ್ಟವಾಗಿತ್ತು. ತಾನು ಇನ್ನೆಂದಿಗೂ ಆ ಬಶೀರನ ಜೊತೆ ಇರಲು ಇಷ್ಟಪಡುವುದಿಲ್ಲ ಎಂಬುದು ಅವಳ ದೃಢ ನಿರ್ಧಾರವಾಗಿತ್ತು. ಮೊದಲು ವಕೀಲರನ್ನು ಸಂಪರ್ಕಿಸಿದೆವು. ಈ ವಿವಾಹ ಅಸಿಂಧು.. ಹಿಂದೂ ಯುವತಿ ಮತಾಂತರವಾಗದೆ ಮುಸ್ಲಿಂ ಯುವಕನನ್ನು ಮದುವೆಯಾದರೆ.... ಅದು ಮುಸ್ಲಿಂ ವಿವಾಹ  ಕಾಯಿದೆಯಡಿ ವಿವಾಹವೇ ಅಲ್ಲ ಎಂದು ಅವರು ತಿಳಿಸಿದ ನಂತರ  ವೈದ್ಯರನ್ನು ಸಂಪರ್ಕಿಸಿ ಗರ್ಭಪಾತ ಮಾಡಿಸಿದೆವು."

ಬಶೀರ್ ಪೊಲೀಸರ ಬಳಿ "ಇಲ್ಲ ಸರ್ ..ಅವರು ಸುಳ್ಳು ಹೇಳುತ್ತಿದ್ದಾರೆ .ಮಗಳ ತಲೆಕೆಡಿಸಿ ಗರ್ಭಪಾತ ಮಾಡಿಸಿ..ಈಗ ಬೇರೆಯವರೊಂದಿಗೆ ವಿವಾಹ ಮಾಡಿಕೊಡುತ್ತಿದ್ದಾರೆ. ನೋಡಿ ಸರ್.. ಅವಳ ಮುಖ ..ಅವಳಿಗೆ ಈಗಲೂ ನನ್ನೊಂದಿಗೆ ಬದುಕಲು ಇಷ್ಟವಿದೆ.."


      ಪೊಲೀಸ್ ಎರಡು ಕಡೆಯವರ ಮಾತನ್ನು ಆಲಿಸಿದರು. ಯುವತಿ ಪ್ರಬುದ್ಧಳಾದ್ದರಿಂದ ಅವಳ ಮಾತನ್ನು ಆಲಿಸುವ ಎಂದು ಪೊಲೀಸರು ಸೌಜನ್ಯಳನ್ನು ಕೇಳಿದರು .."ನೀನು ಯಾರೊಂದಿಗೆ ಇರಲು ಬಯಸುತ್ತೀಯಾ..? ಬಶೀರ ಅಲ್ಲಾ ಕೇಶವನಾ...?."
ಎಂದಾಗ ಕಂಬನಿಗೆರೆಯುತ್ತಿದ್ದ ಸೌಜನ್ಯ ಮೆಲ್ಲನೆ ತಲೆಯೆತ್ತಿ ನೋಡಿದಳು. ಕೇಶವನನ್ನು ನೋಡಿದಾಗ ಆತ 'ಇನ್ನೂ ನಾನು ನಿನ್ನ ಜೊತೆ ಇದ್ದೇನೆ 'ಎಂಬ ಮುಖಭಾವವನ್ನು ತೋರಿಸುತ್ತಿದ್ದ. ಅವನ ಭಾವನೆಯನ್ನು ಅರಿತ ಸೌಜನ್ಯ ಪೊಲೀಸರಲ್ಲಿ
" ಕೇಶವನನ್ನು ನನ್ನ ಪತಿಯೆಂದು ಸ್ವೀಕರಿಸುತ್ತೇನೆ...ಅವನೇ ನನ್ನ ಮೊದಲ ಪತಿ ಹಾಗೂ ಕೊನೆಯ ಪತಿ.. ಅವನನ್ನು  ಜೀವಕ್ಕಿಂತ ಹೆಚ್ಚು ಇಷ್ಟಪಡುತ್ತೇನೆ."

     ಸೌಜನ್ಯಳ ಉತ್ತರದಿಂದ ಕೋಪಗೊಂಡ ಬಶೀರ್ ಆಕೆಯ ಮೇಲೆ ಕೈ ಮಾಡಲು ಹೊರಟ. ಆಗ ಪೊಲೀಸರು ಆತನನ್ನು ಬಂಧಿಸಿದರು. ಕೇಶವ ನಲ್ಲಿ ಪೊಲೀಸರು
"ನೀನು ಆಕೆಯನ್ನು ಕರೆದೊಯ್ಯಲು ತಯಾರಿದ್ದೀಯಾ ..?"ಎಂದು ಕೇಳಿದಾಗ ಬಂಗಾರಣ್ಣ ಮಗನ ಕಡೆ ತಿರುಗಿ

" ಕೇಶವ ಬೇಡ ..ಪರ ಪತ್ನಿಯನ್ನು ಮನೆಗೆ ಕರೆದು ತರುವುದು ಸರಿಯಲ್ಲ ..ನಮ್ಮ ಮನೆತನದ ಗೌರವಕ್ಕೆ ಸರಿ ಹೊಂದಲ್ಲ.
 ನಾವು ತೆರಳೋಣ".
. ಎಂದ ಮಾವನ ಮಾತನ್ನು ಕೇಳಿ ಸೌಜನ್ಯ ಕಂಗಾಲಾದಳು. ನರಸಿಂಹರಾಯರು ಬಂಗಾರಣ್ಣನನ್ನು ಕೈಮುಗಿದು ಬೇಡಿಕೊಂಡರು.
" ದಯವಿಟ್ಟು ಸ್ವಲ್ಪ ಅಂತಃಕರಣದಿಂದ ನೋಡಿ.. ಮೋಸದಿಂದ ಅವಳನ್ನು ಬಳಸಿಕೊಂಡರು. ದಯವಿಟ್ಟು ತಮ್ಮ ಸೊಸೆಯನ್ನಾಗಿ ಸ್ವೀಕರಿಸಿ" ಎಂದು ಕೇಳಿಕೊಂಡಾಗ ಬಂಗಾರಣ್ಣನ ಕಲ್ಲುಹೃದಯ ಕರಗಲಿಲ್ಲ.ತನ್ನ ಕುಲಪುತ್ರನ ಘನಾಂದಾರಿ ಕೆಲಸಗಳು ಬಂಗಾರಣ್ಣನಿಗೆ ನೆನಪಾಗದಿದ್ದುದು ವಿಪರ್ಯಾಸ..!!!




      ಕೇಶವ ಒಮ್ಮೆ ತನ್ನ ಜೀವನವನ್ನು ಅವಲೋಕಿಸಿದ. ತಾನು ಮನಸಾರೆ ಮೆಚ್ಚಿದ.. ಜೊತೆಗೆ ಸುತ್ತಾಡಿ ಮುದ್ದಾಡಿದ ಸಿಂಧ್ಯಾಳನ್ನು ಕೂಡಾ ತಂದೆ-ತಾಯಿಯ ಮಾತಿನಂತೆ ತಿರಸ್ಕರಿಸಿದೆ.ಪಾಪ ...ಆಕೆ ಎಷ್ಟು ಕಣ್ಣೀರು ಸುರಿಸಿರಬಹುದು. ಮೈತ್ರಿಯ ಮೇಲೂ ಸೇಡುತೀರಿಸಿಕೊಳ್ಳಲು ಹೊರಟೆ. ಈಗ ಇವಳನ್ನು ಕೂಡ ದೂರ ಮಾಡಿಕೊಂಡರೆ ಈಕೆಯನ್ನು ಬದುಕಿನುದ್ದಕ್ಕೂ ಕತ್ತಲೆಗೆ ತಳ್ಳಿದಂತೆ. ತಂದೆ-ತಾಯಿ ಈ ಮಗನನ್ನು ಇಂದಲ್ಲದಿದ್ದರೆ ನಾಳೆಯಾದರೂ ಕ್ಷಮಿಸಿ ಸ್ವೀಕರಿಸಿಯಾರು. ಆದರೆ ಆಕೆಯನ್ನು ಈ ಸ್ಥಿತಿಯಲ್ಲಿ ಇನ್ನೊಬ್ಬ ವಿವಾಹವಾಗುವುದು ಕಷ್ಟ. ಆದ್ದರಿಂದ ನಾನು ಆಕೆಗೆ ಬಾಳು ಕೊಡುತ್ತೇನೆ. ಇಬ್ಬರು ಸಮಾನ ದುಃಖಿಗಳು ...ಮಾಡಿದ  ತಪ್ಪಿನಿಂದ ಪಾಠ ಕಲಿತು ಕಲಿತು ಮುಂದೆ ಎಡವದಂತೆ ಬಾಳುತ್ತೇವೆ ಇಂದು ತನ್ನಲ್ಲಿ ಗಟ್ಟಿಯಾಗಿ ನಿರ್ಧರಿಸಿದ್ದ.


      ಕೇಶವ ಪೊಲೀಸರತ್ತ ಮುಖ ಮಾಡಿ "ನಾನು ಸೌಜನ್ಯಳೊಂದಿಗೆ ಬಾಳುತ್ತೇನೆ" ಎಂದು ಹೇಳಿದ. ಇದನ್ನು ಕೇಳಿದ ಸೌಜನ್ಯ ಸಮಾಧಾನಗೊಂಡಳು.. ಬಂಗಾರಣ್ಣ ಕೋಪದಿಂದ ಅಬ್ಬರಿಸಿದ " ಕೇಶವ್ ನಿನಗೆ ತಂದೆ-ತಾಯಿ ಬೇಕೋ  ಅಲ್ಲಾ ಸೌಜನ್ಯ ಬೇಕೋ... ನೀನೇ ನಿರ್ಧರಿಸು. ಅವಳನ್ನು ಮನೆಗೆ ಕರೆದುಕೊಂಡು ಬಂದರೆ ನಾವು ಸಹಿಸುವುದಿಲ್ಲ. ಅವಳೇಬೇಕೆಂದರೆ ನಿನ್ನ ದಾರಿ ನೀನೆ  ನೋಡಿಕೋ.." ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು. ಕೇಶವ ತಂದೆಯ ಮನ ಒಲಿಸಲು ಪ್ರಯತ್ನಿಸಿದರೂ ಬಂಗಾರಣ್ಣ ತನ್ನ ಪಟ್ಟು ಸಡಿಲಿಸಲಿಲ್ಲ.


      ಪೊಲೀಸರು ಅಲ್ಲಿಗೆ ಪ್ರಕರಣವನ್ನು ಇತ್ಯರ್ಥಗೊಳಿಸಿದರು.. ಸೌಜನ್ಯಳ ಕೈಯನ್ನು ಭದ್ರವಾಗಿ ಹಿಡಿದು ಕೊಂಡು ಕೇಶವ್ ಮಾವ ನರಸಿಂಹ ರಾಯರೊಂದಿಗೆ ಹೆಜ್ಜೆ ಹಾಕಿದ..


ಮುಂದುವರಿಯುವುದು..


✍️... ಅನಿತಾ ಜಿ.ಕೆ.ಭಟ್.
03-04-2020.

2 comments:

  1. Keshav ..soujanya channagi baalali.. endu ashaya

    ReplyDelete
  2. ಆಗಲಿ...ಮುಂದೇನಾಗುವುದೋ ಕಾದು ನೋಡೋಣ.. ಧನ್ಯವಾದಗಳು 💐🙏

    ReplyDelete