ಜೀವನ ಮೈತ್ರಿ -ಭಾಗ ೬೨
ಬಾರಂತಡ್ಕದ ಮನೆಯಲ್ಲಿ ನೀರವ ಮೌನ ಆವರಿಸಿತ್ತು .ಮದುವೆಗೆಂದು ಕಳೆಗಟ್ಟಿದ ಬಂಗಾರಣ್ಣನ ಮನೆಯ ಅಂಗಳ ಇಂದು ಕಳಾಹೀನವಾಗಿತ್ತು. ಇದನ್ನೆಲ್ಲಾ ನೋಡುತ್ತಿದ್ದ ಕೆಲಸದಾಳುಗಳು..." ಛೇ...!! ದನಿಗಳ ಮನೆಯಲ್ಲಿ ಹೀಗೆ ಆಗಬಾರದಿತ್ತು. .. ಇನ್ನು ಯಾವಾಗ ಹೊಸ ಅಮ್ಮ ಮನೆಯ ಹೊಸ್ತಿಲು ತುಳಿಯುತ್ತಾರೆ...? ಇನ್ನು ಕೇಶವ ದನಿ ಮನೆಗೆ ಬರುತ್ತಾರೋ ಇಲ್ಲವೋ..?ಸುಮಾ ಅಮ್ಮನ ಮುಖವನ್ನು ನೋಡಲಾಗುವುದಿಲ್ಲ ..ದನಿಗಳು ಏನೋ ದರ್ಪದಿಂದ ಅವಡುಗಚ್ಚಿ ಸಹಿಸಿಕೊಂಡಿದ್ದಾರೆ. " ಎಂದೆಲ್ಲಾ ಮಾತನಾಡುತ್ತಿದ್ದರು ..ಚಪ್ಪರದ ವಸ್ತುಗಳನ್ನೆಲ್ಲಾ ತೆಗೆದು ಸ್ವಚ್ಛಗೊಳಿಸಿದರು.. ಸಿಹಿ ತಿನಿಸು ಗಳು ಇದ್ದರೂ ಸಿಹಿ ತಿನಿಸುಗಳನ್ನು ತಿನ್ನುವ ಮನಸ್ಸಿಲ್ಲ ಸುಮಾಗೆ ..ಮಗ ಬಹಳ ಇಷ್ಟ ಪಡುತ್ತಿದ್ದ ಸಿಹಿತಿನಿಸುಗಳನ್ನು. ಆದರೆ ಇತ್ತೀಚೆಗೆ ಡಯಟ್ ಎಂದು ಏನೂ ಕೊಬ್ಬಿನಂಶ ಕೊಡುತ್ತಿರಲಿಲ್ಲ.ಇನ್ನಾದರೂ ಕೊಡೋಣವೆಂದು ಅವನೆಲ್ಲಿದ್ದಾನೆ ಎಂದು ಕಣ್ತುಂಬಿಕೊಳ್ಳುತ್ತಿದ್ದರು.ಗಂಡ-ಹೆಂಡತಿಯ ಮಧ್ಯೆ ಮಾತು ವಿರಳವಾಗಿತ್ತು .. ಹೊತ್ತು ಹೊತ್ತಿಗೆ ಊಟಕ್ಕೆ ಬರುತ್ತಿದ್ದ ಬಂಗಾರಣ್ಣನಿಗೆ ಬಡಿಸುವುದು ಮಾತ್ರ ಸುಮಾಳ ಕೆಲಸವಾಗಿತ್ತು.
ಏನೋ ಗಹನವಾಗಿ ಯೋಚಿಸುತ್ತಿದ್ದಂತೆ ಒಳಬಂದ ಬಂಗಾರಣ್ಣ " ಸುಮಾ... ಇಲ್ಲಿ ಕಾರ್ಯಕ್ರಮ ಮುಗಿಯುವ ಮುನ್ನವೇ ಬ್ರೋಕರ್ ಶೇಷಣ್ಣ ನಿಗೆ ಕಮಿಷನ್ ದುಡ್ಡು ಪಡೆಯಲು ಬಹಳ ಆತುರವಿತ್ತು ..ಆ ಆತುರದ ಹಿಂದಿನ ಸತ್ಯ ನಂತರವೇ ಬಯಲಾದದ್ದು.. ಅವನ ಇಂತಹ ಕೆಲಸದಿಂದ ನಮ್ಮ ಮನೆಯ ಕಾರ್ಯಕ್ರಮ ಅರ್ಧದಲ್ಲಿ ನಿಂತಿತು.ಮಗನಿಗೆ ಬುದ್ಧಿ ಹೇಳಿದೆ... ಅಂತಹ ಯುವತಿ ಬೇಡ ಎಂದು... ಕೇಳಿದನಾ..ಇಲ್ಲವಲ್ಲ...!! ಆ ಬಷೀರನ ಪತ್ನಿಯ ಹಿಂದೆಯೇ ಹೋದ... ಬೇಕಿತ್ತಾ ನಮಗೆ ಬ್ರೋಕರ್ ನಲ್ಲಿ ಹುಡುಗಿ ಹುಡುಕಲು ಹೇಳುವುದು...??"
ಸುಮಾ ಮೌನವಾಗಿ ಕುಳಿತು ಏನೋ ಯೋಚಿಸುತ್ತಿದ್ದರು... ಅತ್ತು ಅತ್ತು ಕಣ್ಣೀರು ಕೂಡಾ ಬತ್ತಿ ಹೋಗಿತ್ತು..." ನೋಡು ಸುಮಾ ನಾನು ಈಗ ಹೊರಡುತ್ತೇನೆ.. ಶೇಷಣ್ಣನ ಮನೆಗೊಮ್ಮೆ ಹೋಗಿ ಚೆನ್ನಾಗಿ ಬೆಂಡೆತ್ತಿ ಬರಬೇಕು. rs.50000 ಹಾಳು ...ಅವನು ಮಾಡಿದ ಕೆಲಸವು ಬರೀ ದಂಡದ್ದು... ಅವನು ಈ ಜನ್ಮದಲ್ಲಿ ಬರ್ಖತ್ತಾಗಲಾರ..." ಎಂದು ಶೇಷಣ್ಣನ ಮೇಲೆ ಕೋಪವನ್ನು ತೋರಿಸಿದರು. ಹೀಗೆ ಹೊರಟ ಗಂಡನನ್ನ ತಡೆಯಲು ಹೋಗಲಿಲ್ಲ ಸುಮಾ..
********
ಶೇಷಣ್ಣ ದಿನವೂ ಚಿನ್ನದ ರೇಟು ಗಮನಿಸುತ್ತಿದ್ದ. ಇಂದು ಮಡದಿ ಸುಬ್ಬಿಯನ್ನು ಕರೆದು"ಏ... ಸುಬ್ಬಿ.. ನೋಡಿಲ್ಲಿ...ಇವತ್ತು ಚಿನ್ನದ ರೇಟು ಕೆಳಗಿಳಿದಿದೆ... ಇವತ್ತು ಮುಳಿಯಕ್ಕೆ ಹೋಗೋಣ ಎರಡು ಚಿನ್ನದ ಬಳೆ ಕೊಳ್ಳೋಣ." ಎಂದು ಹೇಳಿದ್ದೇ ತಡಾ ಹೊರಟು ರೆಡಿಯಾಗಿದ್ದಾಳೆ.
ಇಬ್ಬರೂ ಹೊರಟು ಮುಳಿಯ ಜ್ಯುವೆಲ್ಲರ್ಸ್ ಗೆ ತೆರಳಿದರು .ಸುಬ್ಬಿಯ ಮುಖದಲ್ಲಿ ಸಂಭ್ರಮ ಮನೆಮಾಡಿತ್ತು. ಬಹಳ ವರ್ಷಗಳ ಹಿಂದಿನ ಅವಳ ಬೇಡಿಕೆ ಇಂದು ಈಡೇರುವ ಸಮಯವಾಗಿತ್ತು. ತನಗೆ ಒಪ್ಪುವ ಪ್ಯಾಟರ್ನ್ ಅನ್ನು ಆಯ್ಕೆ ಮಾಡಿ ಅದನ್ನು ಕೊಂಡುಕೊಂಡರು.ಒಂದಿಷ್ಟು ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಂಡು ಮನೆಗೆ ಹಿಂದಿರುಗಿದರು.ಮನೆಗೆ ಬಂದೊಡನೆ
"ಸುಬ್ಬಿ.. ಹಾಕಿ ನೋಡೆ... ಬಳೆ ಹೇಗೆ ಕಾಣಿಸುತ್ತದೆಯೆಂದು.."ಎಂದು ಶೇಷಣ್ಣ ಹೇಳಿದಾಗ ಬೇಗ ಕೈಗೆ ಬಳೆ ಹಾಕಿಕೊಂಡಳು. ಇಬ್ಬರಿಗೂ ಬಹಳ ಸಂತಸವಾಯಿತು. "ಇಷ್ಟು ವರ್ಷದಿಂದ ಕೊಡಿಸಲಾಗದ್ದನ್ನು ಇವತ್ತು ಬಂಗಾರಣ್ಣನಿಂದ ಕೊಡಿಸುವಂತೆ ಆಯಿತು.."ಎಂದು ಮಡದಿಯ ಸಂತಸಭರಿತ ಮುಖವನ್ನು ನೋಡುತ್ತಾ ಹೇಳಿದನು ಶೇಷಣ್ಣ.
ಹೋಗಿ ಬಂದ ಬಟ್ಟೆಯನ್ನು ಕೂಡ ಬದಲಾಯಿಸಿ ಆಗಿರಲಿಲ್ಲ ..ಆಗಲೇ ಮನೆಯ ಅಂಗಳದಲ್ಲಿ ಬಂಗಾರಣ್ಣನ ಜೀಪು ಬಂದು ನಿಂತಿತ್ತು. ಇದನ್ನು ಕಂಡಾಗ ತನಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ ..ಒಂದು ಕ್ಷಣ ಆಲೋಚಿಸಿದ ಶೇಷಣ್ಣ ಸುಬ್ಬಿಯ ಕಿವಿಯಲ್ಲಿ "ನಾನಿಲ್ಲ ಎಂದು ಹೇಳು.." ಹೇಳುತ್ತಾ ಅಲ್ಲಿಂದ ಪಲಾಯನ ಮಾಡಿದ.ಬಂಗಾರಣ್ಣ ಸಿಟ್ಟಿನಿಂದಲೇ ಜೀಪಿನಿಂದ ಇಳಿದಂತಿತ್ತು ..ಸೀದಾ ಜಗಲಿಗೆ ಬಂದವರು "ಶೇಷಣ್ಣ...."ಎಂದು ಕರೆದರು .ಸುಬ್ಬಿ ಅಷ್ಟು ಬೇಗನೆ ಹೊರಗೆ ಹೋಗಲಿಲ್ಲ. ನಿಧಾನವಾಗಿ ಹಾಕಿಕೊಂಡಿದ್ದ ಬಳೆಯನ್ನು ತೆಗೆದಿಟ್ಟು ಹೊರಗೆ ಬಂದಳು. ಬಂಗಾರಣ್ಣನ ಮುಖವನ್ನು ಕಂಡು ಅವಳ ಕೈ ಕಾಲುಗಳು ನಡುಗಲು ಆರಂಭವಾದವು.." ಎಲ್ಲಿ ಶೇಷಣ್ಣ "ಎಂದು ಅಬ್ಬರಿಸಿದ ಬಂಗಾರಣ್ಣ..
"ಅವರು ಯಾವುದೋ ಕಾರ್ಯಕ್ರಮದ ನಿಮಿತ್ತ ದೂರದೂರಿಗೆ ತೆರಳಿದ್ದಾರೆ .ಬರುವುದು ಇನ್ನೆರಡು ದಿನವಾಗಬಹುದು. ಏನಾದರೂ ಹೇಳುವುದಿತ್ತಾ..??"
ಎಂದಾಗಲೇ ಬಂಗಾರಣ್ಣನ ಪಿತ್ತ ನೆತ್ತಿಗೇರಿತು.. "ಏನು ಹೇಳುವುದು?? ಮಾಡಬಾರದ್ದೆಲ್ಲ ಮಾಡಿಯಾಯ್ತು.. ನಮ್ಮ ಮನೆ ಹಾಳು ಮಾಡಿದ ಮೇಲೆ ಇನ್ನೇನು ಹೇಳಲಿ... ಈಗ ಹೇಳಲು ಬಂದಿಲ್ಲ. ಕೇಳಲು ಬಂದಿದ್ದೇನೆ ..ಯಾಕೆ ಹೀಗೆ ಮಾಡಿದ ಶೇಷಣ್ಣ..?"
"ಏನು.... ಏನಾಯ್ತು..??" ಎಂದು ಏನೂ ತಿಳಿಯದವಳಂತೆ ಸುಬ್ಬಿ ನಾಟಕವಾಡಿದಳು.
"ಏನಾಯಿತೆಂದು ನಿನಗೆ ಪುನಃ ಹೇಳಬೇಕಾ..? ಊರಲ್ಲಿ ನಾಲಿಗೆಗೊಂದರಂತೆ ಸುದ್ದಿ ಹಬ್ಬಿದೆ.. ನಿನಗೊಬ್ಬಳಿಗೆ ಮಾತ್ರ ಗೊತ್ತಿಲ್ಲವೆ...? ಸುಖಾಸುಮ್ಮನೆ ಹೊಟ್ಟೆ ಉರಿಸುವ ಪ್ರಶ್ನೆಗಳು.. ಇಷ್ಟೇ ನಿಮ್ಮ ಬುದ್ಧಿ ..ಈಗ ತಿಳಿಯಿತು ನನಗೆ.. ಸೋತಮೇಲೆ ..".ಎಂದ ಬಂಗಾರಣ್ಣನ ಮಾತಿನಲ್ಲಿ ಹತಾಶೆಯ ಭಾವ ತುಂಬಿತ್ತು.
"ಬಾಯಾರಿಕೆ ಬೇಕಾ..?"ಎಂದು ಕೇಳಿದಳು .
"ನಮಗೆ ಉಪ್ಪುನೀರು ಕುಡಿಸಿ ಅವನ ಬಾಯಾರಿಕೆ ತಣಿದಿರಬೇಕಲ್ಲ... ಇನ್ನು ನನ್ನ ಮುಖ ನೋಡುವುದು ಬೇಡ...ನನ್ನ ಜೀವಮಾನದಲ್ಲಿ ಇಷ್ಟು ಅವಮಾನ ನಾನು ಅನುಭವಿಸಿಲ್ಲ ..ಬಾರಂತಡ್ಕದ ಕುಟುಂಬದಲ್ಲಿ ವಧೂಗೃಹಪ್ರವೇಶ ಸಮಾರಂಭ ಅರ್ಧದಲ್ಲೇ ನಿಂತ ಉದಾಹರಣೆಗಳು ಇಲ್ಲ. ನಮ್ಮ ಮನೆತನದ ಗೌರವವನ್ನು ಶೇಷಣ್ಣ ಹಾಳು ಮಾಡಿಬಿಟ್ಟ.ಇಂದು ನನ್ನ ಸಂಕಟ ಮುಂದೊಂದು ದಿನ ನಿಮಗೂ ಬರಬಹುದು ಆಗ ಅರ್ಥವಾದೀತು "ಎನ್ನುತ್ತಾ ಬಿರಬಿರನೆ ಹಿಂದಿರುಗಿ ನೋಡದೆ ಹೊರಟು ಹೋದ.
ಬಂಗಾರಣ್ಣ ಹೋದದ್ದು ತಿಳಿದರೂ ಒಂದರ್ಧ ಗಂಟೆ ಬಿಟ್ಟೇ ಶೇಷಣ್ಣ ಮನೆಯೊಳಗೆ ಪ್ರವೇಶಿಸಿದ..
*******
ಗಂಡ ಮನೆಯಲ್ಲಿ ಇಲ್ಲದ ಹೊತ್ತು.. ಸುಮಾಗೆ ಒಂಟಿತನ ಕಾಡುತ್ತಿತ್ತು ..ಮಗನ ನೆನಪು ದುಃಖದೊಂದಿಗೆ ಕಣ್ಣೀರಾಗಿ ಹರಿದು ಹೋಗುತ್ತಿತ್ತು... ತಡೆಯಲಾರದೆ ಮಗನಿಗೆ ಫೋನ್ ಮಾಡಿದಳು. ಅಮ್ಮನ ಕರೆಗಾಗಿ ಚಾತಕ ಪಕ್ಷಿಯಂತೆ ಕಾದುಕುಳಿತ ಕೇಶವ ಕೂಡಲೇ ಫೋನ್ ಎತ್ತಿದ " ಅಮ್ಮ .."ಎಂದ ಅವನ ದನಿಯಲ್ಲಿ ಸೋತ ಛಾಯೆಯಿತ್ತು.ಕಣ್ಣು ತುಂಬಿತ್ತು .."ಮಗನೇ.." ಎಂದ ಸುಮಾಳಿಗೆ ಮುಂದೆ ಮಾತನಾಡಲು ನಾಲಿಗೆ ಬರಲಿಲ್ಲ. ಒಂದೆರಡು ನಿಮಿಷ ಸಾವರಿಸಿಕೊಂಡು ನಿಧಾನವಾಗಿ ಅಮ್ಮ ಮಗ ಇಬ್ಬರೂ ಹರಟಿದರು. ಕೇಶವ ಮಾತನಾಡುತ್ತಾ ತನಗೆ ಸರ್ಟಿಫಿಕೇಟ್ಗಳನ್ನು ಕಳುಹಿಸಿಕೊಡಲು ಕೋರಿದನು ..ಸುಮಾ ಅದಕ್ಕೆ ಒಪ್ಪಿದರು. ಸೊಸೆಯ ಬಗ್ಗೆಯೂ ವಿಚಾರಿಸಿಕೊಂಡರು.
ತಾನು ತನ್ನ ಗೆಳೆಯನ ಕಂಪನಿಗೆ ಕೆಲಸದ ಸಂದರ್ಶನಕ್ಕೆ ಹೋಗುತ್ತಿದ್ದೇನೆ ಎಂದು ಕೇಶವ ಅಮ್ಮನಲ್ಲಿ ಹೇಳಿದಾಗ..."ಶುಭವಾಗಲಿ ಮಗನೇ .."ಎಂದು ಹಾರೈಸಿದರು.. ಅಪ್ಪನನ್ನು ಕೇಳಿದ್ದಕ್ಕೆ "ಅಪ್ಪ ಚೆನ್ನಾಗಿದ್ದಾರೆ "ಎಂದು ನಿರ್ಲಿಪ್ತವಾಗಿ ನುಡಿದರು ಸುಮಾ.
"ಸೌಜನ್ಯಳನ್ನು ಚೆನ್ನಾಗಿ ನೋಡಿಕೋ.. ನಾನು ಇಲ್ಲಿ ನೋಯುತ್ತಿದ್ದೇನೆ... ಆದರೆ ಅವಳನ್ನು ನೋಯಿಸಬೇಡ ..ಪ್ರತಿದಿನವೂ ಸಂಶಯದಲ್ಲಿ ಸತಾಯಿಸಬೇಡ. ಯಾರು ಏನೇ ತಪ್ಪು ಮಾಡಿದರೂ ,ಎಡವಿದರೂ ಅದಕ್ಕೆ ಕ್ಷಮೆ ಎಂಬುದು ಇದೆ .. ತಪ್ಪನ್ನು ಅರಿತು ಪಶ್ಚಾತ್ತಾಪ ಪಟ್ಟರೆ ಅದಕ್ಕಿಂತ ದೊಡ್ಡ ವಿಷಯ ಏನಿದೆ..ಯಾರು ಕೂಡ ತಪ್ಪು ಮಾಡದವರು ಇಲ್ಲ .ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ತಪ್ಪುಮಾಡಿರುತ್ತಾರೆ... ಅದು ಎಲ್ಲಿ? ಏನು? ಹೇಗೆ ?ಎಂಬುದರ ಮೇಲೆ ಅದರ ಗಂಭೀರತೆ ನಿಂತಿದೆ. ಇನ್ನು ಮುಂದೆಯಾದರೂ ಪರಸ್ಪರ ವಿಶ್ವಾಸದಿಂದ ನಡೆಯಿರಿ ..ಅವಳಿಂದ ಪರಿಶುದ್ಧ ಪ್ರೀತಿ ನಿನಗೆ ಸಿಗಲಿ ..ನೀನು ಕೂಡ ಅಷ್ಟೇ ಅವಳಿಗೆ ನಿಷ್ಠನಾಗಿರಬೇಕು ..ಹಿಂದಿನಂತೆ ಎಡವದಂತೆ ನಿಮಗೆ ನೀವೇ ಬೇಲಿ ಹಾಕಿಕೊಳ್ಳಬೇಕು..." ಎಂದು ಹೇಳುವುದು ಮರೆಯಲಿಲ್ಲ...
ಅಮ್ಮನೊಂದಿಗೆ ಮನಬಿಚ್ಚಿ ಮಾತನಾಡಿದ ಕೇಶವ ನ ಮನಸ್ಸು ಬಹಳ ಹಗುರವಾಗಿತ್ತು.. ಅದನ್ನು ಕಂಡ ಸೌಜನ್ಯ... "ಅಮ್ಮ ಮಗನ ಸಂಭಾಷಣೆ ಬಹಳ ಆಪ್ತವಾದಂತಿತ್ತು.."
"ಹೌದು ..ಅಮ್ಮ ಮಾತನಾಡಿದರೆ ಹಾಗೇನೇ.. ಯಾವಾಗಲೂ ಸೌಮ್ಯಸ್ವಭಾವ ..ಒಳ್ಳೆಯದನ್ನೇ ಹೇಳುತ್ತಾರೆ .. ಕೆಟ್ಟದನ್ನು ಅಪ್ಪಿತಪ್ಪಿಯೂ ಹೇಳಲಾರರು ..ದಾರಿ ತಪ್ಪದಂತೆ ಆಗಾಗ ಎಚ್ಚರಿಸುವುದು ಅವರ ಕರ್ತವ್ಯ"
"ಹೌದು ....ರೀ.. ನನಗೂ ಅಮ್ಮ ಅಪ್ಪ ಅಂದೆಲ್ಲ ಬುದ್ಧಿ ಹೇಳುತ್ತಿದ್ದಾಗ ಬಹಳ ಕಿರಿಕಿರಿಯಾಗುತ್ತಿತ್ತು.. ಆದರೆ ಒಮ್ಮೆ ಜೀವನದಲ್ಲಿ ಸೋತಾಗ ನಿಜವಾಗಲೂ ಅನಿಸಿತು ಅವರ ಮಾತನ್ನು ಕೇಳುತ್ತಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು."
"ಸೌಜನ್ಯ... ಹಿರಿಯರು ನಮ್ಮ ಒಳ್ಳೆಯದಕ್ಕೆ ಹೇಳುತ್ತಾರೆ ..ಆದರೆ ನಾವು ಕಿವಿಗೆ ಹಾಕಿಕೊಳ್ಳುವುದಿಲ್ಲ ಅಷ್ಟೇ.."ಎಂದು ಮಾತನಾಡುತ್ತಿದ್ದಾಗಲೇ ಮಾತು ಬೇರೆಡೆಗೆ ಹೊರಳಿಸಿ
"ರಾಯರಿಗೆ ಈಗ ಬಿಸಿಬಿಸಿ ಕಾಫಿ ತರಲೇ..?"ಎಂದು ಕೇಳುತ್ತಾ ನಸುನಕ್ಕಳು.
"ಬೇಡ.. ತಂಪಾಗಿ ನೀನೇ ಬಳಿ ಇರುವಾಗ ಬಿಸಿ ಕಾಫಿ ಯಾಕೆ..?"
ಎನ್ನುತ್ತಾ ಸೌಜನ್ಯಳನ್ನು ಹತ್ತಿರಕ್ಕೆಳೆದುಕೊಂಡ.. ಅವನ ಕೈಗಳು ಅವಳ ಹೆಗಲ ಮೇಲಿದ್ದವು.. ಹತ್ತಿರದಿಂದ ಅವಳ ಮುಖವನ್ನೇ ದಿಟ್ಟಿಸುತ್ತ "ನಾಳೆ ಒಂದು ಇಂಟರ್ವ್ಯೂ ಗೆ ಹೋಗಿ ಬರುತ್ತೇನೆ.."
"ಆಗಲಿ ..ಆಲ್ ದಿ ಬೆಸ್ಟ್ ರಾಜ.. ಎಲ್ಲಿ ಯಾವ ಜಾಬ್ ಎಂದು ಕೇಳಬಹುದೇ?"
"ನನ್ನ ಗೆಳೆಯನ ಕಂಪನಿಯಲ್ಲಿ.. ಇವತ್ತು ಹೊರಗಡೆ ಹೋಗಿದ್ದಾಗ ನನ್ನ ಗೆಳೆಯ ಸಿಕ್ಕಿದ.. ಇಲ್ಲಿಂದ ಸುಮಾರು 15 ಕಿಲೋಮೀಟರ್ ದೂರವಾಗಬಹುದು"
"ನಾನು ಕೂಡ ಉದ್ಯೋಗ ಮಾಡಬೇಕೆಂಬ ಆಸೆಯಲ್ಲಿದ್ದೇನೆ... ಇದುವರೆಗೆ ಏನೇನೋ ತೊಂದರೆಗಳು.. ಆದರೆ ಇನ್ನು ಮೇಲೆ ಆ ತೊಂದರೆಗಳೆಲ್ಲ ಇಲ್ಲ ..ನನಗೂ ಸರಿ ಹೊಂದುವ ಜಾಬ್ ಎಲ್ಲಾದರೂ ಇದ್ದರೆ ಹೇಳಿ.."
"ನೋಡೋಣ ..ನಿಧಾನವಾಗಿ ..ಈಗ ನಾನು ನಾಳೆ ಹೋಗಿ ಬರುತ್ತೇನೆ.."
ಪತಿಯ ಮಾತಿಗೆ ಒಪ್ಪಿದ ಸೌಜನ್ಯ ಅವನ ಕೈಮೇಲೆ ಕೈ ಇಟ್ಟು ಒತ್ತಿಕೊಂಡಳು. ಇಬ್ಬರ ತುಂಟಾಟವನ್ನು ನೋಡುತ್ತಾ ಕಿಟಿಕಿಯಾಚೆ ಮರದಲ್ಲಿ ಹಕ್ಕಿಗಳು ಚಿಲಿಪಿಲಿಗೈಯುತ್ತಿದ್ದವು.
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
14-04-2020.
ಮುಂದಿನ ಭಾಗ... ಗುರುವಾರ..
👌👌👌
ReplyDeleteಥ್ಯಾಂಕ್ಯೂ 💐🙏
ReplyDelete