Monday, 6 April 2020

ಜೀವನ ಮೈತ್ರಿ ಭಾಗ ೫೮(58)




ಜೀವನ ಮೈತ್ರಿ ಭಾಗ ೫೮



     ನಿರಂತರ ಹನುಮನನ್ನು ಧ್ಯಾನಿಸುತ್ತಿದ್ದೆ.ಅಲ್ಲಿಂದ ಹೊರಹೊರಡುವ ಎಲ್ಲ ದಾರಿಗಳೂ ನನ್ನ ಪಾಲಿಗೆ ಇಲ್ಲವಾಗಿದ್ದವು.ಆತನ ತೃಷೆನೀಗಿಸಲು ಸಹಕರಿಸದಿದ್ದರೆ ವಿಕೃತವಾಗಿ ಮೈಮೇಲೆ ಉರಿಯುತ್ತಿರುವ ಸಿಗರೇಟಿನಿಂದ ಚುಚ್ಚುತ್ತಿದ್ದ.ಅಮ್ಮ ನನ್ನ ಮೈಮೇಲೆ ಸಣ್ಣ ಗಾಯವಾದರೂ ಕಲೆಯಾಗಬಾರದೆಂದು ಎಷ್ಟು ಮುತುವರ್ಜಿ ವಹಿಸುತ್ತಿದ್ದರು.ಅದೆಲ್ಲ ನೆನಪಾಗಿ ಅಳು ಬರುತ್ತಿತ್ತು.ಒಮ್ಮೊಮ್ಮೆ ಈ ಬದುಕನ್ನು ಇಲ್ಲಿಯೇ ಕೊನೆಗೊಳಿಸುತ್ತೇನೆ .ಇನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎನಿಸುತ್ತಿತ್ತು.ಆಗ ಇಲ್ಲಿಯತನಕ ಒಂದು ಚೂರೂ ನೋವಾಗದಂತೆ ಸಾಕಿಸಲಹಿದ ಅಮ್ಮ ಅಪ್ಪನ ಮುಖ ಕಣ್ಣಮುಂದೆ ಬರುತ್ತಿತ್ತು.ಅವರಿಗೊಮ್ಮೆ ನನ್ನ ಸ್ಥಿತಿಗತಿಯನ್ನು ಹೇಳದೆ ನಾನು ಬದುಕು ಕೊನೆಗಾಣಿಸಿದರೆ ಅವರು ನನಗಾಗಿ ತಮ್ಮ ಉಸಿರಿರುವವರೆಗೂ ಕೊರಗಿಬಿಟ್ಟಾರು.ಇಲ್ಲ.ಆತ್ಮಹತ್ಯೆ ಮಾಡುವುದಿಲ್ಲ.ಒಂದಲ್ಲ ಒಂದು ದಿನ ನನ್ನನ್ನು ಅವರೆಡೆಗೆ ಕೊಂಡೊಯ್ಯುವ 'ನನ್ನ ಹನುಮ' ಎಂದು  ಮಾರುತಿಯ ಮೇಲೆ ಭರವಸೆಯಿಟ್ಟೆ.

 
       ಅವನ ಕಾಮದ ಕುಡಿ ನನ್ನ ಒಡಲಲ್ಲಿ ಮೂಡಿತು.ಬೇಡವೆಂದುಕೊಂಡರೂ ಸಹಿಸಿದೆ.ಏಳು ತಿಂಗಳಾದಾಗ ಒಂದು ಶನಿವಾರದ ದಿನ ಅವನ ಕಾಮಾತುರತೆಯಿಂದ ರಕ್ತಸ್ರಾವ ಆರಂಭವಾಯಿತು.ಅದುವರೆಗೂ ಆಸ್ಪತ್ರೆಗೆ ಕರೆದೊಯ್ಯದವನು ಅಂದು ಕರೆದೊಯ್ದ.ಕ್ಲಿನಿಕ್ ನ ಎದುರು ಡಾಕ್ಟರ್ ಸನಾವುಲ್ಲಾ ಎಂಬ ಬೋರ್ಡ್ ನೇತು ಹಾಕಲಾಗಿತ್ತು.ಹತ್ತಾರು ಮಂದಿ ಚಿಕಿತ್ಸೆ ಗೆ ಆಗಮಿಸಿದ್ದರು.ನನ್ನನ್ನು ಒಳಗೆ ತುರ್ತಾಗಿ ಕಳುಹಿಸಲೆಂದು ನರ್ಸ್ ವೈದ್ಯರ ಸಮ್ಮತಿ ಕೇಳಲು ಒಳಗೆ ಹೋಗಿದ್ದಳು.ಗಂಡನೆನಿಸಿಕೊಂಡವನಿಗೆ ಯಾವುದೋ ಫೋನ್ ಕರೆ ಬಂದಿತ್ತು.ನನ್ನ ಪಕ್ಕ ಕುಳಿತವಳಲ್ಲಿ ವಾಶ್ ರೂಂ ಗೆ ಹೋಗಿ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಿ ಸಣ್ಣಪುಟ್ಟ ಓಣಿಗಳಲ್ಲಿ ನುಸುಳಿಕೊಂಡು ಪೋಲೀಸ್ ಸ್ಟೇಷನ್ ತಲುಪಿದೆ.ಶನಿವಾರ ರಾತ್ರಿಯಾಗುವುದರೊಳಗೆ ನನ್ನನ್ನು ಹೆತ್ತವರ ಮಡಿಲಿಗೊಪ್ಪಿಸಿದರು ಪೋಲೀಸರು..


     ಅಪ್ಪ ಅಮ್ಮನನ್ನು ಕಂಡವಳೇ ಗೋಳೋ ಎಂದು ಅತ್ತು ಇಬ್ಬರನ್ನು ಬಾಚಿತಬ್ಬಿದ್ದೆ.ಅಮ್ಮ ನನ್ನ ಅವಸ್ಥೆಯನ್ನು ಕಂಡು ತಲೆಮೇಲೆ ಕೈಹೊತ್ತು ಕುಳಿತರೆ ..ಅಪ್ಪ ಗಂಭೀರವಾಗಿ ಯಾರಲ್ಲೋ ಸಲಹೆಕೇಳುತ್ತಿದ್ದರು.ಮನೆಗೆ ತೆರಳಿದ ಮೇಲೆ ನನ್ನಲ್ಲಿ ಮುಖ್ಯವಾದ ವಿಷಯವೊಂದನ್ನು ಹಂಚಿಕೊಂಡರು."ಮಗಳೇ ..ನಾನು ನನ್ನ ಗೆಳೆಯ ಲಾಯರ್ ವಿಶ್ವನಾಥ್ ಅವರಲ್ಲಿ ಮಾತನಾಡಿದ್ದೇನೆ.ಅವರ ಪ್ರಕಾರ ಹಿಂದೂ ಯುವತಿಯೊಬ್ಬಳು ಮತಾಂತರವಾಗದೆ ಮುಸ್ಲಿಂ ಯುವಕನನ್ನು ಮದುವೆಯಾದರೆ ಮುಸ್ಲಿಂ ವಿವಾಹ ಕಾಯಿದೆಯ ಪ್ರಕಾರ ಆ ವಿವಾಹ ಅಸಿಂಧು .. ವಿವಾಹವೇ ಅಲ್ಲ...ಆಸ್ತಿಯ ಮೇಲೆ ಯಾವುದೇ ಹಕ್ಕು ಇಲ್ಲ.ಡೈವೋರ್ಸ್ ನ ಪ್ರಶ್ನೆಯೇ ಬರುವುದಿಲ್ಲ.ನಿನ್ನ ಮುಂದಿನ ದಾರಿಯೇನು..?"

ನಾನು ಅತ್ತುಕೊಂಡು ಹೇಳಿದ್ದೊಂದೇ "ಇನ್ನು ಯಾವತ್ತೂ ಆತನೊಂದಿಗೆ ವ್ಯವಹರಿಸಲಾರೆ. ನಾನು ಅನುಭವಿಸುತ್ತಿರುವ ಸಂಕಟ ಇನ್ನೊಂದು ಜೀವಕ್ಕೆ ಬೇಡ.ಗರ್ಭವನ್ನು ತೆಗೆಸಿಬಿಡೋಣ.."

      ನಂತರ ಗರ್ಭಪಾತ ಮಾಡಿಸಿ, ಹೈಮೆನೋಪ್ಲಾಸ್ಟಿ ಶಸ್ತ್ರಕ್ರಿಯೆಗೂ ಒಳಗಾದೆ.ಒಂದು ತಿಂಗಳಕಾಲ ಅಪ್ಪ ಅಥವಾ ಅಮ್ಮ ನನ್ನ ಜೊತೆಗೆ ಇದ್ದು ನಾನು ಖಿನ್ನತೆಯಿಂದ ಹೊರಬರುವಂತೆ ಮಾಡಿದರು.ನನ್ನ ಪ್ರೀತಿಯ ಸಂಗೀತ ,ಭರತನಾಟ್ಯದಲ್ಲಿ ನನ್ನನ್ನು ತೊಡಗಿಸಿಕೊಂಡೆ.ತೆರಳುವಾಗ ಬಳುಕುವ ಸೊಂಟದವಳಾಗಿದ್ದ ನಾನು ವಾಪಾಸಾದಾಗ ಆಂಟಿಯಂತಾಗಿದ್ದೆ.ಭರತನಾಟ್ಯ ನನ್ನ ಕೊಬ್ಬನ್ನು  ಸ್ವಲ್ಪ ಮಟ್ಟಿಗೆ ಕರಗಿಸುವಲ್ಲಿ ಸಫಲವಾಯಿತು.. ಎನ್ನುತ್ತಾ ತನ್ನ ಕಣ್ಣಿನಿಂದ ಇಳಿಯುತ್ತಿದ್ದ ನೀರನ್ನು ಒರೆಸಿದಳು.ಎಲ್ಲವನ್ನೂಕೇಳಿಸಿಕೊಂಡ ಕೇಶವನ ಮನಸ್ಸು ಆರ್ದ್ರವಾಯಿತು.ಅವಳನ್ನು ತನ್ನೆದೆಗೆ ಅಪ್ಪಿ ಹಿಡಿದು ತಲೆನೇವರಿಸಿದ.ತಾನು ಯಾವುದನ್ನು ತನ್ನ ಕೈಹಿಡಿದವಳಲ್ಲಿ ಹೇಳಬಾರದು ಅಂತ ಅಂದುಕೊಂಡಿದ್ದನೋ ಅದು ಅವನರಿವಿಲ್ಲದೆಯೇ ಹೊರಹೊಮ್ಮಿತು.


               ******


       ಬೆಳಗ್ಗೆ ಕಿಶನ್  ಬೇಗನೆ ರೆಡಿಯಾಗಿದ್ದ. ಅಪ್ಪಟವಾದ ಸಾಂಪ್ರದಾಯಿಕ ಪಂಚೆ ಶಲ್ಯ ತೊಟ್ಟಿದ್ದ ..ತಂಗಿಯಂದಿರು ಸುಂದರವಾಗಿ ಅಲಂಕರಿಸಿಕೊಂಡು ತಮ್ಮ ಗಂಡಂದಿರನ್ನು ಕೂಡಿಕೊಂಡು ಹೊರಟು ನಿಂತರು.. ಸುಮಾರು ಐವತ್ತು ಜನರು ನಿಶ್ಚಿತಾರ್ಥ ದ ಸಲುವಾಗಿ ಶಾಸ್ತ್ರಿನಿವಾಸದತ್ತ ಪಯಣಿಸಿದರು.ದಾರಿಯುದ್ದಕ್ಕೂ ಹಾಡು ಹರಟೆ ಕೀಟಲೆ ಕಾಲೆಳೆತ ಬಲು ಜೋರಾಗಿಯೇ ಇತ್ತು.. ಎಲ್ಲರೂ ಸೇರಿ ಕಿಶನ್ ಗೆ ಹಾಡಲು ಒತ್ತಾಯಿಸುತ್ತಿದ್ದರು.ಅಂತೂ 


ಯಾರೇ ನೀನು  ಸುಂದರ ಚೆಲುವೆ ಒಬ್ಬಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ
ಬಾ ಭೂಮಿಯೆ ನಿನ್ನೊಡಲ್ಲಲಿ ನಾನಾಡುವೆನು
ಬಾ ಪ್ರೇಮಿಯೆ  ನಿನ್ನೆದೆಯಲ್ಲಿ ನಾ ಓಲಾಡುವೆನು
ಈ ಅಂದ ಚೆಂದವೆಲ್ಲ ಯಾರಿಗಾಗಿ ಹೇಳೆಯಾ
ಯಾರೇ ನೀನು  ಸುಂದರ ಚೆಲುವೆ ಒಬ್ಬಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ


ಎಂಬ ಚಿತ್ರಗೀತೆಯನ್ನು ಹಾಡಿಯೇಬಿಟ್ಟ.. ಎಲ್ಲರೂ ಮೈತ್ರಿ ಅಲ್ಲಿ ನಿನಗಾಗಿಯೇ ಕಾಯುತ್ತಿದ್ದಾಳೆ.. ಅವಳಿಗಾಗಿ ಅಲ್ಲಿಯೂ ಹಾಡಿಬಿಡು..ಅವಳೂ ಕೇಳಿ ಖುಷಿಪಡಲಿ.ಎಂದರು..




             ******


           ಅಕ್ಕನ ಅಲಂಕಾರಕ್ಕೆ ತಂಗಿಯರಾದ ಸಂಜನಾ ವಂದನಾ ಸಹಕರಿಸಿದ್ದರು.. ತಾವು ಬರುವಾಗ ಮೇಕಪ್ ಸೆಟ್ ತೆಗೆದುಕೊಂಡು ಬಂದಿದ್ದರು.ಅಕ್ಕನಿಗೆ ಮೇಕಪ್ ಮಾಡಿ ತುಟಿಯ ಮೇಲೆ ಅವಳು ಬೇಡವೆಂದರೂ ಲಿಪ್ಸ್ಟಿಕ್ ಹಚ್ಚಿ ಅವಳ ಸೌಂದರ್ಯವನ್ನು ಹೆಚ್ಚುವಂತೆ ಮಾಡಿದರು.ತಲೆಕೂದಲಿಗೆ ಬೀಡ್ಸ್ ಪೋಣಿಸಿ ನೆಯ್ದರು.ಸಂಪಿಗೆಯಂತಹ ನೀಳನಾಸಿಕದ ಗುಳಿಕೆನ್ನೆ ಚೆಲುವೆ ಅಂದವಾಗಿ ಸೀರೆಯುಟ್ಟು ರೂಮಿನಿಂದ ಹೊರಬಂದಳು. ಅಜ್ಜಿ ದೃಷ್ಟಿ ತೆಗೆದರು.ಹಳೆಯ ಕಾಲದ.. ತಮಗೆ ಬಳುವಳಿಯಾಗಿ ಬಂದ ಕಾಸಿನ ಸರವನ್ನು ಮೊಮ್ಮಗಳ ಕೊರಳಿಗೆ ತೊಡಿಸಿದರು ಮಹಾಲಕ್ಷ್ಮಿ ಅಮ್ಮ.ಮಂಗಳಮ್ಮ ಮಗಳಿಗೆ ಹೂವು ಮುಡಿಸಿದರು.. ಕೈತುಂಬಾ ಬಳೆತೊಟ್ಟು ಕಿಶನ್ ಕೊಟ್ಟಿದ್ದ ಕಾಲ್ಗೆಜ್ಜೆ ಹಾಕಿಕೊಂಡು ಮನೆತುಂಬಾ ಓಡಾಡುತ್ತಿದ್ದ ಮೈತ್ರಿಯಿಂದ ಮನೆಯಲ್ಲಿ ಮಧುರವಾದ ಕಂಪನ,ಮನೋಲ್ಲಾಸ ಉಂಟಾಯಿತು..


ಮಹೇಶ್ ಅಕ್ಕನನ್ನು ನೋಡಿ
"ತೊಂಡೆಹಣ್ಣಿನಂತ ತುಟಿಯವಳು ಬಂದ್ಳು ನೋಡಿ ..
ಕಾಡಿಗೆ ಹಚ್ಚಿದ ಹುಬ್ಬು ಕಾಮನಬಿಲ್ಲಿಗೂ ಮೋಡಿ..."
ಎಂದಾಗ ಅದುವರೆಗೆ ಗಮನಿಸದಿದ್ದ ಅಜ್ಜಿ ಹತ್ತಿರದಿಂದ ನೋಡಿ "ಇದು ಎಂತರ ಕೂಸೇ..ತುಟಿಗೆ ಮೆತ್ತಿಗೊಂಡದು.."ಎಂದು ಕೇಳಿಯೇಬಿಟ್ಟರು.

ಅಲ್ಲೇಯಿದ್ದ ಗಾಯತ್ರಿ "ಇರ್ಲಿ ಬಿಡಿ ಅತ್ತೇ..ಈಗಿನ ಮಕ್ಕಳು ಅವರ ಖುಷಿಗೆ ಅಪರೂಪಕ್ಕೊಮ್ಮೆ ಹಚ್ಚಿಕೊಂಡರೆ ತಪ್ಪೇನು..?"ಎಂದಾಗ ಮಹಾಲಕ್ಷ್ಮಿ ಅಮ್ಮ ತೆಪ್ಪಗಾದರು.
ಮಹೇಶನಿಗೆ ಅಕ್ಕನ ಕೆಂಗಣ್ಣಿನ ನೋಟವನ್ನು ಎದುರಿಸಬೇಕಾಗಿ ಬಂತು.ಕಣ್ಣಿನಲ್ಲೇ 'ಸಾರಿ ಅಕ್ಕ' ಎಂದು ಕೇಳಿದ..



       ಎಲ್ಲಾ ನೆಂಟರು ಸೇರಿ ಮನೆಯೆಲ್ಲಾ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿತ್ತು.ಎಲ್ಲರೂ ಕೆಲಸಕಾರ್ಯಗಳಲ್ಲಿ ಉಪಕರಿಸುತ್ತಾ ಕುಶಲಸಮಾಚಾರ ಮಾತನಾಡುತ್ತಿದ್ದರು.ಅಡಿಗೆ ಕಿಟ್ಟಣ್ಣ ಕಾಫಿ ತಿಂಡಿಯ ವಿಲೇವಾರಿಯಲ್ಲಿ ನಿರತರಾಗಿ ದ್ದರು.


      ಮಾಣಿಕಡೆಯವರ ಆಗಮನವಾಯಿತು. ಸುಂದರವಾಗಿ ಅಲಂಕರಿಸಿಕೊಂಡಿದ್ದ ಸಂಜನಾ ವಂದನಾ ಬಂದವರಿಗೆ ಉಪಚರಿಸುವಲ್ಲಿ ಮುಂದಿದ್ದರು.ಕೆಲವರು ಇವರಿಬ್ಬರೂ ಮದುಮಗಳ ತಂಗಿಯಂದಿರು ಆಗಿರಬಹುದು ಎಂದು ಮಾತನಾಡಿಕೊಂಡರು.ತಿಂಡಿಕಾಫಿ ಎಂದಿನಂತೆ ಮುಂದುವರಿದು ಮದುವೆಯ ಕರೆಯೋಲೆ ಬರೆಯಲು ಎರಡೂ ಕಡೆಯವರು ಎದುರಬದುರಾಗಿ ಕುಳಿತರು.

      ಮೊದಲಿಗೆ ಭಾಸ್ಕರ ಶಾಸ್ತ್ರಿಗಳು ಬಂದವರನ್ನೆಲ್ಲ ಕ್ಷೇಮ ವಿಚಾರಿಸಿಕೊಂಡು ತನ್ನ ಬಳಗದವರನ್ನೆಲ್ಲ ಪರಿಚಯ ಮಾಡಿಕೊಟ್ಟರು.ನಂತರ ಗಣೇಶ ಶರ್ಮ ಕೂಡ ತಮ್ಮವರ ಪರಿಚಯ ಮಾಡಿದರು.ಕರೆಯೋಲೆ ಬರೆದರು.ಮಹೇಶನಲ್ಲಿ ಅದನ್ನು ಓದಲು ಹೇಳಿದರು.ಸಾಮಾನ್ಯವಾಗಿ ಓದುತ್ತಿದ್ದ.ಅಲ್ಲೇ ಮುಂದೆ ಕುರ್ಚಿಯಲ್ಲಿ ಕುಳಿತಿದ್ದ ಅಜ್ಜ ಶ್ಯಾಮ ಶಾಸ್ತ್ರಿಗಳು "ಪುಳ್ಳೀ ಸ್ವಲ್ಪ ದೊಡ್ಡಕ್ಕೆಓದು" ಎಂದಾಗ ಒಮ್ಮಿಂದೊಮ್ಮೆಲೆ ವಾಲ್ಯೂಮ್ ರೈಸ್ ಮಾಡಿದ.ಎಲ್ಲರೂ ನಕ್ಕರು.ಮೇದಿನಿ "ಇವ ಒಳ್ಳೆ ಜೋಕರ್ ನಂತೆ ಮಾಡುತ್ತಾನೆ "ಎಂದು ಚಾಂದಿನಿಯ ಕಿವಿಯಲ್ಲುಸುರಿದಳು.


        ಶಾಸ್ತ್ರಿಗಳು ಮನೆಯಲ್ಲಿಯೇ ಮಗಳ ಮದುವೆ ಮಾಡುವ  ವಿಚಾರ ತಿಳಿದು ಹಲವರು "ಭಾರೀ ಕಷ್ಟ ಈಗ "ಎಂದರೆ ಇನ್ನು ಕೆಲವರು" ಮನೆಯಲ್ಲಿ ಮಾಡಿದರೇ ಚೆಂದ" ಎಂದು ಪುರಸ್ಕರಿಸಿದರು.
 ನಂತರ ಪೂಜಾ ಕಾರ್ಯಕ್ರಮ ನೆರವೇರಿತು.ಎಲ್ಲರ ಗಮನ ಕಿಶನ್ ಮೇಲೆ.ಮಾಣಿ ಸಂಪ್ರದಾಯ ದಂತೆ ಶರ್ಟ್ ಬಿಚ್ಚುತ್ತಾನೋ ಇಲ್ಲವೋ ಎಂದು.. ಶಾಸ್ತ್ರಿಗಳು ಬದ್ಧ ಸಂಪ್ರದಾಯವಾದಿಗಳು ಎಂದು ಗೊತ್ತಿದ್ದ ಕಿಶನ್ ಶರ್ಟ್ ಕಳಚಿ ಶಾಲು ಹೊದೆದುಕೊಂಡ.ಎಲ್ಲರಂತೆ ತಾನೂ ವೈದಿಕರೊಂದಿಗೆ ತಾನೂ ಸ್ವರಬದ್ಧವಾಗಿ ಮಂತ್ರೋಚ್ಛಾರಣೆ ಮಾಡಿದ..

    ತೀರ್ಥ ಪ್ರಸಾದ ಸ್ವೀಕರಿಸಿದ ನಂತರ ಕಿಶನ್ ತಾನು ಉಂಗುರವನ್ನು ಮೈತ್ರಿ ಗೆ ತೊಡಗಿಸಬೇಕು ಎಂದು ಶಾಸ್ತ್ರಿಗಳಲ್ಲಿ ಕೇಳಿಕೊಂಡ.

"ಏನು ಉಂಗುರ ತೊಡಿಸುವುದೇ..? ಅಂತಹಾ ಯಾವುದೇ ಶಾಸ್ತ್ರ ನಮ್ಮ ಹವ್ಯಕರಲ್ಲಿ ಇಲ್ಲವಲ್ಲಾ.." ಎಂದು ಗಂಭೀರವಾಗಿ ನುಡಿದರು.

ಕಿಶನ್ ನ ಮುಖ ಸಣ್ಣದಾಯಿತು.ಮೈತ್ರಿಗೆ ಅಪ್ಪನ ಮಾತು ಒಂದು ಚೂರೂ ಹಿಡಿಸಲಿಲ್ಲ.ಯಾರೋ ಒಂದಿಬ್ಬರು ನೆಂಟರು

"ಮಾಡಿಸಿ ತಂದದ್ದನ್ನು ಹಾಕಿದರೆ ತಪ್ಪಿಲ್ಲ.ಯಾರ್ಯಾರಿಗೋ ಅಲ್ಲವಲ್ಲ.. ಕೆಲವೇ ದಿನಗಳಲ್ಲಿ ಮದುವೆಯಾಗುವವಳಿಗೆ ತಾನೇ..?"ಎಂದರು.

"ನೋಡಿ.. ಹಾಗೆಲ್ಲ ಇನ್ನೊಬ್ಬರ ಸಂಪ್ರದಾಯವನ್ನು ನಾವು ಎರವಲು ಪಡೆಯಬೇಕಾದ್ದಿಲ್ಲ .ಕಾರಣವಿಲ್ಲದೆ ಅನುಸರಿಸಬೇಕಾದ್ದಿಲ್ಲ. ಮದುವೆಯ ನಂತರವೇ ಪಾಣಿಗ್ರಹಣ.."ಎಂದಾಗ ಮೈತ್ರಿಗೆಂದೇ ತಾನು ಹುಡುಕಾಡಿ ,ಅವಳಿಗೂ ತೋರಿಸಿ ಒಪ್ಪಿಗೆ ಪಡೆದು ಮಾಡಿಸಿದ ಉಂಗುರವನ್ನು ನೋಡಿ ಕಿಶನ್ ನ ಕಣ್ತುಂಬಿತು.ಗಣೇಶ ಶರ್ಮಾ ಕೂಡಾ ಎದುರು ಮಾತನಾಡಲಾಗದೆ ಮಗನಿಗೆ ಬೆಂಬಲಕೊಡಲಾಗದೆ ಇರಬೇಕಾದ ಸ್ಥಿತಿ..

    ಮಂಗಳಮ್ಮನಿಗೆ ಮಾತ್ರ ಗಂಡನದು ಅತಿಯಾಯಿತು ಉದ್ಧಟತನ ಎಂದು ಸಿಟ್ಟು ನೆತ್ತಿಗೇರಿತು.. "ಎಲ್ಲರೆದುರು ಈ ಹಠ ಬೇಕಾ.. ಕಾಲಕಾಲಕ್ಕೆ ನಾವೂ ಕೆಲವೊಂದು ವಿಚಾರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು.ಮೊಂಡುವಾದ ಮಾಡುತ್ತಾ ಎಲ್ಲರನ್ನೂ ನೋಯಿಸುತ್ತಾ ಕಾಲಹರಣ ಮಾಡಬಾರದು.."ಎಂಬ ಭಾವ ಮನಸ್ಸನ್ನು ಕಲುಕಿತು.


ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
06-04-2020.

2 comments: